‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕೃತಿ ಪರಿಚಯ

ವಿ.ಚಿ. ಸಾಹಿತ್ಯ ಪ್ರಶಸ್ತಿಗೆ ಪಾತ್ರವಾದ ಲೇಖಕರಾದ ಗೋವಿಂದ ರಾಜು ಎಂ.ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು
ಲೇಖಕರು : ಗೋವಿಂದ ರಾಜು ಎಂ.ಕಲ್ಲೂರು
ಬೆಲೆ : ೧೯೦.೦೦

ಸಂಕರ ಸಂಸ್ಕೃತಿಯಿಂದ ಹೊಸ ಸೃಷ್ಟಿಯ ಕಡೆಗೆ ತುಡಿಯುವ ಕತೆಗಳು.ಜಾನಪದ ಪರಂಪರೆಯಲ್ಲಿ ಬೇರು ಬಿಟ್ಟು ,ಶಿಷ್ಟತೆಗೆ ಒಡ್ಡಿಕೊಂಡ ಪ್ರಜ್ಞೆ,ಸೃಜನಶೀಲ ರೂಪದಲ್ಲಿ ಮೈದಳೆದಾಗ, ಮೂಡಿಬಂದ ಕತೆಗಳೆ ಈ ಸಂಕಲನದ ಜೀವದ್ರವ್ಯ. ಅದಕ್ಕೆ ಮೇಲೆ ಉಲ್ಲೇಖಿಸಿದ ಎರಡು ಪರಂಪರೆಗಳ ಗ್ರಹಿಕೆ ಅಗತ್ಯ. ಜಾನಪದ ತಾಯಿ ಬೇರು, ಶಿಷ್ಟ ಅದರ ಮೇಲೆ ಅರಳಿದ ಹೂ. ಆದರೆ ಆ ತಾಯಿ ಬೇರಿನಿಂದ ಅದು ದೂರಾದಷ್ಟೂ ತನ್ನ ಜೀವಪರ ಧೋರಣೆಯನ್ನು ಕಳೆದುಕೊಂಡು , ಜೀವ ವಿರೋಧಿ ನಿಲುವು ತಳೆದು ಕೃತಕವಾಗುತ್ತದೆ. ಆಗ ಅವರೆಡರ ನಡುವೆ ಕಸಿ ಕಟ್ಟುವುದು ಒಂದೇ ದಾರಿ.ಆಗ ಮಾತ್ರ ಹೊಸ ಸೃಷ್ಟಿ ಸಾಧ್ಯ, ಎನ್ನುವುದರ ಕಡೆಗೆ ಪ್ರಸ್ತುತ ಸಂಕಲನದ ಕತೆಗಳು ಮುಖಮಾಡಿವೆ.

ಶಿಷ್ಟ ಕತೆಗಳಿಗೆ ನಿದರ್ಶನವನ್ನು ಇಲ್ಲಿ ಜೈನ ಪುರಾಣವನ್ನು ಆಧರಿಸಿದ ಯಶೋಧರ ಚರಿತೆಯಲ್ಲಿ ಬರುವ ಅಮೃತ ಮತಿಯ ಪುನರ್ ಸೃಷ್ಟಿಯಲ್ಲಿ ಇದನ್ನು ಕಾಣಬಹುದು. ಅವಳಿಗೆ ಕವಿ ಕಲ್ಪಿಸಿದ ಧೂಮ್ರನರಕದ ಏಕಾಕಿತನದ ಚಿತ್ರಣದಲ್ಲಿ, ಅವಳ ಜೀವನದ ಪುನರಾವಲೋಕನ ಸಾಧ್ಯವಾಗಿದೆ.

ಜಾನಪದಕ್ಕೆ ನಿದರ್ಶನವಾಗಿ, ಇಲ್ಲಿ ಪುಣ್ಯ ಕೋಟಿ ಕತೆಯ ಪುನಾರಚನೆಯ ಮೂಲಕ ಅದರಲ್ಲಿ ಬರುವ ಅರ್ಬುತಕ್ಕೂ, ಇಲ್ಲಿ ನ್ಯಾಯ ಒದಗಿಸಲಾಗಿದೆ. ಏಕೆಂದರೆ ಪ್ರಾಣಿ ಪ್ರಪಂಚದಲ್ಲಿ ಒಂದರ ಹಸಿವನ್ನು ತೀರಿಸಲು, ಇನ್ನೊಂದು ಪ್ರಾಣಿಯ ಮಾಂಸ ಭಕ್ಷಣೆ ಅನಿವಾರ್ಯ. ಅದನ್ನು ಮೂಲದಲ್ಲಿ ಅರ್ಬುತ ವ್ಯಾಘ್ರಕ್ಕೆ, ತ್ಯಾಗವನ್ನು ಆರೋಪಿಸುವ ಮೂಲಕ ಅದಕ್ಕೆ ಅನ್ಯಾಯ ಎಸಗಲಾಗಿದೆ. ಅದನ್ನು ಪುಣ್ಯ ಕೋಟಿಯ ಮಗು ಹೋಗಿ ,ತನ್ನನ್ನು ಅರ್ಪಿಸಿಕೊಂಡು ಸರಿಪಡಿಸಲಾಗಿದೆ.ಇದಕ್ಕೆ ಕಾರಣ ಪುಣ್ಯ ಕೋಟಿಗೆ ಉಂಟಾದ ಪಶ್ಚಾತ್ತಾಪ.

ಮೂರನೇ ಬಗೆಯ ಕತೆಗಳು, ಜಾನಪದೀಯ ಬೇರುಗಳನ್ನು ಹೊಂದಿದ್ದು, ಪ್ರಸ್ತುತ ಗ್ರಾಮೀಣ ಸಮಾಜದಲ್ಲಿನ ಜಾತಿ ಅಸಮಾನತೆಯ, ಅದರ ಫಲವಾಗಿ ಹಿಂಸೆಯ ಸ್ವರೂಪವನ್ನು ಶೋಧಿಸುತ್ತವೆ. ಇದಕ್ಕೆ ನಾಸ್ತಾಲಜಿ, ಫ್ಯಾಂಟಸಿ ಮತ್ತು ಏಕಕಾಲಕ್ಕೆ ಗ್ರಾಮೀಣ ಹಾಗೂ ನಾಗರಿಕ ಭಾಷೆಯ ಸಂಕರಗಳನ್ನು ಉಪಕರಣಗಳನ್ನಾಗಿ ಬಳಸಲಾಗಿದೆ. ದೈವ, ದೆವ್ವಗಳು ಕೂಡ ಫ್ಯಾಂಟಸಿಯ ಭಾಗವೇ. ಇಲ್ಲಿನ ಕತೆಯೊಂದರಲ್ಲಿ ಬರುವ ಏರ್ಪಿನ್ ಮಾರುವ ಸಂಕೂರನ ಮೈ ಮೇಲೆ ಬರುವ ದೈವ ಇದಕ್ಕೆ ನಿದರ್ಶನ . ಚುನಾವಣೆಯ ಸಂದರ್ಭದಲ್ಲಿ ಮೇಲ್ವರ್ಗದ ಒಬ್ಬನಿಗೆ ಎಂ.ಎಲ್.ಎ, ಮತ್ತು ಸಚಿವನನ್ನಾಗಿಸುವ ಆಸೆ ಹಚ್ಚಿ ,ತಮ್ಮ ಜನಾಂಗದ ಆಸೆಯ ಪ್ರತೀಕವಾದ ದೇವಾಲಯದ ನಿರ್ಮಾಣಕ್ಕೆ ಅವನನ್ನು ಬಳಸಿಕೊಂಡುದು ,ಆ ಮೂಲಕ ಮೇಲ್ವರ್ಗದ ಜೊತೆಗೆ ಸರಿಸಮನಾಗಿ ಎದ್ದು ನಿಲ್ಲಲು, ಇದನ್ನು ಹುನ್ನಾರವಾಗಿ ಬಳಸಿಕೊಳ್ಳುವುದು , ಅವರ ವರ್ಗಕ್ಕೆ ಸಲ್ಲಬೇಕಾದ ನ್ಯಾಯ ಪರಿಕಲ್ಪನೆಯ ಭಾಗವಾಗಿದೆ. ದೇವನೂರು ಮಹಾದೇವ ಅವರ ಪುಸ್ತಕದಲ್ಲಿ ‘ಎದೆಗೆ ಬಿದ್ದ ಅಕ್ಷರ’ -ಭಕ್ತ ಸಮೂಹ ಮತ್ತು ಮಂಚಮ್ಮ ದೇವಿಯ ನಡುವಣ ಸಂಭಾಷಣೆ, ಇದಕ್ಕೆ ತದ್ವಿರುದ್ಧವಾಗಿದೆ. ಅಲ್ಲಿ “ಅವಳು ನಿಮಗೆ ಗುಡಿಸಲು ಇದೆಯೇ ,ಎಂದು ಪ್ರಶ್ನಿಸಿದಾಗ ಅವರಲ್ಲಿ ಒಬ್ಬ ‘ನನಗೆ ಇಲ್ಲ ತಾಯಿ ‘ಎನ್ನಲು, ಅವಳು ‘ಮೊದಲು ನಿನ್ನ ಗುಡಿಸಲು ಆಗಲಿ, ನಂತರ ನನಗೆ ಗುಡಿ ಕಟ್ಟೋರಂತೆ” ಎಂದು ಬಿಡುತ್ತಾಳೆ. ದಲಿತರಿಗೆ ಬೇಕಾದ್ದು ಮನೆಯೋ ಗುಡಿಯೋ, ಉಳ್ಳವರ ಜೊತೆ ಸಮಾನತೆ ಸಾಧಿಸಲು, ಎಂಬ ಪ್ರಶ್ನೆಯನ್ನು ಇದು ಮೂಡಿಸುವುದು?.ಅಲ್ಲದೆ ಚುನಾವಣೆಗೆ ನಿಂತವರಿಂದ ಇದನ್ನು ನಿರೀಕ್ಷಿಸುವುದು ಒಂದು ವಿಪರ್ಯಾಸ.

ಇನ್ನೊಂದು ಕತೆಯಲ್ಲಿ,ಲಕುಮಿ ಎಂಬ ಮೂಕ ಹೆಣ್ಣನ್ನು ಹೆತ್ತವರೇ ತಿರಸ್ಕರಿಸಿ ಹಿಂಸಿಸುವ, ಅದಕ್ಕೆ ಸ್ವತಹ ಅವಳ ಅಕ್ಕನೇ, ಅವಳನ್ನು ಸೂಳೆ ಎಂದು ಕರೆದು ಇದಕ್ಕೆ ಕಾರಣಳಾಗಿದ್ದಾಳೆ. ಅಲ್ಲದೆ ಅವಳ ಕೈಹಿಡಿದ ಗಂಡನನ್ನು, ಅವಳನ್ನು ಒಟ್ಟಿಗೆ ಕೊಂದುಬಿಡುವುದು, ಹಿಂಸೆ ಮತ್ತು ಕ್ರೌರ್ಯದ ಪರಮಾವಧಿಯಾಗಿದೆ. ಅವಳ ದುಃಸ್ಥಿತಿಗೆ ಪಡಿಮಿಡಿಯುವವನು ಅವರ ಮನೆಯ ಆಳು ಭೈರ ನೊಬ್ಬನೇ. ‘ನೊಂದವರ ನೋವ ನೋಯದವರೆತ್ತ ಬಲ್ಲರು’? ಎಂಬ ವಚನವನ್ನು ಇದು ನೆನಪಿಗೆ ತರುತ್ತದೆ.

ಒಂಟಿ ನಕ್ಷತ್ರ ಗುಳೆಹೋದ ದಿವಸ: ಊರಿನ ಗೌಡ ಗುರಪ್ಪನ ಪಾಪದ ಫಲ , ಪಿಂಗಾಣಿ ಜೈಲು ಸೇರಿದರೆ ,ಅವನ ಒಬ್ಬನೇ ಮಗ ಜಕ್ಕು,, ಬಾವಿಗೆ ಬಿದ್ದು ಬಲಿಪಶುವಾಗತ್ತಾನೆ. ನಂತರದ ಪಾಪ ಪ್ರಜ್ಞೆಯಿಂದ, ಪಿಂಗಾಣಿಯನ್ನು ಜೈಲಿನಿಂದ ಬಿಡಿಸಿದರೂ, ಅವನು ತನ್ನಿಂದಾಗಿ ಅವನ ಮಗ ಸತ್ತುಹೋದ ಎಂದು ತಿಳಿಸಿದಾಗ, ಅವನೂ ಮಗನ ಜೊತೆ ಇಲ್ಲವಾಗುತ್ತಾನೆ. ಶೀರ್ಷಿಕೆ ಸಾರ್ಥಕವಾಗಿದೆ. ಗೌಡನಿಗೆ ಪಶ್ಚಾತ್ತಾಪ ಉಂಟಾಗುವುದು, ಅವನ ಹೆಂಡತಿಯಿಂದ ಎನ್ನುವುದು ಇಲ್ಲಿ ಇತ್ಯಾತ್ಮಕ ಅಂಶವಾಗಿದೆ. ಆದರೆ ಅದರ ಪರಿಣಾಮ ಮಾತ್ರ ಶೂನ್ಯ.ಆಗುವ ದುರಂತವನ್ನು ಅದು ತಪ್ಪಿಸುವುದಿಲ್ಲ. ನವಮಾಸ ಧರಿಸಿದ ಗರ್ಭಿಣಿ ಕೆಳವರ್ಗದ ಹೆಣ್ಣೊಬ್ಬಳು, ದೇವಾಲಯ ಪ್ರವೇಶ ಮಾಡಿ, ಮರಳಿ ಬರುವಾಗ, ಗರ್ಭಗುಡಿಯಲ್ಲಿ ಎಡವಿ ಬಿದ್ದು, ಅವಳ ಗರ್ಭಪಾತವಾಗಿ,ರಕ್ತ ಹರಿದು ಅವಳು ಮೃತಳಾದರೂ, ಮಗು ಉಳಿಯುತ್ತದೆ. ಇದನ್ನೇ ಲೇಖಕರು ಪುಸ್ತಕದ ಶೀರ್ಷಿಕೆಯನ್ನಾಗಿಸಿದ್ದಾರೆ. ಇಲ್ಲಿ ನಕ್ಷತ್ರ ದೇಗುಲವಾದರೆ, ಅವಳು ಹರಿಸಿದ ರಕ್ತ , ಮುಟ್ಟಿನ ನೆತ್ತರಿನ ರೂಪಕವಾಗಿದೆ. ಯಾವುದನ್ನು ಮೇಲ್ವರ್ಗದ ಸಮಾಜ ಮೈಲಿಗೆ ಎಂದು ಪರಿಗಣಿಸುತ್ತದೋ ಅದನ್ನೇ ಇಲ್ಲಿ ಪವಿತ್ರವನ್ನಾಗಿಸುವ ಮೂಲಕ, ಸಮಾಜದ ಪೂರ್ವಾಗ್ರಹಗಳಿಗೆ ಸವಾಲು ಹಾಕಿದ್ದಾರೆ. ಇದು ಅನಂತಮೂರ್ತಿಯವರ’ ಶೂದ್ರ ವರ್ಗದ ಸಂಪರ್ಕದ ಮೂಲಕ ಮಾತ್ರ ಬ್ರಾಹ್ಮಣ ವರ್ಗದವರ ಕಾಯಕಲ್ಪ ಸಾಧ್ಯ’ ಎಂಬ ಗ್ರಹಿಕೆಯನ್ನು ರೂಪಕದ ನೆಲೆಯಲ್ಲಿ ಸೆರೆ ಹಿಡಿದಿದೆ. ಈ ದೃಷ್ಟಿಯಿಂದ ಇದು ಏಕಕಾಲಕ್ಕೆ ಅನಂತಮೂರ್ತಿಯವರ ಚಿಂತನೆ ಮತ್ತು ದೇವನೂರರ ಕಥಾ ಸಾಹಿತ್ಯದ ದರ್ಶನದ ಮುಂದುವರಿದ ರೂಪವಾಗಿದೆ.ಆದ್ದರಿಂದ ಇವರನ್ನು ಅವರ ಸಮರ್ಥ ವಾರಸುದಾರರು, ಎಂದು ಕರೆದರೆ ಅದು ಖಂಡಿತ ಸತ್ಯಕ್ಕೆ ದೂರವಾಗುವುದಿಲ್ಲ. ಕಿರಿ ವಯಸ್ಸಿನಲ್ಲೇ ಇವರ ಈ ಸಾಧನೆ ಕನ್ನಡ ಕಥಾ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಇವರಿಗೆ ಉಜ್ವಲ ಭವಿಷ್ಯವಿದೆ. ಕಥಾ ಸಾಹಿತ್ಯದಲ್ಲಿನ ಅವರ ಸೃಜನಶೀಲಯಾನ ನಿರಂತರವಾಗಿರಲಿ. ಕೇರಳ ಕೇಂದ್ರ ವಿವಿ ದಲ್ಲಿ ಕನ್ನಡ ಅಧ್ಯಾಪಕರಾಗಿ ಇರುವ ಲೇಖಕರು, ಗೌರವ ಪ್ರತಿಯನ್ನ ಕಳಿಸಿಕೊಡುವ ಮೂಲಕ , ವೈಯಕ್ತಿಕವಾಗಿ ಪರಿಚಯವಿಲ್ಲದ ನನಗೆ ಕೊಟ್ಟ ಗೌರವಕ್ಕೆ, ಪ್ರೀತಿಗೆ ಋಣಿ.ಅಭಿನಂದನೆ ಶುಭಾಶಯಗಳು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು,  ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW