ಅವಳನ್ನು ಅಷ್ಟೊಂದು ಹಚ್ಚಿಕೊಂಡ ನನಗೆ ಒಂದು ದಿನವೂ ಅವಳನ್ನು ನೋಡದೇ ಇರಲಾಗುತ್ತಿರಲಿಲ್ಲ. ಇವತ್ತು ಅವಳು ಕಾಣದೇ ಇದ್ದಾಗ ‘ನಾನೆಷ್ಟು ಅವಳನ್ನು ಹಚ್ಚಿಕೊಂಡಿದ್ದೇನೆ’ ಎಂಬುದರ ಅರಿವು ನನಗಾಗಿತ್ತು. ಮುಂದೇನಾಯಿತು ಸ್ಮಿತಾ ಬಲ್ಲಾಳ್ ಅವರ ಕತೆಯನ್ನು ತಪ್ಪದೆ ಮುಂದೆ ಓದಿ…
ಸಂಜೆ ಎಂದಿನಂತೆ ಹೊರಟಿದ್ದೆ. ಅವಳ ಆ ಮುದ್ದು ಕಂಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರೂ ನನಗೆ ನಿರಾಶೆಯಾಗಿತ್ತು. ಅವಳು ಕಾಣಿಸಲೇ ಇಲ್ಲ. ನನ್ನ ಮನದಲ್ಲಿನ ತಳಮಳ ಹೇಳತೀರದಂತಿತ್ತು. ಆದರೂ ನನ್ನ ನೋಟವನ್ನು ಸುತ್ತಲೂ ಹಾಯಿಸಿದ್ದೆ, ಪನೋರಮ ಕ್ಲಿಕ್ ನ ತರಹ. ಆಗಲೂ ನನಗೆ ನಿರಾಶೆಯೇ ಕಾದಿತ್ತು. ‘ದಿನಾ ನನಗಾಗಿ ಕಾಯುತ್ತಿದ್ದ ಅವಳು ಇಂದು ಯಾಕೆ ಎಲ್ಲೂ ಕಾಣಿಸುತ್ತಿಲ್ಲ?!? ಯಾರಲ್ಲಿ ಕೇಳಲಿ?’ ಮನ ಮೂಕವಾಗಿ ರೋಧಿಸುತ್ತಿತ್ತು.
ದಿನಾ ಸಾಯಂಕಾಲ ನಾನು ಕಚೇರಿಯ ಮೆಟ್ಟಿಲಿಳಿದು ಬರುವಾಗಲೇ ದೂರದಲ್ಲೇ ಆಕೆ ನನ್ನ ನಿರೀಕ್ಷೆಯಲ್ಲಿ ಕೂತಿರುತ್ತಿದ್ದಳು. ನನಗೂ ಅವಳನ್ನು ಮಾತನಾಡಿಸದೇ ಇರಲಾಗುತ್ತಲೇ ಇರಲಿಲ್ಲ. ಅವಳನ್ನು ಕಂಡಾಗಲೆಲ್ಲಾ ಹರ್ಷಿಸುತ್ತಿದ್ದ ನಾನು ಅವಳ ಮುದ್ದು ಕಂಗಳನ್ನೇ ನೋಡುತ್ತಲೇ ಅವಳನ್ನು ಮಾತನಾಡಿಸುತ್ತಿದ್ದೆ. ಆಕೆ ಕೂಡಾ ಮೌನವಾಗಿದ್ದುಕೊಂಡೇ ಆಕೆಯ ಕಣ್ಣ ಭಾಷೆಯಲ್ಲೇ ತನ್ನೆಲ್ಲಾ ಪ್ರೀತಿಯನ್ನೂ ನನ್ನಲ್ಲಿ ಅರುಹುತ್ತಿದ್ದಳು. ನಮ್ಮಿಬ್ಬರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ ಇರಲಿಲ್ಲ. ಅವಳದೂ ನಿಶ್ಕಲ್ಮಷ ಪ್ರೀತಿ. ಬರೀ ಕಣ್ಣುಗಳಲ್ಲೇ ಪ್ರೀತಿ ತೋರುವ ಅವಳ ಪರಿಯಂತೂ ನನಗೆ ಬಹಳವೇ ಇಷ್ಟವೆನಿಸಿತ್ತು. ನಮ್ಮಿಬ್ಬರದು ಯಾವ ಜನ್ಮದ ಅನುಬಂಧವೋ ನನಗೂ ಅರಿವಿಗೆ ಬರಲಿಲ್ಲವಾದರೂ ಅವಳನ್ನು ಒಂದು ದಿನ ನೋಡದಿದ್ದಲ್ಲಿ ನನ್ನ ಬದುಕಲ್ಲಿ ನಾನೇನೋ ಕಳೆದುಕೊಂಡಂತಹ ಅಪಾರವಾದ ನೋವು.
ನನ್ನದೂ ಅವಳದೂ ಪರಿಚಯ ಆಗಿ ಆಗಲೇ ಆರು ತಿಂಗಳುಗಳಾಗಿದ್ದವು. ಒಂದು ದಿನವೂ ಅವಳು ನನ್ನೊಂದಿಗೆ ಕೋಪಿಸಿಕೊಂಡಿರಲಿಲ್ಲ. ಅವಳ ಕಂಗಳೇ ನನ್ನನ್ನು ಸದಾ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದುದು. ಯಾವಾಗಲೂ ನಾನು ಅವಳೊಂದಿಗೆ ಮಾತನಾಡುವಾಗ ಆ ಕಂಗಳನ್ನೇ ನೋಡುತ್ತಾ ಮಾತನಾಡುವ ಖುಷಿಯೇ ಬೇರೆ. ಅವಳೂ ನನ್ನ ಕೈಮೇಲೆ ಕೈಯ್ಯನಿಟ್ಟು, ಆರಾಧಕಿಯಂತೆ ನನ್ನನ್ನೇ ನೋಡುವ ಪರಿಗೆ ನನಗೋ ಬಹಳ ಖುಷಿ. ಅವಳಿಗಾಗಿ ಎಂದೂ ಏನೂ ತೆಗೆದುಕೊಟ್ಟವನಲ್ಲ, ಅವಳೂ ನನ್ನಿಂದ ಯಾವತ್ತೂ ಏನನ್ನೂ ಅಪೇಕ್ಷಿಸಿದವಳಲ್ಲ. ಹಾಗಂತ ನನ್ನ ಮೇಲಿನ ಪ್ರೀತಿ ಅವಳಲ್ಲಿ ಎಂದೂ ಕಮ್ಮಿಯಾಗಿರಲಿಲ್ಲ. ಆ ಪ್ರೀತಿ ಸದಾ ಅವಳ ಕಣ್ಣಲ್ಲೇ ಹೊಳೆಯುತ್ತಿತ್ತು.
ದಿನಾ ನಮ್ಮಿಬ್ಬರ ಭೇಟಿಯನ್ನು ಸುತ್ತಮುತ್ತಲಿನ ಜನವೆಲ್ಲಾ ತಮಾಷೆ ನೋಡುವಂತೆ ನೋಡಿ ಅವರವರೊಳಗೇ ನಗುತ್ತಿದ್ದುದು ನನ್ನ ಗಮನಕ್ಕೆ ಬಂದಿತ್ತಾದರೂ ನನಗೆ ಅಂತಹ ಅನಗತ್ಯ ವಿಷಯಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳಬೇಕೆನಿಸಿರಲಿಲ್ಲ. ಅವಳಿಗೆ ನಾನು ಜೊತೆಯಿರುವಾಗ ಬೇರೇನೂ ಬೇಡವೆನಿಸುತ್ತಿತ್ತು. ನಾನು ಅವಳಲ್ಲಿಗೆ ಬಂದಾಗ ನನ್ನ ಮೇಲೆ ಅವಳು ಒಂದು ಸಲ ದೃಷ್ಟಿ ನೆಟ್ಟಳೆಂದರೆ ಮುಗಿಯಿತು, ನನ್ನಿಂದ ಅವಳು ಕಣ್ತೆಗೆದದ್ದೇ ನನಗೆ ನೆನಪಿಲ್ಲ. ಅವಳನ್ನು ಒಂದೊಂದು ಸಲ ನಾನು ತಮಾಷೆ ಮಾಡಿದ್ದುಂಟು, ‘ಯಾಕೆ ಹೀಗೆ ನನ್ನನ್ನು ನೆಟ್ಟನೋಟದಿಂದ ನೋಡ್ತಿದ್ದಿಯ…? ನನಗೆ ದೃಷ್ಟಿಯಾದೀತು!’ ಆದರೆ ಅವಳದ್ದು ಅದೇ ನೋಟ…ಅದೇ ಆರಾಧನೆ! ಅವಳ ಆ ನೋಟಕ್ಕೇ ನಾನು ಪೂರ್ತಿ ಮಾರುಹೋಗಿದ್ದು. ನಾನು ಅವಳಿಂದ ಬೀಳ್ಕೊಂಡು ಮನೆಗೆ ಹೊರಟಾಗ ಮಾತ್ರ ಅವಳ ಮೊಗ ಬಾಡಿ, ಅರಳಿದ ಕಂಗಳು ಮುದುಡಿ ಹೋಗುತ್ತಿತ್ತು.
ಅವಳು ಪ್ರೀತಿ ತೋರುವ ರೀತಿಯೇ ವಿಚಿತ್ರವಾದರೂ, ನನಗೆ ಅವಳಲ್ಲಿನ ನಿಸ್ವಾರ್ಥ ಪ್ರೀತಿಯಲ್ಲಿ ಯಾವ ಹುಳುಕೂ ಕಾಣಸಿರಲಿಲ್ಲ. ನನ್ನ ಹೆಜ್ಜೆಯ ಸದ್ದಿಗೇ ಅವಳು ತಕ್ಷಣ ಜಾಗೃತಳಾಗಿಬಿಡುತ್ತಿದ್ದವಳು ನಾನು ಹತ್ತಿರ ಬರುವವರೆಗೂ ನೆಟ್ಟನೋಟದಿಂದ ನನ್ನನ್ನೇ ತನ್ನ ತುಂಬು ಕಂಗಳಿಂದ ದಿಟ್ಟಿಸುತ್ತಿದ್ದಳು. ಆ ನೋಟವೇ ನನ್ನನ್ನು ಸೆರೆ ಹಿಡಿದದ್ದು.
ಅವಳ ಪರಿಚಯವಾದದ್ದು ಆಕಸ್ಮಿಕ. ಅಂದು ಕಚೇರಿ ಕೆಲಸ ಮುಗಿಸಿದವನಿಗೆ ಬಹಳವೇ ಸುಸ್ತಾಗಿತ್ತು. ಮೆಟ್ಟಿಲಿಳಿದು ನಡೆಯುತ್ತಿದ್ದವನಿಗೆ ಅವಳು ಮೊದಲ ಬಾರಿಗೆ ನನ್ನ ಕಣ್ಣಿಗೆ ಬಿದ್ದಿದ್ದಳು. ಮೊದಲ ನೋಟಕ್ಕೇ ನನಗವಳು ಇಷ್ಟವಾಗಿದ್ದಳು. ಅವಳ ಆ ಎರಡು ನಕ್ಷತ್ರಗಳಂತೆ ಮಿನುಗುವ ಕಂಗಳೇ ನನ್ನನ್ನು ಅವಳತ್ತ ಆಕರ್ಷಿಸಿದ್ದು. ಆದರೆ ಅವಳಿಗೆ ನನ್ನ ಮೇಲೆ ಪ್ರೀತಿ ಬಂತು ಯಾಕೋ ಕಾಣೆ.
ನಮ್ಮಿಬ್ಬರ ಪ್ರೀತಿ ಹಾಗೂ ಪ್ರತಿದಿನದ ನಮ್ಮ ಭೇಟಿಗೆ ಬೇರೆಯವರಂತೆ ಯಾವೊಂದೂ ಅರ್ಥವನ್ನೂ ಕಲ್ಪಿಸಿಕೊಳ್ಳದೇ, ಯಾವ ರೀತಿಯಲ್ಲೂ ತಮಾಷೆ ಮಾಡದೇ ಇದ್ದವನು ಒಬ್ಬನೇ ಒಬ್ಬನೆಂದರೆ ನಮ್ಮ ಕಚೇರಿ ಬಿಲ್ಡಿಂಗ್ ನ ಸೆಕ್ಯೂರಿಟಿ ನವೀನ್. ನಮ್ಮಿಬ್ಬರ ಆತ್ಮೀಯ ಮಾತುಕತೆ ನೋಡಿ ಖುಷಿಪಟ್ಟವನಾತ. ಎಷ್ಟೋ ಸಲ ನನ್ನೊಡನೆ ಅಂದಿದ್ದುಂಟು, ” ಇಲ್ಲೇ ಯಾಕೆ ಮಾತನಾಡಿಸಿಕೊಂಡಿರ್ತೀರ ಸರ್? ಆಕೆಯನ್ನು ನಿಮ್ಮ ಮನೆಗೇ ಕರ್ಕೊಂಡು ಹೋಗ್ಬಾರ್ದಾ? ” ಅಂತ. ಆತ ಹೇಳಿದ್ದು ನನಗೂ ಸರಿ ಅನಿಸಿದ್ದಿದೆ. ಆದರೆ ಅಮ್ಮ ಕೇಳುವ ಸಾವಿರ ಪ್ರಶ್ನೆಗಳನ್ನು ಎದುರಿಸಲು ನನಗಷ್ಟು ಧೈರ್ಯ ಸಾಲದು. ಅದಕ್ಕೇ ಇಷ್ಟು ದಿನ ಹಿಂಜರಿದಿದ್ದೆ. ಆದರೆ ನಮ್ಮಿಬ್ಬರ ಭೇಟಿಯಾದಾಗ ತನ್ನ ಕಣ್ಣಿನ ಸಂಭಾಷಣೆಯಲ್ಲಿ ‘ತನ್ನನ್ನು ಮನೆಗೆ ಕರೆದುಕೊಂಡು ಹೋಗಿ’ ಎನ್ನುವ ಅಭಿಪ್ರಾಯವನ್ನು ಒಂದೇ ಒಂದು ಸಲವೂ ವ್ಯಕ್ತಪಡಿಸಿದವಳಲ್ಲ ಅವಳು.
ನನಗೆಷ್ಟೋ ಸಲ ಅನ್ನಿಸಿದ್ದುಂಟು, ‘ಅವಳು ಕಣ್ಣಿನಲ್ಲೇ ಇಷ್ಟೊಂದು ಮಾತನಾಡಿಸುವವಳು, ಅವಳಿಗೆ ಮಾತು ಬರುತ್ತಿದ್ದಿದ್ದರೆ ಎಷ್ಟು ಚೆನ್ನಾಗಿ ತನ್ನ ಭಾವನೆಗಳನ್ನು ನನ್ನೊಂದಿಗೆ ವ್ಯಕ್ತಪಡಿಸಿಕೊಳ್ಳುತ್ತಿದ್ದಳೇನೋ. ಅವಳೆಲ್ಲಾ ಭಾವನೆಗಳನ್ನು ನಾನೂ ಅರಿಯುವಂತಿದ್ದಿದ್ದರೆ…! ಎಷ್ಟು ಚೆನ್ನಾಗಿರುತ್ತಿತ್ತು’ ಅಂತ. ಆದರೂ ನಮ್ಮಿಬ್ಬರ ಒಡನಾಟಕ್ಕೆ ಈ ಕೊರತೆ ಯಾವತ್ತೂ ನಮಗೆ ತೊಡಕಾಗಿ ಕಾಣಲೇ ಇಲ್ಲ. ನಾನು ಅವಳೊಂದಿಗೆ ಮಾತನಾಡುವ ಪ್ರತಿಯೊಂದು ಮಾತಿಗೂ ಅವಳು ಸದಾ ಕಿವಿಯಾಗಿರುತ್ತಿದ್ದಳು. ಅವಳ ಸುಂದರ ಕಂಗಳ ಭಾಷೆಗೆ ನಾನು ಮೈಯ್ಯೆಲ್ಲಾ ಕಣ್ಣಾಗಿರುತ್ತಿದ್ದೆ. ನಮ್ಮಿಬ್ಬರ ಬಾಂಧವ್ಯ ಅಷ್ಟೊಂದು ಗಟ್ಟಿಯಾಗಿತ್ತು.
ನಾನು ಅವಳ ಬಗ್ಗೆ ಯಾರಲ್ಲೇ ಪ್ರಸ್ತಾಪಿಸಿದರೂ ಕೆಲವು ಮಂದಿ ನನ್ನನ್ನು ವಿಚಿತ್ರವಾಗಿ ನೋಡಿದರೆ, ಇನ್ನು ಕೆಲವರು ತಮಾಷೆ ಮಾಡಿ ನನಗೆ ನೋವು ನೀಡುತ್ತಿದ್ದರು. ಇಷ್ಟಾದರೂ ಅವಳು ಮಾತ್ರ ನಿರ್ಲಿಪ್ತೆ. ಅವಳಂತೆ ನಾನು ನಿರ್ಲಿಪ್ತನಾಗಿರಲು ಎಷ್ಟೇ ಪ್ರಯತ್ನಿಸಿದರೂ ನನಗಂತೂ ಸಾಧ್ಯವಾಗಿರಲೇ ಇಲ್ಲ. ಆದರೂ ಇವಾವುದೂ ನಮ್ಮಿಬ್ಬರ ಭೇಟಿಗೆ ಎಂದೂ ಅಡ್ಡವಾಗಲೇ ಇಲ್ಲ. ಹಾಗಾಗಿ ನಾನೂ ಆಗಲೇ ಇವುಗಳೆಲ್ಲದರ ಬಗ್ಗೆ ಕುರುಡ, ಕಿವುಡನಾಗಿರುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಅವಳ ಮೂಕಭಾಷೆಯೇ ನನಗೆ ಎಲ್ಲವುಗಳಿಗಿಂತ ಹಿತವೆಸಿತ್ತು.
ಅವಳನ್ನು ಅಷ್ಟೊಂದು ಹಚ್ಚಿಕೊಂಡ ನನಗೆ ಒಂದು ದಿನವೂ ಅವಳನ್ನು ನೋಡದೇ ಇರಲಾಗುತ್ತಿರಲಿಲ್ಲ. ಇವತ್ತು ಅವಳು ಕಾಣದೇ ಇದ್ದಾಗ ‘ನಾನೆಷ್ಟು ಅವಳನ್ನು ಹಚ್ಚಿಕೊಂಡಿದ್ದೇನೆ’ ಎಂಬುದರ ಅರಿವು ನನಗಾಗಿತ್ತು. ‘ಈಗ ಏನು ಮಾಡಲಿ? ಅವಳು ಯಾಕೆ ಕಾಣಿಸುತ್ತಿಲ್ಲವೆಂದು ಯಾರನ್ನು ಕೇಳಲಿ? ಅವಳು ನನಗಾಗಿ ಬಂದವಳು ಕಾದು ಕಾದು ನಾನು ಬರಲು ತಡವಾಯಿತೆಂದು ಕೋಪಿಸಿಕೊಂಡು ಹೊರಟು ಬಿಟ್ಟಳೇ?
ಇಲ್ಲ, ಅವಳು ಯಾವತ್ತೂ ನನ್ನೊಂದಿಗೆ ಕೋಪಿಸಿಕೊಂಡಿರಲಿಲ್ಲ. ಅಂತಹವಳು ಇವತ್ಯಾಕೆ ಕೋಪ ಮಾಡಿಕೊಳ್ಳುವಳು? ಸೆಕ್ಯೂರಿಟಿ ನವೀನ್ ನನ್ನು ಕೇಳಿಬಿಡಲೇ? ಆತ ನಮ್ಮಿಬ್ಬರ ಪರಿಚಯ-ಬಾಂಧವ್ಯಕ್ಕೆ, ಹಾಗೂ ಭೇಟಿಗೆ ಸಾಕ್ಷಿಯಾಗಿದ್ದವನು. ಅವನೊಂದಿಗೆ ಕೇಳಿದಲ್ಲಿ ತಪ್ಪು ತಿಳಿದುಕೊಳ್ಳಲಾರನೆಂಬ ಧೈರ್ಯದಿಂದ ಗೇಟ್ ನತ್ತ ಹೆಜ್ಜೆ ಹಾಕಿದ್ದವನಿಗೆ ಅತ್ತ ತಿರುಗಿ ಕೂತಿದ್ದ ಆತ ನನ್ನ ಕಣ್ಣಿಗೆ ಬಿದ್ದಿದ್ದ. ಮೆಲ್ಲಗೆ ‘ನವೀನ್’ ಎಂದು ಕರೆದಾಗ, ಆತ ನನ್ನತ್ತ ತಿರುಗಿದ್ದು ನೋಡಿದಾಗ ನನ್ನ ಮನಸ್ಸು ತುಸು ಪೆಚ್ಚೆನಿಸಿತ್ತು. ಕಾರಣ ಇಂದಿನ ದಿನದ ಸೆಕ್ಯೂರಿಟಿ ಬೇರೆಯವನಾಗಿದ್ದ. ಆತ ನನ್ನತ್ತ ತಿರುಗಿದವನೇ ಪ್ರಶ್ನಾರ್ಥಕವಾಗಿ ದಿಟ್ಟಿಸಿದಾಗ ನಾನು ‘ ಏನಿಲ್ಲ’ ಅನ್ನುತ್ತಾ ಗೇಟು ದಾಟಿ ಮನೆಯತ್ತ ಭಾರವಾದ ಹೆಜ್ಜೆ ಹಾಕಿದ್ದೆ.
ಬೆಳಗ್ಗೆ ಮತ್ತದೇ ಅವಳ ನೆನಪು. ‘ಇವತ್ತಾದರೂ ಸಿಕ್ಕಾಳು’ ಎನ್ನುವ ಭರವಸೆಯೊಂದಿಗೆ ಕಚೇರಿಯತ್ತ ಸಾಗಿದ್ದೆ. ದಿನವಿಡೀ ತಳಮಳದಲ್ಲೇ ಎಲ್ಲಾ ಕೆಲಸವನ್ನೂ ಬೇಗ ಬೇಗ ಮಾಡಿ ಮುಗಿಸಿದ್ದೆ. ಅವಸರದಲ್ಲಿ ಕೆಲವು ತಪ್ಪುಗಳಾದಾಗ ಮ್ಯಾನೇಜರ್ ನಿಂದ ಬೈಸಿಕೊಂಡರೂ ನನ್ನ ಗಮನ ಎಲ್ಲವೂ ಆಕೆಯ ಬರುವಿಕೆಯತ್ತ ಇತ್ತು. ಆತ ಏನೆಂದನೆನ್ನುವ ಪರಿಜ್ಞಾನವೂ ಇಲ್ಲದೇ ನಾನು ಗಳಿಗೆಗೊಮ್ಮೆ ಗಡಿಯಾರ ನೋಡಿಕೊಳ್ಳುತ್ತಿದ್ದೆ. ಇವೆಲ್ಲದರ ನಡುವೆ ಈ ಮ್ಯಾನೇಜರ್ ನ ಬೈಗುಳ ಎಲ್ಲೋ ಗಾಳಿಯಲ್ಲಿ ತೂರಿಬಿಟ್ಟಿದ್ದೆ. ಯಾವತ್ತೂ ತಪ್ಪು ಮಾಡದೇ ಇದ್ದವನಿಂದ ಇವತ್ತು ತಪ್ಪಾಗಿದ್ದುದು ಆತನಿಗೂ ಅಚ್ಚರಿಯೆನಿಸಿರಬೇಕು! ಅವೆಲ್ಲದರ ಬಗ್ಗೆ ನಾನು ಚಿಂತಿಸುವ ಸ್ಥಿತಿಯಲ್ಲಿರಲಿಲ್ಲ. ನಾನು ಸಂಜೆಯಾಗುವುದನ್ನೇ ಕಾಯುತ್ತಿದ್ದೆ. ಯಾವಾಗ ಸಂಜೆಯಾಗುವುದೋ…ಎಷ್ಟು ಹೊತ್ತಿಗೆ ಆಕೆಯನ್ನು ನೋಡೇನೋ ಎನ್ನುವ ಕಾತುರ ನನಗೆ.
ಸಾಯಂಕಾಲ ಹೊರಟು ನಿಂತಾಗ ಏನೋ ಒಂದು ಖುಷಿ. ಅವಳು ಇವತ್ತು ಖಂಡಿತಾ ನೋಡಲು ಸಿಕ್ಕೇ ಸಿಗುತ್ತಾಳೆ. ಅವಳ ಕಣ್ಣಲ್ಲಿ ಕಣ್ಣಿಟ್ಟು ಇವತ್ತು ಹೇಳಬೇಕು, ‘ನಿನ್ನನ್ನು ದಿನಾ ನೋಡದೇ, ಮಾತನಾಡದೇ ಇದ್ದಲ್ಲಿ ನನಗೆ ಸಮಾಧಾನವೇ ಇರಲ್ಲ. ನಿನ್ನನ್ನು ಇವತ್ತು ಮನೆಗೆ ಕರ್ಕೊಂಡು ಹೋಗ್ತೀನಿ… ನೀನು ಬಂದು ನನ್ಜೊತೇನೇ ಇದ್ಬಿಡು. ಅಮ್ಮ ಬೈದ್ರೆ ನಾನು ಅವಳಿಗೆ ಏನೋ ಹೇಳ್ಕೋತೀನಿ.’ ಅಂತ.
ಅವಳಿಗೂ ನನ್ನ ಕಂಡ್ರೆ ಇಷ್ಟ…ನಾನು ಕರೆದರೆ ಅವಳು ಖಂಡಿತಾ ಇಲ್ಲ ಅನ್ನಲ್ಲ. ನನ್ನೊಂದಿಗೆ ಬಂದೇ ಬರ್ತಾಳೆನ್ನುವ ಬಲವಾದ ನಂಬಿಕೆ ನನ್ನದು.
ಮೆಟ್ಟಿಲಿಳಿದುಕೊಂಡೇ ಸುತ್ತಲೂ ಹುಡುಕಾಡಿದ್ದೆ. ಅವಳು ಕಾಣಲೇ ಇಲ್ಲ…! ಇವತ್ತು ನಿಜಕ್ಕೂ ಚಿಂತೆಯಾಗಿತ್ತು. ‘ಅಯ್ಯೋ…ಅವಳು ಇವತ್ತೂ ಇಲ್ಲ…ಇದು ಹೇಗೆ ಸಾಧ್ಯ? ಅವಳು ನನ್ನನ್ನು ನೋಡಲು ಬರದೇ ಇರಲು ಖಂಡಿತ ಸಾಧ್ಯವಿಲ್ಲ. ಅವಳಿಗೇನಾದರೂ ತೊಂದರೆಯಾಯಿತೇ? ಅಥವಾ ಇಲ್ಲಿಗೆ ಬರಲು ಯಾರಾದರೂ ಆಕೆಗೆ ತಡೆಯೊಡ್ಡಿರಬಹುದೇ?’ ಇಂತಹ ಎಂತೆಂತಹದೋ ಯೋಚನೆಗಳು ಒಂದರ ಮೇಲೊಂದು ಧಾಳಿ ಮಾಡುತ್ತಲೇ ಇದ್ದವು. ‘ಇವತ್ತಾದ್ರೂ ಸೆಕ್ಯುರಿಟಿ ನವೀನ್ ಇದ್ರೆ ಆತನಲ್ಲಿ ಅವಳ ಬಗ್ಗೆ ಕೇಳಲೇಬೇಕು.’ ಅಂದುಕೊಂಡವನೇ ಮೆಟ್ಟಿಲಿಳಿದಿದ್ದೆ. ಗೇಟ್ ಪಕ್ಕದಲ್ಲಿ ಅದೇ ಸೆಕ್ಯೂರಿಟಿ ನಿಂತಿದ್ದ. ಆತ ನನ್ನ ಮುಖ ನೋಡಿದವನೇ ಸಪ್ಪೆ ಮೋರೆ ಮಾಡಿಕೊಂಡು ತಲೆತಗ್ಗಿಸಿದ್ದ.
“ನವೀನ್, ಅವಳೆಲ್ಲಿ? ನನಗಾಗಿ ಕಾಯ್ತಾ ಇದ್ದೋಳು ಬರಲೇ ಇಲ್ಲ. ನನಗೆ ಅವಳದ್ದೇ ಚಿಂತೆಯಾಗಿ ಬಿಟ್ಟಿದೆ. ನಿನ್ನೆಯಿಂದ ಅವಳು ಬರುತ್ತಿಲ್ಲ. ಅವಳು ಯಾಕೆ ಕಾಣಸಿಗುತ್ತಿಲ್ಲ ಎನ್ನುವುದು ನಿಮಗೇನಾದರೂ ತಿಳಿದಿದೆಯೇ ನವೀನ್? ನನಗಂತೂ ತುಂಬಾ ಗಾಬರಿಯಾಗ್ತಿದೆ. ಯಾವತ್ತೂ ಇಲ್ಲೇ ನನಗಾಗಿ ಕಾಯುವ ಅವಳು ಎರಡು ದಿನದಿಂದ ಕಾಣಿಸುತ್ತಿಲ್ಲ ಅಂದ್ರೆ ಅರ್ಥ ಏನು? ಆಕೆಗೇನಾದರೂ ತೊಂದರೆ ಆಗಿರಬಹುದೇ?” ಆತನ ಸಮೀಪಕ್ಕೆ ಹೋದವನೇ ನಾನು ಅವನಲ್ಲಿ ಆತುರಾತುರವಾಗಿ ಪ್ರಶ್ನಿಸಿದ್ದೆ.
ನನ್ನೆಲ್ಲಾ ಬಡಬಡಿಸುವಿಕೆಗೆ ಆತನ ಮುಖ ಕಪ್ಪಿಟ್ಟಿತ್ತು. ಅವನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲೇ ಅಳುಕುವಂತಿತ್ತು. ನಾನು ಆತನ ಇಳಿಮೋರೆ ಕಂಡು ಗಾಬರಿಗೊಂಡಿದ್ದೆ. “ಏನಾಯ್ತು ನವೀನ್? ನನ್ನ ಜೂಲಿ ಆರಾಮಾಗಿದ್ದಾಳೆ ತಾನೇ? ಆಕೆಗೇನೂ ಆಗಿಲ್ಲ ತಾನೇ? ಯಾಕೆ ಮಾತನಾಡುತ್ತಿಲ್ಲ ನೀವು? ಆಕೆಗೇನಾದರೂ ತೊಂದರೆಯಾಗಿದೆಯೇ?” ನಾನು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಲೇ ಇದ್ದೆ. ಆದರೆ ಆತ ಮೌನವಾಗಿಯೇ ನಿಂತಿದ್ದ. ನನ್ನ ತಾಳ್ಮೆಯ ಕಟ್ಟೆಯೊಡೆದಿತ್ತು.
“ನವೀನ್, ಏನಾಯ್ತು? ದಯವಿಟ್ಟು ಏನಾದ್ರೂ ಮಾತಾಡಿ. ನನ್ನ ಜೂಲಿಗೇನಾಯ್ತು? ಆರಾಮಾಗಿದ್ದಾಳೆ ತಾನೇ?” ನಾನು ಆತನ ಭುಜ ಹಿಡಿದು ಜೋರಾಗಿ ಕುಲುಕಿದವನು ಪ್ರಶ್ನೆಗಳ ಸುರಿಮಳೆಯನ್ನು ಮುಂದುವರಿಸುತ್ತಲೇ ಇದ್ದೆ. ಆದರೂ ಆತನ ಪ್ರತಿಕ್ರಿಯೆ ಶೂನ್ಯವಾಗಿತ್ತು. ನನ್ನ ಪ್ರಶ್ನೆಗಳಿಗೆ ಸೋತವನು ನಿಧಾನವಾಗಿ ತನ್ನ ಸೀಟಿನಲ್ಲಿ ಕುಸಿದು ಕುಳಿತಿದ್ದ. ಆತನ ಕಣ್ಣಾಲಿಗಳು ತುಂಬಿ ಬಂದಿದ್ದವು.
ಈಗಲಂತೂ ನನಗೆ ಭಯವೇ ಆಗಿತ್ತು, ‘ನನ್ನ ಜೂಲಿಗೆ ಏನೋ ಆಗಿದೆ, ಇಲ್ಲವಾದಲ್ಲಿ ಆಕೆ ನನ್ನನ್ನು ನೋಡೋಕೆ ಬರದಿರಲು ಸಾಧ್ಯವೇ ಇಲ್ಲ.’ ಸೆಕ್ಯೂರಿಟಿ ನವೀನ್ ರ ಮೌನ ನನ್ನನ್ನು ಇನ್ನೂ ಭಯ ಪಡಿಸುವಂತಿತ್ತು.
ನಾನು ಆತನ ಭುಜ ಕುಲುಕಿ ಮತ್ತೆ ಮತ್ತೆ ಬಡಬಡಿಸಿದಾಗ, ಆತನಿಗೆ ತಡೆಯಲಾಗಲಿಲ್ಲ. “ವಿಜಯ್ ಸರ್, ನಿನ್ನೆ ಸಂಜೆ ನೀವು ಕಚೇರಿಯಿಂದ ಹೊರಬರೋ ಅರ್ಧ ಗಂಟೆ ಮೊದಲೇ ಜೂಲಿ ರಸ್ತೆಯ ಆ ಬದಿಯಲ್ಲಿ ನಿಮಗಾಗಿ ಕಾದು ಕೂತಿದ್ದಳು. ನಾನೂ ನನ್ನ ಸೀಟಲ್ಲೇ ಕೂತಿದ್ದವನು ಆಕೆ ಬಂದಿದ್ದನ್ನು ಗಮನಿಸಿದ್ದೆ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಅದೇನಾಯ್ತೋ ಗೊತ್ತಿಲ್ಲ. ಜೂಲಿ ರಸ್ತೆ ದಾಟಿಕೊಂಡು ಬರುವಷ್ಟರಲ್ಲಿ ಯಾವನೋ ದರಿದ್ರ ನನ್ಮಗ ಕಾರಿನಲ್ಲಿ ವೇಗವಾಗಿ ಬಂದು ಜೂಲಿಗೆ ಯಮನಾಗಿ ಬಿಟ್ಟ. ಕಾರು ಗುದ್ದಿದ ರಭಸಕ್ಕೆ ನಮ್ಮ ಜೂಲಿ ನಡುರಸ್ತೆಯಲ್ಲೇ ರಕ್ತಸಿಕ್ತವಾಗಿ ಬಿದ್ದು ಸತ್ತು ಹೋಗಿಬಿಟ್ಲು ಸರ್. ನಾನು ಎದ್ದು ಓಡುವಷ್ಟರಲ್ಲಿ ಕಾರು ಆಗಲೇ ಕಣ್ಮರೆಯಾಗಿತ್ತು. ನಿಮಗೆ ಹೇಳಿದ್ರೆ ನೀವು ನೊಂದ್ಕೋತೀರಾಂತ ತಿಳಿಸ್ದೇ ನಾನು ನಿನ್ನೆ ರಜೆ ಹಾಕ್ಬಿಟ್ಟು, ನಮ್ಮ ಮನೆಯ ಪಕ್ಕದ ತೋಟದಲ್ಲೇ ಜೂಲಿಯನ್ನು ಮಣ್ಣು ಮಾಡ್ಬಿಟ್ಟೆ, ಕ್ಷಮಿಸಿ ಸರ್. ನನ್ನ ಕಣ್ಣಾರೆ ಹೋಗ್ಬಿಟ್ಲು ನಮ್ಮ ಮುದ್ದಿನ ಜೂಲಿ. ಅವಳ ನೋವಿನ ಕೂಗು ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇದೆ ಸರ್…” ನವೀನ್ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದ.
ಅಲ್ಲೇ ಎಲ್ಲವನ್ನೂ ನೋಡುತ್ತಿದ್ದ ನನ್ನ ಸಹೋದ್ಯೋಗಿ ಶರತ್, ” ನೋಡು ಸನತ್, ದಿನಾ ಸಂಜೆ ಅದೊಂದು ನಾಯಿ ಬರ್ತಿತ್ತಲ್ಲ, ಅದೇನೋ ನಿನ್ನೆ ಆಕ್ಸಿಡೆಂಟ್ ನಲ್ಲಿ ಸತ್ತೋಯ್ತಂತೆ. ಇವರಿಬ್ರು ಗೋಳಾಡೋದು ನೋಡಿದ್ರೆ ಇವರ ಮನೆಯವರೇ ಯಾರೋ ಹೋಗ್ಬಿಟ್ರೂಂತ ಅನ್ಕೋಬೇಕೂ…ಆ ತರ ವಿಚಿತ್ರವಾಗಿ ಆಡ್ತಿದ್ದಾರೆ, ಹುಚ್ಚರು! ಬಾ ನಮ್ಗೆ ಮೂವಿಗೆ ಲೇಟಾಯ್ತು…”ಅನ್ನುತ್ತಲೇ ಸನತ್ ನನ್ನು ಕೈ ಹಿಡಿದೆಳೆದುಕೊಂಡು ಹೋಗಿದ್ದ. ನನಗೆ ಇದಾವುದರ ಪರಿವೆಯೇ ಇರಲಿಲ್ಲ. ‘ಮುದ್ದಾದ ಜೂಲಿ ಇನ್ನಿಲ್ಲ’ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ನನ್ನೆದೆ ಒಡೆದು ಹೋಗಿತ್ತು. ಆಘಾತಕ್ಕೊಳಗಾದ ನಾನು ಅಲ್ಲೇ ಕುಸಿದಿದ್ದೆ.
- ಸ್ಮಿತಾ ಬಲ್ಲಾಳ್ (ಅಸ್ಮಿತೆ)
