ನನ್ನ ಹಾಡುವ ಖಯಾಲಿ

ಆಕೆ ಮೈಕ್ ಹಿಡಿದು ಹಾಡುತ್ತಿದ್ದರೆ ಕೇಳುವವರು ಯಾರೂ ಅಲ್ಲಿ ಇರುತ್ತಿರಲಿಲ್ಲ. ಅವಳ ಪಾಡಿಗೆ ಅವಳು ಯಾರ ಪರಿವೆ ಇಲ್ಲದೆ ಹಾಡುತ್ತಿದ್ದಳು. ಅವಳ ಹಾಡನ್ನು ಕೇಳಲಿ ಎಂದು ಆಕೆ ಕೂಡ ಬಯಸುತ್ತಿರಲಿಲ್ಲ. ಚಿಕ್ಕಂದಿನಿಂದಲೂ ಸಂಗೀತ ಕಲಿಯಬೇಕೆಂಬ ಆಸೆ ಮಾತ್ರ ಬೆಟ್ಟದಷ್ಟಿತ್ತು. ಆದರೆ ಮನೆಯಲ್ಲಿ ಆಕೆಯ ಆಸಕ್ತಿಗೆ ಪ್ರೋತ್ಸಾಹಿಸುವ ಮನಸ್ಸುಗಳು ಯಾರು ಇರಲಿಲ್ಲ. ಇದು ಹಾಡುಗಾರ್ತಿ ಆಗಲು ಹೊರಟಿದ್ದ ಲೇಖಕಿ ಎನ್ ಶೈಲಜಾ ಹಾಸನ ಅವರ ಅನುಭವದ ಕತೆಯನ್ನು ತಪ್ಪದೆ ಮುಂದೆ ಓದಿ…

ಹಾಡುಗಳೆಂದರೆ ನನಗೆ ತುಂಬ ಇಷ್ಟ. ಹಾಡು ಕೇಳುವುದು ಮತ್ತು ಹಾಡುವುದು ಎರಡೂ ನನಗಿಷ್ಟವಾದ ಕಾಯಕವೆ. ಚೆನ್ನಾಗಿ ಹಾಡುತ್ತೇನೆ ಎಂದು ನಾನು ಬಾಲ್ಯದಲ್ಲಿ ಬಲವಾಗಿ ನಂಬಿ ಬಿಟ್ಟಿದ್ದೆ. ಹಾಗಾಗಿ ಸಮಯ ದೊರೆತಾಗಲೆಲ್ಲ ಯಾವಾಗಲೂ ಹಾಡುತ್ತಲೆ ಇರುತ್ತಿದ್ದೆ. ಶಾಲೆಯಲ್ಲಿ ವಾರ ವಾರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನನ್ನದು ಹಾಡು ಇದ್ದೆ ಇರುತ್ತಿತ್ತು. ಎಲ್ಲರಿಗಿಂತ ಮೊದಲೆ ನನ್ನ ಹೆಸರನ್ನು ಕೊಟ್ಟು ಬಿಡುತ್ತಿದ್ದೆ. ಪಾಪ ನಮ್ಮ ಶಿಕ್ಷಕರು ನಾನು ಹಾಡುವುದನ್ನು ಯಾವತ್ತು ಬೇಡವೆನ್ನುತ್ತಿರಲಿಲ್ಲ. ಆದರೆ ನಮ್ಮ ದೈಹಿಕ ಶಿಕ್ಷಕಿ ಮಾತ್ರ ನಾನು ಹಾಡು ಹೇಳಿದ ಮೇಲೆ ಅದೇ ಹಾಡನ್ನು ಕೊಯ್ ಅಂತ ಎಳೆಯುತ್ತ ಹಾಡಿ ಆಡಿ ಕೊಳ್ಳುತ್ತಿದ್ದರು. ನನಗೆ ಆಗ ಸಕತ್ ಕೋಪ ಬಂದರೂ ಏನೂ ಮಾಡಲು ಆಗದ ಕಾರಣ ಮನಸ್ಸಿನಲ್ಲಿಯೇ ಬೈಯ್ದುಕೊಳ್ಳುತ್ತ ಈ ಮೇಡಂಗೆ ಹಾಡೊಕೆ ಬರೋಲ್ಲ, ನಾನು ಚೆನ್ನಾಗಿ ಹಾಡುತ್ತೆನೆ ಅಂತ ಜಲಸ್ ಅವರಿಗೆ, ಅವರು ಕರೆದಾಗ ಕೊಕ್ಕೊ ಆಡಲು ಹೋಗುವುದುಲ್ಲವಲ್ಲ ಅದಕ್ಕೆ ಅವರಿಗೆ ಸಿಟ್ಟು ಅಂತ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ. ಅದನ್ನು ಗೆಳತಿಯರ ಮುಂದೆ ಹೇಳುವ ಧೈರ್ಯವಿಲ್ಲದೆ ಮೌನವಾಗಿದ್ದು ಬಿಡುತ್ತಿದ್ದೆ. ಆದರೆ ಹಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಶಾಲಾ ಸ್ಪರ್ಧೆಯಲ್ಲೂ ಹಾಡುತ್ತಿದ್ದೆ. ಒಂದು ಬಾರಿಯೂ ಬಹುಮಾನ ಬರಲಿಲ್ಲ ಬಿಡಿ. ನನಗೆಷ್ಟು ಬಾರಿ ನಿರಾಸೆಯಾಗಿತ್ತೊ. ಆ ನಿರಾಸೆ ನನ್ನ ಜೀವನದುದ್ದಕ್ಕೂ ಉಳಿದೆ ಬಿಟ್ಟಿತು. ನಾನು ಹಾಡಬೇಕು, ನನ್ನ ಹಾಡಿಗೆ ಬಹುಮಾನ ಪಡೆಯಲೇ ಬೇಕೆಂಬ ನನ್ನ ಛಲ ಕಾಲೇಜು ಮೆಟ್ಟಿಲೇರಿದ ಮೇಲೆ ಪಥನವಾಯಿತು. ಅಲ್ಲಿವರೆಗೂ ನಾನು ಹಾಡುತ್ತಲೆ ಇದ್ದೆ.
ನಮ್ಮ ಏರಿಯದಲ್ಲಿ ಪ್ರತಿವರ್ಷ ಶಿವರಾತ್ರಿ ಜಾಗರಣೆಗೆ ಇಡೀ ರಾತ್ರಿ ನಾಟಕ, ಹಾಡು ಅಂತ ಕಾರ್ಯಕ್ರಮ ನಡೆಯುತ್ತಿತ್ತು. ನನಗೆ ಹಾಡಲು ಅವಕಾಶ ಸಿಗುತ್ತೆ ಅಂತ ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದೆ. ಕಾರ್ಯಕ್ರಮ ಶುರುವಾಗುವ ಮೊದಲು ಜನ ಸೇರುವ ತನಕ ಮಕ್ಕಳಿಂದ ಹಾಡನ್ನು ಹಾಡಿಸುತ್ತಿದ್ದರು. ಅದಕ್ಕಾಗಿಯೇ ಕಾಯುತ್ತಿದ್ದ ನಾನು ಮೈಕಿನ ಮುಂದೆ ಬಂದು “ಹೂನಗೆ ದೈವದ ಸನ್ನಿಧಿಯೊ ಭೂಮಿಗೆ ಬಂದ ದೇವತೆಯೋ ಯಾರ ಮನೆಯ ಅಂಗಳದಲ್ಲಿ ಅರಳಿದಮಲ್ಲಿಗೆಯೋ” ಅಂತ ಹಾಡುತ್ತಿದ್ದೆ. ಪಾಪ ಚಿಕ್ಕವಳು ಅಂತನೋ, ನಮ್ಮ ಅಪ್ಪನ ಗೆಳೆಯರು ಅಲ್ಲಿನ ಮುತುವರ್ಜಿಯಿಂದ ಕಾರ್ಯಕ್ರಮ ಮಾಡುವಲ್ಲಿ ಶ್ರಮ ವಹಿಸುತ್ತಿದ್ದರಿಂದಲೊ ಏನೋ ನಾನು ಅಲ್ಲಿ ನನಗೆ ಬರುತ್ತಿದ್ದ ಹಾಡನೆಲ್ಲ ಹಾಡುತ್ತಿದ್ದೆ. ಮೈಕ್ ಹಿಡಿದು ನಾನು ಹಾಡುತ್ತಿದ್ದರೆ ಕೇಳುವವರು ಯಾರೂ ಅಲ್ಲಿ ಇರುತ್ತಿರಲಿಲ್ಲ. ನನ್ನ ಪಾಡಿಗೆ ನಾನು ಅದರ ಪರಿವೆ ಇಲ್ಲದೆ ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಅನ್ನುವ ಹಾಗೆ ಹಾಡುತ್ತಲೆ ಇರುತ್ತಿದ್ದೆ. ಜನ ಒಬ್ಬೊಬ್ಬಾರಾಗಿ ಬಂದು ಆಸೀನರಾಗುತ್ತಿದ್ದಂತೆ ಅಲ್ಲಿದ್ದ ಅಣ್ಣನ ಗೆಳೆಯರು ಮೆಲ್ಲನೆ ನನ್ನಿಂದ ಮೈಕು ಇಸ್ಕೊಂಡು ಬೇರೆಯವರಿಗೆ ಕೊಡುತ್ತಿದ್ದರು. ನನಗೂ ಹಾಡಿ ಸಮಾಧಾನವಾಗಿದ್ದರಿಂದ ನಾನು ಒಂಚೂರೂ ಬೇಸರ ಪಟ್ಟುಕೊಳ್ಳದೆ ಮೈಕನ್ನು ಕೊಟ್ಟು ಸ್ಟೇಜ್ ಮುಂದಿನಕುರ್ಚಿಯಲ್ಲಿ ಆಸೀನಳಾಗಿರುತ್ತಿದ್ದೆ. ಇದು ತುಂಬಾ ವರ್ಷ ನಡೆಯಿತು.

ಫೋಟೋ ಕೃಪೆ : ಅಂತರ್ಜಾಲ ಪತ್ರಿಕೆ

ಚಿಕ್ಕಂದಿನಿಂದಲೂ ಸಂಗೀತ ಕಲಿಯಬೇಕೆಂಬ ಆಸೆ ನನಗೆ ತುಂಬಾ ಇತ್ತು. ಮನೆಯಲ್ಲಿ ಅದಕ್ಕೆ ನೀರೆರೆಯುವವರು ಯಾರು ಇರಲಿಲ್ಲ. ಆದರೂ ಛಲ ಬಿಡದ ತಿವಿಕ್ರಮನಂತೆ ಅದೊಂದು ದಿನ ಗೆಳತಿಯ ಅಮ್ಮ ಸಂಗೀತ ಹೇಳಿ ಕೊಡುತ್ತಾರೆ ಅಂತ ಗೊತ್ತಾದ ಕೂಡಲೆ ಶಾಲೆ ಬಿಟ್ಟ ನಂತರ ಗೆಳತಿಯ ಜೊತೆ ಅವರ ಮನೆಗೆ ಹೋಗಿ ನಾನೂ ಸಂಗೀತಕ್ಕೆ ಸೇರಿಕೊಳ್ಳುತ್ತೇನೆ ಅಂತ ಕೇಳಿದೆ. ಹಿರಿಯರನ್ನು ಕರೆದು ಕೊಂಡು ಬಾ ಅಂತ ಸಂಗೀತ ಮೇಡಂ ಹೇಳಿದರು. ಮನೆಗೆ ಬಂದು ಅಮ್ಮನಲ್ಲಿ ಕೇಳಿದೆ. “ಮೊದ್ಲು ಚೆನ್ನಾಗಿ ಓದುದನ್ನ ಕಲಿ, ಆಮೇಲೆ ಸಂಗೀತ ಕಲಿಯುವಂತೆ. ಓದ್ಕೊ ಅಂದ್ರೆ ನಿದ್ದೆ ಹೊಡೆಯುತ್ತಾಳೆ, ಸಂಗೀತ ಅಂತೆ ಸಂಗೀತ” ಅಮ್ಮ ಮೂದಲಿಸಿದಾಗ ಥೂ ಈ ಅಮ್ಮನಿಗೆ ಸಂಗೀತದ ಗಂಧ ಗಾಳಿನೇ ಇಲ್ಲ. ಇನ್ನು ನನ್ನ ಸಂಗೀತಕ್ಕೆ ಕಳಿಸುತ್ತಾಳಾ ಅಂತ ಅಂದುಕೊಂಡು ನನ್ನ ಸಂಗೀತ ಕಲಿಯುವ ಆಸೆಗೆ ತಿಲಾಂಜಲಿ ಬಿಟ್ಟೆ.ಅಪ್ಪನಿಗೂ ಅಂತಹ ಆಸಕ್ತಿ ಇಲ್ಲವಾದ್ದರಿಂದ ನಾನು ಸಂಗೀತಕ್ಕೆ ಸೇರಲು ಆಗಲೇ ಇಲ್ಲ. ಆದರೂ ಹಾಡುವುದೇನು ಬಿಡಲಿಲ್ಲ.

ಹೊಸ ಹೊಸ ಹಾಡು ಕಲಿಯುವುದು ಅದನ್ನ ಮನೆಯಲ್ಲಿ ಹಾಡುವುದು ನನ್ನ ಹವ್ಯಾಸವಾಗಿತ್ತು. ಮನೆ ತುಂಬಾ ಇರುತ್ತಿದ್ದ ನನ್ನ ಪ್ರಚಂಡ ಸಹೋದರರು ನಾನು ಹಾಡುವಾಗಲೆಲ್ಲ ಕಿಚಯಿಸುತ್ತಿದ್ದರು. “ನಿನ್ನ ಹಾಡನ್ನ ನಾವು ಕೇಳಲಾಗುತ್ತಿಲ್ಲ, ಹಾಡುವುದನ್ನ ನಿಲ್ಲಿಸು, ಇಲ್ಲದಿದ್ದರೆ ರೂಮಿಗೆ ಹೋಗಿ ಹಾಡಿಕೊ” ಅಂತ ಜಗಳಕ್ಕೆ ಬರುತ್ತಿದ್ದರು. ಅಮ್ಮನೂ ಕೂಡಾ ಎಂದಿನಂತೆ ಅವರಿಗೆ ಸಪೋರ್ಟ್ ಮಾಡುತ್ತಿದ್ದರು. ಆದರೆ ಅಪ್ಪನ ಬೆಂಬಲ ಸದಾ ನನಗೆ ಇದ್ದುದ್ದರಿಂದ “ಹೋಗ್ರೊ, ನಾನು ಎಲ್ಲಿ ಬೇಕಾದರೂ ಹಾಡುತ್ತೇನೆ, ಕೇಳಿಸಿಕೊಳ್ಳಿ, ಇಲ್ಲ ಅಂದ್ರೆ ನೀವೆ ಎದ್ದು ಹೋಗಿ” ಅಂತ ಉತ್ತರ ಕೊಟ್ಟು ನನ್ನ ಹಾಡನ್ನು ಮುಂದುವರೆಸುತ್ತಿದ್ದೆ. ಆದರೆ ಆ ಘಾಟಾನುಘಟಿಗಳು ಸುಮ್ನೆ ಇರುತ್ತಾರಾ. ಜೋರಾಗಿ ಕೂಗಾಡುತ್ತಾ “ಹಾಡು ನಿಲ್ಲಿಸೆ, ನಾವು ಓದ್ಕೊಬೇಕು” ಅಂತ ಪ್ರತಿಭಟಿಸುತ್ತಿದ್ದರು. ಅಂತಹ ಸಮಯದಲ್ಲೆಲ್ಲ ನಮ್ಮ ಅಪ್ಪ ನನ್ನ ನೆರವಿಗೆ ನಿಂತು ಬಿಡುತ್ತಿದ್ದರು.”ಒಳಗಡೆ ಹೋಗಿ ಓದ್ಕೊಹೋಗ್ರೊ, ಇರೋ ಒಬ್ಳು ಹೆಣ್ಣು ಮಗಳನ್ನ ಏಕೆ ಗೋಳು ಹಾಕುತ್ತಿರಾ,ಅವಳ ತಂಟೆಗೆ ಹೋದ್ರೆ ನಿಮ್ಗೆ ಕಾದಿದೆ ಹಬ್ಬ” ಅಂತ ಗಂಡು ಮಕ್ಕಳ ಮೇಲೆ ರೇಗಿ ಅಮ್ಮನಿಗೆ ಕೋಪ ಬರಿಸುತ್ತಿದ್ದರು. ಆದರೇನು ನನ್ನ ವಿಷಯದಲ್ಲಿ ಅಮ್ಮನದು ಏನು ನಡೆಯುತ್ತಿರಲಿಲ್ಲ. ಹಾಗಾಗಿ ನಾನು ನಿರಾಂತಕವಾಗಿ ಹಾಡಿ ಕೊಳ್ಳುತ್ತಿದ್ದೆ. ಕೇಳಲಾರದೆ ನನ್ನ ಸಹೋದರರು ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಾ ಒಬ್ಬೊಬ್ಬರೇ ಎದ್ದು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದರು.

ಅದೊಂದು ದಿನ ನಾನು ಹೊಸ ಹಾಡು ಕಲಿತು ಬಿಟ್ಟಿದ್ದೆ. ಎಂದಿನಂತೆ ಅದನ್ನು ಎಲ್ಲರೂ ಕೇಳಲೆಂದು ಹಾಲಿನಲ್ಲಿ ಕುಳಿತು ಹಾಡತೊಡಗಿದೆ. ಕಿರುಗಣ್ಣಿನಲ್ಲಿ ಅಲ್ಲಿ ಕುಳಿತಿದ್ದ ನನ್ನ ಸಹೋದರರನ್ನೆ ನೋಡುತ್ತಿದ್ದೆ. ಏನಾಶ್ಚರ್ಯ, ಅವರ್ಯಾರು ತಮ್ಮ ಅಸಮಾಧಾನ ತೋರದೆ ಅಲ್ಲಿಯೇ ಕುಳಿತಿದ್ದಾರೆ. ಎದ್ದು ಹೋಗಲೂ ಇಲ್ಲ. ತುಂಬಾ ಖುಷಿಯಾಗಿ ಮತ್ತಷ್ಟು ಉತ್ಸಾಹದಿಂದ ಹಾಡತೊಡಗಿದೆ. ಮನಸ್ಸಿಗೆ ಸಮಾಧಾನವಾಗುವಷ್ಟು ಹಾಡಿದೆ. ನನ್ನ ಪ್ರೀತಿಯಾ ಸಹೋದರರು ಬೇರೆ ಕೇಳಿಸಿಕೊಳ್ಳುತ್ತಿದ್ದಾರೆ ಅಂತ ಮತ್ತಷ್ಟು ಚೆನ್ನಾಗಿ ಹಾಡಿದೆ. ನನ್ನ ಹಾಡು ಮುಗಿಸಿ ನಾನು ಮೇಲೆ ಎದ್ದಾಗ ನನ್ನ ಪ್ರೀತಿ ಪಾತ್ರ ಸಹೋದರರು ತಮ್ಮ ಕಿವಿಯಿಂದ ನಿಧಾನವಾಗಿ ಹತ್ತಿಯನ್ನು ತೆಗೆದು ಮುಸಿ ಮುಸಿ ನಗುತ್ತಿದ್ದಾರೆ. ಅದನ್ನು ಕಂಡು ಸಾಕಷ್ಟು ಕೋಪ ಬಂದರೂ ಏನೂ ಮಾಡಲಾರದ ನಾನು, ಇವಕ್ಕೆ ಪುಣ್ಯ ಇಲ್ಲ ನನ್ನ ಹಾಡು ಕೇಳಲು ಅಂತ ಅಂದುಕೊಂಡು ಸಮಾಧಾನ ಪಟ್ಟು ಕೊಳ್ಳುತ್ತಿದ್ದೆ.

ಫೋಟೋ ಕೃಪೆ : ಅಂತರ್ಜಾಲ ಪತ್ರಿಕೆ

ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಪಾದಾರ್ಪಣೆ ಮಾಡಿದೆ. ಆದರೂ ಹಾಡುವ ಹುಚ್ಚು ಹೋಗಲಿಲ್ಲ. ಸಮಯ ಸಿಕ್ಕಾಗಲೆಲ್ಲ ಗೆಳತಿಯರ ಮುಂದೆ ನಾನು ಹಾಡುತ್ತಲೆ ಇರುತ್ತಿದ್ದೆ.ಪಾಪ ಒಬ್ಬರೂ ಕೂಡಾ ನನ್ನ ಹಾಡು ಚೆನ್ನಾಗಿಲ್ಲ ಅಂತ ಒಮ್ಮೆಯೂ ಹೇಳಿರಲಿಲ್ಲ. ಅಂತಹ ಒಳ್ಳೆಯ ಗೆಳತಿಯರು ನನಗಿದ್ದರು.ಶಾಲಾ ವಾರ್ಷಿಕೋತ್ಸವಕ್ಕಾಗಿ ಸಾಂಸ್ಕøತಿಕಾ ಸ್ಪರ್ಧೆಗಳು ಶುರುವಾದವು. ಅದರಲ್ಲಿ ಹಾಡಿನ ಸ್ಪರ್ಧೆ ಕೂಡಾ ಇತ್ತು.ನಾನಂತೂ ಭರ್ಜರಿ ತಯಾರಿ ನಡೆಸಿ ಸಿದ್ದವಾಗಿದ್ದೆ. ಸ್ಪರ್ಧೆ ದಿನ ಬಂದೇ ಬಿಟ್ಟಿತು. ಎಂದಿನ ಹುರುಪಿನಲ್ಲಿ ಹಾಡ ತೊಡಗಿದೆ. ತಕ್ಷಣವೇ ಹುಡುಗರ ಕಡೆಯಿಂದ ಸಿಳ್ಳೆಗಳು ಜೋರಾಗಿ ತೂರಿ ಬಂದವು.ಆ ಸಿಳ್ಳೆಗಳು ನಾನು ಚೆನ್ನಾಗಿ ಹಾಡುತ್ತಿದ್ದೆನೆ ಅಂತನೋ ಅಥವಾ ನಾನು ಹಾಡು ನಿಲ್ಲಿಸಲಿ ಅಂತ ಸಿಳ್ಳೆ ಬರುತ್ತಿದೆಯೋ ಅಂತ ಕ್ಷಣ ಅರ್ಥವಾಗಲಿಲ್ಲ. ಎಂದೂ ಕಾಡದ ಸಭಾಕಂಪನ ಕಾಡಿ ಧ್ವನಿ ನಡುಗ ತೊಡಗಿತು. ಕಲಿತಿದ್ದ ಹಾಡು ಮರೆತು ಹೋಗಿ ವೇದಿಕೆಯಿಂದ ಇಳಿದು ಬಿಟ್ಟೆ. ತಕ್ಷಣವೇ ನನ್ನ ಹತ್ತಿರ ಬಂದ ನನ್ನ ಗೆಳತಿಯರು “ಅದ್ಯಾಕೆ ನಿಲ್ಲಿಸಿ ಬಿಟ್ಟೆ, ಹೋಗಲಿ ಬಿಡು, ಈ ಹುಡುಗರಿಗೆ ಹಾಡಿನ ಗಂಧ ಗಾಳಿ ಇಲ್ಲ” ಅಂತ ಸಮಾಧಾನ ಪಡಿಸಲು ಪ್ರಯತ್ನಿಸಿದರು, ನಾನೂ ಹಾಗೆ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳೊಣ ಅಂದು ಕೊಳ್ಳುವಷ್ಟರಲ್ಲಿ ನನ್ನ ನಂತರ ಹಾಡಲು ವೇದಿಕೆ ಮೇಲೆ ಬಂದ ನನ್ನ ಗೆಳತಿ ಹಾಡಲು ಶುರು ಮಾಡುತ್ತಿದ್ದಂತೆ ಇಡೀ ಸಭಾಂಗಣವೇ ನಿಶಬ್ದವಾಗಿಬಿಟ್ಟಿತು. ನನ್ನ ಹಾಡಿಗೆ ಸಿಳ್ಳೆ ಕೇಕೆ ಬಂದಂತೆ ಗೆಳತಿಯ ಹಾಡಿಗೆ ಸಿಳ್ಳೆ ಕೇಕೆ ಬರಲಿಲ್ಲ. ಅವಳು ಹಾಡು ಮುಗಿಸಿದ ಕೂಡಲೆ ಒನ್ಸ್ ಮೋರ್ ಅಂತ ಅದೇ ಹುಡುಗರು ಕೂಗುತ್ತಿದ್ದಾಗ ಬುದ್ದನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ನನಗೆ ಆಗಾ… ಆಗಾ… ಆಡಿಟೋರಿಯಂ ಕೆಳಗೆ ಜ್ಞಾನೋದಯವಾಯಿತು. ನನ್ನ ಹಾಡುಗಾರಿಕೆ ಹೇಗಿದೆಯೆಂದು. ಅಂದೇ ಅಲ್ಲೆ ಶಪಥ ಮಾಡಿದೆ. ಇನ್ನೂ ಮುಂದೆ ನಾನು ಯಾರಾ ಮುಂದೂ ಹಾಡ ಬಾರದೆಂದು ಮುಡಿ ಕಟ್ಟಲಾರೆ ಎಂದು ಶಪಥ ಗೈದಾ ದ್ರೌಪತಿಯಂತೆ ಘೋರ ಘನಘೋರ ಶಪಥ ಗೈಯ್ದು ಬಿಟ್ಟೆ. ಇದರಿಂದ ಅದೆಷ್ಟು ಜನರ ಮನಸ್ಸಿಗೆ ನಿರಾಳ ತಂದೆನೊ ಕಾಣೆ.

ಪಿಯೂ ಮುಗಿಯಿತು. ಪದವಿ ತರಗತಿಗೆ ಪಾದಾರ್ಪಣೆ ಮಾಡಿದೆ. ಹಾಡಿನ ಬಗ್ಗೆ ಆಸಕ್ತಿ ಕಡಿಮೆ ಆಗಿರಲಿಲ್ಲ. ಮನೆಯಲ್ಲಿ ಬೇರೆ ನನ್ನ ಅಣ್ಣತಮ್ಮಂದಿರು ನಮ್ಮ ಮನೆಯ ಕೋಗಿಲೆ ಉಲಿಯುತ್ತಾ ಇಲ್ಲವಲ್ಲ ಅಂತ ಕಿಚಾಯಿಸುತ್ತಾ ಇದ್ದರು. ಹಾಡಲು ಮಾತ್ರ ಮನಸ್ಸು ಬರುತ್ತಿರಲಿಲ್ಲ. ಹಾಡುವ ಆಸೆಯನ್ನೂ ಹತ್ತಿಕ್ಕಿಕೊಳ್ಳಲು ಆಗುತ್ತಿರಲಿಲ್ಲ. ನಮ್ಮ ಅಮ್ಮನ ಮೇಲೆ ಅಪರೂಪಕ್ಕೆ ಅಪ್ಪನ ಮೇಲೂ ಕೋಪ ಉಕ್ಕೇರಿ ಬರುತ್ತಿತ್ತು. ನನ್ನನ್ನ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತಕ್ಕೆ ಕಳಿಸಿದ್ದರೆ ಇಷ್ಟು ಹೊತ್ತಿಗೆ ನಾನು ಎಸ್.ಜಾನಕಿಯಂತೆ ಹಾಡಲು ಕಲಿತಿರುತ್ತಿದ್ದೆ. ಇಂತಹ ಮಹಾನ್ ಗಾಯಕಿಯಾಗುವ ಅವಕಾಶವನ್ನು ತಪ್ಪಿಸಿ ಬಿಟ್ಟ ಹೆತ್ತವರ ಮೇಲೆ ಕೋಪಾ ತಾಪ ಏನೇ ಇದ್ದರೂ ಪ್ರಯೋಜನಕ್ಕೆ ಬರದು ಎಂದು ಸುಮ್ಮನಾಗುತ್ತಿದ್ದೆ. ಆದರೂ ಮನಸ್ಸಿನ ಹಾಡುವ ಆಸೆಯನ್ನು ಹೇಗೆ ದೂರ ಮಾಡುವುದೆಂದು ತಿಳಿಯದೆ ಒದ್ದಾಡುತ್ತಿದ್ದೆ. ಕೊನೆಗೊಂದು ತೀರ್ಮಾನಕ್ಕೆಬಂದು ಬಿಟ್ಟೆ. ಅಪ್ಪ ಅಮ್ಮನಿಗೆ ಗೊತ್ತಾಗದ ಹಾಗೆ ಸಂಗೀತ ಕಲಿತು ಎಮ್.ಎಸ್.ಸುಬ್ಬಲಕ್ಷ್ಮಿಯಂತಾದ ಮೇಲೆ ಮನೆಯಲ್ಲಿ ಹೇಳುವುದೆಂದು ತೀರ್ಮಾನಿಸಿಕೊಂಡು ಒಬ್ಬ ಸಂಗೀತ ಮೇಡಂನ್ನು ಹುಡುಕಿದೆ. ಸಂಗೀತ ಮೇಡಂ ಕೂಡಾ ಸಿಕ್ಕಿದರು. ವಾರಕ್ಕೆರಡು ದಿನ ಮನೆಯವರಿಗೆ ಗೊತ್ತಿಲ್ಲದಂತೆ ಸಂಗೀತ ಪಾಠಕ್ಕೆ ಹೋಗುವುದು ಕಷ್ಟವೇನಾಗಲಿಲ್ಲ. ಗಂಡು ಮಕ್ಕಳಿಗೆ ಒಂದು ಬಿಡಿಗಾಸನ್ನು ಕೊಡದ ಅಪ್ಪಾ , ನಾನು ಕೇಳಿದಾಗಲೆಲ್ಲ ಪಾಕೆಟ್ ಮನಿ ಕೊಡುತ್ತಿದ್ದರು. ಹಾಗಾಗಿ ಫೀಸಿಗೇನು ತೊಂದರೆ ಆಗಲಿಲ್ಲ. ಸುಮಾರು ಒಂದು ವರ್ಷ ಸಂಗೀತಕ್ಕೆ ಸ್ಪೇಷಲ್ ಕ್ಲಾಸ್ ಅಂತ ಸುಳ್ಳು ಹೇಳಿ ಹೋಗಿದ್ದೆ ಹೋಗಿದ್ದು, ಸ..ರಿ..ಗ..ಮ.. ಅಂತ ಸರಳೆ, ಜಂಟಿ ಸರಳೆ, ಗೀತೆಗಳು ಅಂತ ಕಲಿತೆ. ಅದರೆ ಒಂದು ದಿನವೂ ಮೇಡಂ ಜೊತೆ ಬಿಟ್ಟು ಹಾಡಲೆ ಇಲ್ಲ. ಒಬ್ಬಳೆ ಹಾಡಲು ನನಗೆ ಆಗ್ತನೇ ಇಲ್ಲ.ಮುಂದೆ ಮುಂದೆ ಸಂಗಿತ ಕಲಿಯೋದು ಕಷ್ಟ ಅಂತ ಅನ್ನಿಸೋಕೆ ಶುರುವಾಯ್ತು. ಎಮ್.ಎಸ್. ಸುಬ್ಬಲಕ್ಷ್ಮಿ ಆಗೋ ಕನಸು ಈಡೇರೊ ಹಾಗೆ ಕಾಣದೆ,ನಮ್ಮ ಅಮ್ಮ ಅಪ್ಪ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಸಂಗೀತ ಕಲಿಸ ಬೇಕಿತ್ತು. ಹಾಗೆ ಮಾಡದೆ ನಾನು ದೊಡ್ಡ ಗಾಯಕಿಯಗುವ ಅವಕಾಶವನ್ನು ತಪ್ಪಿಸಿ ಬಿಟ್ಟರು ಅಂತ ಕೊರಗುತ್ತಾ, ಇತ್ತಾ ಸಂಗೀತ ಕಲಿಯಲು ನನ್ನಿಂದಾಗದೆ ಕೊನೆಗೆ ಸಂಗೀತಕ್ಕೆ ಹೋಗುವುದನ್ನೇ ಬಿಟ್ಟು ಬಿಟ್ಟೆ. ಅಲ್ಲಿಗೆ ಸಂಗೀತ ಕಲಿಯುವ ಪ್ರಹಸನ ಮುಗಿದು ಹೋಯಿತು. ಮುಂದೆ ಎಂದೂ ಯಾರ ಮುಂದೂ ಹಾಡು ಹಾಡಲು ಹೋಗಲಿಲ್ಲ. ಆದರೆ ಗುನುಗುವುದನ್ನು ಇನ್ನೂ ಬಿಟ್ಟಿಲ್ಲ. ಇಷ್ಟವಾದ ಹಾಡನ್ನು ಕೇಳುತ್ತಾ ನನ್ನ ಪಾಡಿಗೆ ನಾನು ಯಾರೂ ಇಲ್ಲದಿದ್ದಾಗ ಹಾಡಿಕೊಳ್ಳುತ್ತೆನೆ. ಸಂತೋಷ ಪಟ್ಟುಕೊಳ್ಳುತ್ತೆನೆ.


  • ಎನ್ ಶೈಲಜಾ ಹಾಸನ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading