‘ನನ್ನ ಜನ್ಮ ರಹಸ್ಯ’ ಸಣ್ಣಕತೆ

ಒಂದು ಗಂಡು ಮಗುವಾದರೆ ಸಾಕು ಆಪರೇಷನ್ ಮಾಡಿಸಿಬಿಡೋಣ ಎಂದು ಪ್ರತೀ ಪ್ರಸವದ ಸಮಯದಲ್ಲೂ ನಿಶ್ಚಯಿಸಿಕೊಳ್ಳುತ್ತಿದ್ದವನಿಗೆ ಬರೀ ನಿರಾಸೆಯೇ ಕಾದಿತ್ತು. ಐದನೇ ಮಗುವಾದರೂ ಗಂಡಾಗಲಿ ಎಂದು ಅವನು ಬಯಸಿದ್ದ. ಮುಂದೇನಾಯಿತು ತಪ್ಪದೆ ಓದಿ…

ಅಂದು ಶುಕ್ರವಾರ, ಭೀಮನ ಅಮಾವಾಸ್ಯೆಯ ದಿನ. ನಾಲ್ಕು ಹೆಣ್ಣುಮಕ್ಕಳ ತಂದೆ ಬಹಳ ಚಿಂತಾಕ್ರಾಂತನಾಗಿ ಅತ್ತಿಂದಿತ್ತ ಓಡಾಡುತ್ತಾ, ತನ್ನ ಮಡದಿಯ ಈ ಸಲದ ಪ್ರಸವವಾದರೂ ಗಂಡು ಮಗು ಜನಿಸಿತೆಂಬ ಸಿಹಿ ಸುದ್ದಿಯನ್ನೂ, ಹಿರಿಮೆಯನ್ನೂ ತನಗೆ ತಂದುಕೊಡುವುದೆಂಬ ತನ್ನ ಎಂದಿನ ನಿರೀಕ್ಷೆಯಂತೆ ಉಸಿರು ಬಿಗಿಹಿಡಿದವನಾಗಿ ಕಂಗಾಲಾಗಿದ್ದ.

ಈ ತರದ ಸನ್ನಿವೇಶ ಆತನಿಗೆ ಇದೇ ಮೊದಲೇನಲ್ಲ ಬಿಡಿ. ಮೊದಲ ಹೆಣ್ಣು ಮಗು ಜನಿಸಿದಾಗಲೇ ತನ್ನ ಮುಂದಿನ ವಂಶಾಭಿವೃದ್ಧಿಯ ಬಗ್ಗೆ ದೂರಾಲೋಚನೆಯುಳ್ಳವನಾಗಿ ಎರಡನೇದು ಗಂಡು ಮಗುವಾಗಲೇಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದ್ದ. ಆದರೆ ಎರಡನೇದು ಸಹ ಹೆಣ್ಣು ಮಗುವಾಯಿತು. ವಿಧಿಯಿಲ್ಲದೆ ಮೌನವಾಗಿ ಅದನ್ನ ಸ್ವೀಕರಿಸಬೇಕಾಯಿತು.
ಯಾಕಂದರೆ ಈಗಿನ ಕಾಲದ ತರ “ಒಂದು ಸಾಕು, ಎರಡು ಬೇಕು” ಎಂದು ಎರಡೇ ಮಕ್ಕಳಿಗೆ ತೃಪ್ತಿಪಟ್ಟುಕೊಳ್ಳುವ ಮನಸ್ಥಿತಿಯಾಗಲೀ, ಅರಿವಾಗಲೀ, ಪರಿಸ್ಥಿತಿಯಾಗಲೀ ಆಗಿನ ಕಾಲದ ಜನರಿಗೆ ಇರಲಿಲ್ಲ. ವೈದ್ಯಕೀಯ ಕ್ಷೇತ್ರ ಇನ್ನೂ ಅಂಬೆಗಾಲಿಡುವ ಮಗುವಿನಂತೆ ಇತ್ತು. ಯಾವುದಾದರೂ ರೋಗ ಊರನ್ನು ಪ್ರವೇಶಿಸಿದರೆ ಒಮ್ಮಿಂದೊಮ್ಮೆಲೇ ಇಡೀ ಊರನ್ನೇ ಸ್ಮಶಾನವಾಗಿ ಮಾರ್ಪಡಿಸುತ್ತಿತ್ತು.

ಇದರಿಂದಲೇ ಜನರು ಬೇಸತ್ತು ಎಂಟೋ-ಹತ್ತೋ ಮಕ್ಕಳನ್ನ ಹೆತ್ತು, ರೋಗಕ್ಕೆ ತುತ್ತಾಗದೇ ಬದುಕುಳಿದ ಮಕ್ಕಳನ್ನ ತಮ್ಮ ವಂಶಾಭಿವೃದ್ಧಿಯ ಚಿಗುರುಗಳೆಂದು ಸಮಾಧಾನ ಮಾಡಿಕೊಳ್ಳುತ್ತಿದ್ದರು. ಆದರೆ ಈತನದ್ದು ಆ ತರದ ಮನಸ್ಥಿತಿಯಾಗಿರದೆ, ತನ್ನ ವಂಶ ಬೆಳೆಸುವುದಕ್ಕೆ ಒಂದು ಗಂಡು ಕುಡಿ ಬೇಕೆಂದು ಹಂಬಲಿಸುವವನಾಗಿದ್ದನು. ಆದರೆ ಆತನ ಹಣೆಬರಹವೋ, ವಿಧಿಯ ಕೈವಾಡವೋ ಅಥವಾ ವಂಶ ಪಾರಂಪರ್ಯದ ಬಳುವಳಿಯೋ, ಒಟ್ಟೊಟ್ಟಿಗೆ ಮೂರನೇದು, ಹಾಗೇ ನಾಲ್ಕನೇದು ಸಹ ಹೆಣ್ಣು ಮಗುವಾಯಿತು. ಈಗ ಒಟ್ಟಿಗೆ ನಾಲ್ಕು ಹೆಣ್ಣು ಮಕ್ಕಳು.

ಒಂದು ಗಂಡು ಮಗುವಾದರೆ ಸಾಕು ಆಪರೇಷನ್ ಮಾಡಿಸಿಬಿಡೋಣ ಎಂದು ಪ್ರತೀ ಪ್ರಸವದ ಸಮಯದಲ್ಲೂ ನಿಶ್ಚಯಿಸಿಕೊಳ್ಳುತ್ತಿದ್ದವನಿಗೆ ಬರೀ ನಿರಾಸೆಯೇ ಕಾದಿತ್ತು. ಆದರೂ ಆತನ ಆತ್ಮವಿಶ್ವಾಸ ಕುಗ್ಗಲಿಲ್ಲ, ಐದನೇದಾದ್ರು ಗಂಡು ಮಗು ಆಗ್ಲಿ, ಇಲ್ಲ ಅಂದ್ರೆ ಇಷ್ಟಕ್ಕೆ ಸಾಕು. ಎಲ್ಲಾ ದೇವರುಗಳನ್ನೂ ಬೇಡಿಕೊಂಡಿದ್ದು ಆಯ್ತು. ಈ ಸಾರಿ ಗಂಡು ಮಗು ಆದ್ರೆ ತಮಿಳುನಾಡಿನ ಗಡಿಯಲ್ಲಿರುವ ಕೊಂಗಳ್ಳಿ ಮಾದಪ್ಪನ ದೇವಸ್ಥಾನದಲ್ಲಿ ಆ ಮಗುವಿಗೆ ಹೆಸರು ಕರಿಸೋಣ, ಕಜ್ಜಾಯ-ತುಪ್ಪದ ಊಟ ಹಾಕಿಸೋಣ ಎಂದು ದೇವರಿಗೆ ಹರಸಿಕೊಂಡು ಐದನೆಯ ಮಗು ಗಂಡು ಮಗುವಾಗುವುದೆಂಬ ನಿರೀಕ್ಷೆಯಲ್ಲಿ ಬಾಗಿಲ ಬಳಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ.

ಇನ್ನು ಆಕೆಯ ಬಗ್ಗೆ ಹೇಳುವುದಾದರೆ, ಅವಳೂ ಎಲ್ಲಾ ಹೆಂಗಸರಂತೆ ಮನೆಯ ಯಜಮಾನ ಹಾಕಿದ ಗೆರೆ ದಾಟುವಂತಿರಲಿಲ್ಲ. ಇದು ಆಗಿನ ಕಾಲದ ಎಲ್ಲಾ ಹೆಂಗಸರ ಕಟ್ಟುಪಾಡು. ಅವರ ಜೀವನವೆಲ್ಲ ಮಕ್ಕಳನ್ನ ಹೆರುವುದರಲ್ಲಿಯೂ, ಅವುಗಳನ್ನ ಸಾಕುವುದರಲ್ಲಿಯೂ, ಗಂಡ-ಮಕ್ಕಳಿಗೆ ಸೇವೆ ಮಾಡುವುದರಲ್ಲಿಯೂ, ಹೊಲದ ಮತ್ತು ಮನೆಯ ಕೆಲಸಗಳಲ್ಲೇ ಮುಗಿದು ಹೋಗುತ್ತಿತ್ತು.

ಈಗಿನ ಕಾಲದ ಹೆಣ್ಣಿನ ತರ ಮದುವೆಯಾದರೂ ಮಗು ಬೇಡ ಎನ್ನುವ ಸ್ವಾತಂತ್ರ್ಯವಾಗಲೀ, ಗಂಡ ಎಷ್ಟೇ ಹಿಂಸೆಕೊಟ್ಟರೂ ಡಿವೋರ್ಸ್ ಕೊಡುವ ಧೈರ್ಯವಾಗಲೀ ಆಗಿನ ಕಾಲದ ಹೆಣ್ಣುಮಕ್ಕಳಿಗೆ ಇರಲಿಲ್ಲ. ಗಾಣಕ್ಕೆ ಕಟ್ಟಿದ ಎತ್ತಿನ ಹಾಗೆ ಆಗಿನ ಕಾಲದ ಹಾಗೂ ಈಗಲೂ ಸಹ ಕೆಲವು ಹೆಣ್ಣುಮಕ್ಕಳ ಜೀವನ. ಆಕೆ ಗಂಡನ ಜೊತೆ ಹಗಲು-ರಾತ್ರಿ ಎನ್ನದೆ ಕಾಡಿಗೆ ಹೋಗಿ ಸೌದೆ ತಂದು ಊರುಗಳಲ್ಲಿ ಮಾರಿ, ಕಲ್ಲು ಮಣ್ಣು ಹೊತ್ತು ಮನೆ ಕಟ್ಟಿ ತಮ್ಮ ಮಕ್ಕಳಿಗಾಗಿ ಶ್ರಮೆಪಟ್ಟವರು. ಆಕೆಗೂ ಆ ಪ್ರಸವ ವೇದನೆಗಿಂತ ಈಗಲಾದರೂ ತನ್ನ ಹೊಟ್ಟೆಯಲ್ಲಿ ಗಂಡು ಮಗು ಜನಿಸುವುದೆಂಬ ಕಟ್ಟಕಡೆಯ ನಿರೀಕ್ಷೆಯೇ ಹೆಚ್ಚಾಗಿತ್ತು.

ನಿರೀಕ್ಷೆ ಹುಸಿಯಾದೀತೆಂಬ ಭಯ ಇಬ್ಬರಲ್ಲೂ ಆವರಿಸಿತ್ತು. ಮುಂಜಾನೆ ಸರಿಸುಮಾರು 6:45 ರಿಂದ 7 ಗಂಟೆಯ ಸಮಯದಲ್ಲಿ, “ಓ… ನಿಂಗೆ ಗಂಡ್ಮಗು ಆಗಿದೆ ಕಣಯ್ಯಾ” ಎಂದು ಸೂಲಗಿತ್ತಿ ನಗುತ್ತಾ ಆತನಿಗೆ ಬಂದು ಹೇಳಿದ ತಕ್ಷಣ ಆತನಲ್ಲಿ ಎಲ್ಲಿಲ್ಲದ ಸಂತೋಷ ಸಂಭ್ರಮ. ಗಂಡು ಮಗು ಎಂದು ಮೊದಲೇ ಅಮ್ಮನಿಗೆ ಗೊತ್ತಾದಾಗ ಆ ಪ್ರಸವ ವೇದನೆಯನ್ನೆಲ್ಲಾ ಮರೆತು ಆಕೆಯ ಮುಖದಲ್ಲಿ ‘ಮುಗುಳ್ನಗು’ ಮೂಡಿತ್ತು.

ಹೀಗೆ ನಿರೀಕ್ಷೆಯೇ ಇಲ್ಲದಂತಾಗಿ ಆತ್ಮವಿಶ್ವಾಸದ ಕೊನೆಯ ಮಟ್ಟವನ್ನ ತಲುಪಿದವರಿಗೆ ಸುಧಾರಿಸಿಕೊಳ್ಳುವಂತ, ಅಷ್ಟು ವರ್ಷಗಳ ತಾಳ್ಮೆ, ನಿರೀಕ್ಷೆ, ನಿರಾಸೆ ಎಲ್ಲವಂತ ಮರೆಸುವಂತ ಸಂತೋಷ ನನ್ನ ಅಪ್ಪ-ಅಮ್ಮನ ಮುಖದಲ್ಲಿ ಮನಸ್ಸಿನಲ್ಲಿ ಬೇರೂರಿದ ಈ ದಿನ ನನ್ನ ಜನ್ಮದಿನ.

ಬಹುಶಃ ಮೊದಲನೆಯದೋ ಅಥವಾ ಎರಡನೆಯದೋ ಗಂಡು ಮಗುವಾಗಿದ್ದರೆ ನನ್ನ ಅಸ್ತಿತ್ವವೇ ಇರ್ತಾ ಇರ್ಲಿಲ್ಲ ಅನ್ಸುತ್ತೆ. ನನಗೋಸ್ಕರ ಆ ನನ್ನ ನಾಲ್ಕು ಅಕ್ಕಂದಿರ ಜನನವಾಯಿತೋ ಅಥವಾ ಆ ನಾಲ್ಕು ಅಕ್ಕಂದಿರು ಹೆಣ್ಣಾಗಿ ಹುಟ್ಟಿದ್ದರಿಂದ ನಾನು ಈ ಭೂಮಿಗೆ ಬರಲು ಮಾರ್ಗವಾಯಿತೋ ಅರ್ಥ ಮಾಡಿಕೊಳ್ಳೋದು ಕಷ್ಟದ ಕೆಲಸ. ಹೇಗೋ ಹೂವಿನ ಜೊತೆ ನಾರು ಕೂಡ ಸ್ವರ್ಗ ಸೇರಿದ ಹಾಗಾಯಿತು ಈ ನನ್ನ ಜನ್ಮ ರಹಸ್ಯ.

ಈ ನನ್ನ ಹುಟ್ಟಿಗೆ ಕಾರಣರಾದ ನನ್ನ ತಂದೆ-ತಾಯಿಗೂ, ನನ್ನ ಅಸ್ತಿತ್ವಕ್ಕೆ ಕಾರಣರಾದ ನನ್ನ ಆ ನಾಲ್ಕು ಅಕ್ಕಂದಿರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು


  • ಅನಾಮಿಕ ಅನಾಮಿಕ
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW