‘ನನ್ನವ್ವನ ಬಯೋಗ್ರಫಿ’ ಪುಸ್ತಕ ಪರಿಚಯ

ಪುಸ್ತಕದ ಶೀರ್ಷಿಕೆ ಸೂಚ್ಯಂಕವಾದರೂ ಇವರ ನಿರೂಪಣೆಯಲ್ಲಿ ಇಂತಹ ಸೂಕ್ಷ್ಮತೆ ಮತ್ತು ತೀವ್ರತೆಯಿರುವುದೆಂಬ ಊಹೆಯೇ ನನಗಿರಲಿಲ್ಲ. ಸಹಜವಾಗಿ ಹೇಳಿಕೊಳ್ಳುತ್ತಾ ಬರೆದುಕೊಳ್ಳುತ್ತಾ ಹೋದಂತೆನಿಸಿದ ಕೃತಿ ಪ್ರಾಮಾಣಿಕತೆಯಿಂದ ನೈಜತೆಯಿಂದ ಬಹುವಾಗಿ ತಾಕಿಬಿಡುತ್ತದೆ. ಜಯ ರಾಮಾಚಾರಿ ಅವರ ‘ನನ್ನವ್ವನ ಬಯೋಗ್ರಫಿ’ ಪುಸ್ತಕ ಕುರಿತು ಬಿ ವಸು ಭಾಗ್ಯ ಬರೆದಿರುವ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ನನ್ನವ್ವನ ಬಯೋಗ್ರಫಿ
ಕೃತಿಕಾರರು : ಜಯ ರಾಮಾಚಾರಿ
ಪ್ರಕಾಶಕರು : ಬಹುರೂಪಿ
ಪುಟಗಳು : ೬೮
ಬೆಲೆ : ೧೦೦.00

ಅವಳೆಂದರೆ ಹಾಗೆ ಬಿಡಿ. ತುಂಬುಸಂಸಾರದ ಕಣ್ಣೀರಿಗೂ, ಎದೆಯುರಿಗೂ ನಗುವನ್ನೇ ಹಾಸುತ್ತಿದ್ದವಳು. ಭಾರದ ಮೂಟೆಗಳನ್ನು ಎಲ್ಲೂ ಇಳಿಸದೆ, ತಾನೇ ಹೊತ್ತವಳು. ಲೆಕ್ಕಕ್ಕಿಡುವಷ್ಟು ಜಾಣ್ಮೆಯೂ ಇಲ್ಲದವಳು. ಸ್ವಾರ್ಥಿಯಾಗಿದ್ದರೆ ಸ್ವತಂತ್ರಳಾಗುತ್ತಿದ್ದಳು, ಸಂತಸಗಳನ್ನೂ ಕಾಣುತ್ತಿದ್ದಳು. ಅವಳು ಸ್ವಾಭಿಮಾನಿ ಅಷ್ಟೇ. ಯಾವ ಸಂದರ್ಭಗಳಲ್ಲೂ ಅವಳ ಕಣ್ಣ ಹಣತೆ ಧೃತಿಗೆಡಲಿಲ್ಲ ನೋಡಿ. ಆ ಎದೆಗೆ ಎಂತ ಛಾತಿ?!.

ಗಂಡ ಬೇಜವಬ್ದಾರಿ, ಊರೂರು ಅಲೆವ ಅಲೆಮಾರಿ. ಅವ್ವ ಮನೆ ಮಕ್ಕಳ ಜವಬ್ದಾರಿ ಹೊತ್ತಳು. ಕಣ್ಣಿಗೆ ಕಸಬಿದ್ದರೂ, ಕತ್ತಲು ಬಿದ್ದರೂ ಒಂದೇ ಅವಳಿಗೆ. ಬೆಳಕು ಹರಿದರೂ, ಬೆರಗು ಮೂಡಿದರೂ ಒಂದೇ ಅವಳಿಗೆ. ಅದೆಲ್ಲವನ್ನೂ ಸಂಭಾಳಿಸುವ ಧೈರ್ಯವನ್ನು, ಅವಳು ಕಂಡುಕೊಂಡ ಬದುಕಿನ ಅರ್ಥವನ್ನು ಅವಳಿಂದಲೇ ಕಲಿಯಬೇಕು ನಾವು.

ನಿರ್ದೋಷಿಯವಳೇ ದೂಷಿತಳಾಗುತ್ತಾಳೆ. ನಿರ್ಗತಿಕ ಸ್ಥಿತಿಯಲ್ಲೂ ಮಕ್ಕಳಿಗಾಗಿ ಹರಸಾಹಸ ಮಾಡುವ ಅವಳ ಬಂಡತನ. ಒತ್ತಾಸೆಯಾಗದ ಗಂಡ, ಎಷ್ಟೇ ನೋವು ಕೊಟ್ಟರೂ ಅವನು ಹೋದನಂತರವೂ ಅವನಿಗಾಗಿ ಮಿಡಿಯುವ ಅವಳೆದೆ ಎಂತಹ ಚೆಂದದ್ದು. ಮಗ ಊರು ಬಿಟ್ಟನಂತರ ತಾವೂ ಬೆಂಗಳೂರೆಂಬ ಮಹಾನಗರಕ್ಕೆ ಬಂದು ಬದುಕುಕಟ್ಟಿಕೊಳ್ಳಲು ಹವಣಿಸುವ ಛಲಗಾತಿ. ಏಳನ್ನು ಹೆತ್ತ ಅವ್ವ ಎಂದೂ ಸೋರಿಹೋಗಲಿಲ್ಲ. ಸೋಮಾರಿಯಾಗಲಿಲ್ಲ, ಧೈರ್ಯಗೆಡಲಿಲ್ಲ, ಖಾಯಿಲೆಗೆ ಬಿದ್ದವಳಲ್ಲ. ಅಣ್ಣಾವ್ರನ್ನ ದೇವರೆಂದೆ ನಂಬಿದ್ದವಳು. ಓದು ಬರಹದ ಜ್ಞಾನವಿಲ್ಲದವಳು ಬೆಳಗಿಸಿದ್ದು ಬದುಕನ್ನು.

ಜಯರಾಮಾಚಾರಿ ಯವರು ಈ ಅವ್ವನ ಕಡೆಯ ಮಗ. ಅವ್ವನ ಬಗೆಗೆ ಏನೆಲ್ಲಾ ಹೇಳಿದ್ದಾರೆ, ಹೇಳಿಲ್ಲ! ಎನ್ನುವುದನ್ನು ನಾನಿಲ್ಲಿ ಬಿಡಿಸಲಾರೆ. ನೀವೇ ಓದಬೇಕು. ಇದು ಅವರವ್ವನ ಬರಹವಷ್ಟೇ ಅಲ್ಲ. ಕುಳಿತು ಓದುವ ನಮ್ಮ ತಾಯಿಯ ಬಗೆಯೂ ಇರಬಹುದು. ನಾವೆಷ್ಟು ಅಸಮರ್ಥರು ಅವಳೆಡೆಗೆ, ಅವಳು ಮಾತ್ರ ಸದಾ ನಮಗಾಗೆ ನುಡಿವ ಮಿಡಿವ ನಾಡಿ.

ಇದನ್ನು ಓದುತ್ತಾ ನನ್ನಮ್ಮನ ನೆನಪು ಬಹಳವೇ ಕಾಡಿತು. ನಡುವೆ ಒಂದು ಗುಟುಕನ್ನೂ(ಓದಿನ) ಹೀರಲಾಗದೆ ಗಂಟಲು ಒಣಗಿ, ದೇಹವಿಡೀ ನಡುಗಿಬಿಟ್ಟಿತು. ಒಂದುಬಗೆಯ ಸಂಕಟ, ಹಿಂಸೆ, ಅಸಹನೆ ತೊನೆಯುತ್ತಿದ್ದಂತೆ ಅಮ್ಮನಿಗೆ ಕರೆ ಮಾಡಲೇಬೇಕೆನಿಸಿತು. ಪುಸ್ತಕದ ಹಾಳೆ ತಿರುವಿದ ಹಾಗೆಯೇ ಇಟ್ಟು ಕರೆಮಾಡಿ ಮಾತಾಡಿದೆ. ಕೆಲವು ನಿಮಿಷಗಳ ನಿರಾಳತೆಯ ನಂತರವೇ ಮತ್ತೆ ಓದಲು ಆರಂಭಿಸಿದ್ದು.

ಹೀಗೆ ಇವರು ಭಾವತೀವ್ರತೆಯಲ್ಲಿ ಬಳಲಿಸಿ ಬಿಡುತ್ತಾರೆನ್ನುವ ಯೋಚನೆ ಕಿಂಚಿತ್ತೂ ಇರಲಿಲ್ಲ. ಪುಸ್ತಕದ ಶೀರ್ಷಿಕೆ ಸೂಚ್ಯಂಕವಾದರೂ ಇವರ ನಿರೂಪಣೆಯಲ್ಲಿ ಇಂತಹ ಸೂಕ್ಷ್ಮತೆ ಮತ್ತು ತೀವ್ರತೆಯಿರುವುದೆಂಬ ಊಹೆಯೇ ನನಗಿರಲಿಲ್ಲ. ಸಹಜವಾಗಿ ಹೇಳಿಕೊಳ್ಳುತ್ತಾ ಬರೆದುಕೊಳ್ಳುತ್ತಾ ಹೋದಂತೆನಿಸಿದ ಕೃತಿ ಪ್ರಾಮಾಣಿಕತೆಯಿಂದ ನೈಜತೆಯಿಂದ ಬಹುವಾಗಿ ತಾಕಿಬಿಡುತ್ತದೆ. ಇಂತಹದೊಂದು ಓದು ಬೇಕಿತ್ತು ಎನ್ನುವ ಆರ್ದ್ರತೆ ನಮ್ಮನ್ನೂ ಆವರಿಸಿಕೊಂಡುಬಿಡುತ್ತದೆ.

ಅವ್ವನೊಟ್ಟಿಗಿನ ಕಡೆಯ ಕಾಲದ ನೆನಪುಗಳನ್ನು ಬಿಡಿಸಿ ಓದುವುದು ನಿಜಕ್ಕೂ ಕಷ್ಟವಾಗುತ್ತದೆ. ಕೆಲವು ಸಾಲುಗಳಂತೂ ಬಹುತೇಕ ಕೊಂದುಬಿಟ್ಟವು. ಎಲ್ಲಿಯೇ ಹೋಗಿಬಂದರೂ “ಅಪ್ಪಂದ್ರು ಎಲ್ಲಿ ಹೋಗಿದ್ದೆ ಅಂತಾರೆ, ಅಮ್ಮಂದ್ರು ಏನ್ ತಿಂದೆ ಅಂತಾರೆ. ಅಪ್ಪ ಅಲೆಮಾರಿ, ಅಮ್ಮ ಸಂಸಾರಿ” ಎನ್ನುವ ಇಂತಹ ಹಲವು ಸಾಲುಗಳು ನನ್ನ, ನಿಮ್ಮ ಅಮ್ಮನನ್ನು ನೆನಪಿಸದೆ ಇರುವುದಿಲ್ಲ. ಬಹುತೇಕ ತಾಯಂದಿರು ಹೀಗೆಯೆ ತನಗಾಗಿ ಎಂದು ಇರದ ಜೀವಗಳು.

ಮಾರಣಾಂತಿಕ ರೋಗಕ್ಕೆ ತುತ್ತಾಗುವ ಅವ್ವನ ಆ ದಿನಗಳೊಟ್ಟಿಗೆ ಲೇಖಕರು ಸೆಣಸಾಡುವ ರೀತಿ ನಮ್ಮನ್ನು ಕಣ್ಣೀರ ಸಾಗರಕ್ಕೆ ದಸಕ್ಕೆಂದು ಎಳೆದುಕೊಂಡುಬಿಡುತ್ತದೆ. ನೋವಿನಲೆಗಳ ಹೊಡೆತ ತಾಳಲಾರದೆ ಉಸಿರುಗಟ್ಟುತ್ತದೆ. ಒಂದುಕ್ಷಣ “ನನ್ನಮ್ಮ” ಎನ್ನುವ ಗತವೊ, ಭವಿಷ್ಯವೋ ಕಣ್ಣಪರದೆಯಲಿ ಮೂಡಿ ಇನ್ನಷ್ಟು ವಿಚಲಿತರಾಗುತ್ತೇವೆ. ಇದನ್ನೂ ಮೀರಿ ಕೂತು ಓದಿ, ಕಡೆಗೆ ಬಂದು ದಡಕ್ಕೆ ಬಿದ್ದರೆ, ಒಂದು ನಿಟ್ಟುಸಿರ ಮೇಲೆ ಕೂತ ಜೀವ ಹೊಯ್ದಾಡುವ ಸ್ಥಿತಿ, ಒಸರಿಹೋಗುತ್ತಿರುವ ಸಂಗತಿ ಮತ್ತೆ ಕಣ್ಣೆದುರು ಪ್ರತ್ಯಕ್ಷವಾಗಿ ತಟಸ್ಥವಾಗಿಸುತ್ತದೆ ನಮ್ಮನು. ಕೆಲಕಾಲ ಇದು ಹಾಗೆಯೇ ಉಳಿಯುವ ಸಂಕಟ.

ಸಾವು ಮೊದಲು ಮೌನವನ್ನು ಹುಟ್ಟುಹಾಕುತ್ತದೆ, ಆನಂತರ ನೋವು, ನೋವು ಅಳುವನ್ನು ಎಳೆದುತರುತ್ತದೆ. ಅಳು ರೋದನೆಯಾಗಿ, ವೇದನೆಯಾಗಿ ಹಬ್ಬುತ್ತದೆ, ಹಾಗೆಯೇ ಉಳಿದೂಬಿಡುತ್ತದೆ ಎನ್ನುವ ಲೇಖಕರ ಮಾತಿನಂತೆ ಇಡೀ ಪುಸ್ತಕದ ಓದೂ ಸಹ. ಕಾಲಕ್ರಮಿಸಿದಂತೆ ನೋವು ಮಾಸಬಹುದು. ನೆನಪೂ..? ಮತ್ತು ಅವಳಿಲ್ಲದ ಬದುಕು ಅಪೂರ್ಣತೆಯನ್ನೇ ಹಾಸಿಹೊದ್ದುಕೊಂಡದ್ದೆನ್ನುವ ಲೇಖಕರ ನುಡಿ ಸತ್ಯಯುತವಾದುದು.

ಒಂದು ಸಮಾಧಾನವೆಂದರೆ ಗತದಿಂದಲೇ ಆರಂಭಿಸಿ ವರ್ತಮಾನವನ್ನು (ಎಲ್ಲವೂ ಮುಗಿದುಹೋಗಿ ಬರೆದ ಕೃತಿಯಾಗಿದ್ದರೂ ಸಹ ಇಲ್ಲಿ ಕತೆ ಸಾಗುವ ರೀತಿಗೆ ಆರಂಭ ಮತ್ತು ಕೊನೆಯ ನಡುವೆ ಎರಡನ್ನೂ ಕಲಸೋಗರ ಮಾಡಿ ಬರೆದಿರುವ ಬಗೆ ಅಂತ ಭಾವಿಸಬಹುದೆ?) ಮುಟ್ಟದೇ..

ನಡುನಡುವೆ ವರ್ತಮಾನ ಮತ್ತು ಭೂತವನ್ನೂ ಹೊಂದಿಸಿಟ್ಟು, ನಡುನಡುವೆ ಆ ನೋವಿನ ಝಳದಿಂದ ಮೇಲೆತ್ತಿ ಉಸಿರಾಡಲು ಬಿಟ್ಟು, ಮತ್ತೆ ಅಲ್ಲಿಗೇ ನೂಕಿ ಮತ್ತೆ ಹೊರ ಎಳೆದು ಮಾಡುವ ಲೇಖಕರ ಚಾಣಾಕ್ಯತನ ಇಷ್ಟವಾಯಿತು… ಇದು ಓದುಗನ ಬದುಕಿಸುವ ತಂತ್ರ(ಕಿಂಚಿತ್ತು ಕಾಲವಾದರೂ ನೋವಿನಿಂದ ಹೊರಸೆಳೆದು ಗಾಢತೆಯನ್ನು ಕ್ಷೀಣಿಸಲು ಬಳಸಿದ ತಂತ್ರ) ಅನಿಸಿತು.

ಬಹಳ ದಿನಗಳ ನಂತರ ಇಂತಹದೊಂದು ಭಾವುಕತೆಗೊಳಗಾದೆ. ಈ ಕತೆಯೊಟ್ಟಿಗೆ ನನ್ನ ಗತವೂ ಎಷ್ಟೊ ಸಾಮ್ಯತೆಗಳನ್ನೊಳಗೊಂಡಿದೆಯಾದ್ದರಿಂದ ಇನ್ನಷ್ಟು ಪ್ರಭಾವ ಬೀರಿತು ಅನ್ನಬಹುದು. ನೀವೂ ಓದಲೇಬೇಕಾದ ಪುಸ್ತಕ… ನಿಮ್ಮ ಕಣ್ಣ ಬೀದಿಯೂ ಹನಿದೇರುಗಳನ್ನು ಎಳೆಯಬಹುದು ನೋಡಿ. ಓದಿ. ಶುಭವಾಗಲಿ ಸರ್, ಹೃತ್ಪೂರ್ವಕ ಧನ್ಯವಾದಗಳು ನಿಮಗೆ

ಮತ್ತೆ ಮತ್ತೆ ಆತುಕೊಳ್ಳಬಹುದಾದ ಜೀವ ಭಾವ ಇದು


  • ಬಿ ವಸು ಭಾಗ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading