‘ನೀ ಬೇಡ ದೂರ ಸರಿ ಎಂದು ತಳ್ಳಿದಷ್ಟು ನನ್ನನ್ನು ಗಟ್ಟಿಯಾಗಿ ತಬ್ಬುತ್ತಾಳೆ’…ಸುಂದರ ಸಾಲುಗಳು ಕವಿ ಗೌತಮ್ ಗೌಡ ಲೇಖನಿಯಲ್ಲಿ, ಮುಂದೆ ಓದಿ…
ಬಿಟ್ಟರೂ ಬಿಡದ
ನನ್ನೊಳಗಿನ ಮಾನಿನಿ
ಸದಾ ನನೊಂದಿಗೆ
ಜೀವಿಸುತ್ತಾಳೆ.
ನೀ ಬೇಡ ದೂರ ಸರಿ
ಎಂದು ತಳ್ಳಿದಷ್ಟು
ನನ್ನನ್ನು ಗಟ್ಟಿಯಾಗಿ
ತಬ್ಬುತ್ತಾಳೆ.
ಹಿತಕರವಾದ ಮಾತು
ಬೊಗಸೆಯಷ್ಟು ಪ್ರೀತಿ
ಚೂರು ಸಿಹಿ
ಚೂರು ಸಂತಸಕಾಗಿ
ಸದಾ ಹಂಬಲಿಸುತ್ತಾಳೆ.
ಯಾರು ಅವಳನ್ನು
ಅರ್ಥ ಮಾಡಿಕೊಳ್ಳದೆ
ಹೋದಾಗ
ಮುಟುರಿಕೊಂಡು ಅಳುತ್ತಾಳೆ.
ಹೂವಾಗಿ ಅರಳಿ
ಹಸಿರಾಗಿ ಕಂಗೊಳಿಸಿ
ತೊರೆಯಾಗಿ ಹರಿಯಲು
ಬಯಸುತ್ತಾಳೆ
ಅವಳು ಅವಳಾಗಲು
ಸದಾ ಕಾಯುತ್ತಿರುತ್ತಾಳೆ.
ಅವಳ ಕೈ ಸೇರದ
ಅವಳಿಚ್ಚೆಯ ಬದುಕು
ಅವಮಾನ, ತಾತ್ಸಾರ
ನಿಂದನೆಗಳಿಂದ
ನೊಂದು ನರಳುತ್ತಾಳೆ.
ಅವಳ ಸುತ್ತಲೂ
ಬೆಳೆದುಕೊಂಡಿರುವ ಬೇಲಿಕಿತ್ತು
ಬಯಲಕ್ಕಿಯಾಗಿ
ಹಾರಲು ಬಯಸುತ್ತಾಳೆ.
ಅದು ಸಾಧ್ಯವಾಗದಿದ್ದಾಗ
ಒಳಗೋಳಗೆ ಮರುಗುತ್ತಾಳೆ.
ಕಣ್ಣೀರ ಕಡಲಲ್ಲಿ ನೆಂದು
ತಿರಸ್ಕಾರದ ಜ್ವಾಲೆಯಲಿ ಬೆಂದು
ಎಲ್ಲ ನೋವುಗಳ ಸಹಿಸಿಯು
ಸಹಿಸಲಾಗದ ಮಾತು ಬಂದಾಗ
ತಿರುಗಿ ನಿಲ್ಲುತ್ತಾಳೆ.
ಗಟ್ಟಿಯಾಗಿ ಕೂಗುತ್ತಾಳೆ
ಯಾರಿಗೂ ಅವಳ ದ್ವನಿ
ಮುಟ್ಟದಿದ್ದಾಗ
ನಿಂತಲ್ಲೇ ಕುಸಿದು ಬೀಳುತ್ತಾಳೆ
ಮತ್ತೊಮ್ಮೆ ಎದ್ದು
ಅವಳ ಇರುವಿಕೆಗಾಗಿ
ಹೋರಾಡುತ್ತಾಳೆ.
ಅದೇ ಅವಳು
ನಾ…ಅವಳು.
- ಗೌತಮ್ ಗೌಡ (ಯುವ ಕವಿ)
