‘ಹೂಲಿ ಗಿಡ’ ನೋಡಿದ್ದೀರಾ? – ಡಾ.ವಡ್ಡಗೆರೆ ನಾಗರಾಜಯ್ಯಸದಾ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ಓದುಗರ ಮುಂದೆ ಬಿಚ್ಚಿಡುವ ಸಂಶೋಧಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಲೇಖನಗಳನ್ನು ಓದುವುದೇ ಒಂದು ಸಂತಸ, ಅವರ ಆಯ್ದ ಲೇಖನಗಳನ್ನು ಓದುಗರ ಮುಂದೆ ತಂದಿಡುತ್ತಿದ್ದೇನೆ, ಮುಂದೆ ಓದಿ…

ಹೂಲಿ ಗಿಡದ ಮೈತುಂಬಾ ಮುತ್ತಿನ ಜೋಳದಂತೆ ಜಿಗಿಹಿಡಿದ ಬಿಳಿ ಹಣ್ಣುಗಳಿರುತ್ತವೆ. ಟೊಂಗೆ ಟೊಂಗೆಗಳಲ್ಲೂ ಎಲೆಗಳಿಗಿಂತ ಬಿಳಿ ಜೋಳದಂಥ ಹಣ್ಣುಗಳೀಂದಲೇ ಫಲ ತೂಗುವ ಹೂಲಿಗಿಡ ವರ್ಷದ ಸದಾ ಕಾಲವೂ ಹೀಗೆ ಹಸಿರೆಲೆ ಮತ್ತು ಹಣ್ಣುಗಳ ಚೆಲುವಿನಿಂದ ರಾಜಿಸುತ್ತಿರುತ್ತದೆ.

ಇವತ್ತು ನನ್ನ ‘ಹೆಂಡತಿ ಎಂಬ ಗೆಳತಿ’ ರಮಾ ಜತೆಗೂಡಿ ನಾನು ನಮ್ಮ ಮನೆಯ ಸಮೀಪದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ವಿಸ್ತಾರವಾದ ಕಾಡಿನಂತಹ ಬಯಲಿನಲ್ಲಿ ವಾಯುವಿಹಾರಕ್ಕೆ ಹೋದಾಗ ಕುರುಚಲು ಪೊದೆಯಾಗಿ ಬೆಳೆದ ಈ ಹೂಲಿಗಿಡ ನಮ್ಮನ್ನು ಸೆಳೆಯಿತು.

ಜ್ಞಾನಭಾರತಿಯಲ್ಲಿ ನವಿಲುಗಳು ಹಿಂಡು ಹಿಂಡಾಗಿ ಓಡಾಡುತ್ತಾ ಬೆಳಗಿನ ಹೊತ್ತು ಕೂಗುವ ಶಬ್ಹ ಹಾಗೂ ಹಕ್ಕಿಪಕ್ಷಿಗಳ ಇಂಚರವನ್ನು ಆಲಿಸುವುದದಿಂದಲೇ ನಿದ್ದೆಯಿಂದ ಎಚ್ಚರಗೊಂಡು ವಾಯುವಿಹಾರಕ್ಕೆ ಹೊರಡುವ ಕೆಲಸದಿಂದ ನನ್ನ ದಿನಚರಿ ಪ್ರಾರಂಭವಾಗುತ್ತದೆ.

ಅನೇಕ ರೀತಿಯ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಗಳಿಂದ ಹಸಿರಾಗಿರುವ ಜ್ಞಾನಭಾರತಿಯಲ್ಲಿ ಹೂಲಿಗಿಡಗಳು ಬೆಳಗಿನ ಬಿಸಿಲಿನಲ್ಲಿ ನಗುತ್ತಿದ್ದವು. ನಿನ್ನೆಮೊನ್ನೆ ಸುರಿದ ಮಳೆಗೆ ಮೈಯೊಡ್ಡಿ ಮೈತೊಳೆದುಕೊಂಡ ಜ್ಞಾನಭಾರತಿ ವನರಾಜಿ ಬೆಳಗಿನ ಹೊಳಬಿಸಿಲಿನಲ್ಲಿ ಚಿನ್ನದ ಮೈಪಡೆದುಕೊಂಡಿತ್ತು. ಇಲ್ಲಿರುವ ಹೂಲಿಗಿಡದ ಚೆಲುವೇ ಚೆಲುವು.

(ಡಾ.ವಡ್ಡಗೆರೆ ನಾಗರಾಜಯ್ಯ ಅವರ ಧರ್ಮಪತ್ನಿ ರಮಾ )

ನಮ್ಮ ಊರಿನ ನಮ್ಮ ಹೊಲದ ಬದುವಿನಲ್ಲಿ ಹಾಗೂ ನಮ್ಮ ಹೊಲದಲ್ಲಿರುವ ಕಲ್ಲುಗುಟ್ಟೆಯಲ್ಲಿಯೂ ಹೂಲಿಗಿಡಗಳು ದಂಡಿಯಾಗಿವೆ. ಬಾಲ್ಯದಲ್ಲಿ ನಾವು ಕುರಿ-ದನ ಕಾಯಲೆಂದೋ… ಹೊಲದ ಕೆಲಸಗಳಿಗೆಂದೋ ಹೋದಾಗ ಹೂಲಿ ಹಣ್ಣುಗಳನ್ನು ಬಿಡಿಸಿ ಅಂಗೈಗಳಲ್ಲಿ ಒಸಕಿ ಕಾಲುಗಳಿಗೆ ಮತ್ತು ಮೈಕೈಗಳಿಗೆ ಉಜ್ಜಿಕೊಂಡು ಒಣಗಿ ಬೀಟೆಯೊಡೆದ ನಮ್ಮ ಮೈಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದೆವು.

ಅಂದಹಾಗೆ ಹೂಲಿಹಣ್ಣುಗಳ ಪೇಸ್ಟನ್ನು ಚರ್ಮರೋಗಗಳಾದ ಹುಳಕಡ್ಡಿ- ಇಸುಬುಗಳು ಪೀಡಿಸುವಾಗ ಹಚ್ಚಿಕೊಂಡರೆ ಚರ್ಮರೋಗ ಮಾಯವಾಗುತ್ತದೆ. ಹೂಲಿ ಹಣ್ಣುಗಳನ್ನು ನಾವು ತಿನ್ನುವುದಿಲ್ಲ. ಗಿಡಮೂಲಿಕೆಗಳ ಬಗ್ಗೆ ತಜ್ಞತೆ ಇರುವ ಗುಡಿಬಂಡೆ ಫಯಾಜ್ (Fayaz Fayaz) ಹಾಗೂ ಈ ಬಗ್ಗೆ ಬಲ್ಲಂತಹ ಬಂಧುಗಳು ಹೂಲಿ ಹಣ್ಣುಗಳ ಉಪಯೋಗದ ಬಗ್ಗೆ ತಿಳಿಸಿಕೊಡಬೇಕಾಗಿ ಕೋರುವೆನು.


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW