‘ಕಾಫಿಯ ಮೇಲೆ ಎಲ್ಲರೂ ಕವನ ಬರೆದರು. ನನಗೂ ಬರೆಯಬೇಕೆನಿತು. ಕಾಫೀ ಕುಡಿದು ಈ ಪದ್ಯ ಬರೆದೆ. ಹೇಗಿದೆ ಹೇಳಿ…’ – ಬೆಂಗಳೂರು ಶ್ರೀನಿವಾಸ್ ರವೀಂದ್ರ, ಮುಂದೆ ಓದಿ…
ಚಿಕ್ಕಮಗಳೂರಿನ ಬೆಟ್ಟದೇಣುಗಳಲಿ
ಮೂರರಿಂದಾರು ಸಾವಿರದ
ಅಡಿಗಳೆತ್ತರದಿ ವಿವಿಧರೂಪದ
ಬೇರುಗಳು ಕಾಫೀ ಹಣ್ಣುಗಳು
ಒಲವ ಹೊತ್ತು ತೂಗಾಡುವ
ಕಾಫೀ ಸುಂದರಿಯು.
ಕವಿಯೇ ನಿನಗುಂಟು
ಆರದ ದಾಹ ,ಇವಳ ಬಯಕೆ
ಅಂತೆಯೇ ಉಂಟು ಹಲವರಿಗೆ.
ಹೋಗಲಿ ಗೊತ್ತೇನು ನಿನಗೆ
ಇವಳಿಗೆಷ್ಟು ಪ್ರಣಯಿಗಳು.
ಆಟವಾಡುವಳು ರವಿಯೊಡನೆ
ರಮಿಸಿ, ಅವನ ಅಪ್ಪುಗೆಯ
ಅಮೃತವು ಬೇಕವಳ ವಿಕಸನಕೆ,
ಮತ್ತೆ ವರುಣನೊಡನೆ ಬೆರೆತು
ಹದವಾಗಿ ಹನಿಹೊದ್ದ ಬೆಳ್ಳಿ
ಬಣ್ಣದ ಸುಕೋಮಲೆ ಇವಳು.
ನಿತ್ಯದೊಸಗೆಯ ಆನಂದದಲಿಹನು
ಭೂಪತಿಯು ಇವಳೊಡನೆ
ರಾಶಿರಾಶಿ ಮಕ್ಕಳ ಹೆರಲವಳಿಗೆ
ಅನುವಿತ್ತು, ಬೆಸುಗೆ ಬಂಗಾರವಾಗಲೆಂದು
ಮನ್ಮಥನ ಮಾಟದಲಿ ಮುಗಿಲು
ಕುಣಿದು ಮಾಘದಲರಳಿದ ಬಿಳಿಯ
ಬಣ್ಣದ ಹೂವು ಕೆನೆಗಟ್ಟಿ ಅಮಲು
ಹುಟ್ಟಿಸುವ ಘಮಲು
ಇಂದ್ರನ ಮಂದಾರಕಿಂತ ಮಿಗಿಲು.
ಇನ್ನೂ ಇದ್ದಾರೆ;
ಹೂವಿಂದ ಹೂವಿಗೆಹಾರಿ
ಪರಾಗ ರೇಣುಗಳ ಮುದದಿ
ಸ್ಪರ್ಶಿಸಿ ಸಂಭ್ರಮಿಸಿ ದುಂಬಿಗಳು
ಇವಳ ಗೆಳೆಯರು ಗರ್ಭಗುಡಿಯ
ದೇವಗೆ ಮುಡಿಯ ತೊಡಿಸುವರು
ಉಡಿಯ ತುಂಬುವರು.
ಕಣ್ಣು ಹಾಕುವರೆಷ್ಟೋ ಮನುಜರು
ಅವರಲೊಬ್ಬ ಯಜಮಾನನಂತೆ
ಹಣ್ಣುಗಳ ಹೆಕ್ಕಿ ಮೂಟೆಯಲಿ ಕಟ್ಟಿ
ಹದವಾಗಿ ಹುರಿದು ಕುಟ್ಟಿ ಕುಟ್ಟಿ
ತಿಳಿನೀರಲಿಳಿದ ಕಷಾಯಕೆ
ಕಬ್ಬಿನಕ್ಕರೆ ಒಳಗಿಳಿದು ಕರಗಿ
ಸಂಲಗ್ನಿಸಿ ನಂದಿನಿಯ ಮಗನೊಡನೆ
ಕೂಡಿ ಸೃಜಿಸಿದ ಸ್ವಾದಕ್ಕೆ
ಕಿರೀಟ ಯಾರ ಮುಡಿಗೆ.
ಎಲ್ಲಿಂದಲೋ ಬಂದವಳು
ಇಲ್ಲಿ ಬೆರೆತು ಮನ ಗೆದ್ದವಳು
ಸ್ನೇಹದ ಖುಷಿಗೆ ರಸವಾದವಳು
ಪ್ರಣಯಿಗಳಿಗೆ ಸಮಯವಿತ್ತವಳು
ಸುಸ್ತು ಕಳೆದವಳು;
ಸಂಸಾರ ಸುಖಕೆ ತಾವಿತ್ತ ಹುಡುಗಿ
ಸುಂದರಿ ಕಾಫಿಯೇ ಕೈಬಿಡದಿರೆನ್ನ.
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು