ನನ್ನೊಲವೇ ನಿನಗೆ ಧನ್ಯವಾದ…

ಅಂತಿಮ ವರ್ಷದ ಬಿ.ಇ ಪದವೀಧರರಿಗೆ ಅದೊಂದು ಅದ್ದೂರಿ ಘಟಿಕೋತ್ಸವ. ಪ್ರತಿ ವರ್ಷದಂತೆ ಸಾವಿರಾರು ಇಂಜಿನೀರ ವಿದ್ಯಾರ್ಥಿಗಳು ಹೊರಬರುತ್ತಾರೆ. ಅವರಲ್ಲಿ ಅದೃಷ್ಟವಿದ್ದವರು ದೊಡ್ಡ ಕಂಪನಿಯಲ್ಲಿ ನೆಲೆಯೂರುತ್ತಾರೆ. ಇಲ್ಲದವರು ಮನೆಯಲ್ಲಿ ಕುಳಿತು ದುಃಖಿಸುತ್ತಾರೆ. ಆದರೆ ಸೌಮ್ಯ ಮತ್ತು ಸ್ತುತಿ ಮಾತ್ರ ಅದೃಷ್ಟವಂತರಲ್ಲಿ ಇಬ್ಬರು. ಅಂತಿಮ ವರ್ಷ ಸೆಮಿಸ್ಟ್ರ್ ಇರುವಾಗಲೇ ಕ್ಯಾಂಪಸ್ ಸೆಲೆಕ್ಷನ್ ಆಗಿತ್ತು. ಇಬ್ಬರೂ ಗೆಳತಿಯರು ಓದುವುದರಲ್ಲಿ ಮುಂದಿದರಾದರು ಅವರ ಗುರಿಗಳು ಬೇರೆ ಬೇರೆಯಾಗಿದ್ದವು. ಸೌಮ್ಯಳಿಗೆ ದೇಶ-ವಿದೇಶ ಸುತ್ತಬೇಕು. ಕೈ ತುಂಬಾ ಹಣ, ವೀಕೆಂಡ್ ಬಂದರೆ ಮಾಲ್, ಪಬ್ ಸುತ್ತಬೇಕೆನ್ನುವ ನೂರಾರು ಕನಸ್ಸು. ಸ್ತುತಿಗೆ ತನ್ನ ತಂದೆ- ತಾಯಿ ತೋರಿಸುವ ಹುಡುಗನನ್ನು ಮದುವೆಯಾಗಿ ಉತ್ತಮ ಗೃಹಿಣಿ, ತಾಯಿ ಆಗಬೇಕೆನ್ನುವ ಹಂಬಲ.

ಇಬ್ಬರ ಆಸೆಗಳಂತೆ ಸೌಮ್ಯ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಳು. ಇತ್ತ ಕಡೆ ಸ್ತುತಿ, ಅಪ್ಪ-ಅಮ್ಮ ತೋರಿಸಿದ ಹುಡುಗನನ್ನು ಮದುವೆಯಾದಳು. ಸ್ತುತಿಯ ಗಂಡ ಅನಿವಾಶ ಅವಳಂತೆ ಸ್ಪುರದ್ರೂಪಿ, ಬುದ್ದಿವಂತ. ಇಬ್ಬರ ಜೋಡಿ ನೋಡುಗರಿಗೆ ಕಿಚ್ಚು ಹಚ್ಚುವಂತಿತ್ತು. ಅವಿನಾಶ ಹೆಂಡತಿಯನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದ. ಅತ್ತೆ -ಮಾವ ಹಳ್ಳಿಯಲ್ಲಿಯೇ ಜಮೀನು ನೋಡಿಕೊಂಡಿದ್ದರಿಂದ ಯಾವುದು ತಾಪತ್ರಯವಿಲ್ಲದೆ ಸ್ತುತಿಯೇ ಮನೆಗೆ ಮಹಾರಾಣಿಯಾಗಿದ್ದಳು. ಜೀವನ ತುಂಬಾ ಸುಖಮಯವಾಗಿತ್ತು.

ಒಂದು ವರ್ಷ ಕಳೆಯುವುದರೊಳಗೆ ಸ್ತುತಿ ಗರ್ಭಿಣಿಯಾದಳು. ಅವಿನಾಶ ಕೂಡ ತುಂಬಾ ಮುತುವರ್ಜಿಯಿಂದ ಅವಳನ್ನು ನೋಡಿಕೊಳ್ಳುತ್ತಿದ್ದ. ಅವಳ ಬಯಕೆ ಎಂದಾಗಲ್ಲೆಲ್ಲಾ ಬೆಂಗಳೂರಿನಲ್ಲಿದ್ದ ಒಳ್ಳೆ ಒಳ್ಳೆಯ ಹೋಟೆಲಗಳನ್ನು ಹುಡುಕಿ ಅವಳಿಗೆ ತಿನ್ನಿಸುತ್ತಿದ್ದ.

ಒಂದು ದಿನ ಅವರಿದ್ದ ಹೋಟೆಲಗೆ ಸೌಮ್ಯ ತನ್ನ ಭಾವಿ ಪತಿಯೊಂದಿಗೆ ಬಂದಳು. ಸ್ತುತಿ ತನ್ನ ಹಳೆಯ ಸ್ನೇಹಿತೆಯನ್ನು ನೋಡಿ ತುಂಬಾನೇ ಖುಷಿ ಪಟ್ಟಳು. ಕಡಿದೇ ಹೋಗಿದ್ದ ತಮ್ಮ ಸ್ನೇಹ ಮತ್ತೆ ಮೊಬೈಲನಿಂದ ಚಿಗುರಿತು. ದಿನಗಳು ಉರಳಿದಂತೆ ಸ್ತುತಿಗೆ ಗಂಡು ಮಗುವಾಯಿತು. ಇತ್ತ ಕಡೆ ಸೌಮ್ಯಳ ಮದುವೆಯೂ ಆಯಿತು.

ಇಬ್ಬರು ಸ್ನೇಹಿತೆಯರು ಒಂದೇ ಕಡೆ ಅಪಾರ್ಟ್ಮೆಂಟ್ ಖರೀದಿ ಮಾಡಿದರು. ಇಬ್ಬರು ಒಂದೇ ಕಡೆ ವಾಸಿಸಲು ಆರಂಭಿಸಿದರು. ಸೌಮ್ಯ ಬೆಳಗ್ಗೆ ಏಳು ಗಂಟೆಗೆ ಗಂಡನಿಗೆ ತಿಂಡಿ ಮಾಡಿಟ್ಟು ಓಡಿ-ಓಡಿ ಗೇಟ ಮುಂದೆ ಕಾಯುತ್ತಿದ್ದ ತನ್ನ ಕಂಪನಿ ಕ್ಯಾಬ್ ಹತ್ತುತ್ತಿದ್ದಳು. ಅವಳ ಕ್ಯಾಬ್ ಹೋದ ಒಂದು ಗಂಟೆಗೆ ಸರಿಯಾಗಿ, ಸೌಮ್ಯಳ ಗಂಡ ರಾಜ್ ನ ಕ್ಯಾಬ್ ಬಂದು ನಿಲ್ಲುತ್ತಿತ್ತು. ರಾತ್ರಿ ವೇಳೆ ಸ್ತುತಿ ಬಾಲ್ಕನಿಯಲ್ಲಿ ತನ್ನ ಮಗನಿಗೆ ಊಟ ಮಾಡಿಸುವಾಗ, ಸೌಮ್ಯ ಅವಸರದಿಂದ ಕ್ಯಾಬ್ ಇಳಿದು ಮನೆಯತ್ತ ಓಡಿಬರುತ್ತಿದ್ದಳು. ನಿತ್ಯವೂ ಇದನ್ನು ಗಮನಿಸುತ್ತಿದ್ದ ಸ್ತುತಿ, ಎಷ್ಟೋ ಸಂದರ್ಭದಲ್ಲಿ ಸೌಮ್ಯಳಿಗೆ ಅಡುಗೆ ಮಾಡಿ ಕೊಟ್ಟು ಬರುತ್ತಿದ್ದಳು. ಕೆಲವೊಮ್ಮೆ ಆಫೀಸು ಕೆಲಸ ಬಿಟ್ಟು ಮನೆಯಲ್ಲಿಯೇ ಆರಾಮವಾಗಿರುವಂತೆ ಬುದ್ದಿ ಮಾತು ಹೇಳುತ್ತಿದ್ದಳು. ಆದರೆ ಸೌಮ್ಯಳಿಗೆ ದುಡ್ಡಿನ ಅಮಲು ಏರಿದ್ದರಿಂದ ಸ್ತುತಿಯ ಮಾತಿಗೆ ಕ್ಯಾರೇ ಅನ್ನುತಿರಲಿಲ್ಲ. ಎಷ್ಟೋ ಸಲ ಸೌಮ್ಯ ಮತ್ತು ರಾಜ್ ಮಧ್ಯ ಕೆಲಸದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಲೇ ಇತ್ತು. ಇದರಿಂದಾಗಿ ಸೌಮ್ಯಳ ಗಂಡ ಮದುವೆಯಾಗಿ ಒಂದು ವರ್ಷದಲ್ಲಿಯೇ ರೋಸಿ ಹೋಗಿದ್ದ.

ಎಂದಿನಂತೆ ಅವರ ಜಗಳ ಒಂದು ದಿನ ವಿಕೋಪಕ್ಕೆ ತಿರುಗಿತ್ತು. ಆ ಜಗಳ ಬಗೆ ಹರಿಸಲು ಸ್ತುತಿ, ಅವಿನಾಶ ಅನಿವಾರ್ಯವಾಗಿ ಮಧ್ಯ ಪ್ರವೇಶಿಸಬೇಕಾಯಿತು. ಜಗಳಕ್ಕೆ ಕಾರಣವಾಗಿದ್ದು ಸೌಮ್ಯಳು ೨ ತಿಂಗಳು ಗರ್ಭಿಣಿ ಎನ್ನುವ ವಿಷಯ. ಆದರೆ ಇದು ಜಗಳಕ್ಕೆ ನೇರ ಕಾರಣವಾಗಿರಲಿಲ್ಲ. ಬದಲು ಸೌಮ್ಯಳಿಗೆ ಬೇಗ ಮಗು ಬೇಡವಾಗಿತ್ತು. ಕೈ ತುಂಬಾ ಬರುವ ಸಂಬಳ ಎಲ್ಲಿ ತಪ್ಪಿಹೋಗಬಹುದೆಂಬ ಆತಂಕ ಅವಳಲ್ಲಿ ಕಾಡತೊಡಗಿತ್ತು. ಅದಕ್ಕಾಗಿ ಅಬಾರ್ಷನ್ ಗೆ ಮುಂದಾಗಿದ್ದಳು. ಈ ವಿಷ್ಯ ರಾಜಗೆ ಗೊತ್ತಾಗಿ ಇದಕ್ಕೆ ತಗಾದೆ ಎತ್ತಿದ್ದ.

ಹೇಳಿ -ಕೇಳಿ ಸೌಮ್ಯಳದು ಅಂತರ್ಜಾತಿ ವಿವಾಹವಾಗಿತ್ತು. ಇದರಿಂದ ಇಬ್ಬರ ಅಪ್ಪ-ಅಮ್ಮ ಇವರನ್ನು ದೂರವೇ ಇಟ್ಟಿದ್ದರು. ಇನ್ನೂ ಬಾಣಂತನ, ಮಗುವಿನ ಆರೈಕೆ ಎಲ್ಲವನ್ನು ಸೌಮ್ಯಳೆ ನಿಭಾಯಿಸುವುದು ಕಷ್ಟವೇ ಆಗಿತ್ತು. ಆದರೆ ರಾಜ್ ಹಠದ ಮುಂದೆ ಕೊನೆಗೂ ಸೌಮ್ಯ ತಲೆಬಾಗಲೇ ಬೇಕಾಯಿತು. ಎಂಟು ತಿಂಗಳವರೆಗೂ ಮನೆಯಿಂದಲೇ ಆಫೀಸ್ ಕೆಲಸ ಮಾಡಿದಳೇ ವಿನಃಹ ಕೆಲಸಕ್ಕೆ ರಾಜೀನಾಮೆ ನೀಡಲಿಲ್ಲ. ದಿನ ತುಂಬಿದ ಮೇಲೆ ಮುದ್ದಾದ ಗಂಡು ಮಗುವಿಗೆ ಸೌಮ್ಯ ಜನ್ಮವಿತ್ತಳು. ಮಗುವಿಗೆ ‘ಆಹಾನ’ ಎಂದು ಹೆಸರಿಟ್ಟರು. ಆಹಾನ ರಾತ್ರಿಯಿಡಿ ನಿದ್ದೆ ಮಾಡುತ್ತಿರಲಿಲ್ಲ. ಸೌಮ್ಯಳಿಗೆ ಮೊದಲಿಂದಲೂ ತಾಳ್ಮೆ ಕೊಂಚ ಕಮ್ಮಿಯೇ ಇತ್ತು. ರಾಜ ಕೂಡ ಆಫೀಸ್ ನೆಪ ಹೇಳಿ ರಾತ್ರಿ ಮನೆಗೆ ಲೇಟ್ ಗಿ ಮನೆಗೆ ಬರುತ್ತಿದ್ದ. ಇಬ್ಬರ ನಿರ್ಲಕ್ಷಕ್ಕೆ ಆಹಾನ ಅಳುವುದು ಕೇಳಿಸುತ್ತಿರಲಿಲ್ಲ, ಅತ್ತು-ಅತ್ತು ತಾನೇ ಸುಮ್ಮನಾಗುತ್ತಿದ್ದ. ಈ ಸಮಸ್ಯೆಗೆ ಪರಿಹಾರವಾಗಿ ಆಹಾನನನ್ನು ನೋಡಿಕೊಳ್ಳಲು ದಾದಿಯ ವ್ಯವಸ್ಥೆ ಮಾಡಲಾಯಿತು.

ಸೌಮ್ಯ ಮಗು ನೋಡಿಕೊಳ್ಳಲು ದಾದಿಗೆ ಕೈತುಂಬಾ ಸಂಬಳ ಕೊಡುತ್ತಿದ್ದಳು. ಅದರಂತೆ ಮಗುವನ್ನು ದಾದಿ ಚನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಆಹಾನಗೆ ಮೂರು ತಿಂಗಳು ತುಂಬುತ್ತಿದಂತೆ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ದಾದಿ ಕೈಗೆ ಕೊಟ್ಟು ಸೌಮ್ಯ ಆಫೀಸ್ ಗೆ ವಾಪಸ್ಸ ಹೋಗತೊಡಗಿದಳು. ಮಗುಬೇಕೆಂದು ಜಗಳವಾಡಿದ್ದ ಸೌಮ್ಯಳ ಗಂಡ ರಾಜ್ ಮಗು ಬಂದ ಮೇಲೆ, ಮಗುವಿನ ಜೊತೆ ಒಂದು ದಿನವೂ ಕಾಲ ಕಳೆಯುತ್ತಿರಲಿಲ್ಲ. ಮಗುವಿಗಾಗಿ ಇಬ್ಬರ ಬಳಿ ಸಮಯವಿರುತ್ತಿತ್ತೋ, ಇಲ್ಲವೋ? ಆದರೆ ಇವರ ಜಗಳಕ್ಕೆ ಸಾಕಷ್ಟು ಸಮಯ ಸಿಗುತ್ತಿತ್ತು.

ಒಂದು ದಿನ ಇಬ್ಬರ ಜಗಳ ಅತಿರೇಕಕ್ಕೆ ತಲುಪಿದಾಗ ರಾಜ್ ಮನೆಬಿಟ್ಟು ಹೋದವನು ಮತ್ತೆ ಮನೆಗೆ ಎಂದೂ ವಾಪಸ್ಸಾಗಲೇ ಇಲ್ಲ. ಸೌಮ್ಯಳೂ ಕೂಡ ರಾಜನ ಮನವೊಲಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಸ್ತುತಿಯು ಸಾಕಷ್ಟು ಬಾರಿ ಈ ವಿಚಾರವಾಗಿ ಬುದ್ದಿ ಹೇಳಿದಾದರೂ ಪ್ರಯೋಜನವೇನೂ ಆಗಲಿಲ್ಲ. ಸ್ತುತಿಯು ತನ್ನ ಗಂಡನ ಬಳಿ ಇವರ ವಿಷಯ ಮಾತನಾಡಿದರೆ ಅವನು ಕೆಂಡಾಮಂಡಲವಾಗುತ್ತಿದ್ದ. ಹಾಗಾಗಿ ಸ್ತುತಿ ಮನಸ್ಸಿನಲ್ಲೇ ಆಹಾನಗಾಗಿ ಮರಗುತ್ತಿದ್ದಳು.

ಸ್ತುತಿಯ ಮಗನಿಗಿಂತ ಆಹಾನ ಎರಡು ವರ್ಷ ಚಿಕ್ಕವನಾದರೂ ಬುದ್ದಿಯಲ್ಲಿ ಬಲು ಚುರುಕಾಗಿದ್ದ. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಿದ್ದ. ಸ್ಕೂಲ್ ವ್ಯಾನ್ ಇಳಿದು ಒಬ್ಬನೇ ಮನೆಗೆ ಬರುತ್ತಿದ್ದ. ಮನೆಯಲ್ಲಿ ಇಬ್ಬರು ಕೆಲಸದವರಿದ್ದರೂ ಆಹಾನನ ಹಠದ ಮುಂದೆ ಎಲ್ಲರೂ ಸುಸ್ತಾಗುತ್ತಿದ್ದರು. ಸೌಮ್ಯ ಮಗನಿಗೆ ಕೇಳಿದ್ದನ್ನೆಲ್ಲ ಕೊಡಿಸಿ ಹಠವಾದಿಯನ್ನಾಗಿ ಮಾಡಿಟ್ಟಿದಳು. ಆಹಾನನ ಕಷ್ಟ-ಸುಖ ಕೇಳುವಷ್ಟು ಸಮಯ, ತಾಳ್ಮೆ ಇರದ ಕಾರಣ ಅವನಲ್ಲಿ ತಾಯಿಯ ಪ್ರೀತಿಯ ಕೊರತೆ ಎದ್ದು ಕಾಣುತ್ತಿತ್ತು. ಎಷ್ಟೋ ಸಮಯದಲ್ಲಿ ತಾಯಿ ಜೊತೆ ಮಾತಾಡದೆ ಸುಮ್ಮನೆ ಒಂದು ಮೂಲೆಯಲ್ಲಿ ಕೂತಿರುತ್ತಿದ್ದ. ಸ್ತುತಿ ಅವನ ಪಕ್ಕದಲ್ಲಿ ಕೂಳಿತು ಊಟ ಮಾಡಿಸಿ ಮುದ್ದು ಮಾಡುತ್ತಿದ್ದಳು. ಮಗನ ಬೆಳವಣಿಗೆ ಬಗ್ಗೆ ದೃಷ್ಟಿ ಹರಿಸುವಂತೆ ಸೌಮ್ಯಳಿಗೂ ಎಷ್ಟೋ ಬಾರಿ ಸ್ತುತಿ ಸಲಹೆ ನೀಡಿದ್ದಳು. ಆದರೆ ಸೌಮ್ಯಳಿಗೆ ಮಗನ ಮೇಲೆ ಸಾಕಷ್ಟು ಪ್ರೀತಿ ಇತ್ತಾದರೂ ಅವನ ತಪ್ಪುಗಳನ್ನು ತಿದ್ದುತ್ತಿರಲಿಲ್ಲ. ಅವನ ಜೊತೆ ಸಮಯ ಕಳೆಯುತ್ತಿರಲಿಲ್ಲ. ಮಕ್ಕಳು ದೊಡ್ಡವರಾಗುತ್ತಾ ತಿಳುವಳಿಕೆ ತಾನಾಗೇ ಬರುತ್ತೆ ಎನ್ನುವುದು ಅವಳ ವಾದವಾಗಿತ್ತು.

ಕಛೇರಿಯಿಂದ ಸುಸ್ತಾಗಿ ಬಂದ ಗಂಡನಿಗೆ ಕಾಫಿ ಕೊಟ್ಟು ಸಮಾಧಾನದಿಂದ ಅವನ ಮಾತು ಕೇಳುವ ಹಾಗೂ ಸ್ಕೂಲ್ನಿಂದ ಬಂದ ಮಗನ ಪ್ರೀತಿಯ ಅಪ್ಪುಗೆಯಲ್ಲಿನ ಸುಖ ಯಾವುದೇ ಎಂ.ಏನ್.ಸಿ ಕಂಪನಿ ನೀಡುವ ಸಂಬಳಕ್ಕಿಂತ ಹೆಚ್ಚು ಎಂದು ಕೊಂಡಿದ್ದಳು ಸ್ತುತಿ. ತನಗೆ ಎಂ.ಏನ್.ಸಿ ಯಲ್ಲಿ ಸಿಕ್ಕ ಕೆಲಸವನ್ನು ತಿರಸ್ಕರಿಸಿದ್ದರ ಬಗ್ಗೆ ಯಾವುದೇ ವ್ಯಥೆ ಇರಲಿಲ್ಲ. ಬದಲು ಅವಳಲ್ಲಿನ ಆತ್ಮ ವಿಶ್ವಾಸ ಇಮ್ಮಡಿಯಾಗಿತ್ತು. ಜೀವನ ಅರ್ಥವಾಗದವರಿಗೆ ಅದು ಸೂತ್ರವಿಲ್ಲದ ಗಾಳಿಪಟದಂತೆ ಎನ್ನುವುದಕ್ಕೆ ಸೌಮ್ಯಳ ಬದುಕೇ ಸಾಕ್ಷಿಯಾಗಿತ್ತು.

ಅಂದು ಭಾನುವಾರ. ಇದ್ದಕ್ಕಿದ್ದ ಹಾಗೆ ಸೌಮ್ಯ, ಮಗನ ಜೊತೆ ಸ್ತುತಿ ಮನೆಗೆ ಬಂದಳು. ಅವಿನಾಶ ಹಾಲ್ ನಲ್ಲಿ ಕಾಫಿ ಕುಡಿಯುತ್ತಿದ್ದವನು ಸೌಮ್ಯಳನ್ನು ನೋಡಿ ಅಡುಗೆಮನೆಯಲ್ಲಿದ್ದ ಸ್ತುತಿಯನ್ನು ಕೂಗಿದ. ಸೌಮ್ಯ, ಆಹಾನ್ ನನ್ನು ನೋಡಿ ಸ್ತುತಿ ಖುಷಿಯಾದಳು. ಆಹಾನನ ಗಲ್ಲ ಸವರಿದಳು. ಅವಿನಾಶ್ ಕಾಫಿ ಮಾಡುವಂತೆ ಸ್ತುತಿಗೆ ಹೇಳಿದ. ಆದರೆ ಸೌಮ್ಯ ‘ಅದಕ್ಕೆಲ್ಲಾ ‘ಟೈಮ್ ಇಲ್ಲ, ಮತ್ಯಾವಾಗಾದರೂ ಕಾಫಿಗೆ ಬರ್ತೀನಿ ಅನ್ನುತ್ತಾ ತನ್ನ ಕೈಯಲ್ಲಿದ್ದ ಆಮಂತ್ರಣ ಪತ್ರಿಕೆ ಒಂದನ್ನು ತಗೆದು ಸ್ತುತಿ ಕೈಯಲಿಟ್ಟಳು. ಏನಿದು ಎಂದು ಉತ್ಸುಕದಿಂದಲ್ಲೇ ತಗೆದು ನೋಡಿದಳು. ಅದು ಸೌಮ್ಯಳ ಇನ್ನೊಂದು ಮದುವೆಯ ಆಮಂತ್ರಣ ಪತ್ರಿಕೆ. ನೋಡಿದ್ದೇ ತಡ ಸ್ತುತಿಗೆ ಶಾಕ್ ಆಯಿತು. ತನ್ನ ಕೈಯಲ್ಲಿನ ಆಮಂತ್ರಣ ಪತ್ರಿಕೆಯನ್ನು ಅವಿನಾಶನಿಗೆ ರವಾನಿಸಿದಳು. ಅವಿನಾಶ್ ಅದನ್ನು ನೋಡಿ, ಏನೂ ಮಾತನಾಡದೆ ಆಫೀಸ್ ಕೆಲಸದ ನೆಪ ವೊಡ್ಡಿ ರೂಮ್ ಒಳಕ್ಕೆ ಓಡಿದ. ಸ್ತುತಿಗೂ ಏನು ಹೇಳಬೇಂಕೆಂದು ತಿಳಿಯಲಿಲ್ಲ.

ಸ್ತುತಿಯ ಪೆಚ್ಚಾದ ಮುಖ ನೋಡಿ ಸೌಮ್ಯಳೆ ಹೇಳಿದಳು. ‘ಹುಡುಗ ನನ್ನ ಆಫೀಸಿನಲ್ಲಿ ಸೀನೀಯರ. ಅವರ ಹೆಂಡತಿಯೂ ಬಿಟ್ಟು ಹೋಗಿದ್ದಾಳೆ. ನಾವಿಬ್ಬರೂ ಒಂಟಿ ಬದುಕಿನಲ್ಲಿ ಎಲ್ಲಾ ಕಷ್ಟಗಳನ್ನು ಕಂಡಿದ್ದೇವೆ. ಈಗ ಆಹಾನಗೆ ಅಪ್ಪನ ಪ್ರೀತಿಯ ಅವಶ್ಯಕತೆ ಇದೆ. ಅಪ್ಪ-ಅಮ್ಮನ ಪ್ರೀತಿ ಆಹಾನಗೆ ಕೊಡಬೇಕು ಎನ್ನುವುದೇ ನಮ್ಮ ಆಸೆಯಾಗಿದೆ. ಮದುವೆಗೆ ತಪ್ಪಿಸಬೇಡ. ದೇವಸ್ಥಾನದಲ್ಲಿ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗ್ತಿದ್ದೀವಿ. ಖಂಡಿತ ಬರಬೇಕು’ ಎಂದು ಹೇಳಿ ಹೊರಟು ನಿಂತಳು. ಏನೂ ತಿಳಿಯದ ಆಹಾನ್ ತನ್ನ ಟಾಯ್ ಜೊತೆ ಆಟದಲ್ಲಿ ತಲ್ಲೀನನಾಗಿದ್ದ. ಅವನತ್ತ ನೋಡಿ ಕನಿಕರ ಉಕ್ಕಿ ಬಂತಾದರೂ ತುಟಿ ಬಿಗಿಹಿಡಿದಳು. ನಂತರ ಸೌಮ್ಯಳಿಗೆ ಬರುವುದಾಗಿ ಹೇಳಿ ಕಳುಹಿಸಿದಳು. ತನ್ನ ಸ್ವಾರ್ಥಕ್ಕೆ ತನ್ನ ಮಗನ ಭವಿಷ್ಯದ ನೇಪವೊಡ್ಡಿದ್ದು ಸ್ತುತಿಗೆ ಇಷ್ಟವಾಗಲಿಲ್ಲ. ಸೌಮ್ಯಳ ಮಾತಿನ ಮೇಲೆ ಸಿಟ್ಟು ಉಕ್ಕಿಬಂತು. ಕೆಲಸ ಮಾಡುವ ಭರದಲ್ಲಿ ತಾನೊಬ್ಬ ಜವಾಬ್ದಾರಿಯುತ ಹೆಂಡತಿ, ಒಬ್ಬ ಹೃದಯಿವಂತಿಕೆಯ ತಾಯಿಯೂ ಎನ್ನುವುದನ್ನು ಮರೆತೇ ಹೋಗಿದ್ದಳು ಸೌಮ್ಯ.

ಅವಿನಾಶ, ಸ್ತುತಿಯ ಮನಸ್ಥಿತಿ ಅರ್ಥ ಮಾಡಿಕೊಂಡು ಅವಳಿಗೆ ಸಮಾಧಾನ ಮಾಡಿದನಾದರೂ, ಅವನ ಮನಸ್ಸಿನಲ್ಲಿ ಯೂ ಒಂದು ಅಳಕು ಇತ್ತು. ಸ್ತುತಿಯ ಮನಸ್ಥಿತಿಯನ್ನು ಸರಿ ಮಾಡಲು ರಾತ್ರಿ ಒಂದು ಲಾಂಗ್ ಡ್ರೈವ್ ಯೋಜನೆ ಹಾಕಿಕೊಂಡ. ಮನೆಯಲ್ಲಿ ಮಗ ರಜೆಗೆಂದು ಅಜ್ಜಿ ಮನೆಗೆ ಹೋಗಿದ್ದ. ಹೇಗೂ ಮನೆಲ್ಲಿ ಇಬ್ಬರೇ. ಪಬ್ ರೆಸ್ಟೋರೆಂಟ್ ಗೆ ಸ್ತುತಿಯನ್ನು ಕರೆದುಕೊಂಡು ಹೋದ. ಎಂದೂ ಪಬ್ ನೋಡಿರದ ಸ್ತುತಿ, ಅಲ್ಲಿಯ ಪರಿಸರವನ್ನು ನೋಡಿ ಇರುಸು – ಮುರುಸುಗೊಂಡಳು. ಅವಿನಾಶ್ ಖಾಲಿ ಇದ್ದ ಟೇಬಲ್ ಬಳಿ ಹೋಗಿ ಸ್ತುತಿಗೆ ಕೂರುವಂತೆ ಸನ್ನೆ ಮಾಡಿದ. ಅವಿನಾಶ್ ಏಕೆ ಅಲ್ಲಿ ಕರೆದುಕೊಂಡು ಬಂದಿದ್ದಾರೆ? ಎಂದು ಗೊಂದಲಕ್ಕೀಡಾದಳು. ಅವಿನಾಶ್ ಬಿಯರ ಆರ್ಡರ ಮಾಡಿದ. ಮೊದಲ ಬಾರಿಗೆ ತನ್ನ ಗಂಡ ಕುಡಿಯುವುದನ್ನು ನೋಡಿ ಶಾಕ್ ಆಯಿತು. ಆತ ಕುಡಿಯುವುದನ್ನು ತಡೆಯಲು ಪ್ರಯತ್ನಿಸಿದಳಾದರೂ ಅವಿನಾಶ್ ಕೇಳದೆ ಅವಳ ಮನವೊಲಿಸಿದ. ಒಂದರ ಮೇಲೆ ಒಂದರಂತೆ ಕುಡಿಯಲು ಶುರು ಮಾಡಿದ. ಮಿತಿ ಮೀರಿದಾಗ ಸ್ತುತಿ ಸಿಟ್ಟಿನಿಂದ ಮನೆಗೆ ಹೊರಡುವುದಾಗಿ ಎದ್ದು ನಿಂತಳು.

‘ಲೇಡೀಸ್ ಅಂಡ್ ಜೆಂಟ್ಲೆಮೆನ್ ಅಟೆನ್ಷನ್ ಹಿಯರ’ ಎನ್ನುವ ಅವಿನಾಶ್ ಧ್ವನಿಗೆ ಅಲ್ಲಿದ್ದವರೆಲ್ಲ ಅವನತ್ತ ನೋಡ ತೊಡಗಿದರು. ಸ್ತುತಿಯತ್ತ ಬೆರಳು ತೋರಿಸಿ – ‘ಹಳದಿ ಬಣ್ಣದ ಸೆಲ್ವಾರ ಹಾಕಿರುವಳು ನನ್ನ ಮುದ್ದಿನ ಹೆಂಡತಿ. ಅವಳು ಅಪ್ಪಟ ಗ್ರಹಿಣಿ. ಪಬ್ ಗೆ ಮೊದಲ ಬಾರಿ ಬಂದಿದ್ದಾಳೆ. ಅವಳಿಗೆ ನಾನು ಕುಡಿಯೋದು ಇಷ್ಟವಿಲ್ಲ. ಈಗ ನನ್ನ ಅವತಾರ ನೋಡಿ ನನ್ನ ಬಿಟ್ಟು ಹೋಗುತ್ತಿದ್ದಾಳೆ ನೋಡಿ ಎಂದ. ಅಲ್ಲಿದ್ದವರೆಲ್ಲ ಸ್ತುತಿಯತ್ತ ನೋಡತೊಡಗಿದರು. ಸ್ತುತಿಗೆ ತನ್ನ ಗಂಡ ಕುಡಿದ ಅಮಲಿನಲ್ಲಿ ಮತ್ತೇನಾದರೂ ಮಾತಾಡಿದರೆ ಎನ್ನುವ ಭಯದಲ್ಲಿ ಅವಿನಾಶನತ್ತ ಓಡಿ, ಮನೆಗೆ ಹೋಗೋಣವೆಂದು ಸನ್ನೆ ಮಾಡಿದಳು. ಆದರೆ ಅವಿನಾಶ ಕೇಳಲಿಲ್ಲ ತನ್ನ ಮನದಲ್ಲಿದ್ದ ಮಾತನ್ನು ಹೇಳದೆ ಹೊರಡುವುದಿಲ್ಲ ಎಂದು ಪಟ್ಟು ಹಿಡಿದ. ಅದರಂತೆ ತನ್ನ ಮಾತನ್ನು ನಿಲ್ಲಿಸಲಿಲ್ಲ. ‘ನನ್ನ ಹೆಂಡತಿ ಓದಿದ್ದು ಬಿ.ಇ ಅವಳು ಪಟ್ಟಿದ್ದರೆ ಎಂ.ಏನ್.ಸಿ ಕಂಪನಿಯಲ್ಲಿ ಕೆಲಸಮಾಡಬಹುದಿತ್ತು. ಆದರೆ ಈಕೆ ಆಯ್ಕೆ ಮಾಡಿದ್ದು ಗ್ರಹಿಣಿ ಕೆಲಸ. ಗ್ರಹಿಣಿ ಅಂದರೆ ನಿಮಗೆಲ್ಲ ಗೊತ್ತಿದೆಯಲ್ಲ. ಅದೇ..ಮನೆ – ಮಕ್ಳು ನೋಡ್ಕೊಳೋದು, ಅಡುಗೆ ಮಾಡೋದು…ಪಾತ್ರೆ ತೊಳೆಯೋದು…ನನ್ನಂತ ಗಂಡ ಆಫೀಸಿನಿಂದ ಧಣಿದು ಮನೆಗೆ ಬಂದಾಗ ಬಿಸಿ ಕಾಫಿ ಕೈಯಲ್ಲಿ ಕೊಡೋದು. ಅಪ್ಪಟ ಗ್ರಹಿಣಿಯ ಕೆಲಸ. ಮದುವೆ ಮುಂಚೆ ನಾನು ಒಂದು ಸ್ಕೆಚ್ ಹಾಕಿದ್ದೆ. ಬಿ.ಇ ಹುಡುಗಿನ ಮದುವೆಯಾದ್ರೆ ಮನೆ ಸಾಲ ಬೇಗ ಮುಗಿಯುತ್ತೆ. ಆಮೇಲೆ ಫಾರಿನ್ ಟ್ರಿಪ್ ಓಡಾಡಿಕೊಡು ಜಾಲಿಯಾಗಿ ದಿನ ಕಳೆಯಬಹುದು ಅಂತ ಅಂದುಕೊಂಡ್ಡಿದ್ದೆ. ಆದ್ರೆ ಮದುವೆ ಆದಮೇಲೆ ನನ್ನ ಅರ್ಧಾoಗಿಣಿ ಮನೆ ಕೆಲಸ ಮಾಡ್ಕೊಂಡು ಮನೆಲ್ಲೇ ಇರ್ತೀನಿ ಅಂದ್ಲು . ನನ್ನ ಪ್ಲಾನ್ ಉಲ್ಟಾ ಆಯಿತಲ್ಲಪ್ಪಾ ಅಂತ ಅನ್ಕೊಂಡೆ. ಅದಕ್ಕೆ ಹೂ೦ ಅಂದು ಅವಳ ದೃಷ್ಟಿಯಲ್ಲಿ ಹೀರೋ ಏನೋ ಆದೆ. ಆದರೆ ಒಳಗೊಳಗೇ ನನ್ನ ಹೆಂಡತಿ ಕೆಲಸ ಮಾಡಿದ್ರೆ ಚನ್ನಾಗಿತ್ತು ಅಂತ ಅನಸ್ತಿತ್ತು ಎಂದಾಗ ಸ್ತುತಿ ಗಾಬರಿಯಾದಳು. ಮನೆಕೆಲ್ಸದಲ್ಲಿ ತೃಪ್ತಿ ಕಂಡಿದ್ದ ಆಕೆಗೆ ದೊಡ್ಡ ಆಘಾತವೇ ಆಯಿತು. ಕಣ್ಣಲ್ಲಿ ನೀರು ಒಂದೋದಾಂಗಿ ಸುರಿಯತೊಡಗಿತು. ಅದೇ ರೀತಿ ಅವಿನಾಶನ ಕಣ್ಣಲ್ಲೂ ನೀರು ಸುರಿಯತೊಡಗಿತು.

ಹೆಂಡತಿಯತ್ತ ನೋಡಿದ ಅವಿನಾಶ್ ಅವಳ ಸುರಿಯುತ್ತಿದ್ದ ಕಣ್ಣೀರನ್ನು ತಡೆದ ಮತ್ತು ಅವಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. ಸ್ತುತಿ ಗಾಬರಿ ಇಂದ ಹೊರಬಂದಿರಲಿಲ್ಲ. ಈಗ ಅವಿನಾಶ್ ನಿಧಾನವಾಗಿ ಹೇಳಿದ. ನಾನು ಎಷ್ಟು ತಪ್ಪಾಗಿ ಯೋಚಿಸಿದ್ದೆ ಅಂತ ಅವಳ ಗೆಳತಿಯ ಜೀವನ ನೋಡಿದ ಮೇಲೆ ನನಗೆ ಅರ್ಥವಾಯಿತು. ನಮಗಾಗಿ ಇಡೀ ದಿನ ಕೆಲಸಮಾಡುವ ಈ ಕೈಗಳಿಗೆ ಯಾವತ್ತೂ ನಾವು ಥ್ಯಾಂಕ್ಸ್ ಹೇಳಬೇಕು. ಆದರೆ ಅಂಥ ಮನಸ್ಥಿತಿ ನಮ್ಮಲ್ಲೇ ಇಲ್ಲ. ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ಇವಳು ನಾನು ಅಂದುಕೊಂಡ ಹಾಗೆ ಕೆಲಸಕ್ಕೆಹೋಗಿದ್ದರೆ ಇಷ್ಟು ಖುಷಿಯಾಗಿ ನಾನು, ನನ್ನ ಮಗ ಇರತಿರಲಿಲ್ಲ. ಇಬ್ಬರೂ ದುಡಿದರೂ ಅಷ್ಟೇ, ಜೀವನ ಸರಾಗವಾಗಿ ನಡೆಯೋಕೆ ಒಬ್ರೇ ದುಡಿದ್ರೆ ಸಾಕು, ನೆಮ್ಮದಿ ಜೀವನ ಅತಿ ಮುಖ್ಯ ಅಂತ ನಾನು ಚನ್ನಾಗಿ ಅರ್ಥಮಾಡ್ಕೊಡಿದ್ದೇನೆ.

-ಇಲ್ಲಿ ನಿಮ್ಮ ಎಲ್ಲರೆದುರು ನನ್ನ ಹೆಂಡತಿಗೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಅಂತ ತನ್ನ ಹೆಂಡತಿಯನ್ನು ತಬ್ಬಿಕೊಂಡು ‘ಥ್ಯಾಂಕ್ಸ್ ಸ್ತುತಿ’ ಅಂದಾಗ ಅಲ್ಲಿದ್ದ ಜನರು ಚಪ್ಪಾಳೆ ಮೂಲಕ ತಮ್ಮ ಪ್ರಶಂಸೆ ವ್ಯಕ್ತ ಪಡಿಸಿದರು.

#ಸಣಣಕತ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW