ನಾನು ಮತ್ತು ಕವಿತೆ…..!! – ದೇವರಾಜ್ ಹುಣಸಿಕಟ್ಟಿ

ಒಬ್ಬೊಬ್ಬರ ಭಾವ ಒಂದೊಂದು ರೀತಿ, ಭಾವಕ್ಕೆ ತಕ್ಕಂತೆ ಕವಿತೆಗಳು. ತಪ್ಪು ಹುಡುಕುವವರಿಗೆ ಹೇಳುವುದಿಷ್ಟೇ.. ಎದೆಯ ದನಿಗೂ ಮಿಗಿಲು ಇನ್ನೊಂದು ದನಿ ಇದೆಯೇ ಸರಸೂ (ಸರಸ್ವತಿ) – ದೇವರಾಜ್ ಹುಣಸಿಕಟ್ಟಿ, ಮುಂದೆ ಓದಿ…

ಅವ್ವ ,ಬೇ, ಯವ್ವಾ, ಹಿಂಗ್ ನಮ್ಮವ್ವಗ ಕರಿಯೋದು ರೂಢಿ. ಇನ್ನ ನನ್ನ ಅಜ್ಜಿಗೆ ಪ್ರೀತಿಯಿಂದ ಸಾಕವ್ವ, ಸಾಕು ಅಂತಾನೂ ಕರೀತಿದ್ದೆ. ಈಗ ನನ್ನ ಅಕ್ಷರದ ಮುತ್ತಜ್ಜಿಗಂತೂ ಸರಸೂ ಅಂತಾನೇ ಕರೀತೀನಿ ನಾನು. ನನ್ನ ಆತ್ಮೀಯ ಬಳಗಕ್ಕೆ ಅದು ಹೊಸದಲ್ಲ ಆದ್ರೆ ಕೆಲ ಮಡಿವಂತರಿಗೆ ಅದು ಅಪಥ್ಯ.

ಅವರು ಅವರ ಕನ್ನಡಕದಲ್ಲಿ ನೋಡಿ ತುಂಬಾ ವ್ಯಥೆ ಪಟ್ಟು ಇದು ಸರಿಯಲ್ಲ ಅಂತಾನೂ ಬೇರೆ ರೀತಿ ಬರೀಬೇಕು ಅಂತಾನೂ ಸಲಹೆ ಕೊಟ್ಟು ಉದ್ದುದ್ದ ಟಿಪ್ಪಣಿ ಬರೆದಿದ್ದು ಇದೆ. ಅದಕ್ಕೆಲ್ಲ ನಾನು ಸಣ್ಣದೊಂದು ನಗು ಚೆಲ್ಲಿ ಸುಮ್ನೆ ಆದದ್ದು ಇದೆ. ಅದನ್ನ ಕೆಲವರಿಗೆ ಅರ್ಥ ಮಾಡಿಕೊಳ್ಳಲು ಕಷ್ಟ ಆಗಿದೆ.ಅವರು ಅಂತಾರೆ ಬೇ ಅಂದ್ರ್ ಸರಿ ಅಲ್ಲ ಅಂತಾ ಇನ್ನೂ ಕೆಲವರು ಯವ್ವಾ ಅಂತಾರೇನು…? ಅನ್ನೋರು ಅದಾರ ಅವರೆಲ್ಲ ಈ ಸ್ಥಾನಿಕ ಸೊಗಡನ್ನ ಸೊಫೋಷಿಕೆಟೆಡ್ ದುನಿಯಾದಲ್ಲಿ ಮರೆತವರ ಅದಾರ ಅನ್ಕೊಂತುನಿ…!

ಇನ್ನೂ ಮಜಾ ಅಂದ್ರ್ ಕವಿತೆಯ ಯಾವುದೇ ಪ್ರಕಾರ ಬರೆಯೋವಾಗ ಎದೆಯ ದನಿಗೆ, ಭಾವಕ್ಕೆ ಮತ್ತು ತೀರಾ ಲೇಪನ ಇಲ್ಲದ ನೇರ ನುಡಿಗಳಿಗೆ ಮಹತ್ವ ಇದೆ.ಆದ್ರೆ ಕೆಲವರು ಸಾಲು ಉದ್ದಾ ಆದ್ವು, ಈ ಪದದ ಬದಲು ಹೀಗೆಲ್ಲ ಯೋಚಿಸಿ ಹಾಕಬೇಕಿತ್ತು, ಹೊಳಿತಿತ್ತು ಅಂತೆಲ್ಲ ವಿಮರ್ಶೆ ಸಲಹೆ ನೀಡತಾರ…ಅವರಿಗೆಲ್ಲ ನನ್ನದು ಒಂದ್ ಪ್ರಶ್ನೆ ಇದೆ.

ಕಾವ್ಯ ಅನ್ನೋದು ಲೆಕ್ಕಾ ಹಾಕಿ ಬರೆಯೋದಲ್ಲ. ಹಂಗ್ ಬರೆದ್ರ್ ಅದು ಗಣಿತ ಆಗತದ. ಕಾವ್ಯ ಎಂದೂ ಗಣಿತ ಆಗಲಾರದು. ಅದು ಅಗಣಿತ ಅದ ಅನ್ನೋದು ನನ್ನ ಇನ್ನೊಂದು ವಾದ. ಯೋಚಿಸಿ, ಬುದ್ಧಿ ಪ್ರಯೋಗದಿಂದ ಅಂತೂ ಬರೆಯೋದು ಖಂಡಿತ ಕಾವ್ಯ ಆಗೋಕೆ ಸಾಧ್ಯವಿಲ್ಲ . ಕಾರಣ ತಾಯಿ ಸತ್ತಾಗ ಆಗಲಿ, ಮಗನ ಅಗಲಿಕೆಗೆ ಹೆಂಗ್ ಅಳೋದು ಅಂತಾ ಯೋಚನೆ ಮಾಡಿ ಅಳತಾರೇನು…? ಕೆಲವರು ಹಾಡಿ ಹಾಡಿ ಅಳತಾರೆ, ಕೆಲವರು ಬಿದ್ದು ಹೊರಳಾಡಿ ಅಳತಾರೆ, ಕೆಲವರು ಎಷ್ಟು ಅತ್ತರೂ ಕಣ್ಣೀರು ಬರೋದಿಲ್ಲ ಆದ್ರೆ ಇಲ್ಲಿ ಇವರದು ನಿಜವಾದ ದುಃಖ ಇವರದು ದುಃಖ ಅಲ್ಲ ಕಣ್ಣೀರ ಇಲ್ಲಾ ಅನ್ನೋಕೆ ಆಗುತ್ತಾ?. ಇನ್ನ ಹೊರಳಾಡಿ ಎಲ್ಲ ಅಳೋದು ಸರಿ ಅಲ್ಲ ಅನ್ನೋಕೆ ಆಗುತ್ತಾ ಅದು ಅವರ ದುಃಖ ದುಗಡ ಹೊರಗಡೆ ಹಾಕೋ ಪರಿ ಅಷ್ಟೇ….

ಇದನ್ನ ಗ್ರಹಿಸಬೇಕಾದದು ಒಬ್ಬ ಸಾಮಾನ್ಯ ವ್ಯಕ್ತಿಯ ಕ್ರಿಯೆ ಅಷ್ಟೇ. ಇನ್ನ ಕಾವ್ಯ ಕೂಡ ಅಷ್ಟೇ ಅದು ಇದಕ್ಕಿಂತ ಭಿನ್ನ ಅಲ್ಲ. ಅದು ಹೊಂದಿದ ಭಾವನೆ ಶಬ್ದ ಪ್ರಯೋಗ ಮತ್ತೂ ಆಳಕ್ಕೆ ಓದುಗ ವಿಮರ್ಶಕ ಇಳಿಬೇಕು. ಅದನ್ನ ಬಿಟ್ಟು ತನ್ನ ಗ್ರಹಿಕೆಗೆ ಸಿಗದೇ ಇರೋ ಕಾರಣಕ್ಕೆ ಅದನ್ನ ಕಾವ್ಯ ಪ್ರಯೋಗದ ದೋಷ ಅನ್ನೋದು ಮತ್ತೆ ವಿಮರ್ಶಕನ ಪೋಷಾಕು ಹಾಕಿಕೊಂಡು ಟೀಕು ಟಾಕು ಕಾವ್ಯದ ಜಸ್ಟಿಸ್ ಬಗ್ಗೆ ಮಾತಾಡಿ ಬಿಟ್ಟರoತು ಅದಕ್ಕಿಂತ ಮುಜುಗರ ಇನ್ನೊಂದಿಲ್ಲ .ಕಾವ್ಯದ ದನಿ, ಅದು ಹೊಂದಿದ ಅಂತ:ಕರ್ಣ ಮತ್ತೂ ಭಾಷೆ ಇವು ಕಾವ್ಯದ ಮೊದಲ ಜಸ್ಟಿಸ್ ಅಂತಾ ನನ್ನ ದೃಢವಾದ ನಂಬಿಕೆ.

ಇನ್ನ ಕಾವ್ಯದ ಹುಟ್ಟಾದರೂ ಕ್ಷಣ ಭಂಗುರವಾದದ್ದು.ಚಲಿಸುವ ಮೋಡಗಳ ಹಾಗೆ ಇದೆ ಅಂದ್ರ್ ಇತ್ತು.ಈಗ ಇಲ್ಲಾ ಅದೇ ಸ್ಥಾನದಲ್ಲಿ ಅನ್ನೋ ಹಾಗೆ.ಅದಕ್ಕೆ ಇಲ್ಲಿ ಇದೆ ಶಬ್ದ ಹಾಕಬೇಕಿತ್ತು ಯೋಚಿಸಬೇಕಿತ್ತು ಎಂಬುದು ಒಂದ್ ಕೃತಕ ಕ್ರಿಯೆ ಆಗುತ್ತೆ ಆಗ ಕಾವ್ಯದ ನೈಜತೆ ಸಾಯುತ್ತೆ.ಕಾವ್ಯ ಸತ್ತ ಮೇಲೆ ಅದರ ಹೆಣಕ್ಕೆ ಅದೆಷ್ಟು ಶೃಂಗಾರ ಮಾಡಿದ್ರ ಅದು ಯಾವುದಕ್ಕೆ ಬಂತು ಅಂತಾ ಅನ್ನೋದು ಅಷ್ಟೇ ನನ್ನ ಪ್ರಶ್ನೆ.

ಈ ಎಲ್ಲ ಮಾತು ಕಾಫಿಯಾ, ರದೀಫ, ರವಿ ಒಳಗೊಂಡು ಬರೆಯೋ ಗಜಲ್ ಗೂ ಯತಾವತ್ತು ಅನ್ವಯಿಸುತ್ತೆ ಅನ್ನೋದು ನನ್ನ ಇನ್ನೊಂದು ದೃಢ ನಂಬಿಕೆ.ಕಾರಣ ಎದೆಯ ದನಿಗೂ ಮಿಗಿಲು ಇನ್ನೊಂದು ದನಿ ಇದೆಯೇ ಸರಸೂ ಎಂಬ ಕಾವ್ಯದ ಮುತ್ತಜ್ಜಿ ಮಡಿಲಲಿ ಆಡಲು,ಹಾಡಲು,ಪಡಿ ಪಾಟಲು ಹಂಚಿಕೊಳ್ಳಲು ಅಲ್ವಾ…!ಮತ್ತೆ ನನ್ನ ಕವಿತೆ ಅಂದ್ರ್ ಏನು ಅಂತಾ ಹೇಳೋದು ಮರೆತಿದ್ದೆ ಕ್ಷಮಿಸಿ….ಸುಮ್ನೆ ಒಮ್ಮೆ ಓದಿ ಇದನ್ನ……!

***

ನನ್ನ ಕವಿತೆ :

ನದಿಯಂತೆ ಭೋರ್ಗರೆದು
ಹರಿದಿದ್ದಲ್ಲ ನನ್ನ ಕವಿತೆ…!
ಎಂದೂ ಬತ್ತದ
ಸಣ್ಣದೊಂದು ಒರತೆ…!!

ಹೊಲಿಗೆ ಯಂತ್ರದಂತೆ
ಯಾoತ್ರಿಕವಾಗಿ ಹೊಲೆದದ್ದಲ್ಲ…
ನನ್ನ ಕವಿತೆ
ಸಣ್ಣ ಸೂಜಿಯಲಿ
ಬೆಸುಗೆಯ ದಾರ ಹಾಕಿ
ಕಂಗಳ ಒತ್ತಿ ಹಿಡಿದು
ಮೆಲ್ಲಗೆ ಹರಿದ ಮನಸುಗಳ
ಹೊಲಿದ ಕವಿತೆ…ಒಲಿದ ಕವಿತೆ….!

ಮಿನುಗುವ ನಕ್ಷತ್ರವಲ್ಲ
ನನ್ನ ಕವಿತೆ…
ಸೆರಗಲ್ಲೆ ಕಟ್ಟಿಕೊಂಡ
ತೀರಾ ಸಣ್ಣದೊಂದು
ಕೆಂಡದುಂಡೆ….!!

ಬಾಂದಳದ ಚಂದಿರನಲ್ಲ
ನನ್ನ ಕವಿತೆ….
ಆಗೊಮ್ಮೆ ಈಗೊಮ್ಮೆ
ಸುಳಿದು ಬಿಡುಬಹುದಾದ
ಕೊಲ್ಮಿoಚು….!!
ಎದೆಯ ಕಾರ್ಗತ್ತಲನೆ ಸೀಳಿ
ತಟ್ಟಿ ಬಿಡುವ
ಮುಟ್ಟಿ ಬಿಡುವ
ನುಸಿಳಿ ಬಿಡುವ ಸುಳಿಮಿಂಚು….!!

ಸುಕೋಮಲ ಕಮಲ
ಮುಖಿ ಅಲ್ಲ ನನ್ನ ಕವಿತೆ
ಹರೆಯದರಲ್ಲೇ ಗಂಡನ
ಕಳಕೊಂಡ ಮುಂಡೆ…!!
ಅದಕೆ ಆಗುವಳು
ಆಗಾಗ ಮುಖಾ ಮುಖಿ
ಅವಳೇ ನನ್ನ ಆಪ್ತ ಸಖಿ….!!

ಅವನೇ ಅವಳಾಗಿ
ಅವಳೇ ಅವನಾಗಿ
ಸವೆಸಿ ಬಿಡುವ ಜೀವನ
ನನ್ನ ಕವಿತೆ…
ಅಲಂಕಾರಗಳಿಲ್ಲದ
ನಿರಾಭರಣ ಸುಂದರಿ
ನನ್ನ ಕವಿತೆ….
ಮೊನಾಲಿಸಾಳ ಮುಗುಳು
ನಗೆಯoತೆ….!!

ಬೆಟ್ಟದಷ್ಟು ನಿರೀಕ್ಷೆ ಇಲ್ಲ
ನನ್ನ ಕವಿತೆಗೆ…
ಸಾಸುವೆ ಅಷ್ಟು ಜಾಗ ಇದ್ದರೂ
ಸಾಕು ನಿಮ್ಮ ಎದೆಯೊಳಗೆ…!!

ಹಾರ್ಟ್ ಅಟ್ಯಾಕ್ ಆಗಲು
ಇನ್ನೇನು ಬೇಕು..?

ಸರಳವಾಗಿವೆ ಎಂದು
ದೂರಬೇಡಿ ನನ್ನ ಕವಿತೆ…
ಸರಳವಾದರೂ ಸತ್ತ
ಹೃದಯವನ್ನೂ ಅರಳಿಸಿ
ಬಿಡಬಹುದಾದ ವಿರಳ ಕವಿತೆ…!!


  • ದೇವರಾಜ್ ಹುಣಸಿಕಟ್ಟಿ (ಶಿಕ್ಷಕರು, ಕವಿಗಳು) ರಾಣೇಬೆನ್ನೂರ್

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW