ಪ್ರೊ.ಬಿ.ಗಂಗಾಧರಮೂರ್ತಿ ಅವರಿಗೆ ಭಾವಪೂರ್ವಕ ನಮನ

ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳವಳಿ, ಜನವಿಜ್ಞಾನ ಚಳವಳಿ, ವಿಚಾರವಾದಿ ಚಳವಳಿಯಂಥ ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳ ಭಾಗವಾಗಿದ್ದ ಪ್ರೋ.ಗಂಗಾಧರ ಮೂರ್ತಿ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರೊಂದಿಗಿನ ಒಡನಾಟದ ಕುರಿತು ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ಭಾವುಕ ಲೇಖನ, ಮುಂದೆ ಓದಿ…

ಸಾಮಾಜಿಕ ಕಾರ್ಯಕರ್ತ, ವಿಚಾರವಾದಿ ಲೇಖಕ ಪ್ರೊ.ಬಿ.ಗಂಗಾಧರಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ನಾನು ಮೊದಲು ಭೇಟಿಯಾದದ್ದು 1992 ರಲ್ಲಿ. ನಾನಾಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದೆ.

ಗೌರಿಬಿದನೂರಿನ ಎಇಎಸ್ ನ್ಯಾಶನಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಬಿಜಿಎಂ, ಜ್ಞಾನಭಾರತಿ ಇಂಗ್ಲಿಷ್ ವಿಭಾಗದಲ್ಲಿ ನಡೆಯುತ್ತಿದ್ದ ಪಿಎಚ್.ಡಿ ಸಂಶೋಧನಾರ್ಥಿಗಳ ಪ್ರಗತಿ ವರದಿ ಪರಿಶೀಲನೆ ಮತ್ತು ಅಧ್ಯಯನ ಕಮ್ಮಟಕ್ಕಾಗಿ ಸಂಶೋಧನಾರ್ಥಿಯಾಗಿ ಬಂದಿದ್ದರು. ಅಂದು ಅವರು ದಕ್ಷಿಣಾಫ್ರಿಕಾದ ಕಪ್ಪು ಸಾಹಿತ್ಯವನ್ನು ಕುರಿತು ತಮ್ಮ ವರದಿಯನ್ನು ಮಂಡಿಸಿದರು‌‌‌. ನಮ್ಮ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಎಂ.ಕೆ.ರಾಜನ್ ಅವರು ಆಸಕ್ತ ವಿದ್ಯಾರ್ಥಿಗಳನ್ನು ಪಿಎಚ್.ಡಿ ಸಂಶೋಧನಾರ್ಥಿಗಳ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದುದರಿಂದ ನಾನು ಕೂಡಾ ಭಾಗವಹಿಸಿದ್ದೆನು. ಬಿಜಿಎಂ ರವರು ಪ್ರಗತಿ ವರದಿಯನ್ನು ಮಂಡಿಸಿದ ನಂತರದಲ್ಲಿ ತುಂಬಿದ ಸಭೆಯಲ್ಲಿ ನಾನು ಅವರಿಗೆ, ‘ಕನ್ನಡದ ದಲಿತ ಸಾಹಿತ್ಯಕ್ಕೂ ಆಫ್ರಿಕನ್ನರ ಕಪ್ಪು ಸಾಹಿತ್ಯಕ್ಕೂ ನಡುವೆ ನೀವು ಕಂಡುಕೊಂಡಿರುವ ಸಾಮ್ಯ ಅಂಶಗಳೇನು?’ ಎಂದು ಪ್ರಶ್ನಿಸಿದ್ದೆನು. ಅವರು ನೀಡಿದ ಉತ್ತರ ನನಗೆ ಸಮಾಧಾನ ತಂದಿರಲಿಲ್ಲ.

ಸಭೆ ಮುಗಿದ ಬಳಿಕ ಬಿಜಿಎಂ ರವರು, ಪ್ರೊ.ನಗರಿ ಬಾಬಯ್ಯನವರ ಚೇಂಬರಿನಲ್ಲಿ ‌ಬಾಬಯ್ಯನವರೊಂದಿಗೆ ಆತ್ಮೀಯವಾಗಿ ತೆಲುಗಿನಲ್ಲಿ ಮಾತಾಡುತ್ತಾ ಕುಳಿತಿದ್ದರು. ನಮಗೆ ಅನುವಾದ ಮತ್ತು ಟಿ.ಎಸ್.ಎಲಿಯಟ್ ನ ನಾಟಕಗಳನ್ನು ಬೋಧಿಸುತ್ತಿದ್ದ ಪ್ರೊ.ನಗರಿ ಬಾಬಯ್ಯನವರಿಗೆ ನಾನು ಅತ್ಯಂತ ಪ್ರೀತಿಯ ವಿದ್ಯಾರ್ಥಿಯಾಗಿ ಸದಾ ಸಖ್ಯದಲ್ಲಿರುತ್ತಿದ್ದೆನು. ಅದಾಗಲೇ ಬಾಬಯ್ಯನರು ತಮ್ಮ ಜೈಲುವಾಸದ ಬದುಕಿನ ಅನುಭವಗಳನ್ನು ಕುರಿತು “ಕಗ್ಗತ್ತಲ ಜಗತ್ತಿನಲ್ಲಿ 90 ದಿನಗಳು” ಪುಸ್ತಕವನ್ನು ಪ್ರಕಟಿಸಿ ಪ್ರಗತಿಪರ ಚಳವಳಿಗಳಿಗಾರರ ಮತ್ತು ಕ್ರಾಂತಿಕಾರಿ ವಿಚಾರಧಾರೆಯ ಮನಸ್ಸುಗಳ ನಡುವೆ ಅತ್ಯಂತ ಜನಪ್ರಿಯರಾಗಿದ್ದರು. ಬಾಬಯ್ಯನವರು ನನ್ನನ್ನು ತಮ್ಮ ಚೇಂಬರಿಗೆ ಕರೆಸಿಕೊಂಡು ಬಿಜಿಎಂ ಅವರಿಗೆ ಪರಿಚಯಿಸುತ್ತಾ, ‘ಈ ಹುಡುಗ ತುಮಕೂರು ಜಿಲ್ಲೆಯವನು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ತುಂಬಾ ಓದಿಕೊಂಡಿದ್ದಾನೆ.

ಡಿಎಸ್ಎಸ್ ನ ಕಾರ್ಯಕರ್ತನಾಗಿ ಚಳವಳಿಗಳಲ್ಲಿ ಸಕ್ರಿಯವಾಗಿದ್ದಾನೆ. ಪತ್ರಿಕೆಗಳಿಗೂ ಬರೆಯುತ್ತಿರುತ್ತಾನೆ. ದೇವನೂರ ಮಹಾದೇವ, ಕವಿ ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮುಂತಾದವರ ಜೊತೆಯಲ್ಲಿಯೂ ಇವನ ಆಪ್ತ ಒಡನಾಟ ಇದೆ” ಎಂದು ನನ್ನ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಹೇಳಿದರು. ಬಿಜಿಎಂ ಅವರನ್ನು ನನಗೆ ತೋರಿಸುತ್ತಾ ಬಾಬಯ್ಯನವರು, “ಇವರು ಬಿ.ಗಂಗಾಧರಮೂರ್ತಿ ಅಂತಾ. ಗೌರಿಬಿದನೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ” ಎಂದು ನನಗೆ ಪರಿಚಯಿಸಿಕೊಟ್ಟು, ಕನ್ನಡಾನುವಾದದ ತೆಲುಗು ವಿಪ್ಲವ ರಚಯಿತ ಶ್ರೀ ಶ್ರೀ ಅವರ ‘ಮಹಾ ಪ್ರಸ್ತಾನ’ ಕೃತಿಯ ತಲಾ ಒಂದೊಂದು ಪ್ರತಿಯನ್ನು ನಮ್ಮ ಕೈಗಿಟ್ಟರು. ಗೌರಿಬಿದನೂರಿನವರೆಂದು ತಿಳಿದ ಕೂಡಲೇ ರೋಮಾಂಚಿತನಾದ ನಾನು, “ಗೌರಿಬಿದನೂರಿನಲ್ಲಿ ಪ್ರೊ.ಕೆ.ನಾರಾಯಣಸ್ವಾಮಿ.‌‌.‌‌. ಡಾ.ರಂಗಾರೆಡ್ಡಿ ಕೋಡಿರಾಂಪುರ ಗೊತ್ತಾ ಸರ್ ನಿಮಗೆ? ನಾನು ನಾರಾಯಣಸ್ವಾಮಿಯವರ ಶಿಷ್ಯ” ಎಂದೆ. ಗೊತ್ತೆಂದು ಅವರ ಬಗ್ಗೆ ಸಂತೋಷದಿಂದ ಮಾತಾಡಿದರು. ಹಂಚಿಕಡ್ಡಿ ಗಾತ್ರದ ಮೀಸೆ ಬಿಟ್ಟುಕೊಂಡು, ತಲೆ ಗೋಚಿ ಕೂದಲನ್ನು ಕುಪ್ಪೆ ಕೂರಿಸಿಕೊಂಡು, ಕಡ್ಡಿ ಪೈಲ್ವಾನನಂತೆ ಕಾಣಿಸುತ್ತಿದ್ದರು ಬಿಜಿಎಂ ಅವರು ಆ ದಿನ ರಾತ್ರಿ ನನ್ನೊಂದಿಗೆ ನಮ್ಮ ಹಾಸ್ಟೆಲ್ ರೂಮಿನಲ್ಲಿಯೇ ಉಳಿದುಕೊಂಡಿದ್ದರು. ಅವರನ್ನು ಜ್ಞಾನಭಾರತಿಯಲ್ಲಿ ಭೇಟಿಯಾಗಿದ್ದು ಅದೇ ಮೊದಲು ಅದೇ ಕೊನೆ. ಮತ್ತೊಮ್ಮೆ ಅವರು ಜ್ಞಾನಭಾರತಿ ಕಡೆಗೆ ತಲೆಹಾಕಿದ್ದನ್ನು ನಾನು ಕಾಣಲಿಲ್ಲ. ಪಿಎಚ್‌ಡಿ ಅಧ್ಯಯನ ಪೂರೈಸಿದರೋ ಅಥವಾ ಅರ್ಧಕ್ಕೇ ಮೊಟುಕುಗೊಳಿಸಿದರೋ ನಾನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ.

ಇದಾದ ನಂತರದ ದಿನಗಳಲ್ಲಿ ಹಲವಾರು ಚಳವಳಿಗಳಲ್ಲಿ ನಾವು ಜೊತೆಯಾದೆವು. ಬಂಡಾಯ ಸಾಹಿತ್ಯ ಸಂಘಟನೆ, ದಲಿತ ಚಳವಳಿ, ಜನವಿಜ್ಞಾನ ಚಳವಳಿ ಹಾಗೂ ಪ್ರೊ.ಕೆ.ನಾರಾಯಣಸ್ವಾಮಿಯವರು ಆಯೋಜಿಸುತ್ತಿದ್ದ ದೇಶಿ ಬೀಜ ಸಂರಕ್ಷಣೆ ಮತ್ತು ಜಲಸಾಕ್ಷರತೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಪ್ರೊ.ಬಿಜಿಎಂ, ವೈಚಾರಿಕ ಬರಹಗಾರರಾಗಿ ಮತ್ತು ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆನಂದ್ ತೇಲ್ತುಂಬ್ಡೆ ಅವರ “ಅಂಬೇಡ್ಕರ್ ಮತ್ತು ಮುಸ್ಮೀಮರು” ಎಂಬ ಕನ್ನಡಾನುವಾದದ ಕೃತಿ ಪ್ರೊ.ಬಿ.ಗಂಗಾಧರ ಮೂರ್ತಿಯವರ ಮಹತ್ವದ ಕೊಡುಗೆ. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಹೆಸರಾಗಿರುವ ವಿದುರಾಶ್ವತ್ಥದ ಹುತಾತ್ಮ ಸ್ವಾತಂತ್ರ್ಯ ವೀರಯೋಧರ ಸ್ಮಾರಕ ವೀರಸೌಧ, ಉದ್ಯಾನ ಮತ್ತು ಗಾಂಧಿ ಮ್ಯೂಸಿಯಂ ಗಳನ್ನು ಅತ್ಯಂತ ಮಾದರಿಯಾಗಿ ರೂಪಿಸಿದ್ದಾರೆ‌. ಭಾರತದ ಸ್ವಾತಂತ್ರ್ಯ ಹೋರಾಟದ ಚಾರಿತ್ರಿಕ ನೆನಪುಗಳನ್ನು ಸಂಗೋಪಿಸಿರುಸುವ ಚಿತ್ರಪಟಗಳ ಗ್ಯಾಲರಿಯ ಮೇಲೆ ‘ದೇಶಭಕ್ತರು’ ಎಂದು ಕರೆದುಕೊಳ್ಳುವ ಕೋಮುವಾದಿಗಳು ಎರಗಿದಾಗ ಪ್ರೊ.ಬಿಜಿಎಂ ತುಂಬಾ ನೊಂದುಕೊಂಡರು. ಇವತ್ತು ಹೃದಯಾಘಾತದಿಂದ ನಮ್ಮನ್ನು ಅಗಲಿ ಹೋಗಿದ್ದಾರೆ‌. ನನ್ನ ಬಹುಕಾಲದ ಹೋರಾಟದ ಸಂಗಾತಿ ಪ್ರೊ.ಬಿಜಿಎಂ ಇನ್ನೂ ಇರಬೇಕಿತ್ತು. ಹೋಗಿಬನ್ನಿ ಪ್ರೊಫೆಸರ್…. ನಿಮಗೆ ನಮಸ್ಕಾರ


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW