ನಾನು ಮತ್ತು ಗುಂಡ ೨ ಸಿನಿಮಾ ನೋಡುತ್ತಾ ನೋಡುತ್ತಾ ನನ್ನ ಛಬ್ಬಿಯ ನೆನಪಾಗಿ ಅತ್ತುಬಿಟ್ಟೆ. ನನ್ನ ಛಬ್ಬಿಯು ಸಿನಿಮಾದ ಗುಂಡನಂತೆ ಮತ್ತೆ ಮರುಜನ್ಮವನ್ನು ಪಡೆದು ನನ್ನ ಬಳಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡೆ. ಲೇಖಕಿ ಹೆಚ್ ವಿ ಮೀನ ಅವರು ಸಿನಿಮಾ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಚಿತ್ರ : ‘ನಾನು ಮತ್ತು ಗುಂಡ-2’
ನಿರ್ದೇಶಕರು: ಶ್ರೀ ರಘು ಹಾಸನ್
ತಾರಾಗಣದಲ್ಲಿ : ರಾಕೇಶ್ ಅಡಿಗ, ರಚನಾ ಇಂದರ್, ಮಂಜು ಪಾವಗಡ, ಗುಂಡ (ಸಿಂಬ)
ಗುಂಡನ( ಸಿಂಬ) ಅಭಿನಯ ಅದ್ಭುತ. ಗುಂಡನ ನಟನೆಯನ್ನು ಸೆರೆ ಹಿಡಿಯುವಲ್ಲಿ ನಿರ್ದೇಶಕರ ಹಾಗೂ ಚಿತ್ರ ತಂಡದವರ ತಾಳ್ಮೆ, ಶ್ರಮ ಶ್ಲಾಘನೀಯ.
ಮೊಟ್ಟಮೊದಲಿಗೆ ನಿರ್ದೇಶಕರಾದ ಶ್ರೀ ರಘು ಹಾಸನ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ‘ನಾನು ಮತ್ತು ಗುಂಡ-2’ ಕನ್ನಡ ಸಿನಿಮಾವನ್ನು ನೋಡಲು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿಬನ್ನಿ ಎಂದು ಕೇಳಿಕೊಳ್ಳುತ್ತಿದ್ದೇನೆ. ‘ಪ್ರಾಣಿ ಹಾಗೂ ಮನುಷ್ಯನ ನಡುವಿನ ನಂಟು ಜನುಮ ಜನುಮದ ಆತ್ಮದ ಗಂಟು’ ಎಂಬುದು ಚಿತ್ರದ ಕಥಾವಸ್ತು.
ನಾಯಿಗಳಿಗೆ ನಾವು ತೋರುವ ಪ್ರೀತಿ, ಕಾಳಜಿ ಹಾಗೂ ನಮ್ಮ ಧ್ವನಿಯ ಸ್ವರ, ಅಕ್ಕರೆಯ ಸ್ಪರ್ಶ, ವಾಸನೆ, ನಾವು ಕೊಡುವ ಆಹಾರ ಹಾಗೂ ಮತ್ತಿತರ ಆಧಾರದ ಮೇಲೆ ನಾಯಿಗಳು ನಮ್ಮನ್ನು ಯಾವರೀತಿ ಧೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುತ್ತವೆ ಎಂಬ ಈ ಚಿತ್ರದ ವಿಷಯ ಹೃದಯ ಸ್ಪರ್ಶಿ.
ಪ್ರಾಣಿ ಪ್ರಿಯಳಾದ ನಾನು ಒಂದು ಲ್ಯಾಬ್ರಡಾರ್ ತಳಿಯ ನಾಯಿಮರಿಯನ್ನು ಮನೆಗೆ ತಂದು ಗುಂಡು ಗುಂಡಾಗಿದ್ದ ಆ ಮರಿಗೆ ‘ಛಬ್ಬಿ’ ಎಂದು ಹೆಸರಿಟ್ಟೆ. ಅದರ ಹಾಗೂ ನನ್ನ ನಡುವಿನ ಸಂಬಂಧ ಜನುಮ ಜನುಮಗಳದ್ದು ಎಂದು ನನಗೆ ಅನಿಸಿದ್ದೂ ಉಂಟು. ಸುಮಾರು ಎಂಟು ವರುಷಗಳು ನಮ್ಮೊಂದಿಗಿದ್ದ ನನ್ನ ‘ಛಬ್ಬಿ’ ನನ್ನನ್ನು ಅಗಲಿ ಈಗ 6 ವರುಷಗಳು ತುಂಬಿಹೋದವು ಆದರೇ ಪ್ರತೀ ಕ್ಷಣ ಅದು ನನಗೆ ತೋರಿದ ಪ್ರೀತಿಯ ನೆನಪು ನನ್ನ ಹೃದಯದ ಬಡಿತದಲ್ಲಿ ಒಂದಾಗಿ ಉಳಿದು ಬಿಟ್ಟಿದೆ.
ಇಂತಹ ಭಾವನೆಗಳೊಳಗೊಂಡ ಚಿತ್ರ ” ನಾನು ಮತ್ತು ಗುಂಡ 2″.

‘ನಾನು ಮತ್ತು ಗುಂಡ’ ಸಿನಿಮಾವನ್ನ ದೂರದರ್ಶನದಲ್ಲಿ ನೋಡಿ ಇಷ್ಟಪಟ್ಟಿದ್ದ ನಾನು ‘ನಾನು ಮತ್ತೆ ಗುಂಡ-2’ ಸೆಪ್ಟೆಂಬರ್ 5 ನೇ ತಾರೀಕಿನಂದು ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿದು ಬಹಳ ಸಂತಸಪಟ್ಟೆ ಹಾಗೂ ಬಿಡುಗಡೆಗೊಂಡ ಮರುದಿನ ಚಿತ್ರವನ್ನು ಮನೆಯವರೊಂದಿಗೆ ಚಿತ್ರಮಂದಿರದಲ್ಲಿ ನೋಡಿ ಬಂದೆ.
ಸಿನಿಮಾ ನೋಡುತ್ತಾ ನೋಡುತ್ತಾ ನನ್ನ ಛಬ್ಬಿಯ ನೆನಪಾಗಿ ಅತ್ತುಬಿಟ್ಟೆ. ನನ್ನ ಛಬ್ಬಿಯು ಸಿನಿಮಾದ ಗುಂಡನಂತೆ ಮತ್ತೆ ಮರುಜನ್ಮವನ್ನು ಪಡೆದು ನನ್ನ ಬಳಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡೆ.
ನಾಯಿ ಮನುಷ್ಯನಂತೆ ಬಹಳ ಭಾವನಾತ್ಮಕ ಜೀವಿ ಹಾಗೂ ಅತೀ ಸೂಕ್ಷ್ಮತೆಯ ಜ್ಞಾನೇoದ್ರಿಯಗಳನ್ನು ಹೊಂದಿರುವ ಏಕೈಕ ಪ್ರಾಣಿ ಎಂದರೆ ಅದು ನಾಯಿ ಅಥವಾ ಶ್ವಾನ. ಅವುಗಳ ಸ್ಮರಣೆಯ ಸಾಮರ್ಥ್ಯದ ಕುರಿತಾಗಿ ವಿಜ್ಞಾನಿಗಳಿಗೆ ಆಸಕ್ತಿಯ ವಿಷಯವಾಗಿದೆ. ಹಾಗಾಗಿ ವಿಜ್ಞಾನಿಗಳ ಅಧ್ಯಯನಗಳಿಂದ ನಾಯಿಗಳು ಉತ್ತಮ ಸ್ಮರಣಶಕ್ತಿಯನ್ನು ಹೊಂದಿದ್ದು ಹಾಗೂ ಮಾನವನ ಕ್ರಿಯೆಗಳನ್ನು ಗಮನಿಸಿ ಅವುಗಳನ್ನು ಅನುಕರಿಸುವ ಉತ್ತಮ ಕಾರ್ಯನಿರ್ವಹಿಸುವ ಕಲೆಯನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ನಮ್ಮಂತೆ ಕನಸುಗಳನ್ನು ಕಾಣುವ ನಾಯಿಗಳು ನಮ್ಮೊಂದಿಗೆ ಭಾವನಾತ್ಮಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬಾಂಧವ್ಯವನ್ನು ಹೊಂದಿರುತ್ತವೆ. ತನ್ನನ್ನು ಸಾಕಿ ಸಲಹುವ ಮಾಲೀಕನ ಮನೆಯವರೊಂದಿಗೆ ಹಾಗೂ ಸಂಬಂಧಿಕರೊಂದಿಗೆ ಸಂತೋಷದ ಹಾಗೂ ದುಃಖದ ಸಂದರ್ಭಗಳನ್ನು ಅರಿತು ತನ್ನ ಭಾವನೆಗಳಲ್ಲಿ, ನಡವಳಿಕೆಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸಹಕರಿಸುತ್ತವೆ. ಅಂತೆಯೇ ಗರ್ಭಿಣಿ ಹೆಂಗಸಿನ ಹೊಟ್ಟೆಯಲ್ಲಿನ ಮಗುವಿನ ಹೃದಯ ಬಡಿತವನ್ನು ಗ್ರಹಿಸಿ ಅಪಾರ ಕಾಳಜಿಯನ್ನು ತೋರುತ್ತವೆ ಹಾಗೂ ಆತಂಕಗೊಳ್ಳುತ್ತವೆ. ಇಂತಹ ಸಮಯದಲ್ಲಿ ನಾಯಿಗಳು ಗರ್ಭಿಣಿಯ ಪಕ್ಕದಲ್ಲೇ ಇದ್ದು ಅವಳಿಗೆ ಮಾನಸಿಕವಾಗಿ ತನ್ನ ಪ್ರೀತಿಯನ್ನು ತೋರುತ್ತವೆ. ತನ್ನ ಮಾಲೀಕನ ನಡತೆಗಳನ್ನು ಅರಿಯುವುದಲ್ಲದೆ ಮಾಲೀಕನ ಅರೋಗ್ಯದಲ್ಲಿನ ಏರು ಪೇರುಗಳನ್ನು ಕೂಡ ಗ್ರಹಿಸಿ ನಾಯಿಗಳು ಚಿಂತೆಗೊಳಪಡುತ್ತವೆ.

ನಮ್ಮ ಒಡನಾಟದ ಸಹಾಯದಿಂದ ನಾಯಿಗಳು ನಮ್ಮೊಂದಿಗೆ ಯಾವ ರೀತಿ ಹೊಂದಿಕೊಳ್ಳಬೇಕು ಎಂಬುದನ್ನು ಆರ್ಥೈಸಿಕೊಂಡು ತನ್ನಲ್ಲಿ ಹಲವಾರು ಬದಲಾವಣೆಗಳನ್ನು ತಂದುಕೊಂಡು ನಮ್ಮೊಂದಿಗೆ ಶಾಶ್ವತವಾಗಿ ಇರಲು ಇಚ್ಛಿಸುತ್ತವೆ. ಇಂತಹ ನಾಯಿಗಳನ್ನು ಪೋಶಿಸುವವರು ಅವುಗಳೊಂದಿಗೆ ಸಮಯವನ್ನು ಕಳೆಯಬೇಕು. ಅವುಗಳು ಪ್ರತೀನಿತ್ಯ ಪರಿಸರದಲ್ಲಿ ಸ್ವಲ್ಪ ಸಮಯ ಬೆರೆಯಲು ಅವಕಾಶಗಳನ್ನು ರೂಪಿಸಿ ಅವುಗಳು ಮಾನಸಿಕ ತೊಂದರೆಗಳಿಗೆ ತುತ್ತಾಗದಂತೆ ನೋಡಿಕೊಂಡು ಅವುಗಳ ಸ್ವಸ್ಥ ಆರೋಗ್ಯದ ಜವಬ್ದಾರಿಯನ್ನು ಮಾಲೀಕರು ವಹಿಸಿಕೊಳ್ಳಬೇಕು.
ನಮ್ಮ ಆಸೆಗಾಗಿ ನಾಯಿಗಳನ್ನು ಕೊಂಡು ತಂದು ನಂತರ ಅವುಗಳನ್ನು ನಿರ್ಲಕ್ಷಿಸಿ ಹಾಗೂ ಅವುಗಳ ಜವಾಬ್ದಾರಿ ಬೇಡವೆನಿಸಿದಾಗ ಅವುಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಬರಬೇಡಿ….ಪ್ಲೀಸ್.
ಸರ್ ರಘು ಅವರೇ ನಿಮ್ಮ “ನಾನು ಮತ್ತು ಗುಂಡ 2 ” ಸಿನಿಮಾದಲ್ಲಿ ಗುಂಡನ ಮೂಲಕ ಎಲ್ಲರಿಗೂ ಶ್ವಾನಗಳ ಸಂಬಂಧದ ಮೌಲ್ಯಗಳನ್ನು ತಿಳಿಸಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
- ಹೆಚ್ ವಿ ಮೀನ – ಬೆಂಗಳೂರು.
