ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಪ್ರಕಾಶ ಬಾರ್ಕಿ ಅವರು ಲೇಖಕರು ಕೂಡಾ ಹೌದು. ಆಕೃತಿಕನ್ನಡಕ್ಕೆ ಸಾಕಷ್ಟು ವೈದ್ಯಕೀಯ ಬರಹಗಳನ್ನು ನೀಡಿದ್ದಾರೆ. ಈಗ ಅವರು ನರ್ಮದಾ ಪ್ರದಕ್ಷಿಣೆ ಯಾತ್ರೆಯಲ್ಲಿದ್ದು, ಅವರ ಅನುಭವಗಳು ಅಂಕಣದ ರೂಪದಲ್ಲಿ ಓದುಗರ ಮುಂದೆ ಬರಲಿದೆ ತಪ್ಪದೆ ಮುಂದೆ ಓದಿ….
ನರ್ಮದಾ ನದಿ ಪ್ರದಕ್ಷಿಣೆ ನನ್ನ ಬಹು ದಿನದ ಆಕಾಂಕ್ಷೆ, ಕೊನೆಗೆ “ಈಶ್ವರನ” ಕೃಪೆಯಿಂದ ಇಂದು ಪ್ರಾರಂಭ ಮಾಡಿದೆ.
ನದಿಯ ಒಟ್ಟಾರೆ ಹರಿಯುವ ರಹದಾರಿಯ ಉದ್ದ 1, 312 ಕಿ. ಮೀ ಆದರೆ ನಾವು ಪ್ರದಕ್ಷಿಣೆ ಹಾಕಲು ಸುಮಾರು 3500 ಕಿ.ಮೀ ಸಾಗಬೇಕಾಗುತ್ತದೆ. ನದಿಗೆ ಅಡ್ಡಲಾಗಿ ಕಟ್ಟಿದ ಡ್ಯಾಮ್, ಅಡ್ಡ ಬರುವ ಬೃಹತ್ ಗುಡ್ಡ, ಕಾಡುಗಳಿಂದ ದಾರಿ ಹಿರಿದಾಗುತ್ತೆ.
ನನ್ನ ಜೊತೆಗಾರ “ನಂದಿ”( Btwin Riverside 120 bicycle)ಯ ಜೊತೆ “ಓಂಕಾರೇಶ್ವರದಿಂದ “ನರ್ಮದಾ ಪರಿಕ್ರಮ ಪ್ರಾರಂಭಿಸಿದೆ.
ಇಂದು “ಮಿತ್ರ ಸಪ್ತಮಿ” ಪವಿತ್ರ ದಿನವಾದ್ದರಿಂದ ಬಹಳ ಜನ ಪರಿಕ್ರಮ ಹೊರಟು ನಿಂತಿದ್ದರು ಮತ್ತು ಮೈ ಕೊರೆಯುವ ಚಳಿ ಇರುವುದರಿಂದ ಮಧ್ಯಾಹ್ನದ ಹೊತ್ತಿಗೆ “ಪರಿಕ್ರಮ” ಪ್ರಾರಂಭಿಸಿದೆ.
ಮಧ್ಯಪ್ರದೇಶದ ಓಂಕಾರೇಶ್ವರ – ಕೋಠಿ- ಥಾಪನಾ-ಮೊರಟಕ್ಕಾ-ಟೋಕಸರ ದಾಟಿ “ಪೀತ ನಗರ” ಎಂಬ ಚಿಕ್ಕ ಹಳ್ಳಿಯ ಹೊರಭಾಗದ ಗುಡ್ಡದ ಮೇಲಿರುವ ಪ್ರಶಾಂತವಾದ “ಜಯ ಜಯ ಹನುಮಾನ್ ದೇವಸ್ಥಾನದಲ್ಲಿ” ವಾಸ್ತವ್ಯ ಹೂಡಿದೆ.
ಊರಿನ ಜನ ಸೇರಿ “ನರ್ಮದಾ ಪರಿಕ್ರಮ ಯಾತ್ರೆ ಕೈಗೊಂಡವರಿಗೆ ಚಹಾ, ಊಟ, ವಸತಿ ಯೋಜನೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆಗೈಯುತ್ತಿದ್ದಾರೆ.
ಇಲ್ಲಿ ಬೆನ್ನು ಹುರಿಯ ಆಳಕ್ಕಿಳಿದು ತರ ತರ ನಡುಗಿಸುವ ಚಳಿ ಇದೆ. ಮೈ ನುಗ್ಗೆದ್ದು ಹೋಗುವುದು. ಉತ್ತರ ಭಾರತದಿಂದ ಬಂದಂತ ನಾಥ ಪರಂಪರೆಯ 3 ಜನ ಸನ್ಯಾಸಿಗಳು “ಗೋದಿ ರೊಟ್ಟಿ” “ದಾಲ್” ಮಾಡಿದರು. ಬಿಸಿ ಬಿಸಿ ಊಟ ನಾಲಿಗೆ ನಿರೂರಿಸುವಂತಿತ್ತು. ಇನ್ನೊಬ್ಬ ಸನ್ಯಾಸಿ “ಹಠ ಯೋಗಿ”ಯಂತೆ… ಇವತ್ತಿನಿಂದ ಪರಿಕ್ರಮ ಸಂಪೂರ್ಣ ಆಗುವವರೆಗೆ ಮಲಗುವುದಿಲ್ಲವಂತೆ, ಕುಳಿತುಕೊಳ್ಳುವುದಿಲ್ಲವಂತೆ “ನಿಂತೇ” ಇರುವವರಂತೆ…. ನಿಂತೇ ಇದ್ದಾರೆ ಇವಾಗಲೂ..
ಇನ್ನೂ ಪಾದಯಾತ್ರೆಯಿಂದ ಬಂದಂತ ಮಧ್ಯೆ ಪ್ರದೇಶ ಮತ್ತು ಮಹಾರಾಷ್ಟ್ರದ “ಪರಿಕ್ರಮಾ”ವಾಸಿಗಳು ಮಲಗಿದ್ದಾರೆ. ನಾನು ಆಂಜನೇಯ ದೇವಸ್ಥಾನದ ಪಕ್ಕ ಮಲಗಿರುವೆ.. ದೂರದಲ್ಲಿ ನಿಂತಿರುವ ಹಠಯೋಗಿಯ ಪಕ್ಕ ಕುಳಿತ ಸನ್ಯಾಸಿಗಳು ಚಿಲುಮೆ ಜಗ್ಗುತ್ತಾ “ತಿಳಿಯದ ಭಾಷೆಯಲ್ಲಿ” ಕನವರಿಸುತ್ತಿದ್ದಾರೆ.
ನಾಳೆ ಮತ್ತೆ ಮುಂದೇ ಸಾಗುವೆ….
ಇಂದು “ಮಂಗಳವಾರ”ವಾದ್ದರಿಂದ ಆಂಜನೇಯ ದೇವಸ್ಥಾನದಲ್ಲಿ “ಭಜನೆ” ಮಾರ್ಧನಿಸುತ್ತಿದೆ.
ನರ್ಮದೇ ಹರ…
ಕ್ರಮಿಸಿದ ದೂರ: 26 ಕಿ.ಮಿ
- ಡಾ. ಪ್ರಕಾಶ ಬಾರ್ಕಿ – ವೈದ್ಯರು, ಲೇಖಕರು, ಕಾಗಿನೆಲೆ
