ಬೆಳಗಿನ ಚಳಿ ಈ ಹಿಂದಿನ ಮೂರು ದಿನಗಳಷ್ಟು ಬಾಧಿಸಲಿಲ್ಲ. ಬೆಳಗಿನ 5 ಗಂಟೆಗೆ ಎದ್ದು “ನರ್ಮದೆಯ” ತಟಕ್ಕೆ ನಡದೆ.
ಬೆಚ್ಚಗಿನ ಜಲ ಸ್ನಾನ ಆಹ್ಲಾದಕರವಾಗಿತ್ತು… ಆದರೆ ನೀರಿನಿಂದ ಹೊರ ಬಂದ ತಕ್ಷಣ ನೆಲಕ್ಕೆ ಬಿದ್ದ ಮೀನಿನಂತೆ ಜಿಗಿದಾಡುವುದಾಯಿತು.. “ಆ ಚಳಿ ಗಾಳಿಗೆ”. ಹಲು ಕಟಕಟಿಸುತ್ತಾ ಬಿರ ಬಿರನೆ ಬಂದವನೆ ಬೆಚ್ಚಗೆ ಹೊದ್ದುಕೊಂಡೆ.
ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದು ಅದನ್ನೇ ಅನ್ನುವಂತೆ ಹಬೆಯಾಡುವ “ಚಹಾ”ತಂದುಕೊಟ್ಟರು.

ಆಗಲೇ ಎಳೆ ಬಿಸಿಲು ಬೀರುತ್ತಾ… ನಿಧಾನಕ್ಕೆ ಸೂರ್ಯ ಇಣುಕುತ್ತಿದ್ದ..
ಮುಂದಿನ ಪಯಣಕ್ಕೆ ಅಣಿಯಾಗಿ… ನಂದಿಯ ಬೆನ್ನಿಗೆ ಬ್ಯಾಗ್ ಕಟ್ಟಿದೆ.
ಶಾಲಿವಾಹನ ಶಿವ ಮಂದಿರಕ್ಕೆ ಹೋಗಿ ಬಂದೆ.. ನದಿಯ ಆ ಕಡೆ ದಂಡೆಗೆ ಬೃಹತ್ ಕೋಟೆ ಕಾಣಿಸಿತು.. ಅದು “ಅಹಲ್ಯಾಬಾಯಿ ಹೋಳ್ಕರ್” ಕೋಟೆ.. ಮತ್ತು ಸಮಾಧಿ ಸ್ಥಳ.
ನರ್ಮದಾ ದೇವಿಗೆ ವಂದಿಸಿ ಮುಂದೆ ವಾಪಸ್ಸು “ಕಾಸರವಾಡ”ಗೆ ಬಂದು ನಂದಿಯನ್ನು ಓಡಿಸತೊಡಗಿದೆ. ಇದು ಮುಖ್ಯ ಹೈವೇಯಾದರೂ (ಖರಗೋನ್ – ಇಂದೋರ್ ಹೈವೇ) ನದಿಯ ಪಕ್ಕ ಹಾದು ಹೋಗಿದೆ.
ಒಂಬತ್ತು ಗಂಟೆ ಸುಮಾರಿಗೆ ಹೊಟ್ಟೆ ಚುರುಗುಟ್ಟುತಿತ್ತು.. ಏನಾದರೂ ತಿನ್ನೋಣ ಅಂತ ಹೈವೇ ಪಕ್ಕದ ಊರು “ಬಾಲಸಮುದ” ಎಂಬಲ್ಲಿ ಚಿಕ್ಕ ಹೋಟೆಲ್ಲಿಗೆ ಹೊಕ್ಕೆ. ಅವಲಕ್ಕಿ ತಿಂದು.. ಚಹಾ ಕುಡಿದು ದುಡ್ಡು ಕೊಡಲು ಹೋದಾಗ… ಈಗಾಗಲೇ ಅಲ್ಲಿಯೇ ಚಹಾ ಹೀರುತ್ತಾ ಕೂತಿದ್ದ ವೃದ್ದರೋರ್ವರು ಕೊಟ್ಟು ಹೋದರು ಎಂದ ಅಂಗಡಿಯವ.
ಅರೇ….

ಕೇವಲ ನಮ್ಮ ವೇಶ... ಭೂಷಣ..ಸೈಕಲ್ ಮೇಲಿನ “ನರ್ಮದಾ ಪರಿಕ್ರಮ ” ಬೋರ್ಡ್ ನೋಡಿ ಅರಿತ ಆ ವೃದ್ದರೋರ್ವರು.. ದುಡ್ಡು ಕೊಟ್ಟು ನಡೆದಿದ್ದರು.
ಮುಂದೇ..
“ಖಲ್ ಬುಜುರ್ಗ” ಎಂಬ ಊರಿನಲ್ಲಿ ಸೈಕಲ್ ಅಂಗಡಿ ಇಟ್ಟುಕೊಂಡಿರುವ “ನಿರ್ಭಯಸಿಂಹ” ಎಂಬುವರು ತಮ್ಮ ಮನೆಗೆ ಕರೆದು ಚಹಾ ಕೊಟ್ಟು ವಿಚಾರಿಸಿ ತಾವು 8 ಬಾರಿ “ನರ್ಮದಾ ಪರಿಕ್ರಮ” ಯಾತ್ರೆಯ ಅನುಭ ಹಂಚಿಕೊಂಡು ಬೀಳ್ಕೊಟ್ಟರು.
ಅಲ್ಲಲ್ಲಿ ಜನ ಕರೆಯುವುದು ಸಾಮಾನ್ಯ. ಅದುವೇ ನೈಜ ಭಾರತದ ಚಿತ್ರಣ. ಆಧ್ಯಾತ್ಮಿಕ ಜೀವಿಗಳ ಸಾಮಾನ್ಯ ಗುಣ ಸೇವೆ.
ಮಧ್ಯಾಹ್ನದ ಹೊತ್ತಿಗೆ “ತಲವಾಡ” ಎಂಬಲ್ಲಿ “ನರ್ಮದಾ ಸೇವಾ ಸಮಿತಿಯ ಧರ್ಮಶಾಲೆಯವರು ಊಟ ಮಾಡಿಸಿ, ಸ್ವಲ್ಪ ಸಮಯ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಿಕೊಟ್ಟರು. ಈಗಾಗಲೇ ಅಲ್ಲಿ ಏಳು ಜನ ಪಾದಯಾತ್ರೆ ಮಾಡುವವರು ಮಲಗಿದ್ದರು.
ಆಮೇಲೆ..
ಸೈಕಲ್ ತುಳಿಯುತ್ತಾ.. ಲೋಹಾರ್ ಎಂಬ ಹಳ್ಳಿಯಲ್ಲಿನ ನರ್ಮದಾ ನದಿ ದಂಡೆಯಲ್ಲಿರುವ “ಕಪಿಲೇಶ್ವರ ಮಹಾದೇವ ಆಶ್ರಮಕ್ಕೆ” ಬಂದೇ.
ಕಪಿಲ ನದಿ ನರ್ಮದಾ ನದಿಗೆ ಸಂಧಿಸಿದ ಸಂಗಮ ಕ್ಷೇತ್ರವಿದು.
ಕಪಿಲೇಶ್ವರ ಮಹಾದೇವ ಮಂದಿರ ಮತ್ತು ಆಶ್ರಮ ಅತ್ಯದ್ಭುತವಾಗಿದೆ. ವಿಶಾಲವಾದ ಪ್ರಾಂಗಣ. ನದಿಗೆ ಇಳಿಯಲು ಮೆಟ್ಟಿಲುಗಳಿವೆ. ನದಿಯ ನೀರು ಪರಿಶುದ್ಧವಾಗಿದ್ದು.. ವಿಶಾಲ ನದಿ ದಂಡೆಗೆ ಕೂತರೆ ಜಗವೇ ಮರೆತು ಹೋಗುವಂತ ಅನನ್ಯ ಕ್ಷೇತ್ರ.

ಈಗಾಗಲೇ ರಾತ್ರಿ ಭೋಜನ ಮುಗಿಯಿತು.. ಇನ್ನೂ ನರ್ಭದಾ ದೇವಿಯ ದಂಡೆಗೆ ನಿಶ್ಚಿಂತೆಯಿಂದ ಮಲಗುವುದಕ್ಕೆ ಕಾರ್ಯ..
ಈ ಆಶ್ರಮದಲ್ಲಿ ಆರಾಮಾಗಿ ಓಡಾಡಿಕೊಂಡಿರುವ ಶ್ವಾನವೊಂದು ರಕ್ಷಣೆಗೆ ಬಂದು ಕೂತಂತಿದೆ. ನು ಮಾಡಿದರೂ ಹೋಗುತ್ತಿಲ್ಲ.
ಮುಂದಿನ ಪಯಣ ನಾಳೆಗೆ..
ನರ್ಮದೇ ಹರ್
ಹಿಂದಿನ ಸಂಚಿಕೆಗಳು :
- ಪ್ರಕಾಶ ಬಾರ್ಕಿ
