ನದಿಯ ಪ್ರವಾಹದಿಂದ ಹಾಳಾದ ದೇವಸ್ಥಾನಗಳು, ಊರುಗಳು ಮತ್ತು ಆಶ್ರಮಗಳ ಪುನರ್ ನಿರ್ಮಾಣಕ್ಕೆ ಒಂದೂವರೆ ಕೋಟಿ ದೇಣಿಗೆ ನೀಡಿದ್ದ ಸಂತ ಶಿರೋಮಣಿ “ಸಿಯಾರಾಮ” ಬಾಬಾ ಅವರು ಇನ್ನಿಲ್ಲ…
ಹಿಂದೂಗಳ ಪವಿತ್ರ “ನರ್ಮದಾ ನದಿ”ಯ ಪರಿಕ್ರಮ ಅತೀ ಕಠಿಣವಾದ ಆಧ್ಯಾತ್ಮಿಕ ಯಾತ್ರೆ. ಪುರಾಣ ಕಾಲದಲ್ಲಿ ಮಾರ್ಕಂಡೇಯ ಋಷಿಯಿಂದ ಪ್ರಾರಂಭವಾದ ಯಾತ್ರೆಯಿದು.
ಪರಿಕ್ರಮ ಎಂದರೇ ನದಿಯ ಸುತ್ತ ಒಂದು ಬಾರಿ ಸಂಪೂರ್ಣ ಸುತ್ತು ನಡೆಯುವುದು. ಸದಾ ತಾಯಿ ನರ್ಮದಾ ದೇವಿಯ ಸ್ಮರಿಸುತ್ತಾ, ಆಧ್ಯಾತ್ಮಿಕ ಸಂತರನ್ನು ಭೇಟಿಯಾಗುತ್ತಾ, ದೇವಸ್ಥಾನ… ಆಶ್ರಮಗಳನ್ನು ಆಶ್ರಯಿಸಿ ನಡೆಯುವ ಪವಿತ್ರ ಯಾತ್ರೆ.
ನರ್ಮದೆಯ ಒಡಲು ಆಧ್ಯಾತ್ಮಿಕ ಸಾಧಕರ ಅತೀ ನೆಚ್ಚಿನ ತಾಣ. ಆಧ್ಯಾತ್ಮದಲ್ಲಿ ಉನ್ನತ ಸ್ಥಾನಕ್ಕೇರಿದ ಸಂತರನ್ನು ಇಲ್ಲಿ ಇಂದಿಗೂ ಕಾಣಬಹುದು. ಅಂಥವರಲ್ಲಿ ಒಬ್ಬರು ಸಂತ ಶಿರೋಮಣಿ “ಸಿಯಾರಾಮ” ಬಾಬಾ.

ಮಧ್ಯಪ್ರದೇಶದ ಖರಗೋನ್ ಜಿಲ್ಲೆಯ “ಭುಜುರ್ಗ ಭಟ್ಟ್ಯಾನ್” ಎಂಬ ಚಿಕ್ಕ ಹಳ್ಳಿಯಲ್ಲಿ ನರ್ಮದಾ ನದಿಯ ದಂಡೆಯಲ್ಲಿ ವಾಸವಾಗಿದ್ದ ಅಪರೂಪದ ಸಂತ ಇವರು.
ಭೋರ್ಗರೆವ ಮಳೆ, ಮೈ ಕೊರೆಯುವ ಚಳಿ, ಉರಿ ಬೇಸಿಗೆ ಕಾಲದಲ್ಲೂ ಸಹ ತುಂಡು ಲಂಗೋಟಿಯಲ್ಲಿ ಶಾಂತವಾಗಿ “ರಾಮಚರಿತ ಮಾನಸ” ಪಠಿಸುತ್ತಾ ಕೂರುತ್ತಿದ್ದ ಸಂತ.
ಬೆಳಿಗ್ಗೆ 3 ಗಂಟೆಗೆ ನದಿಯಲ್ಲಿ ಮಿಂದೆದ್ದು, ಆರಾಧ್ಯ ದೈವ ಹನುಮನನ್ನು ಪೂಜಿಸಿ ದಿನ ಆರಂಭಿಸುತ್ತಿದ್ದ ಸಂತ ಸಿಯಾರಾಮ ಬಾಬಾ, ದಿನದ ಕೊನೆಯನ್ನು ಹಾಗೆಯೇ ಮುಗಿಸುತ್ತಿದ್ದರು.
ನರ್ಮದಾ ದೇವಿಯ ಒಡಲಿನಲ್ಲಿ, ತಮ್ಮ ಆರಾಧ್ಯ ದೈವ “ಹನುಮಂತನ” ಧ್ಯಾನದಲ್ಲಿ ಸದಾ ಮಗ್ನರಾಗಿರುತ್ತಿದ್ದರು. ಸಂತ ಸಿಯಾರಾಮ ಬಾಬಾ ತಮ್ಮ 17 ನೇಯ ವಯಸ್ಸಿಗೆ “ಆಧ್ಯಾತ್ಮದ”ತ್ತ ಒಲವು ಬೆಳೆದು.. ತಮ್ಮ ಗುರುವಿನ ಅಪ್ಪಣೆಯಂತೆ ಭಾರತದ ಎಲ್ಲ ತೀರ್ಥಕ್ಷೇತ್ರಗಳನ್ನು ಕಾಲ್ನಡಿಗೆಯಲ್ಲಿ ಹೋಗಿ ಬಂದರು ಕೊನೆಗೆ ನರ್ಮದಾ ಪರಿಕ್ರಮ ಮುಗಿಸಿ ಕೊನೆಗೆ ನರ್ಮದಾ ನದಿಯ ದಂಡೆಗೆ ಸುಮಾರು 12 ವರ್ಷ ಸಂಪೂರ್ಣ ಮೌನ ವ್ರತಾಚರಣೆ ಮಾಡಿದರು. ಅಶ್ವಥ ಮರದ ಕೆಳಗೆ ನಿಂತು ಮೌನವಾಗಿ “ರಾಮಚರಿತ ಮಾನಸ “ ಪಠಿಸುತ್ತಾ ಕಠೋರ ತಪಗೈದರು ಆವಾಗಿನ ಅವರ ಆಹಾರ ನಿಸರ್ಗದಲ್ಲಿ ಸಿಕ್ಕ ಹಣ್ಣು, ಮರದ ಎಲೆ ಮತ್ತು ನರ್ಮದಾ ನದಿಯ ನೀರು.
ತಮ್ಮ ಮೌನ ವ್ರತಾಚರಣೆ ಮುಗಿದ ತಕ್ಷಣ ಅವರ ಬಾಯಿಂದ ಹೊರಬಿದ್ದ ಮೊದಲ ಮಾತು “ಸಿಯಾರಾಮ”. ಆವಾಗಿನಿಂದ ನರ್ಮದಾ ಖಂಡದಲ್ಲಿ “ಸಿಯಾರಾಮ” ಬಾಬಾ ಎಂದೆ ಪ್ರಸಿದ್ಧರಾದರು.

ಅಪರೂಪದ ಸಂತ “ಸಿಯಾರಾಮ ಬಾಬಾ” ಯಾರೇ ಬಂದು ಕೋಟಿ ಕೊಟ್ಟರೂ ಅವರಿಂದ ಸ್ವೀಕರಿಸುತ್ತಿದ್ದದ್ದು ಕೇವಲ 10 ರೂಪಾಯಿ ಉಳಿದ ಹಣವನ್ನು ವಾಪಸ್ಸು ಮಾಡುತ್ತಿದ್ದರು.
ನರ್ಮದಾ ನದಿ ಭೋರ್ಗರೆದು ನೆರೆ ಹಾವಳಿ ತಾರಕಕ್ಕೇರಿದರೂ ತಮ್ಮ ಆಶ್ರಮ ಬಿಟ್ಟು ಅಲುಗಾಡಲಿಲ್ಲ, ದೇವಿ ದೂರದ ಊರುಗಳನ್ನು ಮುಳುಗಿಸಿದರೂ ತನ್ನ ಪುತ್ರ ಸಿಯಾರಾಮ ಬಾಬಾ ಆಶ್ರಮವನ್ನು ಜಾಸ್ತಿ ಭಾದಿಸಲಿಲ್ಲ.
ನದಿಯ ಪ್ರವಾಹದಿಂದ ಹಾಳಾದ ದೇವಸ್ಥಾನಗಳು, ಊರುಗಳು ಮತ್ತು ಆಶ್ರಮಗಳ ಪುನರ್ ನಿರ್ಮಾಣಕ್ಕೆ ಬಾಬಾ ಒಂದೂವರೆ ಕೋಟಿ ದೇಣಿಗೆ ನೀಡಿದರು. ಹಾಗೆಯೇ ರಾಮ ಮಂದಿರಕ್ಕೆ ಸಹ ಒಂದು ಕೋಟಿ ದೇಣಿಗೆ ನೀಡಿದ್ದರಂತೆ. ಬಳಲಿ ಬಂದ ಮತ್ತು ಬಯಸಿ ಬಂದ ಭಕ್ತರಿಗೆ ತಮ್ಮ ಕೈಯಿಂದ ಆಹಾರ ತಯಾರಿಸಿ ಬಡಿಸುತ್ತಿದ್ದರು. ಮಾತೃ ಹೃದಯದ ಸಂತನ ಪವಾಡಗಳು ಸಾವಿರಾರು.
ನೂರಕ್ಕಿಂತ ಹೆಚ್ಚು ವಸಂತ ತಪಗೈದ ಆಧ್ಯಾತ್ಮಿಕ ಸಾಧಕ ಬಾಬಾ ಭಕ್ತಗಣ ವಿಶ್ವದ ಉದ್ದಕ್ಕೂ ಚಾಚಿಕೊಂಡಿದೆ.

ಕಳೆದ ಹತ್ತು ದಿನಗಳಿಂದ ವಯೋಸಹಜ ಉಸಿರಾಟದ ತೊಂದರೆ, ನ್ಯೂಮೋನಿಯಾದಿಂದ ಬಳಲುತ್ತಿದ್ದ ಸಿಯಾರಾಮ ಬಾಬಾ ಅನಾರೋಗ್ಯ ಸಮಯದಲ್ಲಿ ಸಹ ಆಸ್ಪತ್ರೆಗೆ ಹೋಗಲು ನಿರಾಕರಿಸಿದರು. ವೈದ್ಯರು ಆಶ್ರಮದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ “ಮೋಕ್ಷದಾ ಏಕಾದಶಿ” ದಿನದಂದು (11/12/2024) ಬೆಳಿಗ್ಗೆ 6:30 ರ ವೇಳೆಗೆ ವೈಕುಂಠಕ್ಕೆ ನಡೆದರು.
ಕೊನೆಗೆ “ಮೋಕ್ಷದಾ ಏಕಾದಶಿ”ಯಂದು ತಮ್ಮ ದೇಹ ತ್ಯಜಿಸಿ ಭಗವಂತನಲ್ಲಿ ಲೀನವಾದರು. ನರ್ಮದಾ ದೇವಿಯ ಪ್ರೀತಿಯ ಪುತ್ರ ತಟವನ್ನು ಬಿಟ್ಟು ನಡೆದರು. ಬಾಬಾ ಆಶ್ರಮ ದಿವ್ಯ ಮೌನಕ್ಕೆ ಜಾರಿದೆ, ನರ್ಮದಾ ದೇವಿ ದಡಕ್ಕೆ ಅಲೆಗಳನ್ನು ಅಪ್ಪಳಿಸಿ “ಪುತ್ರ ಶೋಕ” ವ್ಯಕ್ತಪಡಿಸುತ್ತಿದ್ದಾಳೆ. ಲಕ್ಷಾಂತರ ಭಕ್ತರ ಕಣ್ಣಾಲೆಗಳು ತುಂಬಿ ಹನಿಯಿಕ್ಕುತ್ತಿವೆ.

ಕಳೆದ ವರ್ಷ “ನರ್ಮದಾ ಪರಿಕ್ರಮ”ದಲ್ಲಿದ್ದಾಗ ಸಂತ ಸಿಯಾರಾಮ ಬಾಬಾ ಆಶ್ರಮದಲ್ಲಿ ತಂಗಿದ್ದೆ, ಬಾಬಾರ ದಿವ್ಯ ದರ್ಶನ ಪಡೆದ ಪುಣ್ಯ ನನ್ನ ಪಾಲಿಗೆ ಬಂದ ಸೌಭಾಗ್ಯ.
ಜೈ ಸಿಯಾರಾಮ… ಸಂತ ಸಿಯಾರಾಮ ಬಾಬಾ ಜೈ ಹೋ..
- ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ.
