‘ನಾಟ್ಯಮಯೂರಿ’ ಕೃತಿ ಪರಿಚಯ – ಸುಮಾ ಭಟ್

ಹಾಸನ ಕಲ್ಲಿನ ಶಿಲ್ಪಕಲೆಯಿಂದ ಆವಿರ್ಭವಿಸಿದ ದೇವಾಲಯಗಳ ತವರೂರು. ಇಂತಹಾ ಶಿಲ್ಪಕಲೆಯ ಸಾಮ್ರಾಜ್ಯಕ್ಕೆ ರೂವಾರಿಗಳೆಂದರೆ ಕಲಾ ತಪಸ್ವಿ ದಂಪತಿಗಳಾದ ಹೊಯ್ಸಳೇಶ್ವರ ವಿಷ್ಣುವರ್ಧನ ಮತ್ತು ನಾಟ್ಯರಾಣಿ ಶಾಂತಲೆ. ಡಾ.ಸಾ.ಶಿ.ಮರುಳಯ್ಯ ಅವರ ‘ನಾಟ್ಯ ಮಯೂರಿ’ ಕೃತಿಯ ಕುರಿತು ಸುಮಾ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ನಾಟ್ಯಮಯೂರಿ
ಲೇಖಕರು: ಡಾ.ಸಾ.ಶಿ.ಮರುಳಯ್ಯ
ಪ್ರಕಾಶಕರು: ಸಪ್ನಾ ಬುಕ್ ಹೌಸ್
ಪ್ರಥಮ ಮುದ್ರಣ: ೧೯೯೪
ಬೆಲೆ: ೫೫
ಪುಟಗಳು: ೯೪

ಕನ್ನಡನಾಡಿನ ಪ್ರತಿ ಪ್ರಾಂತ್ಯದಲ್ಲೂ ಒಂದಿಲ್ಲೊಂದು ವೈಶಿಷ್ಟ್ಯತೆಗಳು ಅಡಗಿದೆ. ಈ ಮಣ್ಣಿನ ಸೊಗಡಲ್ಲಿ ಸನಾತನ ಸಂಸ್ಕೃತಿಯ ಸಾಹಿತ್ಯ, ಕಲೆ, ನಿಸರ್ಗ ಸೌಂದರ್ಯ, ಲಲಿತ ಕಲೆ, ರಂಗಭೂಮಿ, ನೃತ್ಯ ಹೀಗೆ ಎಲ್ಲವೂ ಸಮೃದ್ಧವಾಗಿ ನೆಲೆಗೊಂಡಿದೆ. ಅನಾದಿಕಾಲದಿಂದಲೂ ಕಲಾ ಪೋಷಕ ಅರಸು ಮನೆತನಗಳಿಂದ ಕಲೆ, ಕಲೆಗಾರರಿಗೆ ಉನ್ನತ ಸ್ಥಾನಮಾನಗಳು ದೊರೆತಿದೆ. ಮೈಸೂರು ವಾಸ್ತು ಶಿಲ್ಪಕಲೆಯ ಕುರುಹಾದ ಅರಮನೆಗಳ ನಾಡಾದರೆ…ಹಾಸನ ಕಲ್ಲಿನ ಶಿಲ್ಪಕಲೆಯಿಂದ ಆವಿರ್ಭವಿಸಿದ ದೇವಾಲಯಗಳ ತವರೂರು. ಇಂತಹಾ ಶಿಲ್ಪಕಲೆಯ ಸಾಮ್ರಾಜ್ಯಕ್ಕೆ ರೂವಾರಿಗಳೆಂದರೆ ಕಲಾ ತಪಸ್ವಿ ದಂಪತಿಗಳಾದ ಹೊಯ್ಸಳೇಶ್ವರ ವಿಷ್ಣುವರ್ಧನ ಮತ್ತು ನಾಟ್ಯರಾಣಿ ಶಾಂತಲೆ.

ಶಿವಗಂಗೆಯ ಹೊನ್ನಮ್ಮದೇವಿಯ ದೇಗುಲದಲ್ಲಿ ಶಾಂತಲೆ ನೃತ್ಯ ಸೇವೆಯಲ್ಲಿ ತೊಡಗಿದ್ದಾಗ ವೀರಯೋಧನೊಬ್ಬ ಕ್ಷಮೆ ಕೋರುತ್ತಾ ದೇಗುಲ ಪ್ರವೇಶಿಸುವ ಸನ್ನಿವೇಶದಿಂದ ನಾಟ್ಯ ಮಯೂರಿ ಕಾದಂಬರಿಯ ಪಯಣ ಆರಂಭವಾಗುತ್ತದೆ. ಹೊಯ್ಸಳ ಸಾಮ್ರಾಜ್ಯದ ಡಣಾಯಕ ಮಾರಸಿಂಗಮಯ್ಯ ಮತ್ತು ಮಾಚಿಕಬ್ಬೆಯ ಮಗಳು ಶಾಂತಲೆ ಮತ್ತು ಅವಳ ಹೃದಯದ ಗೆಳತಿ ಲಕ್ಷ್ಮಿಯೊಂದಿಗೆ ನಗರ ದೇವತೆ ಹೊನ್ನಮ್ಮನ ಗುಡಿಯಲ್ಲಿ ಶಿವ ತಾಂಡವ ನೃತ್ಯದಲ್ಲಿ ಲೀನಳಾಗಿರುತ್ತಾಳೆ. ಹೊಯ್ಸಳ ಸೇನೆ ಹೆಂಜೇರು ಯುದ್ಧಭೂಮಿಯಲ್ಲಿ ನೊಳಂಬವಾಡಿಯವರ ವಿರುದ್ಧ ಗಳಿಸಿದ ಜಯಕ್ಕೆಂದು ಹೊನ್ನಾದೇವಿಗೆ ವಿಶೇಷ ಪೂಜೆ ನರ್ತನ ಸೇವೆಗೆ ಶಾಂತಲೆ ಎರ್ಪಡು ಮಾಡಿದ್ದಳು.

ತಂದೆ ಮಾರ ಸಿಂಗಮಯ್ಯನವರು ಆಗಮಿಸಿ ಹೇಳಿದ ಕಾರಣ ಆ ವೀರಯೋಧ ಹೊಯ್ಸಳ ಸಾಮ್ರಾಜ್ಯದ ಉತ್ತರಾಧಿಕಾರಿ “ಹೊಯ್ಸಳೇಶ್ವರ ವಿಷ್ಣುವರ್ಧನ” ಎಂಬ ವಿಷಯ ಎಲ್ಲರಿಗೂ ತಿಳಿಯುತ್ತದೆ. ತಾಯಿಯ ಆದೇಶದಂತೆ ನೃತ್ಯ ಸೇವೆ ಶಾಂತಲೆ ಮುಂದುವರೆಸುತ್ತಾಳೆ. ಶಾಂತಲೆಯ ವಸಂತ ನರ್ತನ ವಿಷ್ಣುವರ್ಧನನ ಮನಸೂರೆಗೊಂಡು ಅವಳಲ್ಲಿ ಅನುರಾಗ ಮೂಡಿತು, ಅವನ ಕಂಗಳ ಸೆಳೆತದಲ್ಲಿ ಶಾಂತಲೆಯೂ ಬಂಧಿಯಾಗುತ್ತಾಳೆ. ಶಿವಗಂಗೆಯಿಂದ ದ್ವಾರಸಮುದ್ರದತ್ತ ಹೋಗುವ ಪಯಣದಲ್ಲಿ ವಿಷ್ಣುವರ್ಧನ ಮತ್ತವನ ಆಪ್ತ ಬಪ್ಪರಸನ ಸಂಭಾಷಣೆಯೊಂದಿಗೆ ಶಾಂತಲೆಯ ತಂದೆ ಮಾರಸಿಂಗಮಯ್ಯ ಮತ್ತು ಶಾಂತಲೆಯ ಬಗೆಗಿನ ಹಲವು ವಿಷಯಗಳನ್ನು ಇಲ್ಲಿ ಲೇಖಕರು ವಿವರಿಸುತ್ತಾ ಸಿಗುತ್ತಾರೆ.

ಶಾಂತಲೆಯೂ ತನ್ನ ತಂದೆ ಮಾರಸಿಂಗಮಯ್ಯನವರ ಜೊತೆ ಗುಡಿಯಿಂದ ಮನೆ ಸೇರುವ ದಾರಿಯಲ್ಲಿ ನಡೆಸುವ ಸಂಭಾಷಣೆ ವಿಷ್ಣುವರ್ಧನನ ಬಗ್ಗೆ ಹಲವು ಮಾಹಿತಿ ಓದುಗರಿಗೆ ಒದಗಿಸುತ್ತದೆ. ವಿಷ್ಣುವರ್ಧನನಿಗೆ ಶಾಂತಲೆಯ ಮೇಲೆ ಒಲವಿರುವ ವಿಷಯ ಬಪ್ಪರಸನ ಮೂಲಕ ರಾಜಮಾತೆಗೆ ತಿಳಿಯುತ್ತದೆ. ಅಲ್ಲದೇ ನೊಳಂಬವಾಡಿಯ ಗಂಗರಸ ರಾಜನ ಮಗಳು ರಾಜಲೆ ಮತ್ತು ಪಲ್ಲವ ಚಕ್ರವರ್ತಿಯ ಮಗಳು ಬೊಮ್ಮಲೆ ಇಬ್ಬರಿಂದಲೂ ವಿಷ್ಣುವರ್ಧನನಿಗೆ ವಿವಾಹದ ಪ್ರಸ್ತಾವ ಬಂದಿತ್ತು. ರಾಜಮಾತೆ ಈ ಹೆಂಜೇರು ಯುದ್ಧದ ವಿಜಯೋತ್ಸವ ಸಮಾರಂಭಕ್ಕೆ ಡಣಾಯಕ ಮಾರಸಿಂಗಮಯ್ಯನವರಿಗೆ ಕುಟುಂಬ ಸಮೇತರಾಗಿ ಬರುವ ಆಹ್ವಾನ ಕಳಿಸುತ್ತಾರೆ. ಈ ಆಹ್ವಾನ ಪತ್ರಿಕೆಯೊಂದಿಗೆ ಶಾಂತಲೆಗೆ ವಿಷ್ಣುವರ್ಧನಿಂದ ಪತ್ರವೊಂದು ಬಂದಿತ್ತು.

ನೊಳಂಬವಾಡಿ ಗೆದ್ದ ವಿಜಯದ ಕುರುಹಾಗಿ ವಿಷ್ಣುವರ್ಧನ ನಿರ್ಮಿಸಲು ಹೊರಟ ವೇಲಾಪುರಿಯ ದೇವಸ್ಥಾನಕ್ಕೆ ಶಾಂತಲೆಯ ಅಭಿಪ್ರಾಯ ಕೋರಿದ ಪತ್ರವಾಗಿತ್ತು. ಅದಕ್ಕೆ ಉತ್ತರವಾಗಿ ಶಾಂತಲೆ ನೀಡಿದ ಸಲಹೆ ಮತ್ತವಳ ಕಲೆಗಾರಿಕೆ ರಾಜಮಾತೆ ಮತ್ತು ರಾಜನ ಮನ ಮುಟ್ಟಿತು. ಅದೇ ಈಗ ನಾವು ಅಂದಿನ ವೇಲಾಪುರಿ ಇಂದಿನ ಬೇಲೂರಿನಲ್ಲಿ ಕಾಣುವ ವಿಜಯ ನಾರಾಯಣ ಅಥವಾ ಚನ್ನಕೇಶವನ ನಕ್ಷತ್ರಾಕಾರವಿರುವ ದೇಗುಲವಾಗಿದೆ. ವಿಜಯೋತ್ಸವಕ್ಕೆ ಬಂದ ಶಾಂತಲೆಯೊಂದಿಗೆ ರಾಜಮಾತೆ ಮತ್ತು ವಿಷ್ಣುವರ್ಧನರ ಸಂಭಾಷಣೆಗಳು ಶಾಂತಲೆಗಿರುವ ವ್ಯವಹಾರಿಕ, ರಾಜಕೀಯ ಜ್ಞಾನಕ್ಕೆ ಉದಾಹರಣೆಯಾಗುತ್ತದೆ. ರಾಜನಿಗೆ ರಾಜಕೀಯ ಬೆಳವಣಿಗೆಯ ಸಲುವಾಗಿ ಬಂದಿರುವ ಎಲ್ಲಾ ಮದುವೆಯ ಪ್ರಸ್ತಾಪದೊಡನೆ ಮದುವೆಯಾಗುವ ಪ್ರಸ್ತಾಪವಿಡುವ ಶಾಂತಲೆಯ ದೂರದೃಷ್ಟಿ ರಾಜಮಾತೆ ಎಚಲಾದೇವಿಗೆ ಮೆಚ್ಚುಗೆಯಾಗುತ್ತದೆ.

ವಿಷ್ಣುವರ್ಧನ ಮೆಚ್ಚಿದ ಶಾಂತಲೆಯೊಂದಿಗೆ ನಂತರ ಬೊಮ್ಮಲೆ,ರಾಜಲೆ, ಬಿಜ್ಜಲೆ,ಲಕ್ಷ್ಮಿ ಇವರುಗಳೊಂದಿಗೆ ವಿವಾಹ ನೆರವೇರಿತ್ತದೆ. ವಿವಾಹದ ಮಾರನೆ ದಿನ ವಿಷ್ಣುವರ್ಧನನಿಗೆ ಪಟ್ಟಾಭಿಷೇಕವಾಗಿ ಶಾಂತಲೆ ಪಟ್ಟದರಸಿಯಾದರೆ, ಅದರ ಮರುದಿನ ವಿಷ್ಣುವರ್ಧನನ ತಮ್ಮ ಉದಯಾದಿತ್ಯನಿಗೆ ಯುವರಾಜ ಪಟ್ಟಾಭಿಷೇಕವಾಗುತ್ತದೆ. ಪಟ್ಟದರಸಿಯಾದ ಶಾಂತಲೆ ಮತ್ತು ರಾಜ ವಿಷ್ಣುವರ್ಧನ ಇಬ್ಬರೂ ದೊರೆತ ಅಧಿಕಾರದಿಂದ ಬೀಗದೇ ಅದರಿಂದ ಬಂದಿರುವ ಜವಾಬ್ದಾರಿ ಅರಿತು ನಿರ್ವಹಿಸಲು ಮುಂದಾಗುತ್ತಾರೆ. ದಂಪತಿಗಳಿಬ್ಬರು ಅಂತಃಪುರ ಸುಖ ಲೋಲೊಪ್ತಿಗೆ ಮೀಸಲಾಗದೆ ದೇಶ ಪರ್ಯಟನೆ ಕೈಗೊಂಡು ಶಿವಗಂಗೆ, ಹೆಂಜೇರು, ಬನವಾಸಿಯ ನಂತರ ಶಾಂತಲೆಯ ಜನ್ಮಸ್ಥಳ ಮತ್ತು ವಿಶ್ವ ವಿದ್ಯಾಲಯವಿದ್ದ ಬಳ್ಳಿಗಾವಿಗೆ ಬರುತ್ತಾರೆ.

ಶಾಂತಲೆ ಮತ್ತು ವಿಷ್ಣುವರ್ಧನ ಬಳ್ಳಿಗಾವಿಯಲ್ಲಿ ತಂಗಿದ್ದ ರಾತ್ರಿಯ ಸಂಭಾಷಣೆಯಲ್ಲಿ ಶಿಲ್ಪಕಾರ ಜಕ್ಕಣ್ಣನ ಕಲೆಯ ಬಗ್ಗೆ ಶಾಂತಲೆ ಹೊಗಳಿದರೆ, ಅವನ ಬಗ್ಗೆ ವಿಷ್ಣುವರ್ಧನಿಗಿದ್ದ ಅಸಹನೆಯ ಅಭಿಪ್ರಾಯ ವ್ಯಕ್ತವಾಗುತ್ತದೆ. ಕಡೆಗೊಮ್ಮೆ ದಂಪತಿಗಳು ನಿರ್ಧರಿಸಿ ಶಾಂತಲೆ ಗುರು ಜಕ್ಕಣ್ಣನ ಭೇಟಿಯಾಗಲು ತಾಳಗುಂದದ ಪ್ರಣವೇಶ್ವರ ದೇವಾಲಯದ ಬಳಿ ತೆರಳುತ್ತಾರೆ. ಅಲ್ಲಿಗೆ ಹೋದಾಗ ಜಕ್ಕಣ್ಣಾಚಾರಿ ತನ್ನ ಮೌಕ್ತಿಕ ಶಿವಲಿಂಗದ ಕೆತ್ತನೆಯಲ್ಲಿ ತೊಡಗಿಸಿಕೊಂಡಿರುವ ವಿಷಯ ಶಿಷ್ಯನಿಂದ ತಿಳಿಯುತ್ತದೆ. ದಂಪತಿಗಳಿಬ್ಬರು ತಾವು ಶಿಲ್ಪರಚನೆಯನ್ನು ನೋಡುವ ಅವಕಾಶ ಕೇಳಿದಾಗ ಮೊದಲು ಶಿಷ್ಯ ಒಪ್ಪದಿದ್ದರೂ ಶಿಷ್ಯರಿಬ್ಬರು ಗುರುವಿನ ಕಲೆಗೆ ನೀಡುತ್ತಿದ್ದ ಸಹಕಾರ ತಾವು ಮಾಡುವೆವು ಎಂಬ ಭರವಸೆ ನೀಡಿದ ನಂತರ ದಂಪತಿಗಳಿಗೆ ಒಪ್ಪಿಗೆ ನೀಡುತ್ತಾರೆ.

ನಂತರ ಗುರುಗಳು ಮೂರ್ತಿ ಕೆತ್ತನೆಯಲ್ಲಿ ತಲ್ಲೀನರಾಗಿದ್ದಾಗ ರಾಜ ತಾಂಬೂಲ ಕಟ್ಟಿ ನೀಡಿದರೆ ರಾಣಿ ಅವರು ಉಗಿಯುವುದಕ್ಕೆ ಪೀಕುದಾನಿ ಹಿಡಿಯುತ್ತಿದ್ದಳಂತೆ. ಮೂರ್ತಿ ಕೆತ್ತನೆ ಮುಗಿಸಿದ ನಂತರ ದಂಪತಿಗಳನ್ನು ಕಂಡ ಗುರುಗಳಿಗೆ ವಿಷಯದರಿವಾಗಿ ಅವರಿಬ್ಬರ ಕ್ಷಮೆ ಬೇಡಿದ್ದಲ್ಲದೇ ರಾಜ ರಾಣಿಯರ ಅಭೀಷ್ಟೆಯಂತೆ ಬೇಲೂರಿನ ದೇಗುಲ ನಿರ್ಮಾಣದ ಹೊಣೆ ಹೊತ್ತರೂ ಕೆಲವೊಂದು ನಿಬಂಧನೆಗಳನ್ನು ಗರು ಜಕ್ಕಣ್ಣನು ವಿಧಿಸುತ್ತಾನೆ. ಜಕ್ಕಣ್ಣ ದೇಗುಲ ನಿರ್ಮಾಣಕ್ಕೆ ಯಾವ ನಿಬಂಧನೆಗಳನ್ನಿಟ್ಟು ಸಮ್ಮತಿಸಿದ??? ಜಕ್ಕಣ್ಣನ ಜೀವನದ ಪೂರ್ವ ವೃತ್ತಾಂತವೇನು ಅವನು “ಅಮರಶಿಲ್ಪಿ” ಆದದ್ದು ಹೇಗೆ??? ದೇವಾಲಯ ನಿರ್ಮಾಣದ ನಂತರ ಜಕ್ಕಣ್ಣ ಎನಾದ???ಇವೆಲ್ಲದರ ವಿವರಣೆ ಈ ಪುಸ್ತಕ ಓದಿಯೇ ಅರಿಯಬೇಕು.

ಹೊಯ್ಸಳ ಸಾಮ್ರಾಜ್ಯದ ಉನ್ನತಿಯನ್ನು ಕಂಡು ಕಿಚ್ಚಿನಿಂದ ಹಲವು ಶತ್ರುಗಳು ಹುಟ್ಟಿಕೊಂಡರು, ಇದರ ಪರಿಣಾಮವೇ ಚೋಳರು ನೇಮಿಸಿದ ರಾಜ ಆದಿಯಮ ಹೊಯ್ಸಳ ಸಾಮ್ರಾಜ್ಯದ ವಿರುದ್ಧ ಸಮರ ಸಾರುತ್ತಾನೆ. ಈ ಯುದ್ಧದಲ್ಲಿ ಚೋಳರ ಸೋಲು ಮತ್ತು ಆದಿಯಮನ ಅಂತ್ಯವಾಗಿ ವಿಷ್ಣುವರ್ಧನನ ಗೆಲುವಾಗಿ ತಲಕಾಡು ಹೊಯ್ಸಳ ಸಾಮ್ರಾಜ್ಯದ ಪಾಲಾಗುತ್ತದೆ. ಈ ಯುದ್ಧದ ತಯಾರಿ, ಅದರ ಹಿಂದಿನ ಆಯೋಜನೆ ಪ್ರತಿಯೊಂದು ವಿವರಗಳನ್ನು ತ.ರಾ.ಸು ಅವರು ಬರೆದ ಹೊಯ್ಸಳೇಶ್ವರ ವಿಷ್ಣುವರ್ಧನ ಎಂಬ ಪುಸ್ತಕದಲ್ಲಿ ದೊರೆಯುತ್ತದೆ. ಅತ್ತ ಗಂಡ ಯುದ್ಧಭೂಮಿಯಲ್ಲಿ ಜಯಕ್ಕಾಗಿ ಹೋರಾಡುತ್ತಿದ್ದರೆ, ಶಾಂತಲೆ ದ್ವಾರ ಸಮುದ್ರದಲ್ಲಿದ್ದು ರಾಜ್ಯದ ಸಂರಕ್ಷಣೆ ಮಾಡುತ್ತಾ ಶಾಂತಿ, ಸುವ್ಯವಸ್ಥೆ ಕಾಪಾಡುತ್ತಿದ್ದಳು.

ರಾಜ್ಯಭಾರದ ಜವಾಬ್ದಾರಿ ಹೊತ್ತ ಶಾಂತಲೆ ಯುವರಾಜ ಉದಯಾದಿತ್ಯನೊಡನೆ ವೇಷ ಮರೆಸಿ ಹಲವೆಡೆ ಸಂಚರಿಸುವಾಗ, ಬನದಮ್ಮನಹಳ್ಳಿಯ ಬನಶಂಕರಿ ದೇವಾಲಯದ ಕಟ್ಟೆಯಲ್ಲಿ ಅಪರೂಪದ ನ್ಯಾಯ ಪಂಚಾಯತಿ ನಡೆಯುತ್ತಿತ್ತು. ಅದನ್ನು ಮಾರುವೇಷದಲ್ಲಿದ್ದ ರಾಣಿ, ಯುವರಾಜ ಕೇಳಿದ್ದರಿಂದ ಮತ್ತು ನ್ಯಾಯ ಪಂಚಾಯಿತಿಯ ತೀರ್ಪು, ಅಲ್ಲಿ ನಡೆದ ಚರ್ಚೆಗಳು ಇತಿಹಾಸದ ಹೊಸ ಶಕೆಯೊಂದಕ್ಕೆ ಅಡಿಗಲ್ಲಾಯಿತು. ಈ ಸನ್ನಿವೇಶ ಕೇತಮಲ್ಲನಾಯಕನೆಂಬ ಹಿರಿಯನ ಸಾರಥ್ಯದಲ್ಲಿ ಶಾಂತಲೆ ದ್ವಾರಸಮುದ್ರ ಅಂದರೆ ಇಂದಿನ ಹಳೇಬೀಡಿನ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಸ್ಥಾನಗಳ ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳುವಂತಾಯಿತು. ಅದರ ಹಿನ್ನೆಲೆ, ವಿವರವನ್ನು ಲೇಖಕರು ತುಂಬಾ ಚಂದವಾಗಿ ಇಲ್ಲಿ ಚಿತ್ರಿಸಿದ್ದಾರೆ. ನೀವೇ ಓದಿ ಅರಿತು ಆನಂದಿಸಿ.

ಸುಖವೇ ಇದ್ದರೇ ಬದುಕಲ್ಲಾ ಅದರಲ್ಲಿ ದುಃಖಗಳು ಹರಿದು ಬರುತ್ತದೆ ಎಂಬಂತೆ ವಿಜಯೋತ್ಸವಗಳು, ಅದರ ಕುರುಹಾಗಿ ದೇವಾಲಯಗಳ ನಿರ್ಮಾಣ, ಶಾಂತಿನಾಥ ಬಸದಿಯ ನಿರ್ಮಾಣ ಇವುಗಳ ನಂತರ ಸಾವಿನ ಸರಣಿಗಳು ಶಾಂತಲೆಯನ್ನು ಕಾಡಿತು. ಮಾರ್ಗದರ್ಶಕಿಯಾಗಿದ್ದ ಅತ್ತೆಯ ಸಾವು, ನಂತರ ಅಪರೂಪಕ್ಕೆ ಶಾಂತಲೆಗೆ ಹುಟ್ಟಿದ ಕೂಸಿನ ಮರಣ, ಮುತೈದೆಯಾಗಿ ತಾಯಿಯ ಸಾವು, ಸ್ನೇಹಿತೆ ಕೆಳದಿಯ ಸೋಮಲೆಯ ವೈಧವ್ಯ ಹೀಗೆ ಎಲ್ಲವೂ ಶಾಂತಲೆಯ ಮನಕ್ಕೆ ಘಾಸಿ ಮಾಡಿತು. ಅಲ್ಲದೇ ತುಂಬಾ ಮನಸಿಗೆ ಗಾಯ ನೀಡಿದ ಸಾವಾದ ಉದಯಾದಿತ್ಯನ ಮಗನ ಸಾವು ಶಾಂತಲೆಯ ಮನಃಶಾಂತಿಯನ್ನು ಪೂರ್ತವಾಗಿ ಹದಗೆಡಿಸಿತು. ಬೆಳಗೊಳದ ವಿದ್ಯಾಪೀಠದಲ್ಲಿ ಓದುತ್ತಿದ್ದ ಮಗುವನ್ನು ಅದರ ಹುಟ್ಟುಹಬ್ಬದ ಆಚರಣೆಯ ಸಲುವಾಗಿ ಕರೆತಂದು, ಅದು ಕುದುರೆಯ ಕಾಲ್ತುಳಿತಕ್ಕೆ ಸಿಕ್ಕ ಸನ್ನಿವೇಶದ ಉಲ್ಲೇಖವನ್ನು ಲೇಖಕರಿಲ್ಲಿ ವಿವರಿಸುತ್ತಾರೆ.

ಕ್ಷಣಿಕ ನಶ್ವರ ಎಂಬ ಮಾತುಗಳನ್ನು ನಾಗಚಂದ್ರ ಕವಿ ಉದಯಾದಿತ್ಯನ ಮಗನ ಪರಿನಿಷ್ಕ್ರಮಣ ಕಲ್ಯಾಣದಲ್ಲಿ ಹೇಳಿದ ಮೇಲೆ ಶಾಂತಲೆಯ ಮನಸ್ಸಿನಲ್ಲಿ ತುಮುಲ ಯುದ್ಧಕ್ಕೆ ಕಾರಣವಾಗಿ ಬಿಟ್ಟಿತು. ಬದುಕಿನಲ್ಲಿ ತನ್ನವರ ಅಗಲಿಕೆ ಮತ್ತು ಹೊಯ್ಸಳ ಸಾಮ್ರಾಜ್ಯದ ಉತ್ತರಾಧಿಕಾರಿಯಿಲ್ಲದ ಯೋಚನೆಯಿಂದ ಜರ್ಜರಿತಳಾದ ಶಾಂತಲೆ ಪಟ್ಟದರಸಿ ಪಟ್ಟದಿಂದ ಮುಕ್ತಿ ಪಡೆಯುವ ಬಗ್ಗೆ ಯೊಚಿಸುತ್ತಾಳೆ. ಶಾಂತಲೆ ಪಟ್ಟದರಸಿ ಪಟ್ಟ ತೊರೆಯುವ ವಿಷಯ ರಾಜನಲ್ಲಿ ಕೇಳಿಕೊಂಡಾಗ, ವಿಷ್ಣುವರ್ಧನ ಶಾಂತಲೆಗೆ ಒಪ್ಪಿಗೆ ನೀಡುವುದಿಲ್ಲಾ. ಕೆಲ ದಿನಗಳ ನಂತರ ತವರಿಗೆ ಹೋದ ಶಾಂತಲೆ ತಾಯಿಯಿಲ್ಲದ ತವರಿನಲ್ಲಿ ಗಡಿ ರಕ್ಷಣೆಗೆ ಹೋದ ಕಾರಣ ತಂದೆಯೂ ಇರದೆ ಏಕಾಂಗಿಯಾಗಿರುವಂತಾಗುತ್ತದೆ.

ತವರಲ್ಲಿ ಗೆಳತಿ ಸೋಮಲೆ ಅವಳ ಸೇವೆಗೆ ನಿಂತರೂ ಶಾಂತಲೆ ವೈರಾಗ್ಯ ಭಾವ ಹೊಂದಿದ ಕಾರಣ ಶಿವಗಂಗೆಯ ಹೊನ್ನಮ್ಮ ದೇವಿಯ ಮುಂದೆ ಸಲ್ಲೇಖನ ವ್ರತದಲ್ಲಿ ತೊಡಗಿ ಬಿಡುತ್ತಾಳೆ. ವಿಜಯ ಸಾಧಿಸಿ ಪರಿಸ್ಥಿತಿ ಹತೋಟಿಗೆ ಬಂದ ನಂತರ ವಿಷ್ಣುವರ್ಧನ ಮತ್ತು ಶಾಂತಲೆಯ ತಂದೆ ಶಿವಗಂಗೆಗೆ ಮರಳಿ ಅವಳ ವಿಷಯ ತಿಳಿದು, ಅವಳ ಬಳಿ ಬಂದಾಗ ಅವಳ ಸ್ಥಿತಿ ಚಿಂತಾಜನಕವಾಗಿತ್ತು. ಕಡೆಯಲ್ಲಿ ಶಾಂತಲೆ ತನ್ನ ವೈವಾಹಿಕ ಜೀವನದ ಸಾರ್ಥಕತೆಯ ಬಗ್ಗೆ ಪತಿಗೆ ಹೇಳುತ್ತಲೇ ಪತಿ ವಿಷ್ಣುವರ್ಧನನ ತೊಡೆಯ ಮೇಲೆ ಪ್ರಾಣ ಬಿಡುವ ಸನ್ನಿವೇಶದೊಂದಿಗೆ ಕಾದಂಬರಿ ಅಂತ್ಯ ಕಾಣುತ್ತದೆ.

ಈ ಪುಸ್ತಕದಲ್ಲಿ ಖ್ಯಾತ ಸಾಹಿತಿ ಸಾ.ಶಿ.ಮರುಳಯ್ಯನವರು ಶೀರ್ಷಿಕೆಯಲ್ಲಿಯೇ ಶಾಂತಲೆಗೆ ನಾಟ್ಯ ಮಯೂರಿ ಎಂಬ ಅನ್ವರ್ಥನಾಮವಿರಿಸಿ ಅವಳ ಕಲಾರಾಧನೆಗೆ ಉನ್ನತ ಸ್ಥಾನ ನೀಡಿದ್ದಾರೆ. ಶಾಂತಲೆಯ ಅಮೋಘ ನೃತ್ಯ ಕಂಡು ಮೆಚ್ಚಿದ ಹೊಯ್ಸಳೇಶ್ವರ ವಿಷ್ಣುವರ್ಧನ ಪ್ರಥಮ ನೋಟದಲ್ಲಿ ಮೆಚ್ಚಿ ಅವಳ ಬಳಿ ತನ್ನ ಪ್ರೇಮ ನಿವೇದಿಸಿಕೊಂಡು ನಂತರ ಮದುವೆಯಾಗುತ್ತಾನೆ ಅಂತಾ ನನಗೆ ನನ್ನ ಇತಿಹಾಸ ಶಿಕ್ಷಕರು ಹೇಳಿದ ನೆನಪಿತ್ತು. ಈ ಕಾದಂಬರಿಯ ಆರಂಭದಲ್ಲೂ ಲೇಖಕರು ಕೊಂಚ ಅಂತಹಾ ಎಳೆಯನ್ನೇ ತಂದಿದ್ದಾರೆಂಬುದು ನನ್ನ ಇತಿಹಾಸದ ಜಯಶ್ರೀ ಎಂಬ ಶಿಕ್ಷಕರ ನೆನಪು ನನಗೆ ತರಿಸಿತು.

ಶಾಂತಲೆ ಈ ಪಾತ್ರದ ಹೆಸರಲ್ಲೇ ಸೆಳೆತವಿದೆಯೇನೋ ತಿಳಿದಿಲ್ಲಾ ಅಯ್ಯರ್ ಲೇಖನಿಯಲ್ಲರಳಿದ ಶಾಂತಲೆ ಓದಿದ ನಂತರ ಶಾಂತಲೆಯ ಬಗ್ಗೆ ಓದಿದ ಎರಡನೆ ಪುಸ್ತಕವಿದು. ಅಲ್ಲಿನ ಶಾಂತಲೆಗೂ ಇಲ್ಲಿನ ಶಾಂತಲೆಗೂ ಅಂತಹಾ ವ್ಯತ್ಯಾಸವಿಲ್ಲಾ ಅಲ್ಲಿ ಧೀರ್ಘ ವರ್ಣನೆಯಿದ್ದರೆ…ಇಲ್ಲಿ ಹಲವು ವಿಷಯಗಳ ವಿವರಣೆಯಿದೆ ಎಂದೆನಿಸಿತು. ಪ್ರತಿಯೊಬ್ಬ ಲೇಖಕನ ಲೇಖನಿಯಲ್ಲೂ ಅವಳ ಬಗ್ಗೆ ಓದುತ್ತಾ ಹೋದಂತೆ ಈ ಅಪರೂಪದ ತ್ಯಾಗಮಯಿ ಕಲೆಗಾತಿ ನಮ್ಮ ಕನ್ನಡತಿ ಎಂಬ ಹೆಮ್ಮೆ ಮೂಡುವುದಂತು ಹೌದು.

ಅಯ್ಯರ್ ಪುಸ್ತಕದಲ್ಲಿ ಶಾಂತಲೆಯ ಗೆಳತಿ ಮತ್ತು ಸವತಿ ಲಕ್ಷ್ಮಿ ಪಂಡಿತ ಪೆರುಮಲೆಯವರ ಮಗಳಾಗಿ ಬಿಂಬಿತಳಾಗಿದ್ದರೆ ಮರುಳಯ್ಯನವರ ಈ ಕಾದಂಬರಿಯಲ್ಲಿ ರಾಮಾನುಜಾಚಾರ್ಯರ ಆಶ್ರಮದಿಂದ ತಂದು ಸಾಕಿದ ಮಗುವಾಗಿ ಚಿತ್ರಿತವಾಗಿದ್ದಾಳೆ. ಈ ಕಾದಂಬರಿಯಲ್ಲಿ ಹೊಯ್ಸಳ ಶಿಲ್ಪಕಲೆಯ ರುವಾರಿ ಜಕಣಾಚಾರಿಯ ಬಗ್ಗೆ ಮತ್ತವನ ಜೀವನದ ಕೆಲ ಪ್ರಮುಖ ಘಟನೆಗಳ ಉಲ್ಲೇಖವಿದೆ. ಶಾಂತಲೆಯ ಅಂತ್ಯ ಶಿವಗಂಗೆಯ ಬೆಟ್ಟದಿಂದ ಹಾರಿ ಎಂದು ಲೇಖಕ ಅಯ್ಯರ್ ತಮ್ಮ ಪುಸ್ತಕದಲ್ಲಿ ವಿವರಿಸಿದರೆ, ಇಲ್ಲಿ ಲೇಖಕರು ಜಿನ ಧರ್ಮದ ಸಂಪ್ರದಾಯದಲ್ಲೊಂದಾದ ಸಲ್ಲೇಖನ ವ್ಯತದಿಂದ ಪ್ರಾಣ ತ್ಯಾಗ ಮಾಡಿದಳೆಂದು ಉಲ್ಲೇಖಿಸುತ್ತಾರೆ.

ಶಾಂತಲೆಯ ಜೀವನದ ಘಟ್ಟಗಳ ಚಿತ್ರಣದಲ್ಲಿ ಅವರವರು ತಿಳಿದ ಇತಿಹಾಸದ ಪುಟಗಳಲ್ಲಿ ಕಂಡಂತೆ ಬೇರೆ ಬೇರೆ ಲೇಖಕರು ವಿಭಿನ್ನವಾಗಿ ಚಿತ್ರಿಸುತ್ತಾ ಸಾಗಿದರೂ ಅವಳಲ್ಲಿರುವ ಅಪರೂಪದ ಕಲೆಗಾರಿಕೆ, ಗುಣ ಲಕ್ಷಣಗಳು, ಸೌಂದರ್ಯ, ಅವಳ ಸಾಹಸ, ಉದಾತ್ತ ಗುಣಗಳನ್ನು ಚಿತ್ರಿಸುವಾಗ ಸಾಮ್ಯತೆ ತೋರುತ್ತಾರೆ. ಪ್ರತಿಯೊಬ್ಬ ಲೇಖಕನ ಅಂತರಾಳದಲ್ಲೂ ವೈವಿಧ್ಯಮಯವಾದ ಮೂರ್ತರೂಪವಾಗಿ ಕಾಣುವ ಶಾಂತಲೆಯ ಚಿತ್ರಣ ಅವಳ ಮೇಲಿನ ಗೌರವವನ್ನು ಹೆಚ್ಚಿಸುತ್ತಲೇ ಸಾಗುತ್ತದೆ. ಇನ್ನು ಈ ಅಪರೂಪದ ಕನ್ನಡ ನೆಲದ ಪುತ್ರಿ ಶಾಂತಲೆ ಬಗ್ಗೆ ಅರಿತಷ್ಟೂ ಅರಿಯಬೇಕೆಂಬ ಭಾವ ನನ್ನಲ್ಲಿ ಮೂಡುತ್ತದೆ ಎನ್ನಬಹುದು‌. ಲೇಖಕರು ಚಿಕ್ಕದಾಗಿ ಬರೆದಿದ್ದರೂ ಹಲವು ಅರಿಯದ ಹೊಯ್ಸಳ ಸಾಮ್ರಾಜ್ಯದ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ವಿವರಿಸುತ್ತಾರೆ. ಶಾಂತಲೆಯ ಬಗ್ಗೆ ಅರಿಯಬೇಕೆಂದರೆ ಮತ್ತು ಹೊಯ್ಸಳ ಸಾಮ್ರಾಜ್ಯದ ಹಲವು ವಿಶಿಷ್ಟ ವಿಷಯಗಳನ್ನು ತಿಳಿಯಲು ಮರುಳಯ್ಯನವರ “ನಾಟ್ಯ ಮಯೂರಿ” ಪುಸ್ತಕ ಖಂಡಿತಾ ಓದಿ ನೋಡಿ..


  • ಸುಮಾ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW