ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ನವರಾತ್ರಿಯ ವಿಶೇಷ ಕವನಗಳನ್ನು ತಪ್ಪದೆ ಮುಂದೆ ಓದಿ…
ಶೈಲಸುತೆ (ನವರಾತ್ರಿ ಮೊದಲನೇ ದಿನ)
ಹಿಮಗಿರಿ ರಾಜನ ತನುವಲಿ ಜನಿಸಿಹ
ಮಮತೆಯ ಮಾತೆಯೆ ಶೈಲಸುತೆ
ಸುಮಗಳನರ್ಪಿಸಿ ನಮಿಸುವೆನಂಬೆಗೆ
ತಮವನು ಕರಗಿಸು ಮಹಮಾತೆ
ನಂದಿಯನೇರುತ ಬುವಿಯೊಳಗಿಳಿದಿಹೆ
ಕುಂದರದನೆಯೇ ಶಾಂಭವಿಯೆ
ಸ್ಕಂದಮಾತೆಯೆ ಕರುಣಾಶಕ್ತಿಯೆ
ನೊಂದಿಹ ಬಕುತರ ಕರಪಿಡಿಯೆ
ಜಗದೊಳಗೊಳಿತಿಗೆ ಶೂಲವ ಹಿಡಿದಿಹೆ
ಯುಗಯುಗ ಪೂಜಿಪ ಜಗದಾಂಬೆ
ಹಗಲಿರುಳೆನ್ನದೆ ಕಾಯುತ ಬಕುತರ
ಸೊಗವನು ತರುವಳು ದುರ್ಗಾಂಬೆ
ಬಿಳಿಬಣ್ಣದುಡಗೆ ಕರದಲಿ ಕಮಲವು
ನಿಲೆನಿಂತಿರುವೇ ಶಂಕರಿಯೆ
ಇಳೆಯೊಳಗಿಳಿಸುತ ಸುರಿಮಳೆ ಸುರಿಸುತ
ಬೆಳಕನ್ನೆರೆಯುವ ಚಿನ್ಮಯಿಯೆ.
ಬ್ರಹ್ಮಚಾರಿಣಿ (ನವರಾತ್ರಿಯ ಎರಡನೆ ದಿನ)
ಹರನ ಮೆಚ್ಚಿಸೆ ತಪವ ಮಾಡಿದೆ
ತರಿದೆ ದುರುಳರ ಶಕ್ತಿ ರೂಪಿಣಿ
ಎರಗಿ ಪಾದಕೆ ನಮಿಸಿ ಬೇಡುವೆ
ದುರಿತ ಕರಗಿಸು ಬ್ರಹ್ಮಚಾರಿಣಿ
ಬಿಳಿಯ ವಸ್ತ್ರವ ಧರಿಸಿನಿಲ್ಲುತ
ಬೆಳಕನೆರೆಯುತ ಹೊಳೆಸು ನರನನು
ಬಳಿಗೆ ಬೇಡಲು ಬಂದೆನಂಬೆಯೆ
ಕಳೆಯುತಿರುಳನು ನೀಡು ಬೆಳಕನು
ಬಲದ ಕೈಯೊಳು ಜಪದ ಮಾಲೆಯು
ಜಲದ ಪಾತ್ರೆಯು ಎಡದ ಕೈಯೊಳು
ನೆಲೆಸು ಮನೆಯೊಳು ತಾಯಿ ಗಿರಿಜೆಯೆ
ಫಲಕೆ ಬಿಲ್ವದ ಎಡೆಯನಿಡುವೆನು
ತುಪ್ಪದೀಪವ ಬೆಳಗುತೀದಿನ
ಒಪ್ಪ ಮಲ್ಲಿಗೆ ಮಾಲೆ ಮುಡಿಸುವೆ
ತಪ್ಪು ತಿದ್ದುತಲೊಪ್ಪೊ ಮಾರ್ಗವ
ಬೆಪ್ಪು ತನವನು ಅಳಿಸಿ ತೋರಿದೆ.
ಚಂದ್ರ ಘಂಟಾ (ನವರಾತ್ರಿ ಮೂರನೇ ದಿನ)
ಜೈತಪುರದಿ ನೆಲೆಸಿನಿಂತು
ಭೀತಿತೊಡೆವ ಬಕುತಬಂಧು
ಭೂತ ಚೇಷ್ಟೆ ತರಿವ ತಾಯಿ ಚಂದ್ರ ಘಂಟಿಯು
ಪ್ರೀತಿ ಭರಿತ ತಾಯಿ ಮಡಿಲು
ನೀತಿ ನಿಯಮದಿಂದ ಪೂಜೆ
ಘಾತುಕಗಳು ಬಾರದಂತೆ ಕಾಯ್ವಳಂಬೆಯು
ಮಸ್ತಕದೊಳು ಚಂದ್ರಘಂಟ
ಹಸ್ತದೊಳಗೆ ಹಲವು ಕಯ್ದು
ಬೇಸ್ತು ಬೀಳಿಸುತ್ತ ದುರುಳರಟ್ಟಹಾಸವ
ಅಸ್ತುವೆನ್ನುತಾಳೆ ತಾಯಿ
ಗಸ್ತು ತಿರುಗಿ ರಾತ್ರಿಯಲ್ಲು
ಶಿಸ್ತಿನಲ್ಲಿ ನೇಮ ಪಾಲಿಸುತ್ತ ಪೂಜಿಸೆ
ಹೊಳೆವ ಸಿಂಹವೇರಿ ಬಂದು
ಬಲಿಗೆ ದುಷ್ಟರೆದೆಯ ಸೀಳಿ
ಸಲಹುತಿಹಳು ಶಿಷ್ಟರನ್ನು ವರವನೆರೆಯುತ
ಒಲಿವಳಿಲ್ಲೆ ನಲಿವಿನಿಂದ
ನೆಲೆಸಿ ಧರೆಯ ಮಡಿಲಿನಲ್ಲಿ
ನಳಿನ ಪುಷ್ಪವೆರೆವೆ ತಾಯಿ ಸಲಹು ಬಕುತನ.
ಕೂಷ್ಮಾಂಡ ದೇವಿ (ನವರಾತ್ರಿ ನಾಲ್ಕನೆ ದಿನ)
ಶಿವನರ್ಧಾಂಗಿಯೆ
ಭವಭಯಹಾರಿಯೆ
ಭವದೊಳು ಸೃಷ್ಟಿಯ ತಂದವಳೆ
ಹವನದೊಳಿಳಿಯುತ
ಬುವಿಯೊಳಗೇಳುತ
ತವಕಿಸಿ ಹರನನು ಪಡೆದವಳೆ
ಅದ್ದುತಲರಿವಿಗೆ
ಸಿದ್ಧಿಯನೆರೆಯುತ
ಬದ್ಧತೆ ತೋರುವ ಕೂಷ್ಮಾಂಡೆ
ಪೆದ್ದನ ಮನವಿದು
ತಿದ್ದುತಲನುದಿನ
ಬುದ್ಧಿಯನೆರೆದು ಕಾಪಾಡೆ
ಅಷ್ಟಭುಜಾಂಗನೆ
ಮುಷ್ಟಿಯೊಳೆಲ್ಲವ
ಸೃಷ್ಟಿಯ ಮಾಡಿದ ಮಹತಾಯಿ
ಇಷ್ಟದಿ ಪೂಜಿಸೆ
ಕಷ್ಟವ ಕಳೆವಳು
ಪುಷ್ಟಿಯ ಸಿರಿತನವೆರೆಯುತಲಿ.
ಸ್ಕಂದ ಮಾತೆ (ನವರಾತ್ರಿ ಐದನೇ ದಿನ)
ಬಾಗುತ ನಮಿಸಿರೆ ಮೂಜಗ ಮಾತೆಗೆ
ನೀಗುವಳೆಲ್ಲರ ದುರಿತಗಳ
ಕೂಗುತ ಕರೆದರೆ ಪೊರೆಯುವಳಲ್ಲೆಯೆ
ನೀಗುತ ಮಕ್ಕಳ ಕಳವಳವ
ಸ್ಕಂದನ ಜನನಕೆ ಕಾರಣಳಾಗುತ
ತಂದಳು ಲೋಕಕೆ ಹಿತವನ್ನು
ಮಂದಿರದೊಳಗಡೆ ಪೂಜಿಪರೆಲ್ಲರು
ಬಂಧುರ ಮಕ್ಕಳ ಬಾಳಿನ್ನು
ಬಾಳೆಯ ಹಣ್ಣಿನ ಪಂಚಾಮೃತವನು
ಕೇಳುವಳೀಕೆಯು ಸುತರಲ್ಲಿ
ಬಾಳೆಯ ಫಲವನು ತೃಪ್ತಿಯಲುಣ್ಣುತ
ಕೇಳಿದ ವರವನ್ನೆರೆಯುತಲಿ
ಕೇಸರಿ ವಾಹನವೇರುತ ಬರುವಳು
ನೇಸರನಂತೆಯೆ ಜಗದೊಳಗೆ
ಈಶನ ಮಡದಿಯು ಶಾಂತಿಯ ರೂಪಳು
ತೋಷವ ಕೊಡವಳು ಬಾಳೊಳಗೆ.
ಕಾತ್ಯಾಯಿನಿ ನಮಃ (ನವರಾತ್ರಿಯ ಆರನೇ ದಿನ)
ದುಷ್ಟರ ಕುಲವನು ವಧಿಸಿದ ತಾಯಿಯೆ
ಕಾತ್ಯಾಯಿನಿಯೆ ನಮೋನಮಃ
ಇಷ್ಟದಿ ಪೂಜಿಪ ಬಕುತರ ಹರಸುವ
ಕಾತ್ಯಾಯಿನಿಯೆ ನಮೋನಮಃ
ಸಾಧನೆಗೈಯಲು ಬೇಡಿರೆ ಬಕುತನು
ರಕ್ಷಿಪ ತಾಯಿ ನಮೋನಮಃ
ಭಾದಿಪ ಕಷ್ಟಕೆ ಹರಕೆಯ ಕಟ್ಟಿರೆ
ರಕ್ಷಿಪ ತಾಯಿ ನಮೋನಮಃ
ದೀಪವ ಬೆಳಗಿಸಿ ಜೇನನು ನೀಡಿರೆ
ತೃಪ್ತಿಯ ಪಡುವಳು ಮಹಮಾತೆ
ಧೂಪದಿ ಬೆಳಗುತ ಹೂಗಳಲರ್ಚಿಸೆ
ತೃಪ್ತಿಯ ಪಡುವಳು ಮಹಮಾತೆ
ಮಹಿಷನ ವಧಿಸಲು ಜನಿಸಿದ ತಾಯಿಗೆ
ತುಪ್ಪದಲಾರತಿ ಬೆಳಗುವೆವು
ಸಹನೆಯ ಮೂರ್ತಿಯು ಸುಖಗಳನೆರೆವಳು
ತುಪ್ಪದಲಾರತಿ ಬೆಳಗುವೆವು.
ಕಾಳರಾತ್ರಿ (ನವರಾತ್ರಿಯ ಏಳನೇ ದಿನ)
ಕಾಳರಾತ್ರಿ ಬಾಳಲಿಳಿದು
ಖೂಳರಟ್ಟಹಾಸ ಮಾಡೆ
ತಾಳುತುಘ್ರರೂಪದಲ್ಲಿ ಲೀಲೆ ತೋರಿದೆ
ತೋಳ ಬಲದಿ ದುರುಳರಟ್ಟಿ
ಕಾಳರಾತ್ರಿಯಾಗಿ ಬಂದು
ಪಾಲಿಸುತಲಿ ಸೊಗವನೆರೆದು ಬಾಳು ಬೆಳಗಿದೆ
ಕೊರಳಿನಲ್ಲಿ ರುಂಡ ಮಾಲೆ
ಹರಡಿಕೊಂಡ ಕೇಶರಾಶಿ
ಕರಗಳಲ್ಲಿ ಖಡ್ಗ ಹಿಡಿದ ಲೋಕ ಮಾತೆಯೆ
ಶರಣು ಬಂದ ಬಕುತ ಗಣಕೆ
ಮರಣ ಭಯವ ಹರಣ ಮಾಡಿ
ಕರುಣೆಯಿಂದ ಪೊರೆವ ತಾಯೆ ದೇವಿ ದುರ್ಗೆಯೆ
ಕೂಗಿ ಕಿರುಚಿ ದುಷ್ಟ ತನದಿ
ಬೀಗಿದಂಥ ರಕ್ಕಸರನು
ಬಾಗಿಸುತ್ತಲಲ್ಲೆ ವಧಿಸಿದಂತ ದೇವಿಯೆ
ಬಾಗಿನಿಂತೆ ನಿನ್ನ ಬಳಿಯೆ
ಮಾಗಿದಂತ ಕಾಯವಿದುವೆ
ನೀಗಿ ಕಷ್ಟ ವರವನೆರೆದ ಪೂಜ್ಯ ಮಾತೆಯೆ
ಗೌರಿ ಮಾತೆ (ನವರಾತ್ರಿ ಎಂಟನೇ ದಿನ)
ತಾಯಿ ಶಂಕರಿ ಶಕ್ತಿ ರೂಪಿಣಿ
ಕರುಣೆ ತೋರಿಸು ಮಾತೆಯೆ
ಕಾಯುತೆಮ್ಮನು ಕರುಣೆಯಿಂದಲಿ
ಹರಸು ತಾಯೆ ಗೌರಿಯೆ
ತ್ರಿಜಗ ಪೂಜಿತೆ ಹರನ ಸತಿಯೇ
ನರನ ದುಃಖವ ನೀಗಿಸು
ನಿಜದಿ ಮಾಡುವೆ ಚರಣ ಸೇವೆಯ
ಮಗನ ಬಾಳನು ಬೆಳಗಿಸು
ವೃಷಭ ವಾಹನವೇರಿ ಬರುವಳೆ
ಬಿಳಿಯ ಹೂಗಳ ನೀಡುವೆ
ಉಷೆಯ ಕಾಲದಿ ಪೂಜಿ ನಮಿಸುವೆ
ಕವಿದ ಕತ್ತಲ ಕರಗಿಸೆ
ಶೂಲ ಡಮರನು ಹಿಡಿದು ಕುಳಿತಿಹೆ
ಶ್ವೇತ ವಸ್ತ್ರವನುಟ್ಟಿಹೆ
ಬಾಳಿನೊಳಗಡೆ ಸಿರಿಯನೆರೆಯುತ
ಬಕುತರೆಲ್ಲರ ಸಲಹುವೆ.
ಸಿದ್ಧಿದಾತ್ರಿ (ನವರಾತ್ರಿಯ ಒಂಬತ್ತನೆ ದಿನ)
ಕಮಲ ಪೀಠದಿ ಸೌಮ್ಯ ವದನದಿ
ಸಿದ್ಧಿಯೆರೆಯವ ಮಾತೆಯೆ
ಸುಮಗಳೆರೆಯುವೆ ನಿನ್ನ ಪಾದಕೆ
ಸಲಹು ನಮ್ಮನು ಗೌರಿಯೆ
ನವಮಿ ದಿನದೊಳು ಪೂಜೆ ಬಕುತನು
ಮನದೊಳಿಂಗಿತ ಶುಭ ಫಲ
ಭವಣೆ ನೂರಿರೆ ತಾಯಿಯೊಲವಿರೆ
ಬಾಳ ಪಯಣವು ಮಂಗಳ
ಹಲವು ಸಿದ್ಧಿಗೆ ಯೋಗ್ಯ ಕಾಲವು
ಸಿದ್ಧಿಪುರುಷರಿಗೌತಣ
ಫಲವ ನೀಡುತ ಸಿದ್ಧಿದಾತ್ರಿಯು
ಕಳೆವಳೆಲ್ಲರ ದುರ್ಗುಣ
ಹರನ ಪ್ರಿಯಸತಿ ಲೋಕ ಪೂಜಿತೆ
ನಿನ್ನ ಧ್ಯಾನದಿ ಸಿದ್ಧಿಯು
ಕರುಣೆ ಮಾತ್ರದಿ ಜಗವು ಬೆಳಗಿತು
ನಿನ್ನ ಕೊರಳಿಗೆ ಮಾಲೆಯು.
- ಚನ್ನಕೇಶವ ಜಿ ಲಾಳನಕಟ್ಟೆ
