ನವರಾತ್ರಿ ಮೊದಲ ದಿನದೊಳಗುದಿಸಿ ಬಂದವಳು, ಶೈಲ ಪುತ್ರಿಯು ತಾಯಿ ನಮ್ಮ ಮಾತೆ…ನವರಾತ್ರಿ ಪ್ರಯುಕ್ತ ಹಿರಿಯ ಕವಿಯತ್ರಿ ಬಿಟ್ಟೀರ ಚೋಂದಮ್ಮ ಶಂಭು ಅವರು ಬರೆದ ವಿಶೇಷ ಕವನವನ್ನು ತಪ್ಪದೆ ಮುಂದೆ ಓದಿ…
ನವರಾತ್ರಿ ಮೊದಲ ದಿನದೊಳಗುದಿಸಿ ಬಂದವಳು
ಶೈಲ ಪುತ್ರಿಯು ತಾಯಿ ನಮ್ಮ ಮಾತೆ
ಧವಳಗಿರಿಯಿಂದಿಳಿದು ಧರೆಯ ಬೆಳಗುತ ಬಂದೆ
ಅಶ್ವಯುಜ ಮಾಸ ದಿನ ಶುಕ್ಲ ಪಾಡ್ಯ
ಅಂದು ದಕ್ಷನ ಪುತ್ರಿ ದಾಕ್ಷಾಯಿಣೀ ದೇವಿ
ಶಿವನಿಂದೆ ತಾಳದೇ ನೋವಿನಿಂದ
ಬಂಧುಬಳಗದ ಮುಂದೆ ನಿಂದೆ ಮಾತನು ಕೇಳಿ
ನೊಂದು ಬಿದ್ದಳು ಯಜ್ಞ ಕುಂಡದಲ್ಲಿ
ವಿಷಯ ತಿಳಿಯಲು ಹರನು ತಾಪದಲಿ ಕುದಿಯುತ್ತ
ಭೈರವನ ಕಳುಹಿದನು ಕೋಪದಿಂದ
ವಿಷಕಂಠನಿಂದುಧರ ರೌದ್ರ ರೂಪವ ತಾಳಿ
ತರಿದು ಹಾಕಿದ ದಕ್ಷ ರುಂಡವನ್ನು
ಅತಿ ಮೋಹದಲಿ ಶಿವನು ಮತಿಗೆಟ್ಟು ಬುವಿಯೊಳಗೆ
ಸುತ್ತುತಿದ್ದನು ಹೆಣವ ಹೆಗಲಿಗಿಟ್ಟು
ಸತಿ ಮೋಹ ಬಿಡಲೆಂದು ವಿಧವಿಧದಿ ಸಂತೈಸಿ
ತುಂಡರಿಸಿದನು ಹರಿಯು ಚಕ್ರದಿಂದ
ಅಗರಾಜನರಸಿಯಳ ಮಡಿಲಿನೊಳಗಂಕುರಿಸಿ
ಮತ್ತೆ ಹರನನು ಸೇರೆ ತವಕದಲ್ಲಿ
ಜಗಮಗಿಸಿ ಜಗದೊಡತಿ ಹೈಮವತಿಯುದಿಸಿದಳು
ಹಿಮವಂತನರಮನೆಯ ಮುದ್ದು ಕುವರಿ
- ಬಿಟ್ಟೀರ ಚೋಂದಮ್ಮ ಶಂಭು, ಬೆಂಗಳೂರು.
