ಭಗವತಿ ಶಾಂಭವಿಯ ಐದನೇ ಸ್ವರೂಪವೇ ಸ್ಕಂದ ಮಾತಾ, ಮಹಾವೀರ ಪರಾಕ್ರಮಿ, ದೇವತೆಗಳ ಸೇನೆಯ ದಳಪತಿಯಾಗಿ ಪ್ರಸಿದ್ಧವಾದ ಘನಘೋರವಾದ ದೇವಾಸುರ ಸಂಗ್ರಾಮದಲ್ಲಿ ದಿಗ್ವಿಜಯ ಸಾಧಿಸಿದ ಭಗವಾನ್ ಸ್ಕಂದನ (ಕುಮಾರ ಕಾರ್ತಿಕೇಯ, ಷಣ್ಮುಖನ ) ತಾಯಿಯಾಗಿರುವ ಕಾರಣದಿ ‘ಸ್ಕಂದಮಾತಾ’ ನಾಮಾಂಕಿತಳಾಗಿ ಬ್ರಹ್ಮಾಂಡದಿ ಪ್ರಖ್ಯಾತಿ ಪಡೆದಿದ್ದಾಳೆ. ‘ಸ್ಕಂದಮಾತಾ’ ಮಹಿಮೆಯನ್ನು ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಮ್ । ಶುಭದಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ॥
ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ| ರೂಪೇಣ ಸಂಸ್ಥಿತಾ ।
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ॥
ದುರ್ಗಾವತಾರದ ಐದನೇ ಸ್ವರೂಪವಾದ ಮಾತೆಯ ಆರಾಧನೆಯನ್ನು, ನವರಾತ್ರಿಯ ಐದನೇ ದಿನ ಮಾಡಲಾಗುವದು, ಈ ದಿನವು ಸಾಧಕನ ಮನಸ್ಸು ‘ವಿಶುದ್ಧ’ ಚಕ್ರದಲ್ಲಿ ನಿಲ್ಲುವದು.ಮಾತೆಯ ಮೂರ್ತಿಯಲ್ಲಿ ಸ್ಕಂದನು ಬಾಲರೂಪದಿ ಜನನಿಯ ತೊಡೆಯಮೇಲೆ ಪವಡಿಸಿರುವನು, ತಾಯಿಯು ಚತುರ್ಭುಜದಿ ಕ್ರಮಶಃ ಒಂದು ಕೈಯಿಂದ ಪುತ್ರ ಸ್ಕಂದನನ್ನು ಹಿಡಿದು, ದ್ವಿಕರದಲ್ಲಿ ಕಮಲ ಪುಷ್ಪವನ್ನು ಪಿಡಿದು,ಮತ್ತೊಂದು ಕೈಯಿಂದ ವರಮುದ್ರೆ ನೀಡುತ್ತಿಹಳು, ಶ್ವೇತವರ್ಣದ ದೇಹ ಕಾಂತಿಯ ಹೊಂದಿ, ಕಮಲಾಸನದಿ ಸಿಂಹವಾಹನದಿ ವಿರಾಜಮಾನವಾಗಿರುವಳು, ಇದೆ ಕಾರಣಕ್ಕೆ ಪದ್ಮಾಸನಾದೇವಿ ಎಂದು ಕರೆಯುವರು.
ಸೂರ್ಯಮಂಡಲದ ಅಧಿಷ್ಠಾತ್ರಿಯಾದ ದುರ್ಗಾದೇವಿ ಆರಾಧನಾ ನವರಾತ್ರಿಯ ಐದನೇ ದಿನವು ಬಹಳ ಮಹತ್ವದಾಗಿದೆ, ವಿಶುದ್ಧ ಚಕ್ರಧಿ ನೆಲೆನಿಂತ ಮನಸ್ಸುಳ್ಳ ಸಾಧಕನ ಸಮಸ್ತ ಬಾಹ್ಯ ಕ್ರಿಯೆಗಳು ( ಚಿತ್ತವೃತ್ತಿ )ಲೋಪವಾಗುತ್ತವೆ,ಅವನು ಎಲ್ಲಾ ಲೌಕಿಕ, ಸಂಸಾರಿಕ,ಬಂಧಗಳಿದ ಮುಕ್ತನಾಗಿ ‘ವಿಶುದ್ಧ’ಚೈತನ್ಯದತ್ತ ಸಾಗಿ, ಪದ್ಮಾಸನಾ ಸ್ಕಂದಮಾತೆಯ ಸ್ವರೂಪದಲ್ಲಿ ಸಂಪೂರ್ಣ ತಲ್ಲೀನನಾಗುತ್ತಾನೆ. ಈ ಸಮಯ ಸಾಧಕ ಬಲು ಎಚ್ಚರಿಕೆಯಿಂದ ತನ್ನ ಧ್ಯಾನ – ವೃತ್ತಿಗಳಲ್ಲಿ ಏಕಾಗ್ರವಿರಿಸಿಕೊಡು ಸಾಧನೆಯ ಪಥದಿ ಸಾಗುವದು ಅವಶ್ಯವಾಗಿದೆ.
ಪಾರ್ವತಿ ಮಾತೆಯು ಸ್ಕಂದ ಮಾತೆ ಎನ್ನಿಸಿದ್ದು ಹೇಗೆ?
ಭೀಕರ, ಭಯಂಕರ ರಾಕ್ಷಸನಾದ ತಾರಕಾಸುರ ಚಿರಂಜೀವಿಯಾಗಲು ಬಯಸಿ ಬ್ರಹ್ಮನ ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಸಂತುಷ್ಟಗೊಂಡ ಬ್ರಹ್ಮ ಪ್ರತ್ಯಕ್ಷನಾಗಿ ವರ ಏನು ಬೇಕೆಂದು ಕೇಳಿದಾಗ ತಾರಕಾಸುರ ʼನಾನು ಅಮರನಾಗಬೇಕು. ನನಗೆ ಸಾವು ಬರಬಾರದುʼ ಎನ್ನುತ್ತಾನೆ. ಆದರೆ ಬ್ರಹ್ಮ ದೇವರು ಈ ವರವನ್ನ ನೀಡಲು ನಿರಾಕರಿಸುತ್ತಾನೆ. ಸಾವಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾನೆ.
ಆಗಿನ್ನೂ ಶಿವನು ಪಾರ್ವತಿಯನ್ನ ವರಿಸಿರಲಿಲ್ಲ. ತಾರಕಾಸುರ ತನ್ನ ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಾನೆ. “ಶಿವನು ಎಲ್ಲದರಲ್ಲೂ ವಿರಕ್ತ. ಅವನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಆಲೋಚನೆ ಮಾಡುತ್ತಾನೆ”. ಬಳಿಕ ಬ್ರಹ್ಮದೇವರಲ್ಲಿ, ʼನನಗೆ ಸಾವು ಬರುವುದೇ ಆದಲ್ಲಿ, ಶಿವನ ಪುತ್ರನಿಂದ ಬರಲಿʼ ಎಂದು ವರ ಬೇಡುತ್ತಾನೆ. ಶಿವ ಹೇಗೂ ಮದುವೆಯಾಗಲಾರ, ಅವನಿಗೆ ಮಗನೂ ಹುಟ್ಟಲಾರ ಎಂದೇ ತಾರಕಾಸುರ ಭಾವಿಸಿರುತ್ತಾನೆ. ತಾರಕಾಸುರ ಕೇಳಿದ ವರಕ್ಕೆ ಬ್ರಹ್ಮದೇವರು ಅಸ್ತು ಎನ್ನುತ್ತಾರೆ. ಅಲ್ಲಿಂದ ತಾರಕಾಸುರನ ಕಾಟ ಮಿತಿಮೀರುತ್ತದೆ. ದುಷ್ಟತನ ವಿಪರೀತವಾಗುತ್ತದೆ. ಅದನ್ನ ನೋಡಿದ ದೇವಾನುದೇವತೆಗಳೆಲ್ಲ ವಿಷ್ಣುವಿನ ಬಳಿ ಬಂದು ಅಳಲು ತೋಡಿಕೊಳ್ಳುತ್ತಾರೆ. ಆಗ ವಿಷ್ಣುವೇ ಇದಕ್ಕೊಂದು ಪರಿಹಾರ ಸೂಚಿಸುತ್ತಾನೆ. ಅವನಿಗೆ ದಕ್ಷ ಪ್ರಜಾಪತಿಯ ಮಗಳು ಸತಿ ಬೆಂಕಿಗೆ ಹಾರಿ, ಮರುಜನ್ಮದಲ್ಲಿ ಹಿಮಾಲಯನ ಪುತ್ರಿಯಾಗಿ ಹುಟ್ಟಿ, ಶಿವನನ್ನು ವರಿಸಲು ಕಠಿಣ ತಪಸ್ಸು ಆಚರಿಸುತ್ತಿರುವುದು ಗೊತ್ತಿರುತ್ತದೆ.
ವಿಷ್ಣುವೇ ಶಿವ ಮತ್ತು ಪಾರ್ವತಿಯರ ಮದುವೆ ಬೇಗನೇ ಆಗುವಂತೆ ಮಾಡುತ್ತಾನೆ. ಬಳಿಕ ಶಿವ-ಪಾರ್ವತಿಗೆ ಸ್ಕಂದ ಅಂದರೆ ಕಾರ್ತಿಕೇಯ ಹುಟ್ಟುತ್ತಾನೆ. ಸ್ಕಂದನ ಅಮ್ಮನಾಗಿ ಪಾರ್ವತಿ ಸ್ಕಂದ ಮಾತೆಯಾಗುತ್ತಾಳೆ. ಹಾಗೇ, ಕಾರ್ತಿಕೇಯನೇ ಮುಂದೆ ತಾರಕಾಸುರನ ಹತ್ಯೆ ಮಾಡುತ್ತಾನೆ..
ಸ್ಕಂದ ಮಾತೆಯ ಪೂಜಾ ವಿಧಿ ಹೇಗೆ?
ತಾಯಿ ಸ್ಕಂದ ಮಾತೆಯು ಪಾವಿತ್ರ್ಯ, ಸಹಾನುಭೂತಿ ಮತ್ತು ಸರ್ವೋಚ್ಛ ದೈವಿಕತೆಯ ಶಕ್ತಿ ಹೊಂದಿರುವವಳು. ಪರಿಶುದ್ಧ ಭಕ್ತಿ, ಪ್ರೀತಿಯಿಂದ ಯಾರು ಸ್ಕಂದಮಾತೆಯನ್ನ ಪೂಜಿಸುತ್ತಾರೋ, ಅವರು ಅತ್ಯಾನಂದ ಮತ್ತು ಸಂತೋಷವನ್ನ ಹೊಂದುತ್ತಾರೆ. ಭಕ್ತರ ಬಯಕೆಗಳನ್ನ ಈಡೇರಿಸುವ ಈ ತಾಯಿಯನ್ನ ಹೀಗೆ ಪೂಜಿಸಿ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಪೂಜಾ ಕೋಣೆಯನ್ನ ಸ್ವಚ್ಛ ಮಾಡಿಕೊಳ್ಳಿ.
ಹೊಸ ಅಥವಾ ಮಡಿ ಬಟ್ಟೆಯನ್ನ ಧರಿಸಿ. ಸ್ಕಂದ ಮಾತೆಗೆ ಬಿಳಿ ಬಣ್ಣದ ಬಟ್ಟೆ ಧರಿಸಿ ಪೂಜಿಸುವುದು ಶ್ರೇಷ್ಠ ದೇವಿ ವಿಗ್ರಹಕ್ಕೆ ಸ್ಕಂದಮಾತೆಯಂತೆ ಅಲಂಕಾರ ಮಾಡಿ. ಹೂವಿನ ಮಾಲೆ,ಅರಿಶಿಣ-ಕುಂಕುಮ ಹಾಕಿ.
ದೇವಿ ವಿಗ್ರಹದ ಎದುರು ತುಪ್ಪದ ದೀಪ ಹಚ್ಚಿ. ವೀಳ್ಯದೆಲೆ ಇಡಿ. ಸ್ಕಂದಮಾತೆಯ ನೈವೇದ್ಯಕ್ಕೆ ಬಾಳೆಹಣ್ಣು ಇರಲಿ, ದೇವಿ ಪೂಜೆ ಮಾಡುವಾಗ ಸ್ಕಂದ ಮಾತೆ, ಮಂತ್ರವನ್ನ ಪಠಿಸಿ. ನಿರ್ಮಲ ಭಕ್ತಿಯಿಂದ ಪೂಜಿಸುವ ಸಾಧಕನ ಸುತ್ತಲು ಅಧಿಷ್ಠಾತ್ರಿಯ ಅಲೌಕಿಕ ಪ್ರಭಾಮಂಡಲವು ಅದೃಶ್ಯ ಹರಡಿಕೊಂಡು ಅವನ ಯೋಗಕ್ಷೇಮವನ್ನು ನಿರ್ವಹಿಸುತ್ತದೆ.ಆದರಿಂದ ನಾವು ಏಕಾಗ್ರಭಾವದಿಂದ ಮಾತೆಗೇ ಶರಣಾಗೋಣ.
ನಾಳಿನ ಸಂಚಿಕೆಯಲ್ಲಿ ಜಗನ್ಮಾತೆಯ ಆರನೇ ಸ್ವರೂಪ ಕಾತ್ಯಾಯಿನೀ ದೇವಿ ಮಹಿಮೆ ತಿಳಿಯೋಣ.
ದುರ್ಗೆಯ ಮಹಿಮೆ ಹಿಂದಿನ ಸಂಚಿಕೆಗಳು :
- ನವದುರ್ಗೆಯರಲ್ಲಿ ಮೊದಲನೆಯ ಶಕ್ತಿ ಶೈಲಪುತ್ರಿ
- ನವದುರ್ಗೆಯ ಎರಡನೇಯ ಸ್ವರೂಪ ಬ್ರಹ್ಮಚಾರಿಣಿ
- ಆದಿಶಕ್ತಿಯ ಮೂರನೇ ಸ್ವರೂಪ ಚಂದ್ರಘಂಟಾ ದೇವಿ
- ಚಿಚ್ಛಕ್ತಿ ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಮಾಂಡಾದೇವಿ
- ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ ಜಿಲ್ಲಾ, ಕಲಬುರ್ಗಿ.
