ದಾನವ ಘಾತಿನಿ ಜಗದಂಬೆಯ ಆರನೇ ಸ್ವರೂಪವೇ ‘ಕಾತ್ಯಾಯಿನಿ’

ಪರಮೇಶ್ವರಿಯ ಆರನೇ ಸ್ವರೂಪವೇ ಕಾತ್ಯಾಯಿನಿ. ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಉಪಾಸನೆ ಮಾಡಲಾಗುವದು ಈ ದಿನ ಸಾಧಕನ ಮನಸ್ಸು ‘ಆಜ್ಞಾ’ ಚಕ್ರದಲ್ಲಿ ನೆಲೆಗೊಳ್ಳುವುದು. ‘ಕಾತ್ಯಾಯಿನಿ’ ಮಹಿಮೆಯನ್ನು ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಚಂದ್ರಹಾಸೋಜ್ಜವಲಕರಾ ಶಾರ್ದೂಲವರವಾಹನಾ ।
ಕಾತ್ಯಾಯನಿ ಶುಭಂ
ದಧ್ಯಾದೇವಿ ದಾನವಘಾತಿನಿ ।।

ಪೌರಾಣಿಕ ಇತಿಹಾಸ ಪ್ರಕಾರ ಪ್ರಖ್ಯಾತ ಮಹಾ ಋಷಿಗಳಾದ ಕಾತ್ಯಾಯನರು, ಜಗನ್ಮಾತೆಯ ಪರಮ ಭಕ್ತರು. ಇವರು ಭಗವತಿ ಪರಾಂಬಿಕೆಯು ತಮ್ಮ ಮನೆಯಲ್ಲಿ ಪುತ್ರಿಯಾಗಿ ಹುಟ್ಟಬೇಕೆನ್ನೋ ಮಹಾದಿಚ್ಛೆಯೊಂದಿಗೆ ಮಾತೆಯ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದಾಗ, ಮಹರ್ಷಿಯ ತಪಸ್ಸಿಗೆ ಪ್ರಸನ್ನಳಾದ ಭವಾನಿಯು, ” ಮಹರ್ಷಿಗಳೇ ತಮ್ಮ ಮನದಿಂಗಿತವು ನೆರವೇರುವದೆಂದು ಅಭಯವನಿತ್ತಳು.

ಮುಂದೆ ಕೆಲ ಕಾಲಾಂತರದಿ ದುಷ್ಟ, ದಾನವ, ರಾಕ್ಷಸ ಮಹಿಷಾಸುರನ ದೌರ್ಜನ್ಯದ ಅಟ್ಟಹಾಸ ಅತಿಯಾದಾಗ ಇಂದ್ರ, ಕುಬೇರ, ಯಮ, ನಿರುತಿ, ವಾಯು, ಅಗ್ನಿ, ವರುಣ, ಮೊದಲಾದ ದೇವತೆಗಳೆಲ್ಲ ಕೂಡಿ, ಬ್ರಹ್ಮನ ಹತ್ತಿರ ಹೋಗಿ ತಮ್ಮ ಅಳಲನ್ನು ಹೇಳಿಕೊಂಡಾಗ ಬ್ರಹ್ಮದೇವ, ಇದು ನನ್ನಿಂದ ಬಗೆ ಹರಿಯದ ಸಮಸ್ಯೆಯಂದು ಎಲ್ಲರನ್ನು ಕರೆದುಕೊಂಡು ವಿಷ್ಣುವಿನ ಬಳಿ ಬಂದು ಸಹಾಯ ಕೇಳಿದಾಗ ವಿಷ್ಣುದೇವ, ದೇವತೆಗಳ ದಂಡಿನ ಸಮೇತ ಶಿವನ ಬಳಿ ಎಲ್ಲರನ್ನು ಕರೆದುಕೊಂಡು ಬಂದು, ದುರುಳ ಮಹಿಷನ ದುಷ್ಕೃತ್ಯವನು ಹೇಳಿದಾಗ, ಕ್ರೋದಗೊಂಡ ಶಿವಾಜ್ಞೆಯ ಮೇರೆಗೆ, ಬ್ರಹ್ಮ,ವಿಷ್ಣು, ಶಿವ ಮತ್ತಿತರ ದೇವರುಗಳು ತಮ್ಮಯ ಕಣ್ಣುಗಳು ಮತ್ತು ಮುಖಗಳಿಂದ ಅನಂತ ಜ್ವಾಲೆಗಳನ್ನು ಹೊರಸೂಸಿದರು, ಅದರಿಂದ ಕಾತ್ಯಾಯಿನಿ ಮಾತೆಯು ಆವಿಷ್ಕಾರಗೊಂಡಳು. ಸಾವಿರ ಸೂರ್ಯರಂತೆ ಪ್ರಕಾಶಮಾನವಾಗಿದ್ದಳು. ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಹದಿನೆಂಟು ತೋಳುಗಳನ್ನು ಹೊಂದಿದ್ದಳು. ಶಿವನು ಅವಳಿಗೆ ತನ್ನ ತ್ರಿಶೂಲವನ್ನು, ವಿಷ್ಣುವು, ಸುದರ್ಶನ ಚಕ್ರವನ್ನು, ವರುಣ ಶಂಖವನ್ನು , ಅಗ್ನಿಯು, ಬಾಣವನ್ನು , ವಾಯುವು ಬಿಲ್ಲು , ಸೂರ್ಯನು ಬಾಣಗಳಿಂದ ತುಂಬಿದ ಬತ್ತಳಿಕೆಯನ್ನು, ಇಂದ್ರನು ವಜ್ರಾಯುಧವನ್ನು , ಕುಬೇರ ಗದೆಯನ್ನು , ಬ್ರಹ್ಮನು ಜಪಮಾಲೆ, ಕಮಂಡಲು, ಕಾಲನು ಗುರಾಣಿ ಮತ್ತು ಕತ್ತಿಯನ್ನು, ವಿಶ್ವಕರ್ಮನನ್ನು ಯುದ್ಧ ಕೊಡಲಿ ಮತ್ತು ಇತರ ಆಯುಧಗಳನ್ನು ಕೊಟ್ಟನು. ಹೀಗೆ ದೇವತೆಗಳ ಸಂಯೋಜಿತ ಶಕ್ತಿಗಳಿಂದ ಅವಳು ಸೃಷ್ಟಿಯಾದ ಶಕ್ತಿಯ ದಿವ್ಯ ತೇಜಪುಂಜವು ಕಾತ್ಯಾಯನ ಋಷಿಯ ಆಶ್ರಮದಲ್ಲಿ ಸ್ಫಟಿಕೀಕರಣಗೊಂಡವು. ಅವರು ಅದಕ್ಕೆ ಸರಿಯಾದ ರೂಪ ನೀಡಿದಾಗ,ಮಾತೆ ಆದಿಶಕ್ತಿಯ ಭೂಮ್ಯಾಕಾಶ ಒಂದಾದ ತೆರದಂತೆ ಭಯಂಕರ ಉಗ್ರಾವತಾರದಿ ನಿಂತಳು. ಕಾರಣ ಕಾತ್ಯಾಯನನರಿಗೆ ಮಗಳಾಗಿ ಬರುವನೆಂದು ನೀಡಿದ್ದ ವರದ ಫಲವು, ಅದನ್ನರಿತ ಕಾತ್ಯಾಯನ ಮಹರ್ಷಿಗಳೇ, ಸಂತಸದಿಂದ ಜಗನ್ಮಾತೆಯ ಪೂಜೆ ಮಾಡಿದರು. ಇದೆ ಕಾರಣಕ್ಕೆ ‘ಕಾತ್ಯಾಯನಿ ‘ನಾಮಾಂಕಿತವಾದಳು ದೇವಿ. ಸಪ್ತಮಿ, ಅಷ್ಟಮಿ, ನವಮಿವರೆಗೂ ಋಷಿಯ ಪೂಜೆ ಸ್ವೀಕರಿಸಿ ದಶಮಿಯ ದಿನ ಮಹಿಷ ಮರ್ದನಕ್ಕೆ ಹೊರಟಳು.

ಯುದ್ಧ ಭೂಮಿಯಲ್ಲಿ ಒಂದು ಹೆಣ್ಣು ಯುದ್ಧಕ್ಕೆ ಬಂದಿರುವದನ್ನು ಕಂಡ ಮಹಿಷಾಸುರನ, ಸಚಿವಬಲ ಮತ್ತು ಅಸುರ ಸೇನೆಯು ಅಪಹಾಸ್ಯ ಮಾಡಿ ಗಹ ಗಹಿಸಿ ನಕ್ಕು, ತಮ್ಮ ರಾಜನಾದ ಮಹಿಷಾಸುರನಿಗೆ ಸುದ್ದಿ ಮುಟ್ಟಿಸಿದರು. ಅವನು ಕೂಡ ವ್ಯಂಗ್ಯವಾಗಿ ನಕ್ಕರು. ಆ ಲಕ್ಷ ಮಾಡದೆ ಹರಿಹರ, ಬ್ರಹ್ಮಾದಿಗಳಿಂದ ಅಸ್ತ್ರ – ಶಸ್ತ್ರಗಳ ವರದಾನ ಪಡೆದ ಮಹಾವೀರ ಪರಾಕ್ರಮಿಗಳಾದ ಚಕ್ಷುರ, ಚಮೂರ, ರಸಿಲೋಮ, ರುದಾಗ್ರ, ಬಿಡಲಾ ಹೀಗೆ ಹಲವು ದೈತ್ಯ ಅಸುರರೊಂದಿಗೆ ಅಸಂಖ್ಯಾತ ಅಸುರ ಸೇನೆಯನ್ನು, ಯುದ್ಧಕ್ಕೆ ಕಳುಹಿಸಿದನು. ರಣ ಭೂಮಿಗೆ ಬಂದು, ದೇವಿಯ ಜೊತೆ ಕದನ ಸಾರಿದ, ಅಸುರ ವೀರರ ಯುದ್ಧ ಹೇಗಿತ್ತು. ಅಂದ್ರೆ ಬಾಹ್ಯಕಾಶನಿಂತು ಯುದ್ಧವನ್ನು ವೀಕ್ಷಿಸುತ್ತಿದ್ದ ಹರಿಹರ, ಬ್ರಹ್ಮಾದಿ ಸಮೇತ ಸಕಲ ದೇವತೆಗಳು ಕೂಡ ದಿಕ್ಕಾ ಪಾಲಾಗಿ ಹೋಗುವಂತಾಗಿತ್ತು. ಆದ್ರೂ, ಬ್ರಹ್ಮಾಂಡ ಸೃಷ್ಟಿಕರ್ತಳಾದ ಚಿಚ್ಚಕ್ತಿಯ ಮುಂದೆ ತುಚ್ಯರಾಕ್ಷಸರು ಜಯಸಲು ಸಾಧ್ಯವೇ ? ಸರ್ವರನ್ನು ಮರ್ದನ ಮಾಡಿದಳು ದುರ್ಗೆ.

ಆಗ ಭಯಂಕರ ಕ್ರೋದದೊಂದಿಗೆ ಮಹಿಷಾಸುರ ಎಮ್ಮೆ – ಕೋಣ ರೂಪವನ್ನು ಧರಿಸಿ ರಣರಂಗಕ್ಕೆ ಬಂದನು. ಆರು ಬಣ್ಣಿಸಲು ಅಸಾಧ್ಯವಾಗಿದೆ ಆ ಘನಘೋರ ಸಮರವನು. ವೀರಾವೇಷದಿ ಹೋರಾಡಿದನು; ಆದ್ರೆ ಕೊನೆಯಲ್ಲಿ ದುರ್ಗಾದೇವಿ ತನ್ನ ಸಿಂಹದಿಂದ ಇಳಿದು, ಮಹಿಷನ ಬೆನ್ನಿನ ಮೇಲೆ ಹಾರಿ, ಎಮ್ಮೆ – ಕೋಣದ ರೂಪದಲ್ಲಿದ್ದ ಮಹಿಷನ ತಲೆಯ ಮೇಲೆ ತನ್ನ ಕೋಮಲ ಪಾದಗಳಿಂದ ತುಳಿದಾಗ ಅವನು ಪ್ರಜ್ಞಾಹೀನನಾಗಿ ನೆಲಕ್ಕೆ ಬಿದ್ದನು.ಆಗ ಮಾತೆಯು ತನ್ನ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿ ಮರ್ದನ ಮಾಡಿದಳು. ಮುಂದೆ ಮಹಿಷಾಸುರಮರ್ದಿನಿ ಎಂದು ಕರೆಯಲ್ಪಟ್ಟಳು.

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಉಪಾಸನೆ ಮಾಡಲಾಗುವದು ಈ ದಿನ ಸಾಧಕನ ಮನಸ್ಸು ‘ಆಜ್ಞಾ’ ಚಕ್ರದಲ್ಲಿ ನೆಲೆಗೊಳ್ಳುವದು. ಈ ‘ಆಜ್ಞಾ’ ಚಕ್ರ ಸ್ಥಾನವು ಬಹಳ ಮಹತ್ವದಾಗಿದೆ. ಸ್ಥಿರ ಮನಸ್ಸಿಂದ ಸರ್ವಸ್ವವನ್ನು ಪೂರ್ಣವಾಗಿ ಆತ್ಮ ಸಮರ್ಪಣೆ ಮಾಡಿಕೊಂಡರೆ, ಮಾತೆಯ ದರ್ಶನ ಪ್ರಾಪ್ತವಾಗುವದು. ಅರ್ಥ, ಧರ್ಮ, ಕಾಮ, ಮೋಕ್ಷವೆಂಬ ಚತುರ್ ಫಲಗಳು ದೊರಕಿ, ಲೋಕದಲ್ಲಿದ್ದರು ಅಲೌಕಿಕ ತೇಜ ಪ್ರಭಾವದಿಂದ ಯುಕ್ತನಾಗುತ್ತಾನೆ. ರೋಗ, ಶೋಕ, ಭಯ, ಸಂತಾಪ, ಮುಂತಾದವುಗಳು ನಾಶವಾಗುವದರಲ್ಲಿ ಸಂಶಯವಿಲ್ಲ. ಆದರಿಂದ ನಾವುಗಳು ಶುದ್ಧಮನದಿ ಜಗನ್ಮಾತೆಗೆ ಶರಣಾಗಿ ಪೂಜಾ – ಉಪಾಸನೆಯಲ್ಲಿ ತತ್ಪರರಾಗೋಣ.

ನಾಳಿನ ಸಂಚಿಕೆಯಲ್ಲಿ, ‘ಕಾಳರಾತ್ರಿ ದೇವಿ’ ಮಹಿಮೆ ತಿಳಿಯೋಣ.


  • ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ ಜಿಲ್ಲೆ, ಕಲಬುರ್ಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW