ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿಯಂದು ಕರೆಯಲಾಗಿದೆ. ತಾಯಿಯ ಬಣ್ಣವು ಗಾಡಾಂಧಕಾರದಂತೆ ಪೂರ್ಣ ಕಪ್ಪಾಗಿದೆ. ತಲೆಗೂದಲು ಹರಡಿಕೊಂಡಿವೆ, ಕೊರಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದ್ದು ಮೂರು ಕಣ್ಣುಗಳನ್ನು ಹೊಂದಿದ್ದು ಅವು ಬ್ರಹ್ಮಾಂಡದಂತೆ ಗೋಲಾಕರವಾಗುವೆ ಇವುಗಳ ಕಿರಣವು ವಿದ್ಯುತ್ತಿನಂತೆ ಪಸರಿಸಿಕೊಂಡಿವೆ. ‘ಕಾಲರಾತ್ರಿ’ ಮಹಿಮೆಯನ್ನು ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಏಕವೇಣಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ| ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿಣಿ||
ವಾಮ ಪಾದೋಲ್ಲಸಲ್ಲೋಲತಾ ಕಂಟಕ ಭೂಷಣಾ | ವರ್ಧನಮೂರ್ದ ಧ್ವಜಾ ಕೃಷ್ಣಾ ಕಾಲರಾತ್ರಿಭಯಂಕರಿ||
ದುಷ್ಟ, ದುರಳ, ದಾನವ ಮಹಿಷಾಸುರನ ಅಂತ್ಯವಾದ ಮೇಲೆ ಜಗನ್ಮಾತೆಯ ಪಾದಾರವಿಂದಗಳಿಗೆ ಅನಂತ ಪ್ರಣಾಮಗಳನ್ನ ಸಲ್ಲಿಸಿ ಮಾತೆಯ ಅಪ್ಪಣೆ ಮೇರೆಗೆ ಮತ್ತೆ ಇಂದ್ರದೇವನು ಸ್ವರ್ಗಾಧಿಪತಿಯಾಗಿ ಸಂತಸದಿ ಆಡಳಿತ ನಡೆಸುತ್ತಿರಲು ಮತ್ತು ಸಕಲ ದೇವತೆಗಳು ತಮ್ಮ ತಮ್ಮ ಕಾರ್ಯಗಳಲ್ಲೂ ತತ್ಪರರಾಗಿರಲು ಮುಂದೆ ಕಾಲಾಂತರದಿ ಭೀಕರ, ಭಯಂಕರ ರಾಕ್ಷಸರಾದ ಶುಂಭ – ನಿಶುಂಭ ಉದಯಿಸಿದರು.
ಚಂಡ – ಮುಂಡ, ಸುಗ್ರೀವ, ಧೂಮ್ರಲೋಚನಾ ಇತ್ಯಾದಿ ಇದು. ಇವರ ಸಚಿವ ಬಲ ಮತ್ತು ಅಸಂಖ್ಯಾತ, ಅಸುರ ಸೇನೆ, ಇಷ್ಟೆಲ್ಲ ಸೇನಾದಂಡಿನೊಂದಿಗೆ, ಸ್ವರ್ಗದ ಮೇಲೆ ಆಕ್ರಮಣ ಮಾಡಿ, ಶುಂಭ ಮತ್ತು ನಿಶುಂಭರು ದೇವತೆಗಳನ್ನು ಸೋಲಿಸಿ ಸ್ವರ್ಗಾಧಿಪತಿಯಾಗಿ ಅನೇಕ ದುಷ್ಕ್ರತ್ಯಗಳನ್ನು ಮಾಡಲು ಶುರುಮಾಡಿದನು. ಇದರಿಂದ ಬೇಸತ್ತ ದೇವತೆಗಳು ಇಂದ್ರನಿಗೆ ಮತ್ತೆ ಜಗನ್ಮಾತೆಯ ಅಭಯ ಬೇಡುವ ಸಲಹೆ ನೀಡಿದರು. ಆಗ ದೇವತೆಗಳ ಅಧಿಪತಿಯಾದ ಇಂದ್ರನು, ಸೂರ್ಯ, ಚಂದ್ರ, ಯಮ, ನಿರುತಿ, ಕುಬೇರ, ವಾಯು, ಅಗ್ನಿ, ವರುಣ ಹೀಗೆ ಇತರ ದೇವತೆಗಳೊಂದಿಗೆ ತಮ್ಮ ವಾಸಸ್ಥಾನವನ್ನು ಮರಳಿ ಪಡೆಯಲು ಪರಶಿವನ ಸಹಾಯವನ್ನು ಪಡೆಯಲು ಕೈಲಾಸಕ್ಕೆ ಬಂದು ಎಲ್ಲರು ಸೇರಿ ಪಾರ್ವತಿ ದೇವಿಯನ್ನು ಪ್ರಾರ್ಥಿಸಿದರು.

ಫೋಟೋ ಕೃಪೆ : ಅಂತರ್ಜಾಲ
ಪಾರ್ವತಿದೇವಿಯು ತನ್ನ ಪ್ರತಿರೂಪದಿ ರಾಕ್ಷಸರನ್ನು ಸೋಲಿಸುವ ಮೂಲಕ ದೇವತೆಗಳಿಗೆ ಸಹಾಯ ಮಾಡಲು ಚಂಡಿ ( ಅಂಬಿಕಾ ) ಎಂಬ ಮತ್ತೊಂದು ದೇವತೆಯನ್ನು ಸೃಷ್ಟಿಸಿದಳು. ಚಂಡ – ಮುಂಡ, ಶುಂಭ- ನಿಶುಂಭನಿಂದ ಕಳುಹಿಸಲ್ಪಟ್ಟ ಇಬ್ಬರು ರಾಕ್ಷಸ ಸೇನಾಪತಿಗಳು. ಅವರು ಅವಳೊಂದಿಗೆ ಯುದ್ಧಕ್ಕೆ ಬಂದಾಗ, ಚಂಡಿ ದೇವಿಯು ಕಾಳಿ (ಕೆಲವು ಕತೆಗಳಲ್ಲಿ ಕಾಳರಾತ್ರಿ ಎಂದು ಕರೆಯಲ್ಪಡುವ) ಕಡು ದೇವತೆಯನ್ನು ಸೃಷ್ಟಿಸಿದಳು. ಕಾಳಿ/ಕಾಳರಾತ್ರಿ ಅವರನ್ನು ಕೊಂದು, ಆ ಮೂಲಕ ಚಾಮುಂಡಾ ಎಂಬ ಹೆಸರನ್ನು ಪಡೆದರು.
ಆಗ ರಕ್ತಬೀಜ ಎಂಬ ರಾಕ್ಷಸನು ಅಲ್ಲಿಗೆ ಬಂದನು. ರಕ್ತಬೀಜ ತನ್ನ ಯಾವುದೇ ರಕ್ತದ ಹನಿ ನೆಲದ ಮೇಲೆ ಬಿದ್ದರೆ, ಅವನ ತದ್ರೂಪಿ ಸೃಷ್ಟಿಯಾಗುತ್ತದೆ ಎಂಬ ವರವನ್ನು ಹೊಂದಿದ್ದನು. ಕಾಳರಾತ್ರಿ ಅವನ ಮೇಲೆ ದಾಳಿ ಮಾಡಿದಾಗ, ಅವನ ಚೆಲ್ಲಿದ ರಕ್ತವು ಅವನ ಹಲವಾರು ತದ್ರೂಪುಗಳನ್ನು ಹುಟ್ಟುಹಾಕಿತು. ಹಾಗಾಗಿ, ಅವರನ್ನು ಸೋಲಿಸುವುದು ಅಸಾಧ್ಯವಾಯಿತು. ಆದ್ದರಿಂದ ಹೋರಾಡುತ್ತಿರುವಾಗ, ಕಾಳರಾತ್ರಿಯು ಇದರಿಂದ ಕೋಪಗೊಂಡು, ಕೆಳಗೆ ಬೀಳದಂತೆ ಅವನ ರಕ್ತವನ್ನು ಕುಡಿದು, ಅಂತಿಮವಾಗಿ ರಕ್ತಬೀಜವನ್ನು ಕೊಂದು ಚಂಡಿ ದೇವಿಗೆ, ಶುಂಭ – ನಿಶುಂಭರನ್ನು ಕೊಲ್ಲಲು ಸಹಾಯ ಮಾಡಿದಳು. ಅವಳು ಎಷ್ಟು ಉಗ್ರ ಮತ್ತು ವಿಧ್ವಂಸಕಳಾದಳು ಎಂದರೆ ತನ್ನ ಮುಂದೆ ಬರುವ ಎಲ್ಲರನ್ನೂ ಕೊಲ್ಲುವುದಾಗಿ ಹೇಳಿದಳು.
ಅವಳನ್ನು ತಡೆಯಲು ಯಾರಿಂದಲು ಸಾಧ್ಯವಾಗದ ಕಾರಣ ಪೃಥ್ವಿಯೇ ಸರ್ವ ನಾಶವಾಗುವದೆಂದು ತಿಳಿದು ಎಲ್ಲಾ ದೇವತೆಗಳು ಶಿವನ ಮುಂದೆ ಪ್ರಾರ್ಥಿಸಿದರು. ಆದ್ದರಿಂದ ಶಿವನು ಅವಳನ್ನು ತಡೆಯಲು ಪ್ರಯತ್ನಿಸುತ್ತಾ ಪ್ರಯತ್ನವಾಗಿ ಅವಳ ಪಾದದ ಕೆಳಗೆ ಬರಲು ನಿರ್ಧರಿಸಿದನು. ಕಾಳರಾತ್ರಿಯು ಎಲ್ಲರನ್ನೂ ಕೊಲ್ಲಲು ತೊಡಗಿದ್ದಾಗ, ಅವಳ ಪಾದದ ಕೆಳಗೆ ಶಿವನು ಕಾಣಿಸಿಕೊಂಡನು. ತನ್ನ ಪ್ರೀತಿಯ ಪತಿಯನ್ನು ತನ್ನ ಪಾದದ ಕೆಳಗೆ ನೋಡಿ ತಾಯಿ ತನ್ನ ನಾಲಿಗೆಯನ್ನು ಕಚ್ಚಿದಳು (ಅವಳ ವಿಗ್ರಹಗಳು ಮತ್ತು ಚಿತ್ರಗಳು ಈ ನೋಟವನ್ನು ಒಳಗೊಂಡಿವೆ) ಮತ್ತು ಮಹಾಶಿವದೇವರು ಎದ್ದು ನಿಲ್ಲಲು ಸಹಾಯ ಮಾಡಿದಳು. ತಾನು ತಪ್ಪಿತಸ್ಥಳಾಗಿ ಅವಳು ಕದನವನ್ನು ಮರೆತಳು. ಶಿವನು ಮಹಾಕಾಳಿಯನ್ನು ಶಾಂತಗೊಳಿಸಿದನು.

ಫೋಟೋ ಕೃಪೆ : ಅಂತರ್ಜಾಲ
ಇನ್ನೊಂದು ದಂತಕಥೆಯ ಪ್ರಕಾರ, ದುರ್ಗಸುರನೆಂಬ ರಾಕ್ಷಸನು ಜಗತ್ತನ್ನು ನಾಶಮಾಡಲು ಬಯಸಿದನು ಮತ್ತು ಎಲ್ಲಾ ದೇವತೆಗಳನ್ನು ಸ್ವರ್ಗದಿಂದ ಓಡಿಸಿದನು ಮತ್ತು ನಾಲ್ಕು ವೇದಗಳನ್ನು ಕಿತ್ತುಕೊಂಡನು. ಆಗ ಲೋಕಮಾತೆ ಪಾರ್ವತಿಯು ಈ ಬಗ್ಗೆ ತಿಳಿದುಕೊಂಡು ಕಾಳರಾತ್ರಿಯನ್ನು ರಚಿಸಿ ದುರ್ಗಸುರನಿಗೆ ದಾಳಿಯ ವಿರುದ್ಧ ಎಚ್ಚರಿಕೆ ನೀಡುವಂತೆ ಸೂಚಿಸಿದಳು. ದುರ್ಗಾಸುರನ ಕಾವಲುಗಾರರು ಕಾಳರಾತ್ರಿಯನ್ನು ದೂತಳಾಗಿ ಬಂದಾಗ ಸೆರೆಹಿಡಿಯಲು ಪ್ರಯತ್ನಿಸಿದರು. ನಂತರ ಕಾಳರಾತ್ರಿಯು ದೈತ್ಯಾಕಾರದ ರೂಪವನ್ನು ಧರಿಸಿ ಅವನಿಗೆ ಎಚ್ಚರಿಕೆಯನ್ನು ನೀಡಿದಳು. ತರುವಾಯ ದುರ್ಗಾಸುರನು ಕೈಲಾಸವನ್ನು ಆಕ್ರಮಿಸಲು ಬಂದಾಗ ಪಾರ್ವತಿಯು ಅವನೊಂದಿಗೆ ಯುದ್ಧಮಾಡಿ ಅವನನ್ನು ಕೊಂದು ದುರ್ಗಾ ಎಂಬ ಹೆಸರನ್ನು ಪಡೆದರು. ಇಲ್ಲಿ ಕಾಳರಾತ್ರಿಯು ಪಾರ್ವತಿಯಿಂದ ದುರ್ಗಾಸುರನಿಗೆ ಸಂದೇಶ ಎಚ್ಚರಿಕೆಯನ್ನು ನೀಡಿದ ಶಕ್ತಿಯಾಗಿದ್ದಾಳೆ.
ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿಯಂದು ಕರೆಯಲಾಗಿದೆ. ತಾಯಿಯ ಬಣ್ಣವು ಗಾಡಾಂಧಕಾರದಂತೆ ಪೂರ್ಣ ಕಪ್ಪಾಗಿದೆ. ತಲೆಗೂದಲು ಹರಡಿಕೊಂಡಿವೆ, ಕೊರಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದ್ದು ಮೂರು ಕಣ್ಣುಗಳನ್ನು ಹೊಂದಿದ್ದು ಅವು ಬ್ರಹ್ಮಾಂಡದಂತೆ ಗೋಲಾಕರವಾಗುವೆ ಇವುಗಳ ಕಿರಣವು ವಿದ್ಯುತ್ತಿನಂತೆ ಪಸರಿಸಿಕೊಂಡಿವೆ . ಅವಳು ಉಸಿರಾಡುವಾಗ ಅಥವಾ ಬಿಡುವಾಗ ಅವಳ ಮೂಗಿನ ಹೊಳ್ಳೆಗಳ ಮೂಲಕ ಜ್ವಾಲೆಗಳು ಕಾಣಿಸಿಕೊಳ್ಳುತ್ತವೆ.] ಅವಳ ಆರೋಹಣವು ಕತ್ತೆಯಾಗಿದ್ದು, ಕಾಳರಾತ್ರಿ ದೇವಿಯ ನೋಟವು ದುಷ್ಟರಿಗೆ ವಿನಾಶವನ್ನು ಉಂಟುಮಾಡುತ್ತದೆ. ಆದರೆ ಅವಳು ಯಾವಾಗಲೂ ತನ್ನ ಭಕ್ತರಿಗೆ ಒಳ್ಳೆಯ ಫಲವನ್ನು ನೀಡುತ್ತಾಳೆ ಮತ್ತು ಅವಳನ್ನು ಎದುರಿಸುವಾಗ ಭಯದಿಂದ ದೂರವಿರಬೇಕು, ಏಕೆಂದರೆ ಅವಳು ಅಂತಹ ಭಕ್ತರ ಜೀವನದಿಂದ ಚಿಂತೆಯ ಕತ್ತಲೆಯನ್ನು ತೆಗೆದುಹಾಕುತ್ತಾಳೆ. ನವರಾತ್ರಿಯ ಏಳನೇ ದಿನದಂದು ಅವಳ ಆರಾಧನೆಗೆ ವಿಶೇಷವಾಗಿ ಯೋಗಿಗಳು ಮತ್ತು ಸಾಧಕರು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.ಈ ದಿನ ಸಾಧಕನ ಮನವು ‘ ಸಹಸ್ರಾರ ‘ ಚಕ್ರದಲ್ಲಿ ನೆಲೆಗೊಳ್ಳುತ್ತದೆ.
ಅವನಿಗಾಗಿ ಬ್ರಹ್ಮಾಂಡದೆಲ್ಲ ಸಿದ್ಧಿಯ ದ್ವಾರಗಳು ತೆರೆದುಕೊಳ್ಳುತ್ತವೆ, ಆತನಿಗೆ ಅಕ್ಷಯ ಲೋಕ ಪ್ರಾಪ್ತಿಯಾಗುತ್ತದೆ. ಕಾಳಿಯ ಅನುಗ್ರಹದಿ ದಾನವ, ದೈತ್ಯ ರಾಕ್ಷಸ, ಭೂತ, ಪ್ರೇತ, ಗ್ರಹ ಬಾಧೆಗಳೆಲ್ಲವೂ ಓಡಿ ಹೋಗುತ್ತವೆ. ಅಗ್ನಿ, ಜಲ, ಜಂತು, ಶತ್ರು, ರಾತ್ರಿ ಭಯಗಳೆಲ್ಲ ಕರಗಿ ಸರ್ವಥಾ ಭಯ ಮುಕ್ತನಾಗುತ್ತಾನೆ. ಆದರಿಂದ ಏಕನಿಷ್ಠ ಭಾವದಿಂದ ಪೂಜಾರಾಧನೆ ಮಾಡೋಣ, ಶುದ್ಧ ಮನದಿ ಶುಭಾಂಕರಿಯಾದ ಮಾತೆಯ ಉಪಾಸನೆ ಮಾಡಿದ್ರೆ ಆದರಿಂದ ಉಂಟಾಗುವ ಶುಭ ಫಲಗಳನ್ನು ಗಣನೆ ( ಲೆಕ್ಕ ) ಮಾಡಲು ಸಾಧ್ಯವಿಲ್ಲ.
ನಾಳಿನ ಸಂಚಿಕೆಯಲ್ಲಿ ಮಹಾಗುರಿಯ ಮಹಿಮೆ ತಿಳಿಯೋಣ.
ದುರ್ಗೆಯ ಮಹಿಮೆ ಹಿಂದಿನ ಸಂಚಿಕೆಗಳು :
- ನವದುರ್ಗೆಯರಲ್ಲಿ ಮೊದಲನೆಯ ಶಕ್ತಿ ಶೈಲಪುತ್ರಿ
- ನವದುರ್ಗೆಯ ಎರಡನೇಯ ಸ್ವರೂಪ ಬ್ರಹ್ಮಚಾರಿಣಿ
- ಆದಿಶಕ್ತಿಯ ಮೂರನೇ ಸ್ವರೂಪ ಚಂದ್ರಘಂಟಾ ದೇವಿ
- ಚಿಚ್ಛಕ್ತಿ ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಮಾಂಡಾದೇವಿ
- ಮಹಾದೇವಿಯ ಪಂಚಮ ಸ್ವರೂಪ ಸ್ಕಂದಮಾತಾ
- ದಾನವ ಘಾತಿನಿ ಜಗದಂಬೆಯ ಆರನೇ ಸ್ವರೂಪವೇ ‘ಕಾತ್ಯಾಯಿನಿ’
- ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ – ಯಡ್ರಾಮಿ ಜಿಲ್ಲಾ, ಕಲಬುರ್ಗಿ.
