ಇಡೀ ಸಂಕಲನದಲ್ಲಿ ಕೆಂಪಮ್ಮ ಎಲ್ಲಾ ಕ್ರೌರ್ಯಗಳ ಪ್ರತ್ಯಕ್ಷ ಸಾಕ್ಷಿಯಾಗಿ ಜನರಲ್ಲಿ ಎಚ್ಚರ ಮೂಡಿಸುವ ಶಕ್ತಿಯಾಗಿ ಕಾಣುತ್ತಾಳೆ. ಭವ್ಯ ಟಿ.ಎಸ್ ಅವರು ಸುಧಾ ಆಡುಕುಳ ಅವರ ನೀಲಿ ಮತ್ತು ಸೇಬು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನೀಲಿ ಮತ್ತು ಸೇಬು
ಲೇಖಕರು : ಸುಧಾ ಆಡುಕುಳ
ಪ್ರಕಾಶಕರು : ವೀರಲೋಕ
ನೆಚ್ಚಿನ ಲೇಖಕಿ ಶ್ರೀಮತಿ ಸುಧಾ ಆಡುಕುಳ ಅವರ ಹನ್ನೆರಡು ಸುಂದರ ಕಥೆಗಳ ಗುಚ್ಛವೇ ನೀಲಿ ಮತ್ತು ಸೇಬು. ಇಲ್ಲಿನ ಹನ್ನೆರಡು ಕಥೆಗಳು ವಿಭಿನ್ನ ವಸ್ತುವೈವಿಧ್ಯತೆಗಳನ್ನು
ಹೊಂದಿದ್ದರೂ ಎಲ್ಲಾ ಕಥೆಗಳ ಕೇಂದ್ರಬಿಂದು ಸ್ತ್ರೀ ಎನ್ನಬಹುದು. ನವಿರಾದ ಹಾಸ್ಯದೊಳಗೆ ಜೀವನದ ಗಂಭೀರತೆ, ಸರಳ ವಿಷಯದೊಳಗೆ ಬದುಕಿನ ಸಂಕೀರ್ಣತೆ, ಗ್ರಾಮೀಣ ಪರಿಸರ, ಸಂಸ್ಕೃತಿಗಳ ಜೊತೆಗೆ ಬೆಸೆದ ಭಾವಲೋಕ,ಧಾರ್ಮಿಕ, ಪೌರಾಣಿಕ ಪ್ರಸಂಗಗಳ ಹಿನ್ನೆಲೆಯಲ್ಲಿ ಸಮಕಾಲೀನ ಜಗತ್ತಿನ ಸನ್ನಿವೇಶಗಳ ಅನಾವರಣ,ಸಾಮಾಜಿಕ ಸಮಸ್ಯೆಗಳ ವಿಡಂಬನೆ ಇಲ್ಲಿನ ಕಥೆಗಳ ಪ್ರಮುಖ ಲಕ್ಷಣಗಳೆನ್ನಬಹುದು.ಕಥೆಯ ಸೃಷ್ಟಿ ಮತ್ತು ಗ್ರಹಿಕೆ ಸಾವನ್ನು ಮೀರುವ ಬದುಕುವ ದಾರಿ ಎಂದೇ ಅನಿಸುತ್ತದೆ ಎಂಬ ಲೇಖಕಿಯವರ ಮನದ ಮಾತು ಓದುಗರಲ್ಲಿ ಸಂಕಲನವನ್ನು ಓದುವ ಕೌತುಕವನ್ನು ಪುಷ್ಟಿಗೊಳಿಸುತ್ತದೆ.

ಅಪ್ಪತ್ತೆ
ಈ ಕಥೆಯ ನಾಯಕಿ ಅಪ್ಪತ್ತೆ ಹಳ್ಳಿಗಾಡಿನ ಎಲ್ಲಾ ಹೆಣ್ಣುಮಕ್ಕಳಂತೆ ನಯವಿನಯದ ಮೃದು ನಡವಳಿಕೆ ಹೊಂದದೆ ಗಟ್ಟಿಗಿತ್ತಿಯಂತೆ ಧೈರ್ಯದಿಂದ ವರ್ತಿಸುವುದು. ಇದನ್ನು ಮೇಲ್ನೋಟದಿಂದ ಎಲ್ಲರೂ ವಿರೋಧಿಸಿದರೂ ಒಳಗೊಳಗೆ ಅವಳ ಬಗ್ಗೆ ಒಂದು ಹೆಮ್ಮೆಯ ಭಾವವಿದ್ದುದು ಸತ್ಯವಾಗಿತ್ತು.ಈ ಅಪ್ಪತ್ತೆಯ ಬಗ್ಗೆ ಕಥಾ ನಿರೂಪಕಿ ಆಗಾಗ್ಗೆ ತನ್ನ ಮಗಳಿಗೆ ಹೇಳುವುದು.ಮಗಳ ಮನಸ್ಸಲ್ಲಿ ಅಪ್ಪತ್ತೆ ಆಕರ್ಷಕ ಮತ್ತು ಪ್ರಗತಿಪರ ವ್ಯಕ್ತಿತ್ವವಾಗಿ ರೂಪುಗೊಳ್ಳುವುದು, ಕೊನೆಯಲ್ಲಿ ಮಗಳು ತನ್ನ ಬದುಕಿನ ಬಗ್ಗೆ ತೆಗೆದುಕೊಂಡ ನಿರ್ಧಾರದಲ್ಲಿ ಅಪ್ಪತ್ತೆಯ ಬಿಂಬ ಗೋಚರಿಸುತ್ತದೆ.
ಅಸ್ತಿತ್ವ
ಸೂಕ್ಷ್ಮ ಸಂವೇದನೆಯ ಶಿಕ್ಷಕಿಯೊಬ್ಬರಿಗೆ ತಮ್ಮ ವಿದ್ಯಾರ್ಥಿನಿಯ ಬಗ್ಗೆ ಗೊತ್ತಾದ ಅವಳ ಪೋಷಕರ ಬಗೆಗಿನ ಸತ್ಯ,ಅವಳ ಮಾನಸಿಕ ಗೊಂದಲಗಳಿಗೆ ಆಕೆ ಸೂಚಿಸುವ ಪರಿಹಾರೋಪಾಯ ನಿರೀಕ್ಷಿತ ಫಲ ನೀಡುವ ಕಥಾವಸ್ತುವನ್ನು ಹೊಂದಿದೆ.ತನ್ನ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳ ಸಂಕಟ ಕೂಡಾ ಆ ಶಿಕ್ಷಕಿ ತನ್ನ ಕಾಲೇಜು ಹಾಸ್ಟೆಲ್ ನಲ್ಲಿ ಇದ್ದಾಗ ಕಂಡದ್ದು ಈ ಸನ್ನಿವೇಶದಲ್ಲಿ ಆಕೆಗೆ ನೆನಪಾಗುತ್ತದೆ.ಮನುಷ್ಯನ ಹುಟ್ಟು, ಸಾವು, ಮಕ್ಕಳಿಂದ ದೂರಾದ ಪೋಷಕರು,ತಂದೆ ತಾಯಿ ಇಲ್ಲದ ಮಕ್ಕಳ ಮನೋವೇದನೆ ಕುರಿತು ಚಿಂತನೆಗೆ ಹಚ್ಚುವ ಕತೆ ಇದಾಗಿದೆ.
ಬೀಗ
ಈ ಕಥೆಯಲ್ಲಿ ಬರುವ ನಿಹಾರಿಕಾ ಎಂಬ ಆಧುನಿಕ ಮನೋಭಾವದ ಉದ್ಯೋಗಿ ಆಕೆಯ ಮನೆಯ ಗೇಟಿಗೆ ಎಂದೂ ಬೀಗ ಹಾಕುತ್ತಿರಲಿಲ್ಲ.ಯಾವುದೋ ಸಂಕಟಕ್ಕೆ ಸಿಲುಕಿದ ಕಾರ್ಮಿಕ ಮಹಿಳೆಯೊಬ್ಬಳು ಇವಳ ಮನೆಯ ಗೇಟಿನೊಳಗೆ ಬಂದು,ಗಾರ್ಡನ್ ನಲ್ಲಿ ಅವಿತುಕೊಳ್ಳುವುದು,ನಿಹಾರಿಕಾ ಆಕೆಯನ್ನು ಗಮನಿಸಿ,ವಿಚಾರಿಸಿದಾಗ ಅವಳ ಕತೆ ತಿಳಿದು ಪೋಲಿಸರನ್ನು ಕರೆಸಿ,ನಂತರ ನಿಹಾರಿಕಳೇ ಸ್ವತಃ ಹಣ ಸಹಾಯ ನೀಡಿ ಆಕೆಯನ್ನು ಊರಿಗೆ ಕಳಿಸುವ ಕಥಾವಸ್ತು ಹೊಂದಿದೆ.ಇಲ್ಲಿ ನಿಹಾರಿಕಳ ಪತಿ ಅಚಿಂತ್ಯ ಆ ಸಂತ್ರಸ್ತ ಮಹಿಳೆ ಬಗ್ಗೆ ವ್ಯಕ್ತಪಡಿಸುವ ಸಂಶಯ ಹುಸಿಯಾಗುವುದು ಮತ್ತು ಅವನು ಮನೆಯ ಗೇಟಿಗೆ ಬೀಗ ಹಾಕಬೇಕೆಂದಾಗ ನಿಹಾರಿಕಾ ನಿರಾಕರಿಸುವುದು ಬಹುಮುಖ್ಯವೆನಿಸುತ್ತದೆ.

ಹೀಗೆ ಇಲ್ಲಿನ ಕತೆಗಳಲ್ಲಿ ಈಗಿನ ಅನೇಕ ಸಾಮಾಜಿಕ, ಕೌಟುಂಬಿಕ ವೈರುಧ್ಯಗಳು ಎಳೆಎಳೆಯಾಗಿ ತೆರೆದುಕೊಳ್ಳುತ್ತವೆ.ಲೇಖಕಿಯವರಿಗೆ ಯಕ್ಷಗಾನ, ರಂಗಭೂಮಿ ಕ್ಷೇತ್ರಗಳಲ್ಲಿ ಇರುವ ಅಭಿರುಚಿ ಸಹ ಇಲ್ಲಿನ ಕತೆಗಳಲ್ಲಿ ವ್ಯಕ್ತವಾಗಿದೆ. ಎಲವೋ ಸಂಜಯ ಕೇಳು ಎಂಬ ಕತೆ ಯಕ್ಷಗಾನದ ಸುತ್ತ ಸುತ್ತುತ್ತದೆ.ಹಾಸ್ಯಮಿಶ್ರಿತ ನಿರೂಪಣೆ ಮನರಂಜಿಸುತ್ತದೆ.ಕತೆಯ ಕೊನೆ ಮಾರ್ಮಿಕವಾಗಿದೆ.
ಇಡೀ ಸಂಕಲನದಲ್ಲಿ ಸಂಪಿಗೆ ಮರದ ಕೆಂಪಮ್ಮ ಪ್ರಸ್ತುತ ಧಾರ್ಮಿಕ ಅಸಹಿಷ್ಣುತೆ ತಣ್ಣಗಿನ ಹಳ್ಳಿ ಬದುಕಿನಲ್ಲಿ ಕಿಡಿ ಹೊತ್ತಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಸತ್ಯವನ್ನು ಸಾರುತ್ತದೆ. ಇಲ್ಲಿ ಕೆಂಪಮ್ಮ ಎಲ್ಲಾ ಕ್ರೌರ್ಯಗಳ ಪ್ರತ್ಯಕ್ಷ ಸಾಕ್ಷಿಯಾಗಿ ಜನರಲ್ಲಿ ಎಚ್ಚರ ಮೂಡಿಸುವ ಶಕ್ತಿಯಾಗಿ ಕಾಣುತ್ತಾಳೆ.
ಇನ್ನೂ ಸಂಕಲನದ ಶೀರ್ಷಿಕೆಯಾಗಿರುವ ಕತೆ #ನೀಲಿ ಮತ್ತು ಸೇಬು ಒಂದು ಸೇಬುಹಣ್ಣನ್ನು ಇಡಿಯಾಗಿ ತಿನ್ನಬೇಕೆಂದು ಬಯಸುವ ಬಡ ಹುಡುಗಿ ನೀಲಿಯ ಕನಸು ಮತ್ತು ಅದರ ಸುತ್ತ ನಡೆಯುವ ಘಟನೆಗಳಿಂದ ಆಕರ್ಷಿಸುತ್ತದೆ.ನೀಲಿ ತನ್ನ ಕನಸಿಗಿಂತ ಅಜ್ಜಿಯೊಬ್ಬಳ ಹಸಿವಿಗೆ ಬೆಲೆ ಕೊಡುವುದು ಎಷ್ಟೋ ಸಾರಿ ಸಂತಸವೆನ್ನುವುದು ಪಡೆಯುವುದಕ್ಕಿಂತ ಕೊಡುವುದರಲ್ಲಿ ಇದೆ ಎಂಬ ಸಂದೇಶ ನೀಡುತ್ತದೆ.
ಸುಧಾ ಆಡುಕುಳ ಅವರ ಈ ಕಥಾಸಂಕಲನ ಮನರಂಜನೆಯ ಜೊತೆಗೆ ಜೀವನಪಾಠ,ಹಾಸ್ಯದೊಂದಿಗೆ ಬದುಕಿನ ಸಂಘರ್ಷಗಳು, ಗ್ರಾಮೀಣ ಸೊಗಡು, ನಗರ ಬದುಕಿನ ಯಾಂತ್ರಿಕತೆ,ಸಂಬಂಧಗಳ ತೊಡಕುಗಳು,ಹೀಗೆ ಹಲವು ವಿಭಿನ್ನ ನೆಲೆಯ ಕಥಾವಸ್ತುಗಳನ್ನು ಹೊತ್ತಿರುವ ಮತ್ತೆ ಮತ್ತೆ ಓದಿದಂತೆ ಪ್ರತಿ ಬಾರಿ ಹೊಸ ಹೊಳಹುಗಳನ್ನು ಮನದೊಳಗೆ ಬಿತ್ತುವಂತೆ ಮೂಡಿ ಬಂದಿದೆ.
- ಭವ್ಯ ಟಿ.ಎಸ್ – ಶಿಕ್ಷಕರು, ಹೊಸನಗರ
