‘ನೆದರ್ಲ್ಯಾಂಡ್ಸ್ ಬಾಣಂತನ’ ಕೃತಿ ಪರಿಚಯ

ಖ್ಯಾತ ಕತೆಗಾರ ಕೆ.ಸತ್ಯನಾರಾಯಣ ಅವರ ‘ನೆದರ್ಲ್ಯಾಂಡ್ಸ್ ಬಾಣಂತನ’ ಕೃತಿಯು ವಿಭಿನ್ನವಾಗಿದೆ. ಯಾಕೆಂದರೆ ಪ್ರವಾಸ ಕಥನ ಎಂದಾಗ ಸಾಮಾನ್ಯವಾಗಿ ಅಲ್ಲಿನ ಸ್ಥಳಗಳ ಪ್ರಕೃತಿಯ ವರ್ಣನೆಗಳು ಸಿಗುತ್ತವೆ ಆದರೆ ಈ ಕೃತಿಯಲ್ಲಿ ಆತ್ಮಾವಲೋಕನಕ್ಕೆ ಅನುವು ಮಾಡಿಕೊಡುತ್ತದೆ. ಈ ಕೃತಿಯ ಕುರಿತು ಹಿರಿಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನೆದರ್ಲ್ಯಾಂಡ್ಸ್ ಬಾಣಂತನ
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾಶನ : ನ್ಯೂ ವೇವ್ ಬುಕ್ಸ್ 
ಬೆಲೆ : 150.00

ಆತ್ಮಾನ್ವೇಷಣೆಯಲ್ಲಿ : ಮೇಲಿನ ಶೀರ್ಷಿಕೆಯನ್ನು ಹೊಂದಿರುವ ಈ ಕೃತಿಯಲ್ಲಿ ಲೇಖಕರು ಕೈಗೊಂಡಿರುವುದು ಒಂದು ಬಗೆಯ ಆತ್ಮಾನ್ವೇಷಣ. ಲೇಖಕರ ಮಗಳು ಅಲ್ಲೇ ಹೋಗಿ ನೆಲೆಸಿದರು.ಇದರಿಂದಾಗಿ ಇವರಿಗೆ ಅಲ್ಲಿಗೆ ಮತ್ತೆ ಮತ್ತೆ ಹೋಗಿ ಮಗಳ ಸಂಸಾರವನ್ನು ನೋಡಿ ಬರಲು ಅವಕಾಶ ದೊರೆಯಿತು. ನಾಲ್ಕು ವರ್ಷಗಳು ಬೆಂಗಳೂರಿನಲ್ಲಿ ಬೆಳೆದ ಅವರ ಮೊಮ್ಮಗ ,ಅಲ್ಲಿ ಹೋಗಿ ಶಾಲೆಗೆ ಸೇರಿದ. ಅದರಿಂದಾಗಿ ಅವನ ಜೊತೆಗೆ ಮಾತ್ರವಲ್ಲ,ಅವನ ಶಾಲೆಯ ಮತ್ತು ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಲೇಖಕರು ಹತ್ತಿರದಿಂದ ಗಮನಿಸಲು ಸಾಧ್ಯವಾಯಿತು. ಅದರ ಪರಿಣಾಮವಾಗಿ ಅವರು ಗ್ರಹಿಕೆಗೆ ಸಿಕ್ಕ ಮಗು ಕೇಂದ್ರಿತ ಅಲ್ಲಿನ ಶಿಕ್ಷಣದ ವೈಶಿಷ್ಟ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ ಅಲ್ಲಿನ ಶಿಕ್ಷಕರ ವ್ಯಕ್ತಿತ್ವದ ಕುರಿತು ಇವರಿಗೆ ಆಕರ್ಷಣೆ ಬೆಳೆಯಿತು. ಆದ್ದರಿಂದ ಏಕಕಾಲಕ್ಕೆ ಮಕ್ಕಳ ಶಿಕ್ಷಣ ಮತ್ತು ಶಿಕ್ಷಕರ ಮನೋಧರ್ಮವನ್ನು ಬರಹ ಅನಾವರಣಗೊಳಿಸುತ್ತದೆ.

ಮಗಳು ಗರ್ಭಿಣಿ ಆದಾಗ, ಅವಳಿಗೆ ಬಾಣಂತನ ಮಾಡಲೆಂದು ಇವರು ಅಲ್ಲಿ ಹೋದಾಗ, ಅಲ್ಲಿನ ಸರ್ಕಾರ ಹೇಗೆ ತಾಯ್ತನದ ಹೊಣೆಯನ್ನು ಹೊತ್ತು, ಅಲ್ಲಿನ ತಾಯಿಯಾಗುವ ಮಹಿಳೆಯರ ಕಾಳಜಿ ವಹಿಸುತ್ತದೆ ಎಂದು, ಅವರ ಮಗಳಿಗೆ ದೊರೆತ ಸರ್ಕಾರಿ ಸೌಲಭ್ಯಗಳನ್ನು ಆಧರಿಸಿ ನಿರೂಪಿಸಿದ್ದಾರೆ. ಶುಶ್ರೂಷಕಿಯರನ್ನು ನೇಮಿಸಿ ಅವರು ಮನೆಗೆ ಬಂದು, ಗರ್ಭಿಣಿಗೆ ಬೇಕಾದ ಸವಲತ್ತು ಮತ್ತು ಮೇಲ್ವಿಚಾರಣೆ ನಡೆಸುವುದು, ಸಹಜ ಹೆರಿಗೆ ಮನೆಯಲ್ಲಿಯೇ ಆಗಲು ಸಹಕರಿಸುವ ಮತ್ತು ಅನಿವಾರ್ಯವಾದರೆ ಮಾತ್ರ ಆಸ್ಪತ್ರೆಗೆ ಸೇರಿಸಿ, ಹೆರಿಗೆಯಾದ ಒಂದೆರಡು ದಿನಕ್ಕೆ ಮನೆಗೆ ಕಳುಹಿಸಿ, ನಂತರ ಕೂಡಾ ಮಗು ಮತ್ತು ಬಾಣಂತಿಯರ ಯೋಗಕ್ಷೇಮಕ್ಕಾಗಿ ನಿರಂತರ ಅವರ ಸಂಪರ್ಕದಲ್ಲಿ ಇರುವುದು. ಈ ಪ್ರಕ್ರಿಯೆಯಲ್ಲಿ ನಮ್ಮ ದೇಶವನ್ನು ಒಳಗೊಂಡಂತೆ ಬೇರೆ ದೇಶಗಳಲ್ಲಿ ಈ ವ್ಯವಸ್ಥೆ ಇಲ್ಲದಿರುವುದರ ಕುರಿತು ವಿಷಾದ ಲೇಖಕರು ವ್ಯಕ್ತಪಡಿಸಿದ್ದಾರೆ.

ಮೊಮ್ಮಗಳನ್ನು ಶಿಶುವಿಹಾರಕ್ಕೆ ಸೇರಿಸಿದಾಗ ಲೇಖಕರು ಪ್ರತಿಭಟಿಸಿದರು. ಅದರಿಂದ ತಂದೆ ತಾಯಿಯರ ಜೋಪಾಸನೆಯಿಂದ ಅವಳು ವಂಚಿತಳಾಗುತ್ತಾಳೆ ಎಂದು. ಶಿಶುವಿಹಾರಕ್ಕೆ ಹೋಗುವಾಗ ಮತ್ತು ಅಲ್ಲಿಂದ ಬರುವಾಗ ಕೂಡಾ ಅವಳು ಉಲ್ಲಾಸದಿಂದ ಇರುವುದು ನೋಡಿದಾಗ, ಅವರಿಗೆ ತಮ್ಮ ಭಾವನೆ ತಪ್ಪು ಎಂದು ಗೊತ್ತಾದಾಗ ಅವರು ತಮ್ಮ ತಪ್ಪೊಪ್ಪಿಗೆಯನ್ನು ದಾಖಲಿಸಿದ್ದಾರೆ. ಇದರಿಂದಾಗಿ ಅವರು ಹೊಂದಿದ್ದ ಅನೇಕ ಪೂರ್ವಾಗ್ರಹಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಅದರಂತೆ ಅವರ ಮೊಮ್ಮಗನಿಗೆ ನಮ್ಮ ಮಹಾಕಾವ್ಯಗಳನ್ನು ಕುರಿತು ಇವರು ಕತೆಗಳನ್ನು ಹೇಳಿದಾಗ, ಅವನು ಕೇಳಿದ ಪ್ರಶ್ನೆಗಳಿಗೆ ತಮ್ಮಲ್ಲಿ ಉತ್ತರಗಳು ಇಲ್ಲದ್ದನ್ನು ಕೂಡಾ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಕನ್ನಡ ಕಲಿತು ಮಾತನಾಡುತ್ತಿದ್ದ ಅವರ ಮೊಮಕ್ಕಳು ,ಅಲ್ಲಿನ ಭಾಷೆಗಳಾದ ಡಚ್ ಮತ್ತು ಇಂಗ್ಲಿಷ್ ಗಳಲ್ಲಿ ಸರಾಗವಾಗಿ ವ್ಯವಹರಿಸುವುದು ಇವರಿಗೆ ಆಶ್ಚರ್ಯ ಉಂಟು ಮಾಡುತ್ತದೆ.

ಅಂತೆಯೇ ಅವರ ಮಗಳು ಮಗುವನ್ನು ನೋಡಿ ಕೊಳ್ಳುವುದನ್ನು ಬಿಟ್ಟು, ಕೆಲಸಕ್ಕೆ ಹೋಗುವುದನ್ನು ಕುರಿತು ಇವರು ಅಸಮಾಧಾನ ವ್ಯಕ್ತಪಡಿಸಿದಾಗ, “ಮನೆಯಲ್ಲೇ ಇರಲು ನನ್ನನ್ನು ಅಷ್ಟೇಕೆ ಓದಿಸಿದೆ” ಎಂಬ ಮಗಳ ಪ್ರಶ್ನೆಗೆ ಕೂಡಾ ಇವರಲ್ಲಿ ಉತ್ತರ ಇಲ್ಲ. ಅದಕ್ಕೆ ಪರ್ಯಾಯವಾಗಿ ಇವರು ಅವಳು ಕೆಲಸಕ್ಕೆ ಹೋಗುವಾಗ, ಅವಳ ಜೊತೆಗೆ ಹೋಗಿ ನಿಲ್ದಾಣಕ್ಕೆ ಬಿಟ್ಟು ಬರುವುದನ್ನು ಕಂಡು  ಅವರಿಗೆ ಇವರ ಮೇಲೆ ಹುಸಿ ಮುನಿಸು.

ಈ ಎಲ್ಲಾ ಅವರ ವೈಯಕ್ತಿಕ ಕೌಟುಂಬಿಕ ನೆಲೆಯಲ್ಲಿ ಪ್ರಕಟವಾಗಿ, ಮಕ್ಕಳ ಮೊಮ್ಮಕ್ಕಳ ಮೂಲಕ ತಾವು ಕಲಿತ ಪಾಠಗಳನ್ನು ದಾಖಲಿಸುವುದು, ಅದರ ಜೊತೆಗೆ ಅಲ್ಲಿನ ಮಗು ಕೇಂದ್ರಿತ ಶೈಕ್ಷಣಿಕ , ಕೌಟುಂಬಿಕ ಕೇಂದ್ರಿತ, ಸರ್ಕಾರದ ವ್ಯವಸ್ಥೆಯ ಮೇಲೆ ಕೂಡಾ ಬೆಳಕು ಚೆಲ್ಲಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ.

ಇದರೊಂದಿಗೆ ಅತಿಯಾದ ನಾಗರಿಕ ಶಿಷ್ಟಾಚಾರವನ್ನು ಪಾಲಿಸುವುದು ಹೇಗೆ ಹಿಂಸೆಗೆ ಎಡೆಗೊಡಬಲ್ಲದು ಎಂಬುದ ಬಾಲಕನೊಬ್ಬನ ಉಡಾಫೆಯ ವರ್ತನೆ ಶಿಕ್ಷಕರ ಅನುಚಿತ ಪ್ರತಿಕ್ರಿಯೆಗೆ ಕಾರಣವಾಗುವುದು. ನಾಯಿಯ ನಿಯಂತ್ರಣಕ್ಕೆ ಪ್ರಯತ್ನಿಸುವ ತಾಯಿಯೊಬ್ಬಳ ವರ್ತನೆಗಳು, ಬೀದಿಯಲ್ಲಿ ಮಕ್ಕಳ ಜೊತೆ ಬೆರೆಯಲು ಬಿಡದ ಕುಟುಂಬ ಅವರ ಸಾಮಾಜಿಕತೆಗೆ ಧಕ್ಕೆ ತರಬಹುದು ಎಂದು ಈ ಮೂಲಕ ಅವರ ಮಿತಿಗಳನ್ನು ಗುರುತಿಸಿರುವುದು ಲೇಖಕರ ವಸ್ತುನಿಷ್ಠ ಗ್ರಹಿಕೆಗೆ ಸಾಕ್ಷಿಯಾಗಿದೆ . ಒಟ್ಟಿನಲ್ಲಿ ಈ ಬರಹ ಆತ್ಮಾವಲೋಕನದೊಂದಿಗೆ ಇದು ನಮ್ಮ ವ್ಯವಸ್ಥೆಯ ಆತ್ಮಾವಲೋಕನಕ್ಕೆ ಕೂಡಾ ಅನುವು ಮಾಡಿಕೊಡುತ್ತದೆ. ಪ್ರವಾಸ ಕಥನಗಳಲ್ಲಿ ಸಾಮಾನ್ಯವಾದ ಅಲ್ಲಿನ ಸ್ಥಳಗಳ ಪ್ರಕೃತಿಯ ವರ್ಣನೆಗೆ ಇದು ಹೊರತಾಗಿದೆ. ಇದರಿಂದಾಗಿ ಕನ್ನಡದ ಪ್ರವಾಸ ಕಥನಗಳಲ್ಲಿ ಇದು ಅನನ್ಯವಾಗಿದೆ. ಕಳಿಸಿಕೊಟ್ಟು ಓದಲು ಅವಕಾಶ ಮಾಡಿಕೊಟ್ಟ ಲೇಖಕರಿಗೆ ಅಭಿನಂದನೆಗಳು.
೧೯೫೪ ರಲ್ಲಿ ಹುಟ್ಟಿದ ಲೇಖಕರು, ೧೯೬೦ ರಲ್ಲೇ ವಿದೇಶೀ ಅನುಭವ ಪಡೆದಿರುವುದಾಗಿ ಹೇಳಿರುವುದು ತಪ್ಪಾಗಿ ಮುದ್ರಣಗೊಂಡಿದೆ. ( ಪುಟ ೨೨)


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW