ಕವಿ ಆನಂದ್ ಋಗ್ವೇದಿ ಅವರು ಹೊಸ ವರ್ಷಕ್ಕೆ ಬರೆದ ಹೊಸ ಕವಿತೆಯ ಸಾಲುಗಳನ್ನು ತಪ್ಪದೆ ಮುಂದೆ ಓದಿ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು…
ನಿನ್ನೆಗಳ ನೆನಪು
ನಾಳೆಗಳ ಕನಸಿನ ನಡುವೆ
ಇಂದು ಈ ವರ್ತಮಾನ
ಕಾಲಾತೀತ ವಿಶ್ವದ
ಕಾಲಬದ್ಧ ಚಲನೆಯ ಹೊತ್ತು
ಈ ಹೊತ್ತು ತಂದಿದೆ ಈ
ದಿನಮಾನ
ಗ್ರೆಗೋರಿಯನ್
ಈಜಿಪ್ಟಿಯನ್
ರೋಮನ್…
ಹೀಗೇ ಮಾಪನಗಳು ರೂಪಿಸಿದ
ಕ್ಯಾಲೆಂಡರ್ ನಮ್ಮ
ಕ್ರಿಸ್ತನ ನಿರ್ಗಮನದ ನಂತರ
ಲೆಕ್ಕ ಹಾಕಿದ ಈ ದಿನ :
ಎರಡನೆಯ ಪರದ ಅರ್ಧದಲ್ಲಿ
ಬಿಳಿಯ ವರಾಹದ ಕಲ್ಪದಲ್ಲಿ
ವಿವಸ್ವತನ ಮನ್ವಂತರದಲ್ಲಿ
ಕಲಿಯುಗದ ಮೊದಲ ಪಾದದಲ್ಲಿ
ಈ ದೇಶದ ಪ್ರದೇಶದ ಈ ನೆಲದಲ್ಲಿ
ಈ ಹೊತ್ತು ಶುಭವ ಹೊತ್ತು ತರಲಿ
ಎಂಬುದು ಆರ್ಷೇಯ ಮತ್ತು ಆಶಯ
ಅವರ ಇವರ ನಮ್ಮವರ
ಅವರವರ ಅನವರತ ಎಲ್ಲರ
ದಿನಮಾನಗಳಲ್ಲಿ ದಿನಮಣಿ
ಉದಯಿಸಿ ದಿನವ ಹೊಳೆಯಿಸಿ
ಆಶಯಗಳ ಈಡೇರಿಸಲಿ ಎಂಬುದು-
ವಿಶ್ವ ಮಾನವ ತತ್ವ
ಈ ಹೊಸ ವರ್ಷ
ನಿಮ್ಮ ಕನಸುಗಳ ನನಸು
ಮಾಡಲೆಂದು ಹಾರಯಿಸುವುದು-
ವಿಶ್ವ ಮಾನವತ್ವ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
- ಆನಂದ್ ಋಗ್ವೇದಿ – ದಾವಣಗೆರೆ
