ಬರಡು ಹೃದ್ಯಗಳಲ್ಲೂ ಪ್ರೇಮದ ಹಣತೆ ಪ್ರಜ್ಚಲಿಸುವುದು

ನಾಡಿನ ಶ್ರೇಷ್ಟ ಕವಿಗಳಲ್ಲೊಬ್ಬರಾದವರು ನನ್ನೊಲವ ಕವಿ ಶ್ರೀಯುತ ವಾಸುದೇವ್ ನಾಡಿಗ್ ಸರ್, ಸೂಕ್ಷ್ಮ ಸಂವೇದನೆಗಳನ್ನು ಗ್ರಹಿಸಿ ಪದಗಳಿಗೆ ಭಾವಗಳ ಹದವಾಗಿ ಬೆರೆಸಿ ಕವಿತೆಗೆ ಜನ್ಮ ನೀಡುತ್ತಾರೆ. ವಾಸುದೇವ ನಾಡಿಗ ಅವರ ‘ನಿನ್ನ ಧ್ಯಾನ ನೂರೊಂದು ಹಣತೆ’ ಪುಸ್ತಕದ ಕುರಿತು ದೀಪಿಕಾ ಬಾಬು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನಿನ್ನ ಧ್ಯಾನ ನೂರೊಂದು ಹಣತೆ
ಲೇಖಕರು : ವಾಸುದೇವ ನಾಡಿಗ
ಪ್ರಕಾಶಕರು : ವೀರಲೋಕ
ಪ್ರಕಾರ : ಕವನ ಸಂಕಲನ

ನಾಡಿನ ಶ್ರೇಷ್ಟ ಕವಿಗಳಲ್ಲೊಬ್ಬರಾದವರು ನನ್ನೊಲವ ಕವಿ ಶ್ರೀಯುತ ವಾಸುದೇವ್ ನಾಡಿಗ್ ಸರ್, ಸೂಕ್ಷ್ಮ ಸಂವೇದನೆಗಳನ್ನು ಗ್ರಹಿಸಿ ಪದಗಳಿಗೆ ಭಾವಗಳ ಹದವಾಗಿ ಬೆರೆಸಿ ಕವಿತೆಗೆ ಜನ್ಮ ನೀಡುತ್ತಾರೆ….ಹಾಗೆ ಮನಸ್ಸಿನಾಳಕ್ಕೆತ್ತಿಕೊಂಡು ಓದಬೇಕೊಮ್ಮೆ ಅಬ್ಬಾ ವರ್ಣಿಸಲಾಸದ್ಯ ಇಲ್ಲಿನ ಕವಿತೆಗಳನ್ನು….

ಪ್ರತಿ ಉಸಿರಿನಲ್ಲೂ ಪ್ರೇಮವಿದೆ, ಪ್ರೇಮವೆಂದರೆ ಮೋಹವಲ್ಲ, ದೈವತ್ವದ ಆರಾಧನೆ ಇಲ್ಲಿ ಪ್ರತಿಯೊಬ್ಬರು ಪ್ರೇಮದ ಆರಾಧಕರೇ. ಸಾವಿಗೂ ಪ್ರೇಮಿಗೂ ಸಂಬಂದಗಳುಂಟ ಎಂದರೇ ಅದೌದು‌. ಈ ಪ್ರೇಮಕ್ಕಿರುವಷ್ಟೇ ಶಕ್ತಿ ಆ ಸಾವಿಗಿದೆ. ಇಲ್ಲಿ ಕವಿಗಳು ಪ್ರೇಮವನ್ನು ಗಾಢವಾಗಿ ಆರಾಧಿಸಿದ್ದಾರೆ….ಹಾಗೆಯೇ ಹಣತೆಗಳು ಬೆಳಗಿವೆ. ಹೊತ್ತಿ ಉರಿಯುತ್ತಿರುವ ಈ ಹಣತೆಗಳೊಳಗೆ ಅವೆಷ್ಟು ಸಂವೇದನೆಗಳು ಉಸಿರಿಸುತ್ತಿವೆ ಎಂದರೆ, ಲೋಕದ ನಾನಾ ಬಗೆಯ ತೊಳಲಾಟ, ವಿರಹದ ತಾಪ, ತವಕ, ಹಂಬಲ, ಕದನ…ನಿರಾಶೆ ಪ್ರೀತಿಯನ್ನು ಕಂಡುಂಡವರಿಗೆ ಇದೂ ಅರ್ಥವಾಗುವ ಪರಿ, ಮತ್ತೂ ಅದರರಿವು ಅಷ್ಟೇ ಗಾಢ.

ಪ್ರೀತಿ ಎಂದರೆ ರಾಧೆ-ಕೃಷ್ಣರೇ ಸಾಕ್ಷಿ ಇವರ ಹೆಸರು-ಕಥೆ ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಪ್ರತಿ ಮಾತಿಗೂ ರಾಧೆ ಎಂಬುವ ಕೃಷ್ಣ, ತಾನು ಉಸಿರಿಸುವ ಉಸಿರು ನಿನ್ನದೇ ಕೃಷ್ಣ ಎಂಬುವವಳು ರಾಧೆ, ಇಬ್ಬರಲ್ಲ ಒಬ್ಬರೇ ತಾವೆಂದು ಜಗತ್ತಿಗೆ ಸಾರಿದವರು, ಪ್ರೇಮವೆಂದರೆ ನಿಸ್ವಾರ್ಥದ ಮನೋಭವ ಎಂದು ಅರ್ಥೈಸಿದವರು. ಇಂತಹ ರಾಧ-ಕೃಷ್ಣರ ಅಗಾಧ ಪ್ರೇಮವೀಗ ಕವಿತೆಗಳಾಗಿ ಹಣತೆಯ ರೂಪದಲ್ಲಿದೆ.

‌ ಹಣತೆ-೦೩

‘ಜಗದ ತುಂಬಾ ಹಸಿವಿದೆ ನೋವಿದೆ
ಕರುಳು ಕರುಳುಗಳಲ್ಲಿ ಹೊಕ್ಕಿವೆ ಮುಳ್ಳು
ಕಿತ್ತುಹೋದ ಮನೆಗಳಿವೆ
ಬೆಳಕೇ ಗೊತ್ತಿರದ ಕಲ್ಲು ಕಿಟಕಿಗಳಿವೆ
ಹರಿವ ರಕ್ತದಲಿ ಬೇನೆಯಿವೆ
ಅಸಂಖ್ಯ ಹೃದಯಗಳಲಿ
ಬತ್ತಿದೆ ಜೀವದ್ರವ್ಯ
ಬತ್ತಿದೆ ಹಾ ಹಾ
ಕಾರವಿದೆ’

ಅದೆಷ್ಟು ನೋವಿನ ತೀವ್ರತೆಯನ್ನು ಈ ಸಾಲುಗಳು ಒಳಗೊಂಡಿವೆ. ನೋವೆಂದರೆ ದೇಹಕ್ಕಾದ ಯಾವುದೋ ಗಾಯದ್ದಲ್ಲ, ಮನಸ್ಸಿನಾಳವನೊಕ್ಕ ಪ್ರೀತಿಯ ನೋವಿನ ತೀವ್ರತೆ ಅಗಾಧ. ಒಳಹರಿವಿನ ಸೂಕ್ಷ್ಮತೆಯನ್ನರಿಯಲು ಎಲ್ಲರಿಗೂ ಸಾಧ್ಯವಿಲ್ಲ, ಇಲ್ಲಿ ಕವಿ ಅರಿತಿದ್ದಾರೆ ಜಗದ ನೋವನ್ನು. ಈ ಜಗತ್ತಿನಲ್ಲಿ ಅದೆಷ್ಟೋ ಜನರು ಪ್ರೀತಿಸುತ್ತಾರೆ, ಯಾವುದೋ ಅನಿವಾರ್ಯತೆಯಿಂದ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುವ ಸಂಕಟ ಎದೆಯೊಳಗೆ ಸಾವಿರಾರು ಮುಳ್ಳುಗಳು ಒಮ್ಮೇಲೆ ಚುಚ್ಚುವಾಗ ಆಗುವ ನೋವಿಗಿಂತಲೂ ಗಾಢ. ಮದುವೆಯಾದ ಮೇಲೆ ವರ್ತಮಾನದ ವಿಷಯ ತಿಳಿದು ವಾಸ್ತವಿಕವಾಗಿ ಸಂಬಂಧಗಳು ಅಳಸಿ ಮನೆಗಳು ಬೇರ್ಪಡುವವು, ಮತ್ತೆ ತನ್ನೊಳಗಿನ ವಿಷಯವನ್ನು ಯಾರಲ್ಲೂ ಪ್ರಸ್ತಾಪಿಸಲಾಗದೆ ಒಳಗೆ ಕೊರಗುವುದು. ಪ್ರೀತಿಯ ನಂಬಿಕೆಯ ಕಳೆದುಕೊಂಡು ಮನುಷ್ಯತ್ವವನ್ನೇ ಮರೆತವರು ಇದ್ದಾರೆ. ಪ್ರೀತಿಯ ಕಳೆಯೇ ಬತ್ತಿ ಹೋಗಿ ಬದುಕುತ್ತಿದ್ದಾರೆ ಸತ್ವ ಇಲ್ಲದವರಂತೆ, ಸತ್ತವರಂತೆ….ಇಲ್ಲಿ ಕವಿಗಳು ಬರೆದ ಸಾಲುಗಳಲ್ಲಿನ ಸಂವೇದನೆಗೆ ಶರಣು.

ಹಣತೆ -೨೮
‘ಎಷ್ಟೊಂದು ದೇಹಗಳು
ಮುಗಿದು ಹೋದವು!
ಆತ್ಮದ ರುಚಿಯ ಕಾಣದೆ
ಅದರ ದಾಹವ ಅರಿಯದೆ!’

ಎಂತಹ ಅದ್ಭುತ ಭಾಷ್ಯೆಯನ್ನು ಈ ಪ್ರೇಮ ಒಳಗೊಂಡಿದೆ, ಈ ಪ್ರೇಮಕ್ಕೆ ಭಾಷೆಯ ನಂಟಿದೆಯೇ? ಜನ್ಮಾಂತರಗಳ ಬೆಸುಗೆ ಇದೆಯೇ? ಪದಗಳು ನೇರ ಹೃದಯಕ್ಕೆ ಇರಿಯುವ ಶಕ್ತಿಯನ್ನು ಹೊಂದಿದ್ದಾದರೆ ಕವಿಯು ಬರೆದ ಕಾವ್ಯಗಳೆಲ್ಲ ಹಿತವಾದ ಕೊಲ್ಲುವ ವಿಷಕಾರಿ ಅಮೃತವೇ?.

ಹುಟ್ಟು ಸಾವು ಖಚಿತ. ಹುಟ್ಟುತ್ತೇವೆ ಮತ್ತು ಸಾಯುತ್ತೇವೆ, ದೇಹ ಮಣ್ಣಾಗಿಯೂ ಬಸ್ಮವಾಗಿಯೂ ಹೋಗುತ್ತದೆ ಆದರೆ ಆತ್ಮಕ್ಕೆ ಸಾವಿದೆಯೇ ಅದು ಪುನರ್ಜನ್ಮ ಪಡೆದು ಮತ್ತೊಂದು ದೇಹ ಸ್ಪರ್ಶ ಮಾಡಿದಾಗ ಮೊದಲನೆಯ ಅನುಭೂತಿ ದೊರಕುವುದೇ? ಎಷ್ಟೆಲ್ಲ ದೇಹಗಳ ಕಂಡರೂ ಭಾವಗಳ ಬೆಸತರು ಆತ್ಮ ದೇಹದ ಸ್ವತ್ತಲ್ಲ ಎಂದ ಮೇಲೆ ದೇಹದ ರುಚಿ ಕಂಡ ಆತ್ಮ ಮತ್ತೊಂದು ದೇಹವನ್ನು ಬಯಸಿ ಜನ್ಮ ತಾಳಿದರು ಪ್ರಯೋಜನ ವೇನು ಮತ್ತೆ ಮಣ್ಣಾಗಲೇಬೇಕು ಈ ದೇಹಕ್ಕೆ ಆತ್ಮ ಸದಾ ಕಾಡುತ್ತಲೇ ಇರುತ್ತದೆ ಎಂಬ ಸಾಲುಗಳ ಆಶಯವಿದೆ.

ಹಣತೆ-೩೧
ನೆರಳ ಈ ಬಾಳಿನಲ್ಲಿ ನಡೆದು ಬಂದ ಸಕಿ ವಿಷಕ್ಕೆ ಬೆದರುವವನಲ್ಲ ಅಮೃತದ ವೇಷದೊಟ್ಟವರದ್ದೇ ದಿಗಿಲು ವೇಷದೊಟ್ಟವರದ್ದ ಬಿಗಿಲು ಬಾ ನಿನ್ನ ಕಣ್ಣ ರೆಪ್ಪೆಗಳಲ್ಲಿ ಕಾಪಿಡು ಅಲ್ಲಿನ ನನ್ನದೇ ಕನಸುಗಳಲ್ಲಿ ಉಸಿರಾಡುವೆ

ಹಬ್ಬ ಎಂತಹ ವಿಷಾದದ ಸಾಲುಗಳಿವು, ಸಖಿಯ ಸಖ ಈ ಕೃಷ್ಣನ ಅಂತರಂಗದ ತುಮಲತೆಯನ್ನು ಬರೆಯುವುದು ಸುಲಭವಲ್ಲ, ತುಂಟು ಕೃಷ್ಣನ ಲೀಲೆಗಳು ಅಪಾರವಾದವು ಆದರೆ ಅವನು ನಡೆದ ದಾರಿಯ ಬಗ್ಗೆಯೂ ಕವಲುಗಳು ಅರಿಯುವುದುಂಟೆ ಹರಿಯ ಲೀಲೆಗಳು ಎಂಬ ಧಾರ್ಮಿಕ ಸಾಲುಗಳಿವು ಹಾಗೆ ಅಂತರಾಳಕ್ಕಿಳಿದು ಕಾಡುವ ಮಿಡಿತಕ್ಕೂ ಮತ್ತು ತುಡಿತಕ್ಕೂ ಒಳಪಡುವವು ಬದುಕಿನಲ್ಲಿ ಎದುರಾದ ಕಷ್ಟ ಕಾರ್ಪಣ್ಯಗಳ ಮೆಟ್ಟಿ, ಎಂದರೆ ನಾಗರ ನಂತರ ವಿಷಕಾರಿ ಜಂತುವಿನ ನೆರಳನ್ನು ದಾಟಿ ಬಂದವರನ್ನು ವಿಷ ಕಕ್ಕುವ ಜನರ ನಿಷ್ಠೂರದ ನುಡಿಗಳಿಗೆ ಹೆದರಿಲಿಲ್ಲ, ಇಲ್ಲಿ ಸರ್ಪಗಳನ್ನು ನನ್ನ ದಾರಿಗೆ ನೆರಳಾಗಿಸಿಕೊಂಡರೆ ಮತ್ತು ನಾನು ಅವರಂತೆ ವಿಷಕಾರಿ ಆಗದೆ ಸಿಹಿಯಾದ ಮಾತುಗಳನ್ನು ಒಳ್ಳೆಯ ನಡೆ ನುಡಿಗಳಾಡಿಯೆ ಈ ಬಾಳ ಪಥದಲ್ಲಿ ಬಳಲಿ ಬಂದಿರುವೆ. ನೀ ಪ್ರಿಯೆ ನನ್ನ ಸಲವು, ನಿನ್ನ ಕಣ್ಣಿನ ರಕ್ಷಣೆಯಲ್ಲಿ ಕಾಪಾಡಿಕೋ ಈ ಒಲವನ್ನು ನಿನ್ನ ಕಣ್ಣಿನಲ್ಲಿ ಮಿಯ್ಯುವೆ, ಅಲ್ಲಿರುವ ನನ್ನದೇ ಕನಸುಗಳಲ್ಲಿ ಉಸಿರಾಡಿ ನಿನ್ನೊಳಗೆ ಬದುಕುಳಿಯುವೆ ಸಖಿ ಅಗಾಧವಾದ ಪ್ರೇಮದ ಒಲವಿನ ಪರಿಯನ್ನು ಹೊರ ಸೂಸುವ ಅತ್ಯದ್ಭುತ ಸಾಲುಗಳಿವೆ ಇಲ್ಲಿ.

ಹಣತೆ-೪೩

‘ನೀನು ನುಡಿಸಿದ ಕೊಳಲು ನಾನು
ನೋಡು!
ಉಸಿರಿಗೆ ಅದೆಷ್ಟು ಅರ್ಥ ತಂದೆ
ಹೆರಳಲ್ಲಿ ಹೂವಾಗಿ ಮುಡಿದೆ
ನನ್ನ
ಕಂಪಿಗೂ ಜೀವ ತಂದೆ’

ಕಾನನದ ಬಿದಿರ ಕೊಳಲಿನಲ್ಲಿ ನಾದವ ಕಂಡವರಾರಯ್ಯಾ? ಉಸಿರಿಸುವ ಉಚ್ಛಾಸ-ನಿಶ್ವಾಸದ ಕ್ರಿಯೆಯಲ್ಲಿ ರಾಗವ ತುಂಬಿದವರಾರಯ್ತಾ ಕೃಷ್ಣ? ಇಲ್ಲಿ ಕೃಷ್ಣ ಪ್ರೀತಿಯ ಸಖಿಗೆ ಹೇಳುತ್ತಾನೆ, ಸಖಿ ನನ್ನ ಕೈಯೊಳಿದ್ದ ಕೊಳಲನ್ನು ನೀ ನುಡಿಸಿದಾಗ ನಿನ್ನ ಕೈಯೊಳಿದ್ದ ಆ ಕೊಳಲು ನಾನು. ನಿನ್ನುಸಿರಿನ ರಾಗದಲ್ಲಿ ಬೆರೆತು ಪುಳುಕಿತನಾದೆ, ನನ್ನೀರುವಿಕೆಗೂ ಅರ್ಥಕೊಟ್ಟವಳು ನೀನು.

ವಾ!… ಎಂತಹ ಮಧುರ ಯಾತನೆಯ ಸುಮಧುರ ಭಾವವಿದು. ಭಾವದೊಳಗಿನ ಹಿತವಾದ ನರಳಿಸುವಿಕೆಗೆ ಸೋಲದವರ್ಯಾರು? ನಿನ್ನ ನೀಳಾ ಕೇಶ ರಾಶಿಯಲ್ಲಿ ಮುಡಿದ ಸುಗಂಧ ಸೂಸುವ ಮಲ್ಲಿಗೆಯು ನಾನು, ಹೂವಿನ ಕಂಪಿಗೂ ಜೀವ ಬಂದಿದೆ ಸಖಿ ನಿನ್ನಿಂದ. ನೀ ಇರದೇ ನಾನಿಲ್ಲ, ನೀನೆಂದರೆ ನನ್ನ ಉಳಿಯುವಿಕೆಯ ಅಸ್ತಿತ್ವ ನೀನೇ ಸಖಿ ಎಂಬುವಂತಹ ಸಾಲುಗಳು ಕಾಡುತ್ತವೆ ಹಣತೆಯಲ್ಲಿ.

ಹಣತೆ-೬೧

‘ನೀನು ಬಿಟ್ಟು ಹೋದ ಆ ಸಂಜೆ
ಮುಗಿಲಲ್ಲಿ ಮೇಘಗಳಿರಲಿಲ್ಲ
ಸೋನೆಯ ಸೂಚನೆಗಳಿರಲಿಲ್ಲ’

ಈ ಜಗತ್ತಿನಲ್ಲಿ ಪ್ರೇಮವೇ ಇರದಿದ್ದರೇ? ಏನಾಗುತಿದ್ದ ಮನುಷ್ಯ? ಪ್ರೇಮವೆಂಬುದು ಒಲವು, ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಲ್ಲೂ ಸಹಜವಾಗಿ ಉದ್ಭವಿಸುವ ಭಾವ, ಸೃಷ್ಟಿಯ ಕ್ರಿಯೆ ಪ್ರೇಮ, ಪ್ರೇಮವೆಂದರೆ ಶಕ್ತಿ, ಒಲವಮೃತ, ಅದಕ್ಕೊಂದು ಭಾಷ್ಯೆಯಿಲ್ಲ, ವಿವರಣೆ ಬೇಕಿಲ್ಲ, ಯಾವುದೇ ಮೂಲದಿಂದ ಹರಿದು ಬರುವಂತಹದ್ದಲ್ಲ. ಎಲ್ಲರೊಳಗಿರುವ ಸ್ವಚ್ಛ ಭಾವ, ನಿಸ್ವಾರ್ಥವೇ ಪ್ರೇಮ. ಪ್ರೇಮಕ್ಕೆ ಎಲ್ಲವನ್ನೂ ಗಳಿಸುವ, ತ್ಯಜಿಸುವ , ಬರುಡಾಗಿಸುವ, ಸಮೃದ್ಧಗೊಳಿಸುವ, ಉಳಿಯುವ, ಕೊಲ್ಲುವ ಶಕ್ತಿಯಿದೆ, ಅಂತಹ ಪ್ರೇಮವನ್ನು ಮಾನವ ನೀಡುತ್ತಾನೆ, ಪಡೆಯುತ್ತಾನೆ, ಸ್ವತಃ ಅನುಭವಿಸುತ್ತಾನೆ ಎಂದರೆ ಅವನು ನಿಜಕ್ಕೂ ಅದೃಷ್ಟವಂತನೆ, ಪರಮ ಸುಖಿಯೂ ಹೌದು.

ಸಖಿಯೇ ಪ್ರೇಮವೆಂದಾದರೆ, ಸಖಿಯೇ ಬಿಟ್ಟು ಹೊರಟರೇ! ಬದುಕುಳಿಯುವುದೇಗೆ? ಆ ಸಂಜೆಯ ಕೊಲೆಯಾಗಿರುತ್ತದೆ, ಜಗತ್ತಿನ ಅರಿವಿಲ್ಲದಂತೆ ಸಖ ನರಳುತ್ತಾನೆ. ವಾಸ್ತವವಾಗಿ ಪರಿಜ್ಞಾನವಿರದ ಸಖನ ನರಳಾಟವನ್ನು ಪರಿಪರಿಯಾಗಿ ಕವಿಗಳು ಬಣ್ಣಿಸಿದ್ದಾರೆ ಹಣತೆಯಲ್ಲಿ.

ಹಣತೆ – ೯೧

‘ರಕ್ಕಸತನದ ಮೋಹದಲ್ಲಿ
ಅರಮನೆಗಳು ಸುಟ್ಟವು
ಅಂತಃಪುರಗಳು ಕುಸಿದವು
ನಿನ್ನ ಪಡೆಯುವುದೆಂದರೆ ಯುದ್ಧವಲ್ಲ
ಸಖೀ
ಸಮರದ ಅರ್ಥವನ್ನೇ ಬದಲಾಯಿಸಿದೆ’.

ಕ್ಷಣಿಕ ಸುಖದ ದಾಹಕ್ಕೆ ರಾಕ್ಷಸನಾಗುವವನಿಗೆ ಪ್ರೀತಿ ಪದದ ಅರ್ಥವದು ಅರ್ಥೈಸಲಾಗದು, ಬೇಕು ಎಂಬ ಜಿದ್ದಿಗೆ ಬಿದ್ದು ಹಠಮಾರಿಗಳಾಗಿ ಕಾದಾಡಿ ತಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಂಡ ಉದಾಹರಣೆಗಳು ಸಾಕಷ್ಟು ಕಾಣ ಸಿಕ್ಕುವವು. ರಾಜದಿರಾಜರೆಲ್ಲಾ ಹೆಣ್ಣು ಹೊನ್ನು ಮಣ್ಣಿಗಾಗಿಯೇ ರಾಜ್ಯಕಾಗಿಯೇ ಕಾದಾಡಿದವರು, ನಂತರ ಪಡೆದದ್ದಾರೂ ಏನು? ಯುದ್ಧಮಾಡಿ ಗೆದ್ದರೆ ಪ್ರೇಮ ದಕ್ಕುವುದೇ? ಪ್ರೇಮವೆಂಬುದು ಮೋಹವೆ ? ದೇಹದ ದಾಹವೇ? ಅದೊಂದು ಬಗೆಯ ಆರಾಧನೆ. ಸಖಿ/ಸಖ ರನ್ನು ಪಡೆಯುವುದೆಂದರೆ ಅದು ಯಾವುದೇ ಯುದ್ಧ- ಯಾಗಾದಿಗಳಿಂದಲ್ಲ, ಅಂತ್ರ ತಂತ್ರ ಮಂತ್ರಗಳಿಂದ ಸಾಧ್ಯವಾಗದು. ವೀರ-ಧೀರ-ಶೂರರೆಲ್ಲ ಪ್ರೇಮದ ಮುಂದೆ ತಲೆ ಭಾಗಿದ್ದಾರೆ, ಶರಣಾಗಿದ್ದಾರೆ, ಸತ್ತಿದ್ದಾರೆ, ಪ್ರೇಮವನ್ನು ಆರಾಧಿಸಿ ಗುಡಿ ಗೋಪುರಗಳ ಕಟ್ಟಿದ್ದಾರೆ. ಇಲ್ಲೆಲ್ಲ ಪ್ರೇಮ ಅಮರತ್ವ ಪಡೆದಿದೆ.

ಪ್ರೇಮ ಉದ್ಭವಿಸಲು ಕಾರಣಗಳಿರುವುದಿಲ್ಲ, ಕೇವಲ ಆಕರ್ಷಣೆಯಲ್ಲ, ಕಲ್ಪನೆಯು ಅಲ್ಲ, ಪ್ರೇಮ ವೆಂಬುದು ಸ್ಥಿರ, ವಾಯವಿನಂತೆ ಎಲ್ಲರೊಳಗೊಕ್ಕರಷ್ಟೇ ಉಳಿವು. ಇಲ್ಲ ಮಾನವ ರಕ್ಕಸನಾಗುವ, ವ್ಯಕ್ತಿಗೆ ಪ್ರೇಮದ ನೀರೆರೆದರಷ್ಟೇ ಮೃದುವಾಗಿ ಹೆಮ್ಮರವಾಗುವ, ಮನುಷ್ಯತ್ವವನ್ನು ಅರಿಯುವ ಅದಕ್ಕೆ ಸಮರಗಳ ಅಗತ್ಯವಿಲ್ಲ, ಪ್ರೇಮವದು ಮಧುರ ಅನುಭೂತಿಗೆ ಸಿಕ್ಕುವ ದೈವತ್ವದ ಭಾವವದು ಪ್ರೇಮ.

ಪ್ರೇಮಕ್ಕೆ ಮತ್ತೊಂದು ಹೆಸರೆ ರಾಧಾಕೃಷ್ಣ, ಅವರ ಜೀವನವೇ ಪ್ರೇಮಮಯವಾಗಿದೆ ಎಂಬುದನ್ನು ಕಾವ್ಯ ಪುರಾಣಗಳಲ್ಲಿ ಉಲ್ಲೇಖವಿದೆ. ಮತ್ತೂ ಪರಮ ಸತ್ಯವದು.

“ನಿನ್ನ ಧ್ಯಾನದ ನೂರೊಂದು ಹಣತೆ” ಇಲ್ಲಿನ ಪ್ರತಿ ಕವಿತೆಯೂ ಪ್ರೇಮದ ದಾರ್ಶನಿಕತೆಯನ್ನು ಸಾರುತ್ತವೆ. ಪ್ರೇಮದ ಅಮರತ್ವದ ಬಗ್ಗೆ ಉಸಿರಾಡುತ್ತವೆ. ಮಾನವನಿಗೆ ನಿಜಕ್ಕೂ ಬೇಕಾದ ಪ್ರೇಮದ ಪರಿಯನ್ನು ಬಿತ್ತುವಲ್ಲಿ ನಾಡಿನ ಶ್ರೇಷ್ಠ ಕವಿಗಳು, ನನ್ನೊಲವ ಕವಿ ಶ್ರೀಯುತರಾದ “ವಾಸುದೇವ ನಾಡಿಗ್” ರವರು ಯಶಸ್ವಿಯಾಗಿದ್ದಾರೆ. ಇಲ್ಲಿನ ಒಟ್ಟಾರೆ ೧೦೧ ಹಣತೆಗಳು ಪ್ರೇಮದ ಕವಿತೆಗಳು. ಓದುಗರ ಎದೆಯಲ್ಲಿ ಸದಾಕಾಲವೂ ಬೆಳಗುವ ಹಣತೆಗಳಿವೆ ಇಲ್ಲಿ. ಮಾರ್ಮಿಕತೆಯಲ್ಲಿ ಧಾರ್ಮಿಕತೆಯನ್ನು ತುಂಬಿ ಸುಮಧುರವಾಗಿ ಕಾಡುವಂತಹ ಕವಿತೆಗಳ ಭಂಡಾರವನ್ನು ಕವಿಗಳು ಓದುಗರಿಗೆ ನೀಡಿದ್ದಾರೆ.

ಬರಡನೆದೆಯಲ್ಲು ಹಣತೆ ಬೆಳಗುತ್ತದೆ, ಓದುವ ಕುಸುರಿ ಕೆಲಸವನ್ನು ಕರಗತ ಮಾಡಿಕೊಳ್ಳುವ ಪ್ರತಿಯೊಬ್ಬನೂ ಹಣತೆಯ ಆರಾಧಕರೇ ಎಂಬುದಕ್ಕೆ ಸಂಶಯವಿಲ್ಲ. ಪ್ರೇಮವನ್ನು ಧ್ಯಾನಿಸುವ ಕವಿಯ ಹಣತೆಗಳು ಓದುಗರ ಎದೆಯಲ್ಲಿ ಸದಾ ಪ್ರೇಮದ ಬೆಳಕ ಪ್ರಜ್ವಲಿಸುವಂತೆ ಮಾಡುತ್ತದೆ.

ಸಖಿ-ಸಖನಾಗಿ, ಕೊಳಲಾಗಿ, ಗರಿಯಾಗಿ, ನಾದ-ನಿನಾದವಾಗಿ, ಬೃಂದಾವನವಾಗಿ, ಯಮುನೆಯಾಗಿ, ಗೋವಾಗಿ, ಹಗಲು-ಇರುಳಾಗಿ, ಸರಸ- ವಿರಸಗಳಾಗಿ ಪ್ರೇಮಿ ಪ್ರೇಮವನ್ನು ಜೀವಿಸುತ್ತಾನೆ ಕವಿಗಳು ಅದನ್ನು ಆರಾಧಿಸುತ್ತಾರೆ. ಇಂತಹದೊಂದು ಅತ್ಯದ್ಭುತ ಪ್ರೇಮ ಕಾವ್ಯವನ್ನು ಓದುಗರಿಗೆ ನೀಡಿದ ಒಲವಿನ ಕವಿಗಳಿಗೂ ಅಭಿನಂದನೆಗಳು, ಕವಿತೆಗಳಿಗೆ ತಕ್ಕಂತಹ ಭಾವಕ್ಕಾನುಗುಣವಾಗಿ ರೇಖಾಚಿತ್ರಗಳ ಬರೆದಿರುವ ಜಬಿವುಲ್ಲ ಅಸದ್” ರವರಿಗೂ ಅಭಿನಂದನೆಗಳು ಮತ್ತೂ ಇಂತಹ ರೋಮಾಂಚನವಾದ ಸಂಕಲನವನ್ನು ಪ್ರಕಟಿಸಿದ ವೀರ ಲೋಕಕ್ಕೂ ಶುಭಾಶಯಗಳು.


  • ದೀಪಿಕಾ ಬಾಬು

5 1 vote
Article Rating

Leave a Reply

1 Comment
Inline Feedbacks
View all comments
Vasudev Nadig

ಹಣತೆಗಳನ್ನು ಮರು ಬೆಳಗಿಸಿದಂತಹ ಲೇಖನ‌ವಿದು. ಎಷ್ಟೊಂದು ತನ್ಮಯತೆಯಿಂದ ಹಚ್ಕೊಂಡು ಬರೆದಿದೀರ…ಮಾತಿಲ್ಲ.. ನನ್ನ ಹಣತೆಯನ್ನು ಮತ್ತೆ ನಾನೇ ಓದುವೆ

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW