ಖ್ಯಾತ ರಂಗಭೂಮಿ ನಿರ್ದೇಶಕ, ನಟ ಕೃಷ್ಣಮೂರ್ತಿ ಕವತ್ತಾರ್ ಅವರ ನಟನೆಯ ಕುರಿತು ಖ್ಯಾತ ಪತ್ರಕರ್ತರಾದ ಗಣೇಶ ಕಾಸರಗೋಡು ಅವರು ಬರೆದಿರುವ ಒಂದು ಲೇಖನ, ತಪ್ಪದೆ ಮುಂದೆ ಓದಿ..
ಒಂದು ಸಣ್ಣ ಕನ್ಫ್ಯೂಷನ್ : ಕನ್ನಡ ಚಿತ್ರರಂಗದ ಮಹಾನ್ ಕಲಾವಿದ ಮುಸುರಿ ಕೃಷ್ಣಮೂರ್ತಿ ಮತ್ತೆ ಹುಟ್ಟಿ ಬಂದಿದ್ದಾರಾ? ಹೆಸರು ಕೃಷ್ಣಮೂರ್ತಿ ಎಂಬುದು ನಿಜ. ಆದರೆ ಇವರು ಅವರಲ್ಲ! ಇವರು ಕೃಷ್ಣಮೂರ್ತಿ ಕವತ್ತಾರ್…
ಜೀಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯನ್ನು ನೋಡುತ್ತಿರುವಾಗಲೆಲ್ಲಾ ಬೇಡ ಬೇಡವೆಂದರೂ ಮುಸುರಿ ನೆನಪಾಗುತ್ತಾರೆ. ನಗುವ ಶೈಲಿ, ತಿರುಚಿದ ತುಟಿಗಳು, ಸಂಭಾಷಣೆ ಹೇಳುವ ವ್ಯಂಗ್ಯ ಧಾಟಿ, ಮಿಟುಕಿಸುವ ಕಣ್ಣು…ವಾಹ್, ಅವರೇ ಇವರು! ನಿಂತ ಜಾಗವೇ ರಂಗಭೂಮಿ, ಆಡುವ ಮಾತುಗಳೇ ಸಂಭಾಷಣೆ, ಮಿಟುಕಿಸುವ ಕಣ್ಣೆ ಭಾವಾಭಿವ್ಯಕ್ತಿ, ಕಂಠದಿಂದ ಹೊರಹೊಮ್ಮುವ ನಾದವೇ ರಾಗ, ನಟನೆ ರಕ್ತಗತ…ಕೃಷ್ಣಮೂರ್ತಿ ಕವತ್ತಾರ್ ಇರುವುದೇ ಹಾಗೆ…
ನಾನು ಬರೆದಿರುವ ‘ಶುಭಂ’ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಸುದೀಪ್, ರವಿಬೆಳಗೆರೆ, ತಾರಾ ಸಹಿತ ಕನ್ನಡ ಚಿತ್ರರಂಗದ ಅತಿರಥ ಮಹಾರಥರ ಎದುರು ಕಿಂಚಿತ್ತೂ ಮುಜುಗರವಿಲ್ಲದೇ ಇವರಾಡಿದ ಪುಟ್ಟ ಸ್ಕಿಟ್ ಎಷ್ಟೊಂದು ಪ್ರಭಾವಿಯಾಗಿತ್ತೆಂದರೆ ಕುಳಿತ ಪ್ರೇಕ್ಷಕ ಚಪ್ಪಾಳೆ ತಟ್ಟಲೂ ಮರೆತಿದ್ದೇ ಸಾಕ್ಷಿ…ಅದು ಆ ಪುಸ್ತಕದ ಒಂದು ಅಧ್ಯಾಯ. ಹಿರಿಯನಟರೊಬ್ಬರ ಬದುಕಿನ ಚಿಂತಾಜನಕ ಕಥೆ ಹೊಂದಿರುವ ಸ್ಕಿಟ್ ಅದು. ವೇದಿಕೆ ಮೇಲೆ ಹಾಕಿರುವ ಬೃಹತ್ ‘ಶುಭಂ’ ಪುಸ್ತಕದ ಪ್ರತಿಕೃತಿಯ ಪುಟವೊಂದನ್ನು ಹರಿದು ಹೊರಬರುವ ಪಾತ್ರವದು. ಹಾಗೆ ಬಂದ ಪಾತ್ರ ವೇದಿಕೆಯ ಮೇಲೆ ಏಕಪಾತ್ರಾಭಿನಯದ ಮೂಲಕ ಆಡುವ ನಾಟಕವನ್ನು ಒಂದು ಅನುಭವವನ್ನಾಗಿ ಕಟ್ಟಿ ಕೊಟ್ಟವರೇ ಈ ಕೃಷ್ಣಮೂರ್ತಿ ಕವತ್ತಾರ್.
ನಟನೆ ಇವರಿಗೆ ರಕ್ತಗತ. ಆದರೂ ಚಿತ್ರರಂಗ ಇವರನ್ನು ಯಾಕೆ ದೂರವಿಟ್ಟಿದೆಯೋ ಗೊತ್ತಿಲ್ಲ. ‘ಅಮೃತಧಾರೆ’ ಧಾರಾವಾಹಿಯ ನಂತರವಾದರೂ ಕೃಷ್ಣಮೂರ್ತಿ ಕವತ್ತಾರ್ ಸಾಹೇಬರಿಗೆ ಅದೃಷ್ಟ ಖುಲಾಯಿಸಿ ಕನ್ನಡ ಚಿತ್ರರಂಗದ ತಾರೆಯಾಗಿ ಮೆರೆಯುವರೋ… ಕಾದು ನೋಡಬೇಕಾಗಿದೆ. All the best ಕಾವತ್ತಾರ್ ಸರ್…
- ಗಣೇಶ ಕಾಸರಗೋಡು
