ಜೀವನದಲ್ಲಿ ನಿರಾಸೆ ಯಾಕೆ ಆಗುತ್ತದೆ. ಆ ನಿರಾಸೆ ನಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಚೇತನ ಭಾರ್ಗವ ಅವರು ಒಂದು ಪುಟ್ಟ ಲೇಖನದ ಮೂಲಕ ಸುಂದರವಾಗಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬದುಕೆಂದರೆ ಸುಖ -ದುಃಖ, ನೋವು – ನಲಿವು, ಸೋಲು- ಗೆಲುವುಗಳ ಸಮ್ಮಿಲನ. ಮನುಷ್ಯ ಜೀವಿಸಲು ಪ್ರೀತಿ, ಆಸೆ, ನಿರೀಕ್ಷೆ, ಕನಸು ಎಲ್ಲವೂ ಅಗತ್ಯ. ನಿರೀಕ್ಷೆಗಳು ಅತಿಯಾದಾಗ ನಿರಾಸೆ ಆಗುವ ಸಂಭವ ಹೆಚ್ಚಾಗಿರುತ್ತದೆ. ನಿರಾಸೆಯಿಂದಾಗಿ ಅಸಹಾಯಕತೆ ನೋವನ್ನು ಅನುಭವಿಸಿ, ನೆಮ್ಮದಿ ಮತ್ತು ಸಂತೋಷವನ್ನು ಕಳೆದುಕೊಳ್ಳಬೇಕಾದ ಸಂದರ್ಭಗಳು ಎದುರಾಗುತ್ತವೆ. ನಿರಾಸೆ, ಸೋಲುಗಳು ಕೆಲವು ಸಮಯದಲ್ಲಿ ನಮ್ಮ ಯಶಸ್ಸಿಗೆ ಎಡೆ ಮಾಡಿಕೊಡುವ ದಾರಿಯೂ ಆಗುತ್ತದೆ.
ನಮಗೆ ನಿರಾಸೆಯಾದಾಗ ಹತಾಶರಾಗದೆ ಮನಸ್ಸಿನ ತೊಳಲಾಟವನ್ನು ಸಮರ್ಥವಾಗಿ ಎದುರಿಸಿದರೇ ಬದುಕಿನಲ್ಲಿ ಸಂತೋಷವು ಮರೆಯಾಗುವುದಿಲ್ಲ. ಉದಾಹರಣೆಗೆ : ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ರವರು ಐದು ವರ್ಷದವರೆಗೆ ಮಾತೆ ಆಡುತ್ತಿರಲಿಲ್ಲ. ಒಂದು ಬಾರಿ ಅಧ್ಯಾಪಕರು ಒಬ್ಬರು ಐನ್ಸ್ಟೀನ್ ರವರ ತಾಯಿಗೆ ನಿಮ್ಮ ಮಗ ದಡ್ಡ ಎಂದು ಪತ್ರ ಬರೆದಾಗ ಆ ತಾಯಿ ನಿರಾಶರಾಗದೆ ಮಗನಿಗೆ ಈ ವಿಷಯ ತಿಳಿಸದೆ ನೀನು ಎಲ್ಲ ಮಕ್ಕಳಂತೆ ಅಲ್ಲ, ನಿನಗೆ ವಿಶೇಷವಾದ ಚೈತನ್ಯವಿದೆ ಎಂದು ಅವರನ್ನು ಪ್ರೇರೇಪಿಸಿ ಅವರನ್ನು ಹುರಿದುಂಬಿಸಿ ಮಗನನ್ನು ಮೇಧಾವಿಯಾಗಿ ಪರಿವರ್ತಿಸಲು ಪ್ರೇರಕ ಶಕ್ತಿಯಾದರು.
ಸಾಮಾನ್ಯವಾಗಿ ಮನೆಯಲ್ಲಿ ಹೆಂಡತಿ ಗಂಡನಿಗೆ ಇಷ್ಟವಾದ ಅಡಿಗೆಯನ್ನು ಮಾಡಿ ಆತನ ಪ್ರಶಂಸೆಯನ್ನು ನಿರೀಕ್ಷಿಸುತ್ತಾಳೆ. ಆದರೆ ಯಾವುದೋ ಕೆಲಸದ ಒತ್ತಡದಲ್ಲಿ ಅವನ ಪ್ರಶಂಸೆ ಸಿಗದಿದ್ದಾಗ, ಅಲಂಕಾರ ಮಾಡಿಕೊಂಡರೂ ಅವಳೆಡೆ ನೋಟ ಬೀರದಿದ್ದಾಗ ಹಾಗೆ ನಿರಾಸೆಗೊಂಡು ಮನೆಯ ವಾತಾವರಣ ನಿಧಾನವಾಗಿ ಹದಗೆಡಬಹುದು. ನಿರಾಶೆ ಹೆಚ್ಚಾದಾಗ ಸಂಬಂಧಗಳಲ್ಲಿ ಬಿರುಕು ಮೂಡಬಹುದು.ಆದರೆ ತಾಳ್ಮೆ ಸಹನೆಯಿಂದ ಸಂದರ್ಭಗಳನ್ನು ಅರಿತರೆ ನಿರಾಸೆಯನ್ನು ಮೀರಿ ನಿಂತು ಸಂಬಂಧಗಳು ಬಲವಾಗುತ್ತದೆ.
ನಿರಾಸೆಯೆಂಬ ಭಾವದ ಉಲ್ಲೇಖ ಪುರಾಣಗಳಲ್ಲೂ ಬಿಟ್ಟದ್ದಿಲ್ಲ
ಸತಿಯನ್ನು ಕಳೆದುಕೊಂಡ ಶಿವನಲ್ಲಿ ಪಾರ್ವತಿಯು ಅನುರಕ್ತಳಾಗಿ ತಾರ ಕಾಸುರನ ಸಂಹಾರಕ್ಕಾಗಿ ಪುತ್ರ ಜನನದ ನಿರೀಕ್ಷೆ ದೇವತೆಗಳಲ್ಲಿರುತ್ತದೆ. ಅಂತೆಯೇ ಪಾರ್ವತಿ ಶಿವನೇ ಬೇಕೆಂದು ಶಿವನ ಸೇವೆಗೆ ಮುಂದಾದಾಗ ಶಿವನ ತ್ರಿನೇತ್ರ ತೆರೆದು ಕಾಮ ದೇವದಹಿಸಿ ಹೋಗುತ್ತಾನೆ. ಶಿವ ಮತ್ತೆ ತಪಸ್ಸಿಗೆ ಕೂರುತ್ತಾನೆ, ಶಿವನ ಗಮನ ಸೆಳೆಯಲು ಆಗದ ನಿರಾಶೆ ಪಾರ್ವತಿಯನ್ನು ಕಾಡಿದರು ಆತನ ಸಾನಿಧ್ಯವನ್ನು ಪಡೆಯಲು ಆಕೆ ಉಗ್ರ ತಪಸ್ಸಿಗೆ ತೊಡಗಿ ತನ್ನ ಸಾಧನೆಯಿಂದ ಶಿವನ ಮನಸ್ಸನ್ನು ಗೆಲ್ಲುತ್ತಾಳೆ. ಪಾರ್ವತಿ ಪರಮೇಶ್ವರರ ಕಲ್ಯಾಣವಾಗುತ್ತದೆ, ಲೋಕವು ರಾಕ್ಷಸರ ಕಾಟದಿಂದ ಮುಕ್ತವಾಗುತ್ತದೆ.
ಭಗವದ್ಗೀತೆಯಲ್ಲಿ ಅತಿಯಾದ ನಿರೀಕ್ಷೆ ಆಸೆಯೂ ಸಲ್ಲದು ಎಂಬ ಉಲ್ಲೇಖವು ಬರುತ್ತದೆ. ಯೋನ ಹೃಷ್ಯತಿ ನ ದೃಷ್ಟಿ ನ ಶೋಚತಿನ ಕಾಡಕ್ಷತಿ ಶುಭಾಶುಭ ಪರಿತ್ಯಾಗಿ ಭಕ್ಷಿಮಾನ್ಯ: ಸಮೇ ಪ್ರಿಯ:
ಅತಿಯಾದ ಆಸೆ, ನಿರೀಕ್ಷೆ, ದ್ವೇಷವನ್ನು ಹೊಂದಿರುವವನು ಭಗವಂತನ ಕೃಪೆಗೆ ಪಾತ್ರರಾಗುವುದಿಲ್ಲ. ಲೌಕಿಕ ಸಂಸಾರದಲ್ಲಿ ತೊಳಲುತ್ತಾರೆ. ಆದ್ದರಿಂದ ನಮಗಾಗುವ ನಿರಾಶೆಗಳನ್ನು ಮೆಟ್ಟಿ ನಾವು ಸಾಧನೆಯಿಂದ ಗೆಲುವನ್ನು ಸಾಧಿಸೋಣ. ಅತಿಯಾದ ನಿರೀಕ್ಷೆಯಿಂದ ನಿರಾಸೆ ಹೊಂದಿ ಕುಗ್ಗದಿರೋಣ.
- ಚೇತನ ಭಾರ್ಗವ
