ತ್ಯಾಗವೆಂಬುದು ಪಲಾಯನವಲ್ಲ, ಜೊತೆಗಿದ್ದೂ ಇಲ್ಲದವನನ್ನು ಸದ್ದಿಲ್ಲದೆ ಮುಕ್ತಗೊಳಿಸುವುದು…ಕವಿಯತ್ರಿ ದೇವಿಕಾ ಎಸ್ ರಾಜ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅರ್ಧರಾತ್ರಿಯಲಿ
ಸಿದ್ಧಾರ್ಥ ತೊರೆದದ್ದು ಅರಮನೆಯನ್ನಲ್ಲ,
ತನ್ನನ್ನೇ ತಾನು ಕಾಡುತ್ತಿದ್ದ
‘ತಾನು’ ಎಂಬ ಪ್ರಶ್ನೆಯನ್ನ.
ಆದರೆ,
ಕದ ಮುಚ್ಚುವ ಸದ್ದಿಲ್ಲದೆ
ಹೊರಬಿದ್ದ ಆ ಹೆಜ್ಜೆಗಳ ಕಂಪನಕ್ಕೆ
ಯಶೋಧರೆಯ ನಿದ್ರೆ ಭಂಗವಾಗಲೇ ಇಲ್ಲ…!
ಕಾರಣ…
ತೊರೆದು ಹೋದವನಿಗಾಗಿ ಆಕೆ,
ಕಣ್ಣೀರು ಕೊಳವಾಗಿಸಿ
ಅಲ್ಲಿ ಕಮಲವಾಗಲಿಲ್ಲ,
ಬಿದ್ದ ನೆರಳನ್ನು ಎತ್ತಿಕೊಳ್ಳಲು
ಬಿಸಿಲಲ್ಲಿ ಬಾಗಲಿಲ್ಲ,
ಆಕೆ ತನ್ನ ನೋವಿಗೆ
ತಾನೇ ಮದ್ದಾದವಳು,
ಬದುಕಿನ ಕಹಿಯನ್ನೇ
ಉಂಡು ಬೆಳಕಾಗಿ ಹಬ್ಬಿದವಳು…..
ಸಿದ್ಧಾರ್ಥನಿಗೆ
ಬೋಧಿವೃಕ್ಷ ಸಿಕ್ಕಿದ್ದು
ಕಾಡಿನ ಏಕಾಂತದಲಿ,
ಆದರೆ, ಆ ವೃಕ್ಷದ ಮೊದಲ ಚಿಗುರು
ಮೂಡಿದ್ದು ಯಶೋಧರೆಯಲ್ಲಿ….
ತ್ಯಾಗವೆಂಬುದು ಪಲಾಯನವಲ್ಲ,
ಜೊತೆಗಿದ್ದೂ ಇಲ್ಲದವನನ್ನು
ಸದ್ದಿಲ್ಲದೆ ಮುಕ್ತಗೊಳಿಸುವುದು
ಎಂದು ಅವಳಿಗೆ ಮೊದಲೇ ತಿಳಿದಿತ್ತು….!!
ಅವನು ಸತ್ಯವನ್ನರಸಿ ಬುದ್ಧನಾಗಲು
ದಾರಿಹೋಕನಾದಾಗ,
ಈಕೆ ಮನೆಯಲ್ಲೇ ನಿಂತು
ವಿರಹದ ವಿಷವನ್ನೇ ಸಂಸ್ಕರಿಸಿ ಅಮೃತವಾಗಿಸಿಕೊಂಡ ತಾಳ್ಮೆಯಾದವಳು….
ಹಾಗಾಗಿಯೇ…
ಸಿದ್ಧಾರ್ಥ ನಿರ್ವಾಣದ ಹಾದಿ ಹುಡುಕುವ ಮೊದಲೇ,
ಅಸ್ತಿತ್ವದ ಶೂನ್ಯದೊಳಗೆ
ಅವಳೇ ಮೊದಲು ಬುದ್ಧಳಾಗಿದ್ದಳು..!
ಬಿಂಬ ನಂಬಿ ಬದುಕುವ
ಕನ್ನಡಿಗೇನು ಗೊತ್ತು,
ಕನ್ನಡಿಯನ್ನೇ ಒಡೆದು
ಬೆಳಕಾಗುವ ರಹಸ್ಯ?
ಆಕೆ ಕನ್ನಡಿಯೂ ಹೌದು,
ಸ್ಫೋಟಗೊಂಡ
ಬೆಳಕೂ ಹೌದು……
- ದೇವಿಕಾ ಎಸ್ ರಾಜ್
