‘ಕುರುಕ್ಷೇತ್ರ’ ಚಿತ್ರದ ಉತರೆ ಉತ್ತರೆ ಹಾಡಿನ ರಸ ವಿಮರ್ಶೆ

ಕುರುಕ್ಷೇತ್ರ ಚಿತ್ರದ ಉತರೆ ಉತ್ತರೆ ಹಾಡಿನ ರಸ ವಿಮರ್ಶೆ. ವಿ ನಾಗೇಂದ್ರಪ್ರಸಾದ್ ಕನ್ನಡದ ಪ್ರಸಿದ್ಧ ಚಿತ್ರಸಾಹಿತಿ. ತಮ್ಮ ಗೀತರಚನೆಗಳ ಮೂಲಕ ವಿಶಿಷ್ಟ ಛಾಪು ಒತ್ತಿದವರು. ಇದೀಗ ಅವರ ಜನಪ್ರಿಯ ”ದ್ವಾಪರ ದಾಟುತ ನನ್ನನೇ ಕಾಣಲು ಬಂದ ರಾಧಿಕೆ” ಗೀತೆ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಕೆ ರಾಜಕುಮಾರ್ ಅವರು ‘ಉತ್ತರೆ ಉತ್ತರೆ’ ಈ ಹಾಡಿನ ಕುರಿತು ಇನ್ನಷ್ಟು ಓದಿ…

ಈ ಶುಭ ಸಂದರ್ಭದಲ್ಲಿ ಹೆಚ್ಚು ಜನರ ಗಮನಕ್ಕೆ ಬಾರದ 5 ವರ್ಷದ ಹಿಂದೆ ಬಿಡುಗಡೆಯಾದ ಅವರ ರಚನೆಯ ಚಿತ್ರಗೀತೆಯೊಂದನ್ನು ಕುರಿತು ಬಹು ನೆಲೆಗಳಲ್ಲಿ ಚರ್ಚಿಸಿರುವೆ. ಹಾಡನ್ನು ಹೊಕ್ಕು ನೋಡುವ ಭಿನ್ನ ಬಗೆಯಿದು. ದಯವಿಟ್ಟು ಓದಿದವರು ಅಕ್ಷರಗಳ ಮೂಲಕ ಮಾತ್ರ ನಿಮ್ಮ ಪ್ರತಿಕ್ರಿಯೆ ನೀಡಲು ಕೋರಿಕೆ.

 ಉತ್ತರೆ ಉತ್ತರೆ ಚಂದ ನೀನು ನಕ್ಕರೆ:

ಉತ್ತರೆ ಉತ್ತರೆ ಕನ್ನಡದಲ್ಲಿ ರಕಾರ ಅಭ್ಯಾಸ ಮಾಡಿಸಲು ಬಳಸಬಹುದಾದ ನಾಲಿಗೆ ನುಲಿ/tongue twister. ಸುಮಾರು 40ಕ್ಕೂ ಹೆಚ್ಚು ಸಲ ರಕಾರ ಕಿವಿಗೆ ತಾಕುತ್ತದೆ. ಬಿ
ರಕಾರ ಮೂರ್ಧನ್ಯ/Retroflex ಅಕ್ಷರ. ಮಕ್ಕಳು ರಕಾರವನ್ನು ಉಚ್ಚರಿಸಲು ಕಷ್ಟಪಡುತ್ತಾರೆ. ಅದು ಗಡಸು ದನಿಯುಳ್ಳದ್ದು. ಆದರೆ ಅದರೊಂದಿಗೆ ಈ ಗೀತೆಯಲ್ಲಿ ಸಂಯೋಜಿತವಾಗಿರುವ ಇತರೆ ವರ್ಣಗಳು ರಕಾರದ ಕರ್ಕಶ ದನಿ ಗೋಚರವಾಗದಂತೆ ತಡೆಯುತ್ತವೆ.

ತೆಲುಗಿನಲ್ಲಿ ದಿ. ಚಕ್ರಿ ರಾಗ ಸಂಯೋಜನೆಯ ಚಿತ್ರಗೀತೆ ”ರಾ ರಮ್ಮನಿ ರಾರಾ ರಮ್ಮನಿ ರಾಮಚಿಲುಕ ಪಲಿಕೆನು ಈ ವೇಳ” ಎಂಬ ರಕಾರದ ಸಾಲು ನೆನಪಾಗುತ್ತದೆ. ಆದರೆ ಕುರುಕ್ಷೇತ್ರದ ಚಿತ್ರದ ಉತ್ತರೆ ಉತ್ತರೆಗೆ ರಕಾರ ಬಳಕೆಯಲ್ಲಿ ಆ ತೆಲುಗು ಗೀತೆ ಸಾಟಿಯಲ್ಲ. ಕನ್ನಡದ ಇಲ್ಲಿನ ಪದಪದವನ್ನೂ ಜೇನಿನಲ್ಲಿ ಅದ್ದಿ ಪಲುಕಿದಂತಿದೆ. ಪ್ರತಿ ಪಲುಕೂ ಮಾಧುರ್ಯವನ್ನೇ ಎರಕ ಹೊಯ್ದಂತಿದೆ. ಪಲುಕು ಎಂಬ ಕಾರಣದಿಂದಾಗಿ ಭಕ್ತ ರಾಮದಾಸರ ರಚನೆ ”ಪಲುಕೇ ಬಂಗಾರಮಾಯೆನಾ?” ನೆನಪಿನ ಹತ್ತಿರ ಸುಳಿಯುತ್ತದೆ.
ಉತ್ತರೆ ಉತ್ತರೆ ಗೀತೆಯನ್ನು ರಚನೆಯ ಶ್ರಮ ಸಾರ್ಥಕ ಎನ್ನಿಸುವಂತೆ ಬದ್ಧತೆಯಿಂದ ಹಾಡಿಸಲಾಗಿದೆ. ಗೀತರಚನೆಕಾರ ವಿ.‌ ನಾಗೇಂದ್ರಪ್ರಸಾದ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಗಾಯಕಿ ಶ್ರೇಯಾ ಘೋಷಾಲ್, ಗಾಯಕ ವೆಂಕಿ ತಮ್ಮ ವೃತ್ತಿಜೀವನದ ಶ್ರೇಷ್ಠ ಕಲಾಕುಸುಮವೊಂದನ್ನು ಇಲ್ಲಿ ಅರಳಿಸಿದ್ದಾರೆ.

ಆಲಿಸುತ್ತಿದ್ದರೆ ಈ ಹಾಡಿನ ಸಾಲುಗಳನ್ನು ಗುನುಗುವ ಚಟಕ್ಕೆ ವಶವಾಗುವುದು ಖಂಡಿತ. ಇದೊಂದು #ಪರವಶಗೊಳಿಸುವ #ಭಾವಗಾನ.

ಮಗಧೀರ ಚಿತ್ರದ, ಕೀರವಾಣಿ ಸಂಯೋಜನೆಯ “ಧೀರ ಧೀರ ಧೀರ ಮನಸಾಗಲೇದುರಾ, ಚೇರರಾರ ಶೂರ ಮನಸಂದುಕೋ ದೊರ'” ಪ್ರಣಯ ಗೀತೆಯ ಪ್ರಭಾವ ಇದರ ಮೇಲೆ ನಿಚ್ಚಳವಾಗಿದ್ದರೂ ಸಂಯೋಜನೆಯಲ್ಲಿ ಅದು ಎದ್ದು ಕಾಣದು. ಆದರೆ ಹಿನ್ನೆಲೆಯಲ್ಲಿನ ವಾದ್ಯ ಸಂಗೀತದಲ್ಲಿ ಅದರ ದಟ್ಟ ಪ್ರಭಾವ ಇಣುಕಿದೆ.

ರಚನೆಯಲ್ಲಿ ಶೃಂಗಾರದ ಬಿಸುಪಿದೆ. ರಸಿಕತೆಯ ಲೇಪವಿದೆ. ಎದೆಯ ಮೇರು ಶಿಖರದಲಿ ಒರಗು ಬಾರೆ ಇಂದುವದನೆ ಎನ್ನುವಲ್ಲಿ ಒಂದು ಅಚ್ಚರಿ ಮತ್ತು ವೈರುಧ್ಯವಿದೆ: ಗಂಡು ನೀಡುವ ಆಹ್ವಾನವಿದು! ಇತ್ತೀಚಿನ ಪುರುಷರ ವಕ್ಷವಲಿ ಮೋಹವನ್ನು/Male pectoral pack craze ನೆನಪಿಸುತ್ತದೆ!! ಅಂಗವಸ್ತ್ರ ತೇಲುವಂತೆ ಮೆಲ್ಲಬೀಸು ಕಳ್ಳಗಾಳಿ ಅಭಿಮನ್ಯುವಿನ ಉಸಿರಾದರೆ, ಖಡ್ಗವನ್ನೇ ಬೆವರುವಂತೆ ಮಾಡಬಲ್ಲ ನೋಟ ಉತ್ತರೆಯದು. “ಕಣ್ಣನೋಟದಲ್ಲೇ ನೀ ಕಾಡಬೇಡ ಸಾಜನಾ, ಹೂವಿನಂತ ಹೆಣ್ಣು, ನಾಜೂಕು ನನ್ನ ಯೌವನ” ಎಂಬ ಚಿತ್ರಗೀತೆಯೊಂದರ ಈ ಆಲಂಕಾರಿಕ ಸಾಲು ನೆನಪಾಗದಿರದು. ಅಲ್ಲಿ ಹೆಣ್ಣು; ಪುರುಷನ ನೋಟದ ತೀಕ್ಷ್ಣತೆ ಕುರಿತು ಹೇಳಿದ್ದರೆ, ಇಲ್ಲಿ ಪುರುಷಪುಂಗವ ವೀರಾಭಿಮನ್ಯು ಉತ್ತರೆಯ ನೋಟವು ಅವನ ಖಡ್ಗವನ್ನೂ ಬೆವರುವಂತೆ ಮಾಡುತ್ತದೆಯೆಂದು ಮಾರ್ನುಡಿಯುತ್ತಾನೆ. ಇಂತಹ ಚತುರುಕ್ತಿ ಕನ್ನಡ ಗೀತ ಸಾಹಿತ್ಯವನ್ನು ಮುಂದಕ್ಕೆ ಮತ್ತು ಎತ್ತರಕ್ಕೆ ಒಯ್ಯುತ್ತದೆ. ಪ್ರಣಯ ಕೇಳಿ ಕಲಿಸುವೆನೆಂದು ಅಭಿಮನ್ಯು‌ ನಿಸ್ಸಂಕೋಚದಿಂದ, ಹಸಿಹಸಿಯಾಗಿ ಅರುಹಿ ವಿರಾಟಪುತ್ರಿ ಉತ್ತರೆಗೆ ರತಿಕ್ರೀಡೆಯಲ್ಲಿ ವಿಹರಿಸಲು ಆಹ್ವಾನವೀಯುತ್ತಾನೆ. ಈ ಆಮಂತ್ರಣದಲ್ಲಿ ಮುಚ್ಚುಮರೆಯೇ ಇಲ್ಲ. ಎಲ್ಲವೂ ಖುಲ್ಲಂ ಖುಲ್ಲಾ ಪ್ಯಾರ್. ತುಂಬು ಹರೆಯದ ಅವನಿಗೆ ವಯೋಸಹಜವಾದ “ಪ್ಯಾರ್‌ಗೆ ಆಗ್ಬಿಟ್ಟೈತೆ!”

ತೆರೆಯ ಮೇಲೆ ಮಾಯಾಬಜಾರ್‌ನ ಅಭಿಮನ್ಯು, ಶಶಿರೇಖರ “ಲಾಹಿರಿ ಲಾಹಿರಿ”, “ನೀವೇನಾ ನನು ತಲಚಿನದಿ ನೀವೇನಾ ನನು ಪಿಲಚಿನದಿ” ಎಂಬ ಸಭ್ಯ, ರಮ್ಯ, ಮಡಿವಂತಿಕೆಯ ಸಾಲುಗಳನ್ನು ಕೇಳಿ ಪುಳಕಗೊಂಡ ಅರವತ್ತರ ದಶಕದ ತಲೆಮಾರು ನಮ್ಮದು. ಅದು ಮಾಯಾಬಜಾರ್. ಆದರೆ ಉತ್ತರೆಯೊಂದಿಗೆ ಬೆರೆಯಲು ಕುರುಕ್ಷೇತ್ರದ ಈ ಅಭಿಮನ್ಯುವಿಗೆ ಅದೆಂತಹ ಉತ್ಕಟ ಮೋಹ. ಎಲ್ಲವನ್ನೂ ಮಾತಿನಲ್ಲೇ ಹಾಡಾಗಿ ಹರಿಯಬಿಡುತ್ತಾನೆ.

ಈ ಆರು ದಶಕಗಳಲ್ಲಿ ಕನ್ನಡ ತೆರೆಯ ಮೇಲೆ ಸಂಕೋಚ ಚಿಂದಿ, ಚಿಂದಿ. ಆದರೂ ಈ ಅಭಿಮನ್ಯು ಕಿಲಾಡಿ. ಅವನು ‘ಜಾಗ್ವಾರ್’ ಆದರೂ ಅವನಿಗೆ ಸಂಯಮವಿದೆ. ಹೆಗಲ ಮೇಲೆ ಇಂದ್ರಧನಸ್ಸು ಹೊರುವ ಬಾಹುಬಲದವನು ಎಂದು ತನಗೆ ತಾನೇ ಪರಾಕು ಪಂಪು ಒತ್ತಿಕೊಳ್ಳುತ್ತ, ಸುರತ ಕೇಳಿಗೆ ಉತ್ತರೆ ತಾನಾಗಿ ಒಡ್ಡಿಕೊಳ್ಳುವಂತೆ ಪ್ರೇರೇಪಿಸುತ್ತಾನೆ.
ಜೀವಜಗತ್ತಿನಲ್ಲಿ ಎಲ್ಲ ಗಂಡು ಪ್ರಾಣಿಗಳೂ ತಮ್ಮ ಸಾಮರ್ಥ್ಯದ ಬಗೆಗೆ ಅರಿವುಂಟುಮಾಡಿ ಸಂಗಾತಿಯನ್ನು ಸೆಳೆಯಲು ಪ್ರಕೃತಿದತ್ತವಾದ ವಿವಿಧ ರೀತಿಯ ಪ್ರಚೋದನಾ ತಂತ್ರಗಳನ್ನು ಅನುಸರಿಸುತ್ತವೆ. ಆದರೆ ನಮ್ಮ ಪುರುಷ ಪುಂಗವರಿಗೆ ನುಡಿಯ ನಂಟಿದೆಯಲ್ಲ. ಏನೆಲ್ಲವನ್ನೂ ಮಾತಿನಲ್ಲೇ ಸಂವಹನಿಸಬಲ್ಲರು. ಹಾಗಾಗಿ ಅವರು ಮದಕರಿಯಂತೆ ಘೀಳಿಡಬೇಕಿಲ್ಲ, ಗಂಡು ಕೋಗಿಲೆಯಂತೆ ಕುಹೂಗೀತ ಹಾಡಬೇಕಿಲ್ಲ, ಮಯೂರದಂತೆ ಶಿಖೆಯೆತ್ತಿ, ಗರಿಬಿಚ್ಚಿ ನರ್ತಿಸಬೇಕಿಲ್ಲ.

ಫೋಟೋ ಕೃಪೆ : ಗೂಗಲ್

ಉತ್ತರೆಯ ಬಾಳಿನಲ್ಲಿ ಇಂತಹ ಮಿಲನ ಮಹೋತ್ಸವಗಳು ಬೆರಳೆಣಿಕೆಯವು. ಆಕೆಗೆ ಬಹಳ ಬೇಗನೆ ವೈಧವ್ಯ ಪ್ರಾಪ್ತಿಯಾಗುತ್ತದೆ. ಆಕೆಯ ಗರ್ಭವೂ ಅಶ್ವತ್ಥಾಮನ ಕ್ರೋಧಾಗ್ನಿಗೆ, ಸೇಡಿಗೆ ಆಹುತಿಯಾಗುವ ಪ್ರಸಂಗ ಕುರುಕ್ಷೇತ್ರದಲ್ಲಿ ಉಂಟಲ್ಲ. ಹಾಗಾಗಿ ಆಕೆಯ ಬಾಳಿಗೆ ಈ ಯುಗಳಗೀತೆ ಒಂದು ಮುಂಗಡ ಬೋನಸ್; ಅನುಕಂಪ ಭತ್ಯೆ! ಜೀವನಪರ್ಯಂತ ಮೆಲ್ಲಲುಳಿದ ಖಾದ್ಯ.

ಒಟ್ಟಿನಲ್ಲಿ ಇಂತಹ ಹಲವು ಕಾರಣಗಳಿಂದಾಗಿ ಎದೆಯ ಹಾಡಾಗಿ ಹರಿಯಬಲ್ಲ, ಕಾಡಬಲ್ಲ ಭಾವ; ಈ ಗೀತೆಯದು. ಪ್ರಣಯ, ರಸಿಕತೆ ಹಾಗೂ ಮಾಧುರ್ಯಗಳ ಮುಪ್ಪುರಿ ಈ ಗೀತೆ.
ಕೆಲ ದಿನಗಳ ಹಿಂದೆ ಉಪಾಸನೆ ಚಿತ್ರದ “ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ” ಗೀತೆಯ ಕುರಿತು ಬರೆದಿದ್ದೆ. ಅದನ್ನು ಮೆಚ್ಚಿ ಪ್ರತಿಕ್ರಿಯಿಸಿದ ಮೊಗಸಾಲೆ ಮಿತ್ರರು, ಮತ್ತಷ್ಟು ಹಾಡುಗಳನ್ನು ಕುರಿತು ಬರೆಯಲು ವಿನಂತಿಸಿದರು. ಈ ಸಲ ಹಳೆಯ ಹಾಡಿನ ಮೊರೆ ಹೋಗದೆ ಹೊಸ ಚಿತ್ರಗೀತೆಯೊಂದನ್ನು ಕುರಿತು ಬರೆದಿರುವೆ.
ದಯವಿಟ್ಟು ಓದಿ-ಆಲಿಸಿ-ವೀಕ್ಷಿಸಿ. ನಿಮ್ಮ ಅಭಿಪ್ರಾಯವನ್ನು ಅಕ್ಷರಗಳಲ್ಲಿ ಮಾತ್ರ ದಾಖಲಿಸಿ. ಮೋಜುಚಿತ್ರಗಳು ದಯವಿಟ್ಟು ಬೇಡ.

‘ಉತ್ತರೆ ಉತ್ತರೆ’ ಹಾಡಿನ ಸಾಹಿತ್ಯ :

ಉತ್ತರೆ, ಉತ್ತರೆ
ಚಂದ ನೀನು ನಕ್ಕರೆ
ಹತ್ತಿರ ಬಂದರೆ, ಇನ್ನು ಚಂದ ಉತ್ತರೆ.

ಸುಂದರ ಚಂದಿರ ಸುಕುಮಾರ
ಮುತ್ತಲೇ ಮತ್ತಿನ ಶೃಂಗಾರ
ಏನು ಹರುಷವಿದು.

ಹೆಗಲ ಮೇಲೆ ಇಂದ್ರ-ಧನಸ್ಸು
ಹೊರುವ ಬಾಹು ಬಲದವನು
ಪ್ರಣಯ ಕೇಳಿ ಲೀಲೆಯನು
ನಿನಗೆ ಹೇಳಿ ಕೊಡುವವನು.
ಉತ್ತರೆ, ಉತ್ತರೆ
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ, ಇನ್ನು ಚಂದ ಉತ್ತರೆ.

ಅಂಗವಸ್ತ್ರ ತೇಲುವಂತೆ, ಮೆಲ್ಲ ಬೀಸೋ ಕಳ್ಳ ಗಾಳಿ
ನಲ್ಲ ನಿನ್ನ ಉಸಿರು.

ಖಡ್ಗವನ್ನೇ ಬೆವರುವಂತೆ ಮಾಡುವಂತ ಮಿಂಚುಬಳ್ಳಿ
ನಲ್ಲೆ ನಿನ್ನ ನೋಟ.
ಧೀಂತನ ಧೀಂತನ ನರ್ತಿಸಿದೆ.
ರೋಮವು ವಿಧ-ವಿಧ ವರ್ತಿಸಿದೆ,
ಮೋಹ ಗುರುಚತುರ.

ಎದೆಯ ಮೇರು ಶಿಖರದಲಿ
ಒರಗು ಬಾರೆ ಇಂದುವದನೆ.
ಅಧರ ಜೇನ ಸವಿಯುವುದೇ
ಪರಮ ಪುಣ್ಯ ಮಂದಗಮನೆ.

ಉತ್ತರೆ, ಉತ್ತರೆ
ಇಂದು ನಿನ್ನ ಕೈಸೆರೆ
ಹತ್ತಿರ ಬಂದರೆ, ಇನ್ನು ಚಂದ ಉತ್ತರೆ.

ಚೆಂದದ ಈ ಹಾಡು ಕೇಳಲು ದಯವಿಟ್ಟು ಈ
ಕೊಂಡಿಯನ್ನು ಕುಟ್ಟಿ:

ಉತ್ತರೆ ಉತ್ತರೆ 


  • ಕೆ ರಾಜಕುಮಾರ್ –ಲೇಖಕ-ಪ್ರಶಿಕ್ಷಕ. ಕನ್ನಡ ಚಳವಳಿ: ಜೀವಮಾನ ಸಾಧನೆಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಪ್ರಶಸ್ತಿ. ಕಸಾಪ ಮಾಜಿ ಗೌರವ ಕಾರ್ಯದರ್ಶಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading