ನಾರೀಶಕ್ತಿ ಪುರಸ್ಕೃತೆ ‘ನೊಮಿತೋ ಕಾಮ್ದಾರ್’



ಶ್ರೀ ಸ್ವಾಮಿ ಮತ್ತು ಅವರ ಶ್ರೀಮತಿ ನೊಮಿತೋ ಕಾಮ್ದಾರ್ ದಂಪತಿಗಳು ಹುಟ್ಟು ಹಾಕಿದ ಹೊನ್ನೆಮರಡು ಅಡ್ವೆಂಚರ್ ಬೇಸ್ ಕ್ಯಾಂಪ್. ಅವರ ಸಾಧನೆಗೆ ನಾರೀಶಕ್ತಿ ಪ್ರಶಸ್ತಿ ಸಂದಿದೆ. ಅವರ ಬಗ್ಗೆ ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ ಡಾ.ಗಜಾನನ ಶರ್ಮಾ ಅವರು. ಮುಂದೆ ಓದಿ…

‘#ಹೊನ್ನೆಮರಡು‘ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರಂತಹ ಪುಣ್ಯಾತ್ಮರು ಓಡಾಡಿದ ನೆಲ.‌ ಅವರು ೧೯೨೮ರಲ್ಲಿ ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾಗ ಶರಾವತಿ ನದಿಯನ್ನು ಪಳಗಿಸಿ ವಿದ್ಯುತ್ ಉತ್ಪಾದಿಸಲು ಮತ್ತೊಮ್ಮೆ ಸರ್ಕಾರವನ್ನು ಒತ್ತಾಯಿಸುತ್ತಾರೆ. (೧೯೧೮ರಲ್ಲಿ ಅವರೊಮ್ಮೆ ಆ ಪ್ರಸ್ತಾಪ ಮಂಡಿಸಿ ಅದು ಕಾರಣಾಂತರಗಳಿಂದ ನಿರಾಕರಿಸಲ್ಪಟ್ಟಿತ್ತು)

ಫೋಟೋ ಕೃಪೆ : outlook india ಹೊನ್ನೆಮರಡಿ

“ಕಬ್ಬಿಣದ ಕಾರ್ಖಾನೆ ಚಾರ್ಕೋಲ್ ಉರಿಸಿ ಉಗಿ ಉತ್ಪಾದಿಸಿ ನಡೆಯುತ್ತಿರುವುದರಿಂದ ಅಪಾರ ಪ್ರಮಾಣದ ಕಾಡು ಹಾನಿಗೊಳ್ಳುತ್ತಿದೆ. ಅದನ್ನು ತಡೆಯಲು ಕಾರ್ಖಾನೆಗೆ ವಿದ್ಯುತ್ ಬೇಕು. ಕಾವೇರಿ ವಿದ್ಯುತ್ ಇಲ್ಲಿಗೆ ಬಹುದೂರ, ಹಾಗಾಗಿ ಶರಾವತಿ ಯೋಜನೆ ಹಮ್ಮಿಕೊಳ್ಳೋಣ” ಎಂದು ಪ್ರಭುತ್ವವನ್ನು ಒತ್ತಾಯಿಸಿದ್ದಲ್ಲದೆ, ಅಣೆಕಟ್ಟೆಗೆ ಹೊನ್ನೆಮರಡು ಸೂಕ್ತವೆಂದು ಇಲ್ಲಿ ತಾವೇ ಸ್ವತಃ ಸಮೀಕ್ಷೆ ನಡೆಸುತ್ತಾರೆ. ಇಲ್ಲಿಗೆ ಸಮೀಪದ ಮೆಣಸುಗಾರಿನಲ್ಲಿ ದೋಣಿ ನಡೆಸುತ್ತಿದ್ದ ” ಗಣಪ” ಎಂಬ ನಾವಿಕನ ದೋಣಿಯಲ್ಲಿ ಕುಳಿತು ನದಿಯಲ್ಲಿ ಮತ್ತು ಈ ಪ್ರದೇಶದಲ್ಲಿ ಓಡಾಡುತ್ತಾರೆ. ಹೊನ್ನೆಮರಡು ನೂರು ಅಡಿ ಎತ್ತರಕ್ಕಿಂತ ಹೆಚ್ಚು ಎತ್ತರದ ಅಣೆಕಟ್ಟೆಗೆ ಸೂಕ್ತವಾದದ್ದಲ್ಲ ಎಂದು ಅವರಿಗೆ ಮನವರಿಕೆಯಾಗಿ ನಂತರ ಹಿರೇಭಾಸ್ಕರ ಆಯ್ಕೆಯಾದದ್ದು ಇತಿಹಾಸ. ಇದೇ ಹೊನ್ನೆಮರಡಿನ ಸಮೀಪವೇ ಭೀಮನ ಕಟ್ಟೆ ಎಂಬ ಮಡು ಇತ್ತು.ಅಲ್ಲಿ ಸಾಲುಬಂಡೆಗಳ ಕಟ್ಟೊಂದಿತ್ತು ಎಂದು ಹೇಳಲಾಗುತ್ತದೆ ಮತ್ತು ಅದನ್ನು ಮಹಾಭಾರತದ ಭೀಮ ನಿರ್ಮಿಸಿದ್ದೆಂದು ಸ್ಥಳೀಯ ಐತಿಹ್ಯಗಳಿವೆ ಎನ್ನಲಾಗುತ್ತದೆ.

ಫೋಟೋ ಕೃಪೆ : mapio.net ಭೀಮನ ಕಟ್ಟೆ

ಹೀಗೆ ತನ್ನದೇ ಆದ ಇತಿಹಾಸ ಹೊಂದಿದ ಈ ಹೊನ್ನೆಮರಡು ೧೯೬೪ ರ ಹೊತ್ತಿಗೆ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾಗಿ ಪರ್ಯಾಯ ದ್ವೀಪವಾಗಿ ನಿರ್ಲಕ್ಷ್ಯಕ್ಕೀಡಾಗುತ್ತದೆ.
ಮುಂದೆ ಆ ಪ್ರದೇಶಕ್ಕೆ ಬೆಂಗಳೂರು ನಗರದ ಜೋಡಿಯೊಂದು ಬರುತ್ತದೆ. “ಸ್ಥಳೀಯರೂ ಬರಲು ಹಿಂಜರಿಯುತ್ತಿದ್ದ ಈ ಮೂಲೆಯ ಪರ್ಯಾಯ ದ್ವೀಪಕ್ಕೆ ಬೆಂಗಳೂರಿನ ಈ ದಂಪತಿಗಳೇಕೆ ಬಂದರು, ಇವರೇನೋ ಅಪಾಯ ಉಂಟಯಮಾಡಲು ಮತ್ತು ಏನೋ ಲಾಭ ಮಾಡಿಕೊಳ್ಳಲು ಬರುತ್ತಿದ್ದಾರೆ ” ಎಂದೆಲ್ಲ ಊಹಾಪೋಹ ಸುತ್ತಮುತ್ತ ಹರಡುತ್ತದೆ. ಆದರೆ ಆ ದಂಪತಿಗಳು ಸರ್ಕಾರದಿಂದ ಅನುಮತಿ ಪಡೆದು ಆ ಮೂಲೆಯಲ್ಲಿ ಜಲಸಾಹಸ ಕ್ರೀಡೆಯ ಸಂಸ್ಥೆಯೊಂದನ್ನು ಹುಟ್ಟುಹಾಕುತ್ತಾರೆ. ಅಷ್ಟೇ ಅಲ್ಲ ನಾಡಿನ ಎಲ್ಲೆಡೆಯಿಂದ ಪ್ರವಾಸಿಗರನ್ನು, ಜಲಸಾಹಸಿಗರನ್ನು ಆಕರ್ಷಿಸುತ್ತಾರೆ. ಅಲ್ಲೊಂದು ವೃತ್ತಾಕಾರದ ಪುಟ್ಟ ವೇದಿಕೆಯನ್ನು ನಿರ್ಮಿಸಿ ನಾಡಿನ ಪರಿಸರ ತಜ್ಞರನ್ನು, ರಾಷ್ಟ್ರ ಮಟ್ಟದ, ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆಸಿ ಉಪನ್ಯಾಸ, ಯುವಕರಿಗೆ ತರಬೇತಿ ಹೀಗೆ ಹಲವು ಹತ್ತು ಜನೋಪಯೋಗಿ ಕಾರ್ಯಕ್ರಮ ನಡೆಸತೊಡಗುತ್ತಾರೆ!

This slideshow requires JavaScript.

“ಹೊರಗಿನಿಂದ ಬರುವ ಇವರೆಲ್ಲ ಸ್ವಾರ್ಥಕ್ಕಾಗಿ ನಮ್ಮ ಪರಿಸರವನ್ನು ಬಳಸಿಕೊಂಡು ಕೊನೆಗದನ್ನು ಹಾಳುಗೈದು ಪಲಾಯನ ಮಾಡುತ್ತಾರೆ” ಎಂದೇ ನಾವೆಲ್ಲ ಭಾವಿಸಿದ್ದೆವು. ಆದರೆ ಈ ದಂಪತಿಗಳ ಪರಿಸರ ಪ್ರೀತಿ ನಾಟಕವಾಗಿರಲಿಲ್ಲ. ಅದು ನೈಜವಾಗಿತ್ತು. ಅವರ ಅಂತರಂಗದ ಕಾಳಜಿಯಾಗಿತ್ತು.

ಮಲೆನಾಡ ಮೂಲೆಯ ಹಿನ್ನೀರ ಮಧ್ಯದ ಈ ಪರ್ಯಾಯ ದ್ವೀಪದಲ್ಲಿ ಜಲಸಾಹಸ ಕ್ರೀಡೆಯನ್ನು ಆರಂಭಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಆ ದಂಪತಿಗಳೇ ಶ್ರೀ ಸ್ವಾಮಿ ಮತ್ತು ಅವರ ಶ್ರೀಮತಿ ನೊಮಿತೋ ಕಾಮ್ದಾರ್. ನಿಜಕ್ಕೂ ಈ ದಂಪತಿಗಳು ಅಭಿನಂದನೀಯರು. ಅದರಲ್ಲೂ ಅವರು ತಮ್ಮ ವ್ಯಾಪ್ತಿಯ ಪ್ರದೇಶವನ್ನು ಒಂದಿಷ್ಟೂ ಮಾಲಿನ್ಯಕ್ಕೆ ಈಡುಮಾಡದೇ, ಸ್ಥಳೀಯರಿಗೆ ಯಾವುದೇ ಬಗೆಯ ತೊಂದರೆ ಕೊಡದೆ ನಾಡಿನ ಯುವಕರಲ್ಲಿ ಜಲಸಾಹಸದ ಪ್ರೀತಿಯನ್ನು ಹುಟ್ಟಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಸಂಗತಿ. ಯುವಜನರಲ್ಲಿ ಪರಿಸರ ಕಾಳಜಿಯನ್ನು ಬಿತ್ತುತ್ತಿರುವುದು ಮೆಚ್ಚತಕ್ಕ ಅಂಶ.

ನಾವೊಮ್ಮೆ ಇವರ ದೋಣಿಗಳಲ್ಲಿ ಕುಳಿತು ನಡುದ್ವೀಪವೊಂದರಲ್ಲಿ ವಾಸ್ತವ್ಯ ಹೂಡಲು ಹೋದಾಗ ನಮಗೆ ನೊಮೊತೋ ಮೇಡಂರ ನೈಜ ಪರಿಸರ ಕಾಳಜಿ ಅರ್ಥವಾಯಿತು. ನಾವೆಲ್ಲ ಕಲ್ಲಂಗಡಿ ಹಣ್ಣೊಂದನ್ನು ತಿಂದು ಅದರ ಸಿಪ್ಪೆಯನ್ನು ನಡುಗುಡ್ಡೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾಗ ನೊಮಿತೋ ಮೇಡಂ ಆ ಸಿಪ್ಪೆಯನ್ನೆಲ್ಲ ಎತ್ತಿ, ಒಂದು ಗುಂಡಿ ತೋಡಿ ಅದರಲ್ಲಿ ಹಾಕಿ ಮಣ್ಣು ಮುಚ್ಚಿ, ” ದ್ವೀಪ ನಾವು ಬರುವ ಮೊದಲು ಹೇಗಿತ್ತೋ ಹಾಗೆಯೇ ಬಿಟ್ಟು ಹೋಗುವಾಗಲೂ ಇರಬೇಕು. ಇಲ್ಲಿ ನಾವು ಬಂದುಹೋದ ಗುರುತು ಇರಬಾರದು” ಎಂದು ಹೇಳಿದರು. ಅಂದು ರಾತ್ರಿ ಬೆಂಕಿಯುರಿಸಿ ಉಂಟಾದ ಬೂದಿಯನ್ನೂ ನೆಲದೊಳಗೆ ಮುಚ್ಚಿ, ಸುಟ್ಟ ಜಾಗವನ್ನು ತೊಳೆದು ಯಥಾಸ್ಥಿತಿಯನ್ನು ಉಂಟುಮಾಡಿದರು. ನಾವಿಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ತರುವಂತಿಲ್ಲ. ಅನಿವಾರ್ಯ ವಸ್ತುಗಳಿದ್ದರೂ ಅದನ್ನು ಇಲ್ಲಿ ಬಿಸಾಡದೇ ಚೀಲದಲ್ಲಿಟ್ಟು ಹಿಂದಕ್ಕೊಯ್ಯಬೇಕು. ನಮಗೆ ಇವರ ಸುರಕ್ಷತಾ ಕಾಳಜಿ, ಮತ್ತು ಪರಿಸರ ಪ್ರೀತಿ ಎರಡೂ ತುಂಬ ಇಷ್ಟವಾದವು.



ಈ ನೊಮಿತೋ ಮೇಡಂ, ಸೇಫ್ಟಿ ಜಾಕೇಟ್ ತೊಟ್ಟು, ನಮ್ಮನ್ನು ದೋಣಿಯಲ್ಲಿ ಕುಳ್ಳಿರಿಸಿಕೊಂಡು ಹುಟ್ಟುಹಾಕುತ್ತ ಹೊರಟರೆ ಗೇರುಸೊಪ್ಪೆಯ ಚೆನ್ನಭೈರಾದೇವಿಯ ಅಪರಾವತಾರವೇ! ಅವರ ವೈಖರಿ ಜೊತೆಗಿರುವ ನಮ್ಮಲ್ಲೂ ಸಾಹಸದ ಪ್ರೇರಣೆಯೊಂದನ್ನು ಹುಟ್ಟಿಸದಿದ್ದರೆ ಕೇಳಿ. ಅಂತಹ ಗಟ್ಟಿಗಿತ್ತಿ ಇವರು. ಬೆಂಗಳೂರು ನಗರದಲ್ಲಿ ಐಷಾರಾಮಿಯಾಗಿ ಬದುಕುವ ಅವಕಾಶವನ್ನು ಬದಿಗಿಟ್ಟು, ಈ ಮಲೆನಾಡಮೂಲೆಗೆ ಬಂದು ನಾಡಿನ ಯುವಜನರಲ್ಲಿ ಜಲಸಾಹಸದ ಪ್ರೀತಿಯನ್ನು ಹುಟ್ಟುಹಾಕುತ್ತಿರುವ ನೊಮಿತೋ ಮೇಡಂ ನಿಜವಾಗಿಯೂ “ನಾರೀಶಕ್ತಿ”. ಅವರಿಗೆ ನಾರೀಶಕ್ತಿ ಪುರಸ್ಕಾರ ಲಭಿಸಿದೆಯೆಂದರೆ ಆ ಪುರಸ್ಕಾರಕ್ಕೊಂದು ಸಾರ್ಥಕತೆ. ಅಭಿನಂದನೆಗಳು ನೊಮಿತೋ ಕಾಮ್ದಾರ್ ಮೇಡಂ. ಪ್ರಶಸ್ತಿಗಳು ನಿಮ್ಮಂತಹ ಕಾಮ್ದಾರರಿಗೆ ಬಂದಾಗಲೇ ಅದಕ್ಕೆ ಗೌರವ ಸಲ್ಲುವುದು. ಅದು ಕೇವಲ ನಾಮ್ದಾರರ ಪಾಲಾಗಬಾರದು.


  • ಡಾಕ್ಟರ್ ಗಜಾನನ ಶರ್ಮ (ಹಿರಿಯ ಖ್ಯಾತ ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading