ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೫)- ಶಿವಕುಮಾರ್ ಬಾಣಾವರ



ಚಕ್ರಾ ಸಾವೆಹಕ್ಲು ಅಣೆಕಟ್ಟೆಯಲ್ಲಿ ಕೆಲಸ ಮಾಡಿದ್ದರಿಂದ ಈಗಲೂ ಆ ಊರಿನತ್ತ ನನ್ನನ್ನು ಆಗಾಗ ಸೆಳೆಯುತ್ತದೆ. ವೈಭವೀಯುತವಾಗಿ ಸೆಳೆದ ಚಕ್ರಾ, ಇಂದು ನೋಡಿದರೆ ಎಲ್ಲವನ್ನು ಕಳೆದುಕೊಂಡು ಹಾಳಾದ ಹಂಪೆಯಂತೆಯೇ ಕಾಣಿಸುತ್ತದೆ. ಶಿವಕುಮಾರ್ ಬಾಣಾವರ ಅವರ ಅನುಭವದ ಬುತ್ತಿಯ ಈ ಲೇಖನ.ಮುಂದೆ ಓದಿ …

ಈಗ, ಯವನರ ಪದಾಘಾತದಿಂದ ತುಳಿಯಲ್ಪಟ್ಟು ಹಾಳಾದ ಹಂಪೆಯಂತೆ ಚಕ್ರಾನಗರದಲ್ಲಿದ್ದ ಕಟ್ಟಡಗಳಲ್ಲಿ ಮುಕ್ಕಾಲು ಭಾಗ ನೆಲಕಚ್ಚಿದೆ. ಕರ್ನಾಟಕ ಪವರ್ ಕಾರ್ಪೊರೇಶನ್ನಿನ ನೌಕರರು ಯಾರೂ ಅಲ್ಲಿ ಇಲ್ಲ. ಸುತ್ತ ಮುತ್ತ ವಾಸಿಸುತ್ತಿರುವ ಕೆಲವು ಹಳ್ಳಿಗರ ಮನೆಗಳಷ್ಟೇ ಕಾಣುತ್ವವೆ. ಸರಕಾರಿ ಶಾಲೆಯ ಕಟ್ಟಡವೊಂದಿದೆ. ಮುಖ್ಯ ಕಛೇರಿಯ ಆದೇಶದಂತೆ ೩೧ ಮಾರ್ಚ್ ೨೦೦೦ ದಿಂದ, ಇಡೀ ಕಾಲೋನಿಯ ಜಾಗವು ಅರಣ್ಯ ಇಲಾಖೆಗೆ ಹಸ್ತಾಂತರಗೊಂಡಿದ್ದು ಅವರ ನಾಮ ಫಲಕಗಳು ಗೋಚರಿಸುತ್ತವೆ. ಚಕ್ರಾ ಸಾವೆಹಕ್ಲು ಅಣೆಕಟ್ಟುಗಳಿಗೆ ಹೋಗುವ ಡಾಂಬರು ರಸ್ತೆ ಮಾತ್ರ ನಿಚ್ಚಳವಾಗಿ ಕಾಣುತ್ತದೆ. ಕಾಲೋನಿಯಲ್ಲಿ ನಿರ್ಮಿತವಾಗಿದ್ದ ಆಟದ ಮೈದಾನದಲ್ಲಿ ಗಿಡ ಗೆಂಟೆಗಳು ಬೆಳೆದಿವೆ. ಮೌನವೆಂದರೆ ಮಹಾ ಮೌನ. ಅಲ್ಲೊಂದು ಇಲ್ಲೊಂದು ಹಕ್ಕಿ ಪಕ್ಷಿಗಳ ಕಲರವ.

ಆಗಾಗ ಸುಯ್ ಗುಡುವ ಗಾಳಿ. ಜೊತೆಗೆ ದೇವಸ್ಥಾನದೊಳಗೆ ಮೌನವಾಗಿ ಕುಳಿತಿರುವ ಗಣಪತಿಯ ಮೂರ್ತಿ ತಟ್ಟನೆ ನೆನಪಾಗುತ್ತಾನೆ. ಆದರೆ ಯಾರೇ ಇರಲಿ ಇಲ್ಲದಿರಲಿ, ಮಳೆಗಾಲದಲ್ಲಿ ತಮ್ಮೊಡಲನ್ನು ತುಂಬಿಕೊಳ್ಳುವ ಚಕ್ರಾ ಸಾವೆಹಕ್ಲು ಅಣೆಕಟ್ಟುಗಳು ತಮಗೆ ವಹಿಸಿದ ಕಾಯಕವನ್ನು, “ಕಾಯಕವೇ ಕೈಲಾಸ” ಎಂದರಿತು, ಅಂದಿನಿಂದಲೂ ಚಾಚೂ ತಪ್ಪದೆ ನಿರ್ವಹಿಸುತ್ತಾ ಬಂದಿವೆ. ಈಗಲೂ ಅಷ್ಟೇ. ಹಾಗಾಗಿ ಅಲ್ಲಿ ಕೆಲವು ವರ್ಷ ನಾನು ಬಾಳಿದ್ದರಿಂದಲೋ ಏನೋ, ಇಂದು ಅದನ್ನು ನೋಡಿದರೆ ಹಿಂದಿನ ಎಲ್ಲಾ ವೈಭವಗಳನ್ನೂ ಕಳೆದುಕೊಂಡು ಹಾಳಾದ ಹಂಪೆಯಂತೆಯೇ ಕಾಣಿಸುತ್ತದೆ. ಇದನ್ನು ಕಂಡು ನನ್ನ ಮನ ಮರುಗುತ್ತದೆ. ಈ ಕಾಲೋನಿಯಲ್ಲಿ ಇದ್ದವರೆಲ್ಲರೂ ಇಲ್ಲಿಯ ಬದುಕನ್ನು ಮರೆತಿರಲಾರರು. ಅಂತೆಯೇ ನನಗೂ ಚಕ್ರಾನಗರದ ನೆನಪು ಸದಾ ಹಚ್ಚ ಹಸಿರು.

ನೆನಪು ಮರುಕಳಿಸುತಿವೆ
ಹೊಳಪು ಮಂಕಾಗುತಿವೆ
ಒನಪು ಮಂಜಾಗುತಿವೆ
ಹೊರಳಿ ನಾ ನೋಡುತಿಹೆ
ಮರೆಯಲಿ ಹೇಗೆ ಮಮತೆಯೇ
ಮರಳಿ ಅಲ್ಲಿ ಬಂದುಬಿಡಲೇ
ಸ್ನೇಹಸೇತುವೆ ಸೆಳೆಯುತಿದೆ
ಮುಂದೆಯೂ ಚಲಿಸಲಾಗುತಿಲ್ಲ
ಹಿಂದೆಯೂ ತಿರುಗಲಾಗುತಿಲ್ಲ
ನೆನಪೇ ನೆನೆದು ನೋವಾಗುತಿದೆ
ನಲಿವು,ಒಲವು ಇನ್ನು ಬರೀನೋವು

 – ಶಿವಾನಂದ ನಾಗೂರ (ಧಾರವಾಡ)

ನನ್ನ ವೃತ್ತಿಜೀವನದ ೩೫ ವರ್ಷಗಳಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿಯೆಂದರೆ ಕಾಳಿನದಿ ಜಲವಿದ್ಯುತ್ ಯೋಜನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಶ್ರೀಯುತ ಹೊಸಹಳ್ಳಿ ದಾಳೇಗೌಡರವರು. (94801 41808) ತಮ್ಮ ಬಹುಮುಖ ಪ್ರತಿಭೆಯಿಂದ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದವರು ಇವರು. ಕಲಾವಿದರೂ, ಗಾಯಕರೂ, ಸಾಹಿತಿಗಳೂ, ಕ್ರೀಡಾಪಟುಗಳೂ, ಯೋಗ ಪಟುಗಳೂ, ಸಮಾಜ ಸೇವಕರೂ ಆಗಿರುವ ಗೆಳೆಯ ಹೊಸಹಳ್ಳಿ ದಾಳೇಗೌಡರವರು ವೃತ್ತಿಯಲ್ಲಿ ಇಂಜಿನಿಯರರಾದರೂ ಕಲೆ ಮತ್ತು ಸಾಹಿತ್ಯ ಕ್ಷೇತ್ರ ಇವರನ್ನು ಬಿಡದಂತೆ ಸೆಳೆದಿರುವುದು ಸೋಜಿಗವೆನಿಸುತ್ತದೆ. ಇಷ್ಟೆಲ್ಲಾ ಹವ್ಯಾಸಗಳನ್ನು ಇವರು ತಮ್ಮ ಕಛೇರಿ ಕೆಲಸಗಳಿಗೆ ಚ್ಯುತಿ ಬಾರದಂತೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಅಭಿಮಾನದ ವಿಷಯ. ಇದರಿಂದಾಗಿಯೇ ಇವರು ನಮಗೆಲ್ಲಾ ಆಪ್ತವಾಗುತ್ತಾರೆ ಹಾಗೂ ಎಲ್ಲರ ಪ್ರಶಂಸೆಗೂ ಪಾತ್ರರಾಗುತ್ತಾರೆ.

ಇವೆಲ್ಲದರೊಂದಿಗೆ ಪತ್ರ ಸಂಸ್ಕೃತಿ ಸಂಘಟನೆಯಂತಹ ವಿಶಿಷ್ಟ ಬಗೆಯ ಮನುಷ್ಯ ಸಂಬಂಧ ಬೆಸೆಯುವ ಕಾಯಕ ಕೈಗೆತ್ತಿಕೊಂಡು, ವೈವಿದ್ಯಮಯ ವಿಷಯಗಳ ಕುರಿತಾದ “ಪಿಸುಮಾತು” ತ್ರೈಮಾಸಿಕ ಪತ್ರಿಕೆಯನ್ನು ೧೯೯೯ರಿಂದ ಹೊರತರುತ್ತಾ ಹತ್ತು ವರ್ಷಗಳನ್ನು ಪೂರೈಸಿ ಹನ್ನೊಂದನೇ ವರ್ಷದಲ್ಲಿ ಪತ್ರಿಕೋದ್ಯಮದಲ್ಲೂ ಮುನ್ನಡೆ ಸಾಧಿಸಿರುವ ಇವರು ರಾಜ್ಯದಾದ್ಯಂತ ಹೆಸರು ಮಾಡಿರುವುದು ಜನಜನಿತ.

“ಕನ್ನಡವೇ ಸತ್ಯ ಕನ್ನಡವೇ ನಿತ್ಯ”, “ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ” ಇತ್ಯಾದಿ ಧ್ಯೇಯ ವಾಕ್ಯಗಳನ್ನು ಉಸಿರಾಗಿಸಿಕೊಂಡು ಅಂಬಿಕಾ ನಗರದಿಂದ ಚಕ್ರಾನಗರದ ಮುಖ್ಯ ಅಭಿಯಂತರ ಕಛೇರಿಗೆ ವರ್ಗಾವಣೆಯಾಗಿ ಬಂದು ಕನ್ನಡ ಪರ ಹೋರಾಟ ನಡೆಸಿ ಪಡೆದ ಪ್ರತಿಫಲದ ಸ್ವಾರಸ್ಯಕರ ಘಟನೆಯ ವಿಸ್ತಾರವಾದ ವೃತ್ತಾಂತವನ್ನು ಅವರ ನುಡಿಗಳಲ್ಲೇ ಕೇಳುವುದು ಸೂಕ್ತ….

೧೯೮೩ ನೇ ಇಸವಿ. ಎಲ್ಲೆಲ್ಲೂ ಕನ್ನಡದ ಬಗ್ಗೆಯೇ ಮಾತು. ಇನ್ನು ಮೇಲೆ ಎಲ್ಲಾ ಹಂತಗಳಲ್ಲೂ ಕನ್ನಡದಲ್ಲೇ ವ್ಯವಹರಿಸಬೇಕು ಎಂಬ ಕರ್ನಾಟಕ ಸರಕಾರದ ಆದೇಶ. ಈ ಆದೇಶ ನಮ್ಮ ಮುಖ್ಯ ಅಭಿಯಂತರ ಕಛೇರಿಗೂ ಬಂದು, ನಮಗೆಲ್ಲಾ ಅದರ ಪ್ರತಿಯನ್ನು ವಿತರಿಸಿದಾಗಲೇ ನಾನೂ ನಿರ್ಧಾರ ಮಾಡಿದ್ದು. ಇನ್ನು ಮುಂದೆ ಕನ್ನಡದಲ್ಲೇ ಬರೆಯಬೇಕು. ಕನ್ನಡದಲ್ಲೇ ಸಹಿ ಮಾಡಬೇಕು ಅಂತ.

ಕನ್ನಡದಲ್ಲೇ ಬರೆಯುವ ನಿರ್ಧಾರವೇನೋ ಮಾಡಿದೆ. ಆದರೆ ತಾಂತ್ರಿಕ ಶಬ್ಧಗಳಿಗೆ ತತ್ಸಮಾನ ಕನ್ನಡ ಪದಗಳು ಸಿಗದೆ ಒದ್ದಾಟ ಶುರುವಾಯಿತು. ಆಗ ನನ್ನ ಹಿರಿಯ ಮಿತ್ರರೊಬ್ಬರು ಸಹಾಯಕ್ಕೆ ಬಂದರು. ಕಾರಣ ಇವರೂ ಕನ್ನಡದಲ್ಲಿ ನನಗಿಂತ ಚೆನ್ನಾಗಿ ಬರೆಯುತ್ತಿದ್ದರು. ಅವರು ಪುಸ್ತಕ ಪ್ರೇಮಿ. ನನಗೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು, ಉತ್ತಮ ಪುಸ್ತಕವನ್ನು ಓದಲು ಪ್ರೇರೇಪಿಸಿದವರೇ ಅವರು. ಇಬ್ಬರೂ ಸೇರಿ ಸುಮಾರು ಮುನ್ನೂರು ತಾಂತ್ರಿಕ ಪದಗಳಿಗೆ ಅರ್ಥ ಹಾಗೂ ತತ್ಸಮಾನ ಶಬ್ಧಗಳನ್ನು ಕಂಡುಕೊಂಡು ಬಳಕೆಗೆ ತಂದೆವು. ತೀರಾ ತೊಡಕಾಗಿದ್ದ ತಾಂತ್ರಿಕ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆಯುತ್ತಿದ್ದೆವು. ಮೊದ ಮೊದಲು ನಮ್ಮ ಕನ್ನಡದ ಒಕ್ಕಣೆಗೆ ಸ್ವಲ್ಪ ಅಸಮಾಧಾನ ತೋರಿದರೂ ನಂತರ ಮೆಚ್ಚುಗೆ ಕಂಡು ಬರಲಾರಂಭಿಸಿತು. ಅಂದಿನಿಂದ ಇಂದಿನವರೆಗೂ ಅದನ್ನೇ ಪಾಲಿಸುತ್ತಾ ಬಂದಿದ್ದೇನೆ.



೧೯೮೫ ನೇ ಇಸವಿ. ನಾನು ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಅಭಿಯಂತರರ ಕಛೇರಿಯಿಂದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವೊಂದನ್ನು ಬರೆಯಬೇಕಾಗಿತ್ತು. ಕೆಳಹಂತದಿಂದ ಬಂದಿದ್ದ ವರದಿಗಳು ಆಂಗ್ಲ ಭಾಷೆಯಲ್ಲಿದ್ದವು. ಅವುಗಳನ್ನೆಲ್ಲಾ ಕ್ರೋಢೀಕರಿಸಿ, ಕನ್ನಡಕ್ಕೆ ಅನುವಾದ ಮಾಡಿ, ಕರಡು ಪತ್ರ ಬರೆದು, ಮೇಲಧಿಕಾರಿಗಳ ಋಜುವಿಗಾಗಿ ಕಳುಹಿಸಿದೆ. ನನಗಿಂತ ಮೇಲ್ಪಟ್ಟ ಇಬ್ಬರು ಅಧಿಕಾರಿಗಳು ನನ್ನ ಕನ್ನಡದ ಒಕ್ಕಣೆಯನ್ನು ಪ್ರಶಂಸಿಸಿ ತಾವೂ ಸಹ ಕನ್ನಡದಲ್ಲೇ ಋಜು ಹಾಕಿ ಮುಖ್ಯ ಅಭಿಯಂತರರಿಗೆ ಕಳುಹಿಸಿಕೊಟ್ಟರು. ಕನ್ನಡವೇ ಮಾತೃ ಭಾಷೆಯಾಗಿದ್ದ, ಕನ್ನಡ ನಾಡಿನಲ್ಲಿಯೇ ಜನಿಸಿ ಅಧಿಕಾರಿಯಾಗಿದ್ದ ಮುಖ್ಯ ಅಭಿಯಂತರರು, ನನ್ನ ಪತ್ರ ನೋಡಿ “ಎ ಡೀಟೈಲ್ಡ್ ಲೆಟರ್ ಶುಡ್ ಹ್ಯಾವ್ ಬೀನ್ ರಿಟನ್ ಇನ್ ಇಂಗ್ಲೀಷ್. ಬ್ರಿಂಗ್ ಔಟ್ ಆಲ್ ದಿ ಫ್ಯಾಕ್ಟರ್ಸ್ಆಫ್ ದಿ ಲೆಟರ್ ಆಫ್ ಪ್ರಾಜೆಕ್ಟ್ ಇಂಜಿನಿಯರ್ ಡೇಟೆಡ್ ೩೦ -೦೧ -೧೯೮೫” ಎಂದು ಬರೆದು ಪತ್ರವನ್ನು ಹಿಂದಿರುಗಿಸಿದರು. ನನಗಂತೂ ಅದನ್ನು ಕಂಡು ಮೈಯೆಲ್ಲಾ ರೋಷದಿಂದ ಕುದಿಯತೊಡಗಿತು. ತಕ್ಷಣವೇ ಆ ಪತ್ರವನ್ನು ಹಿಡಿದುಕೊಂಡು ಅವರ ಕೋಣೆಗೆ ಹೋಗಿ “ಅಲ್ಲಾ ಸಾರ್ ಕನ್ನಡದವರಾಗಿ ನಾವೇ ಕನ್ನಡದಲ್ಲಿ ಬರೆಯದೆ ಹೋದರೆ ಹೇಗೆ? ನಾನು ಬರೆದಿರೋದರಲ್ಲಿ ಏನಾದರೂ ತಪ್ಪಿದೆಯಾ?” ಅಂತ ಕೇಳಿದೆ. ದುಮುಗುಡುತ್ತಲೇ “ಏನೂ ಇಲ್ಲ. ಆದ್ರೂ ಇಂಗ್ಲೀಷಿನಲ್ಲಿ ಬರೆದುಕೊಂಡು ಬನ್ರೀ” ಅಂದರು. “ಹಾಗಾದರೆ ಸಾರ್ ಇನ್ಮೇಲೆ ಎಲ್ಲಾ ಪತ್ರಗಳನ್ನು ಕನ್ನಡದಲ್ಲೇ ಬರೀರಿ ಅಂತ ಸುತ್ತೋಲೆ ಕಳಿಸಿದ್ದೀರಲ್ಲಾ, ಅದನ್ನು ವಾಪಸ್ ತೆಗೆದುಕೊಂಡುಬಿಡಿ ಸಾರ್” ಅಂದೆ. ಅದಕ್ಕವರು ಕೋಪಿಸಿಕೊಂಡು “ಅದನ್ನೆಲ್ಲಾ ಕೇಳೋಕೆ ನೀವ್ಯಾರ್ರೀ?”ಅಂದರು. ಅದಕ್ಕೆ “ನಾನೊಬ್ಬ ಕನ್ನಡಿಗ. ಪಕ್ಕಾ ಅಭಿಮಾನಿ” ಎಂದೆ. “ನೀವು ಹೀಗೆಲ್ಲಾ ಮಾತನಾಡಿದರೆ ನಾನು ನಿಮ್ಮನ್ನು ಟ್ರಾನ್ಸ್ ಫರ್ ಮಾಡಿಬಿಡ್ತೀನಿ” ಅಂದರು. “ನಾನು ಯುವುದಕ್ಕೂ ಹೆದರುವುದಿಲ್ಲ. ಹಾಗೇನಾದರೂ ಮಾಡಿದರೆ ತುಂಬಾ ಧನ್ಯವಾದಗಳು ನಿಮಗೆ” ಅಂದೆ. “ಟ್ರಾನ್ಸ ಫರ್ ಮಾಡ್ತೀನಿ ಅಂದ್ರೆ, ಥ್ಯಾಂಕ್ಸ್ ಹೇಳ್ತೀರಲ್ಲ. ಮೊದಲು ಲೆಟರ್ ಇಂಗ್ಲೀಷಿನಲ್ಲಿ ಡ್ರಾಫ್ಟ್ ಮಾಡಿಕೊಂಡು ಬನ್ನಿ. ಫಸ್ಟ್ ಒಬೆ ಮೈ ಆರ್ಡರ್” ಎಂದು ಹೇಳಿ ಮುಖವನ್ನು ಆಕಡೆ ತಿರುಗಿಸಿಕೊಂಡರು. ಮುಂದಕ್ಕೆ ಮಸಂವಾದ ನಡೆಸುವುದು ಕೋಣನ ಮುಂದೆ ಕಿನ್ನರಿ ನುಡಿಸಿದಂತೆ ಆಗುತ್ತದೆ ಆನ್ನಿಸಿ, ನನ್ನ ಕುರ್ಚಿಗೆ ಬಂದು ಆಂಗ್ಲ ಭಾಷೆಯಲ್ಲಿ ಆ ಪತ್ರದ ಕರಡು ಸಿದ್ಧಪಡಿಸಿ, ಅದರ ಮೇಲೊಂದು ನಿವೇದನೆ ಪತ್ರ ಇರಿಸಿ ಕಳುಹಿಸಿದೆ. ಆ ನಿವೇಧನೆಯ ಯಥಾ ರೂಪ ಹೀಗಿದೆ

“ಕಛೇರಿ ಟಿಪ್ಪಣಿ, ಪತ್ರಗಳು ಅಥವಾ ಇತರೇ ಯಾವುದೇ ಕಾಗದಗಳನ್ನು ಆಂಗ್ಲ ಭಾಷೆಯಲ್ಲಿ ಬರೆದ ಮಾತ್ರಕ್ಕೆ ಅಥವಾ ಬಂದಲ್ಲಿ, ಮುಂದಿನ ಕಛೇರಿಗಳಿಗೆ ಬರೆಯುವಾಗ ಪತ್ರಗಳನ್ನು ಕನ್ನಡದಲ್ಲಿ ಬರೆಯಬಾರದೆಂದೇನೂ ಇಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಕಾರಣ ಈ ಕಛೇರಿಯನ್ನುಳಿದು ಬೇರೆಲ್ಲೂ ಕನ್ನಡದ ಬೆರಳಚ್ಚು ಯಂತ್ರ ಇಲ್ಲ. ಆದ್ದರಿಂದ ಇಲ್ಲಿಗೆ ಬರುವ ಶೇಖಡಾವಾರು ಪತ್ರಗಳು ಆಂಗ್ಲ ಭಾಷೆಯಲ್ಲಿ ಇರುತ್ತವೆ.

ಖಾವಂದರಿಗೆ ಸಲ್ಲಿಸಲಾದ ಪತ್ರಗಳ ಒಕ್ಕಣೆ ತಪ್ಪಿದ್ದಲ್ಲಿ ಅದನ್ನು ಸರಿಪಸುವಂತೆ ಸೂಚಿಸಬಹುದಿತ್ತು. ಆದರೆ ಪೂರ್ತಿ ಬದಲಾಯೀಸಿ ಆಂಗ್ಲ ಭಾಷೆಯಲ್ಲೇ ಬರೆಯಲು ಆದೇಶಿಸಿರುವುದು ಸೂಕ್ತವಲ್ಲವೇನೋ ಎಂಬುದು ನನ್ನ ಅಭಿಪ್ರಾಯ.

ಆದಾಗ್ಯೂ ತಮ್ಮ ಆದೇಶದಂತೆ ಕನ್ನಡದ ಒಕ್ಕಣೆಯ ಬದಲಾಗಿ ಆಂಗ್ಲ ಭಾಷೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರವನ್ನು ಲಗತ್ತಿಸಲಾಗಿದೆ. ಪರಾಂಬರಿಸಬೇಕು. ನನ್ನ ಭಾಷೆಯಲ್ಲಿ ತಪ್ಪಿದ್ದರೆ ಅದು ಕನ್ನ ಭಾಷೆ ಬಳಕೆಯಲ್ಲಿರುವುದರ ತಪ್ಪು. ಮುಖ್ಯ ಅಭಿಯಂತರ ಆವಗಾಹನೆಗಾಗಿ ಸಲ್ಲಿಸಲಾಗಿದೆ.
ಸಹಿ/-
(ಹೊಸಹಳ್ಳಿ ದಾಳೇಗೌಡ)
ದಿನಾಂಕ: ೩೦-೦೪-೧೮೮೫



ಮೇಲಿನಂತೆ ಬರೆದು ಕಳುಹಿಸಿ ನನ್ನ ಅಸಮಾಧಾನ ತೋಡಿಕೊಂಡೆ. ಈ ನಿವೇದನೆಯನ್ನು ಓದಿದ ಮುಖ್ಯ ಅಭಿಯಂತರರವರು “ಕನ್ನಡ ಭಾಷೆ ಬಳಕೆಯಲ್ಲಿರುವುದರ ತಪ್ಪು” ಎಂಬುದರ ಕೆಳಗೆ ಗೆರೆ ಎಳೆದು “ಐ ಕ್ಯಾನ್ ಅಂಡರ್ ಸ್ಟ್ಯಾಂಡ್ ಹಿಸ್ ಫೀಲಿಂಗ್ ಫಾರ್ ಕನ್ನಡ ಲಾಂಗ್ವೇಜ್. ಹಿ ಮೆ ಪುಟ್ ಅಪ್ ಡ್ರಾಫ್ಟ್ ಇನ್ ಕನ್ನಡ ಆಲ್ಸೋ” ಎಂದು ಪುನಹ ಆಂಗ್ಲ ಭಾಷೆಯಲ್ಲೇ ಬರೆದರು! ಇದನ್ನು ಓದಿ ತಲೆ ಚಚ್ಚಿಕೊಂಡೆ. ಇಂತಹ ಕನ್ನಡಿಗ ಅಧಿಕಾರಿಯನ್ನು ಪಡೆದ ಕನ್ನಡ ನಾಡು ಧನ್ಯ ತಾನೇ!?.

ಈ ಘಟನೆಗಳು ಕಛೇರಿಯ ಬೆಳಗಿನ ಅವಧಿಯಲ್ಲಿ ನಡೆದಿದ್ದವು. ಮದ್ಯಾಹ್ನ ಕಾಫಿ ಕುಡಿದು ಹಿಂದಿರುಗುವಷ್ಟರಲ್ಲಿ ನನ್ನ ವರ್ಗಾವಣೆ ಆದೇಶ ನನಗಾಗಿ ಕಾಯುತ್ತಿತ್ತು. ಖುಷಿಯಿಂದಲೇ ಮುಖ್ಯ ಅಭಿಯಂತರರ ಕಛೇರಿಯಿಂದ ಬಿಡುಗಡೆಗೊಂಡು ಮಾಸ್ತಿಕಟ್ಟೆಗೆ ಪ್ರಯಾಣ ಬೆಳೆಸಿದೆ.

ಆದರೆ ಇಂದು ಹಿಂದಿನಂತಿಲ್ಲ. ನಮ್ಮ ನಿಗಮದ ಎಲ್ಲಾ ಕಛೇರಿಗಳಲ್ಲೂ ಕನ್ನಡಾಂಬೆ ನಲಿದಾಡುತ್ತಿದ್ದಾಳೆ. ಅದೇ ಸಂತೋಷ. ಅದಕ್ಕಿಂತ ಇನ್ನೇನು ಬೇಕು ಹೇಳಿ.

ನಿವೃತ್ತಿಯ ನಂತರವೂ ಕನ್ನಡ ಪರ ಕಾಯಕದಲ್ಲಿ ನಿರತರಾಗಿರುವ ಶ್ರೀಯುತ ಹೊಸಹಳ್ಳಿ ದಾಳೇಗೌಡರು ಈಗ ತಮ್ಮ ದಿನದ ಪೂರ್ಣ ವೇಳೆಯನ್ನು ಕನ್ನಡ ಕಟ್ಟುವ ಕೆಲಸಕ್ಕಾಗಿ ಮೀಸಲಿರಿಸಿದ್ದಾರೆ. ಇವರ ಈ ಕಾರ್ಯವನ್ನು ಅಭಿನಂದಿಸಲು ಬಯಸುವವರು ಹಾಗೂ ಪತ್ರ ಸಂಸ್ಕೃತಿ ಸಂಘಟನೆಯಿಂದ ವೈವಿಧ್ಯಮಯ ವಿಷಯಗಳ ಕುರಿತು ಪ್ರಕಟವಾಗುತ್ತಿರುವ “ಪಿಸುಮಾತು” ತ್ರೈಮಾಸಿಕ ಪತ್ರಿಕೆಯ ಸದಸ್ಯರಾಗಲು ಬಯಸುವವರು ಸಂಪರ್ಕಿಸಬೇಕಾದ ವಿಳಾಸ ಇಂತಿದೆ.

ಶ್ರೀ ಹೊಸಹಳ್ಳಿ ದಾಳೇಗೌಡ
“ಸಂಸ್ಕೃತಿ” ಚೌಡಮ್ಮ ಕ್ಯಾಂಪ್
ಸಿಂಗನಮನೆ ಗ್ರಾಮ
ಬಿ. ಆರ್ ಪ್ರಾಜೆಕ್ಟ್ ೫೭೭೧೧೫
ಮೊಬೈಲ್ ನಂ: ೯೪೮೦೧ ೪೧೮೦೮

 


  • ಬಾಣಾವರ ಶಿವಕುಮಾರ್ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW