ಮಹತ್ವದ ಕಾದಂಬರಿಕಾರ ಮ.ನ.ಮೂರ್ತಿ

ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಮ. ನ. ಮೂರ್ತಿಯವರು ಸಾಹಿತ್ಯ ಲೋಕದಲ್ಲಿ ಅವರು ಮ.ನ. ಮೂರ್ತಿ ಎಂದೇ ಪ್ರಖ್ಯಾತರು. ಅವರ ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟವಾದ ‘ಶಾಂತಲಾ’ ಕಾದಂಬರಿ ಅವರ ಜೀವನದಲ್ಲೊಂದು ತಿರುವು ತಂದಿತು. ಈ ಕಾದಂಬರಿಕಾರರ ಬಗ್ಗೆ ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನು ಓದಿದ ಮೊದಲ ಕಾದಂಬರಿ ‘ಬೇಡದ ಸೊಸೆ’ ಅದು ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ಅದರ ವಸ್ತು, ಪಾತ್ರ ಚಿತ್ರಣ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಈ ಕಾದಂಬರಿಯನ್ನು ಬರೆದವರು. ಮ.ನ.ಮೂರ್ತಿ, ಇವರ ಕುರಿತು ವಿಶೇಷ ಆಸಕ್ತಿ ಬೆಳೆದಿದ್ದು ಆ ಕಾರಣಕ್ಕೇ ನಲವತ್ತು ಕಾದಂಬರಿಗಳೂ ಸೇರಿದಂತೆ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಅವರ ಕುರಿತು ಚರ್ಚೆಗಳು ನಡೆಯದಿರುವುದು ಕನ್ನಡ ಸಾಹಿತ್ಯದ ಅವಜ್ಞೆಯ ಸ್ವರೂಪಕ್ಕೆ ನಿದರ್ಶನದಂತಿದೆ.

ಇವತ್ತು ಅವರ 119ನೆಯ ಜನ್ಮದಿನ (ಜನನ 1906ರ ಜೂನ್ 6)ಮ. ನರಸಿಂಹಮೂರ್ತಿಯವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿ ಎಂಬಲ್ಲಿ ಜನಿಸಿದರು. ಸಾಹಿತ್ಯ ಲೋಕದಲ್ಲಿ ಅವರು ಮ.ನ. ಮೂರ್ತಿ ಎಂದೇ ಪ್ರಖ್ಯಾತರು. ತಂದೆ ಮಧ್ವರಾವ್. ತಾಯಿ ಭೀಮಕ್ಕ. ಮೂರ್ತಿ ಅವರ ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸ ತುಮಕೂರಿನಲ್ಲಿ ನಡೆಯಿತು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ್ದರಿಂದ ಅವರು ಮುಂದಿನ ಓದಿಗಾಗಿ ಬೆಂಗಳೂರಿಗೆ ಬಂದರು. ಐಚ್ಛಿಕ ವಿಷಯಗಳಾದ ವಿಜ್ಞಾನ ಹಾಗೂ ಗಣಿತದಲ್ಲಿ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರು. ವಿಜ್ಞಾನ ವಿಭಾಗದಲ್ಲಿದ್ದ ಅವರನ್ನು ಎ.ಆರ್.ಕೃಷ್ಣ ಶಾಸ್ತ್ರಿಗಳು ಸಾಹಿತ್ಯದ ಕಡೆಗೆ ತಂದರು.

ಬಿ.ಎ. ಪದವಿಯ ನಂತರ ಮೂರ್ತಿಯವರು ಕನ್ನಡ ವಿಭಾಗದ ಭಾಷಾಂತರಕಾರರಾಗಿ ದಿವಾನರ ಕಚೇರಿಯಲ್ಲಿ ಉದ್ಯೋಗ ಗಳಿಸಿದರು. ಅವರಿಗೆ ದಿವಾನ್ ಮಿರ್ಜಾ ಇಸ್ಮಾಯಿಲ್,
ಮಾಸ್ತಿ ಮುಂತಾದವರೊಡನೆ ವ್ಯವಹರಿಸುವ ಸುಯೋಗ ಒದಗಿದ್ದರೂ ಸ್ವತಂತ್ರವಾಗಿ ಜೀವಿಸಬೇಕೆಂಬ ಆಸೆಯಿಂದ ಸರಕಾರಿ ಹುದ್ದೆಯನ್ನು ತ್ಯಜಿಸಿಬಿಟ್ಟರು. ಮೈಸೂರಿನಲ್ಲಿ ಚಲನಚಿತ್ರ ತಯಾರಿಕೆಯ ಕಡೆ ಮನಸ್ಸು ಹರಿದು ‘ಭಕ್ತ ಕನಕದಾಸ’ ಚಲನಚಿತ್ರದ ತಯಾರಿಕೆ ನಡೆಸಿದರು. ಪ್ರಮುಖ ಪಾತ್ರಧಾರಿ ‘ಉಮರ್ಜಿ’ ಎನ್ನುವವರ ಅಕಾಲ ಮರಣದಿಂದ ಚಿತ್ರನಿರ್ಮಾಣ ಸ್ಥಗಿತಗೊಂಡಿತು. ಮುಂದೆ ಬರೆದೇ ಬದಕಲು ಪಣ ತೊಟ್ಟರು. ಅವರು ಬರೆದ ಮೊದಲ ಐತಿಹಾಸಿಕ ಕಾದಂಬರಿ ‘ಚಿಕ್ಕದೇವರಾಯ’. ಪ್ರಕಾಶಕರಾರೂ ಮುಂದೆ ಬಾರದಾದಾಗ ಹಳ್ಳಿಯಲ್ಲಿ ತಾಯಿಯ ಹೆಸರಿನಲ್ಲಿದ್ದ ಜಮೀನು ಮಾರಿ ತಾವೇ ಪ್ರಕಟಿಸಿದರು. ಮೂರ್ತಿಯವರು ನಂತರ ಬರೆದ ಕಾದಂಬರಿ ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ಈ ಕೃತಿಗಳು ಜನಪ್ರಿಯವಾದ ನಂತರ ಪ್ರೇಮ ಸುಧಾ, ಆರಾಧಿತೆ, ಸಹಧರ್ಮಿಣಿ, ಚಿತ್ರ ನಾಯಕಿ, ಮಾಂಗಲ್ಯ ಭಾಗ್ಯ, ದೇವರ ರಹಸ್ಯ , ವಸುಂಧರ, ಭಕ್ತ ಕನಕದಾಸ, ಅಲಕಾನಂದ, ಸಂಶಯದ ಸುಳಿಯಲ್ಲಿ, ಮುಂತಾದ 4೦ ಕಾದಂಬರಿಗಳನ್ನು ಪ್ರಕಟಿಸಿದರು. ರತ್ನ ಸಿಂಹಾಸನ, ಬೆಂಗಳೂರು ಕೆಂಪೇಗೌಡ, ಸಂತಾನ ಮುಂತಾದ ನಾಟಕಗಳೂ ಸೇರಿ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ನಿರಂತರವಾಗಿ ಬರೆಯುತ್ತಾ ಬಂದರು.

ಮ. ನ. ಮೂರ್ತಿಯವರು ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟವಾದ ‘ಶಾಂತಲಾ’ ಕಾದಂಬರಿ ಅವರ ಜೀವನದಲ್ಲೊಂದು ತಿರುವು. ಅಪಾರ ಜನಪ್ರಿಯತೆ ಪಡೆದ ಈ ಕಾದಂಬರಿಯ ಮೂಲಕ ಅವರು ‘ಪ್ರಜಾಮತ’ ಪತ್ರಿಕೆಯ ಮ್ಯಾನೇಜ್ಮಂಟ್ನಲ್ಲಿಯೂ ಸ್ಥಾನ ಪಡೆದು ‘ಮ್ಯಾನೇಜಿಂಗ್ ಎಡಿಟರ್’ ಎನ್ನಿಸಿ ಕೊಂಡರು. ಇವರ ಕಾದಂಬರಿಗಳಲ್ಲಿ ‘ದೇವರ ಮಕ್ಕಳು’ (1970), (ಕಾದಂಬರಿ ಮುದ್ದು ಮೀನ) ‘ಸ್ವಯಂವರ’ (1973), ಮತ್ತು ‘ಬಿಳೀ ಹೆಂಡ್ತಿ’ (1975) ಚಲನಚಿತ್ರಗಳಾಗಿ ಜನಪ್ರಿಯಗೊಂಡವು. ‘ಗಾನಯೋಗಿ ರಾಮಣ್ಣ’ ಚಲನಚಿತ್ರವಾದರೂ ಬಿಡುಗಡೆ ಕಾಣಲಿಲ್ಲ, ಅದರ ಹಾಡುಗಳು ಜನಪ್ರಿಯವಾದವು. ‘ಸ್ವಯಂವರ’ ಚಿತ್ರ ಬಿಡುಗಡೆಯಾದ ಸಂದರ್ಭದ ಒಂದು ಸ್ವಾರಸ್ಯಕರ ಘಟನೆಯನ್ನು ನನಗೆ ಹಿರಿಯ ಪತ್ರಕರ್ತ ಎಸ್.ಎನ್.ಚಂದ್ರ ಶೇಖರ್ ಹೇಳಿದ್ದರು. ‘ಸ್ವಯಂವರ’ ಚಿತ್ರ ಬಿಡುಗಡೆಯಾದಾಗ ಮ.ನ.ಮೂರ್ತಿಯವರು ಆಕಾಶವಾಣಿ ಸಂದರ್ಶನದಲ್ಲಿ ‘ರಾಜ್ ಕುಮಾರ್ ಅವರಂತಹ ಜನಪ್ರಿಯ ನಟರು ಅಭಿನಯಿಸಿದ್ದರಿಂದ ಕಾದಂಬರಿ ಮೂಲ ಎಳೆ ತಪ್ಪಿ ಹೋಗಿದೆ’ ಎಂದಿದ್ದರು. ಮರುದಿನ ರಾಜ್ ಕುಮಾರ್ ಅಭಿಮಾನಿಗಳು ‘ಪ್ರಜಾಮತ’ ವಾರಪತ್ರಿಕೆ ಎದುರು ಧರಣಿ ಕುಳಿತರು.

ಅವರನ್ನು ಧೈರ್ಯವಾಗಿ ಎದುರಿಸಿದ ಮೂರ್ತಿಯವರು ‘ನಿಮ್ಮಂತೆ ನಾನೂ ರಾಜ್ ಕುಮಾರ್ ಅಭಿಮಾನಿ, ಆದರೆ ಅವರು ಅಭಿನಯಿಸ ಬೇಕಾಗಿದ್ದು ಇಂತಹ ಚಿತ್ರಗಳಲ್ಲಿ ಅಲ್ಲ’ ಎಂಬ ತಮ್ಮ ನಿಲುವನ್ನು ಹೇಳಿದರೂ ಗಲಾಟೆ ನಿಲ್ಲದಾಗ ‘ನೋಡ್ರಯ್ಯ , ನಾನು ಹೇಳುವುದನ್ನು ಹೇಳಿದ್ದೇನೆ. ಇನ್ನೇನು ಮಾಡ್ತೀರಾ.. ಕೊಲ್ತೀರಾ.. ಹೇಗೋ ವಯಸ್ಸಾಗಿದೆ, ದೇವರು ನಿಮ್ಮ ಕೈಯಲ್ಲಿ ಸಾಯುವುದು ಎಂದು ಬರೆದಿದ್ದರೆ ಆಗೇ ಹೋಗಲಿ’ ಎಂದು ಗಟ್ಟಿಯಾಗಿ ನಿಂತರು. ಆಗ ನೆರೆದವರು ಕ್ಷಮೆ ಕೇಳಿ ಪ್ರತಿಭಟನೆ ಹಿಂದೆ ಪಡೆದರಂತೆ.

ಮ.ನ.ಮೂರ್ತಿಯವರು ಕನ್ನಡ ಲಿಪಿ ಸುಧಾರಣೆಗೆ ವಿಶೇಷ ಪ್ರಯತ್ನ ಮಾಡಿದರು. ಅವರ ‘ಲಿಪಿ ಸುಧಾರಣೆ’ ಪುಸ್ತಕದಲ್ಲಿ ನನ್ನ ತಾತನವರಾದ ನುಲೇನೂರು ಶಂಕರಪ್ಪನವರ ಹೆಸರನ್ನು ನೋಡಿ ಸಂತೋಷವಾಯಿತು. ಅವರು ನನ್ನ ತಾತನ ಸಂಪರ್ಕದಲ್ಲಿಯೂ ಇದ್ದರಂತೆ. ಕನ್ನಡವೇ ರಾಜ್ಯಭಾಷೆಯಾಗ ಬೇಕು ಎಂದು ಮೊದಲು ಧ್ವನಿ ಎತ್ತಿದ ಪ್ರಮುಖರಲ್ಲಿ ಮ.ನ.ಮೂರ್ತಿಯವರೂ ಒಬ್ಬರು. ಅವರು ನಮ್ಮನ್ನ ಅಗಲಿದ್ದು 1977ರ ಏರ್ಪಿಲ್ 2ರಂದು.

ಇನ್ನು ಮುಂದಾದರೂ ಅವರ ಕುರಿತು ಚರ್ಚೆ ನಡೆಯಲಿ ಎಂಬ ಆಶಯದಲ್ಲಿ ಜನ್ಮದಿನೋತ್ಸವದ ನಮನಗಳು.


  • ಎನ್.ಎಸ್.ಶ್ರೀಧರ ಮೂರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW