ಬರಿದಾಗುತ್ತಿರುವ ತೈಲ ನಿಕ್ಷೇಪಗಳು? – (ಭಾಗ- ೨)ಈಗ ಉಳಿದಿರುವ ಕಚ್ಚಾತೈಲ ಕೇವಲ ೫೦ ವರ್ಷಕ್ಕೆ ಸಾಕಾಗುವಷ್ಟು ಮಾತ್ರ. ಅಂದರೆ ಬರುವ ೨೦೭೦ನೆ ಇಸವಿಯವರೆಗೆ ಇದೆ.ಮಾನವನು ಮುಂದೆ ಬರುವ ಭೀಕರ ದಾರುಣ ಸ್ಠಿತಿಯ ಬಗ್ಗೆ ಲೇಖಕ ಪ್ರಕಾಶ್ ಉಳ್ಳೆಗಡ್ಡಿ ಅವರು ಬರೆದ ಲೇಖನ ಓದುಗರ ಮುಂದೆ ಓದಿ, ತಪ್ಪದೆ ಓದಿ…

ತೈಲ ನಿಕ್ಷೇಪಗಳು ಪತ್ತೆಯಾಗುವ ಮೊದಲು ಲಭ್ಯವಾಗುತ್ತಿದ್ದ ಇಂಧನವೆಂದರೆ ಕಟ್ಟಿಗೆ ಮತ್ತು ಕೃಷಿ ಮೂಲದ ಕಾಳುಗಳಿಂದ ಉತ್ಪತ್ತಿಯಾದ ತೈಲ ಮಾತ್ರ. ಕೃಷಿ ಮತ್ತು ಸಂಚಾರಕ್ಕಾಗಿ ಸಾಕು ಪ್ರಾಣಿಗಳನ್ನ ಪಳಗಿಸಿ ಉಪಯೋಗಿಸುತ್ತಿದ್ದರು. ಅನಂತರ ೧೭ನೆ ಶತಮಾನದಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಪತ್ತೆಯಾದವು. ಇಂಧನದ ಇನ್ನೊಂದು ಪ್ರಮುಖ ಮೂಲವೆಂದರೆ ತಿಮಿಂಗಿಲನ ತೈಲ (ವೇಲ ಆಯಿಲ್). ಇರೋಪಿಯನ್ನರು ಮತ್ತು ಅಮೇರಿಕನ್ನರು ಸಮುದ್ರದಲ್ಲಿ ಜೀವಿಸುವ ತಿಮಿಂಗಲುಗಳನ್ನ ಬೇಟೆಯಾಡಿ ಅದನ್ನ ಕೊಂದು ಅದರ ತಲೆಯ ಭಾಗದಲ್ಲಿ ಶೇಖರಣೆಯಾದ ಕೊಬ್ಬನ್ನು ಕರಗಿಸಿ ಮಾಡಿದ ತೈಲವನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಅಲ್ಲಿಯವರೆಗೆ ಕೇವಲ ಕಟ್ಟಿಗೆ, ಮೇಣದ ಬತ್ತಿ ಮತ್ತು ಕೃಷಿ ಮೂಲದ ಕಾಳುಗಳಿಂದ ತೈಲ ಉತ್ಪತ್ತಿಯಗುತ್ತಿತ್ತು. ಅದಾಗಲೇ ಕೈಗಾರಿಕ ಕ್ರಾಂತಿಯಾಗಿ ಯಂತ್ರಗಳ ಅವಿಷ್ಕಾರವಾಗಿತ್ತು. ಆ ಯಂತ್ರಗಳ ಚಾಲನೆಗೆ ದೊಡ್ಡ ಪ್ರಮಾಣದಲ್ಲಿ ಇಂಧನದ ಅಗತ್ಯವಿತ್ತು. ಒಂದು ತಿಮಿಂಗಲು ಎಂದರೆ ಸುಮಾರು ೩೦ ಮೀಟರನಷ್ಟು ಉದ್ದ ಮತ್ತು ತೂಕ ೨೦೦ ಮೆಟ್ರಿಕ ಟನ್ನ್ ಗಳಷ್ಟು. ಅಂದರೆ ಸುಮಾರು ೫೦ ಆನೆಗಳ ತೂಕ. ಒಂದು ತಿಮಿಂಗಲಿನಿಂದ ಸುಮಾರು ೧೨೦ ಬ್ಯಾರೆಲ್ ತೈಲ ಸಿಗುತ್ತಿತ್ತು ಯಾವಾಗ ತಿಮಿಂಗಲಿನ ತೈಲ ಲಭ್ಯವಾಗಲು ಪ್ರಾರಂಭವಾಯಿತೊ ನಗರದ ಬೀದಿಗಳನ್ನ ಬೆಳಗಲು, ಅರಮನೆಗಳನ್ನ ಬೆಳಗಿಸಲು, ಸಣ್ಣಪುಟ್ಟ ಕೈಗಾರಿಕೆಗಳನ್ನ ನಡೆಸಲು ತಿಮಿಂಗಲಿನ ತೈಲವನ್ನು ಉಪಯೋಗಿಸಲು ಪ್ರಾರಂಭಿಸಿದರು. ಹೀಗೆ ಇರೋಪಿಯನ್ನರ ಮತ್ತು ಅಮೇರಿಕನ್ನರ ಅರ್ಥಿಕತೆಗೆ ತಿಮಿಂಗಿಲಿನ ತೈಲ ಮಹತ್ವದ ಪಾತ್ರವಹಿಸಿತು. ಅಂತೆಯೇ ಹೆಚ್ಛು ಹೆಚ್ಛು ತಿಮಿಂಗಿಲುಗಳು ಬಲಿಯಾಗತೊಡಗಿದವು. ಇದಲ್ಲದೆ ತಿಮಿಂಗಿಲಿನ ಕೊಬ್ಬು ಕಾಂತಿವರ್ಧಕ ಉತ್ಪನ್ನಗಳಿಗೆ ಮೂಲವಾಗಿತ್ತು, ಅದರ ಎಲಬುಗಳನ್ನ ಪುಡಿಮಾಡಿ ಕ್ರಷಿಭೂಮಿಗೆ ಗೊಬ್ಬರವಾಗಿ ಕೂಡ ಉಪಯೋಗಿಸುತ್ತಿದ್ದರು.

ಫೋಟೋ ಕೃಪೆ : oil price

ತಿಮಿಂಗಲಿನ ಬೇಟೆ ಎಂದರೆ ಸಾಧಾರಣ ಕೆಲಸವಲ್ಲ, ನಾವಿಕರು ಶಸ್ತ್ರಾಸ್ತ್ರಗಳನ್ನ ಹೊಂದಿದ ನಾವಿನೊಂದಿಗೆ ಅದನ್ನ ಹುಡುಕುತ್ತಾ ಸಮುದ್ರದಲ್ಲಿ ೬ ತಿಂಗಳಿನಿಂದ ೧ ವರ್ಷದವರೆಗೆ ಅಲೆಯುತ್ತಾರೆ. ಕೊನೆಗೊಮ್ಮೆ ತಿಮಿಂಗಲುಗಳು ಕಂಡಾಗ ಅದರ ಬೆನ್ನಿಗೆ ಹಗ್ಗ ಕಟ್ಟಿದ ಭರ್ಚಿ ಎಸೆಯುತ್ತಾರೆ. ಇದರಿಂದ ಅಪಾಯದ ಸೂಚನೆ ಸಿಕ್ಕು ತಿಮಿಂಗಳು ಸಮುದ್ರದ ಅಡಿಗೆ ದುಮುಕುತ್ತದೆ. ಕೊನೆಗೆ ಅದು ಪ್ರಾಣ ಬಿಟ್ಟಾಗ ಹಗ್ಗ ಜಗ್ಗುವುದು ನಿಲ್ಲುತ್ತದೆ. ಆಗ ನಾವಿಕರ ಅದೇ ಹಗ್ಗದಿಂದ ತಿಮಿಂಗಲನ್ನ ಮೇಲಕ್ಕೆತ್ತಿ ಸೀಳುತ್ತಾರೆ. ದೈತ್ಯಾಕಾರದ ತಿಮಿಂಗಿಲಿನ ತಲೆಭಾಗದಲ್ಲಿರೋ ಕೊಬ್ಬನ್ನು ತೆಗೆಯಲು ರಂದ್ರವೊಂದನ್ನು ಕೊರೆದು ಅದರ ಮೂಲಕ ಭಾವಿಯಿಂದ ನೀರು ಸೇದುವಂತೆ ಬಕೆಟ್ ನಿಂದ ಕೊಬ್ಬು ಸಂಗ್ರಹಣೆ ಮಾಡುತ್ತಾರೆ.

ನಿರಂತರವಾಗಿ ತಿಮಿಂಗಿಲುಗಳ ಬಲಿಯಾಗುತ್ತಿದ್ದರಿಂದ ಅವುಗಳ ಸಂಖ್ಯೆ ಕ್ರಮೇಣ ಕ್ಷೀಣೀಸುತ್ತಾ ಬಂದಿತು ಮತ್ತು ಪರಿಸರವಾದಿಗಳ ಖಂಡನೆಗೆ ರಾಷ್ಟ್ರಗಳು ಸ್ಪಂದಿಸಿ ತಿಮಿಂಗಿಲನ ತೈಲವನ್ನು ನಿಷೇಧಿಸಲು ಮುಂದಾದವು ಆದರೆ ಅ ವೇಳೆಗೆ ಕಚ್ಛಾತೈಲ ಮತ್ತು ಕಲ್ಲಿದ್ದಲು ಸಾಕಷ್ಟು ಪ್ರಮಾಣದಲ್ಲಿ ಸಿಗಲಾರಂಬಿಸಿತ್ತು. ಕೊನೆಗೂ ತಿಮಿಂಗಲುಗಳು ಮಾನವನ ಕ್ರೌರ್ಯದಿಂದ ಪಾರಾದವು.

ಇಂಧನದ ಪರ್ಯಾಯ ಮೂಲಗಳು: ವಿದ್ಯುತ್ತನ್ನ ಪರಮಾಣು, ಜೈವಿಕ, ಜಲವಿದ್ಯುತ್ತ, ವಾಯು, ಸೌರ ಮತ್ತು ರಾಸಾಯನಿಕ ಶಕ್ತಿಯ ಮೂಲಕವೂ ಉತ್ಪಾದಿಸಬಹುದು ಆದರೆ ಕಚ್ಛಾತೈಲ ಸಾವಿರಾರು ಉಪಉತ್ಪನ್ನಗಳನ್ನು ಕೊಟ್ಟಂತೆ ಉಳಿದಾವ ಇಂಧನಗಳು ಕೊಡುವುದಿಲ್ಲ. ಉದಾಹರಣೆಗೆ ಬಿಟುಮೆನ್, ಡಾಂಬರ್ ಮತು ಟೈರುಗಳ ಒಳಗೊಂಡು ಸುಮಾರು ೬೦೦೦ ಉಪಉತ್ಪನ್ನಗಳ ಮೂಲಸರಕು ಕಚ್ಚಾತೈಲವಾಗಿದೆ. ಈ ವೈಶಿಷ್ಟ್ಯ ಕಚ್ಚಾತೈಲವಲ್ಲದೆ ಬೇರೆ ಯಾವ ಇಂಧನಗಳಲ್ಲಿ ಇಲ್ಲ. ಆದ್ದರಿಂದ ಕಚ್ಚಾತೈಲ ಎಲ್ಲಕ್ಕಿಂತ ಹೆಚ್ಚಾಗಿ ಬಳಕೆಯಲ್ಲಿದೆ.
ವಿಶ್ವದ ಒಟ್ಟಾರೆ ಶಕ್ತಿ ಉತ್ಪಾದನೆಯನ್ನು ನೋಡುವುದಾದರೆ ೬೧ ಪ್ರತಿಶತದಷ್ಟು ಕಚ್ಚಾತೈಲ, ನೈಸರ್ಗಿಕ ಅನಿಲ ಮತ್ತು, ಕಲ್ಲಿದ್ದಿಲುಗಳಿಂದ ಉತ್ಪಾದನೆಯಾದರೆ, ವಾಯುಯಂತ್ರ, ಸೌರಶಕ್ತಿಯಿಂದ ೧೩ ಪ್ರತಿಶತ, ಜಲವಿದ್ಯುತ್ತ ೧೬ ಪ್ರತಿಶತ ಮತ್ತು ಪರಮಾಣುವಿನಿಂದ ೧೦ ಪ್ರತಿಶತ ಮಾತ್ರ ಉತ್ಪತ್ತಿಯಾಗುತ್ತಿದೆ.

ಫೋಟೋ ಕೃಪೆ : sswm

ಹಾಗಾದರೆ ಕಚ್ಚಾತೈಲದ ಮುಗಿದ ನಂತರ ಮುಂದೇನು?. ಈಗಾಗಲೆ ವಿಶ್ವದಾದ್ಯಂತ ಪರ್ಯಾಯ ಇಂಧನಗಳ ಶೋಧನೆ ನಡೆದಿದೆ. ವಾಹನಗಳನ್ನ ವಿದ್ಯುಚ್ಚಕ್ತಿಯಿಂದ ನಡೆಸಬಹುದು ಮತ್ತು ಹತ್ತು ಹಲವು ಉತ್ಪನ್ನಗಳು ಮಾರುಕಟ್ಟೆಗೆ ಬಂದಾಗಿದೆ ಆದರೆ ವಿದ್ಯುಚ್ಚಕ್ತಿ ಉತ್ಪಾದನೆ ಹೆಚ್ಚಾಗಿಲ್ಲ. ಇದಲ್ಲದೆ ರಾಸಾಯನಿಕ ಬ್ಯಾಟರಿಗಳ ಮೂಲಕ ವಾಹನಗಳನ್ನ ಒಡಿಸುವ ಪ್ರಯೋಗಗಳು ನಡೆದಿವೆ ಆದರೆ ಅವುಗಳಿಂದ ಹೆಚ್ಚು ದೂರಕ್ರಮಿಸಲಾಗದು. ಪ್ರಯೋಗ ಇನ್ನು ಜಾರಿಯಲ್ಲಿದೆ. ಜೈವಿಕ ಇಂಧನ ಎಂದರೆ ಸೊಯಾಬಿನ್, ಗೋದಿ, ಮೆಕ್ಕೆಜೋಳ, ಕಬ್ಬು, ಹುಲ್ಲು, ಪಾಚಿ, ಸಗಣಿ, ಕೊಬ್ಬುಗಳಿಂದ ಬಯೋಡಿಜೆಲ್, ಬಯೋಗ್ಯಾಸ್, ಎಥೆನಾಲ್, ಮಿಥೆನಾಲ್, ಬ್ಯುಟೆನಾಲ್ ಎಂತೆಲ್ಲ ಇಂಧನಗಳನ್ನ ತಯಾರಿಸುತ್ತಿದ್ದಾರೆ. ಆದರೆ ಈ ಪ್ರಯೋಗಳು ಯಶಸ್ವಿಯಾದರು ದೊಡ್ಡ ಪ್ರಮಾಣದಲ್ಲಿ ಇದನ್ನ ಉತ್ಪಾದಿಸಲು ಸಾದ್ಯವಿಲ್ಲ ಕಾರಣ ಗೋಧಿ, ಮೆಕ್ಕೆಜೋಳ, ಕಬ್ಬು ಇತ್ಯಾದಿಗಳು ಮಾನವನಿಗೆ ಆಹಾರವಾಗಿಯು ಕೂಡ ಬೇಕಾಗಿರುವುದರಿಂದ. ಇಷ್ಟೆ ಅಲ್ಲದೆ ವಿಜ್ನಾನಿಗಳು ಹೈಡ್ರೊಜನ್ ಸೆಲ್ಲಗಳನ್ನ ಕೂಡ ಅಭಿವ್ರದ್ದಿ ಪಡಿಸುತ್ತಿದ್ದು ಇಂದಿಗೂ ಅದು ಪ್ರಯೋಗ ರೂಪದಲ್ಲಿ ಮಾತ್ರವಿದೆ. ಅಂದರೆ ಈ ಮೇಲೆ ಹೇಳಿದ ಯಾವ ಪರ್ಯಾಯ ಇಂಧನಗಳು ಸಧ್ಯಕ್ಕೆ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನ ಬದಲಿಸಲು ಅಸಾಧ್ಯವಾಗಿವೆ.ಈಗ ಉಳಿದಿರುವ ಕಚ್ಚಾತೈಲ ಕೇವಲ ೫೦ ವರ್ಷಕ್ಕೆ ಸಾಕಾಗುವಷ್ಟು ಮಾತ್ರ. ಅಂದರೆ ಬರುವ ೨೦೭೦ನೆ ಇಸವಿಯವರೆಗೆ. ಪರ್ಯಾಯ ಇಂಧನವನ್ನು ಶೋಧಿಸಿ ಅಭಿವ್ರದ್ದಿಪಡಿಸದೆ ಹೋದಲ್ಲಿ ಜಗತ್ತು ಕತ್ತಲಾಗುವುದರಲ್ಲಿ ಸಂಶಯವೆ ಇಲ್ಲ. ಹಾಗಾಗಿ, ವಿಜ್ಞಾನಿಗಳು, ಸರಕಾರಗಳು ಇಂದೆ ಪರ್ಯಾಯ ಇಂಧನಕ್ಕಾಗಿ ಕಾರ್ಯೋನ್ಮುಕವಾದರೂ ಪರ್ಯಾಯ ಇಂಧನ ಬಳಕೆಯಲ್ಲಿ ಬಂದು ಸಾಮಾನ್ಯರಿಗೆ ತಲುಪವಷ್ಟರಲ್ಲಿ ೫೦ ವರ್ಷಗಳ ಕಾಲ ಸಾಕಾಗುವುದಿಲ್ಲ.

ಮಾನವನು ಮುಂದೆ ಬರುವ ಭೀಕರ ದಾರುಣ ಸ್ಠಿತಿಯನ್ನು ನಿಭಾಯಿಸಲು ಸಫಲನಾಗುವನೋ, ವಿಫಲನಾಗುವನೋ, ಯಾವುದಕ್ಕೂ ಆ ಸೂರ್ಯ ಚಂದ್ರರೆ ಸಾಕ್ಷಿಯಾಗಬೇಕು..


  • ಪ್ರಕಾಶ್ ಉಳ್ಳೆಗಡ್ಡಿ (ಮೆಕ್ಯಾನಿಕಲ್ ಇಂಜನೀಯರಿಂಗ್ ಪದವೀಧರ, ಒಮಾನ್ ಮಸ್ಕತ್ ನಲ್ಲಿ ಅಂತಾರಾಷ್ಟ್ರೀಯ ಆಯಿಲ ಅಂಡ್ ಗ್ಯಾಸ್ ಇಂಜನೀಯರಿಂಗ್ ಕನ್ಸಲ್ಟನ್ಸಿಯಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾಗಿ ಕೆಲಸ.ಮಾಡುತ್ತಿದ್ದಾರೆ) ಮಸ್ಕತ್ತ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW