ಹೇಮಂತ್ ಪಾರೇರಾ ರೈತರು, ಕತೆಗಾರ, ಲೇಖಕರಾಗಿದ್ದು ಅವರ ‘ಒಲವಿನ ಸವಾರಿ’ ಕಥಾಸಂಕಲನಕ್ಕೆ ಹಿರಿಯ ಸಾಹಿತಿಗಳಾದ ಗೋಪಾಲಕೃಷ್ಣ ಕುಂಟಿನಿ ಅವರು ಮುನ್ನುಡಿ ಬರೆದಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಒಲವಿನ ಸವಾರಿ
ಲೇಖಕರು : ಹೇಮಂತ್ ಪಾರೇರಾ
ಪ್ರಕಾಶಕರು : ಕನ್ನಡ ಪುಸ್ತಕ
ಖರೀದಿಗಾಗಿ : 97433 53597
ಕೊಡಗಿನ ಯುವಕ ಹೇಮಂತ್ ಕತೆಗಳನ್ನು ಬರೆಯುತ್ತಿದ್ದಾರೆ ಎಂದು ಗೊತ್ತಾಗಿ ಯಾಕೋ ಕುತೂಹಲ ಹುಟ್ಟಿತು. ‘ತಾವುಗಳು ನನ್ನ ಕತೆಗಳನ್ನು ಓದಿ, ಮುನ್ನುಡಿ ಬರೆದುಕೊಡಬಹುದಾ ಸಾರ್ ‘ ಎಂದು ಹೇಮಂತ್ ಕೇಳಿಕೊಂಡಿದ್ದರು. ಅವರು ಕಳುಹಿಸಿಕೊಟ್ಟ ಕತೆಗಳನ್ನು ಬಿಡಿಸಿಟ್ಟುಕೊಂಡು ಓದತೊಡಗಿದೆ. ನಿರಾಳವೆನಿಸಿತು.
ಹೇಮಂತ್ ಯಾವುದೆ ಭಾಷಾಡಂಬರಕ್ಕೆ ಬೀಳಲಿಲ್ಲ. ಕತೆ ಕಟ್ಟುವಾಗ ತಾನು ಹಂದಾಡಲಿಲ್ಲ. ಅವರು ಕತೆಗಳನ್ನು ಹುಟ್ಟಿಸಿಕೊಂಡ ಬಗೆ ಮತ್ತು ಅವನ್ನು ಸಾಗಿಸುವ ಬಗೆಗಳೆ ಚೆಂದ. ಅದೊಂದು ರೀತಿಯ ಒಲವಿನ ಸವಾರಿಯೇ. ಕತೆಗಾರ ಒಂದನೆ ಕತೆ ಹೇಳುವಾಗ ಶುರುವಿಟ್ಟುಕೊಳ್ಳುವ ಶ್ರದ್ಧೆ ಕೊನೆಯ ಕತೆ ಹೇಳುವಾಗಲೂ ಇರಬೇಕು. ಕತೆಗಳು ಒಂಥರಾ ಬಿಳಿಹುಲ್ಲಿನಲ್ಲಿ ಹುದುಗಿಸಿಟ್ಟ ಮಾವಿನಕಾಯಿಗಳ ಹಾಗೆ. ಇಂದೇ ಹಣ್ಣಾಗಬೇಕು ಎಂದು ಬಯಸಿ ಕಾಯುವಂತೆ ಮಾಡುತ್ತಿರಬೇಕು. ದಿನಾ ಹುಲ್ಲನ್ನು ಸರಿಸಿ ಒಂದೊಂದನ್ನೆ ಒತ್ತಿ ಮೂಸಿ ಯಾವುದು ಹಣ್ಣಾಗಿದೆ ಎಂದು ಕಾತರದಿಂದ ಹುಡುಕುವಂತಿರಬೇಕು.

ಹೇಮಂತ್ ಸ್ವತಃ ರೈತನೂ ಆಗಿರುವುದರಿಂದ ಅದನ್ನು ಸೊಗಸಾಗಿ ಮಾಡಿದ್ದಾರೆ. ಅವರ ಅಷ್ಟೂ ಕತೆಗಳು ಬುಟ್ಟಿಯ ಒಳಗೆ ಹುಲ್ಲಿನಡಿಯಲ್ಲಿಟ್ಟ ಮಾವಿನಂತಿವೆ. ಒಂದೊಂದು ಕತೆಯನ್ನೂ ಮುಟ್ಟಿ ಮೂಸಿ ಆಸ್ವಾದಿಸುವಂತೆ ಓದುಗನನ್ನು ಸೆಳೆಯುತ್ತವೆ. ಬುಟ್ಟಿಗೆ ಕೈಇಟ್ಟ ಓದುಗನಿಗೆ ಎಲ್ಲವೂ ಮಾಗಿದಂತೆ ಭಾಸವಾಗುತ್ತದೆ.
ವಯೋಸಹಜ ಪ್ರೇಮಕ್ಕೆ ಬಿದ್ದ ಜೋಡಿ ಸಿಕ್ಕಿಹಾಕಿಕೊಂಡು ದೂರವಾಗುತ್ತಾರೆ. ಮತ್ತೆಂದೋ ಭೇಟಿಯಾಗುವ ಹೊತ್ತಿಗೆ ಅವರು ಎಲ್ಲಿ ಸಿಕ್ಕಿಬಿದ್ದಿದ್ದರೋ ಅಲ್ಲೇ ಸಿಗುತ್ತಾರೆ. ಅಷ್ಟು ವರ್ಷಗಳ ಕಾಯುವಿಕೆ ಹೊಟ್ಟೆತುಂಬಾ ನಗುವಿನಲ್ಲಿ ಮುಗಿಯುತ್ತದೆ. ಸಮರ್ಥ ಕತೆಗಾರ ಕಾಣಿಸುವುದು ಇಲ್ಲೆ. ಹೇಮಂತ್ ತನ್ನ ಕತೆಗಳು ಸಿನಿಮಾಟಿಕ್ ಆಗದಂತೆ ಎಚ್ಚರವಹಿಸಿದ್ದು ಹೀಗೆ.
ಕತೆಗಾರ ಕತೆಯಲ್ಲಿ ಬಳಸುವ ಭಾಷೆಗೊಂದು ಲಾಲಿತ್ಯವಿರಬೇಕು. ಪ್ರತೀ ಸಾಲಿನಲ್ಲೂ ಅದು ಕಾಣಿಸುತ್ತಿರಬೇಕು. ಕತೆಗಳು ಆಪ್ಯಾಯಮಾನವೆನ್ನಿಸುವುದು ಆಗಲೇ. ಇಲ್ಲಿ ಕತೆಗಾರನ ಪದಜೋಡಣೆಯ ಎರಡು ಉದಾಹರಣೆಗಳನ್ನು ಗಮನಿಸಿ.
‘ಹುಡುಗಿಯರು ಕೂಡ ಅಷ್ಟೆ, ಸೌಂದರ್ಯವೇ ಕಾಲೇಜಿನ ಒಂದು ಭಾಗಕ್ಕೆ ಬಂದು ಕುಳಿತಂತೆ..’
ಈ ಸಾಲು ಆ ವಯಸ್ಸಿಗೆ ಹೇಳಿಮಾಡಿಸಿದಂತಿದೆ ಮತ್ತು ಆ ವಯಸ್ಸಿನಲ್ಲಿ ಹುಡುಗರಿಗೆ ಹುಡುಗಿಯರು ಹಾಗೆ ಕಾಣಬೇಕೂ ಕೂಡ. ಹೇಮಂತ್ ಸೊಗಸಾಗಿ ಇಂಥ ಹಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

‘ಕಟ್ಟಿಗೆಯ ತುಂಡಿಗೆ ಕೆಂಡದ ಸ್ಪರ್ಶವಾಗಿ ಜೀವಗೊಂಡ ಬೆಂಕಿ’ ಎಂದು ಅವರು ಒಂದು ಕತೆಯ ನಡುವೆ ಬರೆಯುತ್ತಾರೆ. ಇದು ಕತೆಯಲ್ಲ, ಕಾವ್ಯ ಎಂದು ಅನಿಸಿಬಿಡುತ್ತದೆ. ಇಲ್ಲೇ, ಇಂಥಲ್ಲೇ ಕತೆ ಉತ್ತುಂಗಕ್ಕೆ ಏರಿಹೋಗುವುದು. ಇನ್ನೊಂದೆಡೆ ಅವರು ಬರೆದ ಸಾಲು ಮಳೆ ಬಿದ್ದ ಹೊತ್ತಿನದ್ದು. ಬಿರುಬೇಸಿಗೆಯ ಹೊತ್ತಿನಲ್ಲಿ ಬಿದ್ದ ಮಳೆ ಕತೆಗಾರನಿಗೆ ‘ ಬಿಸಿಲಿನ ತಾಪ ತನ್ನ ಪೌರುಷ ಕಳೆದುಕೊಂಡು ಒಮ್ಮೆಗೆ ಭೂಮಿ ತಂಪಾದಂತೆ ಬಾಸವಾಗುತ್ತದೆ’ ಎಂದು ಬರೆದಿದ್ದಾರೆ. ಹಠಾತ್ತನೇ ಬಿದ್ದ ಮಳೆಗೆ ಬಿಸಿಲಿನ ಪೌರುಷ ಕಳೆದುಹೋಗುವ ರೂಪಕ ಕತೆಯ ಶಕ್ತಿಯೂ ಕತೆಗಾರನ ಶಕ್ತಿಯೂ ಆಗಿದೆ.
ಹೇಮಂತ್ ಕತೆಗಳು ಕೊಡಗಿನ ಸುತ್ತಲೂ ಸಂಚರಿಸಿವೆ. ಕತೆಗಾರ ತನ್ನ ನೆಲವನ್ನು ಆಧರಿಸಿ ಬರೆಯುವ ಕತೆಗಳೇ ಯಶಸ್ಸು ಪಡೆಯುತ್ತವೆ. ತಾನು ಕಂಡದ್ದು ಸತ್ಯಗೊಳಿಸುವ ತವಕ ಇಂಥ ಕತೆಗಳಲ್ಲಿ ಶಕ್ತಿರೂಪದಂತೆ ಗೋಚರಿಸುತ್ತವೆ. ಕುಶಾಲನಗರ, ಸೋಮವಾರಪೇಟೆ, ಮಡಿಕೇರಿ, ಸಂಪಾಜೆ, ಹಾರಂಗಿ ಹೀಗೆ ಈ ಕತೆಗಳು ಕೊಡಗಿನ ಸುತ್ತಾಮುತ್ತಾ ಸುಳಿದಾಡಿವೆ. ಹಾಗೆ ಸಾಗುತ್ತಾ ಕೊಡಗಿನ ಮದುವೆ, ಪ್ರೇಮ, ಹೊಡೆದಾಟ, ರೋಷ, ಮಾನವೀಯತೆ, ಹಸಿವು, ಸಿರಿವಂತಿಕೆ, ಕಾಡು, ಊಟ,ತವಕ, ದುಃಖ, ಬಯಕೆ ಒಂದಾ ಎರಡಾ..ಹಲವು ಬಗೆಗಳನ್ನು ಒಳಗೊಳಿಸುತ್ತಾ ಸಾಗಿವೆ. ಈ ಸಂಕಲನ ಓದಿ ಮುಗಿಸುವ ಹೊತ್ತಿಗೆ ಕೊಡಗು ಕೈಯಲ್ಲಿ ಕುಳಿತು, ಮನದಲ್ಲಿ ಹರಿದಾಡಿ, ಹೃದಯದಲ್ಲಿ ಠಾವುಕಟ್ಟಿ ಹಿತವಾದ ಭಾವವನ್ನು ಸೃಷ್ಟಿಸುತ್ತಾ ತಡಿಯಾಂಡಮೋಳ್ ನ ತುತ್ತತುದಿಯಲ್ಲೋ, ಕುಮಾರಪರ್ವತದ ನೆತ್ತಿಯಲ್ಲೋ, ತಲಕಾವೇರಿಯ ಅಂಚಿನಲ್ಲೋ ಕಂಡ ಮಂಜು ಮುಚ್ಚಿದ ನಿಸರ್ಗದಂತೆಯೂ ಮುಂದಿರುವ ಹಾದಿಯಂತೆಯೂ ಕಾಣಿಸುತ್ತದೆ.
ಕನ್ನಡದ ಭರವಸೆಯ ಕತೆಗಾರ ಹೇಮಂತ್ ಪಾರೇರಾ ಅವರಿಗೆ ಶುಭವಾಗಲಿ. ಕತೆಗಳ ಜೊತೆಗಿನ ಅವರ ನಡಿಗೆ ಸುಖವಾಗಿರಲಿ.
- ಗೋಪಾಲಕೃಷ್ಣ ಕುಂಟಿನಿ – ಖ್ಯಾತ ಸಾಹಿತಿಗಳು ಕವಿಗಳು, ಉಪ್ಪಿನಂಗಡಿ, ದಕ್ಷಿಣ ಕನ್ನಡ ಜಿಲ್ಲೆ
