ಯೌವ್ವನ ಮತ್ತು ಮುಪ್ಪು – ಶಿವಕುಮಾರ್ ಬಾಣಾವರ



ಮುಪ್ಪು ಒಂದು ಖಾಯಿಲೆಯಲ್ಲ. ಆದರೆ ಮುಪ್ಪಾದವರು ಖಾಯಿಲೆಯವರಂತೆ ವರ್ತಿಸುವುದು ಸಾಮಾನ್ಯ. ಅಪ್ಪ ಆಮ್ಮಂದಿರಿಗೆ ಮುಪ್ಪು ಬರಲು ಮಕ್ಕಳೇ ಕಾರಣವಾಗಿರಬಹುದು. ಆದ್ದರಿಂದ ವೃದ್ಧರ ಮೇಲೆ ನಿಗಾ ಇಟ್ಟು ಪ್ರೀತಿ, ಕ್ಷಮೆ, ಸಹನೆಯಿಂದ ಅವರನ್ನು ಕಾಣಬೇಕಿದೆ. ವೃದ್ದಾಪ್ಯ ಹೆಚ್ಚುತ್ತಿರುವ ಇಂದಿನ ಸಮಾಜದಲ್ಲಿ ಲೇಖಕರಾದ ಶಿವಕುಮಾರ್ ಬಾಣಾವರ ಅವರು ಓದುಗರಿಗೆ ಉತ್ತಮ ಸಂದೇಶವನ್ನು ಈ ಲೇಖನದ ಮೂಲಕ ಓದುಗರಿಗೆ ನೀಡಿದ್ದಾರೆ, ಮುಂದೆ ಓದಿ…

ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ಒಬ್ಬಳು ಇಪ್ಪತ್ತಾರು ವರ್ಷ ಪ್ರಾಯದ ಯುವತಿ ಒಂದು ಸಮಾಜ ವೈಜ್ಞಾನಿಕ ಅಧ್ಯಯನ ನಡೆಸಿದಳು. ಒಂದು ವರ್ಷ ಪ್ರತಿದಿನ ಬೆಳಗ್ಗೆ ಎದ್ದು ಒಂದು ಮುದುಕಿಯ ವೇಷ ಧರಿಸಿ ನ್ಯೂಯಾರ್ಕ್ ನಗರದಲ್ಲಿ ಓಡಾಡಿದಳು. ಇಪ್ಪತ್ತಾರು ವರ್ಷದ ಒಬ್ಬಳು ಯುವತಿಯೊಡನೆ ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಅವಳಿಗೆ ಗೊತ್ತಿದ್ದದ್ದೆ. ಆದರೆ ಅರವತ್ತು ವರ್ಷ ವಯಸ್ಸಿನ ಮುದುಕಿಯೊಡನೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಕಂಡುಕೊಳ್ಳಲು ಒಂದು ವರ್ಷ ಮುದುಕಿಯಾಗಿ ಓಡಾಡಿದಳು. ಅವಳ ಅನುಭವಗಳು ಒಂದು ಪುಸ್ತಕವಾಗಿ ಪ್ರಸಿದ್ಧವಾಯಿತು.ಅವಳಿಗಾದ ನೂರಾರು ಅನುಭವಗಳು ಸಾಮಾನ್ಯವಾಗಿ ಎಲ್ಲರಿಗೂ ಆಗುವ ಅನುಭವಗಳೇ. ಆದರೆ ನಮಗೆ ಯಾವತ್ತೋ ಒಮ್ಮೆ ಆಗುವಂಥದ್ದು, ಅವುಗಳನ್ನೇ ಹುಡುಕಿಕೊಂಡು ಹೊರಟ ಆ ಯುವತಿಗೆ ಪ್ರತಿದಿನ ಆಗುತ್ತಿತ್ತು!

ಅಂಗಡಿಗಳಲ್ಲಿ ಮುದುಕಿಗೆ ಬೇಕಾದ ವಸ್ತುಗಳು ಪಕ್ಕದಲ್ಲಿ ನಿಂತ ಯುವತಿಗೆ ಸಿಗುವಷ್ಟು ಬೇಗ ಸಿಗಲಿಲ್ಲ. ಯುವತಿಗೆ ಸುಲಭವಾಗಿ ಪವೇಶ ದೊರೆಯುವಲ್ಲಿ ಮುದುಕಿಗೆ ಸಿಗಲಿಲ್ಲ. ಔಷಧದ ಅಂಗಡಿಗಳಲ್ಲಿ ಕೂಡ ಔಷಧಿಗೆ ಅವಸರ ಮಾಡುತ್ತಿದ್ದ ಮುದುಕಿಗೆ ಸೇಲ್ಸ್ ಮನ್ ಔಷಧಿ ಮೊದಲು ನೀಡದೇ, ಇಪ್ಪತ್ತರ ಚೆಲುವೆಯ ಕೈಯಲ್ಲಿದ್ದ ಚೀಟಿಗೇ ಮೊದಲು ಕೈನೀಡಿದ. ಕ್ಯೂಗಳಲ್ಲಿರುವ ಚೆಲುವೆಯಾದ ಯುವತಿಯ ವಿನಂತಿಯಂತೆ ಕ್ಯೂನಲ್ಲಿ ಮುಂದಿನ ಸ್ಥಾನದಲ್ಲಿ ನಿಲ್ಲಲು ಅವಕಾಶ ಸಿಕ್ಕಿದರೆ, ವೃದ್ಧೆಗೆ ಅಂಥ ಅವಕಾಶ ದುರ್ಲಭವಾಗಿತ್ತು.

ನಮ್ಮಲ್ಲಿ ನಾವು ನೋಡಿಲ್ಲವೇ? ಬಸ್ಸಿನಲ್ಲಿ ಯುವತಿ ಬಂದಾಗ ಜರುಗಿ ಸ್ಥಳ ಕೊಡುವವರು ಹತ್ತರಲ್ಲಿ ಎಂಟು ಮಂದಿಯಾದರೆ, ವಯಸ್ಸಿನ ಮಹಿಳೆಯರಿಗೆ ಸ್ಥಳ ನೀಡುವವರು ಹತ್ತರಲ್ಲಿ ಇಬ್ಬರಿದ್ದರೆ ಹೆಚ್ಚು. ಮುಪ್ಪಿನವರಿಗೆ ಬಸ್ಸಲ್ಲಿ ಇಳಿಯಲು ಹತ್ತಲು ಹೊತ್ತು ಹಿಡಿಯುತ್ತದೆ. ಆಗ ಕಂಡಕ್ಟರ್ ವೃದ್ಧ ಮಹಿಳೆಯ ವಯಸ್ಸು ಉಲ್ಲೇಖಿಸಿ ಅಪಹಾಸ್ಯದ ಮಾತು ಆಡುತ್ತಾನೆ. “ನಿನ್ನನ್ನು ಯಾರು ಹೆತ್ತರು?” ಎಂದು ಆಕೆ ಕಂಡಕ್ಟರನ್ನು ಕೇಳಿದರೆ ತಪ್ಪಿದೆಯೇ?

ಫೋಟೋ ಕೃಪೆ : indianverse.wordpress

ಆಕಸ್ಮಿಕದಲ್ಲಿ ಅಪಘಾತಗಳಲ್ಲಿ ಅಕಾಲ ಮೃತ್ಯುವಿಗೆ ಈಡಾಗದೆ, ರೋಗರುಜಿನಗಳಿಗೆ ಬಲಿಯಾಗದೆ, ಬದುಕಿ ಉಳಿದ ಎಲ್ಲರಿಗೂ ಮುಪ್ಪಂತೂ ಬಂದೇ ಬರುತ್ತದೆ. ಆದರೆ ತಮಗೆ #ಮುಪ್ಪು ಬರುವುದಿಲ್ಲ ಎಂಬಂತೆ ಹೆಚ್ಚಿನವರ ವರ್ತನೆ ಇರುತ್ತದೆ. ಮುಪ್ಪಿನವರ ಬಗ್ಗೆ ಸಮಾಜದಲ್ಲಿ ಇರುವ ಅನಾದರ ಅಚರಿ ಹುಟ್ಟಿಸುತ್ತದೆ. ಬಸ್ಸಿನಲ್ಲಿ ಕಂಡಕ್ಟರ್ ಒಬ್ಬ ಯುವತಿಯೊಡನೆ ನಡೆದುಕೊಳ್ಳುವ ರೀತಿ ಬೇರೆ, ಮುದುಕಿಯೊಡನೆ ನಡೆದುಕೊಳ್ಳುವ ರೀತಿ ಬೇರೆ. ಒಂದು ಬಟ್ಟೆಯಂಗಡಿ ಹೊಕ್ಕ ಯುವತಿಯನ್ನು ಕಂಡು ಸೇಲ್ಸ್ ಮ್ಯಾನ್ ಧಾವಿಸಿ ಬರುತ್ತಾನೆ. ಮೂರು – ನಾಲ್ಕು ಅಂಥ ಯುವತಿಯರಿರುವಲ್ಲಿ, ಎಲ್ಲಾ ಸೇಲ್ಸ್ ಮ್ಯಾನ್ ಗಳೂ ಅವರ ಸುತ್ತ ಮುತ್ತಿಕೊಳ್ಳುತ್ತಾರೆ. ಯುವತಿಯರಿಗೂ ಸಹ ತಮಗೆ ಸಿಕ್ಕ ವಿಶೇಷ ಪ್ರಾತಿನಿಧ್ಯದ ಬಗ್ಗೆ ಖುಷಿಯಾಗುತ್ತದೆ. ಅಂಗಡಿ ಮಾಲಿಕನೂ ಕಣ್ಣು ಮುಚ್ಚಿಕೊಂಡು ಸುಮ್ಮನಿರುತ್ತಾನೆ.ಸೇಲ್ಸ್ ಮ್ಯಾನ್ ಗಳಿಗೆ ಸಿಗುವ ಪಗಾರವೂ ಅಷ್ಟಕ್ಕಷ್ಟೇ. ಮನೋರಂಜನೆಗಿರುವ ಅವಕಾಶಕ್ಕೂ ಅಡ್ಡಿ ಮಾಡುವುದು ಏಕೆ ಎಂದು ಅವನ ಭಾವನೆಯಿರಬಹುದು. ಇದರಲ್ಲಿ ತಪ್ಪು ಎನ್ನುವಂಥದ್ದು ಏನೂ ಇಲ್ಲವಲ್ಲಾ? ತಪ್ಪು ಇರುವುದು ಒಬ್ಬ ಮುದುಕ ಅಥವಾ ಮುದುಕಿಯ ಕಡೆಗೆ ತೋರುವ ನಿರುತ್ಸಾಹದ ನೋಟದಲ್ಲಿ ಮತ್ತು ಆಡುವ ಒರಟು ಅಥವಾ ನೀರಸ ನುಡಿಗಳಲ್ಲಿ. ಎಷ್ಟೋ ಸಲ, ಅಂಗಡಿಯ ಸೇಲ್ಸ್ ಮ್ಯಾನ್ ಅಥವಾ ಬ್ಯಾಂಕಿನ ಕಾರಕೂನ ಅಥವಾ ಅಂಥದೇ ಇನ್ಯಾವುದೋ ಸಾರ್ವಜನಿಕ ಸೇವಾ ಸಂಸ್ಥೆಯ ಗುಮಾಸ್ತ ಚೆಲುವೆಯಾದ ಯುವತಿಯ ಕೆಲಸ ಮುಗಿಸಿ, ಮುದುಕಿಯ ಕಡೆಗೆ ಬರುವಾಗ ಒಂದು ಯುಗವೇ ಆಗಬಹುದು. ಅಂಗಡಿಗಳಲ್ಲಿ ಸೇಲ್ಸ್ ಗರ್ಲ್ ಗಳಿರುವಲ್ಲಿ ಕೂಡ ಹೀಗೆಯೇ. ಆದ್ಯತೆ ಯುವಕ ಯುವತಿಯರಿಗೇ! ಬಹಳ ಮಂದಿಯ ಕಣ್ಣಿಗೆ ಸ್ಟೈಲಾಗಿ ಉಡುಪು ಹಾಕಿಕೊಂಡ ಯುವಕ ಯುವತಿಯರೆಲ್ಲ ಶ್ರೀಮಂತರಂತೆ ಕಾಣಿಸುತ್ತಾರೆ. ಸ್ಟೈಲ್ ಇಲ್ಲದ ಮುದುಕ ಮುದುಕಿಯರು ಬಡವರಂತೆ ಕಾಣಿಸುತ್ತಾರೆ! ಪ್ರಾಪಂಚಿಕ ದೃಷ್ಟಿಯೇ ಹೀಗಿರಬಹುದೇ?

ಸೇಲ್ಸ್ ಮನ್ ಮತ್ತು ಸೇಲ್ಸ್ ಗರ್ಲುಗಳಿಗೆ ಎಲ್ಲರೊಡನೆ ಒಂದೇ ರೀತಿ ಚೆನ್ನಾಗಿ ನಡೆದುಕೊಳ್ಳಲು ಹೆಚ್ಚು ಶ್ರಮ ಪಡಬೇಕಾದ್ದೇನೂ ಇಲ್ಲ. ಆದರೆ ಮನುಷ್ಯರು ಯಾಕೆ ಹೀಗೆ ವರ್ತಿಸುತ್ತಾರೆ ಎಂದು ಯಾರಾದರೂ ಆಶ್ಚರ್ಯ ವ್ಯಕ್ತಪಡಿಸಿದರೆ, “ಇದು ಸ್ವಾಭಾವಿಕ. ಇದರಲ್ಲಿ ಏನೂ ವಿಶೇಷವಿಲ್ಲ. ಪ್ರಪಂಚದ ರೀತಿಯೇ ಹೀಗೆ. ಇದು ನಿಸರ್ಗಸಹಜ ಗುಣ. ಆದ್ದರಿಂದ ಇದು ಯವ್ವನಕ್ಕೆ ಮತ್ತು ಮುಪ್ಪಿಗೆ ಇರುವ ವ್ಯತ್ಯಾಸ ಎಂಬುದನ್ನು ಅರ್ಥ ಮಾಡಿಕೊಂಡು ವಯಸ್ಸಾದವರು ಹೊಂದಿಕೊಂಡು ಬದುಕಬೇಕು” ಎಂದು ಹೇಳುವವರಿದ್ದಾರೆ.

ಫೋಟೋ ಕೃಪೆ : trekearth

ಆದರೆ ಇದು ಒಪ್ಪತಕ್ಕ ಮಾತಲ್ಲ. ಯವ್ವನ ಮತ್ತು ಮುಪ್ಪು ನಿಸರ್ಗಸಹಜ ಎಂದು ಎಲ್ಲರೂ ಒಪ್ಪಿಕೊಳ್ಳಬೇಕಾದ್ದೇ. ಆದರೆ ಸಾಮಾಜಿಕರು ವಯಸ್ಸಿನವರೊಡನೆ ಉಪೇಕ್ಷೆಯಿಂದ ನಡೆದುಕೊಳ್ಳುವುದು ಲೋಕ ನಿಯಮವೂ ಅಲ್ಲ. ಇದಕ್ಕೆ ಕಾರಣ ಸಂಸ್ಕೃತಿಯ ವಿಕಾಸದ ಕೊರತೆ, ಅರಿವಿನ ಕೊರತೆ. ಸುಸಂಸ್ಕೃತರು ಎಲ್ಲರೊಡನೆಯೂ ಒಂದೇ ರೀತಿ ನಡೆದುಕೊಳ್ಳುತ್ತಾರೆ. ಅವರಿಗೆ ಮುಖ್ಯ ತಾವು ಮಾಡುವ ಕೆಲಸವೇ ಹೊರತು ಗಿರಾಕಿಯ ವಯಸ್ಸು, ಲಿಂಗ, ಸೌಂದರ್ಯ, ‘ತೋರುವ’ ಅಂತಸ್ತು ಇತ್ಯಾದಿಗಳಲ್ಲ. ಮಾನವೀಯ ಅಂತ:ಕರಣ ಇರುವವರಿಗೆ ಒಬ್ಬ ವ್ಯಕ್ತಿಯಲ್ಲಿ ಆತನ ವಯಸ್ಸು ಎದ್ದು ತೋರಿಸುವ ಅಂಶವಾಗಿರುವುದಿಲ್ಲ.

ತುಂಬಾ ವಯಸ್ಸಾದವರಿಗೆ ತಮ್ಮ ಸಮಸ್ಯೆಯ ಅರಿವು ಇಲ್ಲದಿರುವುದೇ ಒಂದು ಸಮಸ್ಯೆ. ನೆನಪಿನ ಶಕ್ತಿ ಕ್ಷೀಣವಾಗುವುದರಿಂದ ಆಗುವ ಸಮಸ್ಯೆಗಳು, ಪಂಚೇಂದ್ರಿಯಗಳ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ಆಗುವ ಸಮಸ್ಯೆಗಳು ಅವರ ಜೊತೆಯಲ್ಲಿರುವವರಿಗೆ ಪ್ರತಿದಿನ ತಲೆನೋವಾಗಿ ಪರಿಣಮಿಸುತ್ತವೆ. ವಿಚಿತ್ರವೆಂದರೆ ಎಲ್ಲರೂ ದೀರ್ಘಾಯುಸ್ಸನ್ನು ಬಯಸುತ್ತಾರೆ ಮತ್ತು ದೀರ್ಘಾಯುಸ್ಸಿನೊಂದಿಗೆ ಜೋಡಿಕೊಂಡಿರುವ ಸಮಸ್ಯೆಗಳು ಎಲ್ಲರಿಗೂ ಕಾಣಿಸುತ್ತವೆ. ಆದುದರಿಂದ ತಾನು ಕೂಡ ಒಂದು ದಿನ ಹೀಗೆಯೇ ವರ್ತಿಸಬಹುದು ಎಂಬ ಅರಿವಿರುವವರು ಬಹಳ ಕಡಿಮೆ ಮಂದಿ. ಈ ಅರಿವು ಇರಬೇಕಾದ್ದು ಒಂದು ಕೌಟುಂಬಿಕ – ಸಾಮಾಜಿಕ ಅಗತ್ಯ. ಹಾಗಿದ್ದರೆ ಮುಪ್ಪಿನವರ ಸಮಸ್ಯೆಗಳು ಎಲ್ಲರೂ ಎಲ್ಲ ಕಾಲದಲ್ಲಿಯೂ ನಿಭಾಯಿಸಬೇಕಾದ ಒಂದು ನಿಸರ್ಗ ಸಹಜ ಸಮಸ್ಯೆ ಎಂಬ ಅರಿವು ಮೂಡುತ್ತದೆ ಮತ್ತು ಇದನ್ನು ಒಂದು ಸಮಸ್ಯೆ ಎಂದು ಪರಿಭಾವಿಸಬೇಕಾದ ಅಗತ್ಯವೂ ಕಾಣಲಿಕ್ಕಿಲ್ಲ.

ಫೋಟೋ ಕೃಪೆ : trekearth

ವಯಸ್ಸಾದವರನ್ನು ವೃದ್ಧಾಶ್ರಮಗಳಲ್ಲಿ ಹಾಕಿಬಿಡುವುದೇ ಕ್ಷೇಮ ಎಂದು ಭಾವಿಸುವವರು, ತಾವು ವೃದ್ಧರಾದಾಗ ಕೂಡ ಮನೆಯಲ್ಲಿರುವ ಬದಲು ವೃದ್ಧಾಶ್ರಮದಲ್ಲಿರುವ ನಿರ್ಧಾರವನ್ನು ಮಾಡಿದವರು ಮತ್ತು ಮಾಡಿದ ನಿರ್ಧಾರ ಬದಲಾಗುವುದಿಲ್ಲ ಎಂಬ ವಿಶ್ವಾಸವುಳ್ಳವರು ಆಗಿದ್ದರೆ ಪರವಾಗಿಲ್ಲ. ಆದರೆ ಬಹಳ ಮಂದಿ ಹೀಗಿರುವುದಿಲ್ಲ. ವಯಸ್ಸು ಮೀರಿದಾಗ ನಿರ್ಧಾರಗಳು ಬದಲಾಗುವುದು ತೀರಾ ಸಾಮಾನ್ಯ.

ಈಗೀಗ ಮುಂದುವರಿದ ರಾಷ್ಟ್ರಗಳಲ್ಲಿರುವಂತೆ ವಯಸ್ಸಾದವರನ್ನು ವೃದ್ಧಾಶ್ರಮಗಳಲ್ಲಿ ಇರಿಸುವುದು ನಮ್ಮಲ್ಲಿಯೂ ಒಪ್ಪಿತವಾಗತೊಡಗಿದೆ. ಆದರೆ ವಯಸ್ಸಾದವರನ್ನು ಪ್ರೀತಿಯಿಂದ ನೋಡಿಕೊಳ್ಳುವುದರಲ್ಲಿ ಒಂದು ಆನಂದವಿದೆ ಎಂದುಕೊಳ್ಳುವವರು ಕೂಡ ಇರುತ್ತಾರೆ. ಇದು ವಯಸ್ಸಾದವರಿಂದ ಇರುವ ಪ್ರಯೋಜನಗಳನ್ನು ಲೆಕ್ಕ ಹಾಕಿ ಇರಿಸಿಕೊಳ್ಳುವವರಿಗೆ ಅನ್ವಯಿಸುವ ಮಾತಲ್ಲ. ಕೇವಲ ಕರ್ತವ್ಯದ ದೃಷ್ಟಿಯಿಂದ ವಯಸ್ಸಾದ ತಂದೆ ತಾಯಿಯರನ್ನು ಮನೆಯಲ್ಲಿ ಇರಿಸಿಕೊಳ್ಳುವವರಿಗೆ ಅನ್ವಯಿಸುವ ಮಾತು ಕೂಡಾ ಅಲ್ಲ. ಅಜ್ಜ ಅಜ್ಜಿಯರನ್ನು ಮತ್ತು ವಯಸ್ಸಾದ ತಂದೆ ತಾಯಿಯರನ್ನು ನೋಡಿಕೊಳ್ಳುವುದರಲ್ಲಿ ಪಡೆದುಕೊಂಡ ಆನಂದ ಮಾತ್ರವಲ್ಲ, ಕೊಟ್ಟ ಆನಂದ ಕೂಡ ಮತ್ತೊಂದು ದಿನ ಮರಳಿ ಸಿಗುತ್ತದೆ ಎಂಬುದು ಕೂಡ ನಮ್ಮ ಸಾಮಾಜಿಕ – ಸಾಂಸ್ಕೃತಿಕ ಬದುಕಿನಲ್ಲಿ ಪ್ರಾಧಾನ್ಯವನ್ನು ಪಡೆದುಕೊಂಡಿದೆ.

ಫೋಟೋ ಕೃಪೆ : indianexpress

ಜೀವಿತಾವಧಿ ಹೆಚ್ಚಾಗಿರುವುದರಿಂದ ಮತ್ತು ಜನಸಂಖ್ಯೆಯ ನಿಯಂತ್ರಣದಿಂದಾಗಿ ಮುಂದಿನ ದಿನಗಳಲ್ಲಿ ಮುಖ್ಯವಾಗಿ ನಗರಗಳಲ್ಲಿ ಯುವಕ – ಯುವತಿಯರಿಗಿಂತ ದೊಡ್ಡ ಸಂಖ್ಯೆಯಲ್ಲಿ ವೃದ್ಧ – ವೃದ್ಧೆಯರು ಕಾಣಿಸಿಕೊಳ್ಳಲಿಕ್ಕಿದ್ದಾರೆ. ಒಬ್ಬ ಹುಡುಗ ಒಬ್ಬಳು ಹುಡುಗಿ ಸತಿಪತಿಯರಾದಾಗ ಅವರಿಗೆ ಇಬ್ಬರು ಮಾವಂದಿರು ಮತ್ತು ಇಬ್ಬರು ಅತ್ತೆಯಂದಿರು ಉಂಟಾಗುತ್ತಾರೆ.

ವೃದ್ಧಾಪ್ಯದ ಸಮಸ್ಯೆ ಮುಖ್ಯವಾಗಿ ನಗರಗಳಲ್ಲಿ ೫೦ – ೬೦ ವರ್ಷಕ್ಕೆ ನಿವೃತ್ತ ಜೀವನ ಆರಂಭವಾದರೆ, ಹಳ್ಳಿಯಲ್ಲಿ ೮೦ ವರ್ಷ ದಾಟಿದರೂ ಏನಾದರೊಂದು ಕೆಲಸ ಮಾಡುತ್ತಿರುವುದನ್ನು ಮತ್ತು ಅವರ ಕೆಲಸ ಕುಟುಂಬಕ್ಕೆ ಅಗತ್ಯವಾಗಿರುವುದನ್ನು ಕಾಣಬಹುದು. ಗ್ರಾಮೀಣ ಬದುಕಿನಲ್ಲಿ ಒಬ್ಬ ಮನುಷ್ಯ ಒಂದು ಕುಟುಂಬಕ್ಕೆ ಅಗತ್ಯವೇ ಅನಗತ್ಯವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವಿಸುವುದಿಲ್ಲ. ಪ್ರೀತಿ, ಕ್ಷಮೆ ಮತ್ತು ಸಹನೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತದೆ. ಹಳ್ಳಿಗಳಲ್ಲಿ ಮನೆಯವರಿಗೆ ಮುಪ್ಪಿನವರು ಹೊರೆ ಎನಿಸುವ ಸಮಸ್ಯೆ ಬಹುತೇಕ ಇಲ್ಲವೆಂದೇ ಹೇಳಬಹುದು.

ಕೆಲವು ದೇಶಗಳಲ್ಲಿ ವಯಸ್ಸಾದವರೊಡನೆ ವಿಶೇಷವಾದ ಗೌರವದಿಂದ ನಡೆದುಕೊಳ್ಳುವುದು ಒಂದು ಸಂಪ್ರದಾಯವೇ ಆಗಿರುತ್ತದೆ. ಅದಕ್ಕೆ ಪ್ರತ್ಯೇಕವಾದ ಜನಾಂಗಿಕ ಕಾರಣಗಳೂ ಇರುತ್ತವೆ. ಅತೀ ನಗರೀಕರಣ ಮನುಷ್ಯ ಸಂಬಂಧದ ಮೇಲೆ ಬೀರುವ ಪರಿಣಾಮವನ್ನು ಗಮನಿಸಿದರೆ, ಹತ್ತೈವತ್ತು ವರ್ಷಗಳಲ್ಲಿ ಮನುಷ್ಯ ಸಂಬಂಧಗಳಲ್ಲಿ ನಮ್ಮ ಸಮಾಜದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಬಹುದಾಗಿದೆ.

ಫೋಟೋ ಕೃಪೆ : istockphoto

ಎಲ್ಲಾ ಅರವತ್ತು ವರ್ಷ ದಾಟಿದವರು ಒಂದೇ ದಿನ ಸತ್ತುಹೋದರೆ ದೇಶ ಅಲ್ಲೋಲ ಕಲ್ಲೋಲವಾಗುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಅವರ ಜೊತೆಗೆ ಎಲ್ಲಾ ಪರಿಣತಿ, ಎಲ್ಲಾ ವಿವೇಕ ಮಣ್ಣುಪಾಲಾಗುತ್ತದೆ. ಪಾರ್ಲಿಮೆಂಟು ಅಸೆಂಬ್ಲಿಗಳು ಬಹುತೇಕ ಖಾಲಿ ಬೀಳುತ್ತವೆ. ಲಕ್ಷೋಪಲಕ್ಷ ವೈದ್ಯರು ಅದೃಶ್ಯವಾಗುತ್ತಾರೆ. ಲಕ್ಷೋಪಲಕ್ಷ ವಕೀಲರು ಮತ್ತು ಇತರ ವೃತ್ತಿ ನಿರತರು ಅದೃಶ್ಯವಾಗುತ್ತಾರೆ. ಪತ್ರಿಕೆಗಳನ್ನು ಪ್ರಕಟಿಸುವವರು, ಲೇಖಕರು, ಮಾತ್ರವಲ್ಲ ಲಕ್ಷೋಪಲಕ್ಷ ಓದುಗರು ಕೂಡ ಅದೃಶ್ಯವಾಗುತ್ತಾರೆ.



ಇದು ವಯಸ್ಸಾದವರು ಶ್ರೇಷ್ಠರು, ಯುವಕ ಯುವತಿಯರು ನಿಕೃಷ್ಟರು ಎಂಬ ವಾದವಲ್ಲ. ವಯಸ್ಸಾದವರು ನಮ್ಮ ಬದುಕಿನ ಮಹಲಿನ ಮುಖ್ಯವಾದ ಸ್ಥಂಭಗಳು. ಆದುದರಿಂದ ಅವರನ್ನು ರಕ್ಷಿಸಬೇಕಾದ್ದು, ಪ್ರೀತಿ ಗೌರವದಿಂದ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಹೇಳುವ ಪ್ರಯತ್ನ. ಇದು ತಮಗೆ ಗೊತ್ತಿರುವ ವಿಚಾರವೇ ಆಗಿದೆ ಎಂದು ನೂರರಲ್ಲಿ ತೊಂಬತ್ತರಷ್ಟು ಮಂದಿ ಹೇಳಬಹುದು. ಆದರೆ ಗೊತ್ತಿದ್ದು ಏನು ಪ್ರಯೋಜನ, ಆಚಾರದಲ್ಲಿ ಇಲ್ಲದಿದ್ದರೆ? ತಮ್ಮನ್ನು ಹೇಗೆ ಅವಗಣಿಸಲಾಯಿತು, ಹೇಗೆ ತಮ್ಮೊಡನೆ ಕೆಟ್ಟದಾಗಿ ನಡೆದುಕೊಳ್ಳಲಾಯಿತು ಎಂದು ಬಸ್ಸುಗಳಲ್ಲಿ ಓಡಾಡುವ, ಯಾವುದೇ ಕೆಲಸಕ್ಕೆ ಕೋರ್ಟು ಕಛೇರಿಗೆ ಹೋಗುವಾಗ, ಮಾತ್ರವಲ್ಲ, ತಮ್ಮ ಮನೆ ಮಂದಿಯ ನುಡಿಯಿಂದ ಬೇಸತ್ತು, ಸಾವು ಬರಬಾರದೇ ಎನ್ನುವ ವಯಸ್ಸಾದವರ ಮಾತನ್ನು ಕೇಳಿದರೆ, ಒಬ್ಬ ವ್ಯಕ್ತಿ ೫೦-೬೦ ವರ್ಷಗಳ ಕಾಲ ಮಾಡಿದ ಒಳ್ಳೆಯ ಕೆಲಸವನ್ನು ಮರೆತುಬಿಡುವವರೇ ಹೆಚ್ಚು ಎಂದೆನಿಸಬಹುದು. ಈ ಸಮಾಜದಲ್ಲಿ ಸ್ವಾರ್ಥಿಗಳ ಸಂಖ್ಯೆಯೇ ಹೆಚ್ಚು ಎಂದೆನಿಸಬಹುದು.

ಮುಪ್ಪು ಒಂದು ಖಾಯಿಲೆಯಲ್ಲ. ಆದರೆ ಮುಪ್ಪಾದವರು ಖಾಯಿಲೆಯವರಂತೆ ವರ್ತಿಸುವುದು ಸಾಮಾನ್ಯ. ಅಪ್ಪ ಆಮ್ಮಂದಿರಿಗೆ ಮುಪ್ಪು ಬರಲು ಮಕ್ಕಳೇ ಕಾರಣವಾಗಿರಬಹುದು. ಆದ್ದರಿಂದ ವೃದ್ಧರ ಮೇಲೆ ನಿಗಾ ಇಟ್ಟು ಪ್ರೀತಿ, ಕ್ಷಮೆ, ಸಹನೆಯಿಂದ ಅವರನ್ನು ಕಾಣಬೇಕಿದೆ.


  • ಶಿವಕುಮಾರ್ ಬಾಣಾವರ  (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು)ಶಿವಮೊಗ್ಗ, 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading