ಎಲ್ಲೆಡೆ ಎಲ್ಲದರಲು ಮಾರ್ದನಿಸುತಿದೆ ಓಂಕಾರ, ಸೃಷ್ಟಿ ಕಣಕಣ ಪುಳಕಿಸುವ ಚೈತನ್ಯ ಝೇಂಕಾರ…ಕವಿ ರಶ್ಮಿ ಪ್ರಸಾದ್ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಅರುಣೋದಯದ ಗುಡಿಗೋಪುರ ಘಂಟಾನಾದ
ತರುಲತೆಮರಗಳಲಿ ಹಕ್ಕಿಪಕ್ಷಿಗಳಿಂಚರ ನಿನಾದ
ಹರಿವ ಕೆರೆತೊರೆ ನದಿ-ನಾಲೆಗಳ ಮಂಜುಳಗಾನ
ಗಿರಿಬನ ಬಯಲು ಕಾನನ ಸುಳಿವ ಪವನ ತನನ
ಎಲ್ಲೆಡೆ ಎಲ್ಲದರಲು ಮಾರ್ದನಿಸುತಿದೆ ಓಂಕಾರ
ಸೃಷ್ಟಿ ಕಣಕಣ ಪುಳಕಿಸುವ ಚೈತನ್ಯ ಝೇಂಕಾರ
ಅಗೋಚರ ದೈವೀಶಕ್ತಿಯ ಭವ್ಯಬೆಳಕಿನ ಸಾಕಾರ
ಕ್ಷಣ ಕ್ಷಣ ಅವ್ಯಕ್ತ ದಿವ್ಯಾನುಭಾವದ ಸಾಕ್ಷಾತ್ಕಾರ
ಬ್ರಹ್ಮಾಂಡದ ಮೂಲಮಂತ್ರವೇ ಓಂಕಾರ ನಾದ
ಪಂಚಭೂತಗಳಲೂ ಓಂಕಾರದ ಲೀಲಾವಿನೋದ
ಪಂಚೇಂದ್ರಿಯಗಳಲೂ ಓಂಕಾರ ಸ್ವರಸಂಚಲನ
ಹೃನ್ಮನಗಳ ಆವರಿಸುತ ನರನರಗಳಲು ಸಂವಹನ
ಉಸಿರುಸಿರಲೂ ಅನುರಣಿಸುತ ಆಗಿಹೋದರೆ ಲೀನ
ಜೀವಭಾವ ಅರ್ಪಿಸುತ ಶರಣಾಗಿ ಮಾಡಿದರೆ ಧ್ಯಾನ
ಕಳೆದೀತು ಭವಬಂಧನಗಳ ಕಳಚುತ ಲೌಕಿಕಯಾನ
ಮುಕ್ತಿ ಬೆಳಕಿನಡಿ ಕೃತಾರ್ಥವಾದೀತು ಜೀವ-ಜೀವನ
- ರಶ್ಮಿ ಪ್ರಸಾದ್ (ರಾಶಿ)
