ಒಂದು ರೂಪಾಯಿ ಸಿನಿಮಾ – ಮಂಜಯ್ಯ ದೇವರಮನಿ



ಸಾವಿರಾರು ರೂಪಾಯಿ ಕೊಟ್ಟು ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡ್ತಿವಿ, ಆದರೆ ಹಿಂದೊಂದು ಕಾಲವಿತ್ತು ಮಾಡೋ ಕೆಲಸಬಿಟ್ಟು ಸಿನಿಮಾ ನೋಡೋದು ಒಂದು ದುಶ್ಚಟ ಎಂಬುದು ಮನೆಯ ಹಿರಿಯರ ಅಭಿಪ್ರಾಯವಾಗಿತ್ತು.ಗೊದಾಮಿನೊಳಗೆ ಕೂತು ಸಿನಿಮಾ ನೋಡಿದ ಅನುಭವ, ನಂತರ ಮನೆಗೆ ಟಿವಿ ಬಂದಾಗ ಆದ ಅನುಭವಗಳನ್ನೆಲ್ಲಾ ಸೇರಿಸಿ ಲೇಖಕರಾದ ಮಂಜಯ್ಯ ದೇವರಮನಿ ಅವರು ಒಂದು ರೂಪಾಯಿ ಸಿನಿಮಾದ ನೆನಪಿನ ಕತೆಯನ್ನು ಬರೆದಿದ್ದಾರೆ, ಮುಂದೆ ಓದಿ…

ಮೂವತ್ತು ವರ್ಷಗಳ ಹಿಂದೆ ನಮ್ಮೂರಿನ ಜನರಿಗೆ ವಿಪರೀತ ಸಿನಿಮಾ ಹುಚ್ಚು. ಅದರಲ್ಲೂ ರಾಜಕುಮಾರ, ವಜ್ರಮುನಿ, ನರಸಿಂಹರಾಜ್ ಅಭಿನಯದ ಸಿನಿಮಾಗಳನ್ನು ನೋಡುವುದೆಂದರೆ ತುಪ್ಪ ಹೋಳಿಗೆ ಉಂಡಂತೆ. ಸಂಗಾಪುರದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ತುಮ್ಮಿನಕಟ್ಟಿಯಲ್ಲಿ ಮರಡಿ ಬಸವೇಶ್ವರ ಚಿತ್ರಮಂದಿರವಿತ್ತು. ಮಂದಿರವೆಂದರೆ ತಪ್ಪಾಗುತ್ತದೆ ಗೊದಾಮು ಎಂದರೇನೇ ಸೂಕ್ತ! ಆಸನಗಳಿರಲಿಲ್ಲ ನೆಲದ ಮೇಲೆ ಕುಳಿತುಕೊಳ್ಳಬೇಕಿತ್ತು. ಎಲ್ಲೋ ಕೆಲವು ಕಬ್ಬಿಣ ಕುರ್ಚಿಗಳಿದ್ದವು ಅವು ಅನುಕೂಲಸ್ತರಿಗೆ ಮೀಸಲು. ಇಂತಹ ಗೋದಾಮಿನಲ್ಲಿ ಕುಳಿತು ಸೊಳ್ಳೆಯನ್ನು ಕಚ್ಚಿಸಿಕೊಳ್ಳುತ್ತ ಸಿನಿಮಾ ನೋಡುವ ಸುಖ ನಮ್ಮದಾಗಿತ್ತು.

ವರ್ಷದಲ್ಲಿ ಒಮ್ಮೆ ಇಲ್ಲವೇ ಎರಡು ಬಾರಿ ಆ #ಚಿತ್ರಮಂದಿರಕ್ಕೆ ಚಕ್ಕಡಿಗಾಡಿ ಕಟ್ಟಿಕೊಂಡು ಹೋಗಿ ಸಿನಿಮಾ ನೋಡಿ ಬರುವುದೊಂದು ನಮ್ಮೂರಿನ ವಾಡಿಕೆ. ಅದು ಸುಗ್ಗಿಯ ಕಾಲ ಮುಗಿದ ಮೇಲೆ ಅಳುಗಳಿಗೆ ಮತ್ತು ಮನೆಯವರಿಗೆ ಚಿತ್ರ ದರ್ಶನದ ಭಾಗ್ಯ ಫಲಿಸುತ್ತಿತ್ತು. ಮನೆಯವರೇ ಅಳುಗಳಾಗಿದ್ದ ಕಾಲ, ಮನೆಯವರನ್ನು ಬಿಟ್ಟು ಅಳುಗಳು ಅಂತಾ ಲೆಕ್ಕ ಹಾಕಿದರೆ ಒಂದಿಬ್ಬರು ಮಾತ್ರ ಸಿಕ್ಕಾರು. ಹಲ್ಲು ಗಿಟಿಗುಟ್ಟುವ ಚಳಿಯಲ್ಲಿ ಚಕ್ಕಡಿಯಲ್ಲಿ ಕುಳಿತು ಎರಡನೇ ಶೋ ನೋಡಲು ಹೋಗುತ್ತಿದ್ದೆವು. ಮ್ಯಾಟನಿ ಶೋ ನಿಷಿದ್ದ. ಮಾಡೋ ಕೆಲಸಬಿಟ್ಟು ಸಿನಿಮಾ ನೋಡೋದು ಒಂದು ದುಶ್ಚಟ ಎಂಬುದು ಮನೆಯ ಹಿರಿಯರ ಅಭಿಪ್ರಾಯವಾಗಿತ್ತು . ಅದಕ್ಕೆ ರಾತ್ರಿ ಸಿನಿಮಾಕ್ಕೆ ಹೆಚ್ಚು ಜನ ಸೇರುತ್ತಿದ್ದರು.

ಫೋಟೋ ಕೃಪೆ : indianbydesign

ತಿಪ್ಪೇಶಯ್ಯ ಚಿಕ್ಕಪ್ಪ ಎಲ್ಲರನ್ನೂ ಒಟ್ಟು ಮಾಡಿಕೊಂಡು ಸಿನಿಮಾ ತೋರಿಸಲು ಕರೆದುಕೊಂಡು ಹೋಗುತ್ತಿದ್ದ. ತಪ್ಪಿಯೂ ಮೂಕಣ್ಣನನ್ನು ಬಿಟ್ಟು ಹೋಗುತ್ತಿರಲಿಲ್ಲ. ಅದಕ್ಕೆ ಒಂದು ಕಾರಣವೂ ಇದೆ ಅದೇನೆಂದರೆ ಎಲ್ಲರೂ ಸಿನಿಮಾ ನೋಡೋಲು ಹೋದರೆ ಎತ್ತುಗಳು ಮತ್ತು ಚಕ್ಕಡಿಯನ್ನು ಕಾಯುವವರು ಯಾರು? ಆ ಕೆಲಸವನ್ನು ಮೂಕಣ್ಣನಿಗೆ ವಹಿಸುತ್ತಿದ್ದ. ಮೂಕಣ್ಣ ಸುಮಾರು ಮೂವತ್ತು ವರ್ಷದವನು ಅವನಿಗೆ ಮದುವೆಯಾಗಿರಲಿಲ್ಲ ; ಕಾರಣ ಮಾತು ಬರುತ್ತಿರಲಿಲ್ಲ. ಆದರೆ ಕಿವಿ ಚೆನ್ನಾಗಿ ಕೇಳುತ್ತಿದ್ದವು. ಅವನಿಗೂ ಸಿನಿಮಾ ನೋಡುವ ಹುಚ್ಚು ಆದರೆ ಅವನ ಪಕ್ಕ ಯಾರೇ ಕೂತರು ಅನಾಹುತ ತಪ್ಪಿದ್ದಲ್ಲ. ಯಾಕೆ ಎನ್ನುತ್ತೀರಾ? ಅವನು ಟೈಗರ್ ಪ್ರಭಾಕರ್ ಕಟ್ಟಾ ಅಭಿಮಾನಿ. ಸಿನಿಮಾದಲ್ಲಿ ಫೈಟಿಂಗ್ ಸನ್ನಿವೇಶಗಳು ಬಂದರೆ ಮುಗಿಯಿತು ಮೂಕಣ್ಣ ಟೈಗರ್ ಪ್ರಭಾಕರ್ ರೀತಿಯಲ್ಲಿ ಕರಾಟೆ ತೆಗೆದು ಅಕ್ಕಪಕ್ಕದವರನ್ನು ಗುದ್ದಿಬಿಡುತ್ತಿದ್ದ. ಗುದ್ದುವುದು, ತಿವಿಯುವುದು, ಕುಕ್ಕುವುದು ಕಟ್ ಕಟ್ ಹಲ್ಲುಕಡಿದು ಜೋರಾಗಿ ಕೇಕೆ ಹಾಕುವುದು ಮಾಡುತ್ತಿದ್ದ ಅವನ ಹಾರಾಟ ಚೀರಾಟ ತಮಣಿ ಮಾಡಲಾಗದೆ ಚಿಕ್ಕಪ್ಪ ಅವನನ್ನು ಚಿತ್ರ ಗೋದಾಮಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಬದಲಾಗಿ ನಾಲ್ಕು ಸೇರು ಮಂಡಕ್ಕಿ ಎಂಟತ್ತು ಮಿರ್ಚಿ ಒಂದೆರಡು ಉಳ್ಳಾಗಡ್ಡಿ ರಾಶಿಯನ್ನು ಸುರಿದು ಚಕ್ಕಡಿಗಾಡಿ ಕಾಯಲು ಹಚ್ಚುತ್ತಿದ್ದ. ಮೂಕಣ್ಣನಿಗೂ ಸಿನಿಮಾಗಿಂತ ಮಿರ್ಚಿ ಮಂಡಕ್ಕಿ ಮೇಲೆ ಆಸೆ… ಮಂಡಕ್ಕಿ ಮಿರ್ಚಿ ಸ್ಪರ್ಧೆಯಲ್ಲಿ ನಮ್ಮ ಮೂಕಣ್ಣ ಗೋಲ್ಡ್ ಮೆಡಲ್ ಗೆದ್ದಿದ್ದಾನೆ. ಒಂದು ಕೆಜಿ ಈರುಳ್ಳಿ ಅವನಿಗೆ ಲೆಕ್ಕವಿಲ್ಲ. ಹಾಗೆ… ಈರುಳ್ಳಿಯನ್ನು ಕೈಯಲ್ಲಿ ಗುದ್ದಿ ಕವ… ಕವ… ತಿಂದು ಬಿಡುತ್ತಾನೆ. ಕೊತ ಕೊತ ಕುದಿ ಎಣ್ಣೆಯ ಮಿರ್ಚಿಯನ್ನು ಓಣಾಮಕ್ಕೆ ಗಂಟಲಿಗಿಳಿಸುತ್ತಾನೆ. ಕಿತ್ತಲಿ ಚಹಾವನ್ನು ಬಾಯಿಗೆ ಸುರಿದುಕೊಂಡು ನೀರು ಕುಡಿದಂತೆ ಕುಡಿಯುತ್ತಾನೆ. ನಮ್ಮ ಮೂಕಣ್ಣ ಅಸಾಮಾನ್ಯ. ಸದ್ಯಕ್ಕಿಷ್ಟು ಸಾಕು ಅವನ ಬಗ್ಗೆ ಇನ್ನೊಮ್ಮೆ ಮಾತಾಡುತ್ತೇನೆ.

ಫೋಟೋ ಕೃಪೆ : youtube

ಚಿಕ್ಕಪ್ಪ ತೆಲೆಗೆ ಐದು ರೂಪಾಯಿಯಂತೆ ಲೆಕ್ಕಹಾಕಿ ಟಿಕೆಟ್ ತೆಗೆದುಕೊಂಡು ಒಬ್ಬೊಬ್ಬರನ್ನೇ ಗೊದಾಮಿನೊಳಗೆ ಬಿಡುತ್ತಿದ್ದ. ಅಷ್ಟೋತ್ತಿಗೆ ಸಿನಿಮಾ ಪರದೆ ಮೈದುಬಿಕೊಂಡು ಕುಣಿಯಲು ಶುರುವಾಗುತಿತ್ತು. ಕಿವಿಗಡುಚ್ಚಿಕ್ಕುವ ಆ ದ್ವನಿ, ಪರದೆಯ ಮೇಲೆ ಕಟಾಂಜನದ ಸರಳುಗಳಂತೆ ಮೂಡುತ್ತಿದ್ದ ಬಾರುಗಳು, ಮೂಗಿಗಡರುವ ಘಾಟು ವಾಸನೆಯನ್ನು ಸಹಿಸಿಕೊಳ್ಳುತ್ತಾ ಸಿನಿಮಾ ನೋಡುತ್ತಿದ್ದೆವು. ಚಿಕ್ಕಪ್ಪ ನಾಕು ಡಜನ್ ಬಾಳೆಹಣ್ಣು ತಂದಿರುತ್ತಿದ್ದ ಎಲ್ಲರಿಗೂ ಬಾಳೆಹಣ್ಣು ಪಾಲುಮಾಡಿ ತಾನು ಬೀಡಿ ಜಗ್ಗುತ್ತಾ ಸಿನಿಮಾ ಸವಿಯುತ್ತಿದ್ದ. ನಾವಂತೂ ಕಣ್ಣು ಮಿಟೀಕಿಸಿದರೆ ಎಲ್ಲಿ ಕಥೆ ಓಡುತ್ತದೋ ಎಂದು ಎವೆಯಿಕ್ಕದೆ ನೋಡುತ್ತಿದ್ದೆವು. ಹೊರಗಡೆ ಮೂಕಣ್ಣ ಚಳಿಯಲ್ಲಿ ಎತ್ತುಗಳಿಗೆ ಮೇವು ಹಾಕುತ್ತ ತಾನು ಮೇಯುತ್ತ ಸಿನಿಮಾ ಮುಗಿಯುವವರೆಗೂ ಕಾಲಹರಣ ಮಾಡುತ್ತಿದ್ದ. ಪಳಾರದ ರಾಶಿ ಖಾಲಿಯಾಗುತ್ತಿದ್ದಂತೆ ಒಂದು ಚಂಬು ನೀರು ಕುಡಿದು ಹಳ್ಳಿಯಾಗುತ್ತಿದ್ದ. ಸಿನಿಮಾ ಮುಗಿಯೊತ್ತಿಗೆ ಚಳಿ ಹಾಕೆಂದು ತದುಕುತ್ತಿತ್ತು. ನಿದ್ದೇಗಂಣ್ಣಿನಲ್ಲಿಯೇ ನಾವು ಗಾಡಿ ಹತ್ತುತ್ತಿದ್ದೆವು. ಗಾಡಿ ಹತ್ತಿ ಮುದುರಿ ಕುಂತು ಊರು ಸೇರೋತ್ತಿಗೆ ಮೂಡಲು ನಸುಕಾಡುತಿತ್ತು. ಚಿಕ್ಕಪ್ಪ “ನಡ್ರಿ… ನಡ್ರಿ… ಬಿಳಿಜ್ವಾಳ ಸೊಪ್ಪಿ ಬಳಿಯೋಕೆ ಹೋಗೋಣ” ಅಂತಿದ್ದ. ಸಿನಿಮಾ ತೊರಿಸಿದ ಕಿರೆವುಗೆ ಬಿದ್ದ ನಾವು ಒಲ್ಲದ ಮನಸ್ಸಿನಿಂದ ಕುಡ್ಗೋಲಿಗೆ ಕೈ ಹಾಕುತ್ತಿದ್ದೆವು.

*

ಅಪ್ಪ ಊರಿಗೆ ಮೊದಲು ಟಿವಿ ತಂದ ಮೇಲೆ ಜನ ಸಿನಿಮಾ ನೋಡಲು ತುಮ್ಮಿನಕಟ್ಟಿಗೆ ಹೋಗುವುದನ್ನು ನಿಲ್ಲಿಸಿದರು. ಊರಿಗೆ ಟಿವಿ ಬಂದದ್ದೇ ಜಾತ್ರೆಗೆ ಸೇರಿದಂತೆ ಜನ ಅಪ್ಪನ ಅಂಗಡಿಗೆ ಬರತೋಡಗಿದರು. ಜನ ಎಲ್ಲವನ್ನು, ಎಲ್ಲದನ್ನು ಕುತೂಹಲದಿಂದ ನೋಡಹತ್ತಿದ್ದರು. ಮೊದಲೇ ನಮ್ಮ ಮನೆ ಚಿಕ್ಕದು ಅದರಲ್ಲೂ ಅಂಗಡಿ ಬೇರೆ ಯಾವಾಗಲೂ ಕಿಕ್ಕೀರಿದು ತುಂಬಿರುತಿತ್ತು. ನಮ್ಮ ಮನೆಯಲ್ಲಿ ನಾವೇ ಅನಾಥರಂತೆ ಬದುಕಬೇಕ್ಕಿತ್ತು ಅಷ್ಟರಮಟ್ಟಿಗೆ ಹೌಸ್ ಫುಲ್. ಒಬ್ಬರ ತೊಡೆಯ ಮೇಲೆ ಒಬ್ಬರು ಕುಳಿತು ಧಾರಾವಾಹಿ ನೋಡತೊಡಗಿದರು. ಯಾವ ಬೇಧಭಾವವಿರಲಿಲ್ಲ. ಅವನ ಹೆಣ್ತಿ ಪಕ್ಕ ಇವನು, ಇವನ ಹೆಣ್ತಿ ಪಕ್ಕ ಅವನು ಕೂತು ನೋಡುವುದು ಸಾಮಾನ್ಯ. ಅದು ನಮ್ಮೂರಿನವರಿಗೆ ಒಂದು ರೀತಿ ಮಜಾ ಅನ್ನಿಸುತ್ತಿತ್ತು. ಅದರಲ್ಲೂ ಟಿವಿ ಆನ್ ಆದ್ರೆ ಲೈಟ್ ಆಫ್ ಆಗಬೇಕಿತ್ತು. ಅದೊಂದು ಅಲಿಖಿತ ಕಾನೂನು ಹಳ್ಳಿಗಳಲ್ಲಿ ಈಗಲೂ ಜಾರಿಯಲ್ಲಿದೆ. ನಿಮಗೆ ಗೊತ್ತಿರಬೇಕು ಅಂದುಕೊಂಡಿದ್ದೇನೆ. ಲೈಟ್ ಆಫ್ ಆದ್ರೆ ಏನೆಲ್ಲಾ ನೆಡೆಯುತ್ತಿತ್ತು ಅನ್ನುವುದನ್ನು ನಾನಂತೂ ಹೇಳಲಾರೆ ಏಕೆಂದರೆ ನಾನಾಗ ತುಂಬಾ ಚಿಕ್ಕವನು. ಅಂತೂ ಒಂದು ಮಜಾ ತುಂಬಿರುತ್ತಿತ್ತು ಅಂದುಕೊಳ್ಳಿ.

ಫೋಟೋ ಕೃಪೆ : google

ಇಕ್ಕಟ್ಟಿನಿಂದ ಟಿವಿ ನೋಡಲು ವಂಚಿತರಾದವರು ಅಪ್ಪನ ಬಳಿ “ಜಗದಣ್ಣ ಟಿವಿ ನೋಡೋಕೆ ಜಾಗ ಸಾಲೋದಿಲ್ಲ ಸುಮ್ಕೆ ಹೊರಗಿಡು ಅದು ಏನು ಟಿಕೆಟ್ ರೊಕ್ಕಾ ಹೇಳು ನಾವು ಕೊಡ್ತೀವಿ” ಅಂತೇಳಿದಾಗ ಅಪ್ಪ ಟಿವಿಯನ್ನು ಮನೆಯಿಂದ ಹೊರಗಿಟ್ಟ. “ಶುಕ್ರವಾರ ಚಿತ್ರಮಂಜರಿ, ಧಾರಾವಾಹಿ ಫ್ರೀ ಆದ್ರೆ ಆಯ್ತ ವಾರದ ಸಿನಿಮಾಗೆ ಟಿಕೆಟ್ ನೋಡ್ರಪ್ಪಾ” ಅಂದಿದ್ದಕ್ಕೆ ಎಲ್ಲರೂ ಆಗಬೋದು ಅಂತಾ ಒಪ್ಪಿಕೊಂಡಿದ್ರು. ಅಪ್ಪ ಮನೆಯ ಪಕ್ಕದ ಕಣದಲ್ಲಿ ಗೂಟ ನೆಟ್ಟು ತಾಡುಪಲ್ಲು ಕಟ್ಟಿ ಥೇಟರ್ ಸಿದ್ದಮಾಡಿದ. ಆಸನಗಳಿರಲಿಲ್ಲ ಬದಲಾಗಿ ಬಣವೆ ಸಂಧಿ ಮತ್ತು ಬಾದಿಹುಲ್ಲುಗಳೆ ಮೆತ್ತೆನೇಯ ಕುಶನ್ ಚೇರುಗಳಾಗಿದ್ದವು. ಅಮ್ಮ ಬಂಡಿಜಾಡಿನಲ್ಲಿ ಬಗಲಿಗೊಂದು ಬ್ಯಾಗ ಹಾಕಿಕೊಂಡು ಕ್ಯಾಶಿಯರ್ ಆದಳು. ದೊಡ್ಡವರಿಗೆ ಒಂದು ರೂಪಾಯಿ ಸಣ್ಣ ಹುಡುಗುರಿಗೆ ಐವತ್ತು ಪೈಸೆ. All out ಆದಾಗ All in ಆಗೋದು ಕಬ್ಬಡ್ಡಿ ನಿಯಮ ಅಲ್ವಾ….! ಆದರೆ House full ಆದ್ರೆ TV House out ಆಗಬೇಕಾದ ಸಂದರ್ಭ ಬಂತು. ಶುಕ್ರವಾರದ ಚಿತ್ರಮಂಜರಿ ಮತ್ತು ಭಾನುವಾರದ ಸಿನಿಮಾ ಟೈಮಿಗೆ ಅನಿವಾರ್ಯವಾಗಿ ಟಿವಿ ಹೊರಗಡೆ ಇಡಬೇಕಾಯಿತು. ಇದರಿಂದ ಕೆಲವರಿಗೆ ಇಕ್ಕಟ್ಟಿನ ಮಜಾ ತಪ್ಪಿದ್ದಕ್ಕೆ ಬೇಸರವಾದದ್ದಂತು ನಿಜ! ಭಾನುವಾರ ಬಂದರೆ ಎಲ್ಲರಲ್ಲೂ ಸಿನಿಮಾ ನೋಡುವ ಕಾತುರ. ಕೂಲಿ ಹೋಗುವ ಹೆಂಗಸರು ಅಂದು ಮಾಲಕರಿಗೆ ಹೇಳಿಕೊಂಡು ಬೆಳಗಿನ ಕೂಲಿ ಹೋಗುತ್ತಿದ್ದರು; ನಾಲ್ಕು ಗಂಟೆಯ ಸಿನಿಮಾಕ್ಕೆ ಹಾಜರಾಗಲು.



ಟಿವಿಯಿಂದ ಅಪ್ಪನ ಆದಾಯ ಮತ್ತು ವ್ಯಾಪಾರ ಹೆಚ್ಚಾಯಿತು. ಅಂದಿನ ಕಾಲದಲ್ಲಿ ಒಂದು ಶೋಗೆ ಅಪ್ಪ ಎರಡು ನೂರರಿಂದ ಮುನ್ನೂರು ರೂಪಾಯಿಗಳನ್ನು ಗಳಿಸುತ್ತಿದ್ದ( ಅದರಲ್ಲಿ ಕೆಲವು ಉದ್ರಿ ಗಿರಾಕಿಗಳು ಇರುತ್ತಿದ್ದವು) ಜೊತೆಗೆ ಮಂಡಕ್ಕಿ ಮಿರ್ಚಿ ತಿನ್ನುವವರು, ಚಳಿಗೆ ಬೀಡಿ ಸಿಗರೇಟ್ ಸೇದುವವರು, ಎಲೆ ಅಡಿಕೆ ತಂಬಾಕು ನುರಿಸುವವರಿಂದ ಒಳ್ಳೆ ವ್ಯಾಪಾರ ಕುದುರುತ್ತಿತ್ತು. ಅಮ್ಮ ಸಿನಿಮಾ ಶುರುವಾಗುವ ಮುಂಚೇನೆ ಬಿಸಿಬಿಸಿ ಒಗ್ಗರಣೆ ಮಾಡಿರುತ್ತಿದ್ದಳು. ಘಮ ಗುಡುವ ಒಗ್ಗಣ್ಣಿ ವಾಸನೆಗೆ ಮಂಡಕ್ಕಿ ತಿನ್ನದೇ ಇರಲಾಗುತ್ತದೆಯೆ? ಅಂತೂ ಅಮ್ಮ-ಅಪ್ಪನ ಕರಾಮತ್ತಿನಿಂದ ವ್ಯಾಪಾರ ಚಲೋ ಆಗುತ್ತಿತ್ತು. ಇದನ್ನು ಸಹಿಸದ ಕೆಲವರು ಟ್ರಾನ್ಸ್ಫಾರ್ಮರ್ ಗೆ ಕಳ್ಳಿಕಟ್ಟಿಗೆ ಹಾಕಿ ಕರೆಂಟ್ ತೆಗೆಯುತ್ತಿದ್ದರು. “ಅವ್ನ ಕೈಗೆ ಕರೆಂಟ್ ಹೊಡಯಾ… ಅವ್ನ ಮನಿಗೆ ರಣ ಬಡಿಯಾ… ಹಾಳಾಗಿ ಹತ್ತಿ ಬಿತ್ತಾ… ಕಂಡರೋಲಕ್ಕ ಕಣ್ಣಿ ಕಡಿಯಾ… ಪುಸ್ಕ ಪುಸ್ಕ ತೆಗಿತಾನ” ಅಂತಾ ಕರೆಂಟ್ ತೆಗೆದವನಿಗೆ ಬೈಗುಳದಾರತಿ ಎತ್ತುತ್ತಿದ್ದರು. ಅಪ್ಪ ಎಲ್ಲರಿಗೂ “ಈ ವಾರ ಕರೆಂಟ್ ಹೋದ್ರೆ ಏನಾತು ಮುಂದಿನ ಸಲ ಫ್ರೀ ತೋರ್ಸ್ತೀನಿ” ಅಂತೇಳಿ ಸಮಾಧಾನ ಮಾಡಿ ಕಳಿಸುತ್ತಿದ್ದ.

ಇನ್ನು ಕೆಲವರು “ಫ್ರೀಯಾಗಿ ಬರೋ ಗೊಂಬೆಗೆ ಯಾಕೆ ದುಡ್ಡು ವಸೂಲಿ ಮಾಡುತ್ತೀಯಾ” ಅಂತ ಕೇಳುತ್ತಿದ್ದರು. “ಗೊಂಬಿ ಪ್ರಿಯಾಗೆ ಬರುತ್ತೆ ಆದರೆ ಟಿವಿ ರೊಕ್ಕಾ ಕೊಟ್ಟ ತಂದೀನಿ… ಬೇಕಾರೆ ದುಡ್ಡು ಕೊಟ್ಟು ಟಿವಿ ತಗೊಂಡು ಮನೆಯಲ್ಲೇ ಕುಂತು ನೋಡು ಯಾರು ಬೇಡ ಅಂತಾರ” ಎನ್ನುತ್ತಿದ್ದ. ಇಂದು ನಾವು ತಿಂಗಳಿಗೆ ಐದು ನೂರರಿಂದ ಆರು ನೂರು ಕರೆನ್ಸಿ ಹಾಕಿ ನಮಗಿಷ್ಟದ ಚಾನಲ್ ನೋಡುವುದಿಲ್ಲವೇ? ಅಂದು ಅಪ್ಪ ಕೇವಲ ಒಂದು ರುಪಾಯಿಗೆ ಸಿನಿಮಾ ತೋರಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಊರೆಲ್ಲಾ ಒಂದು ಕುಟುಂಬವಾಗಿತ್ತು ನನ್ನೂರ ಜನಗೆಳೆಲ್ಲಾ ಅಣ್ಣ ತಮ್ಮಂದಿರಾಗಿದ್ದರು. ಹಿಂದಿ ಚೆನ್ನಾಗಿ ತಿಳಿದಿದ್ದ ಅಪ್ಪ ಅವರಿಗೆಲ್ಲಾ ವಾರಪೂರ್ತಿ ರಾಮಾಯಣ, ಮಹಾಭಾರತ, ಜೈ ಹನುಮಾನ್, ಅಲೈಫ್ ಲೈಲಾ, ಶಕ್ತಿಮಾನ್, ಚಂದ್ರಕಾಂತ್ ಧಾರಾವಾಹಿಗಳನ್ನು ತೋರಿಸಿ ಅರ್ಥೈಸುತ್ತಿದ್ದ. ನಮ್ಮೂರಿನ ಜನ ಅಪ್ಪನನ್ನು, ಅವನ ಅಂಗಡಿಯನ್ನು, ಒಂದು ರೂಪಾಯಿ ಸಿನಿಮಾವನ್ನು, ಮರೆಯಲು ಸಾಧ್ಯವಿಲ್ಲ. ಆ ಎಲ್ಲ ನೆನಪುಗಳ ಸುರುಳಿಯ ಡಬ್ಬಿ ಹೊತ್ತು ತಂದಿದ್ದೇನೆ. ನಿಮ್ಮ ಮನಸಿನ ಬೆಳ್ಳಿ ಪರದೆಯ ಮೇಲೆ ಸುರಿದಿದ್ದೇನೆ. ನೀವು ಕಣ್ಣು ತುಂಬಿಕೊಂಡಿದ್ದೀರೆಂದು ಭಾವಿಸಿದ್ದೇನೆ.


  • ಮಂಜಯ್ಯ ದೇವರಮನಿ,(ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು) ಸಂಗಾಪುರ. 

2.5 2 votes
Article Rating

Leave a Reply

1 Comment
Inline Feedbacks
View all comments
ಮಂಜುಳಾ ನಾಮದೇವ್

ಅದ್ಬುತ ಅನುಭವ ಚಂದದ ಬರಹ

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW