ಆಯ್ಕೆಗಳ ಸುಳಿಯಲ್ಲಿ ಕಾಡುತ್ತಿರುವ ಒಂಟಿತನ

ಅತಿಯಾದ ಆಯ್ಕೆಗಳು ನಮ್ಮ ಮೆದುಳನ್ನ ದಣಿಸುತ್ತವೆ. ನಮ್ಮಲ್ಲಿ ಕೆಟ್ಟ ಕುತೂಹಲವನ್ನು ಹುಟ್ಟುಹಾಕುತ್ತದೆ. ಇದಕ್ಕಿಂತ ಉತ್ತಮವಾದುದು ಇನ್ನೂ ಯಾವುದಾದರೂ ಇರಬಹುದೇ? ಎಂಬ ಕಾಲ್ಪನಿಕ ಹುಡುಕಾಟವು ನಮ್ಮಲ್ಲಿ ಕೆಟ್ಟ ಕುತೂಹಲವನ್ನು ಹುಟ್ಟುಹಾಕುತ್ತದೆ. ಯುವ ಲೇಖಕಿ ಸಿಂಧು ಸಿ ಬಿ ಅವರ ಈ ಲೇಖನವನ್ನು ಪೂರ್ತಿಯಾಗಿ ಓದಿ…

ಸುಮಾರು ಎರಡು ಮೂರು ದಶಕಗಳ ಹಿಂದಿನ ಕಾಲವನ್ನು ನೆನಪಿಸಿಕೊಂಡರೆ, ಜೀವನದ ಪ್ರತಿ ಹಂತದಲ್ಲೂ ನಮಗೆ ಲಭ್ಯವಿದ್ದ ಆಯ್ಕೆಗಳು ಬಹಳ ಸೀಮಿತವಾಗಿದ್ದವು. ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಬೇಕೆಂದರೆ ಊರಿನಲ್ಲಿದ್ದ ಯಾವುದೋ ಒಂದೇ ಒಂದು ಬಟ್ಟೆ ಅಂಗಡಿಗೆ ಹೋಗುತ್ತಿದ್ದೆವು. ಅಲ್ಲಿ ನಮಗೆ ಇಷ್ಟವಾಗಲಿ ಅಥವಾ ಬಿಡಲಿ, ಲಭ್ಯವಿದ್ದ ನಾಲ್ಕೈದು ಬಣ್ಣಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿತ್ತು. ವಿಶೇಷ ಅಂದರೆ , ಅಂದು ಅಷ್ಟೊಂದು ಸೀಮಿತ ಆಯ್ಕೆಗಳಿದ್ದರೂ ನಾವು ಆರಿಸಿದ ವಸ್ತುವಿನ ಬಗ್ಗೆ ನಮಗೆ ಅತೀವ ತೃಪ್ತಿ ಇರುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಮೆಜಾನ್ ಅಥವಾ ಮಿಂತ್ರಾದಂತಹ ಇ-ಕಾಮರ್ಸ್ ಆಪ್‌ಗಳನ್ನ ತೆರೆದರೆ ಸಾಕು, ಸಾವಿರಾರು ಬ್ರಾಂಡ್‌ಗಳ ಲಕ್ಷಾಂತರ ವಿನ್ಯಾಸಗಳು ನಮ್ಮ ಕಣ್ಣೆದುರು ಪ್ರತ್ಯಕ್ಷವಾಗುತ್ತವೆ. ಆಶ್ಚರ್ಯವೆಂದರೆ, ಇಷ್ಟೊಂದು ಆಯ್ಕೆಗಳಿದ್ದರೂ ಸಹ ಎರಡು ಗಂಟೆಗಳ ಕಾಲ ಫೋನ್ ಸ್ಕ್ರಾಲ್ ಮಾಡಿದ ನಂತರವೂ ಯಾವುದನ್ನೂ ಆರಿಸಲಾಗದೆ ಅಂತಿಮವಾಗಿ ಸೋತು ಫೋನ್ ಪಕ್ಕಕ್ಕಿಟ್ಟು ಸುಮ್ಮನಾಗಿಬಿಡುತ್ತೇವೆ. ಆಧುನಿಕ ಮನೋವಿಜ್ಞಾನವು ಈ ಸ್ಥಿತಿಯನ್ನು ಅನಾಲಿಸಿಸ್ ಪ್ಯಾರಾಲಿಸಿಸ್ ಎಂದು ಕರೆಯುತ್ತದೆ. ಅತಿಯಾದ ವಿಶ್ಲೇಷಣೆಯು ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೇ ಸ್ಥಗಿತಗೊಳಿಸುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಹೆಚ್ಚು ಆಯ್ಕೆಗಳಿದ್ದರೆ ಹೆಚ್ಚು ಸ್ವಾತಂತ್ರ್ಯವಿರುತ್ತದೆ ಮತ್ತು ನಮಗೆ ಬೇಕಾದ ಪರ್ಫೆಕ್ಟ್ ವಸ್ತು ಸಿಗುತ್ತದೆ ಎಂದು ನಾವು ನಂಬುತ್ತೇವೆ. ಆದರೆ ವಾಸ್ತವದಲ್ಲಿ ಅತಿಯಾದ ಆಯ್ಕೆಗಳು ನಮ್ಮ ಮೆದುಳನ್ನ ದಣಿಸುತ್ತವೆ. ಇದು ನನಗಿಷ್ಟವಾಯಿತು, ಆದರೆ ಇದಕ್ಕಿಂತ ಉತ್ತಮವಾದುದು ಇನ್ನೂ ಯಾವುದಾದರೂ ಇರಬಹುದೇ? ಎಂಬ ಕಾಲ್ಪನಿಕ ಹುಡುಕಾಟವು ನಮ್ಮಲ್ಲಿ ಕೆಟ್ಟ ಕುತೂಹಲವನ್ನು ಹುಟ್ಟುಹಾಕುತ್ತದೆ. ಈ ಹಪಹಪಿಯಲ್ಲಿ ನಾವು ನಮ್ಮ ಕೈಗೆ ಸಿಕ್ಕ ಸುಂದರವಾದ ವಸ್ತುವನ್ನೂ ಸಂಭ್ರಮಿಸಲು ಮರೆಯುತ್ತೇವೆ. ಸಾದಾ ಜೀವನದ ಸೌಂದರ್ಯವು ಈ ಸಾವಿರಾರು ಆಯ್ಕೆಗಳ ಗದ್ದಲದಲ್ಲಿ ಕಳೆದುಹೋಗುತ್ತಿದೆ.ಈ ಸಮಸ್ಯೆ ಕೇವಲ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ ಇದು ಇಂದು ನಮ್ಮ ಮಾನವೀಯ ಸಂಬಂಧಗಳ ಮೇಲೂ ಕರಾಳ ಛಾಯೆ ಬೀರಿದೆ. ಹಿಂದೆ ಪಕ್ಕದ ಮನೆಯವರು, ಶಾಲೆಯ ಸಹಪಾಠಿಗಳು ಅಥವಾ ಬೀದಿಯ ಗೆಳೆಯರೇ ನಮ್ಮ ಪ್ರಪಂಚವಾಗಿದ್ದರು. ಅವರಲ್ಲಿ ನೂರಾರು ನ್ಯೂನತೆಗಳಿದ್ದರೂ, ಅವರ ಜೊತೆಗಿನ ಸಂಬಂಧವನ್ನು ಉಳಿಸಿಕೊಳ್ಳುವ ಮತ್ತು ಹೊಂದಿಕೊಂಡು ಹೋಗುವ ಗುಣ ನಮ್ಮಲ್ಲಿತ್ತು.

ಆದರೆ ಇಂದು ಸೋಶಿಯಲ್ ಮೀಡಿಯಾ ಮತ್ತು ಡೇಟಿಂಗ್ ಆಪ್‌ಗಳ ಯುಗದಲ್ಲಿ ನಾವು ಮನುಷ್ಯರನ್ನೂ ಮಾರುಕಟ್ಟೆಯ ಉತ್ಪನ್ನಗಳಂತೆ ಫಿಲ್ಟರ್ ಮಾಡುತ್ತಿದ್ದೇವೆ. ಇಂದಿನ ಪೀಳಿಗೆಯಲ್ಲಿ ಒಬ್ಬ ಸ್ನೇಹಿತ ಅಥವಾ ಸ್ನೇಹಿತೆ ಸಣ್ಣದೊಂದು ಬೇಸರ ತರಿಸಿದರೂ, ಜಗತ್ತಿನಲ್ಲಿ ಎಂಟು ಬಿಲಿಯನ್ ಜನರಿದ್ದಾರೆ, ಈ ವ್ಯಕ್ತಿಯೇ ಏಕೆ ಬೇಕು? ಎಂಬ ಅಹಂಕಾರದ ಆಲೋಚನೆ ಮೂಡುತ್ತದೆ. ಮುಂದಿನ ಆಯ್ಕೆ ಕೇವಲ ಒಂದು ಕ್ಲಿಕ್ ದೂರದಲ್ಲಿದೆ ಎಂಬ ಸುಳ್ಳು ಭರವಸೆಯು ದಶಕಗಳ ಕಾಲದ ಗಾಢವಾದ ಸ್ನೇಹವನ್ನು ಕ್ಷಣಾರ್ಧದಲ್ಲಿ ಕಡಿದುಕೊಳ್ಳುವಂತೆ ಮಾಡುತ್ತಿದೆ. ಸಾವಿರಾರು ಫಾಲೋವರ್ಸ್‌ಗಳ ನಡುವೆ ಒಬ್ಬ ನೈಜ ಆಪ್ತ ಗೆಳೆಯನಿಗಾಗಿ ಹಪಹಪಿಸುವ ಈ ಸ್ಥಿತಿಯೇ ಕನೆಕ್ಟೆಡ್ ಲೋನ್ಲಿನೆಸ್ ಎಲ್ಲವೂ ಡಿಜಿಟಲ್ ಆಗಿ ಸಂಪರ್ಕದಲ್ಲಿದ್ದರೂ, ಭಾವನಾತ್ಮಕವಾಗಿ ನಾವೆಲ್ಲರೂ ಒಂಟಿಯಾಗುತ್ತಿದ್ದೇವೆ. ನಮ್ಮ ಎಲ್ಲಾ ಅತಿರೇಕದ ನಿರೀಕ್ಷೆಗಳನ್ನು ಪೂರೈಸುವ ಒಬ್ಬ ಕಾಲ್ಪನಿಕ ಪರ್ಫೆಕ್ಟ್ ವ್ಯಕ್ತಿಗಾಗಿ ನಾವು ಆಕಾಶ ನೋಡುತ್ತಾ ಕುಳಿತುಕೊಳ್ಳುತ್ತೇವೆ. ಈ ಭರದಲ್ಲಿ ನಮ್ಮ ಕಷ್ಟ ಸುಖಗಳಲ್ಲಿ ಸದಾ ಜೊತೆಯಾಗಿ ನಿಲ್ಲುವ, ನಮ್ಮ ಪಕ್ಕದಲ್ಲೇ ಇರುವ ಸಾಮಾನ್ಯ ಆದರೆ ಅದ್ಭುತ ವ್ಯಕ್ತಿಗಳನ್ನು ನಾವು ಕಡೆಗಣಿಸುತ್ತಿದ್ದೇವೆ.

ಈ ವಿಷವರ್ತುಲದಿಂದ ಹೊರಬರುವುದು ಹೇಗೆ? ಇಲ್ಲಿ ನಮಗೆ ಬೇಕಿರುವುದು ಸ್ಯಾಟಿಸ್‌ಫೈಸರ್ ಆಗುವ ವಿವೇಕ. ಅಂದರೆ, ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಮಗೆ ಮಾನಸಿಕ ನೆಮ್ಮದಿ ನೀಡುವ ಒಂದು ಆಯ್ಕೆ ಸಿಕ್ಕಿದಾಗ ಅದರಲ್ಲೇ ಸಂಪೂರ್ಣವಾಗಿ ತೃಪ್ತಿ ಪಡುವುದು. ಪ್ರತಿ ಬಾರಿಯೂ ಅತ್ಯುತ್ತಮವಾದುದೇ ಬೇಕು ಎಂಬ ಹಠ ಹಿಡಿದರೆ ತೃಪ್ತಿ ಎಂಬುದು ಎಂದಿಗೂ ಸಿಗದೆ ಮರೀಚಿಕೆಯಾಗುತ್ತದೆ. ಸ್ನೇಹದ ವಿಷಯದಲ್ಲೂ ಅಷ್ಟೇ, ಮನುಷ್ಯರು ಯಾರೂ ಪರಿಪೂರ್ಣರಲ್ಲ. ಆಯ್ಕೆಗಳನ್ನು ಬದಲಾಯಿಸುವುದಕ್ಕಿಂತ ಹೆಚ್ಚಾಗಿ, ಇರುವ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಮೇಲೆ ನಾವು ಗಮನ ಹರಿಸಬೇಕು.ಡಿಜಿಟಲ್ ಪ್ರಪಂಚದ ಸಾವಿರಾರು ಆಕರ್ಷಕ ಪ್ರೊಫೈಲ್ ಗಳಿಗಿಂತ, ಕಷ್ಟ ಕಾಲದಲ್ಲಿ ಬೆನ್ನಿಗೆ ನಿಲ್ಲುವ ಒಬ್ಬ ಸಾಮಾನ್ಯ ಗೆಳೆಯನೇ ಕೋಟಿ ಪಟ್ಟು ಮೇಲು. ಜೀವನವು ಸರಳವಾಗಿದ್ದಾಗ ಹೆಚ್ಚು ಸುಂದರವಾಗಿತ್ತು ಏಕೆಂದರೆ ಅಂದು ಆಯ್ಕೆಗಳು ಕಡಿಮೆ ಇದ್ದವು ಮತ್ತು ತೃಪ್ತಿ ಹೆಚ್ಚಿತ್ತು. ಇಂದು ನಮಗೆ ಬೇಕಿರುವುದು ಅತಿ ವೇಗದ ಇಂಟರ್ನೆಟ್ ಅಥವಾ ಸಾವಿರಾರು ಆಪ್ಷನ್ಸ್‌ಗಳಲ್ಲ, ಬದಲಾಗಿ ಇರುವ ಆಯ್ಕೆಗಳಲ್ಲಿ ಸಮಾಧಾನ ಕಂಡುಕೊಳ್ಳುವ ಮತ್ತು ಸಿಕ್ಕ ಸಂಬಂಧಗಳನ್ನು ಪ್ರೀತಿಯಿಂದ ಉಳಿಸಿಕೊಳ್ಳುವ ಪ್ರಬುದ್ಧತೆ. ನೆನಪಿರಲಿ, ಅತಿಯಾದ ಆಯ್ಕೆಗಳು ನಮಗೆ ಕೇವಲ ಗೊಂದಲ ನೀಡಬಹುದು, ಆದರೆ ಅಲ್ಪ ತೃಪ್ತಿಯು ನಮಗೆ ಶಾಶ್ವತ ಶಾಂತಿ ನೀಡುತ್ತದೆ.


  • ಸಿಂಧು ಸಿ ಬಿ – ಉಜಿರೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading