ದಾರ್ಶನಿಕ ‘ಓಶೋ’ – ಡಾ.ಗುರುಪ್ರಸಾದ ರಾವ್ ಹವಲ್ದಾರ್

30 ವರ್ಷಗಳಷ್ಟು ಕಾಲ ಜಗತ್ತಿನಾದ್ಯಂತ ಭಾರತೀಯ ಅಧ್ಯಾತ್ಮಿಕಯ ಬಗ್ಗೆ ತನ್ನದೇ ಶೈಲಿಯಲ್ಲಿ ಪ್ರವಚನ ನೀಡುತ್ತಾ, 1970ರ ದಶಕ ಹಾಗೂ 1980ರ ದಶಕಗಳಲ್ಲಿ ಭಗವಾನ್ ರಜನೀಶ್ ಎಂದು, ಮತ್ತು ಓಶೊ ಎಂದೂ ಪರಿಚಿತವಾಗಿದ್ದ ಆಚಾರ್ಯ ರಜನೀಶ (ಚಂದ್ರ ಮೋಹನ್ ಜೈನ್- 1931–1990) ರ ಜನ್ಮದಿನ ಇಂದು. – ಡಾ.ಗುರುಪ್ರಸಾದ ರಾವ್ ಹವಲ್ದಾರ್, ತಪ್ಪದೆ ಮುಂದೆ ಓದಿ…

ತೀಕ್ಷ್ಣ ನೋಟದಲ್ಲಿ ಇರುವ ಚುಂಬಕ ಶಕ್ತಿ, ತುಟಿ ಮುಚ್ಚಿಕೊಂಡ ಮೀಸೆ, ನೀಳವಾದ ಬಿಳಿಯ ಗಡ್ಡ, ತಲೆಗೆ ಉಲನ್ ಟೋಪಿ, ಕೊರಳಿಗೆ ಮಫ್ಲರ್, ಉದ್ದನೆಯ ನಿಲುವಂಗಿ…
ಉದ್ವೇಗ ರಹಿತ ತಣ್ಣನೆಯ ಮಾತುಗಳು, ಕವಿತೆಯ ಲಾಲಿತ್ಯದಂಥ ಉಪನ್ಯಾಸಗಳು, ಕಥೆಗೊಂದು ಉಪಕಥೆ, ತಿಳಿ ಹಾಸ್ಯ, ಸಮ್ಮೋಹನಗೊಳಿಸುವ ವಾಕ್ಪಟುತ್ವ, ಸ್ಫುರದ್ರೂಪಿ, ದಾರ್ಶನಿಕ ವ್ಯಕ್ತಿತ್ವ ಹೊಂದಿದ ವ್ಯಕ್ತಿತ್ವವು ಸುಮಾರು 60 ರ ದಶಕದಿಂದ 30 ವರ್ಷಗಳಷ್ಟು ಕಾಲ ಜಗತ್ತಿನಾದ್ಯಂತ ಭಾರತೀಯ ಅಧ್ಯಾತ್ಮಿಕಯ ಬಗ್ಗೆ ತನ್ನದೇ ಶೈಲಿಯಲ್ಲಿ ಪ್ರವಚನ ನೀಡುತ್ತಾ, 1960ರ ದಶಕದಲ್ಲಿ ಆಚಾರ್ಯ ರಜನೀಶ ಎಂದು, 1970ರ ದಶಕ ಹಾಗೂ 1980ರ ದಶಕಗಳಲ್ಲಿ ಭಗವಾನ್ ರಜನೀಶ್ ಎಂದು, ಮತ್ತು ಓಶೊ ಎಂದೂ ಪರಿಚಿತವಾಗಿದ್ದ ಆಚಾರ್ಯ ರಜನೀಶ (ಚಂದ್ರ ಮೋಹನ್ ಜೈನ್- 1931–1990) ರ ಜನ್ಮದಿನ ಇಂದು.

ತನ್ನ ಜೀವಿತಾವಧಿಯಲ್ಲಿ ಸಾವಿರಾರು ತಾಸು ಮಾತನಾಡಿ, ಜೊತೆಗೆ ಐದು ಸಾವಿರ ತಾಸು ಮಾತುಗಳ ದಾಖಲೆ ಬಿಟ್ಟು ಜೊತೆಗೆ ಇವರ ಪ್ರವಚನಗಳನ್ನು ಆಧರಿಸಿ ಆರು ನೂರಾ ಐವತ್ತು ಪುಸ್ತಕಗಳು ಹಿಂದಿ, ಇಂಗ್ಲಿಷ್ ಹಾಗೂ ಭಾರತೀಯ ಎಲ್ಲಾ ಭಾಷೆಗಳಲ್ಲಿ ಇವರ ಕೃತಿಗಳು ಇಂದಿಗೂ ಮರು ಮುದ್ರಣಗೊಳ್ಳುತ್ತಲೇ ಇವೆ,ಅಂತಹ ಸಂತ ಆಚಾರ್ಯ ಓಶೋ ರಜನೀಶ್.

ಓಶೋ ಬದುಕಿದ್ದರೆ 2023 ರ ಡಿಸೆಂಬರ್ 11ಕ್ಕೆ 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ ಓಶೋ ಹೆಚ್ಚು ಕಾಲ ಬದುಕಲೇ ಇಲ್ಲ. ಓಶೋ ಇಲ್ಲವಾಗಿದ್ದರೂ, ಅವನ ವಿಚಾರಗಳು ಉಳಿದಿವೆ. ಓಶೋ ಕೇಂದ್ರಗಳು ಬೆಳೆಯುತ್ತಲೇ ಇವೆ.ಬದುಕಿನ ಅರ್ಥವನ್ನು ಹುಡುಕುವವರಂತೂ ಓಶೋ ಕೇಂದ್ರಗಳಿಗೆ ಎಡತಾಕುತ್ತಲೇ ಇದ್ದಾರೆ. ಇಂಥವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಫೋಟೋ ಕೃಪೆ : google

ತಾವು ಕಂಡುಕೊಂಡ ಬದುಕಿನ ಸತ್ಯವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತ ಹೋದರು. ಓಶೋ ಮಾತನಾಡುವುದೇ ಕಥೆಯ ಮೂಲಕ. ಕಥೆಯಿಂದಲೇ ಮಾತು ಆರಂಭ. ಕಥೆಗೊಂದು ಕಥೆ, ಅದಕ್ಕೆ ಉಪ ಕಥೆ, ಕಥೆಯಲ್ಲಿಯೇ ಬದುಕಿನ ದರ್ಶನ. ಅಧ್ಯಾತ್ಮ, ಝೆನ್, ಬೌದ್ಧ, ಸೂಫೀ, ಪ್ರೇಮ, ಕಾಮ, ಮದುವೆ, ಬದುಕು, ವಿಡಂಬನೆ, ಸಾಮಾಜಿಕ, ರಾಜಕೀಯ
ಉಪನಿಷತ್, ಬೌದ್ಧ ಧರ್ಮ, ಯೋಗ, ಧ್ಯಾನ, ಝೆನ್, ಸೂಫಿ, ತಾವೋ, ಭಗವದ್ಗೀತೆ, ಭಾರತ, ಭಾರತೀಯ ಸಂತರು, ಪತಂಜಲಿ, ಶಿವಸೂತ್ರ, ಗಾಂಧಿ, ಆಧ್ಯಾತ್ಮ …ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಹೇಳುತ್ತ ಸಭಿಕರನ್ನು ಮೋಡಿ ಮಾಡುತ್ತ ಸಾಗಿದರು.ದೇಶವಿದೇಶಗಳಲ್ಲಿ ಅವರು ನೀಡಿದ ಉಪನ್ಯಾಸಗಳಿಗೆ ಜನರು ಮುಗಿಬಿದ್ದು ಬಂದರು. ವಿಶ್ವವಿಖ್ಯಾತರಾದರು. ಅಷ್ಟೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡರು.

ಓಶೋ ಎಂಬ ಹೆಸರು ಓಶಾನಿಕ್ ಎಂಬ ಪದದಿಂದ ಬಂದಿದ್ದು ಸಾಗರದಲ್ಲಿ ವಿಲೀನವಾಗುವುದು ಎಂಬರ್ಥವನ್ನು ವಿಲಿಯಂ ಜೇಮ್ಸ್ ಹೇಳಿದ್ದಾರೆ. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ರಜನೀಶ್ ಕೆಲಕಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ನಂತರ ಬಯಲ ಬೋಧಕನಾದ. ಜಗತ್ತಿನ ಎಲ್ಲ ಧಾರ್ಮಿಕ ಗ್ರಂಥಗಳನ್ನು ಆಳವಾಗಿ ಗ್ರಹಿಸಿ,ಸಾರ್ವಜನಿಕ ಪ್ರವಚನಗಳ ಮೂಲಕ ಹೊಸ ಧಾರ್ಮಿಕ ಮನ್ವಂತರ ಆರಂಭಿಸಿದ. ಆಳವಾಗಿ ವಿವರಿಸಿ ಲಕ್ಷಾಂತರ ಜನರ ಗಮನ ಸೆಳೆದು ಅಂತರಾಷ್ಟ್ರೀಯ ಮಾನ್ಯತೆ ಪಡೆದುಕೊಂಡ. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ಮತ್ತು ಭಯದ ಮೂಲವನ್ನು ಬಯಲಿಗೆಳೆದ. ಮೂಲಭೂತವಾದದ ಬೇರುಗಳನ್ನು ಅಲುಗಾಡಿಸಿ ಅರಿವು ಮೂಡಿಸಿದ, ಕಾಮದ ಕುರಿತು ಧಾರ್ಮಿಕ ಗುರುಗಳು ಬಾಯಿ ಬಿಡಲಾಗದು ಎನ್ನುವ ಸಂದರ್ಭದಲ್ಲಿ ‘ಸಂಭೋಗದಿಂದ ಸಮಾಧಿಯಡೆಗೆ’ ಸಾಗುವ ಮಾರ್ಗ ತೋರಿಸಿ, ಮಡಿವಂತ ಮನಸುಗಳಿಗೆ ಮುಜುಗರ ಉಂಟು ಮಾಡಿದ. ಸಹಜವಾದ ಕಾಮ ನಿಗ್ರಹ ಅಸಾಧ್ಯ ಆದರೆ ಧ್ಯಾನದ ಮೂಲಕ ಕುಂಡಲಿನಿ ಜಾಗ್ರತಗೊಂಡರೆ ಅದು ಸಾಧ್ಯ ಎಂಬ ಮಾತುಗಳ ಮೂಲಕ ಮಡಿವಂತಿಕೆಯನು ತೊಡಿದು ಹಾಕುವ ಪ್ರಯತ್ನಕ್ಕೆ ಕೈಹಾಕಿದ.

ಓಶೋ ಯಾವುದರ ಬಗ್ಗೆ ಮಾತನಾಡಿದರೂ, ಅದರ ಆಳಕ್ಕಿಳಿದು ಮಾತನಾಡುತ್ತಿದ್ದರು. ಅವನ ಹೃದಯಕ್ಕೆ ಹತ್ತಿರವಾಗಿದ್ದ ಸಂಗತಿ ಎಂದರೆ ಧ್ಯಾನ. ‘ಧ್ಯಾನ ಏಕಾಗ್ರತೆಯಲ್ಲ, ಅದೊಂದು ವಿಶ್ರಾಂತಿ.. .. ನೀನು ಹೆಚ್ಚು ಹೆಚ್ಚು ಆರಾಮಾಗಿದ್ದಂತೆ ನೀನು ಹೆಚ್ಚೆಚ್ಚು ತೆರೆದುಕೊಳ್ಳಬಯಸುವೆ, ಮೆತುವಾಗುವೆ.. .. ವಿಶ್ರಾಂತಿ ಎಂದರೆ ಏನೂ ಮಾಡುವುದಕ್ಕೆ ಇರದ ಒಂದು ಸ್ಥಿತಿಗೆ ನಿನ್ನನ್ನು ನೀನೇ ಒಳಪಡಿಸುವುದು.. .. ಸುಮ್ಮನೆ ಕಣ್ಣು ಮುಚ್ಚಿ ಸುತ್ತೆಲ್ಲ ನಡೆಯುವುದನ್ನು ಕೇಳಿಸಿಕೊ. ಯಾವುದನ್ನೂ ಗಮನಭಂಗವೆಂದು ಭಾವಿಸುವುದು ಬೇಡ. ಅದನ್ನು ಗಮನಭಂಗವೆಂದು ಪರಿಗಣಿಸಿದ ಕ್ಷಣವೇ ನೀನು ದೇವರನ್ನು ತಿರಸ್ಕರಿಸುವೆ. ಈ ಕ್ಷಣದಲ್ಲಿ ದೇವರು ಒಂದು ಹಕ್ಕಿಯಾಗಿ ನಿನ್ನಲ್ಲಿಗೆ ಬಂದಿದ್ದಾನೆ. ನಿರಾಕರಿಸಬೇಡ. ನಿನ್ನ ಬಾಗಿಲು ಬಡಿದಿದ್ದಾನೆ ಒಂದು ಹಕ್ಕಿಯಾಗಿ. ಮರುಕ್ಷಣದಲ್ಲಿ ಅವನು ಬಂದಿದ್ದಾನೆ ಒಂದು ನಾಯಿಯಾಗಿ-ಬೊಗಳುತ್ತಿದ್ದಾನೆ ಅಥವಾ ಒಂದು ಮಗುವಾಗಿ ಚೀರಾಡುತ್ತ, ಅಳುತ್ತ ಅಥವಾ ಒಬ್ಬ ಹುಚ್ಚನಾಗಿ ನಗುತ್ತಾ’…

ಫೋಟೋ ಕೃಪೆ : google

ಓಶೋ ಎಂದು ಕರೆಯುವ ಭಗವಾನ್ ರಜನೀಶ್ ಚಿಂತನೆಯಲ್ಲಿ ಬಹಳ ಮುಖ್ಯವಾದದ್ದು, ಜೀವ ಜಗತ್ತಿನ ನಡುವೆ, ಪರಿಸರದ ಜೊತೆ ಒಂದು ಸಂಬಂಧವನ್ನು ಹೆಣೆಯುವುದು. ಇದು ಕಣ್ಣಿಗೆ ಕಾಣಿಸದೇ ಹೋಗಬಹುದು; ಆದರೆ ಸಂಬಂಧವನ್ನಂತೂ ಬೆಸೆದಿದೆ. ಅದೊಂದು ಜೈವಿಕ ಸಂಬಂಧ. ಈ ಹಕ್ಕಿ, ಈ ಮರ, ಈ ಆಕಾಶ, ಈ ಸೂರ್ಯ, ಈ ಭೂಮಿ, ಈ ನೀನು ಮತ್ತು ಈ ನಾನು-ಎಲ್ಲ ಸಂಬಂಧವುಳ್ಳವರಾಗಿದ್ದೇವೆ. ಅದೊಂದು ಜೈವಿಕ ಕೂಟ; ಜೈವಿಕ ಬಂಧ. ನೀನು, ನಾನು ಇರಬೇಕೆಂದರೆ ಈ ಸಂಬಂಧದ ಕೊಂಡಿಯಲ್ಲಿರುವ ಎಲ್ಲದೂ ಉಳಿಯಬೇಕು. ಆದ್ದರಿಂದ ಯಾವುದನ್ನೂ ನಿರಾಕರಿಸಬೇಡ ಎಂದು ಹೇಳುತ್ತಾನೆ ರಜನೀಶ್.

ಮನುಷ್ಯ ಎಷ್ಟೇ ದುಷ್ಟನಂತೆ ಕಂಡರೂ, ಹಲವು ಗೋಜಲುಗಳಲ್ಲಿ ಮುಳುಗಿದಂತೆ ಕಂಡರೂ, ಅರಿವಿನ ಆಳಕ್ಕಿಳಿದು ಮಾತನಾಡುವ, ಸಕಲ ಜೀವಕೋಟಿಯ ಬಗ್ಗೆ ಪ್ರೀತಿ ಮತ್ತು ಕರುಣೆಯನ್ನು ತೋರುವ ಮನುಷ್ಯ, ಜೀವ ಸಂಕುಲಕ್ಕೆ ಹತ್ತಿರದ ಮನುಷ್ಯನಾಗಿ ಭಾಸವಾಗುತ್ತಾನೆ. ಈ ಕಾರಣಕ್ಕೇ ಇರಬೇಕು, ಓಶೋ ಕೇಂದ್ರಗಳು ಮತ್ತು ಓಶೋ ಚಿಂತನಧಾರೆ ಹರಿಗಡಿಯದೆ ಉಳಿದುಕೊಂಡಿರುವುದು ಓಶೋ ನೀಡಿರುವ ಪ್ರವಚನಗಳಲ್ಲಿ ವೇದಾಂತವಿದೆ, ಬದುಕಿನ ಸಾರವಿದೆ, ದಾರಿತಪ್ಪಿದವರಿಗೆ ಮಾರ್ಗದರ್ಶನವಿದೆ, ಜೀವನದರ್ಶನವೂ ಇದೆ. ಓಶೋಗೆ ಓಶೋನೇ ಸಾಟಿ ಓಶೋ ಒಬ್ಬ ವಿಸ್ಮಯ ವ್ಯಕ್ತಿ. ಅವರ ಚಿಂತನೆಗಳೂ ಕೂಡ ವಿಸ್ಮಯಕರವೇ. ಏಕೆಂದರೆ ಅವು ಕೊಡುವ ಒಳನೋಟಗಳು ನಮ್ಮನ್ನು ಬೆರಗುಗೊಳಿಸಬಲ್ಲವು, ಚಿಂತನೆಗೆ ಹಚ್ಚಬಲ್ಲವು. ಮನುಷ್ಯನ ಆತ್ಮ ಸಂತೋಷವೇ, ಧ್ಯಾನಸ್ಥ ಸ್ಥಿತಿಯನ್ನು ಮುಟ್ಟುವುದೇ ಅವರ ಪ್ರವಚನಗಳ ಗುರಿ. ದಾರಿದೀಪವಾಗಬಲ್ಲ ಅವರ ವಿಚಾರಗಳು ನಮ್ಮ ಜೀವನದಲ್ಲಿ ಸರಿದಾರಿಯನ್ನು ತೋರಬಲ್ಲುದು.

ಫೋಟೋ ಕೃಪೆ : google

ಓಶೋನ ಆಲೋಚನಾ ಕ್ರಮ, ಧರ್ಮ ಮತ್ತು ಆಧ್ಯಾತ್ಮಕ್ಕೆ ಇರುವ ವ್ಯತ್ಯಾಸವನ್ನು ಪ್ರತಿಪಾದಿಸಿದ ರೀತಿ ಮಾತ್ರ ಅದ್ಭುತ. ವ್ಯಕ್ತಿ ಸ್ವಾತಂತ್ರ್ಯ, ಗುಣಮಟ್ಟದ ಶಿಕ್ಷಣ, ಸ್ತ್ರೀ ಸ್ವಾತಂತ್ರ್ಯ, ಕಾಮದ ಅನನ್ಯತೆಯನ್ನು ಸ್ಪಷ್ಟವಾಗಿ, ದಿಟ್ಟತನದಿಂದ ವಿವರಿಸಿ ಬದುಕಿನ ನಿಜಾರ್ಥವನ್ನು ತಿಳಿಸುತ್ತಾ. ಆಂತರಿಕ ಒಳನೋಟ, ಗಾಢವಾದ ವಿವರಣೆ,ಅಪರೂಪದ ಧ್ಯಾನ ತಂತ್ರಗಳಾಗಿವೆ.

ಪುಣೆಯಲ್ಲಿ ಸುಮಾರು 10 ಎಕರೆಯಲ್ಲಿ ಓಶೋ ಇಂಟರ್ನ್ಯಾಷನಲ್ ಮೆಡಿಟೇಶನ್ ರೆಸಾರ್ಟ್ (OSHO International Meditation Resort) ಕಟ್ಟಿದರು. ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿ ಎನ್ನಲಾಗುತ್ತಿದೆ. ಓಶೋ ಕಮ್ಯೂನ್ ಇಂಟರ್ ನ್ಯಾಷನಲ್ –ಕೇಂದ್ರದಲ್ಲಿ ಧ್ಯಾನ ಮಾಡಲು ಓಶೋ ಅನುಯಾಯಿಗಳು ವಿಶ್ವದೆಲ್ಲೆಡೆಗಳಿಂದ ಪ್ರತಿವರ್ಷ ಇಲ್ಲಿಗೆ ಬರುತ್ತಾರೆ. ಓಶೋ ಅಭಿಮಾನಿಗಳ ನೆನಪಿನಲ್ಲಿ,ಅವರ ಪ್ರವಚನಗಳಲ್ಲಿ ಈಗಲೂ ಬದುಕಿದ್ದಾರೆ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW