“ಪದ್ದಣ ಮನೋರಮೆ” ಕೃತಿ ಪರಿಚಯ

ಪ್ರತಿಯೊಂದು ಸನ್ನಿವೇಶವು ನಮ್ಮ ಮನೆಯದ್ದೇ ನಮ್ಮ ಜೀವನದ್ದೇ ಎನ್ನುವಷ್ಟರ ಮಟ್ಟಿಗೆ ಹಾಸ್ಯ ಬಳಸಿ ಬರೆದ ಪರಿ ಶ್ರೀಮತಿ ಹೂಲಿ ಶಾಲಿನಿ ಪ್ರದೀಪರವರು ತಮ್ಮ ಮೊದಲ ಕೃತಿಯಲ್ಲೆ ಸಿಕ್ಸರ್ ಭಾರಿಸಿ ಜನಮನಸೂರೆಗೊಳಿಸಿದ್ದಾರೆ. ಈ ಕೃತಿಯ ಕುರಿತು ಛಂದೋಬದ್ಧ ಬರಹಗಾರರಾದ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ : 2025
ಪುಟಗಳು : 88
ಬೆಲೆ : 150
ಖರೀದಿಗಾಗಿ : 9880424461

ಹಾಸ್ಯವಿಲ್ಲದ ಬದುಕು, ರುಚಿಯಿಲ್ಲದ ಊಟಕ್ಕೆ ಸಮ. ಭಾವ ಬರಹವಾಗಬೇಕು, ಅದರಲ್ಲಿ ತಿಳಿಹಾಸ್ಯವಿರಬೇಕು. ಬರಹ ಯಾರು ಬೇಕಾದ್ರು ಗೀಚಬಹುದು ಆದರೆ ಓದಿದ ತಕ್ಷಣ ಮನಸ್ಸು ತುಂಬಿ ಬರುವಂತೆ, ಮನದೊಳಗೆ ನೋವು ಮಾಯವಾಗುವಂತೆ ಹಾಸ್ಯ ಬೆರೆಸಿ ಬರೆಯುವುದು ಕಷ್ಟ. ಬರಹ ಎಲ್ಲರಿಗೂ ಒಲಿಯಬಹುದು ಆದರೆ ಹಾಸ್ಯ ಬರಹ ಕೆಲವರಿಗೆ ಮಾತ್ರ ಒಲಿದಿರುತ್ತದೆ. ಬರೆಯುತ್ತಾ ಬರೆಯುತ್ತಾ ಒಲಿಯಬಹುದು ಆದರೆ ಬರಹದ ಹಾದಿಯಲ್ಲೆ ಹಾಸ್ಯ ಬರಹವನ್ನೇ ಮೈಗೂಡಿಸಿಕೊಂಡು ಅದರಲ್ಲೂ ತಮ್ಮ ಜೀವನದಲ್ಲಿಯೇ ಬರುವ ಸನ್ನಿವೇಷಗಳಿಗೆ ಹಾಸ್ಯದ ಲೇಪನ ಕೊಟ್ಟು ಓದುಗರೆದೆ ತಟ್ಟುವುದು ಸಾಮಾನ್ಯ ಸಂಗತಿಯಲ್ಲ.

ಇದು ಯಾರ ಬಗ್ಗೆ ಇಷ್ಟೆಲ್ಲ ಪೀಠಿಕೆ ಅಂತಿರಾ?

ಹೋ ಹೌದಲ್ವಾ ಹೇಳಲೇ ಇಲ್ಲವಲ್ಲ….

ಯಾರ ಬಗ್ಗೆ ಯಾವ ಕೃತಿ ಬಗ್ಗೆ ಹೇಳ್ತಿದ್ದೀನಿ ಅನ್ಕೊಂಡ್ರಾ?

ಅದು ಇನ್ನಾರು ಅಲ್ಲ ಆಕೃತಿ ಚಾನಲ್ ಹಾಗೂ ಬ್ಲಾಗ್ ನ ಸಂಸ್ಥಾಪಕಿ ಹೂಲಿ ಶೇಕರ್ ರವರ ಮಗಳು ಶ್ರೀಮತಿ ಹೂಲಿ ಶಾಲಿನಿ ಪ್ರದೀಪ್ ರವರ ಬಗ್ಗೆಯೇ ಹೇಳುತ್ತಿರುವುದು. ಈ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲವಲ್ಲ ಎಂದು ಮನದಲ್ಲಿ ಬೇಸರವಿತ್ತು ಆದರೆ ಕೃತಿ ಕೈ ಸೇರಿ ನನ್ನ ಮನದೊಳಗೆ ಅಚ್ಚಾದಾಗ ಆ ದುಃಖ ಇನ್ನೂ ಹೆಚ್ಚಾಯಿತು. ಏಕೆ ಅನ್ಕೊಂಡ್ರಾ? ಅಷ್ಟು ಹಾಸ್ಯ ಭರಿತವಾಗಿದೆ ಕಣ್ರಿ ಈ ಕೃತಿ.

ಬರಹಗಾರರಿಗೆ ದಿವ್ಯ ವೇದಿಕೆ ಸೃಷ್ಟಿಸಿ, ಸಾಮಾನ್ಯ ಬರಹಗಾರರ ಬರಹಗಳನ್ನು ಬ್ಲಾಗ್ ನಲ್ಲಿ ಪ್ರಕಟಿಸಿ, ಬರಹಗಾರರಿಗೆ ಪ್ರೋತ್ಸಾಹಿಸಿ ಖುಷಿ ಕಾಣುವ ಪ್ರೋತ್ಸಾಹಕಿಯೇ ನುರಿತ ಬರಹಗಾರ್ತಿಯಾಗಿ ಕಥಾ ಸಂಕಲನ ಹೊರ ತಂದಾಗ ಹೇಗಿರಬೇಡ? ಬನ್ನಿ ಹಾಗಿದ್ರೆ ಕಥೆಗಳ ಮೇಲ್ಮೈಯನ್ನು ಹಾಗೇ ನೋಡಿಕೊಂಡು ಬರೋಣ.

ಈ ಕೃತಿಯ ಹೆಸರೆ ಪದ್ದಣ ಮನೋರಮೆ, ಮುದ್ದಣ ಮನೋರಮೆಯಲ್ಲ. ಇಡಿ ಕಥೆಯಲ್ಲಿ ಪದ್ದಣ್ಣ ಹಾಗೂ ಪದ್ದಣ್ಣನ ಮಡದಿಯ ತಿಳಿ ಹಾಸ್ಯ ಭರಿತ ಸನ್ನಿವೇಶಗಳು ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ.‌

ಪದ್ದಣ ಹೆಂಡತಿಗೆ ಮೊಬೈಲ್ ಕೊಡಿಸಿ ಅದರ ಹಾವಳಿಗೆ ಎಲ್ಲಿ ಬಲಿಯಾಗುತ್ತಾಳೋ ಎನ್ನುವ ಕಳವಳ. ತಾನೂ ಗೊತ್ತಿದ್ದು ಮೊಬೈಲ್ ಗೀಳು ಹತ್ತಿಸಿಕೊಂಡು ಮೊಬೈಲ್ ರೋಮಿಯೋಗಳ ಕಾಟಕ್ಕೆ ಬೇಸತ್ತ ಮನೋರಮೆಯ ಪರಿಪಾಡುಗಳು ಓದುತ್ತಲೇ ನಮ್ಮನ್ನು ನಮ್ಮ ನಮ್ಮ ಜೀವನಕ್ಕೆ ಎಳೆದೊಯ್ಯುತ್ತವೆ.

ವಾಸ್ತವಿಕ ಜೀವನದಲ್ಲಿ ನಡೆವ ದಿನನಿತ್ಯದ ಸನ್ನಿವೇಶಗಳನ್ನು ಬರಹಗಳಲ್ಲಿ ಬಳಸಿಕೊಳ್ಳುವುದು ಒಂದು ಕಲೆ ಇದಕ್ಕೆ ಕನ್ನಡಿಯೆಂಬಂತೆ ಇತ್ತೀಚೆಗೆ ಹೆಚ್ಚುತ್ತಿರುವ ಹೃದಯ ಸ್ಥಂಭನ ನಿಮಗೂ ಗೊತ್ತಲ್ವಾ?

ಇತ್ತೇಚೆಗೆ ಹಾಸನ ಹಾಗೂ ಇತರೆಡೆ ಹೃದಯಾಘಾತವಾಗಿ ಅಲ್ಲಿ ಅಷ್ಟು ಜನ ಸತ್ರೂ ಇಲ್ಲಿ ಇಷ್ಟು ಜನ ಸತ್ರೂ ಒಂದ್ದಿಬ್ಬರು ಸ್ನೇಹ ಬಳಗದಲ್ಲಿಯೂ ಸತ್ರೂ ಇದೆ ಸನ್ನಿವೇಶವನ್ನು ಬಳಸಿಕೊಂಡ ನಮ್ಮ ಪದ್ದಣ್ಣ ಕಾಮ್ ಚೋರ್ ಆಗಿ ಬಿಡುತ್ತಾರೆ. ಪ್ರಿಯತಮೆ ಏನೇ ಹೇಳಿದ್ರೂ ಹಿಂಗೆ ಆಡ್ತಾ ಕಾಟ್ ಕೊಟ್ರೆ ಹೃದಯಾಘಾತ ಆಗೋದು! ಎಂದು ಪದೆ ಪದೆ ಹೇಳಿದಾಗ ನಿಜಕ್ಕೂ ನಮ್ಮ ಕಥಾನಾಯಕಿ ಗಾಬರಿಯಿಂದ ಬಳಲುವುದು ಮತ್ತೆ ಅದೇ ಬಾಣವನ್ನು ತಿರುಗಿಸಿ ಪದ್ದಣ್ಣನಿಗೆ ಬಿಡುವ ಸಾಲುಗಳು ಮುಂದಿನ ಭಾಗಗಳನ್ನು ಓದಲು ಉತ್ಸುಕತೆಯನ್ನುಂಟುಮಾಡುತ್ತವೆ.

ಮನೆಗೆಲಸದವಳ ಲಿಲ್ಲಿಯ ಭಾಷೆಯ ಶೈಲಿಯನ್ನು ಯಥಾವತ್ತು ಗ್ತಾಮ್ಯಶೈಲಿಯಲ್ಲಿ ಬಳಸಿದ್ದಾರೆ ಮನೆಗೆಲಸದವಳೆ ಯಜಮಾನಿಯೊಡನೆ ಸಲುಗೆ ಬೆಳೆಸಿ ಮಾತನಾಡುವ ನಿರೂಪಣಾ ಶೈಲಿ ಓದಲು ಹಿತವೆನಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಚಪಲ ಚನ್ನಿಗರಾಯರ ಹಾವಳಿ ಹೆಚ್ಚಾದಾಗ ನಮ್ಮ ಕಥಾ ನಾಯಕಿ ಮನೋರಮೆ ತನ್ನದೆ ಶೈಲಿಯಲ್ಲಿ ಅವರಿಗೆ ಚಳ್ಳೆಹಣ್ಣು ತಿನ್ನಿಸುವುದು ತಡೆತಡೆದರು ಬಿಡಬಿಡದೆ ನಗು ಮೇಳೈಸುತ್ತದೆ. ಮೊಬೈಲಿನ ಹುಚ್ಚು ನೆತ್ತಿಗೇರಿಸಿಕೊಂಡು ಅವರಿವರಂತೆ ನಾವಿಲ್ಲ ಎನ್ನುವ ಪಿತ್ತ ನೆತ್ತಿಗೇರಿದಾಗ ಅದನ್ನು ಸಂಬಾಳಿಸುವ ಪದ್ದಣನ ಚಾಕಚಾಕ್ಯತೆ ಗಹನವಾದದ್ದು.

ಹೀಗೆ ಒಂದಾ ಎರಡಾ ಪ್ರತಿಯೊಂದು ಸನ್ನಿವೇಶವು ನಮ್ಮ ಮನೆಯದ್ದೆ ನಮ್ಮ ಜೀವನದ್ದೆ ಎನ್ನುವಷ್ಟರ ಮಟ್ಟಿಗೆ ಹಾಸ್ಯ ಬಳಸಿ ಬರೆದ ಪರಿ ಶ್ರೀಮತಿ ಹೂಲಿ ಶಾಲಿನಿ ಪ್ರದೀಪರವರು ತಮ್ಮ ಮೊದಲ ಕೃತಿಯಲ್ಲೆ ಸಿಕ್ಸರ್ ಭಾರಿಸಿ ಜನಮನಸೂರೆಗೊಳಿಸಿದ್ದಾರೆ. ಎಲ್ಲವನ್ನು ಇಲ್ಲೆ ಹೇಳಿದ್ರೆ ಏನು ಮಜಾ? ನೀವೆ ಕೃತಿ ಖರೀದಿಸಿ ಓದಿ. ಓದಲು ತಗಲುವ ಸಮಯ ಕೇವಲ ಎರಡೇ ಗಂಟೆ ಒಂದು ಸಿನಿಮಾ ನೋಡಿದಕ್ಕಿಂತಲು ಹೆಚ್ಚು ಮುದ ನೀಡುತ್ತದೆ ಈ ಕೃತಿ. ನನ್ನ ವಿಮರ್ಶೆ ಎಂದ ಮೇಲೆ ಒಂದು ಹನಿಗವನ ಬೇಡವೆ ಹಾಗಿದ್ರೆ ಅದನ್ನೂ ಓದಿ.

 

ನಿತ್ಯ ಜೀವನದೊಳು
ತಿಳಿ ಹಾಸ್ಯ ಬೆರೆಸಿ ಬರೆದು
ಹೊರತಂದ ಕೃತಿ ಪದ್ದಣ್ಣ ಮನೋರಮೆ
ಸತ್ಯ ಜೀವನದಲ್ಲಿ
ಶಾಲಿನಿ ಪದ್ದಣ್ಣರಿಗೆ
ಕೀರ್ತಿ ತರಲಿ ಸಾಹಿತ್ಯದುಳುಮೆ.

ಕೃತಿಕಾರರು: ಶಾಲಿನಿ ಹೂಲಿ ಪ್ರದೀಪ್
ಇವರಿಂದ ಇನ್ನಷ್ಟು ಕೃತಿಗಳು ಹೊರಬಂದು ಜಗಜ್ಜಾಹಿರಾತಾಗಲಿ ಎಂದು ಹಾರೈಸುವೆ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಚನ್ನಕೇಶವ ಜಿ ಲಾಳನಕಟ್ಟೆ – ಛಂದೋಬದ್ಧ ಬರಹಗಾರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW