‘ಪದ್ದಣ ಮನೋರಮೆ’ ಕೃತಿ ಪರಿಚಯ

ಶಾಲಿನಿ ಹೂಲಿ ಪ್ರದೀಪ್ ಅವರ ‘ಪದ್ದಣ ಮನೋರಮೆ’ ಲಘು ಪ್ರಸಂಗಗಳನ್ನು ಒಳಗೊಂಡಿರುವ ಸಂಸಾರದಲ್ಲಿ ನಡೆವ ಕೆಲವು ತೆಳು ಹಾಸ್ಯದೊಂದಿಗೆ ಗಂಭೀರ ವಿಚಾರದ ಬಗ್ಗೆ ಯೋಚಿಸುವಂತೆ ಮಾಡುವ 24 ಪ್ರಸಂಗಗಳನ್ನು ಒಳಗೊಂಡಿರುವ ಪುಸ್ತಕ. ಲೇಖಕಿ ಆಶ್ರಿತಾ ಕಿರಣ್ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ  : ಪದ್ದಣ ಮನೋರಮೆ
ಲೇಖಕರು : ಶಾಲಿನಿ ಹೂಲಿ ಪ್ರದೀಪ್  
ಪುಸ್ತಕದ ಬೆಲೆ : 150/-
ಪ್ರಕಟಣೆಯ ವರ್ಷ : 2025
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ
ಪುಟಗಳ ಸಂಖ್ಯೆ. : 88

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರಿಗೆ, ಓದುವವರಿಗೆ “ಆಕೃತಿ ಕನ್ನಡ” ವೆಬ್ ಮ್ಯಾಗಝಿನ್ ಚಿರಪರಿಚಿತ. ಈ ಆಕೃತಿ ಕನ್ನಡದ ಸಂಪಾದಕರಾದ ಶಾಲಿನಿ ಹೂಲಿ ಪ್ರದೀಪ್ ಇವರ ಮೊದಲ ಪುಸ್ತಕ “ಪದ್ದಣ ಮನೋರಮೆ”. ಈ ಹೆಸರು ಕೇಳಿದೊಡನೆ ಅಥವಾ ಓದಿದೊಡನೆ “ಮುದ್ದಣ ಮನೋರಮೆ” ನೆನಪಾಗುತ್ತದೆ. ಲೇಖಕಿಯವರು ಮುಖಪುಟದಲ್ಲಿಯೇ “ಮುದ್ದಣ ಮನೋರಮೆ ಅವರ ಕ್ಷಮೆ ಕೋರಿ” ಎಂದು ಬರೆದಿರುವುದು ವಿಶೇಷವಾಗಿ ಮುಖಪುಟದಲ್ಲಿಯೇ ಇರುವುದರಿಂದ ಪುಸ್ತಕ ಓದುವ ಮುನ್ನ ಕೂತುಹಲ ಮೂಡಿಸುತ್ತದೆ. ಕ್ಷಮೆ ಕೇಳುವಂತದ್ದು ಏನಿರಬಹುದು ಎನ್ನುವುದು ಒಂದಾದರೆ ಲೇಖಕಿಯವರು ಯಾರ ಮನಸ್ಸಿಗೂ ಯಾರ ಭಾವನೆಗಳಿಗೂ ನೋವುಂಟು ಮಾಡುವವರಲ್ಲ ಎನ್ನುವುದನ್ನು ಸಾಬೀತು ಮಾಡುತ್ತದೆ.

ಇದೊಂದು ಲಘು ಪ್ರಸಂಗಗಳನ್ನು ಒಳಗೊಂಡಿರುವ ಸಂಸರಾದಲ್ಲಿ ನಡೆವ ಕೆಲವು ತೆಳು ಹಾಸ್ಯದೊಂದಿಗೆ ಗಂಭೀರ ವಿಚಾರದ ಬಗ್ಗೆ ಯೋಚಿಸುವಂತೆ ಮಾಡುವ 24 ಪ್ರಸಂಗಗಳನ್ನು ಒಳಗೊಂಡಿರುವ ಪುಸ್ತಕ. “ಪದ್ದಣ” ಮೃದು ಸ್ವಭಾವದ ವ್ಯಕ್ತಿತ್ವದ ಪತಿ. ಹಾಗೆಂದು ಮನೋರಮೆ ಬಜಾರಿಯಲ್ಲ. ಅನ್ನಿಸಿದನ್ನು ಮುಚ್ಚುಮರೆ ಇಲ್ಲದೆ ಹೇಳುವ ವ್ಯಕ್ತಿತ್ವ ಹೊಂದಿರುವವಳು. ಅವರಿವರನ್ನು ನೋಡಿ ನಾವು ಹಾಗೇ ಇರೋಣ ಎನ್ನುವವಳಿಗೆ ಮೃದುವಾಗಿ ಜೀವನದ ಪಾಠ ಹೇಳುವ ಪದ್ದಣನ ಬುದ್ಧಿವಂತಿಕೆ ವಿಶೇಷವಾಗಿ ಪುಸ್ತಕದ ಪ್ರತಿ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತದೆ. ಹಾಗೆಂದು ಪದ್ದಣನ ಮನೋರಮೆ ದಡ್ಡಿ ಅಲ್ಲ..ಗಂಡನ ಬುದ್ಧಿವಂತಿಕೆಯನ್ನು ಹೊರಹಾಕಲು ಅವಕಾಶ ನೀಡುವ ಹೃದಯವಂತೆ ಎಂದರೆ ತಪ್ಪಾಗಲಾರದು.

ಇಲ್ಲಿನ ಪ್ರತಿ ಪ್ರಸಂಗಗಳು ಗಮನ ಸೆಳೆಯುತ್ತದೆ. “ಗೆಳೆಯನ ಹೆಂಡತಿ ರೈಟ್ ಹೇಳಿದಾಗ” ಎನ್ನುವ ಪ್ರಸಂಗದಲ್ಲಿ ಬಾಲ್ಯದ ಗೆಳೆಯ ಆದರ್ಶನ ಪತ್ನಿ ಅಕಾಲಿಕವಾಗಿ ಮರಣ ಹೊಂದಿದ ವಿಷಯ ತಿಳಿದು ಅವನನ್ನು ಮಾತನಾಡಿಸಲು ಹೆಂಡತಿಯ ಜೊತೆ ಪದ್ದಣ ಹೊರಡುತ್ತಾರೆ. ಇಬ್ಬರ ನಡುವಿನ ಮಾತುಕತೆಯನ್ನು ಸೂಕ್ಷ್ಮವಾಗಿ ಓದಿದರೆ ಪ್ರಸ್ತುತ ನಮ್ಮ ಸುತ್ತ ಮುತ್ತ ಸಂಭವಿಸುವ ಸಾವಿನ ಸುತ್ತ ಹುಟ್ಟುವ ಸಾಕಷ್ಟು ಮಾತುಗಳನ್ನು ನೆನಪಿಸುತ್ತದೆ. ಪ್ರತಿ ಪ್ರಸಂಗದ ಅಂತ್ಯದಲ್ಲಿ ಹೇಳಿಯೂ ಹೇಳದಂತಿರುವ ಪಾಠವಿದೆ.

ಸಾಮಾಜಿಕ ಜಾಲತಾಣಗಳಿಂದ ಇತ್ತೀಚೆಗೆ ಒಳಿತಿಗಿಂತ ಕೆಡುಕೇ ಹೆಚ್ಚಾಗಿ ಸಂಭವಿಸುತ್ತಿದೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ‌ಕಾಣುವುದನ್ನು ಸತ್ಯವೆಂದು ನಂಬಿ ಅದರಿಂದ ಮೋಸ ಹೋಗುವ ಘಟನೆಗಳನ್ನು ತಿಳಿಸುವ ಪ್ರಸಂಗಗಳನ್ನು ಬಹಳಾ ಸೊಗಸಾಗಿ ನಾಜೂಕಾಗಿ ಬರೆದಿದ್ದಾರೆ. “ಮೆಸ್ಸೆಂಜರ್ ಪ್ರೀತಿ ಪ್ರಣಯ, ಮೊಬೈಲ್ ಅವಾಂತರ, ಇಂದಿನ ಟ್ರೆಂಡ್, ಭಯ ಹುಟ್ಟಿಸಿದೆ ರೀಲ್ಸ್, ಫೇಸ್ಬುಕ್ ಪ್ರಪಂಚ” ಎನ್ನುವ ಪ್ರಸಂಗಗಳನ್ನು ಓದಿದಾಗ ನಗಿಸುವ ಜೊತೆಗೆ ಜಾಗರುಕತೆಯಿಂದ ಇರಬೇಕು ಎಂದು ಸಂದೇಶ ಸಾರಿದಂತಿದೆ.

 

ಆತ್ಮಹತ್ಯೆಗೆ ಪ್ರಯತ್ನಿಸಿದ ಹುಡುಗಿಗೆ ಆತ್ಮಹತ್ಯೆಗೆ ತೋರಿದ ಧೈರ್ಯವನ್ನು, ಬದುಕಿ ಜೀವನ ಮಾಡಿ ತೋರಿಸು ನೀನು ಸತ್ರೆ ಏನೂ ಪ್ರಯೋಜನವಿಲ್ಲ ಕೇವಲ ಭರ್ಜರಿ ಊಟ ಹಾಕಿಸಿದ ಹಾಗೆ ಎಂದು ಹೇಳುವ ಸಾಂತ್ವಾನದ ಜೊತೆಗೆ ನೊಂದ ಹೆಣ್ಣಿಗೆ ಧೈರ್ಯ ತುಂಬುವ ಸನ್ನಿವೇಶವನ್ನು ” ಕಂಡವರ ಮನೆ ಕತೆ” ಯಲ್ಲಿ ನೋಡಬಹುದು.

“ನಾಯಿ ಹೆಣ್ಣಾದ್ರೆ ತಪ್ಪಾ” ಎನ್ನುವ ಬರಹ ಓದಿದಾಗ ಗಂಡು ನಾಯಿಗೆ ಸಿಗುವ ಗೌರವ, ಬೆಲೆ, ಆದ್ಯತೆ ಹೆಣ್ಣು ನಾಯಿಗೆ ಕೊಡದ ಮನಸ್ಥಿತಿಗಳಿರುವ ಸಮಾಜದ ಬಗ್ಗೆ ಬೇಸರ ಮೂಡುತ್ತದೆ. ಗಂಡು ನಾಯಿಯನ್ನು ಹೆರುವುದು ಹೆಣ್ಣು ನಾಯಿ. ಆದರೆ ಮನೆಯಲ್ಲಿ ಸಾಕಲು ಹೆಣ್ಣು ನಾಯಿ ಬೇಡ ಎಂದು ಯೋಚಿಸುವ ಮನಸ್ಸುಗಳ ಬಗ್ಗೆ, ಈ ವಿಚಾರದ ಸುತ್ತ ಸಾಕಷ್ಟು ಪ್ರಶ್ನೆಗಳನ್ನು ಮನದಲ್ಲಿ ಹುಟ್ಟಿಸುತ್ತದೆ. ಚಿಕ್ಕ ಸನ್ನಿವೇಶ..ಆದರೆ ಅದು ದೊಡ್ಡ ವಿಚಾರದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಇಂತಹ ಅನೇಕ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡುವ ಪ್ರಸಂಗಗಳು ಈ ಪುಸ್ತಕದಲ್ಲಿವೆ.

ಬಾಹ್ಯ ಸೌಂದರ್ಯದ ಬಗ್ಗೆ ಅವರನ್ನೇ ಅಪಹಾಸ್ಯ ಮಾಡಿಕೊಂಡು ಬರೆದಂತಹ ಬರಹಗಳಲ್ಲಿ ಆ ಕೀಳರಿಮೆಯಿಂದ ಹೊರಬಂದಾಗ ಮಾತ್ರ ಬದುಕು ಸುಂದರ. ಇರುವುದನ್ನು ಇರುವಂತೆ ಸ್ವೀಕರಿಸಬೇಕು ಎಂದು ಹೇಳಿರುವ ಪ್ರಯತ್ನ ಸೊಗಸಾಗಿದೆ.

ಪತಿ ಪತ್ನಿಯರ ನಡುವಿನ ಸಾಮರಸ್ಯ, ಚಿಕ್ಕ ‌ಚಿಕ್ಕ ಚರ್ಚೆ, ಒಬ್ಬರಿಗೊಬ್ಬರ ಮೇಲಿರುವ ಕಾಳಜಿ, ಪ್ರೀತಿ, ಗೌರವವನ್ನು ಸಾರುವ ದಾಂಪತ್ಯಕ್ಕೆ ಪ್ರಮುಖವಾಗಿ ಬೇಕಾಗಿರುವ ಹೊಂದಾಣಿಕೆ ಹಾಗು ತ್ಯಾಗವನ್ನು ತೆಳು ಹಾಸ್ಯದ ಮೂಲಕ ಸಾರುವ ಒಂದೊಳ್ಳೆ ಕೃತಿ ” ಪದ್ದಣ ಮನೋರಮೆ”. ಎಲ್ಲಿಯೂ ಬೇಸರ ಮೂಡಿಸದೆ ಇನ್ನೆರೆಡು ಬರಹ ಇದ್ದಿದ್ದರೆ ಎಂದು ಅನ್ನಿಸುವಂತೆ ಮಾಡುವ ಅದ್ಭುತ ನಿರೂಪಣಾ ಶೈಲಿಯನ್ನು ಹೊಂದಿರುವ, ಸಮಾಜಕ್ಕೆ ಸಂದೇಶವನ್ನು ನೀಡುವ ಜೊತೆಗೆ ಮನಸ್ಸಿಗೆ ಮುದ ನೀಡುವ ಒಂದೊಳ್ಳೆ ಓದು ಎನ್ನಬಹುದು. ಎಲ್ಲಿಯೂ ಬೇಸರವಾಗದಂತೆ ಸರಳವಾಗಿ ಓದಿಸಿಕೊಂಡು ಹೋಗುವ ಶಕ್ತಿ‌ ಇಲ್ಲಿನ ಬರಹಗಳಿಗಿದೆ. ಸನ್ನಿವೇಶಗಳು ನಮ್ಮ ಬದುಕಿನ, ಅಥವಾ ನಮ್ಮ ಸುತ್ತ ‌ಮುತ್ತ ನಡೆದ ಘಟನೆಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.

ಕೆಲವು ಪುಸ್ತಕಗಳು ಭಾಗ ಒಂದು ಎರಡು ಎಂದು ಸಾಕಷ್ಟು ಮುದ್ರಣಗಳಾಗಿವೆ. ಇದೀಗ “ಪದ್ದಣ ಮನೋರಮೆ”ಯನ್ನು ಹಾಗೆ ಓದುವ ಆಸೆಯಾಗಿದೆ. ಇದು ಕೂಡ ಹಲವಾರು ಭಾಗಗಳಾಗಿ ಬರಲಿ. ದಾಂಪತ್ಯ ಜೀವನದ ಸಾಮರಸ್ಯವನ್ನು , ಪ್ರಾಮುಖ್ಯತೆಯನ್ನು ಸಾರುವಂತಾಗಲಿ. ಕಿರುನಗೆ ಮೂಡಿಸುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಕೆಯಿಂದ ಹೆಜ್ಜೆ  ಇಡಲು ಮುನ್ನೆಚ್ಚರಿಕೆ ನೀಡುವಲ್ಲಿ ಪುಸ್ತಕ ಗೆದ್ದಿದೆ. ಜಾಸ್ತಿ ಹೇಳಿದರೆ ಸ್ವಾರಸ್ಯ ಹಾಳಾಗಬಹುದು. ಇಲ್ಲಿಗೆ ನಿಲ್ಲಿಸುವೆ. ಪುಸ್ತಕ ಓದಲು ಮರೆಯಬೇಡಿ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಆಶ್ರಿತಾ ಕಿರಣ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW