ಶಾಲಿನಿ ಹೂಲಿ ಪ್ರದೀಪ್ ಅವರ ‘ಪದ್ದಣ ಮನೋರಮೆ’ ಕೃತಿಯ ಕುರಿತು ಸಿನಿಮಾ ನಿರ್ದೇಶಕರಾದ ಹಯವದನ ಹಾಗೂ ಕತೆಗಾರ್ತಿ ಉಷಾರವಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪದ್ದಣ ಮನೋರಮೆ
ಲೇಖಕರು : ಶಾಲಿನಿ ಹೂಲಿ ಪ್ರದೀಪ್
ಪುಸ್ತಕದ ಬೆಲೆ : 150/-
ಪ್ರಕಟಣೆಯ ವರ್ಷ : 2025
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ
ಪುಟಗಳ ಸಂಖ್ಯೆ. : 88
ಖರೀದಿಗಾಗಿ : 9880424461
ಮನೆಯಲ್ಲಿ ಗಂಡ ಹೆಂಡತಿಯರ ನಡುವಿನ ವಿಚಾರ, ವಿನೋದ ಮತ್ತು ನಿತ್ಯಜೀವನದ ಜಂಜಾಟಗಳಲ್ಲಿ ಹುಟ್ಟುವ ಹಾಸ್ಯ ಮತ್ತು ಕೆಲವು ಭಾವುಕ ಕ್ಷಣಗಳನ್ನ/ಕಲಿಕೆಗಳನ್ನ ಲಘು ಪ್ರಸಂಗ
ಕಥೆಗಳಾಗಿ ಹೇಳಿದ್ದಾರೆ.

ಪದ್ದಣ್ಣ ಕೆಲವು ಕಡೆ ಪೆದ್ದಣ್ಣನಾಗಿಯೂ, ಬಹಳಷ್ಟು ಕಡೆ ತಿದ್ದಿ ತಿಡುವ ಗುರುವಾಗಿ ಕೊನೆಗೆ ಸಾಕ್ಷಾತ್ ಶ್ರೀಕೃಷ್ಣ ನಾಗಿ ಕಾಣಿಸುವದು ಈ ಕಥೆಗಳ ಮತ್ತು ಇವರ ದಾಂಪತ್ಯದ ವಿಶೇಷ..
ಗೆಳಯನ ಹೆಂಡತಿಯ ಸಾವು, ಜಿಮ್ ಬಾಡಿ ಹುಡುಗ, ಫೇಸ್ಬುಕ್ ಗೆಳೆಯ,ಎರಡುಜಡೆಗಳ,ಎರಡು ಮನೆಗಳ ಸಮಾಲೋಚನೆ ಚಂದ..
ಹೆಣ್ಣು ಸಂಸಾರದ ಕಣ್ಣಾಗಬೇಕು ಎನ್ನುವ ಕಥೆ ಲೇಖಕರ ಮಹಿಳಾ ದೃಷ್ಟಿಕೋನವನ್ನ ಎತ್ತಿ ತೋರಿಸುವದರ ಜೊತೆಗೆ, ಹೆಣ್ಣು ನಾಯಿಯ ಕಥೆ ಭಾವುಕಗೊಳಿಸುತ್ತ ಇದು ಬರೀ ಹಾಸ್ಯಕ್ಕೆ ಬರೆದ ಸಂಕಲನ ಅಲ್ಲ ಅನ್ನೋದನ್ನ ಪ್ರೂವ್ ಮಾಡುತ್ತದೆ.
ನಾವು ಇರೋ ಬಣ್ಣದಲ್ಲೇ ಅರೋಗ್ಯ ಮತ್ತು ಸೌಂದರ್ಯ ಇದೆ ಅನ್ನೋ ನಿರ್ಧಾರಕ್ಕೆ ಬರೋ ಅಮ್ಮ ದೇವರಿಗೆ ದೀಪ ಹಚ್ತಾ ಅವ್ರೆ ದೇವರಾಗ್ತಾರೆ. ಲೇಖಕರ ಮೊದಲ ಕೃತಿ ಸಾಮಾನ್ಯವಾಗಿ ಅವ್ರ ಊರು, ಮನೆ ಅಥವಾ ಅವ್ರು ಹತ್ತಿರದಿಂದ ನೋಡಿದ ಪ್ರಪಂಚದ ಸುತ್ತ ಇರೋದು ಸಾಮಾನ್ಯ. ಹಾಗೆ ಇಲ್ಲಿ ತಮ್ಮ ಹಾಗೂ ತಮ್ಮ ಗಂಡನ ಸುತ್ತ ನಡೆಯವ ಬಹಳಷ್ಟು ಪ್ರಸಂಗಗಳನ್ನ ಮಜವಾಗಿ/ ಮುಕ್ತವಾಗಿ ಹೇಳುವ ಪ್ರಯತ್ನವನ್ನ ಸ್ನೇಹಿತೆ ಶಾಲಿನಿ ಅವರು ಮಾಡಿದ್ದಾರೆ. 85-90 ಪುಟಗಳ ಪುಸ್ತಕ ಸಲೀಸಾಗಿ ಓದಿಸ್ಕೊಂಡು ಹೋಯಿತು..
ಗುಡ್ ಸ್ಟಾರ್ಟ್ ಶಾಲಿನಿ, ಬಹಳಷ್ಟು ಕೃತಿಗಳು ನಿಮ್ಮಿಂದ ಬರಲಿ…
- ಹಯವದನ

“ಪದ್ದಣ್ಣ ಮನೋರಮೆ” ಮನ ಮುಟ್ಟಿದ ಕೃತಿ. ವೈಯಕ್ತಿಕವಾಗಿ ವಾಸ್ತವ ಬದುಕಿಗೆ ಬಹಳ ಹತ್ತಿರವಾದ ಬರಹಗಳಿವು ಎನಿಸಿತು. ಅದೆಲ್ಲೋ ಬರಹಗಳಲ್ಲಿ ನನ್ನನ್ನೇ ನಾನು ಕಂಡೆ. ಅದೇ ಸಣ್ಣ ಪುಟ್ಟ ಬಯಕೆಗಳು. ಅತಿ ದೊಡ್ಡ ನಿರೀಕ್ಷೆಗಳೇನು ಇರದ ಸಣ್ಣ ಪ್ರಶಂಸೆಯ ಆಸೆ. ಅದೇ ಆಸೆಗಣ್ಣು ಅದನ್ನರಿಯದ ಪತಿ ದೇವರ ವರ್ತನೆ. ಅದ್ಯಾಕೋ ಪದ್ದಣ್ಣ ಮನೋರಮೆ ಕಥೆಯಾಗಿರದೇ ಉಷಾರವಿ ಕಥೆಯೇ ಎನಿಸಿದ್ದು ಸುಳ್ಳಲ್ಲ.
ಸತಿ ಪತಿಯರ ತರಲೆ ತುಂಟಾಟ ಕಾಲೆಳೆಯುವುದು, ಗಂಡನ್ನು ಗೋಳಾಡಿಸುವ ಪರಿ ಬದುಕಿನ ಜೀವಂತಿಕೆಯನದನು ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ ಎನಿಸಿತು.
ಇಲ್ಲಿನ ಪ್ರತಿ ಕಥೆ, ಅಥವಾ ಸನ್ನಿವೇಶ ನಿತ್ಯ ಬದುಕುಗೆ ಪ್ರಸ್ತುತ. ಮೊಬೈಲ್ ಗೀಳು, ಫೇಸ್‌ಬುಕ್ ಅವಾಂತರಗಳು, ಮೆಸೇಂಜರ್ ಕಾಳಜಿ ಅದಕ್ಕೆ ಪದ್ದಣ್ಣ ಕೊಟ್ಟ ಉತ್ತರ ವಾವ್ , ಕಾಮುಕ ಕಣ್ಣಿನ ಚಿತ್ರಣ ಈ ಕೃತಿ ಲೇಖಕಿಯ ಜೀವವಾನುಭವವನ್ನು ಮಾತ್ರ ಎತ್ತಿಹಿಡಿಯುತ್ತದೆ.
ಗಂಭೀರ ಬರಹ ಬರೆಯಬಹುದು ಆದರೆ ಹಾಸ್ಯ ಬರಹ ಹಾಗಲ್ಲ ಹಾಸ್ಯ ಕೇಳಿ ನಗುವಷ್ಟು ಸುಲಭವಲ್ಲ ಹಾಸ್ಯ ಬರಹ ಬರೆಯುವುದು. ಆದರೆ ಈ ಕೃತಿಯಲ್ಲಿ ಸಲೀಸಾಗಿ ಸರಳವಾಗಿ ಹಾಸ್ಯದ ಹೊನಲನ್ನು ಚಿತ್ರಿಸಿದ್ದಾರೆ. ಓದಿಮುಗಿಸಿದಾಗ ಒಂದು ಮನಃ ತೃಪ್ತಿ ಆವರಿಸಿತು ಶುಭವಾಗಲಿ ಶಾಲಿನಿ ಮೇಡಂ ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗಲಿ. ಇನ್ನಷ್ಟು ಮೊಗದಷ್ಟು ಕೃತಿಗಳು ಕನ್ನಡಮ್ಮನ ಮುಡಿಸೇರಲಿ
- ಉಷಾರವಿ

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ರಮ್ಯ ರಾಜ್
- ‘ಪದ್ದಣ ಮನೋರಮೆ’ ಲಘು ಪ್ರಸಂಗಗಳು – ಹೆಚ್. ಪಿ. ಕೃಷ್ಣಮೂರ್ತಿ
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ದೇವರಾಜ ಚಾರ್
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ಚನ್ನಕೇಶವ ಜಿ ಲಾಳನಕಟ್ಟೆ
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ಎನ್.ವಿ. ರಘುರಾಂ
- ‘ಪದ್ದಣನ ಮನೋರಮೆ’ ಕೃತಿ ಪರಿಚಯ – ಹೆಚ್ ವಿ ಮೀನ
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ಆಶ್ರಿತಾ ಕಿರಣ್