ಭಾರತೀಯ ವಾಯುಸೇನೆಯ ಮೊಟ್ಟ ಮೊದಲ ಮಹಿಳಾ ‘ ಏರ್ ಮಾರ್ಷಲ್’ ಪದ್ಮಾ ಬಂದೋಪಧ್ಯಾಯ ಅವರ ಸೇವೆಗೆ ೨೦೨೦ ರಲ್ಲಿ “ಪದ್ಮಶ್ರೀ” ಪ್ರಶಸ್ತಿ ದೊರೆಯಿತು. ಅವರು ಎಷ್ಟೇ ಎತ್ತರಕ್ಕೆ ಬೆಳೆದರು ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿ ಎನ್ನುತ್ತಾ ಅವರ ವ್ಯಕ್ತಿತ್ವ, ಸಾಧನೆ ಕುರಿತು ವಿಂಗ್ ಕಮಾಂಡರ್ ಸುದರ್ಶನ ಅವರು ಬರೆದ ಲೇಖನ. ಮುಂದೆ ಓದಿ…
4 ನವೆಂಬರ್ 1944 ರಂದು ತಿರುಪತಿಯಲ್ಲಿನ ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಸ್ವಾಮಿನಾಥನ್ ಮತ್ತು ಅಲಮೇಲು ದಂಪತಿಗಳಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ. ವೆಂಕಟರಮಣನ ಕೃಪೆಯಿಂದಲೇ ಹುಟ್ಟಿದ ಮಗು ಎಂದು ಭಾವಿಸಿದ ದಂಪತಿಗಳು ಮಗುವಿಗೆ ಪದ್ಮಾವತಿಯೆಂದು ನಾಮಕರಣ ಮಾಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡುತ್ತಲೇ ಬೆಳೆದ ಮಗುವಿಗೆ ತಾನು ದೊಡ್ಡವಳಾದ ಮೇಲೆ ವೈದ್ಯಳಾಗಬೇಕೆಂಬ ಮಹದಾಸೆ ಚಿಕ್ಕಂದಿನಿಂದಲೇ ಹುಟ್ಟಿಕೊಳ್ಳುತ್ತದೆ. ಓದುಬರಹದಲ್ಲಿ ಮತ್ತು ಇತರೆ ಎಲ್ಲಾ ಚಟುವಟಿಕೆಗಳಲ್ಲಿ ತುಂಬಾ ಶ್ರದ್ಧೆಯಿಂದ ಮಗಳು ಭಾಗವಹಿಸುವುದನ್ನು ನೋಡಿದ ತಂದೆ ತಾಯಿಗಳು ತುಂಬು ಹೃದಯದಿಂದ ಮಗಳ ಸರ್ವತೋಮುಖ ಅಭಿವೃಧ್ಧಿಗೆ ಪರಿಶ್ರಮಿಸುತ್ತಾರೆ. ಮಗಳು ಸೈನ್ಯದ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾದಾಗ ಮಾತ್ರ ಕಳುಹಿಸಲು ಸ್ವಲ್ಪ ಹಿಂದೇಟು ಹಾಕುತ್ತಾರೆ. ಸಾಂಪ್ರದಾಯದ ವಾತಾವರಣದಲ್ಲಿ ಬೆಳೆದ ಮಗಳನ್ನು ಪೂನಾದ ಸೈನ್ಯದ ವೈದ್ಯಕೀಯ ಕಾಲೇಜಿಗೆ, ಹಾಸ್ಟಲಿನ ವಾಸಕ್ಕೆ, ಅದೂ ಸೈನ್ಯದಲ್ಲಿ ಡಾಕ್ಟರಾಗಲು, ಉಹುಂ ಒಪ್ಪುವುದೇ ಇಲ್ಲ. ಇತ್ತ ಪದ್ಮಾವತಿಯೂ ಹಿಡಿದ ಪಟ್ಟು ಬಿಡುವುದಿಲ್ಲ.

ಮುಂದಿನ ವರ್ಷವೂ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದಾಗ ತಂದೆ ತಾಯಿಗಳು ಒಪ್ಪಲೇ ಬೇಕಾಗುತ್ತದೆ. ಕನಸುಗಳು ನನಸಾಗುವ ಸಮಯ ಬಂದೇ ಬಿಟ್ಟಿತು…ಅಪಾರ ಸಂತೋಷದಿಂದ ವೈದ್ಯಕೀಯ ವ್ಯಾಸಂಗವನ್ನು ಪ್ರಾರಂಭಿಸುತ್ತಾರೆ. ಎಲ್ಲ ಚಟುವಟಿಕೆಗಳಲ್ಲೂ ತುಂಬಾ ಆಸಕ್ತಿಯಿಂದ, ಸಕ್ರಿಯವಾಗಿ ಭಾಗವಹಿಸುತ್ತಾರೆ. ಏರ್ಫೋರ್ಸನ್ನು ಆಯ್ಕೆ ಮಾಡಿಕೊಂಡರೆ ಮುಂದೊಮ್ಮೆ ಪೈಲಟ್ಟಾಗಲೂ ಅವಕಾಶವಿದ್ದುದರಿಂದ ಸೈನ್ಯದ ಆಯ್ಕೆಯ ಸಮಯದಲ್ಲಿ ಏರ್ಫೋರ್ಸನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಐದು ವರ್ಷದ ವೈದ್ಯಕೀಯ ವ್ಯಾಸಂಗ ಮುಗಿಸಿ 1968 ರಲ್ಲಿ ಬೆಂಗಳೂರಿನ ಏರ್ಫೋರ್ಸ್ ಆಸ್ಪತ್ರೆಗೆ ಉನ್ನತ ತರಬೇತಿಗೆ ಬರುತ್ತಾರೆ. ಅಲ್ಲಿ ಆಡಳಿತ ವಿಭಾಗದ ಅಧಿಕಾರಿ #ಫ್ಲೈಟ್_ಲೆಫ್ಟಿನೆಂಟ್_ಸತಿನಾತ್ ಬಂದೋಪಾಧ್ಯಾಯರ ಜೊತೆ ಪರಿಚಯ..ನಂತರ ಪ್ರೇಮ..ತದನಂತರ ವಿವಾಹವೂ ನೆರವೇರಿ ಬಿಡುತ್ತದೆ!
1971 ರಲ್ಲಿ ನಡೆದ ಇಂಡೋಪಾಕ್ ಯುಧ್ಧದ ಸಮಯದಲ್ಲಿ ದಂಪತಿಗಳಿಬ್ಬರೂ ಪಂಜಾಬಿನ ಹಲ್ವಾರ ಏರ್ಫೋರ್ಸ #ವಾಯುನೆಲೆಯಲ್ಲಿ ಹಗಲಿರಳೆನ್ನದೆ ಯುದ್ಧದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಬಂದೋಪಾಧ್ಯಾಯರು ಆಡಳಿತದಲ್ಲಿ ನಿರತರಾಗಿದ್ದರೆ, ಪದ್ಮಾ ಬಂದೋಪಧ್ಯಾಯರು ಗಾಯಾಳುಗಳ ಸೇವೆಯಲ್ಲಿ ನಿರತರಾಗುತ್ತಾರೆ. ಯುದ್ಧ ಮುಗಿದ ನಂತರ ರಾಷ್ಟ್ರಪತಿ ಭವನದಲ್ಲಿ ನಡೆದ ಒಂದು ವಿಶೇಷ ಸಮಾರಂಭದಲ್ಲಿ ದಂಪತಿಗಳಿಬ್ಬರಿಗೂ “ವಿಶಿಷ್ಟ ಸೇವಾ ಮೆಡಲ್” ಅಂದಿನ ರಾಷ್ಟ್ರಪತಿಯವರು ಪ್ರಧಾನ ಮಾಡುತ್ತಾರೆ.

ಫೋಟೋ ಕೃಪೆ: Reditt
ಕಣ್ಣಿನ ಒಂದು ಚಿಕ್ಕ ದೋಷದಿಂದಾಗಿ ಅವರ ವಿಮಾನದ ತರಬೇತಿಯ ಮಹದಾಸೆಗೆ ಬ್ರೇಕ್ ಬಿದ್ದಿತು, ಆದರೂ ಧೃತಿಗೆಡದೆ, ವೈಮಾನಿಕ ವೈದ್ಯಕೀಯದ ವಿಶೇಷ ಪದವಿಯನ್ನು ಪಡೆಯುತ್ತಾರೆ. ಬೆನ್ನಿಗೆ ಪ್ಯಾರಾಚೂಟು ಕಟ್ಟಿಕೊಂಡು ವಿಮಾನದಿಂದ ಜಿಗಿಯುತ್ತಾರೆ. ರಕ್ತವೂ ಹಿಮಗಟ್ಟುವ ಛಳಿಯಲ್ಲಿ ನಾಲ್ಕು ತಿಂಗಳುಗಳ ಕಾಲ ಉತ್ತರ ಧೃವದಲ್ಲಿ ಸಂಶೋಧನೆ ನಡೆಸುತ್ತಾರೆ. ನಿರಂತರ ಪರಿಶ್ರಮದಿಂದ ಹೊಸ ಅವಿಷ್ಕಾರಗಳನ್ನು ಮಾಡುತ್ತಲೇ ಹೋಗುತ್ತಾರೆ. ಪದವಿಗಳ, ಪುರಸ್ಕಾರಗಳ ಸರಮಾಲೆಯನ್ನು ಬಹಳ ಹಗುರಾಗಿ ಧರಿಸಿ ಮುನ್ನಡೆಯುತ್ತಾರೆ. ಏರ್ ಫೋರ್ಸಿನಲ್ಲಿ ಇವರು ಮುಟ್ಟದ ವಿಷಯಗಳಿಲ್ಲ. 1978 ರಲ್ಲಿ ಊಟಿಯ ಸಮೀಪದ Wellington Staff College ನಲ್ಲಿ ‘ಮಿಲಿಟರಿ ಅಧ್ಯಯನ’ದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸುತ್ತಾರೆ!
ನಾನು ಎಂಭತ್ತರ ದಶಕದಲ್ಲಿ ಪಂಜಾಬಿನ ಹಲ್ವಾರದ ವಾಯುನೆಲೆಯಲ್ಲಿದ್ದೆ. ಆಗ ಪದ್ಮಾ ಬಂದೋಪಧ್ಯಾಯರು ಮತ್ತು ಅವರ ಪತಿ ಪುನಃ ಅಲ್ಲಿಗೆ ವರ್ಗಾವಣೆಯಾಗಿ ಬಂದರು. ಅಲ್ಲಿ ಅವರು ಹಿರಿಯ ವೈದ್ಯಕೀಯ ಅಧಿಕಾರಿ. ನಾನು ಆಗ ಅಲ್ಲಿಯ ವಾಯುಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕ. ನನ್ನ ವೃತ್ತಿವಲಯದಲ್ಲಿ ಸಮುದ್ರ ಮಂಥನ ನಡೆಯುತ್ತಿದ್ದ ಕಾಲವದು. ಕತ್ತಲಿನಲ್ಲೇ ಚಡಪಡಿಸುತ್ತಿದ್ದ ದಿನಗಳವು. ಜೀವನದಲ್ಲಿ ಮುನ್ನುಗ್ಗಲೇ ಬೇಕಾದ ಅನಿವಾರ್ಯತೆ. ಇನ್ನೂ ಮೇಲಕ್ಕೇರಬೇಕೆಂಬ ತುಡಿತ.

ಫೋಟೋ ಕೃಪೆ: realshepower
ಸಾಧನೆಗಳ ಮೂರ್ತಿಯೇ ನನ್ನ ಮುಂದಿರುವಾಗ ಸ್ಪೂರ್ಥಿಗೇನು ಕೊರತೆ. ಎಲ್ಲವನ್ನು ಅಧ್ಯಯನ ಮಾಡಿದ್ದ ಈ ಮೇರುವ್ಯಕ್ತಿಯನ್ನೇ ನನ್ನ ಆದರ್ಶ ದೇವತೆಯನ್ನಾಗಿಸಿಕೊಂಡೆ. ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳ ಪರಿಣಿತರು ಅವರು. ಆಗೊಮ್ಮೆ ಈಗೊಮ್ಮೆ ಕನ್ನಡದಲ್ಲಿ ಮಾತಾಡಿಸಿದರೆಂದರೆ ಎಲ್ಲಿಲ್ಲದ ಖುಷಿ. ನನ್ನ ಪರಿಶ್ರಮಗಳು, ಅಧ್ಯಯನಗಳು ಅವರ ಗಮನಕ್ಕೆ ಬಂತು. ವೈದ್ಯಕೀಯ ಸಹಾಯಕನಾಗಿದ್ದವನೊಬ್ಬ ಪೈಲಟ್ಟಾಗುವ ಕನಸು ಕಾಣುತ್ತಿದ್ದ ಹುಚ್ಚಿಗೆ, ಹಲವಾರು ಜನರ ಕುಹುಕ, ಕೊಂಕು ನುಡಿಗಳನ್ನು ಅರಗಿಸಿಕೊಳ್ಳಬೇಕಾಗಿತ್ತು. ಅಂತಹ ಸಮಯದಲ್ಲಿ ಅವರ ಸಾಂತ್ವಾನದ ನುಡಿಗಳು ಅಧೀರತೆಯನ್ನು ಹೋಗಲಾಡಿಸಿ ಉತ್ಸಾಹವನ್ನು ತುಂಬುತ್ತಿದ್ದವು. ನನ್ನನ್ನು ಪ್ರೋತ್ಸಾಹಿಸುತ್ತಲೇ ಜೀವನದ ಏರುಪೇರುಗಳ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರು..ಅವಸರಪಡಬೇಡ, ದುಡುಕಬೇಡ, ನಿನ್ನ ಪ್ರಯತ್ನ ನಿರಂತರವಾಗಿರಲಿ, ಫಲ ಅದರ ಸಮಯಕ್ಕೆ ತಾನೇ ತಾನಾಗಿ ಬರುತ್ತದೆ ಎಂದೆಲ್ಲಾ ಹೇಳುತ್ತಿದ್ದರು. ಅಂತೂ ಕೊನೆಗೆ ನಾನು ಪೈಲಟ್ ಆಗಿ ಆಯ್ಕೆಯಾದಾಗ ತುಂಬಾ ಸಂತೋಷಪಟ್ಟರು. ಅವರ ಪ್ರೇರಣೆಯಿಂದ ನನಗೂ ಮುಂದಿನ ವರ್ತುಲಕ್ಕೆ ಛಲ್ಲಾಂಗ ಹೊಡೆಯುವ ಅವಕಾಶ ದೊರಕಿತು.
ಪ್ರಮೋಷನ್ನುಗಳ, ಪ್ರಶಸ್ತಿಗಳ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳದ ಪದ್ಮಾವತಿಯರನ್ನು ಪ್ರಮೋಶನ್ನುಗಳೇ ಹುಡುಕಿಕೊಂಡು ಬರುತ್ತಿದ್ದವು. ಭಾರತೀಯ ವಾಯುಸೇನೆಯ ಮೊಟ್ಟ ಮೊದಲ ಮಹಿಳಾ ‘ ಏರ್ ಮಾರ್ಷಲ್’ ಆಗಿ ಆಯ್ಕೆಯಾದಾಗಲೂ, ‘ಡೈರೆಕ್ಟರ್ ಜನರಲ್’ ಆಗಿ ನೇಮಿಸಲ್ಪಟ್ಟಾಗಲೂ, ಅತಿ ಸಹಜವಾಗಿ ‘ಏನೋ ದೇವರ ದಯೆ’ ಎಂದು ಬಿಟ್ಟರಂತೆ. ಹಾಗೇ ‘ಪರಮ ವಿಶಿಷ್ಟ ಸೇವಾ ಮೆಡಲ್’ ‘ಅತಿವಿಶಿಷ್ಟ ಸೇವಾ ಮೆಡಲ್’ ಗಳು ಬಂದಾಗಲೂ ಹಾಗೇ. 2020 ರಲ್ಲಿ ಇವರಿಗೆ “ಪದ್ಮಶ್ರೀ” ಪ್ರಶಸ್ತಿ ದೊರೆಯಿತು. ಈಗಲೂ ನಾವಿಬ್ಬರೂ ಸಂಪರ್ಕದಲ್ಲಿದ್ದೇವೆ. ಇವರದೊಂದು ಪುಸ್ತಕ ಸಹಾ ಬಿಡುಗಡೆಯಾಗಿದೆ ‘Lady in Blue’ ಅಂತಾ. ನನ್ನ ಪುಸ್ತಕ ‘ಯೋಧ ನಮನ’ ದಲ್ಲಿ ಇವರ ಜೀವನ ಚರಿತ್ರೆಯ ಸಂಕ್ಷಿಪ್ತ ಅಧ್ಯಾಯವಿದೆ.
ಇವರನ್ನು ನೋಡಿದ ಕೂಡಲೇ ನೆನಪಾಗುವುದು…ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಮಾತು. ಈಗ ಹಲವಾರು ವರ್ಷಗಳಾಗಿ ನಿವೃತ್ತಿ ಪಡೆದು, ಈಗಲೂ ನಿರಂತರವಾಗಿ ಒಂದಲ್ಲಾ ಒಂದು ಹೊಸ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಾರೆ, ಸ್ಪೂರ್ಥಿಯ ಸೆಲೆಯಾಗಿ ರಾರಾಜಿಸುತ್ತಾರೆ.
- ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
