ಏಲಕ್ಕಿಯ ಅವನತಿಯ ಕುರಿತಾಗಿ ತೇಜಸ್ವಿಯವರ ವಿಶ್ಲೇಷಣೆ



ಪೂರ್ಣಚಂದ್ರ ತೇಜಸ್ವಿಯವರ “ಚಿದಂಬರ ರಹಸ್ಯ” ಪುಸ್ತಕದಲ್ಲಿ ಏಲಕ್ಕಿಗೆ ಭಾದಿಸುವ ಕಟ್ಟೆರೋಗದ ಕುರಿತು ಭವಿಷ್ಯ ನುಡಿದಿದ್ದರು.ಏಲಕ್ಕಿಯ ಅವನತಿಯ ಕುರಿತಾಗಿ ತೇಜಸ್ವಿಯವರ ವಿಶ್ಲೇಷಣೆ ಕುರಿತು ಡಾ ಯುವರಾಜ್ ಹೆಗಡೆ ಅವರ ಒಂದು ಪುಟ್ಟ ಲೇಖನ.ಮುಂದೆ ಓದಿ…

ಪೂರ್ಣಚಂದ್ರ ತೇಜಸ್ವಿಯವರು ತಮ್ಮ “#ಚಿದಂಬರ_ರಹಸ್ಯ” ಪುಸ್ತಕದಲ್ಲಿ ಏಲಕ್ಕಿಯ ಅವಸಾನದ ಕುರಿತಾಗಿ 1985 ರಲ್ಲಿಯೇ ಅಂದರೆ ಸುಮಾರು 36 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಏಲಕ್ಕಿಗೆ ಭಾದಿಸುವ ಕಟ್ಟೆರೋಗ ,ಅದು ಹರಡುವ ಬಗೆ, ಅದನ್ನು ಅವಲಂಭಿಸಿರುವ ಬೆಳೆಗಾರರ ಜೀವನ ಏಲಕ್ಕಿಯೊಂದಿಗೆ ನಾಶವಾಗುವ ಕುರಿತು ತಮ್ಮ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದರು.

ಒಂದು ಕಾಲದಲ್ಲಿ ಮಲೆನಾಡಿನಾದ್ಯಂತ ಅದರಲ್ಲೂ ಮುಖ್ಯವಾಗಿ ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಕೊಡಗು ಜಿಲ್ಲೆಗಳಲ್ಲಿ, ಸಕಲೇಶಪುರದಲ್ಲಿ ಏಲಕ್ಕಿ ಪ್ರಮುಖ ವಾಣಿಜ್ಯ/ ಸಾಂಬಾರು ಬೆಳೆಯಾಗಿ ಬೆಳೆದರೆ ತೀರ್ಥಹಳ್ಳಿ, ಹೊಸನಗರ, ಕೊಪ್ಪ ಶ್ರಿಂಗೇರಿಯಂತಹ ಮಲೆನಾಡಿನ ಇತರೆ ಪ್ರದೇಶಗಳಲ್ಲಿ ಅಡಿಕೆಯ ನಡುವೆ ಉಪಬೆಳೆಯಾಗಿ ವಿಜ್ರಂಭಿಸಿದ್ದ ಏಲಕ್ಕಿ ಇಂದು ಕಟ್ಟೆರೋಗದಂತಹ ಸಮಸ್ಯೆಗಳಿಗೆ ಸಿಲುಕಿ ವಿಜ್ಞಾನಿ ಗಳಿಂದ ಬಿಡಿಸಲಾಗದ ಕಗ್ಗಂಟಾಗಿ ಕರ್ನಾಟಕದಲ್ಲಿ ತನ್ನ ಅವನತಿ ಹಿಡಿದಿದೆ.ಇದರೊಂದಿಗೆ ಅದನ್ನೇ ಪ್ರಮುಖ ಬೆಳೆಯಾಗಿ ಆಧರಿಸಿದ್ದ ಕುಟುಂಬಗಳು ದಾರಿ ಕಾಣದೆ ನೆಲಕಚ್ಚುವಂತಾಯಿತು.

ಇದರ ಕುರಿತಾಗಿ #ತೇಜಸ್ವಿಯವರ ವಿಶ್ಲೇಷಣೆಯಲ್ಲಿಯೇ ಹೇಳುವುದಾದರೆ ಏಲಕ್ಕಿ ಬೆಳೆಯ ನಾಶಕ್ಕೂ, ಹವಾಮಾನ ವೈಪರೀತ್ಯಕ್ಕೂ ಸಂಬಂಧವಿದೆ. ಒಂದು ಕಾಲದಲ್ಲಿ ಕಾಡಿನ ನಡುವೆಯೇ ಮಳೆ ಹೆಚ್ಚು ಬೀಳುವ ವಾತಾವರಣದಲ್ಲಿ ಉತ್ತಮ ಇಳುವರಿ ನೀಡುತ್ತಿದ್ದ ಏಲಕ್ಕಿ, ಕ್ರಮೇಣ ಅರಣ್ಯ ನಾಶವಾದಂತೆ ವಿವಿಧ ರೋಗಗಳಿಗೆ ತುತ್ತಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.

ರೋಗ ಮತ್ತು ಅದು ಹರಡುವ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದ ಅವರು ಇದು ಕ್ರಮೇಣ ದೇಶಾದಾದ್ಯಂತ ಏಲಕ್ಕಿ ಬೆಳೆಯನ್ನು ಆವರಿಸುವ ಮುನ್ಸೂಚನೆ ನೀಡಿದ್ದಾರೆ. ರೋಗಗ್ರಸ್ಥ ಗಿಡಗಳು ಇತ್ತ ಸಾಯದೆ, ಅತ್ತ ಬದುಕದೆಯೂ ದಿನ ಹೋದಂತೆ ಸೊರಗಿ ಇಳುವರಿ ಕುಂಟಿತವಾಗುತ್ತಾ ಸಾಗುತ್ತದೆ. ಬೆಳೆಗಾರರು ಗಿಡ ಉಳಿಸಿಕೊಳ್ಳುವ ಸಲುವಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿ ತಿಳಿದವರು,ತಿಳಿಯದವರೂ ಹೇಳಿದ ಒಂದಷ್ಟು ಔಷಧಗಳನ್ನು , ಗೊಬ್ಬರವನ್ನೂ ತಂದು ಸುರಿಯುತ್ತಾ ಕೊನೆಗೆ ಯಾವುದೂ ಸೂಕ್ತ ಫಲಿತಾಂಶ ನೀಡದಿರುವ ಹೊತ್ತಿನಲ್ಲಿ ಏಲಕ್ಕಿ ತಾನು ನಶಿಸುತ್ತಾ, ತನ್ನೊಂದಿಗೆ ಬೆಳೆಗಾರರನ್ನೂ ಸಾಲದ ಶೂಲಕ್ಕೆ ಒಡ್ಡುವಂತೆ ಮಾಡುತ್ತದೆ ಎಂಬ ಅಂಶಗಳು ಅವರ ಬರಹದಲ್ಲಿವೆ.



ಒಂದರ್ಥದಲ್ಲಿ ಇದೊಂದು ಮಾನವ ಆಹ್ವಾನಿಸಿದ ದುರಂತ. ಪರಿಸರ ಹಾಗೂ ಸಾಮಾಜಿಕ ಬದಲಾವಣೆಯನ್ನು ಸೂಕ್ಷವಾಗಿ ಗಮನಿಸಿ ಅವಲೋಕಿಸಿದ ತೇಜಸ್ವಿಯವರು ಸುಮಾರು 36 ವರ್ಷಗಳ ಹಿಂದೆಯೇ ತಮ್ಮ ಚಿದಂಬರ ರಹಸ್ಯ ಪುಸ್ತಕದಲ್ಲಿ ನಮೂದಿಸಿರುವುದು ಆ ವ್ಯಕ್ತಿಯಲ್ಲಿ ಪರಿಸರ, ಹವಾಮಾನ ಬದಲಾವಣೆ, ಅದನ್ನಾಧರಿಸಿದ ಜನಜೀವನದ ಕುರಿತಾಗಿ ಅಡಗಿದ್ದ ಕಾಳಜಿ ಹಾಗೂ ಜ್ನಾನ ಬಂಡಾರವನ್ನು ತೋರುತ್ತದೆ.


  • ಡಾ ಯುವರಾಜ್ ಹೆಗಡೆ, (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW