ರಾಜ್ಯ ಪ್ರಶಸ್ತಿಗೆ ಸೆಡ್ಡು ಹೊಡೆದರಾ “ಪೈಲ್ವಾನ್”..?

 “ಪೈಲ್ವಾನ್ ” ಚಿತ್ರಕ್ಕಾಗಿ ತಮ್ಮನ್ನು 2019 ನೇ ಸಾಲಿನ “ಅತ್ಯುತ್ತಮ ನಟನನ್ನಾಗಿ ಆಯ್ಕೆಮಾಡಿ ಘೋಷಿಸಲಾಗಿದ್ದ ರಾಜ್ಯ ಪ್ರಶಸ್ತಿಯನ್ನು ಚಿತ್ರನಟ ಕಿಚ್ಚ ಸುದೀಪ ನಿರಾಕರಿಸಿದ್ದಾಗಿ ಸುದ್ದಿಯಾಗಿದೆ. ಬಹುಶಃ ರಾಜ್ಯ ಚಲನಚಿತ್ರ ಪ್ತಶಸ್ತಿ ಘೋಷಣೆಯಾದ ನಂತರ ನಿರಾಕರಿಸಿದ ಪ್ರಥಮ‌ ನಾಯಕನಟ ಸುದೀಪ್ ಇರಬಹುದು. ಈ ಕುರಿತು ಲೇಖಕ ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ರಾಜ್ಯ ಪ್ರಶಸ್ತಿಯನ್ನು‌ ನಿರಾಕರಿಸಿರುವ ತಮ್ಮ ಈ ನಿರ್ಧಾರಕ್ಕೆ ಕಾರಣವನ್ನು‌ ನೀಡಿರುವ ಸುದೀಪ್ ” ವೈಯಕ್ತಿಕ ಕಾರಣಗಳಿಂದ ಹಲವು ವರ್ಷಗಳಿಂದ ತಾವು ಪ್ರಶಸ್ತಿಗಳನ್ನು‌ ಸ್ವೀಕರಿಸುವುದನ್ನು ನಿಲ್ಲಿಸಿರುವುದರಿಂದ ” ರಾಜ್ಯಪ್ರಶಸ್ತಿಯನ್ನು‌ ಹಿಂದಿರುಗಿಸಿ, ತಮ್ಮನ್ನು ಗುರುತಿಸಿದ ಆಯ್ಕೆ ಸಮಿತಿಗೂ, ರಾಜ್ಯ ಸರ್ಕಾರಕ್ಕೂ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.

ಇದಿಷ್ಟು 2019ನೇ ಸಾಲಿನ ಅತ್ಯುತ್ತಮ‌ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ನಿರ್ವಿವಾದ ಆಯ್ಕೆಯಲ್ಲಿಯೂ ನಿರಾಕರಣೆಯ ವಿವಾದ ಸುತ್ತಿಕೊಂಡ ಒನ್‌ಲೈನ್ ಸುದ್ದಿ‌.!

ಯಾವುದೇ ಕ್ಷೇತ್ರದ ಒಬ್ಬ ಸಾಧಕನಿಗೆ ಪ್ರಶಸ್ತಿಯೆನ್ನುವುದು ಅವರ ಪ್ರತಿಭೆ, ಅರ್ಹತೆ, ಸಾಧನೆ ಹಾಗೂ ಆ ಕ್ಷೇತ್ರಕ್ಕೆ ಅವರು ನೀಡಿರಬಹುದಾದ ಕೊಡುಗೆಗಳನ್ನು ಗುರ್ತಿಸಿ ನೀಡುವ ಪುರಸ್ಕಾರ. ಒಂದು ರೀತಿಯಲ್ಲಿ‌ ಬೆನ್ನು ತಟ್ಟುವ ಕೆಲಸ.

ಒಬ್ಬ ವ್ಯಕ್ತಿಯ ನಿರ್ವಹಣೆ, ಸಾಧನೆ ಹಾಗೂ ಕೊಡುಗೆಯೆನ್ನುವುದು ಅದೇ ಕ್ಷೇತ್ರದಲ್ಲಿನ ಇತರ ಸ್ಪರ್ಧಿಗಳ ನಿರ್ವಹಣೆಗಿಂತಲೂ ಉತ್ತಮವಾಗಿದೆ, ವಿಶೇಷವಾಗಿದೆ ಎಂಬ ಕಾರಣಕ್ಕಾಗಿಯೇ ಆಯ್ಕೆ ಮಾಡಿ ಗುರುತಿಸುವುದಲ್ಲದೇ , ಹೀಗೆ ಪುರಸ್ಕರಿಸುವುದರಿಂದ ಪ್ತಶಸ್ತಿ ಪುರಸ್ಕೃತರ ಜವಾಬ್ದಾರಿ ಹೆಚ್ಚುವ ಮೂಲಕ ಅವರಿಂದ ಮತ್ತಷ್ಟು ಹೆಚ್ಚಿನ ಸಾಧನೆಗೆ ಪ್ರೇರಣೆಯಾಗಿ ಆಯಾ ಕ್ಷೇತ್ರ ಇನ್ನಷ್ಟು ಬೆಳಗಲಿ ” ಎಂಬ ಸರಳ ಕಾರಣಕ್ಕೆ‌ ಪ್ರಶಸ್ತಿಗಳನ್ನು‌ ನೀಡುತ್ತಾ ಬಂದಿದ್ದಾರೆ.

ಫೋಟೋ ಕೃಪೆ :google

ಇದೇ ಸಾಲಿನಲ್ಲಿ ಕನ್ನಡ ಚಲನಚಿತ್ರಗಳ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ಯಮವಾದದ್ದನ್ನು ಪ್ರತೀ ವರ್ಷವೂ ಆಯ್ಕೆ ಮಾಡಿ ಪುರಸ್ಕರಿಸಿ ಗೌರವಿಸುವ ಪ್ರೋತ್ಸಾಹಿಸುವ ಕೆಲಸವನ್ನು ನಿಯಮಿತವಾಗಿ ಅಲ್ಲದಿದ್ದರೂ ರಾಜ್ಯ ಸರ್ಕಾರಗಳು ಮಾಡಿಕೊಂಡು ಬಂದಿವೆ. ಮೇಲಾಗಿ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿಯೆನ್ನುವುದು ಇತರೆ ಯಾವುದೇ ಪ್ರಶಸ್ತಿಗೆ ಹೋಲಿಸಿದಲ್ಲಿ ಹೆಚ್ಚು ತೂಕ ಮತ್ತು ಘನತೆಯುಳ್ಳದ್ದು.

ಹೀಗಿರುವಾಗ ಕಿಚ್ಚ ಸುದೀಪ್ ತಮಗೆ ಘೋಷಣೆಯಾಗಿದ್ದ ಅತ್ಯುತ್ತಮ‌ ನಟ ಪುರಸ್ಕಾರವನ್ನು ನಿರಾಕರಿಸಿರುವುದು ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತದೆ.

ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದು ಅಥವಾ ನಿರಾಕರಿಸುವುದು ಸುದೀಪ್ ರ ವೈಯಕ್ತಿಕ ನಿರ್ಧಾರ. ಅದನ್ನು ತಾಂತ್ತಿಕವಾಗಿ ಗೌರವಿಸುವುದು ಕರ್ತವ್ಯ. ಆದರೆ ನಿರಾಕರಣೆಗಾಗಿ ಅವರು ಕೊಟ್ಟಿರುವ ಕಾರಣದಲ್ಲಿ ಅಂತಹ ಸ್ಪಷ್ಟತೆಯಿಲ್ಲ. ಸುದೀಪ್ ರವರು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ ಎನ್ನುವುದನ್ನು ಈ ಮೊದಲು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಂತೆ ಅಥವಾ ಘೋಷಿಸಿದಂತೆ ಕಂಡುಬಂದಿಲ್ಲ. ಅಲ್ಲದೇ ಈ‌ ಬಗ್ಗೆ ಅವರನ್ನು‌ ಒಬ್ಬ ಕಲಾವಿದನಾಗಿ ಇಷ್ಟಪಡುವವರಿಗೂ, ಅವರ ಅಭಿಮಾನಿಗಳಿಗೂ‌ ಸಹಾ ತಿಳಿದಿರಲಿಲ್ಲ.

ಒಂದೊಮ್ಮೆ ತಮ್ಮ‌ ಈ ನಿರ್ಧಾರದ ಬಗೆಗೆ ಆಯ್ಕೆ ಸಮಿತಿಗೆ ಮೊದಲೇ ಗೊತ್ತಿದ್ದಲ್ಲಿ ಅವರು ಸುದೀಪ್ ರನ್ನು ಪರಿಗಣಿಸಲು ಹೋಗುತ್ತಲೇ ಇರಲಿಲ್ಲ. ಹೀಗಾಗಿ ಅಂತಹ ನಿರ್ಧಾರವೇನಾದರೂ‌ ಇದ್ದಲ್ಲಿ ಅದನ್ನು ಅಧಿಕೃತವಾಗಿ ದಾಖಲಾಗುವ ಹೇಳಿಕೆಯಿಂದ ಅಥವಾ ಪತ್ರ ಮುಖೇನ ರಾಜ್ಯ ಸರ್ಕಾರಕ್ಕೂ ಹಾಗೂ ಚಲನಚಿತ್ರ ಪ್ರಶಸ್ತಿ ಪುರಸ್ಕರಿಸುವ ಪ್ರಮುಖ ಸಂಸ್ಥೆಗಳಿಗೂ ಅವರು ತಿಳಿಸಬಹುದಿತ್ತು. ಆಗ ಇವರ ನಿರ್ಧಾರವನ್ನು ಗೌರವಿಸಿ ಸುದೀಪ್ ರನ್ನು ಪ್ರಶಸ್ತಿ ಆಯ್ಕೆಯಿಂದ ಹೊರಗಿಡಬಹುದಿತ್ತು. ಈಗ ಪ್ರಶಸ್ತಿ ಘೋಷಣೆಯಾದ ನಂತರ ಹೀಗೆ ನಿರಾಕರಣ ಮಾಡುವುದು ಆಯ್ಕೆ ಸಮಿತಿ , ರಾಜ್ಯಸರ್ಕಾರ ಹಾಗೂ ಅವರನ್ನು ಮೆಚ್ಚಿಕೊಳ್ಳುವರಿಗೆ ನಿರಾಶೆಯನ್ನುಂಟು ಮಾಡಿರುವುದಂತೂ ನಿಜ.

” ತಮಗೆ ಘೋಷಣೆಯಾದ ಪ್ರಶಸ್ತಿಯನ್ನು ಮತ್ತೊಬ್ಬ ಅರ್ಹ‌ನಟರಿಗೆ ಕೊಡಿ ” ಎಂದಿರುವ ಸುದೀಪ್ ರ ಸೌಜನ್ಯವನ್ನು‌ ಮೆಚ್ಚಬಹುದಾದರೂ, ಒಂದೊಮ್ಮೆ‌ಈಗ‌ ಸುದೀಪ್ ರ ಸ್ಥಾನದಲ್ಲಿ ಬೇರೊಬ್ಬನನ್ನು ಆಯ್ಕೆ ಮಾಡಿದಲ್ಲಿ , ” ಒಬ್ಬ ನಟ ನಿರಾಕರಿಸಿದ್ದರಿಂದಲೇ ತನಗೆ ಈ ಪ್ರಶಸ್ತಿ ಸಿಕ್ಕಿರುವುದು” ಎಂಬ ಭಾವನೆ‌ ಹಾಗೆ ಆಯ್ಕೆಯಾದ ನಟನಲ್ಲಿ ಕೀಳರಿಮೆಗೆ , ಅವಮಾನಕ್ಕೆ ಕಾರಣವಾಗುವುದಿಲ್ಲವೇ..?

ಸುದೀಪ್ ರ‌ ಈ‌ ನಡೆಯಲ್ಲಿ ಗೌಪ್ಯತೆ, ಅಸ್ಪಷ್ಟತೆ, ಸೌಜನ್ಯ, ಭಿನ್ನತೆಯ ಗೀಳು, ಅಸಮಾಧಾನ ಹಾಗೂ ಸ್ಪಲ್ಪಮಟ್ಟಿನ ಅಧಿಕಾರಯುತ ವರ್ತನೆಗಳ ಎಲ್ಲಾ ಅಂಶಗಳೂ ಅಲ್ಲಲ್ಲಿ ಮೆತ್ತಿಕೊಂಡಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬರುತ್ತದೆ.

ಆಯ್ಕೆ ಸಮಿತಿಗಳು ಇನ್ನು‌ಮುಂದೆ ಇಂತಹ‌ ವಿಚಾರದಲ್ಲಿ‌ ಮುನ್ನೆಚ್ಚರ ವಹಿಸುವುದು ಒಳ್ಳೆಯದು.

ಫೋಟೋ ಕೃಪೆ :google

* ಮರೆಯುವ ಮುನ್ನ *

ಯಾವುದೇ ಒಂದು ದುರುದ್ದೇಶವಿರದ ಪ್ರಶಸ್ತಿ ,ಪುರಸ್ಕಾರ ಇತ್ಯಾದಿಗಳಿಗೆ ಅದರದ್ದೇ ಆದ ಮೌಲ್ಯಗಳಿರುತ್ತವೆ. ಮೇಲಾಗಿ ಅವುಗಳ ಗುರುತಿಸುವಿಕೆ ಮತ್ತು ಆಯ್ಕೆಗಾಗಿ ಸಾಕಷ್ಟು ‌ಮಾನವ ಶ್ರಮ , ಜನರ ತೆರಿಗೆ ಹಣ ಎಲ್ಲವನ್ನೂ ವಿನಿಯೋಗಿಸಲಾಗಿರುತ್ತದೆ ಎಂಬುದನ್ನು ಯಾರೂ ಮರೆಯಬಾರದು.

ಹೀಗಿರುವಾಗ ಇನ್ನು ಮುಂದೆ ರಾಜ್ಯಸರ್ಕಾರ ಯಾವುದೇ ಪ್ರಶಸ್ತಿಗೆ ಯಾರನ್ನಾದರೂ ಆಯ್ಕೆ ಮಾಡುವ ಮುನ್ನ. ಆಯಾ ಕ್ಷೇತ್ರದ ಯಾವುದೇ ಸಾಧಕನ‌ ಅಥವಾ ಸಂಬಂಧಿಸಿದವರಿಂದ ” ತಮ್ಮನ್ನು ಈ ಪ್ರಶಸ್ತಿಗೆ ಪರಿಗಣಿಸದಿರುವಂತೆ ” ಮನವಿಗಳೇನಾದರೂ ಇವೆಯೇ ಎಂಬುದಕ್ಕೆ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಅದನ್ನು ದಾಖಲೆಯನ್ನಾಗಿಟ್ಟುಕೊಳ್ಳುವುದು ಒಳ್ಳೆಯದು. ಅಂತಹ ಸಂಧರ್ಭದಲ್ಲಿ ಕೊನೇಪಕ್ಷ ಇತರೆ ಅರ್ಹರಿಗಾದರೂ ಅವರ ಅರ್ಹತೆ ಮೇರೆಗೆ ಪುರಸ್ಕಾರ ಸಿಕ್ಕಿದ ತೃಪ್ತಿ ಇರುತ್ತದೆ.

ಸುದೀಪ್ ರ ರಾಜ್ಯ ಪ್ರಶಸ್ತಿಯ ನಿರಾಕರಣೆಯ ನಿರ್ಧಾರ ಸರಿಯೋ ತಪ್ಪೋ ಎನ್ನುವುದಕ್ಕಿಂತ ಒಂದುವೇಳೆ ಅವರ‌ ವೈಯಕ್ತಿಕ ನಿರ್ಧಾರವನ್ನು ‌ಮೊದಲೇ ಅಧಿಕೃತವಾಗಿ, ಸಮಂಜಸವಾಗಿ, ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಲ್ಲಿ ಅದಕ್ಕೆ ಹೆಚ್ವು ಮೈಲೇಜು ಸಿಗದೇ ಇದ್ದರೂ ಅದು ಹೆಚ್ಚು ಸಜ್ಜನಿಕೆ ಲೇಪಿತ ಔಚಿತ್ಯಪೂರ್ಣವಾಗಿರುತ್ತಿತ್ತು .

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×