‘ಪ್ರೇಮದ ಕಾಣಿಕೆ’ ಸಣ್ಣಕತೆ…

ಖ್ಯಾತ ಇತಿಹಾಸಕಾರರಾದ ಧರ್ಮೇಂದ್ರ ಕುಮಾರ್ ಅವರ ಎಂಭತೊಂಭತ್ತನೇ ಇಸವಿಯಲ್ಲಿ ನಡೆದ ಪ್ರೇಮಕತೆಯ ನೆನಪಿದು. ಆಗ ಧರ್ಮೇಂದ್ರ ಕುಮಾರ್ ಅವರಿಗೆ ಹತ್ತೊಂಭತ್ತು… ಅವರ ಪ್ರೇಯಸಿಗೆ ಬರಿ ಹದಿನಾರು. ಹದಿಹರೆಯದಲ್ಲಿ ಹುಟ್ಟಿದ ಪ್ರೀತಿ ಅವರ ಜೀವನದಲ್ಲಿ ಏನ್ ಮಾಡ್ತು…ತಪ್ಪದೆ ಓದಿ ಧರ್ಮೇಂದ್ರ ಕುಮಾರ್ ಅವರ ಪ್ರೇಮ ಕತೆ…

ಜೆಸಿಇ ಕಾಲೇಜಿನ ಮುಂದೆ ಬಸ್ಸಿಳಿದು ಕಾಲೇಜಿನ ಮುಖ್ಯದ್ವಾರಕ್ಕೆ ನಮಸ್ಕರಿಸಿ ನಿಧಾನವಾಗಿ ಒಳಹೊಕ್ಕು ಕಡಿದಾದ ರಸ್ತೆಯನ್ನು ಏದುಸಿರು ಬಿಡುತ್ತಾ ಏರಿ ಸ್ವಲ್ಪ ಮುಂದಕ್ಕೆ ಬಂದ್ರೆ ಬಲಗಡೆಗೆ ನಾವು ಭೂತ್ ಬಂಗ್ಲೆ ಅಂತ ಹೆಸರಿಟ್ಟಿದ್ದ ಏನ್ ಸಿ ಸಿ ಆಫೀಸು ಎಡಕ್ಕೆ ಬ್ಯಾಸ್ಕೆಟ್ ಬಾಲ್ ಗ್ರೌಂಡ್… ಹಾಗೇ ಮುಂದಕ್ಕೆ ಬಂದ್ರೆ ಎಡಗಡೆಗೆ ಕ್ಯಾಂಟೀನ್ , ಬಲಕ್ಕೆ ಆಗಷ್ಟೇ ಕಟ್ಟುತ್ತಿದ್ದ ಕಾಲೇಜಿನ ಸ್ವಾಗತ ಕಟ್ಟಡ… ಇನ್ನೂ ಎರಡು ಹೆಜ್ಜೆ ಹಾಕಿದ್ರೆ ಎಡಕ್ಕೆ ಹುಡುಗರ ಎದೆಬಡಿತ ಏರಿಸುತ್ತಿದ್ದ ಹುಡುಗೀರ ಪಾಲಿಟೆಕ್ನಿಕ್ಕು… ಆ ಕಡೆಗೆ ಆಸೆಗಣ್ಣುಗಳಿಂದ ನೋಡುತ್ತಾ ಇನ್ನೊಂದ್ ಹತ್ ಹೆಜ್ಜೆ ಹಾಕಿದ್ರೆ ಧುತ್ತನೆ ಎದುರಾಗೋದೇ… ಗಣಪತಿ ಗುಡಿ…

ಬೆಳಗಿನ ಏಳೂ ಕಾಲು…

ಎಂಭತೊಂಭತ್ತನೇ ಇಸವಿ ಅದು… ಕಾಲೇಜಿನ ತುಂಬೆಲ್ಲ ಸಣ್ಣಗೆ ಹಿಮ ಸುರಿಯುತ್ತಿತ್ತು… ಎಂಥ ಅರಸಿಕನೆಡೆಯಲ್ಲೂ ಮನ್ಮಥನ ಸುಮಬಾಣ ಹೆದೆಯೇರುವಂಥ ಪ್ರಕೃತಿ… ಮೆಲ್ಲನೆ ಬೀಸುತ್ತಿದ್ದ ಕುಳಿರ್ಗಾಳಿಗೆ ವಯ್ಯಾರದಿಂದ ತೂಗುತ್ತಿದ್ದ ಕೆಂಗುಲಾಬಿ , ಸೇವಂತಿ , ನಂದಬಟ್ಟಲು … ಸ್ವರ್ಗಸಮಾನ ಭೂರಮೆ… ಒಳಗೆ ಘಮ್ಮನೆ ಕುಳಿತಿದ್ದ ಗಣಪನಿಗೆ ಧೂಪದಾರತಿ… ಗುಡಿಯ ಹಿಂಭಾಗದ ಕಟ್ಟೆಯಲ್ಲಿ ಕುಳಿತಿದ್ದ ನಾನು ಮತ್ತು ಅವಳು… ಆಗ ನನಗೆ ಹತ್ತೊಂಭತ್ತು… ಅವಳಿಗೆ ಬರಿ ಹದಿನಾರು…

ಅವಳು ಮಾಲತಿ… ನನ್ನ ಗೆಳತಿ… ಅವತ್ತಿಗೆ ನನ್ನ ಕನಸು, ಮುಂಜಾವಿನ ಹೂವು, ಎದೆಯ ಬಡಿತ, ನನ್ನ ಆವತ್ತಿನ ದಿನಗಳ ಪ್ರತಿಕ್ಷಣಗಳಲ್ಲೂ ಜತೆಯಾಗಿದ್ದವಳು.

ತಲೆಗೂದಲಿಗೆ ಹಾಕಿದ್ದ ಸೀಗೇಪುಡಿಯ ಘಮಲು ನನ್ನೆದೆಯೊಳಗೆಲ್ಲ ವ್ಯಾಪಿಸಿತ್ತು… ಅವಳ ಕಾಲ ಹೆಬ್ಬೆರಳು ಮಣ್ಣಿನಲ್ಲಿ ಆಡುತ್ತಿತ್ತು… ಭುಜಕ್ಕೆ ಭುಜ ಬೆಸೆದಿತ್ತು… ನನ್ನನ್ನೇ ಆತುಕೊಂಡು ಎದೆಗೊರಗಿ ಅರ್ಧ ಮುಚ್ಚಿದ ಕಣ್ಣುಗಳಿಂದ ನನ್ನನ್ನೇ ನೋಡುತ್ತಾ…

ಯಾಕೋ ಗೊತ್ತಿಲ್ಲ.. ಭಯ ಆಗ್ತಾ ಇದೆ.

ಹೌದಾ… ಹಾಗಾದ್ರೆ ನಾನೇ ಬಂದು ಮಾತಾಡ್ತೀನಿ.

ಬೇಡ ಬೇಡ…

ಮತ್ತೇ , ನಿಮ್ಮಪ್ಪ ಒಳ್ಳೆಯವ್ರು ಅಂದ್ಯಲ್ಲೇ… ಇನ್ಯಾಕೆ ಭಯ.

ಅಪ್ಪ ತುಂಬಾ ಸ್ವೀಟು… ಅಮ್ಮನ್ನ ನೆನೆಸಿಕೊಂಡ್ರೆ ಗಡಗಡ…

ಒಂದ್ ಕೆಲಸ ಮಾಡೋಣ… ಬರೋ ಸೋಮವಾರಕ್ಕೆ ತಾನೇ ನಿನ್ನ ಕೊನೆ ಪೇಪರ್ರು… ಅದಾದ್ಮೇಲೆ ಒಂದ್ ತಿಂಗಳು ಟೈಮ್ ತೊಗೊಂಡು ಅವ್ರನ್ನ ಒಪ್ಪಿಸೋದಕ್ಕೆ ಟ್ರೈ ಮಾಡು… ಆಗ್ಲಿಲ್ಲ ಅಂದ್ರೆ ನಾನೇ ಬರ್ತೀನಿ.

ಸುಮ್ಮನೆ ಹ್ಞೂಗುಟ್ಟಿದಳು…

ತಿಂಗಳಾಯಿತು… ಎರಡಾಯಿತು… ಮೂರಾಯಿತು.. ಇವಳು ಪತ್ತೇನೆ ಇಲ್ಲ… ಓಹೋ , ಇದು ಹೀಗೆ ಬಿಟ್ರೆ ಆಗಲ್ಲ ಅಂದ್ಕೊಂಡು ಒಂದಿನ ಅವಳ ಮನೆ ಹತ್ರ ಹೋಗೋಣ ಅಂತ ಸಿದ್ಧವಾಗಿ ಇನ್ನೇನು ನನ್ನ ಮೊಪೆಡ್ದು ಹತ್ತಬೇಕು… ಬೀದಿಯ ತಿರುವಿನಲ್ಲಿ ಕಾಣಿಸಿದಳು… ನನ್ನೆದೆ ಬಡಿತ ಏರಿತ್ತು… ಮುಖ ಊರಗಲ ಆಗಿತ್ತು… ಓಡಿಹೋಗಿ ಅವಳನ್ನ ತಬ್ಬಿಕೊಳ್ಳೋ ಅಷ್ಟು ಖುಷಿಯಾಗಿತ್ತು… ಆದರೆ ಬಂದವಳ ಮುಖದಲ್ಲಿ ಆತಂಕವಿತ್ತು… ಕ್ಷಣಕಾಲ ಅವಳನ್ನೇ ದಿಟ್ಟಿಸಿದೆ…

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)

ಅವಳ ಕಣ್ಣಾಲಿಗಳಲ್ಲಿ ತುಂಬಿನಿಂತ ನೀರು, ನಿಸ್ತೇಜ ಮುಖ, ನಡುಗುವ ಕೈಗಳಲ್ಲಿ ಹಿಡಿದಿದ್ದ ಮದುವೆಯ ಕರೆಯೋಲೆ… ಎದುರಿಗೆ … ಆಗುತ್ತಿದ್ದುದನ್ನು ಅರಗಿಸಿಕೊಳ್ಳಲಾರದ ಅಸಹಾಯಕತೆಯಿಂದ ಚಡಪಡಿಸುತ್ತಿದ್ದ ನಾನು… ಅಡುಗೆಮನೆಯ ಬಾಗಿಲಲ್ಲಿ ನಿಂತ ಅಮ್ಮನ ಮುಖದಲ್ಲಿ ಕಿರುನಗೆ… ಕಣ್ಣುಗಳಲ್ಲಿ ಕುತೂಹಲ… ಅಲ್ಲೇ ಚಾಪೆಯ ಮೇಲೆ ಕೂತು ಪೇಪರ್ ಓದುತ್ತಿದ್ದ ಸ್ಥಿತಪ್ರಜ್ಞ ಅಪ್ಪ… ಅದು ನಮ್ಮ ಅಗ್ರಹಾರದ ಮೂರನೇ ಕ್ರಾಸಿನ ಮೂರಂಕಣದ ಬಾಡಿಗೆ ಮನೆ…

ಕಸಿಯು ಮರವಾಗಿ, ಮೊಗ್ಗು ಹೂವಾಗಿ, ಕಾಯಿ ಹಣ್ಣಾಗಿ ಫಲ ಕೈಗೆ ಬರುವ ಹೊತ್ತಿನಲ್ಲಿ ಅವಳ ಅಮ್ಮ ಉಗ್ರರೂಪಿಯಾಗಿ, ದುರ್ಗಿಯಾಗಿ, ಚಂಡಿಯಾಗಿ ಚಾಮುಂಡಿಯಾಗಿ ಇವಳನ್ನು ಹೆದರಿಸಿ ಬೆದರಿಸಿ ಕೊನೆಗೆ ಅತ್ತೂ ಕರೆದು ದಕ್ಕಿಸಿಕೊಂಡು ಅವಳ ಓದಿಗೆ ತಿಲಾಂಜಲಿ ಇಡಿಸಿ ರಾತ್ರೋರಾತ್ರಿ ತಮ್ಮ ಕಡೆಯ ಸಂಭಂದವೊಂದನ್ನು ಗೊತ್ತುಮಾಡಿ ಇವಳ ಇಷ್ಟಾನಿಷ್ಟಗಳನ್ನೂ ಲೆಕ್ಕಿಸದೆ ಮಾಡುವೆ ಗೊತ್ತು ಮಾಡಿ ನಮ್ಮಿಬ್ಬರ ಕನಸುಗಳಿಗೆ ಮಣ್ಣು ತೂರಿ ಬಿಟ್ಟಿದ್ದಳು…

ಮೌನವಾಗಿ ರೋಧಿಸುತ್ತಾ ಕಾಗದ ಕೊಟ್ಟು ಹೊರಟ ಇವಳನ್ನು ಬೀದಿಯ ಕೊನೆಯಲ್ಲಿ ಮರೆಯಾಗುವವರೆಗೂ ನೆಟ್ಟ ನೋಟದಿಂದ ನೋಡುತ್ತಾ ನಿಂತಿದ್ದೆ… ತಿರುವಿನಲ್ಲಿ ನಿಂತು ಕ್ಷಣಕಾಲ ನನ್ನನ್ನೇ ನೋಡಿ ನಿಧಾನವಾಗಿ ಮರೆಯಾಗಿಬಿಟ್ಟಳು… ಬದುಕಿನಿಂದಲೂ ಕೂಡ…

ಇದಾಗಿ ಮೂವತ್ತು ವರ್ಷ ಆಯ್ತು… ಈಗೊಂದು ವಾರದ ಕೆಳಗೆ ದೀಪಕ್ ಕಾಲ್ ಮಾಡಿದ್ದ… ನನ್ನ ಜತೆ ಕೆಲಸ ಮಾಡಿದ್ದ ಚುರುಕುಗಣ್ಣಿನ ಮಂಡ್ಯದ ಹುಡುಗ…

ಅಣ್ಣಾ…

ಏನಮ್ಮಾ ಪತ್ತೇನೆ ಇಲ್ಲ… ಎಲ್ಲಿದಿಯಾ ಈಗ.

ಇದ್ಯಾಕಣ್ಣ , ಮರ್ತುಬಿಟ್ರಾ… ನೀವೇ ಆಲ್ವಾ ನನ್ನನ್ನ ಮಸ್ಕತ್ತಿಗೆ ಹೋಗು ಅಂತ ಕಳಿಸಿದ್ದು.

ಹ್ಹ ಹ್ಹ ಹ್ಹ , ಸುಮ್ನೆ ಡವ್ ಮಾಡಿದೆ ದೀಪು… ಹೇಳು ಹೆಂಗಿದೀಯಾ , ಯಾವಾಗ್ ಬಂದೆ.

ಅಣ್ಣಾ , ನಿಮ್ಮನ್ನ ಮೀಟ್ ಮಾಡ್ಬೇಕು.

ಬಾ ಮತ್ತೇ… ನಾಗರಭಾವಿಯ ನಮ್ಮೂರ ತಿಂಡಿ ಹತ್ರ ಬಂದುಬಿಡು.

ಅರ್ಧ ಘಂಟೆ ಕಳೆಯಿತು… ಹೋಟೆಲಿನ ಮೆಟ್ಟಿಲ ಮೇಲೆ ಕಾಫಿಯ ಗ್ಲಾಸಿನೊಂದಿಗೆ ಕೂತಿದ್ದ ನನಗೆ ಉಬರ್ ನಿಂದ ಇಳಿಯುತ್ತಿದ್ದ ದೀಪಕ್ ಕಾಣಿಸಿದ…. ಬಂದವನೇ ತಾನೂ ಒಂದು ಕಾಫಿಯ ಕಪ್ಪು ಹಿಡಿದು ಬಂದು ಪಕ್ಕದಲ್ಲೇ ಕುಳಿತ.

ಏನೋ ಹುಡುಗಾ , ಹೆಂಗಿದೀಯಾ..

ನೋಡಿ ಅಣ್ಣಾ ಹಿಂಗಿದೀನಿ… ಮದ್ವೆ ಮಾಡ್ಕೋಬೇಕು ಅಂದ್ಕೊಂಡಿದೀನಿ.

ಶಭಾಷ್… ಹುಡುಗಿ ಯಾರೋ

ರೇವತಿ ಅಂತ ಕ್ಲಾಸ್ಮೆಟು.. ಇಲ್ಲೇ ಬೆಂಗಳೂರಿನಲ್ಲೇ ಕೆಲಸ ಮಾಡ್ತಾಳೆ.

ಗುಡ್ ಮದ್ವೆ ಯಾವಾಗ.

ಅಲ್ಲೇ ಅಣ್ಣಾ ಕಿರೀಕ್ಕೂ … ಅವರ ಮನೇಲಿ ಓಕೇ… ಆದ್ರೆ ನಮ್ಮನೇಲಿ ಒಪ್ತಾ ಇಲ್ಲ… ಅದಿಕ್ಕೆ ರಿಜಿಸ್ಟರ್ ಮ್ಯಾರೇಜ್ ಆಗೋಣ ಅಂತಿದೀನಿ , ವೀಸಾಗೂ ಹೆಲ್ಪ್ ಆಗುತ್ತೆ… ನೀವೇ ಬಂದು ಸೈನ್ ಹಾಕ್ಬೇಕು.

ಇಂಥಾ ಮನೆಹಾಳು ಕೆಲ್ಸಕ್ಕೆಲ್ಲಾ ನಾನ್ ಯಾವಾಗ್ಲೂ ರೆಡಿ ಕಣೋ… ಡೇಟ್ ಫಿಕ್ಸ್ ಮಾಡು.

ಮೊನ್ನೆ ರಾಜರಾಜೇಶ್ವರಿ ನಗರದ ಸಬ್ ರೆಜಿಸ್ಟ್ರಾರ್ ಆಫೀಸಿನ ಮುಂದೆ ನಿಂತಿದ್ದ ನನಗೆ ಮದುವಣಗಿತ್ತಿಯ ಅಲಂಕಾರದಲ್ಲಿ ಕಾರಿನಿಂದಿಳಿಯುತ್ತಿದ್ದ ಹುಡುಗಿ ಕಾಣಿಸಿದ್ಲು… ಜತೆಯಲ್ಲೇ ಅವಳ ಅಪ್ಪ ಅಮ್ಮ… ಪಕ್ಕದಲ್ಲೇ ನಿಂತಿದ್ದ ದೀಪು ಸಂಭ್ರಮದಿಂದ ಅಣ್ಣಾ ಬಂದ್ಲು ನೋಡಿ, ಅಂದವನೇ ಓಡಿ ಹೋಗಿ ಕರೆತಂದ…

ಇವ್ರು ನಮ್ಮಣ್ಣ ಅಂತ ಪರಿಚಯ ಮಾಡಿಸಿದ.

ನಮಸ್ತೆ ಅಂಕಲ್ ಅಂತು ಆ ಹೆಣ್ಣುಮಗು..

ಮುಗುಳ್ನಕ್ಕು ತಲೆ ನೇವರಿಸಿದೆ… ಎಲ್ಲಮ್ಮ ನಿಮ್ಮಪ್ಪ ಅಮ್ಮ … ಕೇಳಿದೆ.

ಇಲ್ಲೇ ಇದಾರೆ ನೋಡಿ ಅಂಕಲ್ … ಆಲ್ಮೋಸ್ಟ್ ಅವರಪ್ಪನ ಕೈ ಹಿಡಿದು ಎಳಕೊಂಡೆ ಬಂದ್ಲು.

ನಮಸ್ಕಾರ ಸರ್ , ನಾನು ಮಧು ಅಂತ ರೇವತಿ ತಂದೆ , ಇವಳು ನನ್ನ ಬೆಟರ್ ಹಾಫು ಮಾಲತಿ….ಅವಳತ್ತ ತಿರುಗಿದೆ…ಮಾಲತಿ… ನನ್ನನ್ನು ತೊರೆದು ಹೋದ ಅದೇ ಮಾಲತಿ… ಮೂವತ್ತು ವರ್ಷ ಆದ್ಮೇಲೆ ನನ್ನ ಕಣ್ಮುಂದೆ ನಿಂತಿದ್ಲು…

ಸಣ್ಣದೊಂದು ನಗೆ ನಕ್ಕು ಕೇಳಿದೆ… ಹೆಂಗಿದೀಯಾ…

ಭುಜ ಕುಣಿಸಿ ಫೈನ್ ಅಂದ್ಲು.

ಪರವಾಗಿಲ್ವೇ … ಪ್ರೀತಿಸಿರೋ ಮಗಳನ್ನ ಸಪೋರ್ಟ್ ಮಾಡಿದಿರಲ್ಲಾ ಭೇಷ್… ಕೆಣಕಿದೆ.

ನನಗಾದ ಅನ್ಯಾಯ ಅವಳಿಗೂ ಆಗಬಾರದಲ್ಲ… ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡಿದಾರೆ… ಚೆನ್ನಾಗಿ ಬಾಳಾಟ ಮಾಡ್ತಾರೆ ಅನ್ನೋ ನಂಬಿಕೆ ನನಗಿದೆ… ನನಗಂತೂ ಆ ಅದೃಷ್ಟ ಇರಲಿಲ್ಲ… ಅವಳಾದರೂ ಇಷ್ಟಪಟ್ಟೋನ ಜೊತೆ ಚೆನ್ನಾಗಿರಲಿ ಬಿಡು.. ತಿಳಿನಗೆ ನಕ್ಕು ಹೇಳಿದ್ಲು.

ಒಮ್ಮೆ ಎದೆ ಸವರಿಕೊಂಡೆ… ಅಷ್ಟರಲ್ಲಿ ಯಾರದ್ದೋ ಕಾಲರ್ ಟ್ಯೂನು ಹಾಡ್ತಾ ಇತ್ತು….

ಸಪ್ತಪದಿ ಈ ನಡೆಯಾಯ್ತು

ಸಂಜೆರಂಗು ಆರತಿಯಾಯ್ತು

ಇಂದೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು…


  • ಧರ್ಮೇಂದ್ರ ಕುಮಾರ್ – ಖ್ಯಾತ ಇತಿಹಾಸಕಾರರು, ವಾಗ್ಮಿಗಳು, ಲೇಖಕರು

 

 

Leave a Reply

Home
Search
Menu
Recent
About
×