ಮಾನಸ….ಇದು ಮನಸಿನ ಮಾತು (ಭಾಗ-೪೨)

ಮಧ್ಯಮ ವರ್ಗದ ಕುಟುಂಬದಲ್ಲಿ ಅರವತ್ತರ ನಂತರ, ಜೀವನ ಸವಾಲುಗಳು ಮತ್ತು ಸುಖ ದುಃಖಗಳು ಪುರುಷರಿಗೂ ಮತ್ತು ಮಹಿಳೆಯರಿಗೂ ಸಮಾನವಾಗಿರುತ್ತವೆ. ಈ ಸಮಯವನ್ನು ತಮ್ಮ ನೆಚ್ಚಿನ ಹವ್ಯಾಸಗಳಿಗೆ, ಜಾಗೃತ ಜೀವನಶೈಲಿಗೆ, ಮತ್ತು ಹೊಸ ಜ್ಞಾನಕ್ಕೆ ಮೀಸಲಾಗಿಡಬೇಕು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಮುಸ್ಸಂಜೆಯ ಬದುಕಿನಲ್ಲಿ’ ತಪ್ಪದೆ ಮುಂದೆ ಓದಿ…

ನಿಜವಾದ ಬದುಕು ವಯಸ್ಸಾದ ಮೇಲೆಯೇ ಅರ್ಥವಾಗುತ್ತದೆ. ಕೆಲಸಕ್ಕೆ ಹೋಗುವ ಸಮಯದಲ್ಲಿ ದಿನಪೂರ್ತಿ ಆಫೀಸಿನಲ್ಲಿ ಇರಬೇಕಾದ ಸಂದರ್ಭದಲ್ಲಿ ಮಡದಿ / ಗಂಡ ಮಕ್ಕಳು, ಸಂಸಾರ ಹೀಗೆ ಯಾವ ಕಡೆಯೂ ಗಮನಕೊಡಕ್ಕಾಗದೆ ಕೆಲಸದತ್ತ ಮಾತ್ರ ಗಮನವಿರುತ್ತದೆ. ವಯಸ್ಸಿರುವಾಗ ದುಡಿಯಬೇಕು, ಸಂಸಾರ ಸಾಕಬೇಕು ಅನ್ನುವ ಛಲ ಹಾಗು ಕರ್ತವ್ಯಗಳ ನಡುವೆ ಅವರನ್ನು ಅವರು ಸರಿಯಾಗಿ ತಿಳಿದುಕೊಳ್ಳದೇ ಹೋಗುವರು.

ನಿವೃತ್ತಿ ಹೊಂದಿದ ಮೇಲೆ ಕೆಲವರು ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಾಗ, ದಿನ ಬೆಳಗಾದರೆ ಮನೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಡದಿ / ಪತಿ, ವಯಸ್ಸಾದ ತಂದೆ ತಾಯಿ, ಬೆಳೆದು ನಿಂತ ಮಕ್ಕಳು. ಕೆಲವು ಮನೆಗಳಲ್ಲಿ ಮದುವೆಯಾಗದೆ ಉಳಿದು ಬಿಟ್ಟಿರುವ ಹೆಣ್ಣು ಅಥವಾ ಗಂಡುಮಕ್ಕಳು ಕಣ್ಣೆದುರಿಗೆ ಇದ್ದಾಗ ಖಿನ್ನತೆ ಕಾಡುತ್ತದೆ.

ಫೋಟೋ ಕೃಪೆ : google

ಅವರ ಜವಾಬ್ದಾರಿ ಮುಗಿದಿಲ್ಲ ಎಂಬ ಕೊರಗು ಇರುತ್ತದೆ. ಈ ಕೊರಗಿನಿಂದ ದೇಹ ಮನಸಿನ ಆರೋಗ್ಯ ಹಾಳಾಗುತ್ತದೆ. ಅವಮಾನ, ಅಪರಾಧಿ ಭಾವ, ಭಯ, ಆತಂಕ ಹೀಗೆ ಹಲವಾರು ಬಗೆಯಿಂದ ಮನಸಿನ ಸ್ವಾಸ್ಥ್ಯ ಹಾಳಾಗುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ.

ಇದಲ್ಲದೆ ಮಕ್ಕಳಿಗೆ ಮದುವೆಯಾಗಿದ್ದರೂ ಮತ್ತೊಂದು ಸಮಸ್ಯೆ ಕಾಡತೊಡಗುತ್ತದೆ. ಮನೆಯಲ್ಲಿ ಮಗ ಸೊಸೆಯರ ನಡುವೆ ಮನಸ್ಥಾಪ, ಮಗಳು ಅಳಿಯನ ಮನಸ್ಥಾಪ ಕಲಹಗಳು ವಯಸ್ಸಾದ ತಂದೆ ತಾಯಿಯ ಮನಸು ಬಹಳವಾಗಿ ಕಾಡುತ್ತದೆ. ಏನು ಮಾಡಲಾಗದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಅವರ ಆರೋಗ್ಯದಲ್ಲಿ ಏರುಪೇರು, ನಿದ್ರೆ ಇಲ್ಲದಿರುವುದು, ಮನಸಿನ ತುಮುಲ, ಯಾರಲ್ಲೂ ಹೇಳಿಕೊಳ್ಳಲಾಗದೆ ಖಿನ್ನತೆಯಿಂದ ಬಳಲುತ್ತಾರೆ.

ಇನ್ನೂ ಕೆಲವು ಮನೆಯಲ್ಲಿ ಮಕ್ಕಳ ಮದುವೆಯಾಗಿ ನಂತರ ಬಹು ವರ್ಷಗಳ ನಂತರ ಅವರಿಗೆ ಮಕ್ಕಳಾಗದಿರುವುದು ವಯಸಿನ ಸಹಜ ಕಾಯಿಲೆಗಳು ಮನಸಿಗೆ ದುಷ್ಪರಿಣಾಮ ಬೀರಿ ಮನೋವೈದ್ಯರಲ್ಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ಆಸ್ತಿ ವಿಚಾರದಲ್ಲಿಯೂ ತಂದೆ ಮಕ್ಕಳಲ್ಲಿ ಜಗಳ ಪ್ರಾರಂಭವಾಗುತ್ತದೆ. ಹೆಣ್ಣು ಮಕ್ಕಳಿದ್ದರೂ ಸಹ ತಮ್ಮ ಪಾಲು ಕೊಡಲಿಲ್ಲ ಅಥವಾ ಸರಿಯಾಗಿ ಭಾಗ ಮಾಡಲಿಲ್ಲ ಎಂದು ತವರು ಮನೆಗೆ ಬರುವುದನ್ನು ನಿಲ್ಲಿಸಿಬಿಡುತ್ತಾರೆ. ಈ ಎಲ್ಲಾ ಸಮಸ್ಯೆಗಳು ಹಿರಿಯ ಜೀವಗಳಿಗೆ ಮನಸಿಗೆ ಆಘಾತವಾಗಿ ಹೃದಯಘಾತ, ಪಾರ್ಶ್ವ ವಾಯು ಆಗಬಹುದು. ಮೆದುಳಿಗೆ ಅತಿ ಒತ್ತಡವಾಗಿ ನರ ದೌರ್ಬಲ್ಯವಾಗಬಹುದು.

ಅರವತ್ತು ವರ್ಷಗಳ ನಂತರದ ಜೀವನ ಹೆಣ್ಣು ಮತ್ತು ಗಂಡಸಿನ ಪಾಲಿಗೆ ವಿಭಿನ್ನ ರೀತಿಯಲ್ಲಿ ಬದಲಾಗುತ್ತದೆ, ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ. ಇದಕ್ಕೆ ಹಲವಾರು ಸಾಮಾಜಿಕ, ಆರ್ಥಿಕ ಮತ್ತು ಶಾರೀರಿಕ ಅಂಶಗಳು ಪ್ರಭಾವ ಬೀರುತ್ತದೆ. ಮಕ್ಕಳು ದೊಡ್ಡವರಾಗಿ ತಮ್ಮ ಜೀವನದ ಜವಾಬ್ದಾರಿ ಹೊರಲು ಹೊರಟಿರುವುದರಿಂದ ಹೆಣ್ಣಿನ ಕೌಟುಂಬಿಕ ಹೊಣೆಗಾರಿಕೆಗಳ ಪ್ರಮಾಣ ಕಡಿಮೆ ಆಗಬಹುದು. ಆದರೆ ಮೊಮ್ಮಕ್ಕಳನ್ನು ನೋಡಿಕೊಳ್ಳಲು ಅಥವಾ ಮನೆಕಾಯಕದಲ್ಲಿ ನೆರವಾಗಲು ತಾನೇ ಮುಂದಾಗುತ್ತಾಳೆ.

ಮೆನೋಪಾಸ್ ನಂತರ ಮಹಿಳೆಯರಿಗೆ ಆಸ್ಟಿಯೋಪೊರೋಸಿಸ್, ಆಯಾಸ, ಹಾರ್ಮೋನಲ್ ಬದಲಾವಣೆ, ಮತ್ತು ಜೀರ್ಣಕ್ರಿಯಾ ಸಮಸ್ಯೆಗಳಂತಹ ಆರೋಗ್ಯ ಸಂಬಂಧಿ ಅಡಚಣೆಗಳು ಕಂಡುಬರುತ್ತವೆ. ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಹಣದ ಅಭಾವ, ಮಕ್ಕಳ ಮುಂದೆ ಕೈ ಚಾಚುವುದು, ಅಪವಾದ, ನಿಂದನೆ, ಅವಮಾನಗಳಿಗೆ ಗುರಿಯಾಗುವ ಸಾಧ್ಯತೆಯಿಂದ ಕಾಯಿಲೆಯನ್ನು ಮುಚ್ಚಿಡುವ ಸಾಧ್ಯತೆಗಳು ಹೆಚ್ಚು.

ಹಿರಿಯ ಸದಸ್ಯರಾದ್ದರಿಂದ ಕುಟುಂಬ ಮತ್ತು ಸಮಾಜದಲ್ಲಿ ಗೌರವವಿರುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಅವರ ಅಭಿಪ್ರಾಯಗಳನ್ನು ಉದಾಸೀನ ಮಾಡುವ ಸ್ವಭಾವವೂ ಕುಟುಂಬದವರಲ್ಲಿ ಕಂಡುಬರುತ್ತದೆ. ತಮ್ಮ ಆದಾಯದ ಮೂಲ ಕಳೆದುಕೊಂಡು, ಹಣಕಾಸಿನ ವಿಷಯದಲ್ಲಿ ಅವಲಂಬಿತ ಜೀವನಕ್ಕೆ ಬದಲಾಗುವ ಸಾಧ್ಯತೆಗಳು ಬಹಳ ಹೆಚ್ಚಿರುತ್ತದೆ. ಪರಾವಲಂಬಿಯ ಬದುಕು ತಮ್ಮದಾಗಿರುತ್ತದೆ.

ಫೋಟೋ ಕೃಪೆ : google

ಸ್ವಂತ ಸಂಪತ್ತು ಇದ್ದರೂ, ಆರ್ಥಿಕ ಪರಿಸ್ಥಿತಿ, ಒತ್ತಡ, ಸಾಲದ ಬಾಧೆ ನೆಮ್ಮದಿ ಹಾಳುಮಾಡುತ್ತದೆ. ನಿವೃತ್ತಿಯ ನಂತರ ಕೆಲವು ಗಂಡಸರ ಜೀವನದಲ್ಲಿ ಸ್ವಲ್ಪ ಅಸಮಾಧಾನ ಅಥವಾ ಒಂಟಿತನ ಉಂಟಾಗಬಹುದು. ಕೆಲವು ವೇಳೆ ಅವರ ಒಂಟಿತನ ನೀಗಿಸಲು ತಮ್ಮ ಸಮಯವನ್ನು ಮನೆಯ ಸದಸ್ಯರೊಂದಿಗೆ ಕಳೆಯಬೇಕೆಂದು ಅಂದುಕೊಳ್ಳುತ್ತಿರುತ್ತಾರೆ. ಅದು ನೆರವೇರದಿದ್ದಾಗ ಖಿನ್ನತೆ ಕಾಡುತ್ತದೆ.

ಹೃದಯರೋಗ, ಹೈಪರ್ ಟೆನ್ಶನ್, ಮಧುಮೇಹ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಹೆಚ್ಚಾಗುತ್ತವೆ. ಶಾರೀರಿಕ ಶಕ್ತಿ ಮತ್ತು ಉತ್ಸಾಹ ಕಡಿಮೆಯಾಗಬಹುದು. ನಿವೃತ್ತಿಯ ನಂತರ, “ನಾನು ಇನ್ನೂ ಅಗತ್ಯವಿದ್ದವನೇ?” ಎಂಬ ಪ್ರಶ್ನೆ ಬಂದು ಮನಸ್ಸು ಅಶಾಂತಿಯಾಗಬಹುದು. ಎಲ್ಲರಿಂದ ದೂರವಿರುವ ಸಾಧ್ಯತೆ ಹೆಚ್ಚಾಗುತ್ತದೆ.
ತಾನು ಜೀವನದಲ್ಲಿ ಸಾಧಿಸಿದ್ದನ್ನು ಯೋಚಿಸುವ ಛಲ ಮತ್ತೊಮ್ಮೆ ಬಲವಾಗಿ ಮೂಡಬಹುದು, ಆದರೂ ಮಕ್ಕಳಲ್ಲಿ ಮತ್ತು ಮೊಮ್ಮಕ್ಕಳೊಂದಿಗೆ ಒಡನಾಟ ಬೇಕೆನಿಸಿದರೂ ಹೊಸ ತಲೆಮಾರಿನ ಜನರ ಜೀವನಕ್ಕೆ ಹೊಂದಿಕೊಳ್ಳುವುದು ಸವಾಲಾಗಬಹುದು.

ಮಧ್ಯಮ ವರ್ಗದ ಕುಟುಂಬದಲ್ಲಿ ಅರವತ್ತರ ನಂತರ, ಜೀವನ ಸವಾಲುಗಳು ಮತ್ತು ಸುಖ ದುಃಖಗಳು ಇಬ್ಬರಿಗೂ ಸಮಾನವಾಗಿರುತ್ತವೆ. ಆರ್ಥಿಕ ಮತ್ತು ಆರೋಗ್ಯದ ಭದ್ರತೆ ಮುಖ್ಯವಾದುದು. ಕುಟುಂಬದ ಸಂಬಂಧಗಳು ಮತ್ತು ಪರಸ್ಪರ ಒಲವು ಜೀವನವನ್ನು ಸುಖಮಯವಾಗಿಸುತ್ತದೆ. ಈ ಸಮಯವನ್ನು ತಮ್ಮ ನೆಚ್ಚಿನ ಹವ್ಯಾಸಗಳಿಗೆ, ಜಾಗೃತ ಜೀವನಶೈಲಿಗೆ, ಮತ್ತು ಹೊಸ ಜ್ಞಾನಕ್ಕೆ ಮೀಸಲಾಗಿಡಬೇಕು.

ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡುವ ಸವಾಲು ಅರವತ್ತರ ನಂತರ ಬರಬಹುದು. ಕಿರಿಯರು ಅಥವಾ ಹೊಸತಲೆಮಾರಿನ ಮಕ್ಕಳು ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅವರ ಆರೈಕೆ, ಪ್ರೀತಿ ಮಾತುಗಳು, ಮೃದು ನಡತೆ ಹಿರಿಯ ಜೀವಗಳಿಗೆ ಹೊಸ ಚೈತನ್ಯ ತಂದುಕೊಡುತ್ತದೆ. ಅವರನ್ನು ಎಂದಿಗೂ ಅವಮಾನಿಸದೆ ಅವರ ಜೊತೆ ಸಹನೆಯಿಂದ ನಡೆಸಿಕೊಳ್ಳಬೇಕು. ಆರೋಗ್ಯ ತಪಾಸಣೆ, ಔಷಧೋಪಚಾರ ಹಾಗು ಅವರ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ಕಿರಿಯರ ಕರ್ತವ್ಯವಾಗಿದೆ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading