ಪಂಚಾಗ್ನಿ: ಅಂತಃಕರಣದ ನೆಲೆಯಲ್ಲಿ ರೌದ್ರತೆಯ ಅನಾವರಣ

ಹರಿಹರನ್ ಮತ್ತು ಎಂ.ಟಿ ಮಲಯಾಳಂ ಚಿತ್ರರಂಗ ಕಂಡ ಅಪೂರ್ವ ಜೋಡಿ. ಕೂಡು ಕುಟುಂಬಗಳು ಒಡೆಯುತ್ತಿದ್ದ ಕಾಲಘಟ್ಟವಾಗಲಿ, ನಕ್ಸಲ್ ಚಳುವಳಿಯಾಗಲಿ, ಕಾರ್ಮಿಕ ಅಶಾಂತಿಯಾಗಲಿ, ತುರ್ತು-ಪರಿಸ್ಥಿತಿಯ ಕಾಲಘಟ್ಟದ ತಳಮಳವಾಗಲಿ, ಮಲಯಾಳಂ ಸಿನಿಮಾ ಸ್ಪಂದಿಸಿದ ರೀತಿ ಅವಿಸ್ಮರಣೀಯ. ಲೇಖಕ ರಾಘವನ್ ಚಕ್ರವರ್ತಿ ಅವರು ‘ಪಂಚಾಗ್ನಿ’ ಸಿನಿಮಾ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಚಿತ್ರ: ಪಂಚಾಗ್ನಿ
ಭಾಷೆ: ಮಲಯಾಳಂ
ನಿರ್ದೇಶಕ: ಹರಿಹರನ್
ಮೂಲಕಥೆ: ಎಂ.ಟಿ.ವಾಸುದೇವನ್ ನಾಯರ್
ಛಾಯಾಗ್ರಹಣ: ಷಾಜಿ.ಎನ್.ಕರುಣ್
ಮುಖ್ಯಪಾತ್ರಗಳು: ಮೋಹನ್ ಲಾಲ್, ಗೀತಾ, ನಾದಿಯಾ, ತಿಲಕನ್
ಬಿಡುಗಡೆಯಾದ ವರ್ಷ: ೧೯೮೬
೬೦ರ ದಶಕ.

ಕೇರಳದ ಟೀ-ತೋಟಗಳಲ್ಲಿ, ರಬ್ಬರ್ ತೋಟಗಳಲ್ಲಿ ಮಾಲೀಕರ ಅಟ್ಟಹಾಸ ತಾರಕಕ್ಕೇರುತ್ತಿದ್ದ ದಿನಗಳು. ಹಲವು ಕುಟುಂಬಗಳು ಮಾಲೀಕರ ದೌರ್ಜನ್ಯಕ್ಕೆ ಬಲಿಯಾಗಿದ್ದವು. ಆದಿವಾಸಿಗಳ ಮೇಲಿನ ಶೋಷಣೆ ಮಿತಿಮೀರಿತ್ತು. ಸರ್ಕಾರ-ಪೊಲೀಸ್ ವ್ಯವಸ್ಥೆ ಮಾಲೀಕರ ಪರವಿದ್ದುದರಿಂದ ಬಹುತೇಕ ಘಟನೆಗಳು ಮಾಧ್ಯಮಗಳನ್ನು ತಲುಪುತ್ತಿರಲಿಲ್ಲ. ನಿಷ್ಕ್ರಿಯ ವ್ಯವಸ್ಥೆಯೊಂದು ತಮ್ಮ ಕೈಹಿಡಿಯಲಾರದು ಎಂಬುದು ಮನವರಿಕೆಯಾದಾಗ ನಕ್ಸಲೈಟ್ ಸಂಘಟನೆ ಮುನ್ನೆಲೆಗೆ ಬರಲಾರಂಭಿಸಿತು. ಕುಣ್ಣಿಕ್ಕಾಲ್ ನಾರಾಯಣನ್ ಮತ್ತವರ ಪತ್ನಿ ಮಂದಾಕಿನಿ, ಶೋಷಣೆಯ ವಿರುದ್ಧದ ಹೋರಾಟದ ರೂಪು-ರೇಶೆಗಳನ್ನು ನೇಯ್ದು, ನಕ್ಸಲ್ ಚಳುವಳಿಗೆ ಬಲ ತುಂಬಿದರು. ಕೇರಳದ ಉದ್ದಗಲದ ನಿಖರ ಪರಿಚಯವಿದ್ದ ನಾರಾಯಣನ್ ದಂಪತಿಗಳು ನಕ್ಸಲರ ದೊಡ್ಡ ಗುಂಪನ್ನೇ ರೂಪಿಸಿದರು.

ಈ ದಂಪತಿಗಳ ಒಬ್ಬಳೇ ಮಗಳು ಅಜಿತಾ. ಪಿಯುವರೆಗೂ ತಿರುವನಂತಪುರದ ಕಾಲೇಜಿನಲ್ಲಿ ಓದಿದ ಅಜಿತಾ, ಶಿಕ್ಷಣವನ್ನು ಅಲ್ಲಿಗೇ ನಿಲ್ಲಿಸಿ, ನಕ್ಸಲ್ ಚಳುವಳಿಗೆ ಧುಮಿಕಿದರು. ಸಗಾವು ವರ್ಗೀಸ್ ಎಂಬ ಬಿಸಿರಕ್ತದ ಯುವಕನ ಜೊತೆಯಾದರು. ವಯನಾಡ್ ಸುತ್ತಮುತ್ತಲ ನಿರಂತರ, ಅಮಾನವೀಯ ಶೋಷಣೆಗೆ ಸಿಲುಕಿದ್ದ ಆದಿವಾಸಿಗಳ ಹಿತಾಸಕ್ತಿ ಕಾಯುವ ಪಣ ತೊಟ್ಟರು. ಹಿಂಸೆಗೆ ಉತ್ತರ ಹಿಂಸೆಯೇ ಎಂಬ ತತ್ವಕ್ಕೆ ಕಟುಬಿದ್ದ ಅಜಿತಾ-ವರ್ಗೀಸ್, ಶಸ್ತ್ರಾಸ್ತಗಳನ್ನು ಕೈಗೆತ್ತಿಕೊಂಡರು. ಹಲವು ಪೊಲೀಸ್ ಠಾಣೆಗಳ ಮೇಲೆ ಆಕ್ರಮಣಗಳಾದವು.

ನಾರಾಯಣನ್ ರ ಮುಂದಾಳತ್ವದಲ್ಲಿ ಪೊಲೀಸ್ ಠಾಣೆಯೊಂದರ ಮೇಲಿನ ದಾಳಿ ಕೈಕೊಟ್ಟಾಗ, ವರ್ಗೀಸ್ ನಾಯಕತ್ವ ವಹಿಸಿಕೊಳ್ಳಲಾರಂಭಿಸಿದರು. ೮೦೦೦ ಜನ ಟೀ-ರಬ್ಬರ್ ತೋಟಗಳ ಕೆಲಸಗಾರರು ಸೇರಿದ್ದ ಪ್ರತಿಭಟನಾ ಸಭೆಯಲ್ಲಿ ಹೊಂಚುಹಾಕಿ ಒಮ್ಮೆಲೇ ಗೆರಿಲ್ಲಾ ಯುದ್ಧ ಆರಂಭಿಸಿದ ಅಜಿತಾ-ವರ್ಗೀಸ್ ರ ನಕ್ಸಲ್ ಪಡೆ ಹಲವರನ್ನು ಬಲಿ ತೆಗೆದುಕೊಂಡಿತು. ಭೂಮಾಲೀಕರು ಅಡಗಿಸಿಟ್ಟಿದ್ದ ದವಸ-ಧಾನ್ಯಗಳನ್ನು ಕೆಲಸಗಾರರಿಗೆ ಹಂಚಿತು. ಅಜಿತಾ-ವರ್ಗೀಸ್, ಶೋಷಿತರ ಕಣ್ಮಣಿಗಳಾದರು. ವಯನಾಡಿನ ದಟ್ಟ ಕಾಡುಗಳ ಒಡಲಲ್ಲಿ ನಕ್ಸಲರು ಕಣ್ಮರೆಯಾದರು.

ಫೋಟೋ ಕೃಪೆ : ಅಂತರ್ಜಾಲ

ಆದರೆ ಈ ಸಂತಸ ಕ್ಷಣಿಕವಾಗಿತ್ತು. ಎರಡೇ ದಿನಗಳಲ್ಲಿ ಕೇರಳ ಪೊಲೀಸ್, ವಯನಾಡಿನ ಅಡವಿಯಲ್ಲಿ ’ಕೂಂಬಿಂಗ್’ ನಡೆಸಿತು. ದವಸ-ಧಾನ್ಯ ಪಡೆದು ಸಂತಸಗೊಂಡಿದ್ದ ಹಲವರನ್ನು ತೀವ್ರ ಹಿಂಸಿಸಿ ಮಾಹಿತಿಪಡೆದು, ಅಜಿತಾ-ವರ್ಗೀಸ್ ರ ಪಡೆಯನ್ನು ಎಲ್ಲಾ ದಿಕ್ಕುಗಳಿಂದಲೂ ಸುತ್ತುವರೆದು ಗುಂಡಿನ ಮಳೆ ಸುರಿಸಿತು. ಜೀವಂತ ಸಿಕ್ಕ ವರ್ಗೀಸ್, ’ಎನ್ಕೌಂಟರ್’ ಆದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಅಜಿತಾ ಬಂಧಿಯಾದರು.

ಕೇರಳದ ಹಲವು ಜೈಲುಗಳಲ್ಲಿ ಅಜಿತಾ ತೀವ್ರ ವಿಚಾರಣೆ, ವಿಚಾರಣೆಯ ನೆವದಲ್ಲಿ ಅಮಾನುಷ ಹಿಂಸೆಗೆ ಒಳಗಾದರು. ಒಂಬತ್ತು ವರ್ಷಗಳ ಏಕಾಂಗಿ ಸೆರೆವಾಸಕ್ಕೆ ಗುರಿಯಾದರು. ಅತ್ತ ನಾರಾಯಣನ್- ಮಂದಾಕಿನಿ ದಂಪತಿಗಳೂ ಬಂಧಿತರಾಗಿ ಕಣ್ಣಾನೂರಿನ ಜೈಲಿನಲ್ಲಿದ್ದರು. ಕೆಲವು ವರ್ಷ ತಿರುವನಂತಪುರದ ಜೈಲಿನಲ್ಲಿ ನರಕ ಅನುಭವಿಸಿದ ಅಜಿತಾ, ಕಣ್ಣಾನೂರಿನ ಜೈಲಿಗೆ, ತಮ್ಮ ತಂದೆ-ತಾಯಿಗಳಿದ್ದ ಬಂದೀಖಾನೆಯ ಬಳಿಗೇ ವರ್ಗವಾದರು. ಬಿಡುವಿನ ವೇಳೆಯಲ್ಲಿ, ಕ್ಯಾಸ್ಟ್ರೋ-ಚೆ ಬಗ್ಗೆ ಆಳವಾಗಿ ತಿಳಿದುಕೊಂಡರು. ಜೈಲಿನಲ್ಲಿದ್ದಾಗಲೇ ಕೇರಳದ

ಲೈಂಗಿಕ ಕಾರ್ಯಕರ್ತೆಯರ ಚಿಂತಾಜನಕ ಪರಿಸ್ಥಿತಿಯನ್ನು ಅಭ್ಯಸಿಸಿದ ಅಜಿತಾ, ಅದಕ್ಕೊಂದು ಪರಿಹಾರದ ಸೂತ್ರವನ್ನೂ ಜೈಲಿನಲ್ಲಿ ಕುಳಿತೇ ರೂಪಿಸಿಕೊಂಡರು. ಏರುಯೌವ್ವನದ ದಿನಗಳನ್ನು ಜೈಲಿನಲ್ಲಿ, ಹಿಂಸೆ-ಅಪಮಾನಗಳಲ್ಲಿ ಕಳೆದ ಅಜಿತಾ, ೧೯೭೮ರಲ್ಲಿ ಬಿಡುಗಡೆಯಾದರು. ಎಡಪಂಥೀಯ ನಿಲುವಿನ ಯಾಕೂಬ್ ರನ್ನು ವರಿಸಿದರು. ಹಿಂಸೆ-ಶಸ್ತ್ರಗಳು ಪರಿಹಾರವಲ್ಲ ಎಂಬುದನ್ನು ಮನಗಂಡ ಅಜಿತಾ, ’ಅನ್ವೇಷಿ’ ಎಂಬ ಸಮಾಜಸೇವಾ ಸಂಸ್ಥೆ ಹುಟ್ಟುಹಾಕಿದರು. ಕೇರಳದ ಬಹುತೇಕ ಮಾನವ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿದ್ದರು. ಕೇರಳದ ರಾಜಕೀಯವನ್ನು ಅಲ್ಲೋಲ-ಕಲ್ಲೋಲಗೊಳಿದ ’ಐಸ್ ಕ್ರೀಂ ಪಾರ್ಲರ್’ ವಿವಾದವನ್ನು ಸುಪ್ರೀಂ ಕೋರ್ಟ್ ವರೆಗೂ ಕೊಂಡೊಯ್ದ ಅಜಿತಾ, ಸೋತರು. ’ಸಮರ್ಪಕ ಸಾಕ್ಷಿ’ಗಳ ಕೊರತೆಇದ್ದುದರಿಂದ, ಮುಸ್ಲಿಂಲೀಗ್, ಹಾಗೂ ಸಿಪಿಐ(ಎಂ)ನ ಹಲವು ’ಪ್ರಮುಖ’ ನಾಯಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟರು.

ಫೋಟೋ ಕೃಪೆ : ಅಂತರ್ಜಾಲ

ದೋಸ್ತೊವ್ಸ್ ಕಿ-ಚೆಕೋವ್ ರ ದಟ್ಟಪ್ರಭಾವಕ್ಕೆ ಒಳಗಾದ ಎಮ್.ಟಿ.ವಾಸುದೇವನ್ ನಾಯರ್ (ಎಂ.ಟಿ), ಕೇರಳದ ಚಳುವಳಿಗಳನ್ನು ಹತ್ತಿರದಿಂದ ನೋಡಿದವರು. ಮಲಯಾಳದ ನವ್ಯಸಾಹಿತ್ಯಕ್ಕೆ ಹೊಸ ದಿಕ್ಕು ತೆರೆದವರಲ್ಲಿ ಪ್ರಮುಖರು. ವೈಕೊಂ ಬಷೀರ್, ತಕಳಿ ಶಿವಶಂಕರ ಪಿಳ್ಳೈ, ಸಚ್ಚಿದಾನಂದನ್, ಉರೂಬ್, ಪೊಟ್ಟಿಕ್ಕಾಟ್, ಇನ್ನೂ ಹಲವು ಹೆಸರುಗಳು ಈ ಯಾದಿಯಲ್ಲಿ ಸೇರುತ್ತವೆ. (ತಕಳಿಯವರ ಬಗ್ಗೆ ಎಂ.ಟಿ. ಒಂದು ಸಾಕ್ಷ್ಯಚಿತ್ರವನ್ನೂ ಮಾಡಿದ್ದಾರೆ.) ಎಂ.ಟಿ, ಅಜಿತಾರಿಂದ ಸ್ಪೂರ್ತಿಪಡೆದು ಬರೆದ ಕಥೆಯೇ ’ಪಂಚಾಗ್ನಿ’. ಅಜಿತಾರ ಜೀವನವನ್ನು ಹಲವೆಡೆ ಹೋಲುತ್ತದೆಯಾದರೂ, ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸಿನಿಮಾದ ಭಾಷೆಗೆ ಅಜಿತಾರ ಜೀವನಕಥೆಯನ್ನು ಸಮರ್ಪಕವಾಗಿ ಒಗ್ಗಿಸುವುದರಲ್ಲಿ

ಹರಿಹರನ್-ಎಮ್.ಟಿ. ಶ್ರಮ ಎದ್ದು ಕಾಣುತ್ತದೆ. ಚಿತ್ರ ಹೀಗೆ ಸಾಗುತ್ತದೆ:

ಆಕೆ ಇಂದಿರಾ (ಗೀತಾ). ನಕ್ಸಲ್ ಸಂಘಟನೆಯವಳು. ಭೂಮಾಲೀಕನೊಬ್ಬನ್ನು (ಪ್ರತಾಪ್ ಚಂದ್ರನ್) ಕೊಚ್ಚಿ ಕೊಲೆಮಾಡಿದ್ದಾಳೆ. ಆದಿವಾಸಿ ಯುವತಿಯೊಬ್ಬಳನ್ನು ಅತ್ಯಾಚಾರಮಾಡಿ ಬಸಿರಾಗಿಸಿದ ಭೂಮಾಲೀಕ, ಯುವತಿಯ ಕಡೆಯವರು ನ್ಯಾಯಕೇಳಲು ಬಂದಾಗ ಹಸಿದಿದ್ದ ತನ್ನ ಬೇಟೆನಾಯಿಗಳನ್ನು ಆ ಆದಿವಾಸಿ ಕುಟುಂಬದ ಮೇಲೆ ಛೂಬಿಡುತ್ತಾನೆ. ನಾಯಿಗಳ ತೀವ್ರ ದಾಳಿಗೆ ಗರ್ಭಿಣಿ ಯುವತಿ ಮತ್ತವಳ ಜೊತೆ ಬಂದಾತ ಬಲಿಯಾಗುತ್ತಾರೆ. ಇದು ಇಂದಿರಾ ಕಣ್ಣಮುಂದೆಯೇ ನಡೆದಿದೆ. ಆ ಸಮಯದಲ್ಲಿ ಒಬ್ಬಂಟಿಯಾಗಿದ್ದ ಇಂದಿರಾ, ನಂತರ ತನ್ನ ಪಡೆಯನ್ನು ಕರೆತಂದು ತಾನೇ ಸ್ವತಃ ಭೂಮಾಲೀಕನನ್ನು ಕೊಚ್ಚಿಹಾಕಿ ಪೋಲೀಸರಿಗೆ ಶರಣಾಗುತ್ತಾಳೆ. ನ್ಯಾಯಾಲಯ ಕಲಾಪಗಳೆಲ್ಲಾ ಮುಗಿದು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಣ್ಣಾನೂರಿನ ಕೇಂದ್ರ ಕಾರಾಗೃಹದಲ್ಲಿದ್ದಾಳೆ. ಈಗ ೧೪ ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾಳೆ. ಪೊಲೀಸರ ಹದ್ದಿನಕಣ್ಣು ಆಕೆಯ ಮೇಲಿದೆ.

ಇಂದಿರಾಳ ತಾಯಿ ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಂಡಾಕೆ. ಈಗ ಮರಣಾಶಯ್ಯೆಯಲ್ಲಿದ್ದಾಳೆ. ಮಾದಕ ವ್ಯಸನಿ ತಮ್ಮ, ಇಂದಿರಾಳನ್ನು ನೋಡಿ ರೋಷಾವಿಷ್ಟನಾಗುತ್ತಾನೆ. ನಕ್ಸಲ್ ಕುಟುಂಬದವನೆಂದು ಅವನಿಗೆ ಕೆಲಸ ಸಿಕ್ಕಿಲ್ಲ. ಮಾದಕ ಔಷಧಿಗಳ ಚಟ ಹತ್ತಿಸಿಕೊಂಡಿದ್ದಾನೆ. ಇಂದಿರಾ ಶಾಶ್ವತವಾಗಿಯೇ ಬಿಡುಗಡೆಯಾದಳೆಂದು ಎಣಿಸಿದ ವೃದ್ಧೆ ತಾಯಿ, ನೆಮ್ಮದಿಯಿಂದ ಕೊನೆಯುಸಿರೆಳೆಯುತ್ತಾಳೆ. ಇಂದಿರಾ ಮುಖದರ್ಶನವನ್ನೂ ಮಾಡಲಿಚ್ಛಿಸದ ಆಕೆಯ ಅಣ್ಣ, ಸಾವಿನ ಮನೆಯಲ್ಲೇ ದೊಡ್ಡ ರಾದ್ಧಾಂತ ಸೃಷ್ಟಿಸಿ, ತಾಯಿಯ ಶವಸಂಸ್ಕಾರ ಮಾಡದೇ ಹೊರಟುಹೋಗುತ್ತಾನೆ. ಇಂದಿರಾಗೆ ಕ್ರೌರ್ಯದ ಮುಖದಂತೆ, ಅಂತಃಕರಣದ, ಸಹನೆಯ ಮುಖವೂ ಇದೆ. ಕೊಲೆಮಾಡಿ, ಸೆರೆಮನೆಯಿಂದ ಬಂದ ವ್ಯಕ್ತಿಯನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬ ತಿಳುವಳಿಕೆ ಇದೆ. ಅಣ್ಣ-ತಮ್ಮಂದಿರ ಮನಃಸ್ಥಿತಿ ಆಕೆಗೆ ಅರ್ಥವಾಗುತ್ತದೆ. ಸೆರೆವಾಸಿಯಾಗುವ ಮೊದಲೂ ಮನೆ-ನೆರೆಹೊರೆಯವರೊಂದಿಗೆ ಪ್ರೀತಿಯಿಂದ ನಡೆದುಕೊಂಡಾಕೆ. ಆದರೆ ಕಾಮುಕ ಕಣ್ಣುಗಳಿಂದ ನೋಡುವ ವಿಕೃತರು, ಬಂದೂಕಿದೆ ಎಂಬ ಭಂಡಧೈರ್ಯದಿಂದ ಠೇಂಕಾರದಿಂದ ವರ್ತಿಸುವ ಫ್ಯೂಡಲ್ ಧಣಿಗಳನ್ನು ಕಂಡಾಗ, ಆಕೆಯ ಕ್ರೋಧದ ಮುಖ ತೆರೆದುಕೊಳ್ಳುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಆದರೆ ಇಂದಿರಾಳ ತಂಗಿ ಸಾವಿತ್ರಿ (ನದಿಯಾ) ಆಕೆಯ ಗಂಡ ಪ್ರಭಾಕರನ್ (ದೇವನ್) ಗೆ ಆಕೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದು ತೀವ್ರ ಸಂತಸವಾಗಿದೆ. ಸಾವಿತ್ರಿಯಷ್ಟೇ ಸಂತಸ ಪಟ್ಟಿದ್ದು, ಇಂದಿರಾಳ ಕಾಲೇಜು ಸಹಪಾಠಿಯಾಗಿದ್ದ ಶಾರದಾ. ಈಕೆ ರಾಜನ್ (ಮುರುಳಿ) ನನ್ನು ಮದುವೆಯಾಗಿದ್ದಾಳೆ. ಆದರೆ ದಿನಕಳೆದಂತೆ, ಇಂದಿರಾ ಯಾರಿಗೂ ಬೇಡವಾಗುತ್ತಿದ್ದಾಳೆ. ಎಲ್ಲರೂ ತೋರುವ ಪ್ರೀತಿ, ಒಂದು ನಾಟಕದಂತೆ ಅವಳಿಗೆ ಕಾಣಲಾರಂಭಿಸುತ್ತದೆ. ಈ ಮಧ್ಯೆ ಸ್ವತಂತ್ರ (ಫ್ರೀ ಲಾನ್ಸ್)ಪತ್ರಕರ್ತ ರಶೀದ್ (ಮೋಹನ್ ಲಾಲ್) ಇಂದಿರಾ ಹಿನ್ನಲೆಯ ಬಗ್ಗೆ ಕುತೂಹಲ ತೋರುತ್ತಾನೆ. ಆಕೆಯ ಸಂದರ್ಶನಕ್ಕಾಗಿ ದುಂಬಾಲು ಬೀಳುತ್ತಾನೆ. ಆದರೆ ಇಂದಿರಾ ನಿರಾಕರಿಸುತ್ತಾಳೆ.

ಎಲ್ಲಿಯೂ ನೆಲೆಯಿಲ್ಲದ ಇಂದಿರಾ, ತನ್ನ ತಂಗಿಯೇ ತನ್ನನ್ನು ಸಂದೇಹಿಸಲಾರಂಭಿಸಿದಾಗ, ಶಾರದಾಳ ಮನೆ ಸೇರುತ್ತಾಳೆ. ಆದರೆ ಸಭ್ಯನೆಂದು ತಿಳಿದಿದ್ದ ಶಾರದಾಳ ಗಂಡ ರಾಜನ್, ಒಬ್ಬ ಹೆಣ್ಣುಬಾಕನೆಂದು ತಿಳಿದು ಆಘಾತವಾಗಿ, ಶಾರದಾಳ ಮನೆಯನ್ನೂ ಬಿಟ್ಟುಹೋಗುತ್ತಾಳೆ. ರಶೀದ್, ಅಪಾರ ಕಳಕಳಿ ತೋರಿ ತನ್ನ ಮನೆಯಲ್ಲಿರಲು ಅಭ್ಯಂತರವಿಲ್ಲ ಎಂದು ಆಶ್ರಯ ಕೊಡುತ್ತಾನೆ. ಸರಳ ಸ್ವಭಾವದ, ಮಹಾ ಹಾಸ್ಯಪ್ರಜ್ಞೆಯ, ಕಲ್ಮಶರಹಿತ ಸ್ವಭಾವದಿಂದ ರಶೀದ್, ಇಂದಿರಾಳ ಮನ ಗೆಲ್ಲುತ್ತಾನೆ. ಅಲ್ಲದೇ ತನ್ನೆಲ್ಲಾ ಪ್ರಭಾವ ಬಳಸಿ ಇಂದಿರಾಳ ಮಾಫಿಗಾಗಿ ಅರ್ಜಿಸಲ್ಲಿಸುತ್ತಾನೆ. ಯಶಸ್ವಿಯೂ ಆಗುತ್ತಾನೆ. ಇಂದಿರಾ ಇನ್ನು ಜೈಲಿನಲ್ಲಿರುವ ಅಗತ್ಯವಿಲ್ಲ. ಇಂದಿರಾ ತನ್ನ ಬದುಕು ಹಸನಾಯಿತೆಂದೇ ತಿಳಿಯುತ್ತಾಳೆ. ಸಾವಿತ್ರಿ ಹಾಗೂ ಅವಳ ತಮ್ಮ ಕೂಡಾ ಹರ್ಷಿತರಾಗುತ್ತಾರೆ. ಈ ಸಂತೋಶದ ವಿಚಾರ ಹಂಚಿಕೊಳ್ಳಲು ಇಂದಿರಾ, ಶಾರದಾಳ ಮನೆಗೆ ಹೋಗುತ್ತಾಳೆ.

ದುರಾದೃಷ್ಟ ತನ್ನ ಮೇಲುಗೈ ತೋರುತ್ತದೆ. ತನ್ನ ದುರುಳ ಸ್ನೇಹಿತರೊಂದಿಗೆ ಹೆಣ್ಣುಬಾಕ ರಾಜನ್, ಮನೆಯ ಚಾಕರಿ ನೋಡಿಕೊಂಡಿದ್ದ ಮುಗ್ಧ ಹುಡುಗಿಯ ಸಾಮೂಹಿಕ ಅತ್ಯಾಚಾರಕ್ಕಿಳಿದಿರುತ್ತಾನೆ. ಇಂದಿರಾಳನ್ನು ಕಂಡ ರಾಜನ್ ಸ್ನೇಹಿತರು ಪಲಾಯನ ಮಾಡುತ್ತಾರೆ. ರೊಚ್ಚಿಗೆದ್ದ ಇಂದಿರಾ ಸಂಯಮ ಕಳೆದುಕೊಂಡು ಬಂದೂಕಿನಿಂದ ರಾಜನ್ ನನ್ನು ಸುಟ್ಟುಕೊಂದು ಮತ್ತೆ ಪೊಲೀಸರಿಗೆ ಶರಣಾಗುತ್ತಾಳೆ.

ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಗೀತಾ, ಇಂದಿರಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಪತ್ರಕರ್ತನಾಗಿ, ಸಮಯಕ್ಕೊದಗುವ ಸ್ನೇಹಿತನಾಗಿ ಮೋಹನ್ ಲಾಲ್ ಅಭಿನಯ ಸ್ಮರಣೀಯ. ಕುಹಕದ ನಗೆ ನಗುತ್ತಾ, ವಿಕೃತ ನೋಟ ಬೀರುವ ರಾಜನ್ ಪಾತ್ರದ ಮುರುಳಿಯವರಿಗೆ ಈ ಚಿತ್ರ ದೊಡ್ಡ ತಿರುವು ನೀಡಿತು. ಬಾಂಬೆರವಿ ಯವರ ಗೀತಸಂಯೋಜನೆ, ಪುಗಳೇಂದಿ ಯವರ ಹಿನ್ನಲೆ ಸಂಗೀತವೂ ಚಿತ್ರಕ್ಕೆ ಮೆರುಗುನೀಡಿದೆ. ಗೀತಾ, ತಾವು ಪರಕಾಯ ಪ್ರವೇಶ ಮಾಡಿದ ’ಇಂದಿರಾ’ ಪಾತ್ರದಿಂದ ಮನೆಮಾತಾದರು.
ಛಾಂದ್ಯೋಗಪನಿಷತ್ ನಲ್ಲಿ ಅಗ್ನಿಯ (ಬೆಂಕಿ)ಯ ಐದು ರೂಪಗಳನ್ನು ರಾಜ ಪ್ರವಹನ ಗೌತಮ ಋಷಿಗೆ ಬಣ್ಣಿಸುತ್ತಾನೆ.ಅದರಲ್ಲಿ ಹೆಣ್ಣು ಅಗ್ನಿಯ ಐದನೆಯ ರೂಪವಾಗಿ ಬಣ್ಣಿಸಲ್ಪಡುತಾಳೆ. ಎಂ.ಟಿ ಬರೆದ ಕಥೆಗೆ ಇದು ಸ್ಪೂರ್ತಿಯಿರಬಹುದು. ನಕ್ಸಲ್ ಹಣೆಪಟ್ಟಿ ಹೊತ್ತು ಸೆರೆಮನೆ ಪಾಲಾದವರ ಕುಟುಂಬಗಳನ್ನು ಆವರಿಸಿಕೊಳ್ಳುವ ಕ್ಲೇಶ, ಭ್ರಾಂತಿ, ಅಸಹಾಯಕತೆ, ರೋಷಗಳನ್ನು ಹರಿಹರನ್ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಾರೆ. ಮೆಲೋಡ್ರಾಮಾ ದೃಶ್ಯಗಳಿಗೆ ಸ್ವಲ್ಪ ಕತ್ತರಿಯಾಡಿಸಬಹುದಿತ್ತು. (ಸಂಕಲನ: ಎಮ್.ಎಸ್.ಮಣಿ). ಇಂದಿರಾಳ ನಕ್ಸಲ್ ಹಿನ್ನಲೆಗೆ ಇನ್ನಷ್ಟು ಒತ್ತು ನೀಡಬಹುದಿತ್ತು. ಜೀವಂತ ವ್ಯಕ್ತಿಯ ಕಥೆಯನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸುವಾಗ ಹಲವು ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದು ಅನಿವಾರ್ಯವೇ ಎಂಬ ಪ್ರಶ್ನೆ ಏಳುತ್ತದೆ. ಆದರೆ ಇದು ಹಲವು ಅಂಶಗಳನ್ನು ಅವಲಂಬಿಸುತ್ತದೆ. ಆದರ್ಶವಾದ/ಉಗ್ರವಾದ ಮತ್ತು ಕಲುಷಿತ ಮನಃಸ್ಥಿತಿಯ ಭ್ರಷ್ಟಗೊಂಡ ಸಮಾಜದ ನಡುವಿನ ಮುಖಾಮುಖಿಯನ್ನು ೮೦ರ ದಶಕದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟ ಹರಿಹರನ್-ಎಂ.ಟಿ. ಪ್ರಶಂಸಾರ್ಹರು. ತನ್ನ ಸಾಮಾಜಿಕ ಬದ್ಧತೆಗಾಗಿ ಒಡನಾಡಿಯ, ಮನೆಯವರ ಪ್ರೀತಿಯನ್ನೂ ಕಡೆಗಣಿಸಿ, ಹಿಂಸಾತ್ಮಕ ದಾರಿಯನ್ನೇ ಅರಸಿ ಮತ್ತೆ ಸೆರೆಮನೆ ಪಾಲಾಗುವ ಇಂದಿರಾ ಒಮ್ಮೆ ಆದರ್ಶವಾಗಿ, ಮತ್ತೊಮ್ಮೆ ಪಾಠವಾಗಿ ನಿಲ್ಲುತ್ತಾಳೆ. ಇಂದಿರಾ ಪಾತ್ರವನ್ನು ಜೀವಿಸಿದ ಗೀತಾ ಆ ವರ್ಷ ಪ್ರಶಸ್ತಿವಂಚಿತರಾದರೆಂಬುದೇ ಒಂದು ಕೊರಗು. ಆದರೂ ’ಇಂದಿರಾ’ ಮಲಯಾಳಂ ಸಿನಿಮಾ ಸೃಷ್ಟಿಸಿದ ಸಶಕ್ತ ಮಹಿಳಾ ಪಾತ್ರವೆಂದು ಇಂದಿಗೂ ಪ್ರಶಂಸಿಲ್ಪಡುತ್ತಿದೆ. (ಅದೇ ವರ್ಷ, ಕನ್ನಡದ ’ಅರುಣರಾಗ’ದ ಹೃದಯಸ್ಪರ್ಶಿ ಅಭಿನಯಕ್ಕೆ ಗೀತಾ, ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನರಾದರು.)

ಎಂ.ಟಿ. ಮಲಯಾಳಂ ಸಾಹಿತ್ಯ-ಸಾಂಸ್ಕೃತಿಕ ಲೋಕವನ್ನು ತಮ್ಮ ಮೊನಚು ಬರಹಗಳಿಂದ, ಅಧ್ಯಯನಯೋಗ್ಯ ಸಿನಿಮಾಗಳಿಂದ ಶ್ರೀಮಂತಗೊಳಿಸಿದವರು. ನಾಲ್ಕು ಬಾರಿ ತಮ್ಮ ಚಿತ್ರಕಥೆಗಾಗಿ ರಾಷ್ಟ್ರಪ್ರಶಸ್ತಿಗಳಿಸಿದವರು. ಅವರೇ ನಿರ್ದೇಶಿಸಿದ ’ನಿರ್ಮಾಲ್ಯಮ್’, ಇಂದಿಗೂ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗುತ್ತಿದೆ. ಸ್ಟಾರ್ ಗಳಾಗಿಯೇ ಉಳಿದುಬಿಡಬಹುದಾಗಿದ್ದ ರಲ್ಲಿ ಸುಪ್ತವಾಗಿದ್ದ ಸಹಜ-ಅಪ್ರತಿಮ ಕಲಾವಿದನನ್ನು ಅನಾವರಣಗೊಳಿಸಿದ ಪಾತ್ರಗಳ ಸೃಷ್ಟಿಯಲ್ಲಿ, ಎಂ.ಟಿ ಕಥೆಗಳಿಗೆ ವಿಶಿಷ್ಟ ಸ್ಥಾನವಿದೆ. ಚಿತ್ರಕಥೆಯೇ ಸಿನಿಮಾದ ಬೆನ್ನೆಲೆಬು, ಸ್ಟಾರ್ ನಟರಲ್ಲ ಎಂಬುದನ್ನು ೬೦ರ ದಶಕದಿಂದಲೇ ನಿರೂಪಿಸುತ್ತಿರುವ ಎಂ.ಟಿ ಯವರಿಗೆ, ಹರಿಹರನ್ ತರಹದ ಪ್ರತಿಭಾವಂತ, ಸಮರ್ಥ ನಿರ್ದೇಶಕರೂ ಸಿಕ್ಕರು. ಅಧಃಪತನಗೊಳ್ಳುತ್ತಿರುವ ಮಾನವೀಯ ಮೌಲ್ಯಗಳು, ಒಡೆದು ಹೋಗುತ್ತಿರುವ ಸಂಬಂಧಗಳು, ಅಸ್ಮಿತೆಯ ಹುಡುಕಾಟಗಳನ್ನು ಆಳವಾಗಿ ನೋಡಿದ, ಆರ್ದ್ರವಾಗಿ ಬರೆದ ಎಮ್.ಟಿ, ಅಷ್ಟೇ ಪರಿಣಾಮಕಾರಿಯಾಗಿ ತಮ್ಮ ನೋಟವನ್ನು ಸಿನಿಮಾ ಭಾಷೆಗೆ ಅಳವಡಿಸಿದರು. ಹರಿಹರನ್ – ಎಂ.ಟಿ , ಮಲಯಾಳಂ ಚಿತ್ರರಂಗ ಕಂಡ ಅಪೂರ್ವ ಜೋಡಿ. ಕೂಡು ಕುಟುಂಬಗಳು ಒಡೆಯುತ್ತಿದ್ದ ಕಾಲಘಟ್ಟವಾಗಲಿ, ನಕ್ಸಲ್ ಚಳುವಳಿಯಾಗಲಿ, ಕಾರ್ಮಿಕ ಅಶಾಂತಿಯಾಗಲಿ, ತುರ್ತು-ಪರಿಸ್ಥಿತಿಯ ಕಾಲಘಟ್ಟದ ತಳಮಳವಾಗಲಿ, ಮಲಯಾಳಂ ಸಿನಿಮಾ ಸ್ಪಂದಿಸಿದ ರೀತಿ ಅವಿಸ್ಮರಣೀಯ.

ಈ ಸ್ಪಂದನಶೀಲತೆಯೇ ಬೇರುಗಳನ್ನು ಗಟ್ಟಿಗೊಳಿಸುತ್ತದೆ.


  • ರಾಘವನ್ ಚಕ್ರವರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW