‘ಪಣಿಯಮ್ಮ’ ಕೃತಿ ಪರಿಚಯ – ಮಾಲತಿ ರಾಮಕೃಷ್ಣ ಭಟ್

ಹೆಣ್ಣು ಮಕ್ಕಳಿಗೆ ಅಕ್ಷರದರ್ಶನವಿರದ ದಿನಗಳವು. ‘ಪಣಿಯಮ್ಮ’ ಕಾದಂಬರಿ ಓದುವಾಗ ಪಣಿಯಮ್ಮನ ಪಾತ್ರದ ಭಾವನೆಗಳ ಮಿಳಿತ ಹಾಗೂ ಜೀವನದ ಏರಿಳಿತಕಣ್ಣೀರು ತರಿಸುವಂತಿದ್ದು, ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಪಣಿಯಮ್ಮ
ಲೇಖಕರು: ಎಂ. ಕೆ. ಇಂದಿರಾ
ಇಂದಿರಾ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ:೧೯೬೫ & ೨೦೦೪.
ಪುಟಗಳು: ೧೦೪.
ಬೆಲೆ: ರೂ. ೫೦.

ಕನ್ನಡದ ಜನಪ್ರಿಯ ಲೇಖಕಿ ಎಂ. ಕೆ. ಇಂದಿರಾ ಅವರ ಈ ಕಾದಂಬರಿಯು ಚಲನಚಿತ್ರವೂ ಆಗಿದೆ. ಸುಮಾರು ೧೮೪೦ ನೆಯ ಇಸ್ವಿಯ ಸುಮಾರಿನಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿ, ಬದುಕಿನುದ್ದಕ್ಕೂ ಕಷ್ಟ ಎದುರಿಸಿ ಬಾಳಿ ಅಳಿದ ತಮ್ಮ ಸಂಬಂಧಿ ಪಣಿಯಮ್ಮ ಎನ್ನುವ ಮಹಿಳೆಯ ಬಗ್ಗೆ ಈ ಕಾದಂಬರಿಯಲ್ಲಿ ತಾವು ಚಿತ್ರಿಸಿರುವ ಬಗ್ಗೆ ಲೇಖಕಿ ಹೇಳಿದ್ದಾರೆ.

ಮಲೆನಾಡಿನ ತೀರ್ಥಹಳ್ಳಿಯ ಅಂಚೆ ಮನೆತನದ ದೊಡ್ಡ ಅವಿಭಕ್ತ ಕುಟುಂಬದ ಯಜಮಾನರಾಗಿದ್ದ ತಮ್ಮಯ್ಯ ಹಾಗೂ ಸಣ್ಣಮ್ಮ ದಂಪತಿಗಳ ಮಗಳು ಈ ಪಣಿಯಮ್ಮ. ಆ ದಿನಗಳಲ್ಲಿ ಬ್ರಿಟಿಷರ ಆಡಳಿತವಿತ್ತು. ಕಾಲ್ನಡಿಗೆ ಹಾಗೂ ಕುದುರೆಗಾಡಿ ಸಾರಿಗೆಯ ಮೂಲಕ ಟಪಾಲು ಹಂಚುವ ಅಂಚೆಯವನ ಕೆಲಸವನ್ನು ಇಲ್ಲಿ ರಸವತ್ತಾಗಿ ವಿವರಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಅಕ್ಷರದರ್ಶನವಿರದ ದಿನಗಳವು. ಹಾಡು- ಹಸೆ -ಮನೆಗೆಲಸ ಕಲಿಸಲು ಮನೆ ತುಂಬಾ ಹೆಂಗಸರು ಅಜ್ಜಿಯರು ಇದ್ದರು. ಅವರಿಗೆಲ್ಲಾ ಹೊರ ಪ್ರಪಂಚದ ಅರಿವೇ ಇರಲಿಲ್ಲ. ಅಷ್ಟೆಲ್ಲಾ ಜನರಿರುವ ಆ ದೊಡ್ಡ ಮನೆಯ ಬಾಣಂತಿ ಕೋಣೆಯಲ್ಲಿ ಪ್ರತೀ ವರ್ಷ ಒಂದೆಡೆರಡು ಹೆರಿಗೆಯಾಗುತ್ತಲೇ ಇರುತ್ತಿತ್ತು. ಊರಲ್ಲಿ ದ್ವೇಷ, ಅಸೂಯೆ, ದೇವರು, ಹರಕೆ, ಮಾಟ ಮಂತ್ರ, ಕಟ್ಟೆ ಪಂಚಾಯತಿ ಇವೆಲ್ಲಾ ಸಾಮಾನ್ಯವಾಗಿದ್ದವು.

‘ಪಣಿ’ ಹುಟ್ಟಿದಾಗ ಅವಳ ಜಾತಕ ಬರೆದ ಜೋಯಿಸರು ಆಕೆ ಅದೃಷ್ಟವಂತೆ, ಮುತ್ತೈದೆಯಾಗಿ ಹತ್ತಾರು ಮಕ್ಕಳ ತಾಯಾಗಿ ಬಾಳುವ ಯೋಗವಿದೆ ಎಂದಿದ್ದರು!. ಸಂಪ್ರದಾಯದ ಸಂಕೋಲೆಯಲ್ಲಿ ಮನೆಯ ಹತ್ತಾರು ಹೆಣ್ಣು ಮಕ್ಕಳ ಮಧ್ಯೆ ಪಣಿ ಬೆಳೆದಳು. ಕೇದಗೆ ಬಣ್ಣದ ಸಣ್ಣ ಶರೀರ, ತೀರಾ ಮೃದು ಸ್ವಭಾವ, ಸದ್ದಿಲ್ಲದ ನಡೆ, ಗದ್ದಲವಿಲ್ಲದ ಕೆಲಸ, ಮೆಲು ಮಾತಿನ ಪಣಿಗೆ ಒಂಬತ್ತು ವರ್ಷ ಪ್ರಾಯದಲ್ಲಿದ್ದಾಗ ಮದುವೆ ಮಾಡಿದ್ದರು.

ನೀಲಕಂಠ ಭಟ್ಟರ ಮಗ ೧೫ ವರ್ಷದ ನಂಜುಂಡ ಪಣಿಯ ಗಂಡ.ಆಗೆಲ್ಲಾ ಮದುವೆಗೆ ಹೆಣ್ಣು- ಗಂಡುಗಳ ಒಪ್ಪಿಗೆ ಕೇಳುವ , ನೋಡುವ ಪದ್ಧತಿ ಇರಲಿಲ್ಲ. ಅವರ ಮದುವೆಯ ಪ್ರಸಂಗದ ವಿನೋದಮಯವಾದ ವರ್ಣನೆಯನ್ನು ಇಲ್ಲಿ ಓದಿಯೇ ಸವಿಯ ಬೇಕು. ಅಷ್ಟು ಚೆನ್ನಾಗಿ ಲೇಖಕಿ ಬಣ್ಣಿಸಿದ್ದಾರೆ.

ಮೈನೆರೆದು ದೊಡ್ಡವಳಾಗುವವರೆಗೆ ತವರಲ್ಲಿಯೇ ಇರ ಬೇಕಾಗಿದ್ದ ಪಣಿ ಜಾತ್ರೆಗೆ ಹೋದಾಗ ಎಲ್ಲರೊಂದಿಗೆ ಚಿಕ್ಕಿ ಬಳೆಯಿಟ್ಟು ಸಂತೋಷಿಸಿದ್ದಳು. ಆದರೆ ಜಡೆ ಬಂಗಾರದ ಆಸೆಗೆ ಕಳ್ಳರು ಅವಳ ಉದ್ದ ಜಡೆ ಕತ್ತರಿಸಿ ಕೊಂಡು ಮಾಯವಾಗಿದ್ದರು. ಈ ಅಪಶಕುನದಿಂದ ಮನೆಯಲ್ಲಿ ಆತಂಕವಾಗಿ ಅವಳ ಜಡೆ ಪುನಃ ಬೆಳೆಯುವವರೆಗೆ ಕತ್ತಲ ಕೋಣೆಯಲ್ಲಿ ಇಟ್ಟಿದ್ದರು! .
ಅತ್ತ ಹಾವು ಕಚ್ಚಿ ಅವಳ ಗಂಡ ನಂಜುಂಡ ತೀರಿ ಕೊಂಡ ಸುದ್ದಿ ಬಂದ ದಿನವೇ ತುಳಸಿ ಪೂಜೆಗೆಂದು ಹೊರಟ ಪಣಿ ಕುಂಕುಮ ಭರಣಿಯನ್ನು ಅಂಗಳದಲ್ಲಿ ಬೀಳಿಸಿ ತಾಯಿಯಿಂದ ಬೈಸಿ ಕೊಂಡಿದ್ದಳು.!!

ಬಾಲ ವಿಧವೆಯಾದ ಪಣಿಯಮ್ಮನಿಗೆ ಪದ್ಧತಿಯಂತೆ ಹಜಾಮನಿಂದ ತಲೆ ಬೋಳಿಸಿ, ಕೆಂಪು ಮಡಿಸೀರೆ ಉಡಿಸಲಾಯಿತು. ಜಾತಕದ ಅಖಂಡ ಸೌಭಾಗ್ಯ ಸುಳ್ಳಾಗಿ, ಅವಳು ಕೊನೆಯತನಕ ಕನ್ಯಾಕುಮಾರಿಯಾಗಿಯೇ ಉಳಿಯ ಬೇಕಾಯಿತು. ಅವಳ ಅತ್ತೆ ಮನೆಯವರು ಇತ್ತ ತಿರುಗಿಯೂ ನೋಡದೇ ಅವಳ ಕಾಲ್ಗುಣವೇ ಚೆನ್ನಾಗಿಲ್ಲವೆಂದು ಜರಿದರು. ಹಾಗಾಗಿ ಪಣಿ ಇಲ್ಲೇ ಕತ್ತೆ ಚಾಕರಿ ಮಾಡುತ್ತಾ ಉಳಿದಳು. ತುಂಬು ತಾರುಣ್ಯದಲ್ಲಿ ಪಣಿಯಮ್ಮ ತಪಸ್ವಿನಿಯಂತೆ ಬಾಳಿದಳು.

ತನ್ನ ಕಣ್ಣೆದುರೇ ನಡೆಯುತ್ತಿದ್ದ ಅದೆಷ್ಟೋ ಅಹಸ್ಯ ಪ್ರಸಂಗಗಳನ್ನು ಗಮನಿಸಿಯೂ ಸುಮ್ಮನಿದ್ದಳು. ತಲೆ ಬೋಳಿಸಿ ಕೊಳ್ಳಲು ಹಜಾಮನಿಗೆ ಕಾಸು ಕೊಡುವುದನ್ನು ತಪ್ಪಿಸಲು ‘ಉಮ್ಮತ್ತನ ಕಾಯಿ’ ರಸವನ್ನು ತಲೆಗೆ ಲೇಪಿಸಿ, ಉರಿ ಸಹಿಸಿ ಕೂದಲು ಉದುರಿಸಿ ಕೊಳ್ಳುತ್ತಿದ್ದಳು. ತಪಸ್ವಿನಿಯಂತೆ ಎಲ್ಲಾ ಜನರು ಹಾಗೂ ಮಕ್ಕಳನ್ನೂ ಪ್ರೀತಿಸಿದಳು. ದಿನ ಕಳೆದಂತೆ ಆಹಾರವನ್ನೂ ಕಡಿಮೆ ಸೇವಿಸುತ್ತಾ ದೇವರ ಧ್ಯಾನ ಕೆಲಸದಲ್ಲೇ ಧನ್ಯತೆ ಕಂಡಳು. ತಾನು ಹೆರದಿದ್ದರೂ ಅದೆಷ್ಟೋ ಹೆರಿಗೆ ಮಾಡಿಸಿ ತಾಯಿ- ಮಗುವನ್ನು ಉಳಿಸಿದಳು.

ಮುಂದೆ ಕಾಲ ಬದಲಾದಂತೆ, ಪಣಿಯಮ್ಮ ಸದಾ ಮಿತ ಭಾಷಿಣಿಯಾಗಿ ಇದ್ದರೂ, ತನ್ನಂತ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬರಬಾರದು ಎನ್ನುವ ಉದ್ದೇಶದಿಂದ ಕೆಲವು ಸಲ ಹಳೆಯ ಕಂದಾಚಾರಗಳನ್ನು ವಿರೋಧಿಸುತ್ತಿದ್ದಳು. ರಾಮಜಪ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ, ಶತಾಯುಷಿಯಾಗಿ ಬಾಳಿದ ಪಣಿಯಮ್ಮನಂತ ಶ್ರೇಷ್ಟ ಜೀವ ಈ ಕಲಿಯುಗದಲ್ಲಿ ಎಲ್ಲೂ ಹುಟ್ಟಿರಲು ಸಾಧ್ಯವಿಲ್ಲ ಎಂದು ಎಲ್ಲರೂ ಮಾತಾಡಿ ಕೊಳ್ಳುತ್ತಿದ್ದರು.

ಈ ಕಾದಂಬರಿ ಓದುವಾಗ ಪಣಿಯಮ್ಮನ ಪಾತ್ರದ ಭಾವನೆಗಳ ಮಿಳಿತ ಹಾಗೂ ಜೀವನದ ಏರಿಳಿತ ಕಣ್ಣೀರು ತರಿಸುವಂತಿದೆ. ನೀವೂ ಓದಿ ನೋಡಿ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW