‘ಪಾಪು ಬಾಪು’ ನಾಟಕದ ವಿಮರ್ಶೆ

ಐದು ವರ್ಷದ ಹಿಂದೆ ‘ ಗಾಂಧಿ ೧೫೦’ ರ ಹೊತ್ತಿಗೆ ವಾರ್ತಾ ಪ್ರಸಾರ ಇಲಾಖೆಯಿಂದ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ‘ ಪಾಪು ಬಾಪು’ ನಾಟಕದ ತಿರುಗಾಟ ನಡೆದಿತ್ತು. ಸಾವಿರಾರು ಪ್ರಯೋಗ ಕಂಡ ಈ ನಾಟಕದ ಕುರಿತು ಹಿರಿಯ ರಂಗಕರ್ಮಿ ಕಿರಣ್ ಭಟ್ ಹೊನ್ನಾವರ ಅವರು ಬರೆದ ಬರಹ ಇಲ್ಲಿದೆ ತಪ್ಪದೆ ಮುಂದೆ ಓದಿ…

‘ಪಾಪು ಬಾಪು’
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ
‘ ಗಾಂಧಿ ೧೫೦ ರಂಗಪಯಣ’ ದ ನಾಟಕ
ಪರಿಕಲ್ಪನೆ: ವಿಶುಕುಮಾರ್

‘ ಭಾರತದ ಭೂಪಟದ ಮೇಲೆ ಯಾರೂ ಮಸಿಯ ಗೆರೆ ಎಳೆಯದಿರಲಿ’

‘ ಪಾಪು ಬಾಪು’ ನಾಟಕದ ಕೊನೆಯಲ್ಲಿ ಕಲಾವಿದರು ಒಂದು ಮಾತು ಹೇಳುತ್ತಾರೆ ” ಭಾರತದ ಭೂಪಟದ ಮೇಲೆ ಯಾರೂ ಮಸಿಯ ಗೆರೆ ಎಳೆಯದಿರಲಿ”. ಇದು ಬರಿಯ ನೆಲದ ಮೇಲಿನ ಭೌತಿಕ ಗೆರೆಯಷ್ಟೇ ಅಲ್ಲ. ಜನಗಣ ದ ಬದುಕಿನ ಮಧ್ಯೆಹರಿವ ಬಿರುಕು ಹುಟ್ಟಿಸುವ ಗೆರೆಯೂ ಹೌದು.

ಈ ‘ ಗೆರೆ’ ಯ ಸುಳಿವನ್ನೇ ಎತ್ತಿಕೊಂಡು ನಾಟಕವನ್ನ rewind ಮಾಡುತ್ತ ಹೋದರೆ…..ಅರೆ, ಹೌದಲ್ಲ. ಗಾಂಧಿ ಬದುಕಿಗೂ ಈ ಗೆರೆಗಳಿಗೂ ಅದೆಂಥ ಸಂಬಂಧ! ಎನಿಸುತ್ತದೆ.ಅವರ ಬದುಕಿನ mission ಅದೇ ಅಲ್ಲವಾ? ಎನಿಸತೊಡಗುತ್ತದೆ.’ ಬರೆದ ಮಸಿಯ ಗೆರೆ’ ಗಳನ್ನು ಅಳಿಸುತ್ತಲೇ ಸಾಗುವ ಗಾಂಧಿಯ ಬದುಕು ಮೇಲಿನ ಸಾಲುಗಳಿಗೆ ರೂಪಕವಾಗಿ ನಿಲ್ಲುತ್ತದೆ.
‌‌‌ ನಾಟಕದ ಮೊದಲ ದೃಶ್ಯದಲ್ಲೇ ಮೋಹನದಾಸನಲ್ಲಿರೋ ಅಸತ್ಯದ ಮಸಿಯನ್ನಳಿಸಿ ಸತ್ಯದ ಬೆಳಕನ್ನು ತುಂಬುವದರ ಮೂಲಕ ಇಂಥ ಬೆಳವಣಿಗೊಂದು ನಾಂದಿ ಹಾಡುತ್ತಾಳೆ , ಆತನ ಅಮ್ಮ ಪುತಲೀಬಾಯಿ. ಧಾರಾಕಾರ ಮಳೆಯಲ್ಲಿ ನಿಂತ ದಲಿತ ಯುವಕನನ್ನ ಅಪ್ಪಿಕೊಳ್ಳೋದರ ಮೂಲಕ ಮೋಹನದಾಸ ಅಸ್ಪೃಶ್ಯತೆಯ ಗೆರೆಯನ್ನು ಅಳಿಸಿಬಿಡುತ್ತಾನೆ. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ದ ಗೆರೆಯೇ ಗಾಂಧಿಯವರ ಹೋರಾಟದ ಬದುಕನ್ನ ನಿರ್ಧರಿಸುವ ಕಾರಣವಾಗುತ್ತದೆ. ವರ್ಣಭೇದದ ಗೆರೆಯನ್ನಳಿಸೋದಕ್ಕೆ ಕಸ್ತೂರ್ಬಾ ರನ್ನೂ ಸಿದ್ಧಮಾಡುತ್ತಾರೆ ಗಾಂಧಿ. ಗೆರೆಯಳಿದು ಗೆಲುವು ಸಿಗುತ್ತದೆ. ಹೀಗೆ ತಾನು ನಂಬಿದ ಸತ್ಯ ಅಹಿಂಸೆಗಳ ಬಲದ ಮೇಲೆಯೇ ಅನ್ಯಾಯಗಳ ವಿರುದ್ಧ ಹೋರಾಡುತ್ತ ಇಂಥ ಗೆರೆಗಳನ್ನ ಅಳಿಸುತ್ತ ಅಳಿಸುತ್ತ ಬರುತ್ತಾರೆ ಗಾಂಧಿ. ಭಾರತದ ಸ್ವಾತಂತ್ರ್ಯ ಚಳುವಳಿ ಅವರ ಬದುಕಿನ ಒಂದು ನಿರ್ಣಾಯಕ ಹೋರಾಟವೇ.ಈ ಹೋರಾಟದ climax ನಲ್ಲಿ ಎದುರು ಬರೋದೇ ‘ ಭಾರತದ ಭೂಪಟದ ಮೇಲಿನ ಬಹು ಚರ್ಚಿತ ಗೆರೆ’ ಈ ಗೆರೆಯ ಕುರಿತಂತೆ ನಾಟಕದಲ್ಲಿ ಗಾಂಧೀಜಿಯವರ ಸ್ಪಷ್ಟವಾದ ನಿಲುವಿದೆ. ಸ್ವಾತಂತ್ರ್ಯದ ಸಮಾರಂಭದ ಮರುದಿನ ಕಲ್ಕತ್ತಾದ ಬೀದಿಗಳಲ್ಲಿ ಕಸ ಗುಡಿಸುತ್ತ ಅವರು ತನ್ನ ಗೆಳೆಯನ ಜೊತೆಗೆ ಮಾತನಾಡುತ್ತಾರೆ.

“ಶಾಹಿದ್ .

ಇವು ನನ್ನ ನಂಬಿಕೆಯ ಪರೀಕ್ಷೆ ಯ ದಿನಗಳು, ದೇಶ ವಿಭಜನೆಗೆ ಸಮ್ಮತಿಸಿದರೆ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ನಮ್ಮವರು ಬಲವಾಗಿ ನಂಬಿದ್ದರು. ನಾನದನ್ನ ಒಪ್ಪಿರಲಿಲ್ಲ, ಮೊದಲು ಬ್ರಿಟೀಷರು ಭಾರತ ಬಿಟ್ಟು ಹೊರಟು ಹೊಗಲಿ ನಂತರ ನಾವೆಲ್ಲ ಒಂದುಕಡೆ ಕುಳಿತು ಸಮಾದಾನದಿಂದ , ದೇಶವನ್ನ ತುಂಡು ಮಾಡಬೇಕೆ ಬೇಡವೆ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ವನ್ನ ತೆಗೆದುಕೊಳ್ಳೊಣ ಎಂದು ಹೇಳಿದ್ದೆ.

ದೇಶವಿಭಜನೆಗೆ ಸಮ್ಮತಿಸದೇ ಹೊದರೆ ಬ್ರಿಟೀಷರು ಭಾರತವನ್ನ ಬಿಟ್ಟು ಹೊಗುವುದನ್ನೆ ಮುಂದುಡುತ್ತಾರೆ ಎಂದು ಅವರೆಲ್ಲ ವಾದಿಸಿದರು, ಸ್ವತಂತ್ರ ವಾದ ದೇಶವನ್ನ ಆಳುವ ಅವಸರ… ನಮ್ಮ ನಾಯಕರಿಗೆ, ನನ್ನ ಸಲಹೆ ಯನ್ನ ತಿರಸ್ಕರಿಸಿದರು. ನಾನು ಮುದುಕನಲ್ಲವೇ ನನಗೆ ಅರುಳೊ-ಮರುಳೊ ಎಂದು ಭಾವಿಸಿದ್ದಿರಬೇಕು. ಆ ದೇವರು ನಮ್ಮವರ ಮೂರ್ಖತನವನ್ನ ಕಂಡು ನಗುತ್ತಿರಬಹುದು.

ದೇಶವನ್ನ ಒಡೆದು ನಾವು ತಪ್ಪು ಮಾಡಿಬಿಟ್ಟೆವು ಶಾಹಿದ್ , ಇದರ ಪರಿಣಾಮ ಇಂದು ಮಸುಕಾಗಿರಬಹುದು ಆದರೆ ಮುಂದೆ ನಾವೆಲ್ಲ ಈ ತಪ್ಪಿಗಾಗಿ ಪರಿತಪಿಸಬೇಕಾಗುತ್ತದೆ ವಿಭಜನೆಯ ಶಾಪ ಹೊತ್ತೆ ನಾವೆಲ್ಲ ಬದುಕಬೇಕಾಗುತ್ತದೆ. ಆ ದಿನಗಳನ್ನ ನಾನು ನೊಡಲಾರೆ ಅಲ್ಲಿಯ ವರೆಗೂ ದೇವರು ನನ್ನನ್ನ ಜೀವಂತವಾಗಿರಿಸುವುದು ಬೇಡ ಎಂದು ಪ್ರಾರ್ಥಿಸುತಿದ್ದೇನೆ.

ಜನ. ದೇಶ ವಿಭಜನೆಯಲ್ಲಿ ನಾನೂ ಪಾಲುದಾರ ಎಂದು ಹೇಳದಿದ್ದರೆ ಸಾಕು .” ಗಾಂಧಿ ಈ ಗೆರೆಯನ್ನು ಕೂಡ ಇಷ್ಟಪಟ್ಟಿರಲಿಲ್ಲ”.

‘ಗಾಂಧಿ ೧೫೦’ ನಡೆಯುತ್ತಿರುವ ಈ ಹೊತ್ತಿಗೆ ಹಲವಾರು ರೀತಿಯಲ್ಲಿ ಗಾಂಧಿ ಯವರನ್ನ ತಪ್ಪಾಗಿ ಅರ್ಥೈಸಲಾಗುತ್ತಿದೆ. ವ್ಯತಿರಿಕ್ತವಾದ ಗಾಂಧಿ ಯವರ image ನ್ನು ಎಳೆಯ ಮನಗಳಲ್ಲಿ ತುಂಬಲಾಗುತ್ತಿದೆ. ಪುತಲೀಬಾಯಿ ಮಾಡಿದಂತೆ ಎಳೆಯ ಮನಸುಗಳೊಳಗಣ ಸುಳ್ಳು image ಗಳನ್ನ ಕಿತ್ತು ಹಾಕಿ ‘ ನಿಜದ ಗಾಂಧಿ’ ಯನ್ನ ಅವರೆದುರು ನಿಲ್ಲಿಸಬೇಕಿದೆ. ಅವರ ಹಲವಾರು ಪ್ರಶ್ನೆಗಳಿಗೆ ಉತ್ತರ ಹೇಳಬೇಕಿದೆ.

ಪ್ರಸ್ತುತ ರಂಗಪ್ರಯೋಗ ಅಂಥ ಕೆಲಸ ಮಾಡುತ್ತಿದೆ. ಅದೇ…ಮಸಿಯ ಗೆರೆಗಳನ್ನ ಅಳಿಸುವ ಕೆಲಸ. ಇಡಿಯ ನಾಟಕ nerrative style ನಲ್ಲಿದೆ. ಕಲಾವಿದರು ಗಾಂಧೀಜಿಯವರ ‘ ಬದುಕಿನ ಪುಟಗಳನ್ನ ಓದುತ್ತಾರೆ’ ಆಯ್ದ ಘಟನೆಗಳನ್ನ ಕಲಾತ್ಮಕವಾಗಿ ನೇಯುತ್ತ ಶ್ರೀಪಾದ ಭಟ್, ‘ ನಿಜವಾದ ಗಾಂಧಿ’ ಯನ್ನ ನಮ್ಮೆದುರು ನಿಲ್ಲಿಸುತ್ತಾರೆ. ಹೀಗೆ ಕಟ್ಟುವದಕ್ಕೆ ಎಂದಿನಂತೆ ಅವರ ಸಂಗೀತದ strength ನೆರವಾಗುತ್ತದೆ. ತುಂಬ energetic ಆದ ನಟರು ಬೊಳುವಾರ್ ರ ‘ ಪಾಪು ಗಾಂಧಿ ಗಾಂಧಿ ಬಾಪುವಾದ ಕಥೆ’ ಯ ಗಾಂಧಿ ಬದುಕಿನ‌ ಪುಸ್ತಕವನ್ನು ನಮ್ಮೆದುರು ತೆರೆದಿ ಡುತ್ತಾರೆ. ಹೀಗೆ ಮಾಡುವಲ್ಲಿ ಕೈಲಾಸಂ, ಸವಿತಾ ನಾಗಭೂಷಣ್, ಜಯಂತ, ರಾಘವಾಂಕ, ಸುಜಾತಾ. ಎಚ್. ಆರ್ ಇವರೆಲ್ಲ ನೆರವಾಗುತ್ತಾರೆ.
ಹತ್ತು ವರ್ಷಗಳ ಹಿಂದೆ ನಮ್ಮಮಕ್ಕಳ ರೆಪರ್ಟರಿಗಾಗಿ ನಾವು ಇದೇ ನಾಟಕ ಮಾಡಿದ್ದೆವು. ಆಗ ಅದೊಂದು ಭಾವಯಾನ. ಈ ಹತ್ತು ವರ್ಷಗಳಲ್ಲಿ ಏನೇನೆಲ್ಲ ಆಗಿಹೋಗಿದೆ. ಭಾರತದ ಮನಸ್ಥಿತಿಯೇ ಬದಲಾಗಿಹೋಗಿದೆ. ಹೊಸ ಹೊಸ ಚರ್ಚೆಗಳೂ ಹುಟ್ಟಿಕೊಂಡಿವೆ. ಹೊಸ ಸವಾಲುಗಳು ಪ್ರಯೋಗದ ಎದುರಿಗಿವೆ.ಆದುದರಿಂದಲೇ ಪ್ರಸ್ತುತ ಪ್ರಯೋಗದಲ್ಲಿ ಅಂಬೇಡ್ಕರ್ ಗಾಂಧಿ ಮುಖಾಮುಖಿಯಿದೆ. ಗೋಖಲೆಯವರು ಗಾಂಧಿಯವರಿಗೆ ” ದೇಶ ಸುತ್ತು, ಮಾತನಾಡಬೇಡ” ಎಂದರೆ ಅಂಬೇಡ್ಕರ್ ” ದೇಶ ಸುತ್ತು: ಮಾತನಾಡು” ಎನ್ನುತ್ತಾರೆ. ಗಾಂಧಿ ಹಾಗೇ ಮಾಡುತ್ತಾರೆ.

ಈ ರಂಗಪ್ರಯೋಗವೂ ದೇಶ ಸುತ್ತುತ್ತಿದೆ. ಮಾತನಾಡುತ್ತಿದೆ. ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತರಾಗಿರುವ ಗಾಂಧಿಯನ್ನ ಮಕ್ಕಳೆದೆಗಳಲ್ಲಿ ಇಳಿಸುವ ಪ್ರಯತ್ನ ಮಾಡುತ್ತಿದೆ.


  • ಕಿರಣ್ ಭಟ್ ಹೊನ್ನಾವರ –  ಹಿರಿಯ ರಂಗಕರ್ಮಿ, ನಿರ್ದೇಶಕರು,

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW